From Wikipedia, the free encyclopedia
ಗ್ರ್ಯಾಫೈಟ್ ಎಂಬ ಖನಿಜವು ಇಂಗಾಲದ ಭಿನ್ನರೂಪಗಳಲ್ಲೊಂದು. ಲೋಹವಸ್ತು 'ಸೀಸ' (lead) ಇಂದ ಭಿನ್ನವಾಗಿ ಗುರುತಿಸಲು, ಅಬ್ರಹಾಮ್ ಗೊಟ್ಲೊಬ್ ವರ್ನರ್ 1789ರಲ್ಲಿ ಗ್ರ್ಯಾಫೈಟ್ ಎಂಬ ಪದವನ್ನು ಗ್ರೀಕ್ ಭಾಷೆಯ γράφειν (ಗ್ರಾಫೀನ್) ಪದದಿಂದ ಪಡೆದರು. ಇದರ ಅರ್ಥ, 'ಚಿತ್ರರಚನೆ ಮಾಡುವುದು/ಬರೆಯುವುದು' ಎಂದು. ಇದನ್ನು ಸಾಮಾನ್ಯವಾಗಿ ಪೆನ್ಸಿಲ್ಗಳಲ್ಲಿ ಬಳಸಲಾಗಿ, ಲೆಡ್ ಎನ್ನಲಾಗುತ್ತದೆ. ಇಂಗಾಲದ ಇನ್ನೊಂದು ಭಿನ್ನರೂಪವಾದ ವಜ್ರಕ್ಕಿಂತಲೂ ಭಿನ್ನವಾಗಿ, ಗ್ರ್ಯಾಫೈಟ್ ವಿದ್ಯುತ್ ವಾಹಕವಾಗಿದೆ. ಇದು ಅರೆಲೋಹವೂ ಆಗಿದ್ದು, ಎರಡು ಎಲೆಕ್ಟ್ರೊಡ್ ಗಳ ಮಧ್ಯೆ ವಿದ್ಯುತ್ ಹರಿದಾಗ ಬೆಳಗುವ ದೀಪಚಾಪದೀಪಗಳಲ್ಲಿನ ವಿದ್ಯುದ್ವಾರಗಳಲ್ಲಿ ಇದನ್ನು ಬಳಸಬಹುದಾಗಿದೆ. ಪ್ರಮಾಣಿತ ಸ್ಥಿತಿಗಳಲ್ಲಿ ಗ್ರ್ಯಾಫೈಟ್ ಅತಿ ಹೆಚ್ಚಿನ ಸ್ಥಿರ ರೂಪವಾಗಿದೆ. ಇದರಿಂದಾಗಿ, ಇಂಗಾಲ ಸಂಯುಕ್ತಗಳ ರಚನೆಯ ಉಷ್ಣಾಂಶವನ್ನು ವ್ಯಾಖ್ಯಾನಿಸಲು ಗ್ರ್ಯಾಫೈಟ್ನ್ನು ಪ್ರಮಾಣಿತ ಸ್ಥಿತಿಯೆಂದು ಉಷ್ಣರಸಾಯನ ವಿಜ್ಞಾನದಲ್ಲಿ ಬಳಸಲಾಗಿದೆ. ಗ್ರ್ಯಾಫೈಟ್ನ್ನು ಇದ್ದಿಲಿನ ಅತ್ಯುನ್ನತ ವರ್ಗದ್ದು ಎನ್ನಬಹುದು. ಪರ್ಯಾಯವಾಗಿ, ಆಂಥ್ರ್ಯಾಸೈಟ್ಗಿಂತಲೂ ಉನ್ನತವಾಗಿರುವ ಇದನ್ನು ಮೆಟಾ-ಆಂಥ್ರ್ಯಾಸೈಟ್ ಎನ್ನಲಾಗಿದೆ. ಇದನ್ನು ದಹಿಸುವುದು ಕಷ್ಟವಾಗಿರುವುದರಿಂದ, ಇದನ್ನು ಸಾಮಾನ್ಯವಾಗಿ ಇಂಧನದ ರೂಪದಲ್ಲಿ ಬಳಸಲಾಗುವುದಿಲ್ಲ.
Graphite | |
---|---|
General | |
ವರ್ಗ | Native mineral |
ರಾಸಾಯನಿಕ ಸೂತ್ರ | C |
Identification | |
ಬಣ್ಣ | Steel black, to gray |
ಸ್ಫಟಿಕ ಗುಣಲಕ್ಷಣ | Tabular, six-sided foliated masses, granular to compacted masses |
ಸ್ಫಟಿಕ ಪದ್ಧತಿ | Hexagonal (6/m 2/m 2/m) |
ಸೀಳು | Perfect in one direction |
ಬಿರಿತ | Flaky, otherwise rough when not on cleavage |
ಮೋಸ್ ಮಾಪಕ ಗಡಸುತನ | 1–2 |
ಹೊಳಪು | metallic, earthy |
ಪುಡಿಗೆರೆ | Black |
ಸಾಂದ್ರತೆ | 2.09–2.23 g/cm3 |
ವಕ್ರೀಕರಣ ಸೂಚಿ | Opaque |
ಬಹುವರ್ಣಕತೆ | None |
ಕರಗುವಿಕೆ | Molten Ni |
ಉಲ್ಲೇಖಗಳು | [1][2] |
ನೈಸರ್ಗಿಕ ಗ್ರ್ಯಾಫೈಟ್ನಲ್ಲಿ ಮೂರು ಪ್ರಮುಖ ರೀತಿಗಳಿವೆ. ಈ ಮೂರಲ್ಲಿ ಪ್ರತಿಯೊಂದೂ ಸಹ ಮೂರು ವಿಭಿನ್ನ ಅದಿರು ನಿಕ್ಷೇಪಗಳಲ್ಲಿ ಕಾಣಸಿಗುತ್ತದೆ.
'ಬಹಳಷ್ಟು ಸುವ್ಯವಸ್ಥೆಯಲ್ಲಿರುವ ಉಷ್ಣವಿಭಜನೆಯ ಗ್ರಾಫೈಟ್' ಅಥವಾ 'ಬಹಳಷ್ಟು ಸ್ಥಾನನಿರ್ಧರಿತ ಉಷ್ಣವಿಭಜನೆಯ ಗ್ರ್ಯಾಫೈಟ್' (HOPG) ಎಂದರೆ ನಡುವೆ ಆಂಗ್ಯುಲರ್ ಹರಡುವಿಕೆ 1°ಗಿಂತಲೂ ಕಡಿಮೆಯಿರುವಂತಹ ಗ್ರಾಫೈಟ್ ಹಾಳೆಗಳು. ಈ ಅತ್ಯುತ್ತಮ ಗುಣಮಟ್ಟದ ಸಂಶ್ಲೇಷಿತ ರೂಪವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಬಳಸಲಾಗಿದೆ.[3] ಇಂಗಾಲದ ನಾರು ಅಥವಾ ನಾರಿನಿಂದ ಬಲಪಡಿಸಲಾದ ಇಂಗಾಲವನ್ನು ಉಲ್ಲೇಖಿಸಲು ಗ್ರ್ಯಾಫೈಟ್ ಫೈಬರ್ ಎಂದು ಕೆಲವೊಮ್ಮೆ ಉಲ್ಲೇಖಿಸಿದ್ದುಂಟು.
ಗ್ರ್ಯಾಫೈಟ್ಗೆ ಸಂಬಂಧಿತ ಖನಿಜಗಳಲ್ಲಿ ಕ್ವಾರ್ಟ್ಜ್, ಕ್ಯಾಲ್ಸೈಟ್, ಮೈಕಾಗಳು, ಕಬ್ಬಿಣ ಉಲ್ಕೆಗಳು ಹಾಗೂ ಪ್ರಬಲ ವಿದ್ಯುತ್ ಗುಣಗಳಿರುವ ತೋರಮಲ್ಲಿಗಳು ಸೇರಿವೆ. ಗ್ರ್ಯಾಫೈಟ್ ಇತರೆ ವಿವಿಧ ಗುಣಲಕ್ಷಣಗಳನ್ನು ಹೊಂದಿವೆ. ಈ ಸಣ್ಣ ಪ್ರಮಾಣದ ಕಣಗಳು ಹೊಂದಿಕೊಳ್ಳಬಹುದಾದರೂ, ಸ್ಥಿತಿಸ್ಥಾಪಕವಲ್ಲ. ಕೈ ಹಾಗೂ ಕಾಗದದ ಮೇಲೆ ತನ್ನ ಕಪ್ಪು ಗುರುತು ಮಾಡುತ್ತವೆ. ಇದು ವಿದ್ಯುತ್ ವಾಹಕ ಹಾಗೂ ಸುಪರ್ಲ್ಯೂಬ್ರಿಸಿಟಿ ಗುಣ ಪ್ರದರ್ಶಿಸುತ್ತದೆ. ಮೃದುವಾಗಿರುವಿಕೆ, ಹೊಳಪು, ಸಾಂದ್ರತೆ ಮತ್ತು ಹೊಳಪಿನ ರೇಖೆಗಳು ಇದರ ಅತ್ಯುತ್ತಮ ಕ್ಷೇತ್ರೀಯ ಸೂಚಕಗಳಾಗಿವೆ.
ಅಮೆರಿಕಾ ಸಂಯುಕ್ತ ಸಂಸ್ಥಾನ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, 2008ರಲ್ಲಿ ವಿಶ್ವದಲ್ಲಿ ನೈಸರ್ಗಿಕ ಗ್ರ್ಯಾಫೈಟ್ ಉತ್ಪಾದನೆಯು 1,110 ಸಾವಿರ ಟನ್ಗಳಷ್ಟಿತ್ತು (kt), ಇವುಗಳಲ್ಲಿ ಚೀನಾ (800 kt), ಭಾರತ (130 kt), ಬ್ರೆಜಿಲ್ (76 kt), ಉತ್ತರ ಕೊರಿಯಾ (30 kt) ಹಾಗೂ ಕೆನಡಾ (28 kt) ಪ್ರಮುಖ ರಫ್ತುದಾರ ದೇಶಗಳಾಗಿವೆ. USನಲ್ಲಿ ಗ್ರ್ಯಾಫೈಟ್ ಗಣಿ ನಡೆಯುವುದಿಲ್ಲ, ಆದರೆ, ಅಲ್ಲಿ 2007ರಲ್ಲಿ ಸಂಶ್ಲೇಷಿತ ಗ್ರ್ಯಾಫೈಟ್ 198 kt ಹಾಗೂ $1.18 ಶತಕೋಟಿ ಮೌಲ್ಯದ್ದಾಗಿತ್ತು. USನಲ್ಲಿ ಸುಮಾರು 42 kt ನೈಸರ್ಗಿಕ ಗ್ರ್ಯಾಫೈಟ್ ಹಾಗೂ 200 kt ಸಂಶ್ಲೇಷಿತ ಗ್ರ್ಯಾಫೈಟ್ ಬಳಕೆಯಾಗುತ್ತಿತ್ತು.[4]
ಗ್ರ್ಯಾಫೈಟ್ ಪದರಗಳುಳ್ಳ ಇಂಗಾಲ ಸಂಯುಕ್ತ. ಪ್ರತಿಯೊಂದು ಪದರದಲ್ಲೂ, ಇಂಗಾಲದ ಅಣುಗಳು ಷಡ್ಭುಜಾಕಾರದ ಜಾಲರಿಯಲ್ಲಿ ಜೋಡಣೆಯಾಗಿವೆ. ಇವುಗಳ ನಡುವೆ 0.142 nm ಹಾಗೂ ಸಮತಲಗಳ ನಡುವೆ 0.335 nm ಅಂತರವಿದೆ.[5] ಗ್ರ್ಯಾಫೈಟ್ನ ಎರಡು ಚಿರಪರಿಚಿತ ರೂಪಗಳಾದ ಆಲ್ಫಾ (ಷಡ್ಭುಜೀಯ) ಹಾಗೂ ಬೀಟಾ (ರೊಂಬೊಹೆಡ್ರಲ್),(ಸಮಪ್ರಮಾಣದ ಸಮತೋಲದ) ಗ್ರ್ಯಾಫೀನ್ ಪದರಗಳ ಜೋಡಣೆ ಸ್ವಲ್ಪ ಮಟ್ಟಕ್ಕೆ ಭಿನ್ನ ರೀತಿಯಲ್ಲಿ ಜೋಡಣೆಯಾಗಿರುವುದನ್ನು ಹೊರತುಪಡಿಸಿ, ಒಂದೇ ತರಹದ ಭೌತಿಕ ಗುಣಗಳನ್ನು ಹೊಂದಿವೆ.[6] ಷಡ್ಭುಜೀಯ ಗ್ರ್ಯಾಫೈಟ್ ಚಪ್ಟಟೆಯಾಗಿರುತ್ತವೆ ಅಥವಾ ಬಾಗಿರುತ್ತವೆ.[7] ಯಾಂತ್ರಿಕ ಕ್ರಮದ ಮೂಲಕ ಆಲ್ಫಾ ರೂಪವನ್ನು ಬೀಟಾ ರೂಪಕ್ಕೆ ಪರಿವರ್ತಿಸಬಹುದು. 1300 °Cಕ್ಕಿಂತಲೂ ಹೆಚ್ಚಿನ ಉಷ್ಣಾಂಶಕ್ಕೆ ತಪ್ತಗೊಳಿಸಿದಾಗ ಬೀಟಾ ರೂಪವು ಆಲ್ಫಾ ರೂಪಕ್ಕೆ ಮರಳುತ್ತದೆ.[8] ಪದರವು ತನ್ನ ಕಡಿಮೆ ಸಾಂದ್ರತೆಗೆ ಕಾರಣವಾಗುತ್ತದೆ.
ಗ್ರ್ಯಾಫೈಟ್ನ ಧ್ವನಿವೈಜ್ಞಾನಿಕ ಹಾಗೂ ಉಷ್ಣದ ಗುಣಲಕ್ಷಣಗಳು ಬಹಳಷ್ಟು ಅಸಮಾವರ್ತಕವಾಗಿವೆ, ಏಕೆಂದರೆ ಇದರಲ್ಲಿನ ಫೋನಾನ್ಗಳು ದೃಢವಾಗಿ ಬದ್ಧವಾಗಿರುವ ಸಮತಲಗಳುದ್ದಕ್ಕೂ ಬೇಗನೆ ಪ್ರಸರಿಸುತ್ತವೆ, ಆದರೆ ಒಂದು ಸಮತಲದಿಂದ ಇನ್ನೊಂದಕ್ಕೆ ನಿಧಾನವಾಗಿ ಹೋಗುತ್ತವೆ.
ಇಂಗಾಲ ಪದರಗಳೊಳಗೆ ಋಣಕಣ (ಎಲೆಕ್ಟ್ರಾನ್) ವ್ಯಾಪಕವಾಗಿ ಸ್ಥಳಪಲ್ಲಟವಾಗುವ ಕಾರಣ, ಗ್ರ್ಯಾಫೈಟ್ ವಿದ್ಯುತ್ ವಾಹಕವಾಗಬಹುದು. (ಈ ಲಕ್ಷಣಕ್ಕೆ ಅರೊಮ್ಯಾಟಿಸಿಟಿ ಎನ್ನಲಾಗಿದೆ). ಈ ವೆಲೆನ್ಸ್ ಋಣಕಣಗಳು ಮುಕ್ತವಾಗಿ ಸಂಚರಿಸಬಲ್ಲವು. ಇದರಿಂದಾಗಿ ಅವು ವಿದ್ಯುತ್ ವಾಹಕ ಗುಣ ಹೊಂದಿವೆ. ಆದರೂ, ಕೇವಲ ಪದರಗಳ ಸಮತಲಗಳ ಒಳಗೇ ವಿದ್ಯುತ್ ರವಾನೆಯಾಗುತ್ತದೆ.
ತಾನಾಗಿಯೇ ನಯಗೊಳಿಸುವ ಹಾಗೂ ಒಣ ರೀತಿಯಲ್ಲಿ ನಯಗೊಳಿಸುವ ಲಕ್ಷಣಗಳನ್ನು ಹೊಂದಿರುವ ಕಾರಣ, ಗ್ರ್ಯಾಫೈಟ್ ಹಾಗೂ ಗ್ರ್ಯಾಫೈಟ್ ಪುಡಿಯನ್ನು ಕೈಗಾರಿಕಾ ಆನ್ವಯಿಕೆಗಳಲ್ಲಿ ಬಹಳ ಅಮೂಲ್ಯವಾದದ್ದು ಎನ್ನಲಾಗಿದೆ. ರಚನೆಯಲ್ಲಿ ಹಾಳೆಗಳ ನಡುವೆ, ಸಡಿಲವಾದ ತೆಳುಪೊರೆಗಳ ನಡುವಣ ಕೂಡಿಕೊಳ್ಳುವಿಕೆಯಿಂದಾಗಿ ಗ್ರ್ಯಾಫೈಟ್ ನಯವಾಗಿಸುವಿಕೆಯ ಗುಣಲಕ್ಷಣ ಹೊಂದಿವೆ ಎಂದು ನಂಬಲಾಗಿದೆ.[9] ಆದರೂ, ನಿರ್ವಾತ ಪ್ರದೇಶದಲ್ಲಿ (ಉದಾಹರಣೆಗೆ ಬಾಹ್ಯಾಕಾಶದಲ್ಲಿ ಬಳಸುವಂತಹ ತಂತ್ರಜ್ಞಾನಗಳಲ್ಲಿ, ಗ್ರ್ಯಾಫೈಟ್ ಒಂದು ದುರ್ಬಲ ಲೂಬ್ರಿಕಂಟ್ ಆಗಿದೆ. ನಯಗೊಳಿಸುವಿಕೆಗೆ ಕಾರಣ, ಪರಿಸರದಿಂದ ಸಹಜವಾಗಿ ಹೊರಹೀರಿಕೊಳ್ಳಲಾದ ಗಾಳಿ ಹಾಗೂ ನೀರು ಆ ಪದರಗಳ ನಡುವೆ ಸೇರಿಕೊಳ್ಳುವುದರಿಂದ, ನಯವಾಗಿಸುವಿಕೆಯ ಗುಣಲಕ್ಷಣಗಳು ಇವೆ ಎನ್ನಲಾಯಿತು. ಮೊಲಿಬ್ಡೆನಮ್ ಡೈಸಲ್ಫೈಡ್ನಂತಹ ಇತರೆ ಪದರಗಳುಳ್ಳ, ಒಣ ಲೂಬ್ರಿಕಂಟ್ಗಳಿಗಿಂತಲೂ ಈ ಗುಣಲಕ್ಷಣಗಳು ಭಿನ್ನವಾಗಿವೆ. ಸೂಪರ್ಲ್ಯೂಬ್ರಿಸಿಟಿ ಎಂಬುದೂ ಸಹ ಗ್ರ್ಯಾಫೈಟ್ನ ನಯಗೊಳಿಸುವಿಕೆಯ ಲಕ್ಷಣಗಳ ಹಿಂದಿನ ಕಾರಣ ಎಂದು ಇತ್ತೀಚೆಗಿನ ಅಧ್ಯಯನಗಳು ಸೂಚಿಸಿವೆ. ಗ್ರ್ಯಾಫೈಟ್ ಕೆಲವು ಸ್ಟೇನ್ಲೆಸ್ ಸ್ಟೀಲ್ ವಸ್ತುಗಳಲ್ಲಿ ಸ್ಥಳೀಯ ಸವೆತ,[10][11] ಹಾಗೂ, ತನ್ನ ವಿದ್ಯುತ್ ವಾಹಕ ಗುಣಗಳಿಂದಾಗಿ, ಎರಡು ಭಿನ್ನರೀತಿಯ ಲೋಹಗಳ ನಡುವೆ ಪ್ರಚೋದಿತ ಸವೆತಕ್ಕೆ ಕಾರಣವಾಗಬಹುದು. ತೇವವಿದ್ದಲ್ಲಿ, ಅಲ್ಯುಮಿನಿಯಮ್ ಲೋಹದ ಸವೆತಕ್ಕೂ ಕಾರಣವಾಗುವುದು. ಈ ಕಾರಣಕ್ಕಾಗಿ, US ವಾಯುಸೇನೆ ಅಲ್ಯುಮಿನಿಯಮ್ ಬಳಸಿ ನಿರ್ಮಿತ ವಿಮಾನಗಳಲ್ಲಿ ಗ್ರ್ಯಾಫೈಟ್ ಲೂಬ್ರಿಕಂಟ್ ಬಳಕೆಯನ್ನು ನಿಷೇಧಿಸಿದೆ.[12] ಜೊತೆಗೆ ಅಲ್ಯುಮಿನಿಯಮ್ ಅಂಶವುಳ್ಳ ಸ್ವಯಂಚಾಲಿತ ಶಸ್ತ್ರಗಳಲ್ಲಿ ಗ್ರ್ಯಾಫೈಟ್ ಲೂಬ್ರಿಕಂಟ್ ಬಳಕೆಯನ್ನೂ ನಿಷೇಧಿಸಿದೆ.[13] ಅಲ್ಯುಮಿನಿಯಮ್ ಮೇಲೆ ಗ್ರ್ಯಾಫೈಟ್ ಪೆನ್ಸಿಲ್ ಗುರುತುಗಳೂ ಸಹ ಸವೆತಕ್ಕೆ ಕಾರಣವಾಗಬಹುದು.[14] ಷಡ್ಭುಜೀಯ ಬೊರಾನ್ ನೈಟ್ರೈಡ್ ಅತ್ಯುನ್ನತ ಉಷ್ಣಾಂಶದ ಲೂಬ್ರಿಕಂಟ್ ಸಹ ಗ್ರ್ಯಾಫೈಟ್ನಂತೆಯೇ ಆಣ್ವಿಕ ರಚನೆ ಹೊಂದಿದೆ. ಗ್ರ್ಯಾಫೈಟ್ನಂತೆಯೇ ಗುಣಗಳನ್ನು ಹೊಂದಿರುವ ಕಾರಣ ಇದನ್ನು ಕೆಲವೊಮ್ಮೆ ಬಿಳಿಯ ಗ್ರ್ಯಾಫೈಟ್ ಎನ್ನಲಾಗಿದೆ.
ಸ್ಫಟಿಕಶಾಸ್ತ್ರೀಯ ದೋಷಗಳು ಈ ಸಮತಲಗಳನ್ನು ಒಟ್ಟಿಗೆ ಜೋಡಿಸಿದಲ್ಲಿ, ಗ್ರ್ಯಾಫೈಟ್ ತನ್ನ ನಯಗೊಳಿಸುವ ಗುಣಲಕ್ಷಣಗಳನ್ನು ಕಳೆದುಕೊಂಡು, ಉಷ್ಣವಿಭಜನೆಯ ಇಂಗಾಲವಾಗುತ್ತದೆ. ಕೃತಕ ಹೃದಯ ಕವಾಟಗಳಂತಹ ರಕ್ತದೊಂದಿಗೆ ಸಂಪರ್ಕ ಹೊಂದುವ ಅಂತರ್ನಿರ್ವಿಷ್ಟಗಳಿಗೆ ಈ ವಸ್ತುವು ಬಹಳ ಉಪಯುಕ್ತವಾಗಿದೆ. ಇದು ಬಹಳಷ್ಟು ಸಮರೂಪದಪಾರಕಾಂತೀಯವಾಗಿದೆ. ಹಾಗಾಗಿ, ಹೆಚ್ಚು ಬಲವುಳ್ಳ ಆಯಸ್ಕಾಂತದ ಮೇಲೆ ಅದು ಗಾಳಿಯಲ್ಲಿ ತೇಲಾಡುವುದು.
ನೈಸರ್ಗಿಕ ಮತ್ತು ಸ್ಫಟಿಕೀಯ ಗ್ರ್ಯಾಫೈಟ್ಗಳನ್ನು ಶುದ್ಧರೂಪದಲ್ಲಿ ರಾಚನಿಕ ವಸ್ತುಗಳಷ್ಟು ಹೆಚ್ಚಾಗಿ ಬಳಕೆಯಾಗಿಲ್ಲ. ಇಂತಹ ಗ್ರ್ಯಾಫೈಟ್ಗಳು ಸುಲಿದುಹೋಗಿರುವಂತಹ ಸಮತಲಗಳು, ಸುಲಭವಾಗಿ ಒಡೆದುಹೋಗಬಲ್ಲ ಲಕ್ಷಣ ಹಾಗೂ ಅಸಂಗತ ಯಾಂತ್ರಿಕ ಗುಣಗಳನ್ನು ಹೊಂದಿರುವುದು ಇದಕ್ಕೆ ಕಾರಣ.
ಸುಮಾರು ಕ್ರಿ.ಪೂ. ನಾಲ್ಕನೆಯ ಸಹಸ್ರವರ್ಷಗಳಷ್ಟು ಹಿಂದಿನಿಂದಲೂ ಗ್ರ್ಯಾಫೈಟ್ ಬಳಕೆಯಾಗಿತ್ತು. ಅಗ್ನೇಯ ಯುರೋಪ್ನಲ್ಲಿ ನವಶಿಲಾಯುಗದ ಸಮಯ ಕುಂಬಾರ ಉತ್ಪನ್ನಗಳ ಮೇಲೆ ಅಲಂಕಾರಿಕ ಬಣ್ಣ ಹಚ್ಚಲು ಪಿಂಗಾಣಿಯ ಬಣ್ಣ ರಚಿಸಲು ಗ್ರ್ಯಾಫೈಟ್ ಬಳಸಲಾಗುತ್ತಿತ್ತು ಮ್ಯಾರಿಕಾ ಕಲ್ಚರ್ [15]
ಇಸವಿ 1565ಕ್ಕೆ ಕೆಲ ಕಾಲ ಮುಂಚೆ (ಇನ್ನು ಕೆಲವು ಮೂಲಗಳ ಪ್ರಕಾರ 1500ರಷ್ಟು ಮುಂಚೆ), ಇಂಗ್ಲೆಂಡ್ನ ಕಂಬ್ರಿಯಾದ ಬೊರೊಡೇಲ್ ಪ್ಯಾರಿಷ್ನಲ್ಲಿರುವ ಸೀತ್ವೇಟ್ ಕುಗ್ರಾಮದಿಂದ ಗ್ರೇ ನಾಟ್ಸ್ ಕಡೆ ಹೋಗುವ ಮಾರ್ಗದಲ್ಲಿ ದೊಡ್ಡ ಪ್ರಮಾಣದ ಗ್ರ್ಯಾಫೈಟ್ ನಿಕ್ಷೇಪವನ್ನು ಪರಿಶೋಧಿಸಲಾಯಿತು. ಸ್ಥಳೀಯರು ತಮ್ಮ ಕುರಿಗಳ ಮೇಲೆ ಗುರುತು ಮಾಡಲು ಇದನ್ನು ಉಪಯುಕ್ತ ಸಾಧನವಾಗಿ ಬಳಸಿಕೊಂಡರು.[16][17] ಈ ಗ್ರ್ಯಾಫೈಟ್ ನಿಕ್ಷೇಪವು ಅತಿ ಶುದ್ಧ ಹಾಗೂ ಮೃದುವಾಗಿತ್ತು. ಇದನ್ನು ಸುಲಭವಾಗಿ ಕೋಲುಗಳ ಆಕಾರದಲ್ಲಿ ಮುರಿಯಬಹುದಾಗಿತ್ತು. ಈ ರೀತಿ ಸಮಗ್ರ ರೂಪದಲ್ಲಿ ದೊರೆತ ಏಕೈಕ ಗ್ರ್ಯಾಫೈಟ್ ನಿಕ್ಷೇಪವು ಇದೇ.[18]
ಅಗಡುವಸ್ತುಗಳು, ಉಕ್ಕು ತಯಾರಿಕೆ, ವಿಸ್ತರಿತ ಗ್ರ್ಯಾಫೈಟ್, ವಾಹನಗಳ ಬ್ರೇಕ್ ಲೈನಿಂಗ್ಗಳು ಹಾಗೂ ಎರಕಾಗಾರದಲ್ಲಿ ಬಳಸಲಾಗುವ ಲೂಬ್ರಿಕಂಟ್ ಗಳಲ್ಲಿ ನೈಸರ್ಗಿಕ ಗ್ರ್ಯಾಫೈಟ್ನ್ನು ಹೆಚ್ಚಾಗಿ ಬಳಸಲಾಗುತ್ತದೆ.[4] ಗ್ರ್ಯಾಫೈಟ್ನಲ್ಲಿ ನೈಸರ್ಗಿಕವಾಗಿ ದೊರೆಯುವ ಗ್ರ್ಯಾಫೀನ್ ಅಪೂರ್ವ ಭೌತಿಕ ಲಕ್ಷಣಗಳನ್ನು ಹೊಂದಿದೆ. ಇದು ಅತಿ ದೃಢ ವಸ್ತು ಎನ್ನಲಾಗಿದೆ. ಆದರೂ, ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಗ್ರ್ಯಾಫೀನ್ನ್ನು ಬಳಸಲು ಆರ್ಥಿಕವಾಗಿ ಕಾರ್ಯಸಾಧ್ಯವಾಗುವ ಮುಂಚೆ, ಗ್ರ್ಯಾಫೀನನ್ನು ಗ್ರ್ಯಾಫೈಟ್ನಿಂದ ಪ್ರತ್ಯೇಕಿಸುವ ಪ್ರಕ್ರಿಯೆಗೆ ತಾಂತ್ರಿಕೆ ಅಭಿವೃದ್ಧಿಯ ಅಗತ್ಯವಿದೆ.
ಕರಗಿಸಿದ ಲೋಹವನ್ನು ಗ್ರ್ಯಾಫೈಟ್ ಮೂಸೆಯಲ್ಲಿ ತುಂಬಿಸಿಡುವುದರೊಂದಿಗೆ, ಇಸವಿ 1900ಕ್ಕೂ ಮುಂಚೆ ಗ್ರ್ಯಾಫೈಟ್ನ ಸಾಮಾನ್ಯ ಬಳಕೆ ಆರಂಭವಾಯಿತು. ಇದು ಇಂದು (ಕಠಿಣ)ಅಗಡು ವಸ್ತುಗಳ ಸಣ್ಣ ಅಂಶವಾಗಿದೆ. 1980ರ ದಶಕದ ಮಧ್ಯದಲ್ಲಿ, ಇಂಗಾಲ-ಮ್ಯಾಗ್ನೆಸೈಟ್ ಇಟ್ಟಿಗೆ ಬಳಕೆಯಲ್ಲಿ ಮುಖ್ಯವಾಯಿತು. ಕೆಲ ವರ್ಷಗಳ ನಂತರ, ಅಲ್ಯುಮಿನಾ-ಗ್ರ್ಯಾಫೈಟ್ ರೂಪದ ಬಳಕೆಯೂ ಹೆಚ್ಚಾಯಿತು. ಸದ್ಯಕ್ಕೆ, ಪ್ರಾಮುಖ್ಯದ ಕ್ರಮದಲ್ಲಿ ಮೊದಲಿಗೆ ಅಲ್ಯುಮಿನಾ-ಗ್ರ್ಯಾಫೈಟ್ ರೂಪಗಳು, ನಂತರ ಇಂಗಾಲ-ಮ್ಯಾಗನೆಸೈಟ್ ಇಟ್ಟಿಗೆ, ಏಕಶಿಲೆಗಳು (ಗನಿಂಗ್ ಮತ್ತು ರಾಮ್ಮಿಂಗ್ ಮಿಶ್ರಣಗಳು) ಹಾಗೂ ಮೂಸೆಗಳು ಬಳಕೆಯಲ್ಲಿ ಮುಖ್ಯವಾಗಿವೆ.
ಬಹಳ ದೊಡ್ಡ ಗಾತ್ರದ ಗ್ರ್ಯಾಫೈಟ್ ಕಣಗಳನ್ನು ಬಳಸಿ ಮೂಸೆಗಳನ್ನು ತಯಾರಿಸಲಾಗುತ್ತಿತ್ತು. ಇಂಗಾಲ-ಮ್ಯಾಗ್ನೆಸೈಟ್ ಇಟ್ಟಿಗೆಗಳನ್ನು ತಯಾರಿಸಲು ಅಷ್ಟೇನು ದೊಡ್ಡ ಗಾತ್ರದ ಗ್ರ್ಯಾಫೈಟ್ ಅಗತ್ಯವಿರಲಿಲ್ಲ. ಈ ಇಟ್ಟಿಗೆ ಮತ್ತು ಇತರೆ ಉತ್ಪನ್ನಗಳಿಗೆ, ಗ್ರ್ಯಾಫೈಟ್ ಕಣಗಳ ಅಗತ್ಯ ಗಾತ್ರದ ಕುರಿತು ಇಂದು ಬಹಳಷ್ಟು ಸರಿಹೊಂದಿಕೆಯಿದೆ. ಅರೂಪದ ಗ್ರ್ಯಾಫೈಟ್ ಬಳಕೆಯು ಕೇವಲ ಕೆಲ-ಮಟ್ಟದ ಅಗಡು ವಸ್ತುಗಳಿಗೆ ಮಾತ್ರ ನಿರ್ಬಂಧಿತವಾಗಿಲ್ಲ. ಕರಗಿದ ಉಕ್ಕನ್ನು ಸೌಟಿನಿಂದ ಎರಕದ ಅಚ್ಚಿಗೆ ರವಾನಿಸಲು, ಕಿರಿ ನಳಿಕೆಗಳು ಹಾಗೂ ದೊಡ್ಡ ಪಾತ್ರೆಗಳಂತಹ ಅಲ್ಯುಮಿನಾ-ಗ್ರ್ಯಾಫೈಟ್ ಸುಸಂಗತ ಕ್ಯಾಸ್ಟಿಂಗ್ ಸಾಧನಗಳನ್ನು ಬಳಸಲಾಗುತ್ತದೆ. ಉಕ್ಕಿನ ಪರಿವರ್ತಕಗಳಲ್ಲಿ (converters) ತೀವ್ರ ಉಷ್ಣಾಂಶಗಳನ್ನು ತಡೆಯಲು, ಇಂಗಾಲ ಮ್ಯಾಗ್ನೆಸೈಟ್ ಇಟ್ಟಿಗೆಗಳನ್ನು ಅಳವಡಿಸಲಾಗಿರುತ್ತದೆ. ಬ್ಲ್ಯಾಸ್ಟ್ ಫರ್ನೇಸ್ಗಳ ಒಳಗೋಡೆಗಳಲ್ಲಿ ಗ್ರ್ಯಾಫೈಟ್ ದೊಡ್ಡ ಗಾತ್ರದ ಇಟ್ಟಿಗೆಗಳ ಪದರವುಂಟು, ಏಕೆಂದರೆ ಗ್ರ್ಯಾಫೈಟ್ನ ಅತಿ ಹೆಚ್ಚು ಉಷ್ಣದ ಸಂವಹನವು ಅತಿ ಮುಖ್ಯವಾಗಿರುತ್ತದೆ. ಬ್ಲ್ಯಾಸ್ಟ್ ಫರ್ನೇಸ್ಗಳ ಒಳಗೋಡೆಗಳಲ್ಲಿ, ಇಂಗಾಲ ಮ್ಯಾಗ್ನೆಸೈಟ್ ಇಟ್ಟಿಗೆಗಳ ಬದಲಿಗೆ ಹೆಚ್ಚು ಶುದ್ಧವಾದ ಏಕಶಿಲಾರೂಪದ ಇಟ್ಟಿಗೆಗಳನ್ನು ಜೋಡಿಸಲಾಗಿವೆ.
US ಹಾಗೂ ಯುರೋಪಿಯನ್ ಪ್ರಕ್ರಿಯೆಗೆ (ಕರಗಿಸಲು,ಮಣಿಸಲು ಆಕಾರಕ್ಕೆತರಲು) ಕಷ್ಟ ಸಾಧ್ಯವಾದ ವಸ್ತುಗಳ ಉತ್ಪಾದನಾ ಉದ್ದಿಮೆಗಳು 2002-03ರಲ್ಲಿ ಸಮಸ್ಯೆ ಎದುರಾಯಿತು. ಉಕ್ಕಿನ ಮಾರುಕಟ್ಟೆ ಹಿಂಜರಿಕೆ ಹಾಗೂ ಉಕ್ಕಿನ ಪ್ರತಿ ಟನ್ಗೂ ಕಡಿಮೆಯಾಗುತ್ತಿರುವ ಇಂತಹ ವಸ್ತು ಬಳಕೆ; ಜೊತೆಗೆ ಉದ್ದಿಮೆಗಳ ಖರೀದಿ ಹಾಗೂ ಹಲವು ಉದ್ದಿಮೆಗಳು ಮುಚ್ಚಬೇಕಾಯಿತು.
ರಾಡೆಕ್ಸ್-ಹೆರಕ್ಲಿತ್ ಇಂಕಾರ್ಪೊರೇಟೆಡ್ RHI) ಉದ್ದಿಮೆಯು ಹಾರ್ಬಿಸನ್-ವಾಕರ್ ರಿಫ್ರ್ಯಾಕ್ಟರೀಸ್ನ್ನು ಕೊಂಡ ಪರಿಣಾಮವಾಗಿ ಹಲವು ಉದ್ದಿಮೆಗಳು ಮುಚ್ಚಿಹೋದವು. ಕೆಲವು ಉದ್ದಿಮೆಗಳಲ್ಲಿನ ಯಂತ್ರೋಪಕರಣ ಸಾಧನಗಳ್ನು ಹರಾಜು ಮಾಡಲಾಯಿತು. ಕಳೆದುಹೋದ ಕ್ಷಮತೆಯಲ್ಲಿ ಬಹಳಷ್ಟು ಇಂಗಾಲ-ಮ್ಯಾಗ್ನೆಸೈಟ್ ಇಟ್ಟಿಗೆಯದಾದ್ದರಿಂದ, ಅಗಡು ವಸ್ತುಗಳ ಕ್ಷೇತ್ರದೊಳಗೆ ಗ್ರ್ಯಾಫೈಟ್ ಬಳಕೆಯು ಇಟ್ಟಿಗೆಗಳಿಂದ ದೂರ ಸರಿದು, ಅಲ್ಯುಮಿನಾ-ಗ್ರ್ಯಾಫೈಟ್ ರೂಪ ಹಾಗೂ ಏಕಶಿಲಾರೂಪಗಳತ್ತ ಸಾಗಿತು.ಇಂಗಾಲ-ಮ್ಯಾಗ್ನೆಸೈಟ್ ಇಟ್ಟಿಗೆಯ ಪ್ರಮುಖ ಮೂಲವು ಚೀನಾದ ಆಮುದಾದ ವಸ್ತುಗಳಲ್ಲಿವೆ. ಮೇಲಿನ ಅಗಡು ವಸ್ತುಗಳಲ್ಲಿ ಬಹುಶಃ ಎಲ್ಲವನ್ನೂ ಸಹ ಉಕ್ಕು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಗಡು ವಸ್ತುಗಳ ಬಳಕೆಯಲ್ಲಿ ಇವು ಸುಮಾರು 75%ರಷ್ಟು ಪಾಲಿದೆ. ಉಳಿದ 25%ನ್ನು ಗಾರೆ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ.0
USGS ಪ್ರಕಾರ, 2006ರಲ್ಲಿ, USನ ಅಗಡು ವಸ್ತುಗಳಲ್ಲಿ ನೈಸರ್ಗಿಕ ಗ್ರ್ಯಾಫೈಟ್ ಬಳಕೆ 11,000 ಟನ್ಗಳಷ್ಟಿತ್ತು.[4]
ಅಂತಿಮ ಹಂತದ ಬಳಸಲಾದ ನೈಸರ್ಗಿಕ ಗ್ರ್ಯಾಫೈಟ್ ಸಾಮಾನ್ಯವಾಗಿ ಕರಗಿದ ಉಕ್ಕಿನಲ್ಲಿ ಇಂಗಾಲದ ಪ್ರಮಾಣವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಆದರೂ, ಹೆಚ್ಚು ತಪ್ತಗೊಳಿಸಿದ ಉಕ್ಕನ್ನು ಹೊರತೆಗೆಯಲು ಬಳಸಲಾದ ಅಚ್ಚುಗಳನ್ನು ನಯಗೊಳಿಸಲು (ಲ್ಯೂಬ್ರಿಕೇಟ್ ಮಾಡಲು) ಬಳಸಬಹುದಾಗಿದೆ. ಇಂಗಾಲ ವರ್ಧಕಗಳ ಪೂರೈಕೆಯ ಮಾರುಕಟ್ಟೆಯಲ್ಲಿ ಬಹಳ ಪೈಪೋಟಿಯಿದೆ. ಇದರಿಂದಾಗಿ, ಸಂಶ್ಲೇಷಿತ ಗ್ರ್ಯಾಫೈಟ್ ಪುಡಿ, ಪೆಟ್ರೊಲಿಯಮ್ ಕೋಕ್ ಹಾಗೂ ಇಂಗಾಲದ ಇತರೆ ರೂಪಗಳಂತಹ ಪರ್ಯಾಯಗಳಿಂದ ತೀವ್ರ ಪೈಪೋಟಿ ಎದುರಿಸಬೇಕಾದೀತು. ಉಕ್ಕಿನಲ್ಲಿ ಇಂಗಾಲದ ಪ್ರಮಾಣವನ್ನು ನಿರ್ದಿಷ್ಟ ಮಟ್ಟಕ್ಕೆ ಏರಿಸಲು ಇಂಗಾಲ ವರ್ಧಕವನ್ನು ಸೇರಿಸಲಾಗಿದೆ. USGS US ಗ್ರ್ಯಾಫೈಟ್ ಬಳಕೆಯ ಅಂಕಿ-ಅಂಶಗಳನ್ನು ಆಧರಿಸಿದ ಅಂದಾಜಿನ ಪ್ರಕಾರ, ಇದೇ ರೀತಿ 2005ರಲ್ಲಿ ಸುಮಾರು 10,500 ಟನ್ಗಳಷ್ಟು ಗ್ರ್ಯಾಫೈಟ್ ಬಳಸಲಾಯಿತು.[4]
ನೈಸರ್ಗಿಕ ಗ್ರ್ಯಾಫೈಟ್ ಕಣಗಳನ್ನು ಕ್ರೊಮಿಕ್ ಆಮ್ಲದ ಪಾತ್ರೆಯಲ್ಲಿ ನಂತರ ಸಾಂದ್ರೀಕೃತ ಗಂಧಕಾಮ್ಲದಲ್ಲಿ ಅದ್ದಲಾಗುತ್ತದೆ. ಗ್ರ್ಯಾಫೈಟ್ನ ಹರಳಿನ ಜಾಲರಿ ಸಮತಲಗಳನ್ನು ದೂರ ತಳ್ಳುತ್ತವೆ. ಇದರಿಂದಾಗಿ ಗ್ರ್ಯಾಫೈಟ್ ವಿಸ್ತರಿತವಾಗುತ್ತದೆ. ವಿಸ್ತರಿತ ಗ್ರ್ಯಾಫೈಟ್ನ್ನು ಗ್ರ್ಯಾಫೈಟ್ ಹಾಳೆ ತಯಾರಿಸಲು ಬಳಸಲಾಗುತ್ತದೆ. ಅಥವಾ, ಸೌಟಿನಲ್ಲಿರುವ ಕರಗಿದ ಲೋಹಕ್ಕೆ ರೋಧಕವನ್ನೊದಗಿಸಲು ನೇರವಾಗಿ ಹಾಟ್ ಟಾಪ್ ಸಂಯುಕ್ತದ ರೂಪದಲ್ಲಿ ಬಳಸಲಾಗುತ್ತದೆ. ಅಥವಾ, ಅಗ್ನಿ ದ್ವಾರದ ಸುತ್ತಲೂ ಅಳವಡಿಸಲಾದ ಅಗ್ನಿರೋಧಕಗಳಂತೆ ಅಥವಾ ಪ್ಲ್ಯಾಸ್ಟಿಕ್ ನಳಿಕೆಯ ಸುತ್ತಲೂ ಇರುವ ಹಾಳೆ ಲೋಹ ಕಾಲರ್ಗಳಲ್ಲಿ ಬಳಸಲಾಗುತ್ತದೆ (ಬೆಂಕಿ ಆಕಸ್ಮಿಕವಾದಾಗ, ಅಗ್ನಿಯ ಭೇದ ಹಾಗೂ ಹರಡುವಿಕೆಯನನ್ನು ತಡೆಗಟ್ಟಲು ಗ್ರ್ಯಾಫೈಟ್ ಹಿಗ್ಗಿ ಸುಟ್ಟುಹೋಗುತ್ತದೆ). ಅಥವಾ, ಹೆಚ್ಚಿನ ಉಷ್ಣಾಂಶದಲ್ಲಿ ಬಳಸಲು ಬೇಕಾದ ಅತ್ಯುತ್ತಮ ಕ್ರಿಯಾಶೀಲತೆಯ ಗ್ಯಾಸ್ಕೆಟ್ ವಸ್ತು ತಯಾರಿಸಲು ಬಳಸಲಾಗುತ್ತದೆ. ಗ್ರ್ಯಾಫೈಟ್ ಹಾಳೆಗಳನ್ನಾಗಿ ಮಾಡಿದ ನಂತರ, ಹಾಳೆಯನ್ನು ಯಂತ್ರಕ್ಕೆ ಕಳುಹಿಸಿ, ಇಂಧನ ಕೋಶಗಳಲ್ಲಿ ದ್ವಿಧ್ರುವೀಯ ಫಲಕಗಳಲ್ಲಿ ಜೋಡಿಸಲಾಗುತ್ತದೆ. ಈ ಹಾಳೆಯನ್ನು ಲ್ಯಾಪ್ಟಾಪ್ ಕಂಪ್ಯೂಟರ್ಗಳಿಗಾಗಿ ಶಾಖ ತೊಟ್ಟಿಗಳನ್ನಾಗಿಸಲಾಗುತ್ತದೆ. ಇವು ಲ್ಯಾಪ್ಟಾಪ್ಗಳ ತೂಕವನ್ನು ಕಡಿಮೆಯಾಗಿರಿಸಿ ತಂಪಾಗಿರಿಸುತ್ತದೆ. ಗ್ರ್ಯಾಫೈಟ್ ಹಾಳೆಗಳನ್ನು ಹಾಳೆಯ ಲ್ಯಾಮಿನೇಟ್ ಆಗಿ ತಯಾರಿಸಲಾಗುತ್ತದೆ. ಇವುಗಳನ್ನು ಕವಾಟಗಳನ್ನು ಕಟ್ಟಿಡಲು ಅಥವಾ ಗ್ಯಾಸ್ಕೆಟ್ಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ಗುಂಪಿನಲ್ಲಿ ಹಳೆಯ ಶೈಲಿಯ ಪ್ಯಾಕಿಂಗ್ಗಳು ಈಗ ಸಣ್ಣ ಪ್ರಮಾಣದ ಸದಸ್ಯವಾಗಿವೆ: ತೈಲ ಅಥವಾ ಗ್ರೀಸ್ಗಳಲ್ಲಿ ಸಣ್ಣ ಕಣಗಳ ಗ್ರ್ಯಾಫೈಟ್ಗಳನ್ನು ಶಾಖ ನಿರೋಧಿಸುವ ಆನ್ವಯಿಕೆಗಳಲ್ಲಿ ಬಳಸಲಾಗುತ್ತದೆ. USನಲ್ಲಿ ಈ ರೀತಿಯ ನೈಸರ್ಗಿಕ ಗ್ರ್ಯಾಫೈಟ್ನ ಅಂತಿಮ ಹಂತದ ಬಳಕೆ ಕುರಿತು GAN ಅಂದಾಜಿನ ಪ್ರಕಾರ, 7,500 ಟನ್ಗಳಷ್ಟು ಬಳಕೆಯಾಗಿದೆ.[4]
ಕೆಲವು ಲೋಹಗಳು ಹಾಗೂ ಸಣ್ಣ ಅಣುಗಳೊಂದಿಗೆ ಗ್ರ್ಯಾಫೈಟ್ ಬೆರೆತು ಅಂತರ್ನಿಕ್ಷಿಪ್ತ ಸಂಯುಕ್ತಗಳಾಗುತ್ತವೆ. ಈ ಸಂಯುಕ್ತಗಳಲ್ಲಿ, ಅತಿಥೇಯ ಅಣುವು ಎರಡು ಗ್ರ್ಯಾಫೈಟ್ ಪದರಗಳ ನಡುವೆ ಸೇರಿಕೊಳ್ಳುತ್ತದೆ. ಇದರಿಂದಾಗಿ ವಿಭಿನ್ನ ರಸಗಣಿತಗಳುಳ್ಳ ಸಂಯುಕ್ತಗಳಾಗುತ್ತವೆ. ಪೊಟ್ಯಾಷಿಯಮ್ ಗ್ರ್ಯಾಫೈಟ್ (ಸೂತ್ರ KC8)) ಅಂತರ್ನಿಕ್ಷೇಪಣಾ ಸಂಯುಕ್ತದ ಪ್ರಮುಖ ಉದಾಹರಣೆಯಾಗಿದೆ. ಗ್ರ್ಯಾಫೈಟ್ ಅಂತರ್ನಿಕ್ಷೇಪಣಾ ಸಂಯುಕ್ತಗಳು ಅಧಿವಾಹಕಗಳಾಗಿವೆ. ಜೂನ್ 2009ರೊಳಗೆ, CaC6ಲ್ಲಿ ಅತಿ ಹೆಚ್ಚಿನ ಸಂಕ್ರಮಣ ಉಷ್ಣಾಂಶ Tc = 11.5 K ಗಳಿಸಲಾಗಿದೆ. ಇನ್ನಷ್ಟು ಒತ್ತಡದಲ್ಲಿ ಇದು ಇನ್ನೂ ಹೆಚ್ಚಬಹುದು (8 GPaದಲ್ಲಿ 15.1 K).[19]
ಭಾರೀ ವಾಹನಗಳಲ್ಲಿ ಬ್ರೇಕ್ ಲೈನಿಂಗ್ಗಳು ಅಥವಾ ಬ್ರೇಕ್ ಷೂಗಳಲ್ಲಿ ಗ್ರ್ಯಾಫೈಟ್ನ ನೈಸರ್ಗಿಕ ಅರೂಪ ಹಾಗೂ ಸಣ್ಣ ಕಣಗಳನ್ನು ಬಳಸಲಾಗುತ್ತದೆ. ಕಲ್ನಾರಿಗೆ ಸೂಕ್ತ ಪರ್ಯಾಯದ ಅಗತ್ಯವುಂಟಾದಾಗ ಗ್ರ್ಯಾಫೈಟ್ ಪ್ರಮುಖತೆ ಪಡೆಯಿತು. ಇದರ ಬಳಕೆ ಕೆಲ ಕಾಲದಿಂದಲೂ ಬಹಳ ಮುಖ್ಯವಾಗಿದೆ. ಆದರೆ ಕಲ್ನಾರು-ಇತರೆ ಸಾವಯವ ಸಂಯುಕ್ತಗಳು (NAO) ಗ್ರ್ಯಾಫೈಟ್ ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳುವ ಸಾಧ್ಯತೆಯಿದೆ. ಇದೂ ಸಾಲದಕ್ಕೆ ಕೆಲವು ಬ್ರೇಕ್ ಲೈನಿಂಗ್ ಉದ್ದಿಮೆಗಳು ಮುಚ್ಚಿಹೋದವು, ಹಾಗೂ ವಾಹನ ತಯಾರಿಕಾ ಮಾರುಕಟ್ಟೆಯಲ್ಲಿ ಹಿಂಜರಿಕೆಯ ಅಲೆಯಿದೆ. USGS ಪ್ರಕಾರ, 2005ರಲ್ಲಿ USನಲ್ಲಿ ಬ್ರೇಕ್ ಲೈನಿಂಗ್ಗಾಗಿ ನೈಸರ್ಗಿಕ ಗ್ರ್ಯಾಫೈಟ್ ಬಳಕೆ 6,510 ಟನ್ಗಳಷ್ಟಿತ್ತು.[4]
ಎರಕ ವರಸೆ ಅಥವಾ ಅಚ್ಚು ಲೇಪನವೆಂಬುದು ಅರೂಪ ಅಥವಾ ಸಣ್ಣ ಕಣಗಳ ಗ್ರ್ಯಾಫೈಟ್ನ ನೀರು-ಆಧಾರಿತ ಬಣ್ಣವಾಗಿದೆ. ಅಚ್ಚಿನ ಒಳಭಾಗಕ್ಕೆ ಗ್ರ್ಯಾಫೈಟ್ ಅಂಶವಿರುವ ಬಣ್ಣ ಲೇಪಿಸಿ ಒಣಗಿಸುವುದರಿಂದ, ಅತಿ ಸಣ್ಣದಾದ ಗ್ರ್ಯಾಫೈಟ್ ಪದರ ಕಂಡುಬರುತ್ತದೆ. ತಪ್ತವಾದ ಲೋಹವು ತಣ್ಣಗಾದ ನಂತರ ವಸ್ತುವನ್ನು ಪ್ರತ್ಯೇಕಿಸುವುದನ್ನು ಸುಗಮಗೊಳಿಸುತ್ತದೆ. ಗ್ರ್ಯಾಫೈಟ್ ಲೂಬ್ರಿಕಂಟ್ಗಳು ಹೆಚ್ಚು ಅಥವಾ ಅತಿ ಕಡಿಮೆ ಉಷ್ಣಾಂಶಗಳಲ್ಲಿ ಬಳಸಲಾಗುವ ವಿಶಿಷ್ಟ ವಸ್ತುಗಳಾಗಿವೆ. ಈ ಉಷ್ಣಾಂಶಗಳಲ್ಲಿ, ತಂತಿ ಅಚ್ಚು ಹೊರತೆಗೆಯುವ ಲೂಬ್ರಿಕಂಟ್, ಸ್ಥಗಿತ ನಿರೋಧಿ ಸಂಯುಕ್ತವಾಗಿ, ಗಣಿಗಾರಿಕೆಯ ಯಂತ್ರಗಳಿಗಾಗಿ ಗಿಯರ್ ಲೂಬ್ರಿಕಂಟ್ ಹಾಗು ಬೀಗಗಳ ಒಳಗಿನ ಭಾಗಗಳನ್ನು ನಯಗೊಳಿಸಲು ಗ್ರ್ಯಾಫೈಟ್ನ್ನು ಬಳಸಲಾಗಿವೆ. ಲೋ-ಗ್ರಿಟ್ ಗ್ರ್ಯಾಫೈಟ್, ಅಥವಾ ಇನ್ನೂ ಉತ್ತಮವಾದ ನೊ-ಗ್ರಿಟ್ ಗ್ರ್ಯಾಫೈಟ್ (ಅತ್ಯುನ್ನತ ಮಟ್ಟದ ಶುದ್ಧತೆ) ಬಹಳ ಅತ್ಯಗತ್ಯ. ಇದನ್ನು ಒಣ ಪುಡಿ ಅಥವಾ ನೀರು ಅಥವಾ ತೈಲದೊಂದಿಗೆ, ಅಥವಾ ಕಲಿಲವಾದ (ಕೊಲಾಯ್ಡ್) ಗ್ರ್ಯಾಫೈಟ್ ಆಗಿ ಬಳಸಬಹುದಾಗಿದೆ. USGS ಗ್ರ್ಯಾಫೈಟ್ ಬಳಕೆಯ ಅಂಕಿ-ಅಂಶಗಳನ್ನು ಆಧರಿಸಿದ ಅಂದಾಜಿನ ಪ್ರಕಾರ, ಇಸವಿ 2005ರಲ್ಲಿ ಈ ರೀತಿ 2,200 ಟನ್ಗಳಷ್ಟು ಗ್ರ್ಯಾಫೈಟ್ ಬಳಕೆಯಾಗಿತ್ತು.[4]
ನೈಸರ್ಗಿಕ ಗ್ರ್ಯಾಫೈಟ್ನ್ನು ಸಾಮಾನ್ಯ ಪೆನ್ಸಿಲ್ಗಳಲ್ಲಿ ಗುರುತು ಮಾಡುವ ವಸ್ತು 'ಲೆಡ್', ಝಿಂಕ್-ಇಂಗಾಲ ಬ್ಯಾಟರಿಗಳು, ವಿದ್ಯುತ್ ಮೋಟಾರ್ ಬ್ರಷ್ಗಳು ಹಾಗೂ ವಿವಿಧ ವಿಶಿಷ್ಟ ಆನ್ವಯಿಕೆಗಳಲ್ಲಿ ಬಳಸಲಾಗುತ್ತದೆ.
ಉಕ್ಕು ಕುಲುಮೆಗಳಲ್ಲಿ ಬಹಳಷ್ಟು ವಿದ್ಯುಚ್ಚಾಪ (ಸದಾ ಉರಿಯುವ)ಕುಲುಮೆಗಳಾಗಿದ್ದು, ಅವನ್ನು ತಪ್ತಗೊಳಿಸುವ ವಿದ್ಯುತ್ತನ್ನು ಗ್ರ್ಯಾಫೈಟ್ ವಿದ್ಯುದ್ವಾರಗಳು ಸಾಗಿಸುತ್ತವೆ. ಅವುಗಳನ್ನು ಪೆಟ್ರೊಲಿಯಮ್ ಡಾಂಬರಿನೊಡನೆ ಮಿಶ್ರಣಗೊಳಿಸಿ, ಪೆಟ್ರೊಲಿಯಮ್ ಕೋಕ್ನಿಂದ ತಯಾರಿಸಲಾಗುತ್ತದೆ. ನಂತರ, ಅವುಗಳನ್ನು ಹೊರತೆಗೆದು ರೂಪ-ಆಕಾರ ನೀಡಲಾಗುತ್ತದೆ. ನಂತರ, ಅವುಗಳನ್ನು ಬೆಂಕಿಗೆ ತಗುಲಿಸದೆ ಸುಡಲಾಗುತ್ತದೆ. ಇದಾದ ನಂತರ, 3000 °Cಗಿಂತಲೂ ಹೆಚ್ಚಿನ ಉಷ್ಣಾಂಶಕ್ಕೆ ಬಿಸಿ ಮಾಡುವುದರ ಮೂಲಕ ಇಂಗಾಲವನ್ನು ಗ್ರ್ಯಾಫೈಟ್ಗೆ ಪರಿವರ್ತಿಸಲಾಗುತ್ತದೆ. ಅವುಗಳು 11 ಅಡಿ ಉದ್ದ ಹಾಗೂ 30 ಅಂಗುಲ ವ್ಯಾಸದ ತನಕ ಗಾತ್ರ ಹೊಂದಿರಬಹುದು. ವಿಶ್ವಾದ್ಯಂತ ತಯಾರಾಗುವ ಉಕ್ಕಿನಲ್ಲಿ ಹೆಚ್ಚುತ್ತಿರುವ ಪಾಲನ್ನು ವಿದ್ಯುಚ್ಚಾಪ ಕುಲುಮೆಗಳ ಮೂಲಕ ತಯಾರಿಸಲಾಗುತ್ತಿದೆ. ಈ ವಿದ್ಯುಚ್ಚಾಪ ಕುಲುಮೆಗಳು ಇನ್ನಷ್ಟು ಕಾರ್ಯಕ್ಷಮತೆ ಹೊಂದುತ್ತಿದ್ದು, ಅವುಗಳ ಮೂಲಕ ಪ್ರತಿ ಟನ್ ವಿದ್ಯದ್ವಾರಕ್ಕೂ ಹೆಚ್ಚು ಉಕ್ಕು ಉತ್ಪಾದನೆ ಮಾಡಬಹುದು. USGS ದತ್ತಾಂಶವನ್ನು ಆಧರಿಸಿದ ಅಂದಾಜಿನ ಪ್ರಕಾರ, 2005ರಲ್ಲಿ ಗ್ರ್ಯಾಫೈಟ್ ವಿದ್ಯುದ್ವಾರಗಳ ಬಳಕೆ 197,000 ಟನ್ಗಳಷ್ಟಿತ್ತು.[4]
ಸಣ್ಣ ಪ್ರಮಾಣದ ಪರಿವರ್ತನೆಗಳೊಂದಿಗೆ, ಪೆಟ್ರೊಲಿಯಮ್ ಕೋಕ್ ಪುಡಿಯನ್ನು ಗ್ರ್ಯಾಫೈಟೀಕರಣದ ಉಷ್ಣಾಂಶಕ್ಕಿಂತಲೂ ಹೆಚ್ಚಿನ ಉಷ್ಣಾಂಶದಲ್ಲಿ ತಪ್ತಗೊಳಿಸಿ ಈ ಪುಡಿಯನ್ನು ತಯಾರಿಸಲಾಗುತ್ತದೆ. ಗ್ರ್ಯಾಫೈಟ್ ತುಣುಕುಗಳು ಬಳಸಲಾಗದ ವಿದ್ಯುದ್ವಾರ ವಸ್ತುಗಳಿಂದ (ತಯಾರಿಕೆಯ ಹಂತದಲ್ಲಿ ಅಥವಾ ಬಳಕೆಯ ನಂತರ) ಹಾಗೂ ಲೇತ್ ಯಂತ್ರಗಳಲ್ಲಿ ಬಳಸಿ ಕಡಿದುಹೋಗುವ ತುಣುಕುಗಳು ಲಭ್ಯವಾಗುತ್ತವೆ. ಸಂಶ್ಲೇಷಿತ ಗ್ರ್ಯಾಫೈಟ್ ಪುಡಿಯಲ್ಲಿ ಬಹಳಷ್ಟು ಪಾಲನ್ನು ಉಕ್ಕಿನಲ್ಲಿ ಇಂಗಾಲ ಪ್ರಮಾಣವನ್ನು ವರ್ಧಿಸಲು ಬಳಸಲಾಗುತ್ತದೆ (ಇದು ನೈಸರ್ಗಿಕ ಗ್ರ್ಯಾಫೈಟ್ ಬಳಕೆಯೊಂದಿಗೆ ಒಂದು ರೀತಿಯ ಸ್ಪರ್ಧೆಯೂ ಸಹ). ಇನ್ನು ಕೆಲ ಪಾಲನ್ನು ವಿದ್ಯುತ್ಕೋಶಗಳು ಹಾಗೂ ಬ್ರೇಕ್ ಲೈನಿಂಗ್ಗಳಲ್ಲಿ ಬಳಸಲಾಗುತ್ತದೆ. USGS ಪ್ರಕಾರ, ಇತ್ತೀಚೆಗೆ ಲಭ್ಯ ದತ್ತಾಂಶದ ಪ್ರಕಾರ, 2001ರಲ್ಲಿ USನಲ್ಲಿ ಸಂಶ್ಲೇಶಿತ ಗ್ರ್ಯಾಫೈಟ್ ಪುಡಿ ಮತ್ತು ತುಣುಕು ಉತ್ಪಾದನೆ 95,000 ಟನ್ಗಳಷ್ಟಿತ್ತು.[4]
ವಿಶೇಷ ದರ್ಜೆಯ ಸಂಶ್ಲೇಷಿತ ಗ್ರ್ಯಾಫೈಟ್ ಸಹ ಪರಮಾಣು ಕ್ರಿಯಾಗಾರಗಳಲ್ಲಿ ಮಾತೃಕೆ ಹಾಗೂ ಶೂನ್ಯಕಣ ಮಂದಕಾರಿಯಾಗಿ ಬಳಸಬಹುದಾಗಿದೆ. ಇದು ಕಡಿಮೆಯಾದ ಶೂನ್ಯಕಣ ಅಡ್ಡಕೊಯ್ತ ಹೊಂದಿರುವ ಕಾರಣ, ಪ್ರಸ್ತಾಪಿತ ಪರಮಾಣು ಸಮ್ಮಿಲನ ಕ್ರಿಯಾಗಾರಗಳಲ್ಲಿ ಬಳಸಲು ಶಿಫಾರಸು ಮಾಡಲಾಗಿದೆ. ಕ್ರಿಯಾಗಾರದಲ್ಲಿ ಬಳಸತಕ್ಕ ಗ್ರ್ಯಾಫೈಟ್ನಲ್ಲಿ ಬೊರಾನ್ನಂತಹ ಶೂನ್ಯಕಣ ಹೀರಿಕೊಳ್ಳುವ ವಸ್ತುಗಳಿಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. (ವಾಣಿಜ್ಯ ಗ್ರ್ಯಾಫೈಟ್ ನಿಕ್ಷೇಪ ವ್ಯವಸ್ಥೆಯಲ್ಲಿ ಈ ಬೊರಾನ್ ವಸ್ತುವನ್ನು ವ್ಯಾಪಕವಾಗಿ ಬಳಸಲಾಗುತ್ತದೆ - ಇದರಿಂದಾಗಿ, ಎರಡನೆಯ ಮಹಾಯುದ್ಧದಲ್ಲಿ ಗ್ರ್ಯಾಫೈಟ್-ಆಧಾರಿತ ಪರಮಾಣು ಕ್ರಿಯಾಗಾರಗಳು ವಿಫಲವಾದವು.) ಬೊರಾನ್ನ್ನು ಬೇರ್ಪಡಿಸಲು ವಿಫಲವಾದವರು ಇನ್ನಷ್ಟು ದುಬಾರಿಯಾದ ಭಾರಜಲ ಮಂದಕಾರಿಗಳನ್ನು ಬಳಸಬೇಕಾಯಿತು. ಪರಮಾಣು ಕ್ರಿಯಾಗಾರಗಳಲ್ಲಿ ಬಳಸಲಾದ ಗ್ರ್ಯಾಫೈಟ್ನ್ನು ಆಗಾಗ್ಗೆ ಪರಮಾಣು ಗ್ರ್ಯಾಫೈಟ್ ಎನ್ನಲಾಗುತ್ತದೆ.
ಇಂಗಾಲ ನಾರು ಬಲವರ್ಧಿತ ಪ್ಲ್ಯಾಸ್ಟಿಕ್ಗಳು, ಹಾಗೂ, ಬಲಪಡಿಸಲಾದ ಇಂಗಾಲ-ಇಂಗಾಲ (ಕಾರ್ಬನ್-ಕಾರ್ಬನ್) (RCC)ಯಂತಹ ಶಾಖ-ತಡೆಯಬಲ್ಲ ಸಂಯುಕ್ತಗಳಲ್ಲಿ ಗ್ರ್ಯಾಫೈಟ್ (ಇಂಗಾಲ) ನಾರು ಹಾಗೂ ಇಂಗಾಲ ನ್ಯಾನೊಟ್ಯೂಬ್ಗಳನ್ನು ಬಳಸಲಾಗುತ್ತದೆ. ಇಂಗಾಲ ನಾರು ಗ್ರ್ಯಾಫೈಟ್ ಸಂಯುಕ್ತಗಳನ್ನು ಬಳಸಿ ಮೀನು ಗಾಳ ಹಾಕುವ ದಂಡಗಳು, ಗಾಲ್ಫ್ ದಂಡಗಳು, ಸೈಕಲ್ ಚೌಕಟ್ಟುಗಳು ಹಾಗೂ ಬಿಲಿಯರ್ಡ್ಸ್ ಕೋಲುಗಳು ತಯಾರಿಸಲಾಗಿದೆ. ಬಲಪಡಿಸಲಾದ ಕಾಂಕ್ರೀಟ್ಗಳಲ್ಲಿಯೂ ಸಹ ಈ ಸಂಯುಕ್ತವನ್ನು ಯಶಸ್ವಿಯಾಗಿ ಬಳಸಲಾಗಿದೆ. ಇಂಗಾಲ ನಾರು ಗ್ರ್ಯಾಫೈಟ್ನಿಂದ ಬಲಪಡಿಸಲಾದ ಪ್ಲ್ಯಾಸ್ಟಿಕ್ ಸಂಯುಕ್ತಗಳು ಹಾಗೂ ಬೂದು ಬಣ್ಣದ ಬೀಡುಕಬ್ಬಿಣದ ಯಾಂತ್ರಿಕ ಗುಣಗಳು ಈ ವಸ್ತುಗಳಲ್ಲಿನ ಗ್ರ್ಯಾಫೈಟ್ ಅಂಶಗಳಿಂದ ಪ್ರಭಾವಿತವಾಗಿವೆ. ಈ ಸಂದರ್ಭದಲ್ಲಿ, ಇಂಗಾಲ ಬಲವರ್ಧಕ ಹಾಗೂ ರಾಳ (ರೆಸಿನ್)ನ ಶುದ್ಧ ಮಿಶ್ರಣವನ್ನು ಉಲ್ಲೇಖಿಸಲು '(100%) ಗ್ರ್ಯಾಫೈಟ್' ಎಂಬುದನ್ನು ಸ್ಥೂಲವಾಗಿ ಬಳಸಲಾಗಿದೆ. ಹೆಚ್ಚುವರಿ ಅಂಶಗಳನ್ನು ಹೊಂದಿರುವ ಸಂಯುಕ್ತ ವಸ್ತುಗಳಿಗೆ ಸಂಯುಕ್ತ ಎಂಬ ಉಕ್ತಿಯನ್ನು ಬಳಸಲಾಗಿದೆ.[20]
ಕನಿಷ್ಠ ಪಕ್ಷ ಮೂರು ರೆಡಾರ್ ಹೀರಿಕೊಳ್ಳುವ ವಸ್ತುಗಳಲ್ಲಿ ಗ್ರ್ಯಾಫೈಟ್ ಬಳಸಲಾಗಿದೆ. ತಮ್ಮ ರೆಡಾರ್ ಅಡ್ಡ ಕೊಯ್ತವನ್ನು ಕಡಿಮೆಗೊಳಿಸಲು ಯು-ಬೋಟ್ ಗಾಳಿಕೊಳವೆಗಳಲ್ಲಿ ಬಳಸಲಾದ Sumpf ಮತ್ತು Schornsteinfegerನಲ್ಲಿ ರಬ್ಬರ್ನೊಂದಿಗೆ ಬೆರೆಸಲಾಗಿದೆ. F-117 ನೈಟ್ಹಾಕ್ ಯುದ್ಧ ವಿಮಾನಗಳ ಆರಂಭಿಕ ಮಾದರಿಗಳಲ್ಲಿ ಹೆಂಚುಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಸ್ಥಾಯಿ ಆವೇಶ ಸಂಗ್ರಹವಾಗುವುದನ್ನು ತಡೆಗಟ್ಟಲು, ಆಧುನಿಕ ಹೊಗೆರಹಿತ ಪುಡಿಯನ್ನು ಗ್ರ್ಯಾಫೈಟ್ನಲ್ಲಿ ಲೇಪಿತವಾಗಿರುತ್ತದೆ.
ವಿಶ್ವದಾದ್ಯಂತ ಗ್ರ್ಯಾಫೈಟ್ ಗಣಿಗಾರಿಕೆಯು ತೆರೆದ ಗುಂಡಿಯ ಹಾಗೂ ನೆಲದಡಿ ರೀತ್ಯಾ ನಡೆಯುತ್ತದೆ. ಕಣ ಹಾಗೂ ಅರೂಪ ಗ್ರ್ಯಾಫೈಟ್ ಗಣಿಗಾರಿಕೆ ತೆರೆದ ಗುಂಡಿಯಲ್ಲಿ ನಡೆದರೆ, ಕೇವಲ ಗೆಡ್ಡೆ (ಸಿರೆ) ಗ್ರ್ಯಾಫೈಟ್ ಗಣಿಗಾರಿಕೆ ಮಾತ್ರ ನೆಲದಡಿ, ಶ್ರೀಲಂಕಾ ದೇಶದಲ್ಲಿ ನಡೆಯುತ್ತದೆ. ತೆರೆದ ಗುಂಡಿ ಗಣಿಗಳಲ್ಲಿ ಸಾಮಾನ್ಯವಾಗಿ, ಬುಲ್ಡೊಜರ್ಗಳಂತಹ ಯಂತ್ರಗಳ ಮೂಲಕ ಅದಿರನ್ನು ಎತ್ತಿ, ಲಾರಿಗಳಲ್ಲಿ ಸುರಿದು, ಕೈಗಾರಿಕಾ ಘಟಕಕ್ಕೆ ಸಾಗಿಸಲಾಗುತ್ತದೆ. ಮೂಲ ಶಿಲೆಯನ್ನು ಸಾಮಾನ್ಯವಾಗಿ ಕೆಮ್ಮಣ್ಣು ಸ್ಥಿತಿಗೆ ತರಲಾಗಿರುವುದರಿಂದ, ಇದನ್ನು ಗುಂಡಿಯಿಂದ ಗ್ರ್ಯಾಫೈಟ್ ತುಣುಕುಗಳು ಮತ್ತು ಕಣಗಳ ಸಮೇತ ಹೂಳನ್ನು ರವಾನಿಸುವುದು ಎಂದರ್ಥ (ಸಿಡಿಸುವ ಪ್ರಕ್ರಿಯೆಯ ಅಗತ್ಯವಿಲ್ಲ). ನೆಲದಡಿ ಗ್ರ್ಯಾಫೈಟ್ ಗಣಿಗಳಲ್ಲಿ ರಂಧ್ರ ಕೊರೆಯುವಿಕೆ ಹಾಗೂ ಸಿಡಿಸುವಿಕೆಯ ತಂತ್ರಗಳ ಮೂಲಕ ಅದಿರಿನ ಗಟ್ಟಿ ಶಿಲೆಯನ್ನು ಒಡೆಯಲಾಗುತ್ತದೆ. ನಂತರ, ರೈಲು ಇಂಜಿನ್ಗೆ ಸೇರಿಸಲಾದ ಗಣಿ ಡಬ್ಬಿಗಳಲ್ಲಿ ಅಥವಾ ಲಾರಿಗಳಲ್ಲಿ ಇದನ್ನು ತುಂಬಿಸಿ, ನೆಲಮಟ್ಟಕ್ಕೆ ಹಾಗೂ ಅಲ್ಲಿಂದ ಕೈಗಾರಿಕಾ ಘಟಕಕ್ಕೆ ಒಯ್ಯಲಾಗುತ್ತದೆ. ವಿಶ್ವದಲ್ಲಿ ಅಭಿವೃದ್ಧಿ ಹೊಂದದ ವಲಯಗಳಲ್ಲಿ, ಅದಿರನ್ನು ಉದ್ದನೆಯ ಸಲಿಕೆಯಿಂದ ಎತ್ತಿ ತಳ್ಳುಬಂಡಿ ಅಥವಾ ಮಹಿಳೆಯರು ಬುಟ್ಟಿಯಲ್ಲಿ ಅದಿರು ಸಾಗಿಸುವುದರ ಮೂಲಕ ಗಣಿಗಾರಿಕೆ ನಡೆಯುತ್ತದೆ.
ಗ್ರ್ಯಾಫೈಟ್ಗೆ ಪ್ರತ್ಯೇಕೀಕರಣದ ಅಗತ್ಯವಿದೆ. ಆದರೂ ದಪ್ಪವಾದ ಅರೂಪದ ಹಾಗೂ ಸಿರೆ ಗ್ರ್ಯಾಫೈಟ್ ಬಹುಶಃ ಯಾವಾಗಲೂ ಪ್ರತ್ಯೇಕಗೊಂಡಿರುತ್ತದೆ. ಸಾಮಾನ್ಯವಾಗಿ, ಕಾರ್ಮಿಕರು ಶಿಲೆಯ ತುಣುಕುಗಳನ್ನು ಕೈಯಿಂದಲೇ ತೆಗೆದು ಉತ್ಪನ್ನವನ್ನು ಪರಿಶೀಲಿಸುವುದರ ಮೂಲಕ ಅದನ್ನು ಪ್ರತ್ಯೇಕಿಸುವರು. ವಿಶ್ವದಲ್ಲಿ ಕಣ-ರೂಪದ ಗ್ರ್ಯಾಫೈಟ್ ಉತ್ಪಾದನೆಲ್ಲಿ ಬಹಳಷ್ಟನ್ನು ಅಗತ್ಯವಿದ್ದಲ್ಲಿ ಜಜ್ಜಿ ಪುಡಿ ಮಾಡಿ, ಪ್ಲವನ ಪ್ರಕ್ರಿಯೆ ಮೂಲಕ ಪ್ರತ್ಯೇಕಗೊಳಿಸಲಾಗುತ್ತದೆ. ಪ್ಲವನ ಪ್ರಕ್ರಿಯೆಯ ಮೂಲಕ ಗ್ರ್ಯಾಫೈಟ್ ಸಂಸ್ಕರಿಸುವುದರಲ್ಲಿ ಒಂದು ದೊಡ್ಡ ಸಮಸ್ಯೆಯಿದೆ: ಗ್ರ್ಯಾಫೈಟ್ ಬಹಳ ಮೃದುವಾಗಿದ್ದು, ಅದಿರು ಕಸದ ಕಣವನ್ನೂ ಲೇಪಿಸುತ್ತದೆ. ಇದರಿಂದಾಗಿ, ಗುರುತಾದ ಅದಿರು ಕಸವೂ ಸಹ ಗ್ರ್ಯಾಫೈಟ್ನೊಂದಿಗೆ ರವಾನೆಯಾಗಿ, ಬಹಳ ಅಶುದ್ಧ ಸಾರೀಕರಣವು ದೊರೆಯುತ್ತದೆ. ಮಾರಲು ಯೋಗ್ಯವಾದ ಸಾರೀಕೃತ ಉತ್ಪನ್ನವನ್ನು ಪಡೆಯಲು ಎರಡು ರೀತಿಗಳಿವೆ: (ಸುಮಾರು ಏಳು ಬಾರಿ) ಪುನಃ ಪುಡಿ ಮಾಡಿ ಪ್ಲವನ ವಿಂಗಡಣೆ ಮಾಡಲಾಗುತ್ತದೆ. ಇದರ ಮೂಲಕ ಇನ್ನಷ್ಟು ಶುದ್ಧ ಸಾರೀಕೃತ ಉತ್ಪನ್ನ ಪಡೆಯಬಹುದು. ಅಥವಾ, ಸಿಲಿಕೇಟ್ ಅದಿರು ಕಸಕ್ಕಾಗಿ ಹೈಡ್ರೊಫ್ಲುವೊರಿಕ್ ಆಮ್ಲದೊಂದಿಗೆ, ಹಾಗೂ ಕಾರ್ಬೊನಟ್ ಅದಿರು ಕಸಕ್ಕಾಗಿ ಹೈಡ್ರೊಕ್ಲೊರೊಕ್ ಆಮ್ಲದೊಂದಿಗೆ ದ್ರವೀಕರಿಸಬಹುದು.
ಪುಡಿಯಾಗಿಸುವ ಪ್ರಕ್ರಿಯೆಯಲ್ಲಿ, ಒಳಬರುವ ಗ್ರ್ಯಾಫೈಟ್ ಉತ್ಪನ್ನಗಳು ಮತ್ತು ಸಾರೀಕೃತ ವಸ್ತುಗಳನ್ನು ಪುಡಿ ಮಾಡಿ ವಿಂಗಡಿಸಲಾಗುವುದು. ಒರಟಾಗಿರುವ ಕಣಗಳನ್ನು (8 ಮೆಷ್ಗಿಂತಲೂ ಕಡಿಮೆ, 8–20 ಮೆಷ್, 20–50 ಮೆಷ್) ನಾಜೂಕಾಗಿ ಸಂರಕ್ಷಿಸಲಾಗುವುದು. ನಂತರ ಇಂಗಾಲದ ಅಂಶವನ್ನು ನಿರ್ಣಯಿಸಲಾಗುವುದು. ನಂತರ, ಕೆಲವು ಪ್ರಮಾಣಿತ ಮಿಶ್ರಣಗಳನ್ನು ವಿವಿಧ ಅಂಶಗಳಿಂದ ತಯಾರಿಸಬಹುದು. ಪ್ರತಿಯೊಂದೂ ಸಹ ನಿರ್ದಿಷ್ಟ ಕಣದ ಗಾತ್ರ, ವಿತರಣೆ ಹಾಗೂ ಇಂಗಾಲ ಅಂಶ ಹೊಂದಿರುತ್ತವೆ. ಗ್ರಾಹಕರ ಕೋರಿಕೆಯ ಮೇರೆಗೆ ಕಣಗಳ ಗಾತ್ರ ವಿತರಣೆ ಮತ್ತು ಇಂಗಾಲ ಅಂಶವನ್ನು ಒಳಗೊಂಡು ಮಿಶ್ರಣಗಳನ್ನು ತಯಾರಿಸಬಹುದು. ಕಣಗಳ ಗಾತ್ರವು ಅಷ್ಟು ಮುಖ್ಯವಾಗಿರದಿದ್ದಲ್ಲಿ, ಸಾರೀಕೃತ ಉತ್ಪನ್ನವನ್ನು ಇನ್ನಷ್ಟು ಉದಾರವಾಗಿ ಪುಡಿ ಮಾಡಬಹುದು. ಅಂತಿಮ ಹಂತದ ಉತ್ಪನ್ನಗಳ ಪೈಕಿ, ತೈಲ ಪರಿಶೋಧನೆ; ಝಿರ್ಕೊನಿಯಮ್ ಸಿಲಿಕೇಟ್, ಎರಕಾಗಾರ ಅಚ್ಚುಗಳಿಗಾಗಿ ಸೋಡಿಯಮ್ ಸಿಲಿಕೇಟ್ ಹಾಗೂ ಐಸೊಪ್ರೊಪೈಲ್ ಆಲ್ಕೊಹಾಲ್ ಲೇಪನಗಳು; ಉಕ್ಕು ಕೈಗಾರಿಕೆಯಲ್ಲಿ ಇಂಗಾಲ ವರ್ಧಕಗಳಲ್ಲಿ (ಸಂಶ್ಲೇಷಿತ ಗ್ರ್ಯಾಫಿಕ್ ಪುಡಿ ಹಾಗೂ ಪುಡಿಗೊಳಿಸಲಾದ ಪೆಟ್ರೊಲಿಯಮ್ ಕೋಕ್ ಸಹ ಇಂಗಾಲ ವರ್ಧಕಗಳನ್ನಾಗಿ ಬಳಸಬಹುದಾಗಿದೆ) ಸಣ್ಣ ಪುಡಿಯನ್ನು ತಿಳಿ ಕೆಸರಿನ ರೂಪದಲ್ಲಿ ಬಳಸಬಹುದಾಗಿದೆ. ಒರಟಾದ ಗ್ರ್ಯಾಫೈಟ್ನ್ನು ಮಾದರಿಯಾಗಿ ವರ್ಗೀಕರಿಸಿ, ಪುಡಿಗೊಳಿಸಿ, ಗ್ರ್ಯಾಫೈಟ್ ಗಿರಣಿಯಲ್ಲಿ ಒಟ್ಟುಸೇರಿಸಲಾಗುತ್ತದೆ. ಆಗಾಗ್ಗೆ, ಗಿರಣಿಯಲ್ಲಿ ಬಹಳಷ್ಟು ಸಂಕೀರ್ಣ ಸೂತ್ರೀಕರಣಗಳನ್ನು ಸಹ ಮಿಶ್ರಿಸಿ ಒಟ್ಟುಸೇರಿಸಲಾಗುತ್ತದೆ. ಗ್ರ್ಯಾಫೈಟ್ ಗಿರಣಿಗಳಿಂದ ಪರಿಸರೀಯ ಪ್ರಭಾವಗಳ ಪೈಕಿ, ಕಾರ್ಮಿಕರು ಗ್ರ್ಯಾಫೈಟ್ ಕಣಗಳಿಗೆ ಈಡಾಗುವುದು ಸೇರಿದಂತೆ ವಾಯು ಮಾಲಿನ್ಯ, ಪುಡಿ ಚೆಲ್ಲಿ ಮಣ್ಣು ಕಲುಷಿತಗೊಳ್ಳುವಿಕೆ ಮತ್ತು ಭಾರೀ ಲೋಹಗಳಿಂದಾಗಿ ಮಣ್ಣಿನ ಕಲುಷಿತಗೊಳಿಸುವಿಕೆ ಉಂಟಾಗುವುದು. ತಯಾರಿಕೆ ಹಂತಗಳಲ್ಲಿ ಕಾರ್ಮಿಕರು ಸಾಮಾನ್ಯವಾಗಿ ಧೂಳು ನಿರೋಧಕ ಮುಖವಾಡಗಳನ್ನು ಧರಿಸುವರು. ಇದರಿಂದಾಗಿ ಗಾಳಿಯಲ್ಲಿ ತೇಲಾಡುವ ಅತಿ ಸಣ್ಣ ಗ್ರ್ಯಾಫೈಟ್ ಮತ್ತು ಝಿರ್ಕಾನ್ ಸಿಲಿಕೇಟ್ ಕಣಗಳಿಂದ ಅವರು ರಕ್ಷಿಸಿಕೊಳ್ಳಬಹುದು.
ಸಂಶ್ಲೇಷಿತ ಗ್ರ್ಯಾಫೈಟ್ ವಿದ್ಯುದ್ವಾರಗಳು ತಯಾರಿಕೆಯಾಗಿ ತುಂಡುಗಳು ಕತ್ತರಿಸಿಹೋದಲ್ಲಿ, ಅಥವಾ ಲೇತ್ ಯಂತ್ರದಲ್ಲಿ ಬಳಸಿ ಉದುರಿಹೋದ ಕಣಗಳು, ಅಥವಾ ವಿದ್ಯುದ್ವಾರಗಳು ಅಥವಾ ಇತರೆ ಗ್ರ್ಯಾಫೈಟ್ ಉತ್ಪನ್ನಗಳು ತನ್ನ ಹಿಡಿಕೆ (ಹೋಲ್ಡರ್) ತನಕ ಬಳಕೆಯಾದಾಗ, ಗ್ರ್ಯಾಫೈಟ್ ಪುನರ್ಬಳಕೆಯಾಗುವುದು. ಹಳೆಯ ವಿದ್ಯುದ್ವಾರಗಳ ಸ್ಥಾನದಲ್ಲಿ ಹೊಸದನ್ನು ಬಳಸಬಹುದು, ಆದರೆ ಹಳೆಯದಾದ ಗಮನಾರ್ಹ ತುಂಡು ಅಲ್ಲಿಯೇ ಉಳಿದುಕೊಳ್ಳುತ್ತದೆ. ಇನ್ನು ಪುಡಿ ಮಾಡಿ ಲೇಪನ ಮಾಡಿದ ನಂತರ, ಲಭಿಸುವ ಗ್ರ್ಯಾಫೈಟ್ ಪುಡಿಯನ್ನು ಬಹುಶಃ ಕರಗಿದ ಉಕ್ಕಿನಲ್ಲಿ ಇಂಗಾಲ ಅಂಶವನ್ನು ವರ್ಧಿಸಲು ಬಳಸಲಾಗುವುದು. ಗ್ರ್ಯಾಫೈಟ್ ಅಂಶಗಳುಳ್ಳ ಅಗಡು ವಸ್ತುಗಳೂ ಸಹ ಕೆಲವೊಮ್ಮೆ ಪುನರ್ಬಳಕೆಯಾಗುತ್ತವೆ. ಆದರೆ ಅವುಗಳ ಗ್ರ್ಯಾಫೈಟ್ ಅಂಶದಿಂದಾಗಿ ಅಲ್ಲ: ಇಂಗಾಲ-ಮ್ಯಾಗ್ನೆಸೈಟ್ ಇಟ್ಟಿಗೆಗಳಂತಹ ಅತಿ ದೊಡ್ಡ ಪ್ರಮಾಣದ ವಸ್ತುಗಳಲ್ಲಿ ಕೇವಲ 15-25%ರಷ್ಟು ಗ್ರ್ಯಾಫೈಟ್ ಅಂಶ ಹೊಂದಿದ್ದು, ತೀರಾ ಕಡಿಮೆ ಗ್ರ್ಯಾಫೈಟ್ ಅಂಶ ಹೊಂದಿರುತ್ತದೆ. ಆದರೂ, ಪುನರ್ಬಳಕೆಯಾದ ಕೆಲವು ಇಂಗಾಲ-ಮ್ಯಾಗ್ನೆಸೈಟ್ ಇಟ್ಟಿಗೆಗಳನ್ನು ಕುಲುಮೆ ದುರಸ್ತಿ ವಸ್ತುಗಳಲ್ಲಿ ಬಳಸಲಾಗುತ್ತವೆ, ಜೊತೆಗೆ ಪುಡಿಯಾದ ಇಂಗಾಲ-ಮ್ಯಾಗ್ನೆಸೈಟ್ ಇಟ್ಟಿಗೆಯನ್ನು ಕಿಟ್ಟ ಸುಧಾರಕಗಳಲ್ಲಿ ಬಳಸಲಾಗುತ್ತದೆ. ಮೂಸೆಗಳಲ್ಲಿ ಹೆಚ್ಚು ಗ್ರ್ಯಾಫೈಟ್ ಅಂಶವಿದ್ದರೆ, ಅವುಗಳ ಬಳಕೆ ಹಾಗೂ ಪುನರ್ಬಳಕೆಯ ಪ್ರಮಾಣ ಬಹಳ ಕಡಿಮೆ.
ನೈಸರ್ಗಿಕ ಗ್ರ್ಯಾಫೈಟ್ ಕಣವನ್ನು ಹೋಲುವ ಉತ್ತಮ ಗುಣಮಟ್ಟದ ಗ್ರ್ಯಾಫೈಟ್ ಕಣ ಉತ್ಪನ್ನವನ್ನು ಉಕ್ಕು ತಯಾರಿಸುವ ಕೀಷ್ನಿಂದ ತಯಾರಿಸಬಹುದು. ಕೀಷ್ ಎಂಬುದು (ಅಧಿಕ ಪರ್ಯಾಪ್ತಿತ ಕಬ್ಬಿಣದಿಂದ ಘನರೂಪದಲ್ಲಿ ಇಳಿಸಲಾದ) ಗ್ರ್ಯಾಫೈಟ್, ಹೆಚ್ಚು ಸುಣ್ಣ ಅಂಶವಿದ್ದ ಕಿಟ್ಟ ಹಾಗು ಕೆಲ ಕಬ್ಬಿಣದ ಮಿಶ್ರಣವಾಗಿದೆ. ಇದು ಕರಗಿದ ರೂಪದಲ್ಲಿರುವ ತ್ಯಾಜ್ಯ. ಸಾಮಾನ್ಯ ಆಮ್ಲಜನಕ ಕುಲುಮೆಗೆ ಕರಗಿದ ಕಬ್ಬಿಣ ಒಳಪ್ರವಾಹದಿಂದ ಇದನ್ನು ತೆಗೆಯಲಾಗಿದೆ. ಕಬ್ಬಿಣವು ಅಲ್ಲಿಯೇ ಪುನರ್ಬಳಕೆಯಾಗುತ್ತದೆ. ಹಾಗಾಗಿ, ಉಳಿದುಕೊಳ್ಳುವುದು ಕೇವಲ ಗ್ರ್ಯಾಫೈಟ್ ಹಾಗೂ ಕಿಟ್ಟ. ಜಲಚಾಲಿತ ವಿಂಗಡನೆಯನ್ನು ಬಳಸುವ ಪುನರ್ಪ್ರಾಪ್ತಿ ಪ್ರಕ್ರಿಯೆಯೇ ಅತ್ಯುತ್ತಮ ಪ್ರಕ್ರಿಯೆಯಾಗಿದೆ (ಇದು ನಿರ್ದಿಷ್ಟ ಗುರುತ್ವದ ಪ್ರಕಾರ ಖನಿಜಗಳನ್ನು ಪ್ರತ್ಯೇಕಿಸಲು ನೀರಿನ ಹರಿವನ್ನು ಬಳಸುತ್ತದೆ: ಗ್ರ್ಯಾಫೈಟ್ ತೂಕ ಅತಿ ಕಡಿಮೆಯಿದ್ದದ್ದು, ಕೊನೆಯಲ್ಲಿ ಕೂಡುತ್ತದೆ). ಇದರಿಂದಾಗಿ ಗ್ರ್ಯಾಫೈಟ್ನ 70%ರಷ್ಟು ಕಚ್ಚಾ ಸಾರೀಕೃತ ಉತ್ಪನ್ನ ಲಭಿಸುತ್ತದೆ. ಹೈಡ್ರೊಕ್ಲೊರಿಕ್ ಆಮ್ಲದ ಮೂಲಕ ಈ ಸಾರೀಕೃತ ಉತ್ಪನ್ನವು ತೊಟ್ಟಿಕ್ಕಿಸುವಿಕೆಯ ಮೂಲಕ 95%ರಷ್ಟು ಗ್ರ್ಯಾಫೈಟ್ ಉತ್ಪನ್ನ ನೀಡುತ್ತದೆ. ಇದರ ಕಣಗಳ ಗಾತ್ರವು 10 ಮೆಷ್ ಹಾಗೂ ಅಲ್ಲಿಂದ ಕಡಿಮೆ ಗಾತ್ರದ ವರೆಗೂ ಇರುತ್ತದೆ.
Image:graphite stereo animation.gif - ಸುತ್ತುವ ಗ್ರ್ಯಾಫೈಟ್ ಸ್ಟೀರಿಯಗ್ರಾಮ್
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.