ಪ್ರೋಟೀನ್ ಜೈವಿಕ ಸಂಯೋಜನೆ
From Wikipedia, the free encyclopedia
ಪ್ರೋಟೀನ್ ಜೈವಿಕ ಸಂಯೋಜನೆಯು[ಟಿಪ್ಪಣಿ 1] ಜೀವಕೋಶಗಳು ಹೊಸ ಪ್ರೋಟೀನ್ಗಳನ್ನು ತಯಾರಿಸಿ, ಜೀವಕೋಶದ ಪ್ರೋಟೀನ್ಗಳು ಹಾಳಾಗುವುದು ಅಥವಾ ರಪ್ತಿನ ಮೂಲಕ ಕಳೆದು ಹೋದ ಪ್ರೋಟೀನ್ಗಳನ್ನು ಪಡೆಯುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಕ್ರಿಯೆ. ಅನುವಾದ, ರೈಬೋಸೋಮ್ಗಳಿಂದ ಅಮಿನೊ ಆಮ್ಲ ಜೊತೆಗೂಡಿಸುವುದು, ಮೆಸೆಂಜರ್ ಆರ್ಎನ್ಎ (ಎಂಆರ್ಎನ್ಎ) ಉತ್ಪಾದನೆ, ಟ್ರಾನ್ಸ್ಫರ್ ಆರ್ಎನ್ಎ (ಟಿಆರ್ಎನ್ಎ) ಅಮಿನೊಅಸಿಲಾಗಿಸುವುದು [ಟಿಪ್ಪಣಿ 2], ಅನುವಾದದ ಜೊತೆಗೆ ರವಾನಿಸುವುದು ಮತ್ತು ಅನುವಾದ ನಂತರದ ಮಾರ್ಪಾಟುಗಳು ಜೈವಿಕ ಸಂಯೋಜನೆಯ ದಾರಿಯಲ್ಲಿನ ಅಗತ್ಯ ಭಾಗಗಳು. ಪ್ರೋಟೀನ್ ಜೈವಿಕ ಸಂಯೋಜನೆ ಹಲವು ಹೆಜ್ಜೆಗಳಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಟ್ಟಿದೆ. ಮೂಲಭೂತವಾಗಿ ಲಿಪ್ಯಂತರ (ಡಿಎನ್ಎ ಪಡಿಯಚ್ಚು ಬಳಸಿ ಆರ್ಎನ್ಎ ಸಂಯೋಜನೆ ವಿದ್ಯಮಾನ) ಮತ್ತು ಅನುವಾದ (ಆರ್ಎನ್ಎಯಿಂದ ಅಮಿನೊ ಆಮ್ಲ ಜೋಡಿಸುವ ವಿದ್ಯಮಾನ) ಈ ಹೆಜ್ಜೆಗಳು.
ಸಿಸ್ಟ್ರಾನ್ ಡಿಎನ್ಎ ಹಲವು ರೀತಿಯ ಆರ್ಎನ್ಎ ಮಧ್ಯಂತರಗಳಾಗಿ ಲಿಪ್ಯಂತರಗೊಳ್ಳುತ್ತದೆ. ಪಾಲಿಪೆಪ್ಟೈಡ್ ಸರಪಳಿಯನ್ನು ಸಂಯೋಜಿಸಲು ಪಡಿಯಚ್ಚಾಗಿ ಅದರ ಕೊನೆಯ ಆವೃತ್ತಿಯು ಬಳಸಲ್ಪಡುತ್ತದೆ. ವಂಶವಾಹಿಗಳು ಪ್ರೋಟೀನ್ನನ್ನು ಎಂಆರ್ಎನ್ಎದಿಂದ ನೇರವಾಗಿ ಸಂಯೋಜಿಸ ಬಹುದು. ಪ್ರೋಟೀನ್ ಅಲ್ಪ ಕಾಲಾವಧಿಯಲ್ಲಿಯೇ ಅಥವಾ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗ ಬೇಕಾಗಿದ್ದಲ್ಲಿ ಅದರ ಪೂರ್ವವರ್ತಿ ತಯಾರಾಗುತ್ತದೆ. ಪ್ರೊಪ್ರೋಟೀನ್ ಒಂದು ಅಥವಾ ಹೆಚ್ಚು ತಡೆಹಿಡಿಯುವ ಅಥವಾ ಪ್ರತಿಬಂಧಕ ಪೆಪ್ಟೈಡ್ಗಳಿರುವ ಸಕ್ರಿಯವಲ್ಲದ ಪ್ರೋಟೀನ್. ಅನುವಾದ ನಂತರದ ಮಾರ್ಪಾಡಿನಲ್ಲಿ ಪ್ರೋಟೀಯೊಲೈಸಿಸ್ ಎಂದು ಕರೆಯಲಾದ ಪ್ರಕ್ರಿಯೆಯಲ್ಲಿ ಪ್ರತಿಬಂಧಕ ಸರಣಿ ತೆಗೆದು ಹಾಕಿದ ಮೇಲೆ ಪ್ರೋಟೀನ್ ಸಕ್ರಿಯವಾಗುತ್ತದೆ. ಪ್ರೊಪ್ರೋಟೀನ್ನಲ್ಲಿ ಪೊರೆಯ ಒಳಗೆ ಪ್ರವೇಶಿಸಲು ಅಥವಾ ಮೂಲಕ ಹಾಯಲು (ಅಂದರೆ ಸ್ರವಿಸಲು ಅವನ್ನು ಗುರಿ ಮಾಡಿಕೊಂಡಿರುವುದು) ಅಗತ್ಯವಾದ ನಿರ್ದಿಷ್ಟ ಸಂಕೇತ ಸರಣಿ (ಒಂದು ಎನ್-ಕೊನೆಯ ಸಂಕೇತ ಪೆಪ್ಟೈಡ್) ಇರುತ್ತದೆ[1]. ಸಂಕೇತ ಪೆಪ್ಟೈಡ್ ಎಂಡೊಪ್ಲಾಸ್ಮ ಜಾಲತಂತಿಯಲ್ಲಿ ಸೀಳಲ್ಪಡುತ್ತದೆ.[2] ಪ್ರೊಪ್ರೋಟೀನ್ನ ಮುಂಚಿನ ಘಟಕಗಳಲ್ಲಿ (ಪ್ರಿಪೊಪ್ರೋಟೀನ್ಗಳು) ಎರಡೂ ಸರಣಿಗಳು (ಪ್ರತಿಭಂದಕ ಮತ್ತು ಸಂಕೇತಗಳು) ಇನ್ನೂ ಇರುತ್ತವೆ.
ಪ್ರೋಟೀನ್ ಸಂಯೋಜನೆಯಲ್ಲಿ ಒಂದು ಸೂಕ್ತ ಚಾರ್ಜಾದ (ಟಿಆರ್ಎನ್ಎ ಪ್ರತಿಕೋಡಾನು ಅಣುವಿಗೆ ಸೂಕ್ತ ಅಮಿನೊ ಆಮ್ಲ ಅಂಟಿಕೊಳ್ಳುವುದು) ಅನುಕ್ರಮ ಟಿಆರ್ಎನ್ಎ ಅಣುಗಳನ್ನು ಎಂಆರ್ಎನ್ಎ ಅಣುಗಳ ಜೊತೆಗೆ ತರಲಾಗುತ್ತದೆ. ಚಾರ್ಜಾದ ಟಿಆರ್ಎನ್ಎ ಪ್ರತಿಕೋಡಾನಿಗೆ ಎಂಆರ್ಎನ್ಎ ಕೋಡಾನನ್ನು ಪ್ರತ್ಯಾಮ್ಲ ಜೋಡಿಯ (ಬೇಸ್ ಪೇರ್) ಮೂಲಕ ಹೊಂದಿಸಲಾಗುತ್ತದೆ. ನಂತರ ಅಮಿನೊ ಆಮ್ಲಗಳನ್ನು ಒಂದಕ್ಕೊಂದು ತಳಕು ಹಾಕಿಕೊಂಡು ಬೆಳೆಯುತ್ತಿರುವ ಪ್ರೋಟೀನ್ ಸರಪಳಿಯನ್ನು ಹಿಗ್ಗಿಸಲಾಗುತ್ತದೆ ಮತ್ತು ಅಮಿನೊ ಆಮ್ಲಗಳಿಲ್ಲದ ಟಿಆರ್ಎನ್ಎಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪೂರ್ಣ ಸಂಕೀರ್ಣ ಪ್ರಕ್ರಿಯೆಗಳನ್ನು ರೈಬೋಸೋಮ್ ಆರ್ಎನ್ಎ ಎಂದು ಕರೆಯಲಾದ ಎರಡು ಮುಖ್ಯ ಆರ್ಎನ್ಎ ಸರಪಳಿಗಳು ಮತ್ತು ೫೦ಕ್ಕೂ ಹೆಚ್ಚು ಬೇರೆ ಬೇರೆ ಪ್ರೋಟೀನ್ಗಳನ್ನು ಹೊಂದಿದ ರೈಬೋಸೋಮ್ಗಳು ನಡೆಸುತ್ತವೆ. ರೈಬೋಸೋಮ್ ಎಂಆರ್ಎನ್ಎ ಅಣುವಿನ ಒಂದು ತುದಿಗೆ ಅಂಟಿಕೊಳ್ಳುತ್ತದೆ ಮತ್ತು ಅದರ ಉದಕ್ಕೂ ಚಲಿಸುತ್ತದೆ, ಅಮಿನೊ ಆಮ್ಲಗಳ ಭಾರಹೊತ್ತ ಟಿಆರ್ಎನ್ಎ ಅಣುಗಳನ್ನು ಬಂಧಿಸುತ್ತದೆ ಮತ್ತು ಅಮಿನೊ ಆಮ್ಲಗಳನ್ನು ಜೋಡಿಸಿ ಹೊಸ ಪ್ರೋಟೀನ್ ಸರಣಿಯನ್ನು ರೂಪಿಸುತ್ತದೆ.[3]
ಪ್ರೋಕ್ಯಾರಿಯೋಟ್ ಮತ್ತು ಯೂಕ್ಯಾರಿಯೋಟ್ಗಳಲ್ಲಿನ ಪ್ರೋಟೀನ್ ಜೈವಿಕ ಸಂಯೋಜನೆ ನಡುವೆ ಹೋಲಿಕೆಗಳಿವೆಯಾದರೂ ಕೆಲವು ವ್ಯತ್ಯಾಸಗಳೂ ಇವೆ.