ವಾಯುಭಾರಮಾಪಕ
From Wikipedia, the free encyclopedia
ವಾಯುಭಾರಮಾಪಕವು ಭೂಮಿಯನ್ನು ಆವರಿಸಿರುವ ವಾಯುಮಂಡಲ (ಅಟ್ಮಾಸ್ಫಿಯರ್) ಪ್ರಯುಕ್ತಿಸುವ ಸಂಮರ್ದವನ್ನು (ಪ್ರೆಷರ್) ಅಳೆಯುವ ನಿರಪೇಕ್ಷ ಮಾಪಕ (ಬ್ಯಾರೊಮೀಟರ್).[1][2] ವಾಯುವಿಗೆ ತೂಕ (ವೇಟ್) ಇರುವುದರಿಂದ ಈ ಸಂಮರ್ದ ಉದ್ಭವಿಸುತ್ತದೆ, ಇದನ್ನು ಮೊತ್ತಮೊದಲು ಪ್ರಾಯೋಗಿಕವಾಗಿ ಸ್ಥಿರೀಕರಿಸಿದಾತ (1643) ಇಟಲಿಯ ಭೌತವಿಜ್ಞಾನಿ ಇವ್ಯಾಂಜಲಿಸ್ಟ್ ಟೋರಿಚೆಲ್ಲಿ (1608-47).[3][4] ಜರ್ಮನಿಯ ಭೌತವಿಜ್ಞಾನಿ ಆಟೋ ಫಾನ್ ಗ್ಯುರೆಕ್ (1602-86) ಕೂಡ ಈ ಬಗ್ಗೆ ಪ್ರಯೋಗಗಳನ್ನು ನಡೆಸಿ (1650) ಟೋರಿಚೆಲ್ಲಿಯ ಅಭಿಪ್ರಾಯವನ್ನು ಪುಷ್ಟೀಕರಿಸಿದ. ಟೋರಿಚೆಲ್ಲಿ ಬಳಸಿದ ನಳಿಕೆಗೆ ಟೋರಿಚೆಲ್ಲಿ ನಳಿಕೆ ಎಂಬ ಹೆಸರೇ ಇದೆ.