From Wikipedia, the free encyclopedia
ಈಥೇನ್ ಪರ್ಯಾಪ್ತ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್ನುಗಳಾದ ಪ್ಯಾರಾಫಿನ್ ಅಥವಾ ಆಲ್ಕೇನ್ ವರ್ಗಕ್ಕೆ ಸೇರಿದ ಸಂಯುಕ್ತ. ರಚನಾ ಸೂತ್ರ C2H6.[೧]
ನೈಸರ್ಗಿಕ ಅನಿಲದಲ್ಲಿ ೫% - ೨೦% ಈಥೇನಿರುತ್ತದೆ. ಮೀಥೇನ್ ತಯಾರಿಸಲು ನಾವು ಬಳಸುವ ಸಾರ್ವತ್ರಿಕ ವಿಧಾನಗಳು ಇದಕ್ಕೂ ಅನ್ವಯಿಸುತ್ತವೆ. ಸೋಡಿಯಂ ಪ್ರೊಪಿಯೊನೇಟನ್ನು ಸೋಡಾ ಸುಣ್ಣದೊಡನೆ ಕಾಯಿಸಿ ಈಥೇನ್ ಪಡೆಯಬಹುದು.
ಈಥೈಲ್ ಆಲ್ಕೊಹಾಲಿನ ಸಮ್ಮುಖದಲ್ಲಿ ಸತು-ತಾಮ್ರದ ಜೋಡಿಯಿಂದ ಈಥೈಲ್ ಅಯೋಡೈಡನ್ನು ಅಪಕರ್ಷಿಸಿದಾಗ ಪರಿಶುದ್ಧ ಈಥೇನ್ ದೊರೆಯುವುದು.
CH3.CH2.I + 2[H] → CH3-CH3 + HI
ಶುಷ್ಕ ಈಥರ್ ದ್ರಾವಣದಲ್ಲಿ ಮೀಥೈಲ್ ಅಯೋಡೈಡ್ ಮತ್ತು ಶುದ್ಧ ಸೋಡಿಯಂ ಲೋಹ ಪರಸ್ಪರ ವರ್ತಿಸಿದಾಗ ಈಥೇನ್ ಹುಟ್ಟುವುದು.
ವುರ್ಟ್ಸ್ ಎಂಬ ಫ್ರೆಂಚ್ ರಸಾಯನ ವಿಜ್ಞಾನಿ ೧೮೫೫ರಲ್ಲಿ ಈ ಕ್ರಿಯಾ ವಿಧಾನವನ್ನು ಕಂಡುಹಿಡಿದ. ಆದ್ದರಿಂದ ಇದಕ್ಕೆ ವುರ್ಟ್ಸ್ ಸಂಯೋಜನೆ ಎಂದು ಹೆಸರಾಗಿದೆ.
ಸೋಡಿಯಂ ಅಸಿಟೇಟಿನ ಪ್ರಬಲ ನೀರಿನ ದ್ರಾವಣವನ್ನು ಪ್ಲ್ಯಾಟಿನಂ ಧನಧ್ರುವದ ನೆರವಿನಿಂದ ವಿದ್ಯುದ್ವಿಭಜನೆ ಮಾಡಿದಾಗ ಈಥೇನ್ ಮತ್ತು ಇಂಗಾಲದ ಡೈಆಕ್ಸೈಡುಗಳು ಧನುಧ್ರುವದಲ್ಲೂ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೊಜನ್ ಋಣ ಧ್ರುವದಲ್ಲೂ ಬಿಡುಗಡೆಯಾಗುವುವು.
2CH3COONa + 2H2O → CH3CH3 + 2NaOH+ 2CO2 + H2
೧೮೪೮ರಲ್ಲಿ ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಎ.ಡಬ್ಲು.ಎಚ್.ಕೋಲ್ಬೆ ಈ ಕ್ರಿಯಾ ವಿಧಾನವನ್ನು ಶೋಧಿಸಿದುದರಿಂದ ಇದಕ್ಕೆ ಕೋಲ್ಬೆ ಸಂಯೋಜನೆ ಎಂಬ ಹೆಸರು ಬಂದಿದೆ.
ಎಥಿಲೀನ್ ಮತ್ತು ಹೈಡ್ರೋಜನ್ನುಗಳ ಮಿಶ್ರಣವನ್ನು ಉನ್ನತ ಉಷ್ಣತೆಯಲ್ಲಿ ಸೂಕ್ಷ್ಮಕಣಗಳ ರೂಪದಲ್ಲಿರುವ ನಿಕ್ಕಲ್ ವೇಗವರ್ಧಕದ ಮೇಲೆ ಹಾಯಿಸಿಯೂ ಈಥೇನ್ ತಯಾರಿಸಬಹುದು.
CH2=CH2 + H2 → CH3-CH3
ಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಈಥೇನ್ ಮೀಥೇನನ್ನು ಹೋಲುವುದು. ಇದು ಬಣ್ಣ ವಾಸನೆಗಳಿಲ್ಲದ ಅನಿಲ. ೪೦ ಸೆಂ.ಗ್ರೇ. ಉಷ್ಣತೆ ಮತ್ತು ೪೬ ವಾಯುಭಾರ ಒತ್ತಡದಲ್ಲಿ ದ್ರವರೂಪ ತಳೆಯುವುದು (ಕುದಿಯುವ ಬಿಂದು -೮೮.೬ ಸೆಂ.ಗ್ರೇ.) ನೀರಿನಲ್ಲಿ ಅದ್ರಾವ್ಯವಾದರೂ ಆಲ್ಕೊಹಾಲಿನಲ್ಲಿ ಲೀನವಾಗುವುದು. ರಾಸಾಯನಿಕವಾಗಿ ಮೀಥೇನಿನಂತೆಯೇ ಜಡವಾದ ಅನಿಲ. ಕ್ಲೋರಿನ್ನಿನೊಡನೆ ವರ್ತಿಸಿದಾಗ ಈಥೇನಿನ ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣುಗಳು ಕ್ರಮೇಣ ಪಲ್ಲಟಿತವಾಗುವುವು.
C2H6 + Cl2 → C2H5Cl + HCl (ethane) (chloroethane) C2H5Cl + Cl2 → C2H4Cl2 + HCl (chloroethane) (dichloroethane) C2H4Cl2 + Cl2 → C2H3Cl3 + HCl (dichloroethane) (trichloroethane) C2H3Cl3 + Cl2 → C2H2Cl4 + HCl (trichloroethane) (tetrachloroethane) C2H2Cl4 + Cl2 → C2HCl5 + HCl (tetrachloroethane) (pentachloroethane) C2HCl5 + Cl2 → C2Cl6 + HCl (pentachloroethane) (hexachloroethane)
ಸುಮಾರು ೮೦೦o ಸೆಂ.ಗ್ರೇ. ಉಷ್ಣತೆಯಲ್ಲಿ ಹೈಡ್ರೊಜನನ್ನು ಕಳೆದುಕೊಂಡು ಎಥಿಲೀನ್ ಆಗುವುದು. ನೈಸರ್ಗಿಕ ಅನಿಲದಲ್ಲಿರುವ ಈಥೇನ್ ಮತ್ತು ಪ್ರೋಪೇನ್ ಭಾಗವನ್ನು ಹೀಗೆ ಲಾಭದಾಯಕವಾಗಿ ಎಥಿಲೀನಿಗೆ ಪರಿವರ್ತಿಸುವರು. ಶೈತ್ಯಕಾರಕ ಯಂತ್ರಗಳಲ್ಲಿ ಈಥೇನನ್ನು ಸಹ ಉಪಯೋಗಿಸುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.