From Wikipedia, the free encyclopedia
ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ 'ವಿಜಯ ದಶಮಿ', ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಆಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.
ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು, ಚಿನ್ನ, ಬೆಳ್ಳಿ ಪೂಜೆಗಿಡಲಾಗುತ್ತದೆ. ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದೇ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ ಇದಕ್ಕೆ ಸರಸ್ವತಿ ಪೂಜೆ ಎಂದೂ ಕರೆಯುತ್ತಾರೆ.
ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ. ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ. ‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ್ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ್ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’ ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.
ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.
ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.
ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.
ಪೂಜೆ, ಉಪಾಸನೆ, ಆರಾಧನೆಗಳು ಮಾನವನ ಆದಿ ಸಂಸ್ಕೃತಿಯ ಭಾಗ. ಯಾವುದೋ ಕಾಮಿತಾರ್ಥವಾಗಿ, ಫಲಪ್ರಾಪ್ತಿಗಾಗಿ, ಭೀತಿ ನಿವಾರಣೆಗಾಗಿ, ಸಾಧನೆಯ ಮಾರ್ಗವಾಗಿ- ಹೀಗೆ ಹಲವು ಕಾರಣಗಳಿಗಾಗಿ ಉಪಾಸನೆಗಳನ್ನು ಕೈಗೊಳ್ಳುವುದು ಸಾಮಾನ್ಯ. ಅದರಲ್ಲೂ ಉಪಾಸನೆಗೊಳ್ಳುವ ಪೀಠದ ಶಕ್ತಿ ಹೆಚ್ಚು ಎಂದಷ್ಟಕ್ಕೂ ಆರಾಧನೆಯ ಪ್ರಮಾಣ ಮತ್ತು ಆರಾಧಕರ ಸಂಖ್ಯೆಯೂ ಹೆಚ್ಚು. ಹಾಗೆ ನೋಡಿದರೆ, ಶಕ್ತಿ ಪೀಠಗಳೆಂಬ ಉಲ್ಲೇಖಗಳು ಸಾಮಾನ್ಯವಾಗಿ ದೇವಿಯ ಪೀಠಗಳನ್ನೇ ಉದ್ದೇಶಿಸಿದ್ದಾಗಿರುತ್ತದೆ. ಈ ಪೀಠಗಳ ಶಕ್ತಿಯೋ, ಉಪಾಸಕರ ಭಕ್ತಿಯೋ ಅಂತೂ ಭವದ ಮಾಯೆಗಳನ್ನು ದಾಟಲು ಅಗೋಚರ ಸೇತುವೆಗಳು ಇಲ್ಲಿ ಹೆಣೆದುಕೊಳ್ಳುತ್ತವೆ. ಶಕ್ತಿ ಸ್ವರೂಪಿಣಿಯ ಆರಾಧನೆಯ ಈ ದಿನಗಳಲ್ಲಿ (Navaratri 2023), ಮಾಯೆಗಳೆಂಬ ಆಸುರೀ ಪಾಶಗಳನ್ನು ಕಳೆದುಕೊಳ್ಳುವ ಬಗ್ಗೆ, ಅದರ ಸುತ್ತ ಹರಡಿರುವ ಕುತೂಹಲಗಳ ಬಗೆಗೆ ಒಂದಿಷ್ಟು ಜಿಜ್ಞಾಸೆಯಿದು.
ಯಾವುದನ್ನೇ ಆರಾಧಿಸುವಾಗಲೂ ಅದರಲ್ಲೊಂದು ಪ್ರಸ್ತುತತೆಯನ್ನು ಹುಡುಕುವುದು ಸಹಜ. ನವರಾತ್ರಿಯ ನೆವದಲ್ಲಿ ಒಂಬತ್ತು ದೇವಿಯರ ಸ್ವರೂಪಗಳನ್ನು ಆರಾಧಿಸುವಾಗಲೂ ಇದು ಸತ್ಯ. ಈ ವಿಷಯದಲ್ಲಿ ದೇವ- ದೇವಿ ಎಂಬ ಲಿಂಗಭೇದವೆಂದು ಭಾವಿಸದೆ ಸಹಜ ಕುತೂಹಲದಲ್ಲಿ ನೋಡುವುದಾದರೆ- ದೇವಿಯರ ಆರಾಧಕರಲ್ಲಿ ಹೆಚ್ಚು ಭಿನ್ನತೆ ಕಾಣುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳಬೇಕೆಂದರೆ, ಹರಿ ಪಾರಮ್ಯವನ್ನು ಒಪ್ಪುವವರು ವೈಷ್ಣವರು, ಶಿವನ ಆರಾಧಕರು ಶೈವರು, ಗಣಪತಿಯ ಉಪಾಸಕರು ಗಾಣಪತ್ಯರು ಎಂದೆಲ್ಲಾ ವಿಭಾಗಗಳನ್ನು ಕಾಣಬಹುದು. ತ್ರಿಮೂತ್ರಿಗಳಲ್ಲೂ ಬ್ರಹ್ಮನ ಆರಾಧಕರು ವಿರಳ; ಉಳಿದಿಬ್ಬರು ದೇವರ ಆರಾಧಕರಲ್ಲಿ ಭಿನ್ನತೆ ಬಹಳ. ಆದರೆ ಶಕ್ತಿಯ ಆರಾಧಕರನ್ನೆಲ್ಲಾ ಶಾಕ್ತರು ಎಂದು ಕರೆಯಬಹುದಾದರೆ- ಅವರೆಲ್ಲಾ ಬಹುತೇಕ ಒಂದೇ. ಅಂದರೆ ಲಕ್ಷ್ಮಿ, ಸರಸ್ವತಿ, ಪಾರ್ವತಿ, ದುರ್ಗೆ ಎಂದು ಬೇರೆಯೇ ವ್ರತ-ಹಬ್ಬಗಳನ್ನು ಆಚರಿಸಿದರೂ, ಇವರದ್ದೆಲ್ಲಾ ಪ್ರತ್ಯೇಕ ಪಂಥವಲ್ಲ. ಅವರೆಲ್ಲಾ ದೇವಿಯ ಭಕ್ತರು ಮಾತ್ರ. ಹೀಗೆ ಸಂಪತ್ತು, ವಿದ್ಯೆ, ಶಕ್ತಿ ಎಂಬಿತ್ಯಾದಿ ಹಲವು ಸ್ವರೂಪಗಳಲ್ಲಿ ಆವಿರ್ಭವಿಸುವ ಶಕ್ತಿಯನ್ನು ಭಿನ್ನಗೊಳಿಸದೆ, ಭಕ್ತಿಯ ಮೂಲಕ ಏಕತ್ರಗೊಳಿಸುವ ಸಾಧ್ಯತೆಯು ಅನನ್ಯ ಎನಿಸುವುದು ಈ ಕಾರಣಕ್ಕೆ.
ಹಲವು ಕೃತಿಗಳಲ್ಲಿ ಉಲ್ಲೇಖ
ದೇವಿಗೆ ಸಂಬಂಧಿಸಿದ ಸಂಗತಿಗಳನ್ನು ಮಾರ್ಕಂಡೇಯ ಪುರಾಣ, ಶ್ರೀದೇವಿ ಭಾಗವತ, ಸ್ಕಾಂದ ಪುರಾಣ, ಕಾಲಿಕಾ ಪುರಾಣ, ವರಾಹ ಪುರಾಣ ಮುಂತಾದ ಕೃತಿಗಳಲ್ಲಿ ಕೊಂಚ ವ್ಯತ್ಯಾಸಗಳೊಂದಿಗೆ ನಿರೂಪಿಸಲಾಗಿದೆ. ಚಂಡಿ, ಚಾಮುಂಡಿ, ಕಾಳಿ, ಕಾತ್ಯಾಯನಿ, ಅಂಬಾ, ದುರ್ಗಾ, ಈಶ್ವರಿ ಮುಂತಾದ ಹಲವು ಹೆಸರುಗಳಿಂದ ಆಕೆಯನ್ನು ಕರೆಯಲಾಗಿದೆ. ಆದರೆ ಈ ಎಲ್ಲಾ ಕೃತಿಗಳ ಪ್ರಕಾರ, ದೇವತೆಗಳ ರಕ್ಷಣೆಗಾಗಿ ಆವಿರ್ಭವಿಸುವ ದೇವಿ, ಶಿಷ್ಟರಿಗೆಲ್ಲ ಕಂಟಕನಾಗಿದ್ದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಇದಕ್ಕಾಗಿ ಎಲ್ಲಾ ದೇವಾಧಿದೇವತೆಗಳ ತೇಜಸ್ಸು ಏಕತ್ರಗೊಂಡು, ಸರ್ವಶಕ್ತಳಾದ ದೇವಿಯ ಸ್ವರೂಪ ಪಡೆಯುತ್ತದೆ. ಮಹಿಷನನ್ನು ಮಾತ್ರವಲ್ಲದೆ, ಚಂಡ-ಮುಂಡರು, ರಕ್ತಬೀಜ, ಶುಂಭ-ನಿಶುಂಭರನ್ನೂ ವಧಿಸುತ್ತಾಳೆ ಈ ದೇವಿ. ನವರಾತ್ರಿ ಆಚರಣೆಯ ಪ್ರಮುಖ ಹಿನ್ನೆಲೆಯೇ ಈ ಸರ್ವಶಕ್ತಿಯ ಆರಾಧನೆ.
ನವದುರ್ಗೆಯರು
ಒಂಬತ್ತು ದಿನ ಉಪಾಸನೆಗೊಳ್ಳುವ ಒಂಬತ್ತು ದೇವಿಯರದ್ದು ಭಿನ್ನ ಪ್ರವೃತ್ತಿ ಮತ್ತು ಅನುಪಮ ಶಕ್ತಿ. ಮೊದಲ ದಿನ ಶೈಲಪುತ್ರಿ ಎನಿಸಿಕೊಳ್ಳುವ ಈಕೆಯ ಹಿಂದೆ ಅಗ್ನಿಯಲ್ಲಿ ದಹಿಸಿ ಹೋಗುವ ದಾಕ್ಷಾಯಿಣಿಯ ಕಥೆಯಿದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದನ್ನ ಸಹಿಸದ ದಾಕ್ಷಾಯಿಣಿ, ತಂದೆಯ ವಿರುದ್ಧವೇ ಸಿಡಿದೇಳುವ ಕಥೆಯಿದು. ʻದಕ್ಷನ ಮಗಳು ದಾಕ್ಷಾಯಿಣಿʼ ಎನಿಸಿಕೊಳ್ಳುವುದನ್ನೇ ವಿರೋಧಿಸಿ, ಯೋಗಾಗ್ನಿಯಲ್ಲಿ ದಹಿಸಿಕೊಂಡು, ಶೈಲಪುತ್ರಿಯಾಗಿ ಮತ್ತೆ ಹುಟ್ಟಿಬಂದು ಶಿವನನ್ನು ಸೇರಿದಳೆನ್ನುತ್ತವೆ ಪುರಾಣಗಳು. ಎರಡನೇ ದಿನ ಆಕೆ ಬ್ರಹ್ಮಚಾರಿಣಿ. ಪಾರ್ವತಿಯಾಗಿ ಹುಟ್ಟಿದ ಮರುಜನ್ಮದಲ್ಲಿ ಶಿವನನ್ನೇ ಸೇರಬೇಕೆಂಬ ಏಕೋದ್ದೇಶದಿಂದ ಕಠಿಣ ತಪಸ್ಸನ್ನಾಚರಿಸಿ, ಗುರಿ ಸಾಧಿಸಿದ ಛಲದ ಸಂಕೇತವಾಗಿ ಆಕೆ ಅಂದು ಪೂಜಿಸಲ್ಪಡುತ್ತಾಳೆ. ಮೂರನೇ ದಿನ ಚಂದ್ರಘಂಟಾ ಎನಿಸಿಕೊಳ್ಳುವ ಆಕೆ, ಶಿವನಲ್ಲಿದ್ದ ಘೋರ ಸ್ವರೂಪವನ್ನು ಶಮನ ಮಾಡಿ, ಸಾತ್ವಿಕ ಸ್ವರೂಪವನ್ನು ಉದ್ದೀಪಿಸಿದ ಕಾರಣಕ್ಕೆ ಮಹತ್ವ ಪಡೆಯುತ್ತಾಳೆ. ನಾಲ್ಕನೇ ದಿನ ಕೂಷ್ಮಾಂಡವೆನಿಸಿಕೊಳ್ಳುವ ಆಕೆಯಿಂದ, ಉಮೆ, ರಮೆ, ವಾಣಿಯರ ಉದ್ಭವ ಎನ್ನಲಾಗುತ್ತದೆ.
ಶಕ್ತಿ ಸ್ವರೂಪಗಳ ಉಗಮ
ಶಕ್ತಿ ಸ್ವರೂಪಗಳ ಉಗಮ-ಸಂಗಮಗಳು ಹೀಗೆ ಒಂದೇ ಎನಿಸಿಕೊಂಡ ಕಾರಣದಿಂದಲೇ ಶಕ್ತಿಯ ಆರಾಧಕರಲ್ಲಿ ಭಿನ್ನತೆ ಇಲ್ಲದೆ ಇರಬಹುದು. ಐದನೇ ದಿನ ಸ್ಕಂದಮಾತಾ ಎಂಬ ಹೆಸರಿನಿಂದ ಮಾತೃಸ್ವರೂಪಿಣಿಯಾಗಿ ಪೂಜೆಗೊಳ್ಳುತ್ತಾಳೆ. ಆರನೇ ದಿನ ಆಕೆ ಕಾತ್ಯಾಯನಿ. ಋಷಿ ಕಾತ್ಯಾಯನನ ಸಂತಾನದ ರೂಪದಲ್ಲಿ ದೈವೀಶಕ್ತಿಯು ಭೂಮಿಗೆ ಅವತರಿಸುವ ಹಿನ್ನೆಲೆ ಈ ಕಥೆಗಿದೆ. ಆಸುರೀ ಮಾಯೆಗಳ ನಿರ್ಮೂಲನೆಗೆ ದೈವೀಶಕ್ತಿಗೆ ಇರಬಹುದಾದ ಮಾನುಷ ಪ್ರವೃತ್ತಿಯನ್ನು ಇದು ಪ್ರತಿನಿಧಿಸುತ್ತದೆನ್ನಬಹುದು. ಏಳನೇ ದಿನಕ್ಕೆ ಕಾಳರಾತ್ರಿಯ ಅವತಾರಿಣಿ. ಚಂಡ-ಮುಂಡರನ್ನು ವಧಿಸಿ ಈಗಾಗಲೇ ಚಾಮುಂಡಿ ಎನಿಸಿಕೊಂಡಿದ್ದಾಳೆ.
ಘೋರ ಅವತಾರ ದೇವಿಯ ಅವತಾರಗಳಲ್ಲೇ ಕಾಳರಾತ್ರಿಯನ್ನು ಘೋರ ಎನ್ನಬಹುದು. ಈಕೆ ರಕ್ತಬೀಜನ ಸಂಹಾರಿಣಿ. ಸಪ್ತಮಿಯ ದಿನವೇ ವಿದ್ಯಾಧಿದೇವತೆ ಸರಸ್ವತಿಯ ಪೂಜೆಯೂ ನಡೆಯುತ್ತದೆ. ಕಾಳರಾತ್ರಿಯ ಅವತಾರವನ್ನು ತೊರೆದು ತನ್ನ ಮೊದಲಿನ ಸ್ವರೂಪಕ್ಕೆ ಮರಳುವ ಆಕೆ ಕರೆಸಿಕೊಳ್ಳುವುದು ಮಹಾಗೌರಿ ಎಂದು- ಇದು ಎಂಟನೇ ದಿನದಂದು. ಇದೇ ದಿನ ನಿಶುಂಭನ ಸಂಹಾರವೂ ನಡೆಯುತ್ತದೆ. ಮಹಾನವಮಿಯಂದು ಶುಂಭನ ವಧೆ. ಸಿದ್ಧಿಧಾತ್ರಿಯೆಂದು ಕರೆಸಿಕೊಳ್ಳುವ ಆಕೆ ಸಿದ್ಧಿಪ್ರದಾಯಿನಿ ಎಂದೇ ಪೂಜಿತಳಾಗುತ್ತಾಳೆ. ವಿಜಯದಶಮಿಯಂದು ಮಹಿಷಾಸುರ ಮರ್ದಿನಿಯ ಉಪಾಸನೆ. ಹೀಗೆ ಸ್ವಾಭಿಮಾನ, ಛಲ, ಸಹನೆ, ಸಾತ್ವಿಕತೆ, ಶಕ್ತಿ, ಮಮತೆ, ಕ್ರೋಧ, ವಿದ್ಯೆ, ಸಿದ್ಧಿಯಂಥ ಹಲವು ಗುಣಗಳ ಅಪೂರ್ವ ಎರಕದಂತೆ ಕಾಣುತ್ತಾಳೆ ಚಾಮುಂಡೇಶ್ವರಿ.[1]
ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.
ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.
ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.
ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ
ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.
ನಾವೆಲ್ಲಾ ಭಕ್ತಿ ಶ್ರದ್ಧೆಯಿಂದ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯೋಣ[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.