![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3a/E._coli_Bacteria_%25287316101966%2529.jpg/640px-E._coli_Bacteria_%25287316101966%2529.jpg&w=640&q=50)
ಬ್ಯಾಕ್ಟೀರಿಯ
From Wikipedia, the free encyclopedia
ಬ್ಯಾಕ್ಟೀರಿಯ ಬೀಜಕಣವಿಲ್ಲದ ಒಂದೇ ಜೀವಕೋಶವುಳ್ಳ, ಸೂಕ್ಷ್ಮ ಜೀವಿಗಳ ಒಂದು ವರ್ಗ. ಬ್ಯಾಕ್ಟೀರಿಯಗಳು ವರ್ತುಲಾಕಾರ ಅಥವಾ ದಂಡಾಕಾರದಲ್ಲಿದ್ದು ಸುಮಾರು ೦.೫ - ೫ ಮೈಕ್ರಾನ್ಗಳಷ್ಟು ಉದ್ದವಿರುತ್ತವೆ. ಬ್ಯಾಕ್ಟೀರಿಯಗಳ ಅಧ್ಯಯನಕ್ಕೆ "ಬ್ಯಾಕ್ಟೀರಿಯ ವಿಜ್ಞಾನ" ಎನ್ನುತ್ತಾರೆ.
![Thumb image](http://upload.wikimedia.org/wikipedia/commons/thumb/3/3a/E._coli_Bacteria_%287316101966%29.jpg/640px-E._coli_Bacteria_%287316101966%29.jpg)
ಪರಿಸರದ ಎಲ್ಲ ವಾತಾವರಣಗಳಲ್ಲಿಯೂ ವಿವಿಧ ರೀತಿಯ ಬ್ಯಾಕ್ಟೀರಿಯಗಳು ಇರುತ್ತವೆ. ನೀರಿನಲ್ಲಿ, ಮಣ್ಣಿನಲ್ಲಿ, ಗಾಳಿಯಲ್ಲಿ - ಅಷ್ಟಲ್ಲದೆ ಸಲ್ಫ್ಯೂರಿಕ್ ಆಮ್ಲ ಮತ್ತು ವಿಕಿರಣಶೀಲ ವಸ್ತುಗಳ ಒಳಗೆಯೂ ಬ್ಯಾಕ್ಟೀರಿಯಗಳು ಕಂಡುಬರುತ್ತವೆ. ಸಾಧಾರಣವಾಗಿ, ಒಂದು ಗ್ರಾಂ ಮಣ್ಣಿನಲ್ಲಿ ಸುಮಾರು ೧೦೦೦ ಕೋಟಿ, ಹಾಗೂ ಮಿ.ಲೀ. ಸಮುದ್ರ ನೀರಿನಲ್ಲಿ ಒಂದು ಲಕ್ಷ ಬ್ಯಾಕ್ಟೀರಿಯಗಳು ಇರುತ್ತವೆ.
ಮಾನವರ ದೇಹದ ಎಲ್ಲ ಭಾಗಗಳಲ್ಲಿಯೂ - ಮುಖ್ಯವಾಗಿ ಬಾಯಿ, ಚರ್ಮ, ಹಾಗೂ ಜೀರ್ಣಾಂಗಗಳಲ್ಲಿ - ಬ್ಯಾಕ್ಟೀರಿಯಗಳು ಕಂಡುಬರುತ್ತವೆ.[1] ಮಾನವರ ಆರೋಗ್ಯದ ದೃಷ್ಟಿಯಿಂದ ಬ್ಯಾಕ್ಟೀರಿಯಗಳ ಪಾತ್ರ ಗಮನಾರ್ಹವಾದದ್ದು - ಕೆಲವು ರೀತಿಯ ಬ್ಯಾಕ್ಟೀರಿಯಗಳು ಮಾನವ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ,[2] ಇನ್ನು ಕೆಲವು ಮಾನವರಲ್ಲಿ ಅನೇಕ ರೀತಿಯ ರೋಗಗಳಿಗೆ ಕಾರಣವಾಗಿವೆ. ಚಾರಿತ್ರಿಕವಾಗಿ, ಕುಷ್ಠ, ಪ್ಲೇಗ್ ಮೊದಲಾದ ರೋಗಗಳಿಗೆ ಕಾರಣವಾಗುವ ಮೂಲಕ ಬ್ಯಾಕ್ಟೀರಿಯಗಳು ಅಪಾರ ಹಾನಿಯನ್ನೂ ತಂದೊಡ್ಡಿವೆ. ಆಂಟಿಬಯಾಟಿಕ್ಗಳ ಆವಿಷ್ಕಾರದ ನಂತರ ಬ್ಯಾಕ್ಟೀರಿಯಗಳ ರೋಗಕಾರಕ ಗುಣಗಳನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯುವಲ್ಲಿ ಸಫಲತೆ ದೊರಕಿದೆ.