From Wikipedia, the free encyclopedia
ಝೂಲಾಜಿಕಲ್ ಗಾರ್ಡನ್, ಝೂಲಾಜಿಕಲ್ ಪಾರ್ಕ್, ಪ್ರಾಣಿಸಂಗ್ರಹಾಲಯ, ಅಥವಾ ಮೃಗಾಲಯ ಎಂದರೆ ಆವರಣದೊಳಗಡೆಯ ಎಲ್ಲೆಯಲ್ಲಿಯೇ ಪ್ರಾಣಿಗಳಿಗೆ ಅವಕಾಶನೀಡುವ, ಪ್ರಾಣಿಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವಂತಹ ಮತ್ತು ಆ ಪ್ರಾಣಿಗಳಿಗೆ ಅಲ್ಲಿಯೇ ಆಹಾರ ಒದಗಿಸುವಂತಹ ಸ್ಥಳವಾಗಿದೆ. ಸ್ತನಿಗಳಿಗೆ, ಹುಲಿಗಳಿಗೆ, ಪಕ್ಷಿ, ಉರಗ, ಮೀನು ಮುಂತಾದವುಗಳಿಗೆಂದೇ ಪ್ರತ್ಯೇಕವಾದ ಸಂಗ್ರಹಾಲಯಗಳೂ ಇವೆ. ಇವುಗಳನ್ನು ಸರ್ಪೋದ್ಯಾನ, ಉರಗೋದ್ಯಾನ, ಮತ್ಸ್ಯಾಗಾರ, ಪಕ್ಷಿಧಾಮ ಎಂದು ಆಯಾ ಗುಂಪಿಗೆ ಸಂಬಂಧಿಸಿದಂತೆ ಹೆಸರು ನೀಡಲಾಗುತ್ತದೆ.
ಝೂಲಾಜಿಕಲ್ ಗಾರ್ಡನ್ ಎನ್ನುವ ಪದವು ಝುವಾಲಜಿಯನ್ನು ನಿರ್ದೇಶಿಸುತ್ತದೆ (ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸುವ ವಿಜ್ಞಾನ). “ಜ಼ೂ” ಎಂಬ ಸಂಕ್ಷಿಪ್ತ ರೂಪವನ್ನು ಮೊತ್ತಮೊದಲಿಗೆ ಲಂಡನ್ ಝೂಲಾಜಿಕಲ್ ಗಾರ್ಡನ್ಸ್ಗೆ ಬಳಸಲಾಯಿತು. ಇದು 1828 ರಲ್ಲಿ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿತಲ್ಲದೇ, ಸಾರ್ವಜನಿಕವಾಗಿ 1828ರಲ್ಲಿ ತೆರೆಯಿತು.[1] ವಿಶ್ವದಾದ್ಯಂತ 1000 ಕ್ಕಿಂತಲೂ ಅಧಿಕ ಸಂಖ್ಯೆಯ ಪ್ರಾಣಿಸಂಗ್ರಹಾಲಯಗಳು ಸಾರ್ವಜನಿಕರಿಗಾಗಿ ತೆರೆದಿವೆ. ಇವುಗಳಲ್ಲಿ ಶೇಕಡಾ 80 ರಷ್ಟು ನಗರಗಳಲ್ಲಿವೆ.[2]
1828ರಲ್ಲಿ ಪ್ರಾರಂಭವಾದ ಲಂಡನ್ ಝೂ ಮೊದಲು ತನ್ನನ್ನು ತಾನು ಮೃಗಸಂಗ್ರಹ ಅಥವಾ “ಝೂಲಾಜಿಕಲ್ ಗಾರ್ಡನ್” ಎಂದು ಕರೆದುಕೊಂಡಿತು. ಇದು “ಗಾರ್ಡನ್ಸ್ ಅಂಡ್ ಮನಾಜರೀ ಆಫ್ ದ ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್” ಎಂಬುದರ ಸಂಕ್ಷಿಪ್ತರೂಪವಾಗಿತ್ತು.[3] “ಝೂ” ಎಂಬ ಸಂಕ್ಷಿಪ್ತರೂಪವನ್ನು ಮೊದಲಿಗೆ 1847ರ ಸುಮಾರಿನಲ್ಲಿ ಯುಕೆಯ ಕ್ಲಿಫ್ಟನ್ ಮೃಗಾಲಯಕ್ಕೆ ಬಳಸಲಾಯಿತು ಮತ್ತು ಪ್ರಥಮ ಬಾರಿಗೆ ಮುದ್ರಣದಲ್ಲಿ ಕಾಣಿಸಿಕೊಂಡಿತು. ಆದರೆ, ಸುಮಾರು ಇಪ್ಪತ್ತು ವರ್ಷಗಳ ನಂತರವಷ್ಟೇ ಈ ಸಂಕ್ಷಿಪ್ತ ರೂಪವು ಆಲ್ಫ್ರೆಡ್ ವ್ಯಾನ್ಸ್ ಎಂಬ ಸಂಗೀತ ಕಲಾಕಾರನ “ವಾಕಿಂಗ್ ಇನ್ ದ ಝೂ ಆನ್ ಸಂಡೇ” ಎಂಬ ಪದ್ಯದಲ್ಲಿ ಜನಪ್ರಿಯಗೊಂಡಿತು.[3] “ಝೂಲಾಜಿಕಲ್ ಪಾರ್ಕ್” ಎಂಬ ಪದವನ್ನು 1891ರಲ್ಲಿ ತೆರೆದ ವಾಷಿಂಗ್ಟನ್ ಡಿ.ಸಿ. ಮತ್ತು 1899ರಲ್ಲಿ ತೆರೆದ ನ್ಯೂಯಾರ್ಕ್ನ ಬ್ರಾಂಕ್ಸ್ನಲ್ಲಿನ ಹೆಚ್ಚು ವಿಸ್ತೃತ ಸೌಕರ್ಯಗಳಿಗೆ ಬಳಸಲಾಯಿತು.[4]
ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಮೃಗಾಲಯಕ್ಕೆ ಸಂಬಂಧಿಸಿದಂತೆ “ಕನ್ಸರ್ವೇಷನ್ ಪಾರ್ಕ್” ಅಥವಾ “ಬಯೋಪಾರ್ಕ್” ಗಳೆಂಬ ಹೊಸ ಪದಗಳು ಸೇರ್ಪಡೆಗೊಂಡವು. ಹೊಸ ಹೆಸರನ್ನು ಅಳವಡಿಸಿಕೊಳ್ಳುವುದು ಅನೇಕ ಮೃಗಾಲಯ ವೃತ್ತಿಪರರು, ತಮ್ಮ ಸಂಸ್ಥೆಗಳನ್ನು ರೂಢ ಮಾದರಿಯ ಮತ್ತು ಇತ್ತೀಚಿನ ದಿನಗಳಲ್ಲಿ ಟೀಕಿಸಲಾಗುವ ಹತ್ತೊಂಬತ್ತನೇ ಶತಮಾನದ ಜ಼ೂ ಪರಿಕಲ್ಪನೆಯಿಂದ ದೂರವಿಡಲು, ಬಳಸುವ ಒಂದು ಕಾರ್ಯತಂತ್ರವಾಗಿದೆ.[5] “ಬಯೋಪಾರ್ಕ್” ಎಂಬ ಪದವನ್ನು ಮೊದಲಿಗೆ 1980ರ ದಶಕದ ಕೊನೆಯಲ್ಲಿ ವಾಷಿಂಗ್ಟನ್ನ ಡಿ.ಸಿ. ಯ ನ್ಯಾಷನಲ್ ಝೂ ಸೃಷ್ಟಿಸಿ ಅಭಿವೃದ್ಧಿಪಡಿಸಿತು.[6] 1993 ರಲ್ಲಿ ನ್ಯೂಯಾರ್ಕ್ ಝೂಲಾಜಿಕಲ್ ಸೊಸೈಟಿ ತನ್ನ ಹೆಸರನ್ನು ವೈಲ್ಡ್ಲೈಫ್ ಕನ್ಸರ್ವೇಷನ್ ಸೊಸೈಟಿ ಗೆ ಬದಲಿಸಿಕೊಂಡಿತು ಮತ್ತು ತನ್ನ ಅಧಿಕಾರ ವ್ಯಾಪ್ತಿಯಲ್ಲಿನ ಮೃಗಾಲಯಗಳನ್ನು “ವೈಲ್ಡ್ಲೈಫ್ ಕನ್ಸರ್ವೇಷನ್ ಪಾರ್ಕ್ಸ್" ಎಂಬುದಾಗಿ ರೀಬ್ರಾಂಡ್ ಮಾಡಿತು.[7]
ನಶಿಸಿಹೋಗುತ್ತಿರುವ ಹಲವು ಪ್ರಭೇದಗಳಿಗೆ ಮೃಗಾಲಯಗಳು ರಕ್ಷೆ ನೀಡುವ ಸ್ಥಾನಗಳಾಗಿವೆ. ವಿರಳವಾಗುತ್ತಿರುವ ಪ್ರಾಣಿಗಳನ್ನು ಮೃಗಾಲಯಗಳಲ್ಲಿಟ್ಟು ಅವುಗಳ ಸಂತತಿಯನ್ನು ಹೆಚ್ಚಿಸುವುದು ಮೃಗಾಲಯಗಳ ಉದ್ದೇಶಗಳಲ್ಲಿ ಒಂದು.
ಪ್ರಾಣಿಗಳ ಆಕಾರ, ದೇಹ ರಚನೆ, ಜೀವನಕ್ರಮ ವೈವಿಧ್ಯಮಯವಾದದ್ದು. ಅವುಗಳ ನಡತೆ, ಜೀವನಕ್ರಮ, ಉಪಯುಕ್ತತೆ ಮುಂತಾದವುಗಳ ಬಗೆಗೆ ಆಯಾ ಪ್ರಾಣಿಗಳ ನೈಸರ್ಗಿಕ ಪರಿಸರದಲ್ಲಿ ಅಧ್ಯಯನ ನಡೆಸುವುದು ಕಷ್ಟಸಾಧ್ಯ. ಪ್ರಾಣಿಗಳ ಬಗೆಗೆ ವಿವರವಾಗಿ ಅಧ್ಯಯನ ನಡೆಸಲು ಮೃಗಾಲಯಗಳು ಉಪಯುಕ್ತವಾಗಿವೆ. ಪ್ರಾಣಿಗಳ ವರ್ಗೀಕರಣ, ಅಂಗರಚನೆ, ನಡತೆ, ರೋಗವಿಜ್ಞಾನ ಇತ್ಯಾದಿ ಹಲವು ವಿಷಯಗಳನ್ನು ಕುರಿತು ಮೃಗಾಲಯಗಳಲ್ಲಿ ಆಳವಾದ ಅಧ್ಯಯನ ನಡೆಸಲಾಗಿದ್ದು ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಪ್ರಾಣಿಸಂಗ್ರಹಾಲಯಗಳು ಮಕ್ಕಳಿಗಂತೂ ಅತ್ಯಂತ ಪ್ರಿಯವಾದ ಸ್ಥಳಗಳು. ಪ್ರಾಣಿಜೀವನಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನವನ್ನು ಅವು ಮಕ್ಕಳಿಗೆ ನೀಡುತ್ತವೆ. ಅಷ್ಟೇ ಅಲ್ಲ ಎಲ್ಲ ವಯಸ್ಸಿನವರಿಗೂ ಭೂಮಿಯ ವಿವಿಧ ಭಾಗಗಳಲ್ಲಿ ವಾಸಿಸುವ ಪ್ರಾಣಿಗಳ ಬಗ್ಗೆ ಹಾಗೂ ಅವುಗಳ ಪರಿಸರದ ಬಗ್ಗೆ ಮೃಗಾಲಯಗಳು ತಿಳಿವಳಿಕೆ ನೀಡುತ್ತವೆ. ಇತ್ತೀಚೆಗೆ ಕೆಲವು ಪ್ರಾಣಿ ಸಂಗ್ರಹಾಲಯಗಳು ಸ್ವಯಂಸೇವಕರನ್ನು ನೇಮಿಸಿಕೊಂಡು ಜನರ ಸಾಮಾನ್ಯ ಜ್ಞಾನವರ್ಧನೆಗೆ ಸಹಾಯಮಾಡುತ್ತಿವೆ. ಹಲವು ಸಂಘ ಸಂಸ್ಥೆಗಳೂ ಮೃಗಾಲಯಗಳ ಈ ಉದ್ದೇಶವನ್ನು ನೆರವೇರಿಸಲು ಸಹಕರಿಸುತ್ತಿವೆ.
ಉಳಿವು-ಅಳಿವಿನ ನಿರಂತರ ಸಂಗ್ರಾಮದಲ್ಲಿ ಹೋರಾಡಲಾಗದೆ ನಶಿಸುತ್ತಿರುವ ಕೆಲವು ಪ್ರಭೇದಗಳಿಗಂತೂ ಮೃಗಾಲಯಗಳು ವಿಶ್ರಾಂತಿಧಾಮಗಳಾಗುತ್ತಿವೆ. ಇಂಥ ಪ್ರಾಣಿಗಳನ್ನು ಸಂಗ್ರಹಿಸಿ ಅವುಗಳಿಗೆ ಶೋಷಣೆಯಿಲ್ಲದ ಮುಕ್ತ ಪರಿಸರವನ್ನು ನಿರ್ಮಿಸಿ ಪ್ರಾಣಿಸಂಗ್ರಹಾಲಯಗಳಲ್ಲಿ ಅವುಗಳ ಸಂತಾನಾಭಿವೃದ್ಧಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಸಂಗ್ರಹಿಸಿದ ಎಲ್ಲ ಪ್ರಾಣಿಗಳೂ ಮೃಗಾಲಯದ ಕೃತಕ ವಾತಾವರಣದಲ್ಲಿ ಸಂತಾನಾಭಿವೃದ್ಧಿ ಮಾಡಲಾರವು ನಿಜ. ಆದರೆ ಕೆಲವು ಅಪರೂಪದ ಪ್ರಾಣಿಗಳು ಸಂತಾನಾಭಿವೃದ್ಧಿಯನ್ನು ನಿರಾತಂಕವಾಗಿ ಮಾಡಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಉದಾಹರಣೆಗೆ:1950ರಲ್ಲಿ ಹವಾಯಿಯ ಬಾತುಕೋಳಿಗಳ ಒಂದು ಜೊತೆಯನ್ನು ಇಂಗ್ಲೆಂಡಿನ ಕಾಡುಕೋಳಿ (ವೈಲ್ಡ್ ಫೌಲ್) ಟ್ರಸ್ಟ್ಗೆ ತರಲಾಯಿತು. ಅಲ್ಲಿ ಅವು ಮೊಟ್ಟೆಯಿಟ್ಟು ಕೇವಲ ಹತ್ತು ವರ್ಷಗಳಲ್ಲಿ ಅವುಗಳ ಸಂಖ್ಯೆ 12ಕ್ಕೆ ಏರಿತು. ಇನ್ನೊಂದು ಉದಾಹರಣೆಯೆಂದರೆ ಯುರೋಪಿನ ಕಾಡುಕೋಣ ಸಂತತಿ ನೈಸರ್ಗಿಕ ಪರಿಸರದಲ್ಲಿ 1925ರಲ್ಲಿ ನಾಶವಾಯಿತು. ಅದೃಷ್ಟವಶಾತ್ ಈ ಪಶುಗಳನ್ನು ಮೃಗಾಲಯಗಳಲ್ಲಿ ಸಾಕಲಾಗುತ್ತಿತ್ತು. ಅಂದು ಯುರೋಪಿನ ಮೃಗಾಲಯಗಳಲ್ಲಿ ಒಟ್ಟು 50 ಕಾಡು ಕೋಣಗಳಿದ್ದವು. ಮೃಗಾಲಯಗಳಲ್ಲಿ ಅವುಗಳ ಸಂತಾನಾಭಿವೃದ್ಧಿ ಕ್ರಿಯೆಯಿಂದ 1938ರಲ್ಲಿ ಅವುಗಳ ಸಂಖ್ಯೆ 97ಕ್ಕೇರಿತು. ಇಂದು 600ಕ್ಕೂ ಹೆಚ್ಚು ಕಾಡುಕೋಣಗಳು ಯುರೋಪಿನ ವಿವಿಧ ಮೃಗಾಲಯಗಳಲ್ಲಿವೆ.
ಕೆಲವು ಮೃಗಾಲಯಗಳು ವಿಶೇಷ ಉದ್ದೇಶಗಳನ್ನಿಟ್ಟುಕೊಂಡಿವೆ. ಉದಾಹರಣೆಗೆ ಲಂಡನ್ನಿನ ಪ್ರಾಣಿ ವಿಜ್ಞಾನ ಸಂಘ ತನ್ನದೇ ಆದ ಪ್ರಯೋಗಾಲಯ ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿಕೊಂಡಿದೆ. 1960ರಲ್ಲಿ ಈ ಸಂಘ ಅಂತಾರಾಷ್ಟ್ರೀಯ ಮೃಗಾಲಯಗಳನ್ನು ಕುರಿತ ಕೈಪಿಡಿಯೊಂದನ್ನು ಬಿಡುಗಡೆ ಮಾಡಿತು. ಈ ಪುಸ್ತಕದಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿರುವ ಮೃಗಾಲಯಗಳ ಬಗ್ಗೆ ಹಾಗೂ ಅವುಗಳ ಕಾರ್ಯಚಟುವಟಿಕೆಗಳ ಬಗೆಗೆ ಮಹತ್ತ್ವದ ದಾಖಲೆಗಳಿವೆ. ಇದೇ ಸಂಘವು ಪ್ರೊಸೀಡಿಂಗ್ಸ್ ಆಫ್ ಜ಼ೂವಾಲಾಜಿಕಲ್ ಸೊಸೈಟಿ ಆಫ್ ಲಂಡನ್ ಎಂಬ ಮಾಸಿಕವನ್ನು 1830 ರಿಂದಲೇ ಹೊರತರುತ್ತಿದೆ. ಪ್ರಾಣಿಗಳ ಬಗೆಗಿನ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು ಈ ಪತ್ರಿಕೆಯ ಉದ್ದೇಶ. ಇದೇ ರೀತಿ ಹಲವು ಮೃಗಾಲಯಗಳು ವೈವಿಧ್ಯಮಯ ಪ್ರಕಟಣೆಗಳನ್ನು ಹೊರತರುತ್ತಿವೆ. ಭಾರತದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಇಂಥದೇ ಉದ್ದೇಶಗಳನ್ನು ಇಟ್ಟುಕೊಂಡಿರುವ ಒಂದು ಸಂಸ್ಥೆ. ಈ ಸಂಸ್ಥೆಯ ಸಂಗ್ರಹಾಲಯದಲ್ಲಿ ಹೆಚ್ಚು ಕಡಿಮೆ ಭಾರತದ ಎಲ್ಲ ಬಗೆಯ ಪ್ರಾಣಿ ಪಕ್ಷಿಗಳ ದೇಹಗಳನ್ನು ರಕ್ಷಿಸಿ ಇಡಲಾಗಿದೆ. ಜರ್ನಲ್ ಆಫ್ ಬಾಂಬೆ ನ್ಯಾಚುರಲ್ ಹಿಸ್ಟರಿ ಎಂಬುದು ಸಂಸ್ಥೆಯ ನಿಯತಕಾಲಿಕ ಪ್ರಕಟಣೆ.
ಮೃಗಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಮಹತ್ತ್ವದ ದಾಖಲೆಗಳು ದೊರೆಯುತ್ತಿಲ್ಲವಾದ್ದರಿಂದ ಮೊದಲು ಪ್ರಾಣಿ ಸಂಗ್ರಹಾಲಯಗಳು ಎಲ್ಲಿ, ಯಾವಾಗ, ಪ್ರಾರಂಭವಾದವು ಎಂಬ ಮಾಹಿತಿ ದೊರೆಯುತ್ತಿಲ್ಲ. ಬಹುಶಃ ಪ್ರಾಣಿಗಳ ಸಾಕಣೆ ಅಸ್ತಿತ್ವಕ್ಕೆ ಬಂದಾಗಲೇ ಪ್ರಾಣಿಸಂಗ್ರಹಾಲಯಗಳ ಉದಯವಾಗಿರಬೇಕು. ಪ್ರಾಣಿಗಳ ಉಪಯುಕ್ತತೆ ಅಥವಾ ಮಾನವನ ಹವ್ಯಾಸ ಪ್ರಾಣಿಗಳ ಸಂಗ್ರಹಕ್ಕೆ ಕಾರಣವಾಗಿರಬೇಕು.
ಐತಿಹಾಸಿಕವಾಗಿ ಪರಿಶೀಲಿಸಿದಾಗ ಕ್ರಿ.ಪೂ.4500ರ ಸುಮಾರಿಗೆ ಪಾರಿವಾಳಗಳನ್ನು ಬಂಧನದಲ್ಲಿರಿಸುತ್ತಿದ್ದರೆಂದು ತಿಳಿದುಬರುತ್ತದೆ. ಕ್ರಿ.ಪೂ.2500ರ ಸಮಯಕ್ಕೆ ಆನೆಗಳನ್ನು ಹಿಡಿದು ಪಳಗಿಸಿ ಸಾಕಲಾಗುತ್ತಿತ್ತು. ಈಜಿಪ್ಟಿನ ಶಿಲಾಶಾಸನಗಳಲ್ಲಿ ಜಿಂಕೆ, ಕಾಡುಕುರಿಗಳ ಚಿತ್ರಗಳಿರುವುದನ್ನು ಕಾಣುತ್ತೇವೆ. ಝೂಲಾಜಿಕಲ್ ಗಾರ್ಡನ್ನ ಪೂರ್ವಿಕ ಮನಾಜರಿಯಾಗಿದ್ದು, ಅದು ಪುರಾತನ ಜಗತ್ತಿನಿಂದ ಆಧುನಿಕ ಕಾಲದವರೆಗೆ ದೀರ್ಘವಾದ ಚರಿತ್ರೆಯನ್ನು ಹೊಂದಿದೆ. ಅತೀ ಪುರಾತನ ಪ್ರಾಣಿ ಸಂಗ್ರಹವು 2009 ರಲ್ಲಿ ಈಜಿಪ್ಟ್ನ ಹೀರಾಕೊನ್ಪೊಲಿಸ್ ಎನ್ನುವಲ್ಲಿ ಉತ್ಖನನದ ಸಂದರ್ಭದಲ್ಲಿ ಬಹಿರಂಗಗೊಂಡಿತು, ಅದು ಕ್ರಿ. ಪೂ. 3500 ಸುಮಾರಿನ ಪ್ರಾಣಿ ಸಂಗ್ರಹ. ಇದು ನೀರುಕುದುರೆಗಳು, ಹಾರ್ಟೆಬೀಸ್ಟ್, ಆನೆಗಳು, ಬಬೂನ್ಗಳು ಮತ್ತು ಕಾಡುಬೆಕ್ಕುಗಳು ಸೇರಿದಂತೆ, ಅಸಾಮಾನ್ಯ ಪ್ರಾಣಿಗಳನ್ನು ಒಳಗೊಂಡಿತ್ತು.[8] ಕ್ರಿ. ಪೂ. ಎರಡನೇ ಶತಮಾನದಲ್ಲಿ (1150), ಚೀನಾದ ಸಾಮ್ರಾಜ್ಞಿ ಟಾಂಕಿಯು ಜಿಂಕೆಗಳ ಮನೆಯನ್ನು ಕಟ್ಟಿಸಿಕೊಂಡಿದ್ದಳು. ಝೌನ ರಾಜ ವೆನ್ ಲಿಂಗ್ ಯು (ಬುದ್ಧಿವಂತಿಕೆಯ ಉದ್ಯಾನ) ಎಂಬ ಹೆಸರಿನ 1,500 ಎಕರೆ ಮೃಗಾಲಯವನ್ನು ಇಟ್ಟುಕೊಂಡಿದ್ದನು. ಕ್ರಿ.ಪೂ.600ರ ಹೊತ್ತಿಗೆ ಅಸ್ಸೀರಿಯ ಹಾಗೂ ಬ್ಯಾಬಿಲೋನಿಯದ ದೊರೆಗಳು ಪ್ರಾಣಿ ಸಂಗ್ರಹಾಲಯಗಳನ್ನು ಸ್ಥಾಪಿಸಿದರು. ಪ್ರಾಣಿಗಳ ಸಂಗ್ರಹಕಾರರಲ್ಲಿ ಪ್ರಖ್ಯಾತರಾದ ಇತರರೆಂದರೆ, ಇಸ್ರೇಲ್ ಮತ್ತು ಜುಡಾಹ್ ರಾಜ್ಯದ ರಾಜ ಸೊಲೋಮನ್, ಅಸಿರಿಯಾದ ರಾಜ ಸೆಮಿರಾಮಿ ಹಾಗೂ ಅಶುರ್ಬನಿಪಾಲ್, ಮತ್ತು ಬ್ಯಾಬಿಲೋನಿಯಾದ ರಾಜ ನೆಬುಚಾಡ್ರೆಝಾರ್. ಕ್ರಿ. ಪೂ. ನಾಲ್ಕನೇ ಶತಮಾನದ ವೇಳೆಗೆ, ಬಹುತೇಕ ಗ್ರೀಕ್ ನಗರ ರಾಜ್ಯಗಳಲ್ಲಿ ಪ್ರಾಣಿ ಸಂಗ್ರಹಾಲಯಗಳಿದ್ದವು; ಮುಂದೆ ತತ್ತ್ವಜ್ಞಾನಿ ಅರಿಸ್ಟಾಟಲ್ ಅಧ್ಯಯನಕ್ಕಾಗಿ ಸಂಗ್ರಹಿಸಿದ ಎಲ್ಲ ಪ್ರಾಣಿಗಳನ್ನು ಇಟ್ಟುಕೊಂಡಿದ್ದ. ಆತನ ಸಂಗ್ರಹವೂ ಒಂದು ಪ್ರಾಣಿ ಸಂಗ್ರಹಾಲಯದಂತೆಯೇ ಇತ್ತು. ಅಲೆಕ್ಸಾಂಡರ್ ತನ್ನ ಸೇನಾ ದಂಡಯಾತ್ರೆಗಳ ಸಂದರ್ಭದಲ್ಲಿ ಕಂಡುಬಂದ ಎಲ್ಲ ಪ್ರಾಣಿಗಳನ್ನು ಗ್ರೀಸ್ ದೇಶಕ್ಕೆ ಕಳುಹಿಸಿದವರಲ್ಲಿ ಪ್ರಮುಖನಾಗಿದ್ದನು. ರೋಮನ್ ಸಾಮ್ರಾಟರು ಪ್ರಾಣಿಗಳ ಖಾಸಗಿ ಸಂಗ್ರಹಗಳನ್ನು ಅಧ್ಯಯನಕ್ಕಾಗಿ ಅಥವಾ ಅಖಾಡದಲ್ಲಿ ಬಳಸುವುದಕ್ಕಾಗಿ ಇಟ್ಟುಕೊಳ್ಳುತ್ತಿದ್ದರಾದರೂ ಅಖಾಡಕ್ಕಾಗಿ ಬಳಸುವುದು ತುಂಬಾ ಕುಖ್ಯಾತ ಅಭ್ಯಾಸವಾಗಿತ್ತು. 19ನೇ ಶತಮಾನದ ಚರಿತ್ರಕಾರ ಡಬ್ಲ್ಯೂ.ಇ.ಎಚ್. ಲೆಕೀ ಕ್ರಿ.ಪೂ. 366 ರಲ್ಲಿ ಮೊದಲು ಆಯೋಜಿತವಾದ ರೋಮನ್ ಕ್ರೀಡಾಕೂಟದ ಬಗ್ಗೆ ಹೀಗೆ ಬರೆದನು:
At one time, a bear and a bull, chained together, rolled in fierce combat across the sand ... Four hundred bears were killed in a single day under Caligula ... Under Nero, four hundred tigers fought with bulls and elephants. In a single day, at the dedication of the Colosseum by Titus, five thousand animals perished. Under Trajan ... lions, tigers, elephants, rhinoceroses, hippopotami, giraffes, bulls, stags, even crocodiles and serpents were employed to give novelty to the spectacle ...[9]
ಪುರಾತನ ಕಾಲದ ಈಜಿಪ್ಟ್ ಮತ್ತು ಏಷ್ಯದ ಮೃಗಾಲಯಗಳು ಮನರಂಜನೆಗಾಗಿ ರಚಿತವಾದಂಥವು. ಅರಿಸ್ಟಾಟಲನ ಕಾಲದ ಮೃಗಾಲಯಗಳು ಅಧ್ಯಯನಕ್ಕೆ ಮೀಸಲಾಗಿದ್ದವು. ರೋಮನ್ನರು ಮಾತ್ರ ಅಧ್ಯಯನಕ್ಕೆ ಹಾಗೂ ಮನರಂಜನೆಗೆ ಪ್ರತ್ಯೇಕ ಮೃಗಾಲಯಗಳನ್ನು ಸ್ಥಾಪಿಸಿದರು. ಮುಂದೆ ರೋಮನ್ನರ ಸಾರ್ವಭೌಮತ್ವ ಕೊನೆಗೊಂಡಂತೆ ಪ್ರಾಣಿಸಂಗ್ರಹಾಲಯಗಳ ಸಂಖ್ಯೆ ಇಳಿಯಿತು.
ಇಂಗ್ಲೆಂಡ್ನ ಹೆನ್ರಿ I ವುಡ್ಸ್ಟಾಕ್ನಲ್ಲಿನ ತನ್ನ ಅರಮನೆಯಲ್ಲಿ ಪ್ರಾಣಿಗಳ ಸಂಗ್ರಹವನ್ನು ಇಟ್ಟಿದ್ದನು. ಅವುಗಳಲ್ಲಿ ಸಿಂಹಗಳು, ಚಿರತೆಗಳು ಮತ್ತು ಒಂಟೆಗಳು ಸೇರಿದ್ದವು.[10] ಮಧ್ಯಕಾಲೀನ ಇಂಗ್ಲೆಂಡ್ನ ಹೆಚ್ಚಿನ ಪ್ರಮುಖ ಸಂಗ್ರಹಗಳು ಟವರ್ ಆಫ್ ಲಂಡನ್ನಲ್ಲಿದ್ದವಾದರೂ ಅವುಗಳಲ್ಲಿ ಮೊದಲಿನದನ್ನು 1204 ರಲ್ಲಿ ರಾಜ ಜಾನ್ I ಸಂಗ್ರಹಿಸಿದ್ದನು. ಮೂರನೇ ಹೆನ್ರಿಯು ರೋಮನ್ ಸಾಮ್ರಾಟ ಎರಡನೇ ಫ್ರೆಡರಿಕ್ನಿಂದ ಮದುವೆ ಉಡುಗೊರೆಯಾಗಿ 1235ರಲ್ಲಿ ಪಡೆದ ಪ್ರಾಣಿಗಳಲ್ಲಿ ಮೂರು ಚಿರತೆಗಳಿದ್ದವು. 1264 ರಲ್ಲಿ ಪ್ರಾಣಿಗಳನ್ನು ಬುಲ್ವಾರ್ಕ್ಗೆ ಸ್ಥಳಾಂತರಿಸಲಾಯಿತು. ಅದಕ್ಕೆ ಲಯನ್ ಟವರ್ ಎಂದು ಮರುನಾಮಕರಣ ಮಾಡಲಾಯಿತಲ್ಲದೇ, ಅದು ಟವರ್ನ ಪಶ್ಚಿಮ ದಿಕ್ಕಿನ ಮುಖ್ಯ ಪ್ರವೇಶದ್ವಾರದ ಸಮೀಪವಿತ್ತು. ಅದನ್ನು 16ನೇ ಶತಮಾನದಲ್ಲಿ ರಾಣಿ ಎಲಿಜಬೆತ್ I ಳ ಆಳ್ವಿಕೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೋಡಲು ತೆರೆಯಲಾಗಿತ್ತು.[11] 18ನೇ ಶತಮಾನದಲ್ಲಿ ಪ್ರವೇಶ ಶುಲ್ಕವು ಮೂರೂವರೆ ಪೆನ್ಸ್ನಷ್ಟಿತ್ತು, ಅಥವಾ ಸಿಂಹಗಳ ಆಹಾರಕ್ಕಾಗಿ ಒಂದು ಬೆಕ್ಕು ಇಲ್ಲವೇ ನಾಯಿಯನ್ನು ಪೂರೈಕೆ ಮಾಡಬೇಕಾಗಿತ್ತು.[12] ಲಂಡನ್ನಲ್ಲಿ ಪ್ರಾಣಿಸಂಗ್ರಹಾಲಯವು ತೆರೆದ ನಂತರ ಪ್ರಾಣಿಗಳೆಲ್ಲ ಅಲ್ಲಿಗೆ ಸ್ಥಳಾಂತರಗೊಂಡವು.
ಕ್ರಿ.ಶ.1333ರಲ್ಲಿ ಫಿಲಿಪ್ಸ್ ದೊರೆ ಪ್ಯಾರಿಸ್ಸಿನಲ್ಲಿ ಮೃಗಾಲಯವೊಂದನ್ನು ಸ್ಥಾಪಿಸಿದ. ಅನಂತರ ಮೆಕ್ಸಿಕೋದಲ್ಲಿ 300 ಸಿಬ್ಬಂದಿಗಳನ್ನೊಳಗೊಂಡ ಒಂದು ಬೃಹತ್ ಮೃಗಾಲಯ ಅಸ್ತಿತ್ವಕ್ಕೆ ಬಂತು.
ಮುಂದೆ ಅಲ್ಲೊಂದು ಇಲ್ಲೊಂದು ಮೃಗಾಲಯಗಳು ಪ್ರಾರಂಭವಾದರೂ ನವೀನ ಮಾದರಿಯ ಮೃಗಾಲಯ ಪ್ರಾರಂಭವಾದದ್ದು ಕ್ರಿ.ಶ.1752ರಲ್ಲಿ. ಅಸ್ತಿತ್ವದಲ್ಲಿರುವ ಅತೀ ಹಳೆಯ ಪ್ರಾಣಿಸಂಗ್ರಹಾಲಯವು ಆಸ್ಟ್ರಿಯಾದ ವಿಯೆನ್ನಾ ಪ್ರಾಣಿಸಂಗ್ರಹಾಲಯವಾಗಿದ್ದು, ಇದು ವಿಯೆನ್ನಾದ ಸ್ಕಾನ್ಬ್ರನ್ನ್ ಪ್ಯಾಲೇಸ್ನಲ್ಲಿದ್ದ ಇಂಪೀರಿಯಲ್ ಮನಾಜರಿಯಿಂದ ಪ್ರಾಣಿಸಂಗ್ರಹಾಲಯವಾಗಿ ವಿಕಾಸಗೊಂಡಿತ್ತು. ಈ ಶ್ರೀಮಂತವರ್ಗದ ಮನಾಜರಿಯು 1752ರಲ್ಲಿ ಹ್ಯಾಬ್ಸ್ಬರ್ಗ್ ರಾಜಪ್ರಭುತ್ವದಿಂದ ಸ್ಥಾಪಿಸಲ್ಪಟ್ಟು 1755ರಲ್ಲಿ ಸಾರ್ವಜನಿಕರಿಗಾಗಿ ತೆರೆಯಲ್ಪಟ್ಟಿತು. 1775 ರಲ್ಲಿ ಮ್ಯಾಡ್ರಿಡ್ನಲ್ಲಿ ಪ್ರಾಣಿಸಂಗ್ರಹಾಲಯವೊಂದು ಸ್ಥಾಪನೆಯಾಯಿತು. 1795ರಲ್ಲಿ ಜಾಕ್ಸ್ ಹೆನ್ರಿ ಬೆರ್ನಾರ್ಡಿನ್ ಪ್ಯಾರಿಸ್ನಲ್ಲಿನ ಜೆರ್ಡಿನ್ ಡಿಸ್ ಪ್ಲ್ಯಾಂಟ್ಸ್ ನೊಳಗೆ ಪ್ರಾಣಿಸಂಗ್ರಹಾಲಯವೊಂದನ್ನು ಸ್ಥಾಪಿಸಿದನು. ಇದರಲ್ಲಿ ಮುಖ್ಯವಾಗಿ ವೈಜ್ಞಾನಿಕ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ವರ್ಸೈಲ್ಸ್ನ ರಾಯಲ್ ಮನಾಜರಿಯಿದ ತಂದ ಪ್ರಾಣಿಗಳು ಸೇರಿದ್ದವು. ರಷ್ಯಾದಲ್ಲಿ 1806ರಲ್ಲಿ ಕಝಾನ್ ಮೃಗಾಲಯ ಎಂಬ ಮೊದಲ ಪ್ರಾಣಿಸಂಗ್ರಹಾಲಯವನ್ನು ಕಝಾನ್ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಕಾರ್ಲ್ ಫಚ್ಸ್ ಸ್ಥಾಪಿಸಿದರು. 1826 ರಲ್ಲಿ ಸ್ಟಾಂಫೋರ್ಡ್ ರ್ಯಾಫಲ್ಸ್ ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್ ಅನ್ನು ಸ್ಥಾಪಿಸಿದರು. ಅದು ಪ್ಯಾರಿಸ್ ಮೃಗಾಲಯದ ಯೋಜನೆಯನ್ನು ತನ್ನ ಮೃಗಾಲಯದಲ್ಲಿ ಅಳವಡಿಸಿತಲ್ಲದೇ, ಹಾಗೆಯೇ ಅದು 1828ರಲ್ಲಿ ರೇಜೆಂಟ್ಸ್ ಪಾರ್ಕ್ನಲ್ಲಿನ ಲಂಡನ್ ಮೃಗಾಲಯವನ್ನು ಸ್ಥಾಪಿಸಿತು. ಇದು 1847ರಲ್ಲಿ ಸಾರ್ವಜನಿಕರಿಗೆ ತೆರೆಯಲ್ಪಟ್ಟಿತು. 1860ರಲ್ಲಿ ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್ ಮೃಗಾಲಯ ಎಂಬ ಮೊಟ್ಟಮೊದಲ ಪ್ರಾಣಿಸಂಗ್ರಹಾಲಯ ತೆರೆಯಿತು. ಅದೇ ವರ್ಷ ಅಮೇರಿಕದಲ್ಲಿನ ಮೊದಲ ಸಾರ್ವಜನಿಕ ಪ್ರಾಣಿಸಂಗ್ರಹಾಲಯವಾದ ಸೆಂಟ್ರಲ್ ಪಾರ್ಕ್ ಮೃಗಾಲಯ ತೆರೆಯಿತು. ಆದರೆ, 1859 ರಲ್ಲಿ ಫಿಲಡೆಲ್ಫಿಯಾ ಝೂಲಾಜಿಕಲ್ ಸೊಸೈಟಿಯು ಪ್ರಾಣಿಸಂಗ್ರಹಾಲಯವೊಂದನ್ನು ತೆರೆಯಲು ಪ್ರಯತ್ನಿಸಿತ್ತಾದರೂ ಅಮೆರಿಕನ್ ಸಿವಿಲ್ ವಾರ್ನ ಕಾರಣದಿಂದ ಅದು ತಡವಾಗಿ 1874ರಲ್ಲಿ ತೆರೆಯಿತು.
1907ರಲ್ಲಿ ಜರ್ಮನ್ ವಾಣಿಜ್ಯೋದ್ಯಮಿ ಕಾರ್ಲ್ ಹೇಗನ್ಬೆಕ್ ಸ್ಟೆಲಿಂಜೆನ್ನಲ್ಲಿ ಟೈರ್ಪಾರ್ಕ್ ಹೇಗನ್ಬೆಕ್ ಎಂಬ ಪಾರ್ಕನ್ನು ಸ್ಥಾಪಿಸಿದನು. ಇದೀಗ ಹ್ಯಾಂಬರ್ಗ್ನ ವಿಭಾಗವಾಗಿದೆ. ಪ್ರಾಣಿಗಳ ಪ್ರಾಕೃತಿಕ ಪರಿಸರಕ್ಕೆ ಸಮನಾದ ವಾತಾವರಣದ ಸೃಷ್ಟಿಗೆ ಕೂಡ ಹೆಸರುವಾಸಿಯಾಗಿದ್ದ ಇದು, ಕಂಬಿಗಳುಳ್ಳ ಪಂಜರಗಳ ಬದಲಾಗಿ, ಕಂದಕಗಳಿಂದ ಸುತ್ತುವರಿಯಲ್ಪಟ್ಟ ತೆರೆದ ಆವರಣಗಳನ್ನು ಬಳಸಿತು.[13]
1970ರ ದಶಕದಲ್ಲಿ ಪರಿಸರ ವಿಜ್ಞಾನವು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿ ಹೊರಹೊಮ್ಮಿದಾಗ, ಕೆಲವೊಂದು ಪ್ರಾಣಿಸಂಗ್ರಹಾಲಯಗಳು ಸಂರಕ್ಷಣೆಯನ್ನು ತಮ್ಮ ಕೇಂದ್ರ ಪಾತ್ರವಾಗಿ ಮಾಡಿಕೊಳ್ಳುವುದನ್ನು ಪರಿಗಣಿಸಿದವು. ಜೆರ್ಸಿ ಪ್ರಾಣಿಸಂಗ್ರಹಾಲಯದ ಗೆರಾಲ್ಡ್ ಡರೆಲ್, ಬ್ರೂಕ್ಫೀಲ್ಡ್ ಪ್ರಾಣಿಸಂಗ್ರಹಾಲಯದ ಜಾರ್ಜ್ ರ್ಯಾಬ್, ಮತ್ತು ಬ್ರಾಂಕ್ಸ್ ಪ್ರಾಣಿಸಂಗ್ರಹಾಲಯದ (ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ) ವಿಲಿಯಂ ಕಾನ್ವೇ ಇವರುಗಳು ಚರ್ಚೆಯನ್ನು ಮುನ್ನಡೆಸಿದರು. ತದನಂತರದಿಂದ ಪ್ರಾಣಿಸಂಗ್ರಹಾಲಯದ ವೃತ್ತಿಪರರು ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಶ್ಯಕತೆಯನ್ನು ಕಂಡುಕೊಂಡರಲ್ಲದೇ, ಶೀಘ್ರವೇ ಅಮೆರಿಕನ್ ಝೂ ಅಸೋಸಿಯೇಷನ್ ಸಂರಕ್ಷಣೆ ತನ್ನ ಅತೀ ಮುಖ್ಯ ಆದ್ಯತೆಯೆಂದು ಹೇಳಿಕೊಂಡಿತು.[14] ಯಾಕೆಂದರೆ, ಅವರು ಸಂರಕ್ಷಣೆಯ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲು ಬಯಸಿದ್ದರಲ್ಲದೇ, ಹೆಚ್ಚಿನ ಪ್ರಮಾಣದ ಪ್ರಾಣಿಸಂಗ್ರಹಾಲಯಗಳು ಅಲ್ಲಿಗೆ ಭೇಟಿ ನೀಡುವ ಭೇಟಿಗಾರರಿಗೆ ಮನರಂಜನೆಯನ್ನು ಒದಗಿಸುವ ಅಭ್ಯಾಸವನ್ನು ನಿಲ್ಲಿಸಿದವು. ಉದಾಹರಣೆಗೆ ಡೆಟ್ರಾಯಿಟ್ ಪ್ರಾಣಿಸಂಗ್ರಹಾಲಯವು 1969ರಲ್ಲಿ ತನ್ನ ಆನೆಗಳ ಪ್ರದರ್ಶನವನ್ನು ನಿಲ್ಲಿಸಿತು, ಮತ್ತು ಚಿಂಪಾಂಜಿಯ ಪ್ರದರ್ಶನವನ್ನು 1983 ರಲ್ಲಿ ನಿಲ್ಲಿಸಿತಲ್ಲದೇ, ಪ್ರಾಣಿಗಳನ್ನು ಪ್ರದರ್ಶನಕ್ಕೆ ಬಳಸುತ್ತಿದ್ದ ಅವುಗಳ ತರಬೇತುದಾರರು ಅವುಗಳನ್ನು ನೋಯಿಸುತ್ತಿದ್ದಿರಬಹುದು ಎಂದು ಒಪ್ಪಿಕೊಂಡಿತು.[15]
ಇಂದು ಯುರೋಪಿನಾದ್ಯಂತ ಹರಡಿರುವ 100 ಮೃಗಾಲಯಗಳ ಪೈಕಿ ನಲವತ್ತು, ನೂರು ವರ್ಷಗಳಿಗಿಂತ ಹಳೆಯವು. ಪ್ರಪಂಚದಾದ್ಯಂತ ಇಂದು ಸಾವಿರಕ್ಕೂ ಹೆಚ್ಚು ಮೃಗಾಲಯಗಳಿವೆ.
ಯುರೋಪಿಯನ್ ಜನರು ಮತ್ತು ಯೂರೋಪೇತರ ಮೂಲದ ಜನರ ನಡುವಿನ ಭಿನ್ನತೆಯನ್ನು ವಿವರಿಸುವುದಕ್ಕೋಸ್ಕರ ಕ್ರೂರ ಪ್ರಾಣಿಗಳೊಂದಿಗೆ ಕೆಲವೊಮ್ಮೆ ಮಾನವರನ್ನು ಕೂಡ ಪಂಜರಗಳಲ್ಲಿ ಪ್ರದರ್ಶಿಸಲಾಯಿತು. 1906ರ ಸೆಪ್ಟೆಂಬರ್ನಲ್ಲಿ ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯದ ನಿರ್ದೇಶಕ ವಿಲಿಯಂ ಹಾರ್ನಡೇ ಅವರು ನ್ಯೂಯಾರ್ಕ್ ಝೂಲಾಜಿಕಲ್ ಸೊಸೈಟಿಯ ಮುಖ್ಯಸ್ಥ ಮ್ಯಾಡಿಸನ್ ಗ್ರಾಂಟ್ ಅವರೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡರಲ್ಲದೇ, ಕಾಂಗೋದ ಓಟಾ ಬೆಂಗಾ ಎಂಬ ಕುಬ್ಜನನ್ನು ಚಿಂಪಾಂಜಿಯೊಂದಿಗೆ ಪಂಜರದಲ್ಲಿ ಪ್ರದರ್ಶಿಸಿದರಲ್ಲದೇ, ನಂತರ ಡೋಹಾಂಗ್ ಎಂಬ ಓರಾಂಗುಟಾನ್ನೊಂದಿಗೆ, ಮತ್ತು ಗಿಳಿಯೊಂದಿಗೆ ಕೂಡ ಪ್ರದರ್ಶಿಸಿದರು. ಈ ಪ್ರದರ್ಶನ ವಸ್ತುವು ಒರಾಂಗುಟಾನ್ (ಒಂದು ದೊಡ್ಡ ಜಾತಿಯ ಕಾಡು ಕೋತಿ) ಮತ್ತು ಬಿಳಿಮನುಷ್ಯನ ನಡುವಿನ “ಕಾಣೆಯಾದ ಕೊಂಡಿ” ಗೆ ಒಂದು ಉದಾಹರಣೆ ನೀಡುವ ಉದ್ದೇಶವನ್ನು ಹೊಂದಿತ್ತು. ಇದು ನಗರದ ಪುರೋಹಿತ ವರ್ಗದ ಪ್ರತಿಭಟನೆಗೆ ಕಾರಣವಾಯಿತಾದರೂ, ಸಾರ್ವಜನಿಕರು ಅದನ್ನು ನೋಡುವುದಕ್ಕಾಗಿ ಗುಂಪುಗೂಡಿದ್ದರು ಎಂದು ತಿಳಿದುಬಂದಿತ್ತು.[16][17]
1931 ರ ಸಂದರ್ಭದಲ್ಲಿ ಪ್ಯಾರಿಸ್ನ ವಸಾಹತಿನ ಪ್ರದರ್ಶನದಲ್ಲಿ ಮಾನವರನ್ನೂ ಕೂಡ ಪ್ರದರ್ಶಿಸಲಾಗುತ್ತಿತ್ತು ಮತ್ತು 1958ರ ಕೊನೆಯ ವೇಳೆಗೆ ಬ್ರಸಲ್ಸ್ನ “ಕಾಂಗೋಲೀಸ್ ಹಳ್ಳಿ"ಯ ಎಕ್ಸ್ಪೊ-58 ರಲ್ಲಿ ಕೂಡ ಮಾನವರನ್ನು ಪ್ರದರ್ಶಿಸಲಾಗಿತ್ತು.[18]
ಪ್ರಾಣಿಸಂಗ್ರಹಾಲಯದ ಪ್ರಾಣಿಗಳಿಗೆ ಸಾಮಾನ್ಯವಾಗಿ ಅವುಗಳ ಸ್ವಾಭಾವಿಕ ಪರಿಸರದಲ್ಲಿ ಬೆಳೆಯುವಂತೆಯೇ ಬೆಳೆಯಲು ಅವುಗಳಿಗಾಗಿ ಆವರಣಗಳನ್ನು ನಿರ್ಮಿಸಲಾಗುವುದಲ್ಲದೇ, ಇದರಿಂದ ಪ್ರಾಣಿಗಳು ಮತ್ತು ಭೇಟಿ ನೀಡುವವರಿಗೂ ಕೂಡ ಪ್ರಯೋಜನವಾಗುತ್ತದೆ. ಮೂಲಸ್ವರೂಪದ ಪರಿಸರದಲ್ಲಿ ವಾಸಿಸುವಂತಹ ಪೆಂಗ್ವಿನ್ಗಳಂತಹ ಪ್ರಾಣಿ ಪಕ್ಷಿಗಳಿಗೆ ವಿಶೇಷ ವಾತಾವರಣದ ಪರಿಸ್ಥಿತಿಗಳನ್ನು ನಿರ್ಮಿಸಲಾಗಿರುತ್ತದೆ. ಹಕ್ಕಿಗಳು, ಕೀಟಗಳು,ಸರೀಸೃಪಗಳು, ಮೀನುಗಳು ಮತ್ತು ಇತರ ಜಲಚರ ಜೀವವೈವಿಧ್ಯಗಳಿಗಾಗಿಯೂ ವಿಶೇಷ ಪ್ರಾಕಾರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವೊಂದು ಪ್ರಾಣಿಸಂಗ್ರಹಾಲಯಗಳು ವಿಹಾರ ಪ್ರದರ್ಶನ ವ್ಯವಸ್ಥೆಗಳನ್ನು ಹೊಂದಿರುವುದಲ್ಲದೇ ಭೇಟಿಕಾರರು ಆವರಣದೊಳಗೆ ಪ್ರವೇಶಿಸುವಾಗ ಲೆಮೂರ್ (ಕೋತಿ ಜಾತಿ), ಮಾರ್ಮೋಸೆಟ್ಗಳು, ಹಕ್ಕಿಗಳು, ಹಲ್ಲಿಗಳು ಮತ್ತು ಕಡಲಾಮೆಗಳಂತಹ ಆಕ್ರಮಣ ಮಾಡದ ಜಾತಿಯ ಪ್ರಾಣಿಗಳನ್ನು ನೋಡಬಹುದಾಗಿರುತ್ತದೆ. ಭೇಟಿಗಾರರಿಗೆ ಕಾಲುದಾರಿಗಳನ್ನು ಅನುಸರಿಸಿಕೊಂಡು ಹೋಗಲು ಮತ್ತು ಆಹಾರಗಳನ್ನು ಪ್ರಾಣಿಗಳಿಗೆ ತೋರಿಸುವುದು ಅಥವಾ ತಿನ್ನಿಸುವುದನ್ನು ಮಾಡದಂತೆ ಹೇಳಲಾಗುತ್ತದೆ, ಇಲ್ಲದಿದ್ದರೆ ಪ್ರಾಣಿಗಳು ಆಹಾರವನ್ನು ಕಿತ್ತುಕೊಳ್ಳಬಹುದೆಂದು ಕೂಡ ತಿಳಿಸಲಾಗುತ್ತದೆ.
ಮೃಗಾಲಯಗಳನ್ನು ರಚಿಸುವಾಗ ಪ್ರಾಣಿಗಳಿಗೆ ಅವಶ್ಯಕವಾದ ಸೌಕರ್ಯ ಮತ್ತು ಜನಸಾಮಾನ್ಯರಿಗೆ ವೀಕ್ಷಣೆಗೆ ಅವಕಾಶ ಎರಡನ್ನೂ ಕಲ್ಪಿಸಿಕೊಡುವುದಿದೆ. ಈಗ ಅಸ್ತಿತ್ವದಲ್ಲಿರುವ ಮೃಗಾಲಯಗಳಲ್ಲಿ ಸ್ಥಳಾವಕಾಶ, ವಾತಾವರಣ ಮುಂತಾದವು ವೈವಿಧ್ಯಮಯವಾಗಿದ್ದು ಅವುಗಳಿಗೆ ನಿಶ್ಚಿತ ರಚನೆ ಎಂಬುದಿಲ್ಲ. ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಪಂಜರದಲ್ಲಿಟ್ಟು ಅವು ತಪ್ಪಿಸಿಕೊಂಡು ಹೋಗದಂತೆ, ವೀಕ್ಷಕರಿಂದ ತೊಂದರೆಯಾಗದಂತೆ ಕಾಪಾಡುವುದು ಒಂದು ವಿಧಾನ. ಇನ್ನೊಂದು ವಿಧಾನವೆಂದರೆ ಮೃಗಾಲಯದ ವಿಶಾಲ ಆವರಣದಲ್ಲಿ ಮೃಗಗಳನ್ನು ಸ್ವೇಚ್ಛೆಯಾಗಿ ಬಿಟ್ಟು ವೀಕ್ಷಕರು ಮತ್ತು ಮೃಗಗಳ ನಡುವೆ ವಿಶಾಲವಾದ ತಂತಿಯ ಬೇಲಿ ಅಥವಾ ಜಾಳಿಗೆಗಳನ್ನು ರಚಿಸುವುದು. ಸಾಮಾನ್ಯವಾಗಿ ಚಿಕ್ಕ ಪ್ರಾಣಿಗಳನ್ನು ಪಂಜರದಲ್ಲಿಯೂ ದೊಡ್ಡ ಪ್ರಾಣಿಗಳನ್ನು ಮುಕ್ತ ವಾತಾವರಣದಲ್ಲಿಡುವುದು ಉತ್ತಮ. ಕೆಲವು ಪ್ರಾಣಿಗಳು ಪಂಜರಗಳಲ್ಲಿ ಬಹಳ ಕಾಲ ಬದುಕುವುದಿಲ್ಲ. ಇಂಥ ಪ್ರಾಣಿಗಳ ಗಾತ್ರವನ್ನು ಗಣನೆಗೆ ತೆಗೆದುಕೊಳ್ಳದೆ ಮುಕ್ತ ಪರಿಸರದಲ್ಲಿರಿಸುವುದು ಒಳ್ಳೆಯದು.
ಕೆಲವು ಪ್ರಾಣಿಗಳಿಗೆ ವಿಶಿಷ್ಟವಾದ ಪರಿಸರದ ಆವಶ್ಯಕತೆಯಿದೆ. ಅಂಥ ಪ್ರಾಣಿಗಳಿಗೆ ಮಾತ್ರ ಯುಕ್ತ ವಾತಾವರಣವನ್ನು ಕಲ್ಪಿಸಲು ಮೃಗಾಲಯಗಳಲ್ಲಿ ಅವಕಾಶವಿರಬೇಕು. ಸ್ಥಳಾವಕಾಶ ಹೆಚ್ಚಾಗಿರಲಿ, ಕಡಿಮೆಯಾಗಿರಲಿ, ಆಯಾ ಪ್ರಾಣಿಗಳ ನೈಸರ್ಗಿಕ ಪರಿಸರವನ್ನು ಹೋಲುವಂಥ ಆವರಣಗಳನ್ನು, ಕಟಕಟೆಗಳನ್ನು ನಿರ್ಮಿಸಿದರೆ ಅಂಥ ಮೃಗಾಲಯ ಆದರ್ಶ ಮೃಗಾಲಯವಾಗುತ್ತದೆ. ಉದಾಹರಣೆಗೆ ಹಿಮಕರಡಿಯನ್ನು ತಂಪಾದ ನೀರಿನ ಕೊಳದಲ್ಲೊ ಅಥವಾ ವಾತಾವರಣವನ್ನು ಸದಾ ತಂಪಾಗಿಸುವ ಕೃತಕ ಸಾಧನಗಳ ಉಪಯೋಗದಿಂದಲೊ ಸುಲಭವಾಗಿ ರಕ್ಷಿಸಬಹುದು. ಮರದ ಮೇಲೆ ವಾಸಿಸುವ ಮರ್ಕಟಗಳ ವಿವಿಧ ಪ್ರಭೇದಗಳನ್ನು ಪಂಜರದಲ್ಲಿಯೇ ಪೋಷಿಸಲು ಸಾಧ್ಯವಿದ್ದರೂ ನಿಸರ್ಗದಲ್ಲಿರುವಂತೆ ಮರಗಳ ರೆಂಬೆಗಳು ಅಥವಾ ಇತರ ಕೃತಕ ವಿಧಾನಗಳಿಂದ ಅವು ಅತ್ತಿಂದಿತ್ತ ಇತ್ತಿಂದತ್ತ ಜಿಗಿಯಲು ಸಾಧ್ಯವಿರುವಂತೆ ಪಂಜರಗಳನ್ನು ನಿರ್ಮಿಸಿದರೆ ಅವು ಮೃಗಾಲಯದ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲವು. ಹೊಸ ಪ್ರಾಣಿಗಳು ಮೃಗಾಲಯಕ್ಕೆ ಬಂದರೆ ಅವುಗಳನ್ನು ಇಡಲು ಯುಕ್ತ ಸ್ಥಳಾವಕಾಶವಿರಬೇಕು.
ಕೃತಕ ಪರಿಸರದಲ್ಲಿ ಪ್ರಜನನ ನಡೆಸುವ ಸಾಮರ್ಥ್ಯವುಳ್ಳ ಪ್ರಾಣಿಗಳ ಸಂಖ್ಯೆ ಕಡಿಮೆ. ಅದರಿಂದ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಸಂಗ್ರಹಿಸುವುದು ಹಾಗೂ ರಕ್ಷಿಸುವುದು ಮುಖ್ಯ ಕೆಲಸ. ಅವುಗಳನ್ನು ಅಡವಿಗಳಿಂದ ಹಿಡಿದು ತರುವುದು ಇಲ್ಲವೆ ವ್ಯಾಪಾರಿಗಳಿಂದ ಕೊಳ್ಳುವುದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವಾಗ ಆ ಪ್ರಾಣಿಗೆ ಯಾವುದೇ ಧಕ್ಕೆಯಾಗದಂತೆ ಅಥವಾ ಅದು ಸಾಯದಂತೆ ರಕ್ಷಿಸುವುದು ಮುಖ್ಯ. ಇವೆಲ್ಲ ಕಷ್ಟಸಾಧ್ಯವಾದುದರಿಂದ ಪ್ರಾಣಿಗಳು ಮೃಗಾಲಯದಲ್ಲಿಯೇ ಸಂತಾನಾಭಿವೃದ್ಧಿ ಮಾಡುವಂತೆ ಪ್ರೋತ್ಸಾಹಿಸುವತ್ತ ಮೃಗಾಲಯ ರಕ್ಷಕರು ಇತ್ತೀಚೆಗೆ ಗಮನಹರಿಸುತ್ತಿದ್ದಾರೆ.
ಕೆಲವು ಪ್ರಾಣಿಸಂಗ್ರಹಾಲಯಗಳು ಸ್ವಲ್ಪ ಸಂಖ್ಯೆಯ ಪ್ರಾಣಿಗಳನ್ನು ಪಂಜರಗಳಲ್ಲಿಡುವ ಬದಲಾಗಿ ದೊಡ್ಡದಾದ ಹೊರಾಂಗಣ ಆವರಣಗಳಲ್ಲಿ ಇಡುತ್ತವೆ. ಇವುಗಳಿಗೆ ಕಂದಕಗಳು ಮತ್ತು ಬೇಲಿಗಳಂತಹ ನಿರ್ಬಂಧಗಳಿರುತ್ತವೆ. ಸಫಾರಿ ಪಾರ್ಕ್ಗಳನ್ನು ಝೂ ಪಾರ್ಕ್ಗಳು ಮತ್ತು ಲಯನ್ ಫಾರ್ಮ್ಗಳೆಂದು ಕರೆಯಲಾಗುವುದಲ್ಲದೇ, ಅಲ್ಲಿ ಭೇಟಿಕಾರರಿಗೆ ಅವುಗಳ ಮೂಲಕ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಲು ಕೂಡ ಅವಕಾಶ ಮಾಡಿಕೊಡುತ್ತವೆ. ಮೃಗಗಳ ವೀಕ್ಷಣೆಗೆ ಎರಡೂ ಕಡೆ ತಂತಿಯ ಜಾಳಿಗೆ ಅಥವಾ ಬೇಲಿಗಳನ್ನು ನಿರ್ಮಿಸಲಾಗಿದ್ದು ಮಧ್ಯೆ ವೀಕ್ಷಕರು ವಾಹನಗಳಲ್ಲಿ ಇಲ್ಲವೆ ಕಾಲುನಡಿಗೆಯಲ್ಲಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಈ ರೀತಿಯ ಮೊತ್ತ ಮೊದಲ ಪ್ರಾಣಿಸಂಗ್ರಹಾಲಯವೆಂದರೆ, 1931ರಲ್ಲಿ ಇಂಗ್ಲೆಂಡ್ನ ಬೆಡ್ಫೋರ್ಡ್ಶೈರ್ನಲ್ಲಿ ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್ನಿಂದ ತೆರೆಯಲ್ಪಟ್ಟ ವಿಪ್ಸ್ನೇಡ್ ಪಾರ್ಕ್ ಆಗಿದ್ದು ಅದರ ವ್ಯಾಪ್ತಿ 600 ಎಕರೆಗಳಾಗಿತ್ತು. 1970ರ ದಶಕದ ಆರಂಭದಿಂದ, 1,800–ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಝೂಲಾಜಿಕಲ್ ಸೊಸೈಟಿ ಆಫ್ ಸ್ಯಾನ್ ಡಿಯೇಗೋದಿಂದ ನಿರ್ವಹಿಸಲ್ಪಡುತ್ತಿರುವ ಸ್ಯಾನ್ ಡಿಯೇಗೋ ವೈಲ್ಡ್ ಎನಿಮಲ್ ಪಾರ್ಕನ್ನು ಮುಖ್ಯಭಾಗವಾಗಿ ಹೊಂದಿದೆ, ಅದನ್ನು ಸ್ಯಾನ್ ಡಿಯೇಗೋದ ಸ್ಯಾನ್ ಪ್ಯಾಸ್ಕ್ವಾಲ್ ಕಣಿವೆಯ ಸಮೀಪದಲ್ಲಿ ನಿರ್ಮಿಸಲಾಗಿತ್ತು. ಎರಡು ರಾಜ್ಯ ಬೆಂಬಲಿತ ಝೂ ಪಾರ್ಕ್ಗಳಲ್ಲಿ ಒಂದಾದ ೨೦೦೦ ಎಕರೆಯ ನಾರ್ತ್ ಕ್ಯಾರೊಲಿನಾ ಮೃಗಾಲಯ ಉತ್ತರ ಕ್ಯಾರೋಲಿನಾದಲ್ಲಿದೆ.[19] ೫೦೦ ಎಕರೆಯಷ್ಟಿರುವ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿನ ವೆರ್ರಿಬೀ ಓಪನ್ ರೇಂಜ್ ಝೂವು ಸವನ್ನಾದಲ್ಲಿ ವಾಸಿಸುವ ಪ್ರಾಣಿಗಳನ್ನು ಪ್ರದರ್ಶಿಸುತ್ತದೆ. ಅಮೆರಿಕದ ಮಿಯಾಮಿಯಲ್ಲಿರುವ ಮರ್ಕಟಾರಣ್ಯ ಇಂಥ ಬಯಲು ಮೃಗಾಲಯಗಳ ಪೈಕಿ ಪ್ರಸಿದ್ಧವಾದ್ದು.
1853ರಲ್ಲಿ ಲಂಡನ್ನಲ್ಲಿ ಮೊತ್ತ ಮೊದಲ ಸಾರ್ವಜನಿಕ ಅಕ್ವೇರಿಯಂ ತೆರೆಯಿತು. ಇದರ ನಂತರ ಸಾರ್ವಜನಿಕ ಅಕ್ವೇರಿಯಮ್ಗಳನ್ನು ಯೂರೋಪ್ ಖಂಡದಲ್ಲಿ (ಉದಾಹರಣೆಗೆ, ಪ್ಯಾರಿಸ್ನಲ್ಲಿ1859, ಹ್ಯಾಂಬರ್ಗ್ನಲ್ಲಿ 1864, ಬರ್ಲಿನ್ನಲ್ಲಿ 1869, ಬ್ರಿಘ್ಟನ್ನಲ್ಲಿ 1872) ಮತ್ತು ಅಮೇರಿಕದಲ್ಲಿ (ಬೋಸ್ಟನ್ನಲ್ಲಿ 1859, ವಾಷಿಂಗ್ಟನ್ನಲ್ಲಿ 1873, ಸ್ಯಾನ್ ಫ್ರಾನ್ಸಿಸ್ಕೋ ವುಡ್ವರ್ಡ್ಸ್ ಗಾರ್ಡನ್ನಲ್ಲಿ 1873, ನ್ಯೂಯಾರ್ಕ್ ಬ್ಯಾಟರಿ ಪಾರ್ಕ್ನಲ್ಲಿ 1896) ಕೂಡ ತೆರೆಯಲಾಯಿತು. 2005ರಲ್ಲಿ 8 ಮಿಲಿಯನ್ ಯುಎಸ್ ಗ್ಯಾಲನ್ಗಳಿಗಿಂತ ಹೆಚ್ಚು ಸಿಹಿ ನೀರಿನ, ಮತ್ತು 500 ವಿವಿಧ ಪ್ರಬೇಧಗಳ 100,000ಕ್ಕಿಂತಲೂ ಹೆಚ್ಚು ಪ್ರಾಣಿಗಳುಳ್ಳ ಲಾಭ ನಿರಪೇಕ್ಷ ಜಾರ್ಜಿಯಾ ಅಕ್ವೇರಿಯಂ ಜಾರ್ಜಿಯಾದ ಅಟ್ಲಾಂಟಾದಲ್ಲಿ ತೆರೆಯಿತು. ಅಕ್ವೇರಿಯಮ್ನ ನಿದರ್ಶನಗಳಲ್ಲಿ ತಿಮಿಂಗಿಲ ಶಾರ್ಕ್ಗಳು ಮತ್ತು ಬೆಲುಗಾ ತಿಮಿಂಗಿಲಗಳು ಸೇರಿವೆ.
ರಸ್ತೆ ಬದಿಯ ಪ್ರಾಣಿಸಂಗ್ರಹಾಲಯಗಳು ಉತ್ತರ ಅಮೇರಿಕಾದಾದ್ಯಂತ ಕಂಡುಬರುವುದಲ್ಲದೇ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಇಂಥವುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳು ಸಣ್ಣದಾಗಿದ್ದು, ಲಾಭಕ್ಕಾಗಿ ಇರುವ ಅನಿಯಂತ್ರಿತ ಮೃಗಾಲಯಗಳಾಗಿವೆ. ಇವುಗಳು ಪೆಟ್ರೋಲ್ ಸ್ಟೇಷನ್ನಂತಹ ಇತರ ಕೆಲವೊಂದು ಸೌಲಭ್ಯಗಳಿಗೆ ಭೇಟಿಕಾರರನ್ನು ಆಕರ್ಷಿಸುವ ಉದ್ದೇಶಗಳನ್ನು ಹೊಂದಿರುತ್ತವೆ. ಇದರಲ್ಲಿನ ಪ್ರಾಣಿಗಳಿಗೆ ಕೆಲವೊಂದು ಚಮತ್ಕಾರಗಳನ್ನು ಮಾಡಲು ತರಬೇತಿಯನ್ನು ನೀಡಲಾಗಿರಬಹುದು. ಭೇಟಿಕಾರರು ದೊಡ್ಡ ಪ್ರಾಣಿಸಂಗ್ರಹಾಲಯಗಳಿಗಿಂತ ಸಣ್ಣ ಪ್ರಾಣಿಸಂಗ್ರಹಾಲಯಗಳಲ್ಲಿ ಪ್ರಾಣಿಗಳಿಗೆ ಹೆಚ್ಚು ಸಮೀಪರಾಗಲು ಸಾಧ್ಯವಾಗುತ್ತದೆ.[20] ಈ ರಸ್ತೆಬದಿಯ ಸಣ್ಣ ಝೂಗಳು ಅನಿರ್ಬಂಧಿತವಾಗಿರುವುದರಿಂದ ತಾತ್ಸಾರ[21] ಮತ್ತು ಕ್ರೂರತನಕ್ಕೆ ಕುಖ್ಯಾತ ನಿದರ್ಶನಗಳಾಗಿವೆ.[22]
ಮುದ್ದಿಸುವ ಅವಕಾಶವಿರುವ ಮೃಗಾಲಯಗಳನ್ನು ಮಕ್ಕಳ ಫಾರ್ಮ್ ಅಥವಾ ಮಕ್ಕಳ ಮೃಗಾಲಯಗಳೆಂದು ಕೂಡ ಕರೆಯುವರಲ್ಲದೇ, ಇವುಗಳಲ್ಲಿ ಸಾಕು ಪ್ರಾಣಿಗಳು ಮತ್ತು ಮುಟ್ಟಿ ಆಹಾರ ತಿನ್ನಿಸಬಹುದಾದಷ್ಟು ಸಾಧುವಾದ ಕಾಡು ಪ್ರಾಣಿಗಳ ಪ್ರಬೇಧಗಳ ಸಂಯೋಜನೆ ಇರುತ್ತದೆ. ಪ್ರಾಣಿಗಳ ಆರೋಗ್ಯವನ್ನು ಖಚಿತಪಡಿಸುವುದಕ್ಕೋಸ್ಕರ ಆಹಾರವನ್ನು ವಿಕ್ರಯ ಯಂತ್ರಗಳು ಅಥವಾ ಹತ್ತಿರದ ಕಿಯೋಸ್ಕ್ನಿಂದ ಪ್ರಾಣಿಸಂಗ್ರಹಾಲಯವೇ ಪೂರೈಸುತ್ತದೆ.
ಪ್ರಾಣಿ ವಿಷಯದ ಪಾರ್ಕ್ ಒಂದು ವಿನೋದ ಪಾರ್ಕ್ ಮತ್ತು ಪ್ರಾಣಿ ಸಂಗ್ರಹಾಲಯದ ಸಂಯೋಜನೆಯಾಗಿದ್ದು, ಇದು ಮುಖ್ಯವಾಗಿ ಮನೋರಂಜನೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಇರುವ ಪಾರ್ಕ್ ಆಗಿದೆ. ಸೀ ವರ್ಲ್ಡ್ ಹಾಗೂ ಮರೀನ್ ಲ್ಯಾಂಡ್ಗಳಂತಹ ಕಡಲ ಸಸ್ತನಿ ಪಾರ್ಕ್ಗಳು ಹೆಚ್ಚು ವಿಸ್ತೃತ ಡಾಲ್ಫಿನೇರಿಯಮ್ಗಳಾಗಿದ್ದು, ಇವುಗಳು ತಿಮಿಂಗಿಲಗಳನ್ನು ಹೊಂದಿರುತ್ತವೆಯಲ್ಲದೇ, ಹೆಚ್ಚುವರಿ ಮನೋರಂಜನಾ ಆಕರ್ಷಣೆಗಳನ್ನು ಒಳಗೊಂಡಿರುತ್ತವೆ. ಇನ್ನೊಂದು ರೀತಿಯ ಪ್ರಾಣಿ ವಿಷಯದ ಪಾರ್ಕ್ ಸಾಂಪ್ರದಾಯಿಕ ಝೂಗಿಂತ ಹೆಚ್ಚಿನ ಮನೋರಂಜನೆ ಮತ್ತು ವಿನೋದಗಳನ್ನು ಒಳಗೊಂಡಿರುತ್ತದೆ, ಉದಾ. ಸ್ಟೇಜ್ ಷೋಗಳು, ರೋಲರ್ ಕೋಸ್ಟರ್ಗಳು ಮತ್ತು ಕಾಲ್ಪನಿಕ ಜೀವಿಗಳು. ಕೆಲವು ಉದಾಹರಣೆಗಳೆಂದರೆ ಟಾಂಪಾ, ಫ್ಲೋರಿಡಾದಲ್ಲಿರುವ ಬುಶ್ ಗಾರ್ಡನ್ಸ್ ಟಾಂಪಾ ಬೇ, ಒರ್ಲೆಂಡೊ, ಫ್ಲೋರಿಡಾದಲ್ಲಿರುವ ಡಿಸ್ನೀಸ್ ಅನಿಮಲ್ ಕಿಂಗ್ಡಮ್, ಇಂಗ್ಲೆಂಡ್ನ ಉತ್ತರ ಯಾರ್ಕ್ಶಾಯರ್ನಲ್ಲಿರುವ ಫ್ಲೆಮಿಂಗೊ ಲ್ಯಾಂಡ್ ಹಾಗೂ ವ್ಯಲ್ಲೆಜೊ, ಕ್ಯಾಲಿಫೋರ್ನಿಯಾದಲ್ಲಿನ ಸಿಕ್ಸ್ ಫ್ಲ್ಯಾಗ್ಸ್ ಡಿಸ್ಕವರಿ ಕಿಂಗ್ಡಮ್.
ಭಾರತದಲ್ಲಿ ಇಂದು 44 ಅಂಗೀಕೃತ ಮೃಗಾಲಯಗಳಿವೆ. ಇವುಗಳಲ್ಲಿ ಕೆಲವು ಕೇಂದ್ರ ಸರ್ಕಾರದ ಅಧೀನದಲ್ಲೂ ಉಳಿದವು ಆಯಾ ರಾಜ್ಯ ಸರ್ಕಾರಗಳ ಅಧೀನದಲ್ಲೂ ಇವೆ. ಈ ಮೃಗಾಲಯಗಳಲ್ಲಿ ಕೆಲವು ವಿಶಿಷ್ಟ ಪ್ರಾಣಿಗಳ ಸಂಗ್ರಹವಿದ್ದು, ಕೆಲವು ಮೃಗಾಲಯಗಳಲ್ಲಿ ಅವು ಪ್ರಜನನವನ್ನು ಮಾಡುತ್ತಿವೆ. ಉದಾಹರಣೆಗೆ ಅಸ್ಸಾಂ ರಾಜ್ಯದ ಗೌಹತಿಯ ರಾಜ್ಯ ಮೃಗಾಲಯದಲ್ಲಿ ಘೇಂಡಾಮೃಗಗಳ ಸಂತಾನಾಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೈದರಾಬಾದಿನ ನೆಹರೂ ಜ಼ೂವಾಲಾಜಿಕಲ್ ಪಾರ್ಕಿನಲ್ಲಿ ಮೊಸಳೆಗಳ ಸಂಕರ, ದೆಹಲಿಯ ರಾಷ್ಟ್ರೀಯ ಮೃಗಾಲಯದಲ್ಲಿ ಬಿಳಿ ಹುಲಿಗಳ ಹಾಗೂ ತೋಳಗಳ ಸಂತಾನಾಭಿವೃದ್ಧಿ ನಡೆಯುತ್ತಿದೆ. ಮಹಾರಾಜಾ ಫತೇಸಿಂಹ ಮೃಗಾಲಯದಲ್ಲಿ ಕಾಡುಕತ್ತೆ, ಏಷ್ಯದ ಸಿಂಹಗಳು, ಒಂಟೆಗಳು ಪ್ರಮುಖ ಆಕರ್ಷಣೆಗಳು. ಸಿಮ್ಲಾದ ಹಿಮಾಲಯನ್ ಜ಼ೂವಾಲಾಜಿಕಲ್ ಪಾರ್ಕಿನಲ್ಲಿ ಮೊನಾಲ್ ಫೆಸೆಂಟ್ ಎಂಬ ಪಕ್ಷಿ ಪ್ರಸಿದ್ಧವಾದದ್ದು. ತಿರುವನಂತಪುರದ ಮೃಗಾಲಯದಲ್ಲಿ ನೀಲಗಿರಿ ಟಹರ್, ಕಾಡುಕುರಿ, ಮಕಾಕ್ ಕೋತಿಗಳು ಬಹು ಮುಖ್ಯ ಸಂಗ್ರಹಗಳು. ಮೈಸೂರಿನ ಮೃಗಾಲಯದಲ್ಲಿ ಚಿಂಪಾMಜಿ, ಒರಾಂಗುಟಾನ್, ಟಪೀರ್, ಕಪ್ಪುಸಿಂಗಳೀಕ, ಕಪ್ಪುಹಂಸ, ನೀಲಗಿರಿ ಸಿಂಗಳೀಕ ಮುಂತಾದ ಹಲವು ಮಹತ್ತ್ವದ ಪ್ರಾಣಿಗಳಿವೆ. ಹುಲಿಗಳ ಸಂತಾನಾಭಿವೃದ್ಧಿಗೂ ಇಲ್ಲಿ ವಿಶೇಷ ಆಸಕ್ತಿ ನೀಡಲಾಗಿದೆ.
ಭಾರತ ಸರ್ಕಾರ ಭಾರತದ ಮೃಗಾಲಯಗಳನ್ನು ಕುರಿತಂತೆ, ಭಾರತದ ಸಸ್ಯೋದ್ಯಾನಗಳು ಮತ್ತು ಮೃಗಾಲಯಗಳ ಬಗೆಗೆ ನಿಯತಕಾಲಿಕವೊಂದನ್ನು ಹೊರತರುತ್ತಿದೆ. ಈ ಪತ್ರಿಕೆಯಲ್ಲಿ ಭಾರತದ ಮೃಗಾಲಯಗಳ ಬಗೆಗೆ ಸಮಗ್ರ ಮಾಹಿತಿ ದೊರೆಯುತ್ತದೆ.
ಆಧುನಿಕ ಪ್ರಾಣಿಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಟ್ಟ ಪ್ರತಿ 20 ಪ್ರಾಣಿಗಳಲ್ಲಿ ಸುಮಾರು ಐದು ಪ್ರಾಣಿಗಳನ್ನು ಸೆರೆಯಲ್ಲಿ ಬೆಳೆಸಲಾಗುತ್ತದೆ. ಅವುಗಳು ಪ್ರಾಣಿಸಂಗ್ರಹಾಲಯಕ್ಕೆ ಪ್ರವೇಶಿಸಿದಾಗ, ಆ ಪ್ರಾಣಿಗಳನ್ನು ಪ್ರತ್ಯೇಕವಾಗಿ ಇಡಲಾಗುವುದಲ್ಲದೇ, ನಂತರ ನಿಧಾನವಾಗಿ, ಅವುಗಳ ಪ್ರಾಕೃತಿಕ ಪರಿಸರವನ್ನು ಅನುಕರಿಸಲು ಪ್ರಯತ್ನಿಸುವ, ಆವರಣಗಳಿಗೆ ಒಗ್ಗಿಸಲಾಗುತ್ತದೆ. ಉದಾಹರಣೆಗೆ, ಕೆಲವೊಂದು ಜಾತಿಯ ಪೆಂಗ್ವಿನ್ಗಳಿಗೆ ಶೀತ ವಾತಾವರಣದ ಪ್ರದೇಶಗಳ ಅಗತ್ಯವಿರುತ್ತದೆ. ಅಂತಹ ಪ್ರಾಣಿಗಳ ಸಾಕಣೆಗೆ ಅಗತ್ಯ ಮಾರ್ಗದರ್ಶಿಸೂತ್ರಗಳನ್ನು ಇಂಟರ್ನ್ಯಾಷನಲ್ ಝೂ ಇಯರ್ಬುಕ್ (ಅಂತಾರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದ ವಾರ್ಷಿಕ ಪುಸ್ತಕ) ನಲ್ಲಿ ಪ್ರಕಟಿಸಲಾಗುತ್ತದೆ.[23]
ಆಸ್ಟ್ರೇಲಿಯಾ, ಯುರೋಪ್ ಮತ್ತು ಉತ್ತರ ಅಮೇರಿಕಾದ ಹೆಚ್ಚಿನ ಆಧುನಿಕ ಪ್ರಾಣಿಸಂಗ್ರಹಾಲಯಗಳು, ಅದರಲ್ಲೂ ವಿಶೇಷವಾಗಿ ವೈಜ್ಞಾನಿಕ ಸೊಸೈಟಿಗಳೊಂದಿಗಿರುವಂಥವು, ಕಾಡು ಪ್ರಾಣಿಗಳನ್ನು ಪ್ರಾಥಮಿಕವಾಗಿ ನಶಿಸಿಹೋಗುತ್ತಿರುವ ಪ್ರಬೇಧಗಳನ್ನು ಸಂರಕ್ಷಿಸಲು, ಹಾಗೆಯೇ ಸಂಶೋಧನಾ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರದರ್ಶಿಸುತ್ತವೆ, ಮತ್ತು ಎರಡನೆಯದಾಗಿ ಭೇಟಿಕಾರರ ಮನೋರಂಜನೆಗಾಗಿ ಪ್ರದರ್ಶಿಸುತ್ತವೆ.[24][25] ಈ ವಾದವನ್ನು ಟೀಕಾಕಾರರು ಅಲ್ಲಗಳೆಯುತ್ತಾರೆ. ಲಂಡನ್ನ ಝೂಲಾಜಿಕಲ್ ಸೊಸೈಟಿಯು ತನ್ನ ಲಿಖಿತ ಸಂವಿಧಾನದಲ್ಲಿ ತನ್ನ ಉದ್ದೇಶ “ಪ್ರಾಣಿಶಾಸ್ತ್ರ ಮತ್ತು ಪ್ರಾಣಿಗಳ ಶರೀರವಿಜ್ಞಾನದ ಸುಧಾರಣೆ ಮತ್ತು ಪ್ರಾಣಿಗಳ ಜಗತ್ತಿಗೆ ಹೊಸ ಹಾಗೂ ಕುತೂಹಲಕಾರಿಯಾದ ಪ್ರಬೇಧಗಳ ಪರಿಚಯ” ಎಂಬುದಾಗಿ ತಿಳಿಸುತ್ತದೆ. ಅದು ನಫ್ಫೀಲ್ಡ್ ಇನ್ಸ್ಟಿಟ್ಯೂಟ್ ಆಫ್ ಕಂಪೇರಿಟಿವ್ ಮೆಡಿಸಿನ್ ಮತ್ತು ವೆಲ್ಕಮ್ ಇನ್ಸ್ಟಿಟ್ಯೂಟ್ ಆಫ್ ಕಂಪೇರಿಟಿವ್ ಫಿಸಿಯೋಲಜಿ ಎಂಬ ಎರಡು ಸಂಶೋಧನಾ ಸಂಸ್ಥೆಗಳನ್ನು ನಿರ್ವಹಿಸುತ್ತದೆ. ಅಮೇರಿಕದಲ್ಲಿ ಪೆನ್ರೋಸ್ ರೀಸರ್ಚ್ ಲ್ಯಾಬೋರೇಟರಿ ಆಫ್ ದ ಫಿಲಡೆಲ್ಫಿಯಾ ಝೂ ತುಲನಾತ್ಮಕ ರೋಗಶಾಸ್ತ್ರದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತದೆ. ವರ್ಲ್ಡ್ ಅಸೋಸಿಯೇಷನ್ ಆಫ್ ಝೂಸ್ ಅಂಡ್ ಅಕ್ವೇರಿಯಮ್ಸ್ ತನ್ನ ಮೊದಲ ಸಂರಕ್ಷಣಾ ಕಾರ್ಯತಂತ್ರವನ್ನು 1993ರಲ್ಲಿ ಪ್ರಕಟಿಸಿತಲ್ಲದೇ, 2004ರ ನವೆಂಬರ್ನಲ್ಲಿ ಅದು ಒಂದು ಹೊಸದಾದ ಕಾರ್ಯತಂತ್ರವನ್ನು ಅಳವಡಿಸಿಕೊಂಡಿತಲ್ಲದೇ, ಅದು ಇಪ್ಪತ್ತೊಂದನೇ ಶತಮಾನದ ಮೃಗಾಲಯಗಳ ಗುರಿಗಳು ಮತ್ತು ಉದ್ದಿಷ್ಟಕಾರ್ಯವನ್ನು ತಿಳಿಸುತ್ತದೆ.[26]
ನಶಿಸಿಹೋಗುತ್ತಿರುವ ಪ್ರಬೇಧಗಳ ಸಂತಾನವೃದ್ಧಿಯನ್ನು ಸಹಕಾರಿ ಸಂತಾನವೃದ್ಧಿ ಕಾರ್ಯಕ್ರಮಗಳ ಮೂಲಕ ಸಮನ್ವಯಗೊಳಿಸಲಾಗುತ್ತದೆ. ಇದು ಅಂತಾರಾಷ್ಟ್ರೀಯ ಪ್ರಾಣಿಗಳ ವಂಶಾವಳಿ ಪುಸ್ತಕಗಳು ಮತ್ತು ಸಹಭಾಗಿದಾರರನ್ನು ಹೊಂದಿರುತ್ತದೆ. ಇವರು ಜಾಗತಿಕ ಅಥವಾ ಪ್ರಾದೇಶಿಕ ದೃಷ್ಟಿಕೋನದಿಂದ ಪ್ರತ್ಯೇಕ ಪ್ರಾಣಿಗಳು ಮತ್ತು ಸಂಸ್ಥೆಗಳ ಪಾತ್ರಗಳನ್ನು ಮೌಲ್ಯೀಕರಿಸುತ್ತಾರೆಯಲ್ಲದೇ, ನಶಿಸಿಹೋಗುತ್ತಿರುವ ಪ್ರಬೇಧಗಳ ಸಂರಕ್ಷಣೆಯನ್ನು ಮಾಡುವುದಕ್ಕೋಸ್ಕರ ಜಗತ್ತಿನಾದ್ಯಂತ ಅನೇಕ ಪ್ರಾದೇಶಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.[27]
ಮೃಗಾಲಯಗಳು ತಮ್ಮ ಮುಖ್ಯ ಉದ್ದೇಶ ಸಂಶೋಧನೆಗಳನ್ನು ಕೈಗೊಳ್ಳುವುದು ಮತ್ತು ಪ್ರಾಣಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನೆರವಾಗುವುದು ಎಂದು ಹೇಳುತ್ತವೆ. ಪ್ರಾಣಿ ಹಕ್ಕುಗಳ ಸಂಸ್ಥೆಯಾದ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ಯು ಮೃಗಾಲಯಗಳ ಈ ನಿಲುವಿನ ವಿರುದ್ಧ ವಾದಿಸುತ್ತದೆ, ಮತ್ತು ಪ್ರಾಣಿಸಂಗ್ರಹಾಲಯಗಳ ಬಹುತೇಕ ಸಂಶೋಧನೆಯು ಸೆರೆಯಲ್ಲಿ ಪ್ರಾಣಿಗಳ ಸಂತಾನವೃದ್ಧಿ ಮಾಡುವುದು ಹಾಗೂ ಕಾಪಾಡುವುದಕ್ಕೆ ಹೊಸ ವಿಧಾನಗಳನ್ನು ಪತ್ತೆಹಚ್ಚವುದಾಗಿದೆ ಎಂದು ಆರೋಪಿಸಿತು.[28] ಪ್ರಾಣಿಗಳ ನೈತಿಕ ಹಕ್ಕಿಗಾಗಿನ ಆಕ್ಸ್ಫರ್ಡ್ ಕೇಂದ್ರದ ನಿರ್ದೇಶಕರಾದ ಆಂಡ್ರೂ ಲಿನ್ಜೇ, ಪ್ರಾಣಿ ಸಂಗ್ರಹಾಲಯಗಳು “ಸಂರಕ್ಷಣೆಗಾಗಿ ಸಣ್ಣ ಪ್ರಮಾಣದ ಕೊಡುಗೆ”ಯನ್ನು ನೀಡುತ್ತವೆ ಎಂದು ವಾದಿಸಿದ್ದಾರೆ.[29]
ಕಾಡಿನಲ್ಲಿ ಪ್ರತಿಯೊಂದು ಪ್ರಾಣಿಯನ್ನು ಹಿಡಿಯುವ ಪ್ರಕ್ರಿಯೆಯಲ್ಲಿ ಅನೇಕ ಇತರ ಪ್ರಾಣಿಗಳನ್ನು ಕೂಡ ಕೊಲ್ಲಲಾಗುತ್ತದೆ. ಹೀಗಾಗಿ, ಪ್ರಾಣಿಸಂಗ್ರಹಾಲಯಗಳಲ್ಲಿಯೇ ಪ್ರಾಣಿಗಳನ್ನು ಬೆಳೆಸುವ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲಾಗುತ್ತದೆ.[23] ಲಿಯೋನ್ನ ಜೀನ್ ಮೌಲಿನ್ ಯೂನಿವರ್ಸಿಟಿಯ ಎರಿಕ್ ಬ್ಯಾರಟೇ ಮತ್ತು ಎಲಿಸಬೆತ್ ಹಾರ್ಡೂಯಿನ್ ಫ್ಯೂಜಿಯರ್ ಅವರು ಪ್ರಾಣಿಗಳ ಒಟ್ಟಾರೆ “ಹೊರಹೋಗುವ ಮತ್ತು ಬದಲಿಗೆ ಒಳಬರುವ ಪ್ರಮಾಣ” ಒಂದು ವರ್ಷದ ಅವಧಿಯಲ್ಲಿ ಐದನೇ ಒಂದರಿಂದ ನಾಲ್ಕನೇ ಒಂದರವರೆಗೆ ಆಗಿದ್ದು, ನಾಲ್ಕನೇ ಮೂರರಷ್ಟು ಕೋತಿ ಜಾತಿಯ ಪ್ರಾಣಿಗಳು ಪಂಜರದಲ್ಲಿ ಹಾಕಿದ ಮೊದಲ ಇಪ್ಪತ್ತು ತಿಂಗಳುಗಳಲ್ಲಿಯೇ ಸಾವಿಗೀಡಾಗುತ್ತವೆ ಎಂದು ಹೇಳುತ್ತಾರೆ. ಹೆಚ್ಚಿನ ಮರಣದ ಪ್ರಮಾಣವು “ಭಾರಿ ಪ್ರಮಾಣದ ಆಮದು/ತರಿಸುವಿಕೆಗೆ" ಕಾರಣವೆಂದು ಅವರು ಹೇಳುತ್ತಾರೆ".[30]
ಸೆರೆಯಲ್ಲಿ ಪ್ರಾಣಿಗಳ ಸಂತಾನವೃದ್ಧಿಗೆ ಪ್ರತಿಕೂಲವಾದ ಅಂಶವೆಂದರೆ, ಪ್ರತಿ ವರ್ಷ ಸಾವಿರಾರು ಪ್ರಾಣಿಗಳನ್ನು “ಹೆಚ್ಚುವರಿ ಪಟ್ಟಿಗಳಲ್ಲಿ" ಇರಿಸಲಾಗುತ್ತದೆ. ಅವುಗಳನ್ನು ಸರ್ಕಸ್ಗಳು, ಪ್ರಾಣಿಗಳ ವ್ಯಾಪಾರಿಗಳು, ಹರಾಜುಗಳು, ಸಾಕುಪ್ರಾಣಿ ಒಡೆಯರು ಮತ್ತು ಕ್ರೀಡಾ ಫಾರ್ಮ್ಗಳಿಗೆ ಮಾರಾಟ ಮಾಡಲಾಗುತ್ತದೆ. ಸ್ಯಾನ್ ಜೋಸ್ ಮರ್ಕ್ಯೂರಿ ನ್ಯೂಸ್ ಎರಡು ವರ್ಷಗಳ ಅಧ್ಯಯನವೊಂದನ್ನು ಕೈಗೊಂಡು, ನಡೆಸಿದ ಸಮೀಕ್ಷೆಯ ಪ್ರಕಾರ, 1992 ರಿಂದ 1998ರ ವರೆಗೆ ಅಮೇರಿಕಾದಲ್ಲಿನ ಅಂಗೀಕೃತ ಪ್ರಾಣಿಸಂಗ್ರಹಾಲಯವನ್ನು ತೊರೆದ 19,361 ಸಸ್ತನಿಗಳಲ್ಲಿ 7,420 ಸಸ್ತನಿಗಳು ವ್ಯಾಪಾರಿಗಳು, ಹರಾಜುಗಳು, ಬೇಟೆಯ ಹುಲ್ಲುಗಾವಲುಗಳು, ಮನ್ನಣೆ ಪಡೆದಿರದ ಪ್ರಾಣಿಸಂಗ್ರಹಾಲಯಗಳು ಹಾಗೂ ವ್ಯಕ್ತಿಗಳು, ಮತ್ತು ಗೇಮ್ ಫಾರ್ಮ್ಗಳಿಗೆ ತೆರಳಿದವು.[31]
ಪ್ರಾಣಿಸಂಗ್ರಹಾಲಯಗಳು ಎನಿಮಲ್ ಫೈಂಡರ್ಸ್ ಗೈಡ್ ನಲ್ಲಿ ಹೆಚ್ಚುವರಿ ಪ್ರಾಣಿಗಳು ಇವೆಯೆಂದು ಜಾಹೀರಾತು ನೀಡುತ್ತವೆ. ಇದು ಬೇಟೆಯ ಹುಲ್ಲುಗಾವಲುಗಳ ಮಾಲೀಕರು ಮಾರಾಟ ಮತ್ತು ಹರಾಜುಗಳ ನೋಟೀಸ್ಗಳನ್ನು ಹಾಕುವ ವಾರ್ತಾಪತ್ರವಾಗಿದೆ.[32] ಟ್ರೋಫಿಗಳೊಂದಿಗೆ ಉತ್ತಮವಾಗಿ ಕಾಣಿಸಿಕೊಳ್ಳಲು ಅನೇಕ ಬೇಟೆಗಾರರು ಕೊಲ್ಲುವುದಕ್ಕಾಗಿ ಪ್ರಾಣಿಗಳನ್ನು ಪ್ರಾಣಿಸಂಗ್ರಹಾಲಯದಿಂದ ಆಯ್ಕೆ ಮಾಡುತ್ತಾರೆ ಎಂದು ಮ್ಯಾಥ್ಯೂ ಸ್ಕಲ್ಲೀ ಬರೆಯುತ್ತಾರೆ; ಪ್ರಾಣಿಸಂಗ್ರಹಾಲಯದ ಸಿಂಹದ ಕೇಸರವು ಕಾಡು ಸಿಂಹದ ಕೇಸರಕ್ಕಿಂತ ಸ್ವಚ್ಛವಾಗಿರುವ ಪ್ರವೃತ್ತಿಯಿರುತ್ತದೆ. ಒಂದು ಪ್ರಕರಣದಲ್ಲಂತೂ ವಿಲಿಯಂ ಹ್ಯಾಂಪ್ಟನ್ ಎಂಬ ಪ್ರಾಣಿಸಂಗ್ರಹಾಲಯದ ಮಾಲೀಕನು ಪ್ರಾಣಿಗಳನ್ನು ಖರೀದಿಸಿದ್ದಲ್ಲದೇ ಅವುಗಳನ್ನು ವ್ಯವಸ್ಥಿತವಾಗಿ ಬಲಿಕೊಟ್ಟು ಅವುಗಳ ಚರ್ಮ, ತಲೆ ಮತ್ತು ತೊಗಲನ್ನು ಟ್ರೋಫಿಗಳ ರೀತಿಯಲ್ಲಿ ಮಾರಾಟ ಮಾಡುತ್ತಿದ್ದನು ಎಂಬುದು ಕಂಡುಬಂದಿದೆ.[33]
ಆಗಾಗ್ಗೆ ಸಂತಾನವೃದ್ಧಿ ಮಾಡುವ ಜಿಂಕೆ, ಹುಲಿ, ಮತ್ತು ಸಿಂಹಗಳಂತಹ ಪ್ರಾಣಿಗಳನ್ನು ಅವುಗಳ ಮಾಂಸಕ್ಕಾಗಿ ಕೊಲ್ಲಲಾಗುತ್ತದೆ. ನ್ಯೂರೆಂಬರ್ಗ್ ಪ್ರಾಣಿಸಂಗ್ರಹಾಲಯದ ಉಪ ನಿರ್ದೇಶಕ, ಹೆಲ್ಮಟ್ ಮಾಗ್ಡೆಫ್ರಾವ್, ಅವರು “ನಾವೊಂದು ವೇಳೆ, ಪ್ರಾಣಿಗಳಿಗಾಗಿ ಉತ್ತಮ ಮನೆಗಳನ್ನು ಕಂಡುಕೊಳ್ಳದಿದ್ದರೆ, ನಾವು ಅವುಗಳನ್ನು ಆಹಾರಕ್ಕಾಗಿ ಕೊಲ್ಲುತ್ತೇವೆ" ಎಂಬುದಾಗಿ ಹೇಳಿದ್ದಾರೆ.[34] ದುರ್ಬಲ ಸ್ಥಿತಿಯಲ್ಲಿರುವ ಇತರ ಕೆಲವೊಂದು ಪ್ರಾಣಿಗಳನ್ನು ಸಣ್ಣ ಪ್ರಾಣಿಸಂಗ್ರಹಾಲಯಗಳಿಗೆ ಮಾರಲಾಗುತ್ತದೆ. ಎಡಿಥ್ ಎಂಬ ಚಿಂಪಾಂಜಿಯು ಟೆಕ್ಸಾಸ್ನ ಅಮರಿಲ್ಲೋ ವೈಲ್ಡ್ ಲೈಫ್ ರೆಫ್ಯೂಜ್ ಎಂಬ ರಸ್ತೆಬದಿಯ ಪ್ರಾಣಿಸಂಗ್ರಹಾಲಯದ ಕಾಂಕ್ರೀಟ್ ಹೊಂಡವೊಂದರಲ್ಲಿ ಕಂಡುಬಂದ ಉದಾಹರಣೆಯನ್ನು ಪೆಟಾ ಎತ್ತಿತೋರಿಸುತ್ತದೆ. ಅದು ಸೈಂಟ್ ಲೂಯೀಸ್ ಪ್ರಾಣಿಸಂಗ್ರಹಾಲಯದಲ್ಲಿ ಜನಿಸಿತ್ತಾದರೂ, ಅದರ ಮೂರನೇ ವರ್ಷದ ನಂತರ ಅದನ್ನು ಮಾರಾಟ ಮಾಡಲಾಯಿತು, ಮತ್ತು ಅದನ್ನು ರಸ್ತೆಬದಿಯ ಪ್ರಾಣಿಸಂಗ್ರಹಾಲಯದಲ್ಲಿ ಇರಿಸುವುದಕ್ಕಿಂತ ಮುಂಚೆ 37 ವರ್ಷಗಳಲ್ಲಿ ಐದು ಇತರ ಸೌಲಭ್ಯಗಳಲ್ಲಿ ಅದನ್ನು ಇರಿಸಿಕೊಳ್ಳಲಾಗಿತ್ತು.[35]
ಮಾರ್ಚ್ 2008 ರಲ್ಲಿ, ಬರ್ಲಿನ್ನಲ್ಲಿನ ನೂರಾರು ಪ್ರಾಣಿಸಂಗ್ರಹಾಲಯಗಳಿಂದ ಸುಮಾರು 23,000 ರಷ್ಟು ಪ್ರಾಣಿಗಳು ಕಾಣೆಯಾಗಿವೆ ಎಂದು ಆರೋಪಿಸಲಾಗಿತ್ತಾದರೂ, ಈ ಮಧ್ಯೆ ಕೆಲವೊಂದು ಆರೋಪಗಳು ಈ ಪ್ರಾಣಿಗಳನ್ನು ಆಹಾರಕ್ಕಾಗಿ ಕಸಾಯಿಖಾನೆಗೆ ರವಾನಿಸಲಾಗಿದೆ ಎಂದು ಕೇಳಿಬಂದವು, ಹಾಗೆಯೇ, ಕೆಲವೊಂದು ಹುಲಿಗಳು ಮತ್ತು ಚಿರತೆಗಳನ್ನು ಸಾಂಪ್ರದಾಯಿಕ ಚೈನೀಸ್ ಔಷಧೋಪಚಾರಕ್ಕಾಗಿ ಚೀನಾ ದೇಶಕ್ಕೆ ರವಾನಿಸಲಾಯಿತು ಎಂದು ಆರೋಪಗಳು ಕೇಳಿಬಂದವು. ಗ್ರೀನ್ ಪಕ್ಷದ ರಾಜಕಾರಣಿ ಕ್ಲೌಡಿಯಾ ಹ್ಯಾಮರ್ಲಿಂಗ್ ಅವರು ನಾಲ್ಕು ಏಶಿಯನ್ ಕಪ್ಪು ಕರಡಿಗಳು ಮತ್ತು ನೀರ್ಕುದುರೆಗಳನ್ನು ಬರ್ಲಿನ್ನಿಂದ ಹೊಸ ಪ್ರಾಣಿಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋಗಲಾಗಿತ್ತು, ಆದರೆ ಅವುಗಳನ್ನು ಬೆಲ್ಜಿಯಂನ ವೊರ್ಟೆಲ್ಗೆ ಬದಲಾಗಿ ಬೇರೆ ಕಡೆ ರವಾನಿಸಲಾಗಿತ್ತು, ಆದರೆ ಅದರ ಪಾಲಕರ ಪ್ರಕಾರ, ಅಲ್ಲಿ ಪ್ರಾಣಿಸಂಗ್ರಹಾಲಯವಿಲ್ಲ ಅದರ ಬದಲಾಗಿ ಒಂದು ಕಸಾಯಿಖಾನೆ ಇರುವುದರ ಬಗ್ಗೆ ಅವರಲ್ಲಿ ಸಾಕ್ಷಿಯಿದೆಯೆಂದು ಹೇಳಿದ್ದಾರೆ. ಪ್ರಾಣಿಸಂಗ್ರಹಾಲಯದ ನಿರ್ದೇಶಕರಾದ, ಬರ್ನಾರ್ಡ್ ಬ್ಲಾಸ್ಜ್ಕೀವಿಟ್ಜ್ ಅವರು, ಆರೋಪಗಳೆಲ್ಲಾ “ಸುಳ್ಳು, ಅಸತ್ಯವಾದವುಗಳೆಂದು ತಿಳಿಸಿದ್ದಾರೆ”.[34]
ಪ್ರಾಣಿಗಳ ಸ್ಥಿತಿಗತಿಗಳು ವ್ಯಾಪಕವಾಗಿ ಬದಲಾಗುತ್ತವೆ, ವಿಶೇಷವಾಗಿ ಸಣ್ಣ ಅಥವಾ ಯಾವುದೇ ನಿರ್ಬಂಧಗಳಿಲ್ಲದ ದೇಶಗಳಲ್ಲಿನ ಪ್ರಾಣಿಸಂಗ್ರಹಾಲಯಗಳಲ್ಲಿ. ಬಹುಪಾಲು ದೊಡ್ಡದಾದ ಲಾಭ ನಿರಪೇಕ್ಷ ಮತ್ತು ವೈಜ್ಞಾನಿಕ ಆಧಾರಿತ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಪ್ರಾಣಿಗಳ ವಾಸದ ಆವರಣವನ್ನು ಸುಧಾರಿಸುವುದಕ್ಕಾಗಿ ಕೆಲಸ ಮಾಡುವವಾದರೂ, ಗಾತ್ರ ಮತ್ತು ಖರ್ಚುವೆಚ್ಚಗಳಂತಹ ನಿರ್ಬಂಧಗಳು, ಡಾಲ್ಫಿನ್ಗಳು ಮತ್ತು ತಿಮಿಂಗಿಲಗಳಂತಹ ಕೆಲವು ಪ್ರಬೇಧಗಳಿಗೆ ಆದರ್ಶ ಪಂಜರದ ವಾತಾವರಣವನ್ನು ಸೃಷ್ಟಿಸುವುದನ್ನು ಕಷ್ಟಸಾಧ್ಯವಾಗಿಸಿದೆ.[36][37]
ಪ್ರಾಣಿಸಂಗ್ರಹಾಲಯಗಳಲ್ಲಿ ವಾಸಿಸುವ ಪ್ರಾಣಿಗಳನ್ನು ಜೀವಂತ ಪ್ರಾಣಿಗಳ ಬದಲಾಗಿ ಕಾತರದಿಂದ ನೋಡುವ ವಸ್ತುಗಳಂತೆ ಪರಿಗಣಿಸಲಾಗುತ್ತದೆ ಮತ್ತು ಅವುಗಳನ್ನು ಮುಕ್ತ ವಾತಾವರಣದಿಂದ ಪಂಜರಕ್ಕೆ ರವಾನಿಸಿದಾಗ ಅವುಗಳು ಬುದ್ಧಿವಿಕಲ್ಪಕ್ಕೆ ಒಳಗಾಗುವುದಲ್ಲದೇ, ತಮ್ಮ ಜೀವನಕ್ಕೆ ಮನುಷ್ಯರನ್ನು ಅವಲಂಬಿಸಬೇಕಾಗುತ್ತದೆ ಎಂದು ಕೆಲವು ಟೀಕಾಕಾರರು ವಾದಿಸಿದ್ದಾರೆ.[38]
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ನಾಲ್ಕು ದಶಕಗಳ ಅವಧಿಯವರೆಗೆ ಕೈಗೊಂಡ ಅಧ್ಯಯನದ ಪ್ರಕಾರ, ಹಿಮಕರಡಿ, ಸಿಂಹಗಳು, ಹುಲಿಗಳು ಮತ್ತು ಚಿರತೆಗಳಂತಹ ಪ್ರಾಣಿಗಳು ಸೆರೆಯಲ್ಲಿ ಹೆಚ್ಚಿನ ಒತ್ತಡಕ್ಕೊಳಗಾಗಿರುವುದು ಕಂಡುಬಂದಿದೆ.[39][40] ಅಮೇರಿಕಾದ ಪ್ರಾಣಿಸಂಗ್ರಹಾಲಯದಲ್ಲಿ ಪೆಟಾ ಕೈಗೊಂಡ ತನಿಖೆಯ ಪ್ರಕಾರ, ಅನೇಕ ಕರಡಿ ಪ್ರಬೇಧಗಳು ವೇಗವಾಗಿ ನಡೆದಾಡುವುದು, ವರ್ತುಲಾಕಾರದಲ್ಲಿ ನಡೆಯುವುದು, ಮತ್ತು ಹಿಂದೆಮುಂದೆ ತೂಗಾಡುವುದು ಅಥವಾ ಅವುಗಳ ತಲೆಯನ್ನು ಹೊರಳಿಸುವುದು ಸೇರಿದಂತೆ ನರಸಂಬಂಧಿ ಚಿತ್ತವಿಕೃತಿ, ರೂಢಮಾದರಿಯ ವರ್ತನೆಗಳಲ್ಲಿ ತೊಡಗಿದ್ದವೆಂದು ಕಂಡುಬಂದಿದೆ.[41] ಚೀನಾದ ಬ್ಯಾಡಲ್ಟಿಯರಿಂಗ್ ಸಫಾರಿ ಪಾರ್ಕ್ ಬಿಳಿ ಕರಡಿಗಳ ಜೊತೆಯೊಂದನ್ನು ತಿರುಗಲೂ ಸಾಧ್ಯವಾಗದಷ್ಟು ಅತೀ ಸಣ್ಣ ಪಂಜರದಲ್ಲಿಟ್ಟು ಪರೀಕ್ಷಿಸಿತು. ಆ ಎರಡು ಕರಡಿಗಳ ಪೈಕಿ ಒಂದು ಬುದ್ಧಿವಿಕಲ್ಪಕ್ಕೆ ಒಳಗಾಗಿತ್ತಲ್ಲದೇ, ಅದು ತನ್ನ ತಲೆಯನ್ನು ಅಲುಗಾಡಿಸುತ್ತಾ ಮತ್ತು ಪಂಜರದ ಅಂಚುಗಳಿಗೆ ತಾಗಿಸುತ್ತಾ ಸಮಯವನ್ನು ಕಳೆಯುತ್ತಿತ್ತು ಎಂದು 2008ರ ಜನವರಿಯಲ್ಲಿ ಡೈಲಿ ಮೈಲ್ ವರದಿ ಮಾಡಿತು.[42]
ಚೀನಾದ ಬ್ಯಾಡಾಲ್ಟರಿಂಗ್ ಸಫಾರಿ ಪಾರ್ಕ್ನಲ್ಲಿ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡುವ ಭೇಟಿಕಾರರು ಜೀವಂತ ಆಡುಗಳನ್ನು ಸಿಂಹಗಳತ್ತ ಎಸೆಯಬಹುದಾಗಿತ್ತು ಮತ್ತು ಅದೇ ಆವರಣದಲ್ಲಿ ಅವುಗಳು ತಿನ್ನುವುದನ್ನು ನೋಡಬಹುದಾಗಿತ್ತು, ಅಥವಾ ಅಲ್ಲೇ ಸಮೀಪದಲ್ಲಿ £2ನಷ್ಟು ಮೌಲ್ಯಕ್ಕೆ ಸಮವಾದ ಬಿದಿರಿನ ಗೂಟಗಳಿಗೆ ಕಟ್ಟಿಹಾಕಿರುವ ಜೀವಂತ ಕೋಳಿಗಳನ್ನು ಖರೀದಿಸಿ ಸಿಂಹಗಳ ರೊಪ್ಪಗಳಲ್ಲಿ ತೂಗಾಡಿಸಬಹುದಾಗಿತ್ತು. ಭೇಟಿಕಾರರು ಸಿಂಹಗಳಿರುವ ಆವರಣದಲ್ಲಿ ಬಸ್ನಲ್ಲಿ ಪ್ರಯಾಣಿಸಿ ವಿಶೇಷವಾಗಿ ವಿನ್ಯಾಸಗೊಂಡ ದಾರಿಗಳಲ್ಲಿ ಸಂಚರಿಸುವ ಮೂಲಕ ಜೀವಂತ ಕೋಳಿಗಳನ್ನು ಸಿಂಹಗಳಿಗೆ ಎಸೆಯಬಹುದಾಗಿತ್ತು. ಆಗ್ನೇಯ ಚೀನಾದ ಸಮೀಪದ ಕ್ಸಿಯಾಂಗ್ಸೆನ್ ಬೀಯರ್ ಮತ್ತು ಟೈಗರ್ ಮೌಂಟೇನ್ ಗ್ರಾಮದಲ್ಲಿ ಭೇಟಿಕಾರರನ್ನು ವಿನೋದಗೊಳಿಸುವುದಕ್ಕಾಗಿ ಜೀವಂತ ದನಗಳು ಮತ್ತು ಹಂದಿಗಳನ್ನು ಹುಲಿಗಳಿಗೆ ಎಸೆಯಲಾಗುತ್ತದೆ.[42][43]
ಬೀಜಿಂಗ್ನ ಸಮೀಪದ ಕ್ವಿಂಗ್ಡಾವೋ ಪ್ರಾಣಿಸಂಗ್ರಹಾಲಯದಲ್ಲಿ, ಭೇಟಿಕಾರರು “ಆಮೆ ಆಕರ್ಷಣೆ” ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ. ಇಲ್ಲಿ, ಆಮೆಗಳ ಕುತ್ತಿಗೆಗೆ ರಬ್ಬರ್ ಬ್ಯಾಂಡ್ಗಳನ್ನು ಸುತ್ತಿ ಸಣ್ಣ ಕೋಣೆಗಳಲ್ಲಿ ಇಡಲಾಗುತ್ತದೆ, ಇದರಿಂದ ಆಮೆಗಳಿಗೆ ತಮ್ಮ ಕುತ್ತಿಗೆಗಳನ್ನು ಒಳಗೆಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಂತರ ಭೇಟಿ ನೀಡುವ ಜನರು ಅವುಗಳತ್ತ ನಾಣ್ಯಗಳನ್ನು ಎಸೆಯಲು ಪ್ರಾರಂಭಿಸುತ್ತಾರೆ. ನೀವೊಂದು ವೇಳೆ ಅವುಗಳಲ್ಲಿ ಒಂದಕ್ಕೆ ಹೊಡೆದು ಒಂದು ಬಯಕೆಯನ್ನು ಮಾಡಿದರೆ, ಅದೂ ಪೂರ್ಣಗೊಳ್ಳುತ್ತದೆ, ಈ ರೀತಿಯ ಕಥೆ ನಡೆಯುತ್ತದೆ.[42]
ಅಮೇರಿಕಾದಲ್ಲಿ, ಸಾರ್ವಜನಿಕವಾಗಿ ಯಾವುದೇ ಪ್ರಾಣಿಗಳ ಪ್ರದರ್ಶನವನ್ನು ನಿರ್ಬಂಧಿಸಲಾಗುವುದಲ್ಲದೇ, ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್, ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ, ಡ್ರಗ್ ಎನ್ಫೋರ್ಸ್ಮೆಂಟ್ ಏಜೆನ್ಸಿ, ಆಕ್ಯುಪೇಶನಲ್ ಸೇಫ್ಟಿ ಅಂಡ್ ಹೆಲ್ತ್ ಅಡ್ಮಿನಿಸ್ಟ್ರೇಷನ್, ಮತ್ತು ಇತರರಿಂದ ಪರಿಶೀಲಿಸಲ್ಪಡುತ್ತದೆ. ಅವುಗಳು ಪ್ರದರ್ಶಿಸುವ ಪ್ರಾಣಿಗಳಿಗೆ ಅನುಗುಣವಾಗಿ, ಎನ್ಡೇಂಜರ್ಡ್ ಸ್ಪೀಶೀಸ್ ಆಕ್ಟ್, ಆನಿಮಲ್ ವೆಲ್ಫೇರ್ ಆಕ್ಟ್, ಮೈಗ್ರೇಟರಿ ಬರ್ಡ್ ಟ್ರೀಟಿ ಆಕ್ಟ್ ಆಫ್ 1918, ಮತ್ತು ಇತರ ಕಾನೂನುಗಳ ಮೂಲಕ ಪ್ರಾಣಿಸಂಗ್ರಹಾಲಯಗಳ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತದೆ.[44] ಇದಕ್ಕೆ ಪೂರಕವಾಗಿ, ಉತ್ತರ ಅಮೇರಿಕಾದ ಪ್ರಾಣಿಸಂಗ್ರಹಾಲಯಗಳು ಅಸೋಸಿಯೇಶನ್ ಅಫ್ ಝೂಸ್ ಆಂಡ್ ಅಕ್ವೇರಿಯಮ್ಸ್ (ಎಝೆಡ್ಎ) ನ ಮಾನ್ಯತೆಯನ್ನು ಅನುಸರಿಸುವುದನ್ನು ಆಯ್ದುಕೊಳ್ಳಬಹುದು. ಮಾನ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ, ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣ, ನಿಧಿ ಸಂಗ್ರಹ, ಪ್ರಾಣಿಸಂಗ್ರಹಾಲಯಗಳಿಗೆ ಸಿಬ್ಬಂದಿ ನೇಮಕ ಮತ್ತು ಜಾಗತಿಕ ಸಂರಕ್ಷಣಾ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಎಝೆಡ್ಎ ಯ ಗುಣಮಟ್ಟವನ್ನು ಸಾಧಿಸಲು, ಪ್ರಾಣಿಸಂಗ್ರಹಾಲಯಗಳು ಅರ್ಜಿ ಮನವಿಗಳು ಮತ್ತು ತಪಾಸಣಾ ಪ್ರಕ್ರಿಯೆಗಳನ್ನು ಜಾರಿಗೊಳಿಸಬೇಕಾಗುತ್ತದೆ. ಈ ಕೆಳಗಿನ ಮೂವರು ತಜ್ಞರಿಂದ ತಪಾಸಣೆಗಳನ್ನು ನಡೆಸಲಾಗುತ್ತದೆ (ವಿಶಿಷ್ಟವಾದ ಒಬ್ಬ ತಜ್ಞ ಪಶುವೈದ್ಯ, ಒಬ್ಬ ತಜ್ಞ ಪ್ರಾಣಿಗಳ ಪಾಲಕ, ಮತ್ತು ಒಬ್ಬ ಪ್ರಾಣಿಸಂಗ್ರಹಾಲಯಗಳ ನಿರ್ವಹಣೆ ಹಾಗೂ ಕಾರ್ಯಚಟುವಟಿಕೆಗಳ ತಜ್ಞ) ಮತ್ತು ಮಾನ್ಯತೆಯನ್ನು ನೀಡುವ ಮೊದಲು ಹನ್ನೆರಡು ಮಂದಿ ತಜ್ಞರ ತಂಡವು ಅದನ್ನು ಪರಿಶೀಲಿಸುತ್ತದೆ. ಈ ಅಧಿಕೃತ ಮಾನ್ಯತಾ ಪ್ರಕ್ರಿಯೆಯು ಪ್ರತಿ ಐದು ವರ್ಷಕ್ಕೊಮ್ಮೆ ಪುನರಾವರ್ತನೆಗೊಳ್ಳುತ್ತದೆ. ಎಝೆಡ್ಎಯ ಅಂದಾಜಿನ ಪ್ರಕಾರ, 2007 ರ ಫೆಬ್ರವರಿಯ ಯುಎಸ್ಡಿಎ ಪರವಾನಗಿ ಪ್ರಕಾರ, ಸುಮಾರು 2,400 ಪ್ರಾಣಿ ಪ್ರದರ್ಶನ ವಸ್ತುಗಳು ಕಾರ್ಯಪ್ರವೃತ್ತಗೊಂಡಿವೆ; ಅವುಗಳಲ್ಲಿ ಕೇವಲ 10% ಕ್ಕಿಂತಲೂ ಕಡಿಮೆ ಸಂಖ್ಯೆಯ ಝೂಗಳು ಪ್ರಮಾಣೀಕೃತಗೊಂಡಿವೆ.[45]
1999 ರ ಏಪ್ರಿಲ್ನಲ್ಲಿ ಯುರೋಪಿಯನ್ ಒಕ್ಕೂಟವು ಪ್ರಾಣಿಸಂಗ್ರಹಾಲಯಗಳ ಸಂರಕ್ಷಣೆಯ ಪಾತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ನಿರ್ದೇಶನವನ್ನು ಪ್ರಕಟಿಸಿತಲ್ಲದೇ, ಸಂರಕ್ಷಣೆ ಮತ್ತು ಮಾಹಿತಿ ಶಿಕ್ಷಣದಲ್ಲಿ ಪಾಲ್ಗೊಳ್ಳುವುದು, ಮತ್ತು ಎಲ್ಲ ಸದಸ್ಯ ದೇಶಗಳು ತಮ್ಮ ಪರವಾನಗಿ ಮತ್ತು ಪರಿಶೀಲನೆಗಾಗಿ ವ್ಯವಸ್ಥೆಗಳನ್ನು ರಚಿಸಬೇಕೆಂಬ ಅಗತ್ಯತೆಯನ್ನು ಕೂಡ ಮಾಡಿತು.[46] 1981ರ ಝೂ ಲೈಸೆನ್ಸಿಂಗ್ ಕಾಯ್ದೆಯ ಮೂಲಕ ಯುಕೆಯಲ್ಲಿ ಪ್ರಾಣಿಸಂಗ್ರಹಾಲಯಗಳನ್ನು ನಿಯಂತ್ರಿಸಲಾಗುತ್ತದೆ. ಅದು 1984ರಲ್ಲಿ ಜಾರಿಗೆ ಬಂದಿತು. ಪ್ರಾಣಿ ಸಂಗ್ರಹಾಲಯವೆಂದರೆ, ಸರ್ಕಸ್ ಮತ್ತು ಸಾಕುಪ್ರಾಣಿ ಅಂಗಡಿಗಳ ಹೊರತಾಗಿ, “ಪ್ರದರ್ಶನಕ್ಕಾಗಿ ಕಾಡುಪ್ರಾಣಿಗಳನ್ನು ಇಡಲಾಗುವ ವ್ಯವಸ್ಥೆಯಾಗಿದ್ದು, ಸಾರ್ವಜನಿಕರು ಅಲ್ಲಿಗೆ, ಅನುಕ್ರಮವಾದ ಹನ್ನೆರಡು ತಿಂಗಳುಗಳ ಅವಧಿಯಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚಿನ ದಿನಗಳು ಶುಲ್ಕ ಅಥವಾ ಶುಲ್ಕರಹಿತವಾಗಿ ಪ್ರವೇಶಿಸಬಹುದಾದ ಅನುಮೋದಿತ ವ್ಯವಸ್ಥೆ”. ಎಲ್ಲ ಪ್ರಾಣಿಸಂಗ್ರಹಾಲಯಗಳು ಪರಿಶೀಲನೆ ಮತ್ತು ಪರವಾನಗಿ ಪಡೆದಿರಬೇಕು, ಮತ್ತು ಪ್ರಾಣಿಗಳನ್ನು ಇರಿಸುವ ಆವರಣಗಳಲ್ಲಿ, ಅವುಗಳು ಸಾಮಾನ್ಯ ನಡವಳಿಕೆಯನ್ನು ವ್ಯಕ್ತಪಡಿಸಲು ಅನುವಾಗುವಂತಹ ಸೂಕ್ತ ಪರಿಸರವನ್ನು ಒದಗಿಸಬೇಕು.[46]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.