From Wikipedia, the free encyclopedia
ಗಿಂಕ್ಗೊ (ಗಿಂಕ್ಗೊ ಬಿಲೋಬ ; ಚೈನೀಸ್ ಮತ್ತು ಜಪಾನೀಸ್ನಲ್ಲಿ 銀杏, ಪಿನ್ಯಿನ್ ರೋಮನೀಕರಣ: ಯಿನ್ ಕ್ಸಿಂಗ್ , ಹೆಪ್ಬರ್ನ್ ರೋಮನೀಕರಣ: ಇಕೊ ಅಥವಾ ಗಿನ್ನನ್ ) ಬದುಕಿರುವ ಯಾವುದೇ ಹತ್ತಿರದ ಸಂಬಂಧಗಳಿಲ್ಲದ ಒಂದು ಭಿನ್ನ ಜಾತಿಯ ಮರವಾಗಿದೆ. ಗಿಂಗ್ಕೊ ಎಂದೂ ಉಚ್ಛರಿಸಲಾಗುವ ಇದನ್ನು ಆಡಿಯಾಂಟಮ್ ನ ನಂತರ ಮೈಡೆನ್ಹೇರ್ ಮರ ಎಂದೂ ಕರೆಯುತ್ತಾರೆ. ಗಿಂಕ್ಗೊವನ್ನು ಅದರ ಸ್ವಂತ ವಿಭಾಗ ಗಿಂಕ್ಗೊಫೈಟದಲ್ಲಿ ವರ್ಗೀಕರಿಸಲಾಗಿದೆ. ಇದು ಗಿಂಕ್ಗೋಪ್ಸಿಡ ವರ್ಗ, ಗಿಂಕ್ಗೋಲ್ಸ್ ಗಣ, ಗಿಂಕ್ಗೋಸಿಯೆ ವಂಶ, ಗಿಂಕ್ಗೊ ಜಾತಿಯನ್ನೊಳಗೊಂಡಿದೆ ಹಾಗೂ ಈ ಗುಂಪಿನಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಏಕೈಕ ಜಾತಿಯಾಗಿದೆ. ಇದು ಅಸ್ತಿತ್ವದಲ್ಲಿರುವ ಪಳೆಯುಳಿಕೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ, ಏಕೆಂದರೆ ಪ್ಲಿಯೊಸೀನ್ನ ನಂತರ G. ಬಿಲೋಬ ದ ಹೊರತು ಬೇರೆ ಯಾವುದೇ ಗಿಂಕ್ಗೋಲ್ಸ್ ಪಳೆಯುಳಿಕೆ ದಾಖಲೆಯಿಂದ ತಿಳಿದುಬರುವುದಿಲ್ಲ.[3][4]
ಶತಮಾನಗಳಿಂದ ಇದು ಅಳಿದುಹೋಗಿದೆಯೆಂದು ತಿಳಿಯಲಾಗಿತ್ತು. ಆದರೆ ಈಗ ಇದು ಎರಡು ಸಣ್ಣ ಪ್ರದೇಶಗಳಲ್ಲಿ ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತದಲ್ಲಿ ಮತ್ತು ಟಿಯಾನ್ ಮು ಶಾನ್ ರಿಸರ್ವ್ನಲ್ಲಿ ಬೆಳೆಯುತ್ತಿದೆ ಎಂಬುದು ತಿಳಿದುಬಂದಿದೆ. ಇತ್ತೀಚಿನ ಅಧ್ಯಯನಗಳು ಈ ಪ್ರದೇಶಗಳ ಗಿಂಕ್ಗೊ ಮರಗಳ ಹೆಚ್ಚಿನ ತಳೀಯ ಏಕರೂಪತೆಯನ್ನು ಸೂಚಿಸಿವೆ. ಇದು ಇವುಗಳ ನೈಸರ್ಗಿಕ ಮೂಲದ ವಿರುದ್ಧ ವಾದಿಸುತ್ತದೆ ಹಾಗೂ ಈ ಪ್ರದೇಶಗಳ ಗಿಂಕ್ಗೊ ಮರಗಳು ಚೈನೀಸ್ ಸನ್ಯಾಸಿಗಳಿಂದ ಸುಮಾರು 1,000 ವರ್ಷಗಳ ಅವಧಿಯಲ್ಲಿ ಬೆಳೆಸಲ್ಪಟ್ಟಿತ್ತು ಮತ್ತು ರಕ್ಷಿಸಲ್ಪಟ್ಟಿತ್ತು ಎಂದು ಹೇಳುತ್ತದೆ.[5] ಸ್ಥಳೀಯ ಗಿಂಕ್ಗೊ ಮರಗಳು ಅಸ್ತಿತ್ವದಲ್ಲಿದ್ದವೇ ಎಂಬುದನ್ನು ನಿಸ್ಸಂಧಿಗ್ಧವಾಗಿ ಪ್ರಮಾಣೀಕರಿಸಲಾಗಿಲ್ಲ.
ಇತರ ಸಸ್ಯ ಗುಂಪುಗಳೊಂದಿಗಿನ ಗಿಂಕ್ಗೊದ ಸಂಬಂಧದ ಬಗ್ಗೆ ಖಚಿತವಾಗಿ ತಿಳಿದಿಲ್ಲ. ಇದನ್ನು ಸಡಿಲವಾಗಿ ಸ್ಪರ್ಮಟೊಫೈಟ ಮತ್ತು ಪಿನೊಫೈಟ ವಿಭಾಗಗಳಲ್ಲಿ ಇರಿಸಲಾಗಿದೆ. ಆದರೆ ಇದರ ಬಗ್ಗೆ ಯಾವುದೇ ಒಮ್ಮತವಿಲ್ಲ. ಗಿಂಕ್ಗೊ ಬೀಜಗಳು ಅಂಡಾಶಯ ಪೊರೆಯಿಂದ ಆವರಿಸಲ್ಪಟ್ಟಿಲ್ಲದಿರುವುದರಿಂದ, ಇದನ್ನು ರೂಪ-ವೈಜ್ಞಾನಿಕವಾಗಿ ಜಿಮ್ನೊಸ್ಪರ್ಮ್ ಎಂದು ಪರಿಗಣಿಸಲಾಗುತ್ತದೆ. ಹೆಣ್ಣು ಗಿಂಕ್ಗೊ ಮರಗಳಿಂದ ಉತ್ಪತ್ತಿಯಾಗುವ ಏಪ್ರಿಕಾಟ್-ರೀತಿಯ ರಚನೆಗಳು ನಿಜವಾಗಿ ಹಣ್ಣುಗಳಲ್ಲದೆ ಬೀಜಗಳಾಗಿರುತ್ತವೆ. ಆ ಬೀಜವು ಮೃದು ಮತ್ತು ತಿರುಳಿರುವ ಭಾಗವನ್ನು (ಸಾರ್ಕೊಟೆಸ್ಟ) ಹಾಗೂ ಒಂದು ಗಟ್ಟಿಯಾಜ ಭಾಗವನ್ನು (ಸ್ಕ್ಲೀರೊಟೆಸ್ಟ) ಒಳಗೊಂಡಿರುವ ಕೋಶವನ್ನು ಹೊಂದಿರುತ್ತದೆ.
ಗಿಂಕ್ಗೊಗಳು ತುಂಬಾ ದೊಡ್ಡ ಮರಗಳಾಗಿದ್ದು, ಸಾಮಾನ್ಯವಾಗಿ 20–35 ಮೀ (66–115 ಅಡಿ)ನಷ್ಟು ಎತ್ತರವಿರುತ್ತವೆ. ಚೀನಾದಲ್ಲಿ ಕೆಲವು ಮಾದರಿಗಳು ಸುಮಾರು 50 ಮೀ (164 ಅಡಿ)ನಷ್ಟು ಉದ್ದಕ್ಕೂ ಬೆಳೆಯುತ್ತವೆ. ಈ ಮರವು ಒರಟಾದ ಕ್ರೌನ್(ಭೂಮಿಯಿಂದ ತುಸು ಮೇಲೆ ಮತ್ತು ಕೆಳಗೆ ಇರುವ ಭಾಗ)ಅನ್ನು ಹಾಗೂ ಉದ್ದನೆಯ, ಸ್ವಲ್ಪ ಮನಸೋಇಚ್ಛೆ ಬೆಳೆಯುವ ಕೊಂಬೆಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಆಳವಾಗಿ ಬೇರನ್ನು ಬಿಡುತ್ತವೆ ಹಾಗೂ ಗಾಳಿ ಮತ್ತು ಮಂಜಿನಿಂದ ಉಂಟಾಗಬಹುದಾದ ಹಾನಿಗೆ ಪ್ರತಿರೋಧವನ್ನು ಹೊಂದಿರುತ್ತದೆ. ಎಳೆಯ ಮರಗಳು ಹೆಚ್ಚಾಗಿ ಉದ್ದವಾಗಿ, ತೆಳ್ಳಗಿರುತ್ತವೆ ಮತ್ತು ಅಷ್ಟೊಂದು ಒತ್ತಾಗಿಲ್ಲದ ಕೊಂಬೆಗಳನ್ನು ಹೊಂದಿರುತ್ತವೆ; ಮರವು ಬೆಳೆದಂತೆ ಕ್ರೌನ್ ಅಗಲವಾಗುತ್ತದೆ. ಮಾಗುವ ಕಾಲದಲ್ಲಿ, ಎಲೆಗಳು ಕಡು ಹಳದಿ ಬಣ್ಣಕ್ಕೆ ತಿರುಗಿ ನಂತರ ಉದುರಿ ಹೋಗುತ್ತವೆ. ಕೆಲವೊಮ್ಮೆ ಅಲ್ವಾವಧಿಯಲ್ಲೇ (1-15 ದಿನಗಳೊಳಗಾಗಿ) ಉದುರುತ್ತವೆ. ಅತಿ ಹೆಚ್ಚಿನ ರೋಗ-ಪ್ರತಿರೋಧದ ಸಾಮಾರ್ಥ್ಯ, ಕೀಟ-ವಿರೋಧಿ ತೊಗಟೆ ಹಾಗೂ ಏರಿಯಲ್(ಗಾಳಿಯಲ್ಲಿ ಬೆಳೆದ) ಬೇರುಗಳನ್ನು ಮತ್ತು ಚಿಗುರುಗಳನ್ನು ರಚಿಸುವ ಸಾಮರ್ಥ್ಯವು ಗಿಂಕ್ಗೊಗಳಿಗೆ ದೀರ್ಘ-ಕಾಲ ಬದುಕುವಂತೆ ಮಾಡಿದೆ. ಕೆಲವು ಮಾದರಿಗಳು 2,500 ವರ್ಷಕ್ಕಿಂತಲೂ ಹೆಚ್ಚು ಕಾಲ ಜೀವಿಸಿವೆಯೆಂದು ಹೇಳಲಾಗುತ್ತದೆ.
ಗಿಂಕ್ಗೊ ಹೆಚ್ಚುಕಡಿಮೆ ನೆರಳು-ಸಹಿಸದ ಜಾತಿಯಾಗಿದ್ದು, ಚೆನ್ನಾಗಿ-ನೀರು ಪೂರೈಕೆಯಿರುವ ಮತ್ತು ಉತ್ತಮ-ತೇವಾಂಶವಿರುವ ಪರಿಸರದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಜಾತಿಯು ಕದಡಿದ ಮಣ್ಣಿನಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ; ಟಿಯಾನ್ ಮು ಶಾನ್ನಲ್ಲಿ "ಅರೆ-ನಿಸರ್ಗ ಸಹಜವಾಗಿ" ಬೆಳೆದ ಸಸ್ಯಗಳ ಗುಂಪಿನಲ್ಲಿ, ಹೆಚ್ಚಿನ ಮಾದರಿಗಳು ಹಳ್ಳದ ತೀರಗಳಲ್ಲಿ, ಕಲ್ಲಿನ ಇಳಿಜಾರಿನಲ್ಲಿ ಮತ್ತು ಪ್ರಪಾತಗಳ ಅಂಚುಗಳಲ್ಲಿ ಕಂಡುಬರುತ್ತವೆ. ಆದುದರಿಂದ ಗಿಂಕ್ಗೊ ಸಸ್ಯಕ ಬೆಳವಣಿಗೆಗೆ ಅಸಾಧಾರಣ ಸಾಮರ್ಥ್ಯವನ್ನು ಉಳಿಸಿಕೊಂಡಿರುತ್ತದೆ. ಇದು ಕಾಂಡದ (ಲಿಗ್ನೊಟ್ಯೂಬರ್ಗಳು ಅಥವಾ ಬೇಸಲ್ ಚಿ ಚಿ) ಹತ್ತಿರವಿರುವ ಚಿಗುರುಗಳಿಂದ, ಮಣ್ಣಿನ ಸವಕಳಿಯಂಥ ಕದಡುವಿಕೆಗೆ ಪ್ರತಿಯಾಗಿ ಕುಡಿಯೊಡೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಳೆಯ ಮರಗಳೂ ಸಹ ಕ್ರೌನ್ ಹಾನಿಯಂಥ ಅಸ್ಥಿರತೆಗೆ ಪ್ರತಿಯಾಗಿ ದೊಡ್ಡ ಕೊಂಬೆಗಳ ಕೆಳಭಾಗದಿಂದ ಏರಿಯಲ್ ಬೇರುಗಳನ್ನು (ಚಿ ಚಿ) ಉತ್ಪತ್ತಿ ಮಾಡಲು ಸಮರ್ಥವಾಗಿರುತ್ತವೆ; ಈ ಬೇರುಗಳು ಮಣ್ಣನ್ನು ಸಂಪರ್ಕಿಸುವುದರಿಂದ ಯಶಸ್ವಿ ಅಬೀಜ ಸಂತಾನೋತ್ಪತ್ತಿಯನ್ನು ಉಂಟುಮಾಡುತ್ತವೆ. ಈ ಕಾರ್ಯವಿಧಾನಗಳು ಗಿಂಕ್ಗೊದ ಸ್ಥಾಯಿತ್ವದಲ್ಲಿ ಬಹು ಮುಖ್ಯವಾಗಿವೆ; ಟಿಯಾನ್ ಮು ಶಾನ್ನಲ್ಲಿ ಉಳಿದುಕೊಂಡ "ಅರೆ-ನಿಸರ್ಗ ಸಹಜವಾಗಿ" ಬೆಳೆದ ಸಸ್ಯಗಳ ಗುಂಪಿನ ಸಮೀಕ್ಷೆಯಲ್ಲಿ, 40%ನಷ್ಟು ಗಿಂಕ್ಗೊ ಮಾದರಿಗಳು ಬಹು-ಕಾಂಡಗಳನ್ನು ಹೊಂದಿದ್ದವು ಹಾಗೂ ಕೆಲವು ಸಸಿಗಳೂ ಕಂಡುಬಂದಿದ್ದವು.[6]
ಗಿಂಕ್ಗೊದ ಕೊಂಬೆಗಳು ಹೆಚ್ಚಿನ ಮರಗಳಲ್ಲಿ ಕಂಡುಬರುವಂತೆ ಕ್ರಮವಾಗಿ ಜೋಡಿಸಿದ ಎಲೆಗಳೊಂದಿಗೆ ಬೇರುಗಳಿಂದ ಉದ್ದಕ್ಕೆ ಬೆಳೆಯುತ್ತವೆ. ಈ ಎಲೆಗಳ ಕವಲು ಮೂಲೆಗಳಿಂದ, "ಕುಡಿ"ಗಳು ಎರಡನೆ-ವರ್ಷದ ಬೆಳೆವಣಿಗೆಯಲ್ಲಿ ಬೆಳೆಯುತ್ತವೆ. ಈ ಕುಡಿಗಳು ತುಂಬಾ ಸಣ್ಣ ಗೆಣ್ಣು ನಡುವಣ ಭಾಗ(ಇಂಟರ್ನೋಡ್)ಗಳನ್ನು ಹೊಂದಿರುತ್ತವೆ (ಆದ್ದರಿಂದ ಅವು ಅನೇಕ ವರ್ಷಗಳಲ್ಲಿ ಕೇವಲ ಒಂದು ಅಥವಾ ಎರಡು ಸೆಂಟಿಮೀಟರ್ಗಳಷ್ಟು ಮಾತ್ರ ಬೆಳೆಯುತ್ತವೆ) ಹಾಗೂ ಅವುಗಳ ಎಲೆಗಳು ಸಾಮಾನ್ಯವಾಗಿ ಹಾಲೆಗಳಿಲ್ಲದಿರುತ್ತವೆ. ಎಲೆಗಳು ಸಣ್ಣಕ್ಕಿದ್ದು, ಗಂಟುಗಳನ್ನು ಹೊಂದಿರುತ್ತವೆ ಮತ್ತು ಮೊದಲ ವರ್ಷದ ಬೆಳವಣಿಗೆಯನ್ನು ಹೊರತು, ರೆಂಬೆಗಳಲ್ಲಿ ಕ್ರಮವಾಗಿ ಜೋಡಿಸಲ್ಪಟ್ಟಿರುತ್ತವೆ. ಸಣ್ಣ ಗೆಣ್ಣು ನಡುವಣ ಭಾಗದ ಕಾರಣದಿಂದ, ಎಲೆಗಳು ಕುಡಿಗಳ ತುದಿಯಲ್ಲಿ ಗೊಂಚಲು-ಗೊಂಚಲಾಗಿರುವಂತೆ ಕಾಣುತ್ತವೆ ಹಾಗೂ ಸಂತಾನೋತ್ಪತ್ತಿ ರಚನೆಗಳು ಅವುಗಳ ಮೇಲೆ ಮಾತ್ರ ರೂಪುಗೊಳ್ಳುತ್ತವೆ (ಕೆಳಗಿನ ಚಿತ್ರಗಳನ್ನು ಗಮನಿಸಿ - ಬೀಜಗಳು ಮತ್ತು ಎಲೆಗಳು ಕುಡಿಗಳಲ್ಲಿ ಕಂಡುಬರುತ್ತವೆ). ಗಿಂಕ್ಗೊಗಳಲ್ಲಿ, ಅವು ಹೋಲುವ ಇತರ ಮರಗಳಂತೆ, ಗಿಡ್ಡ ಕುಡಿಗಳು ಕ್ರೌನ್ನ ಹಳೆಯ ಭಾಗಗಳಲ್ಲಿ ಹೊಸ ಎಲೆಗಳು ಹುಟ್ಟಲು ಅನುವು ಮಾಡಿಕೊಡುತ್ತವೆ. ಅನೇಕ ವರ್ಷಗಳ ನಂತರ, ಗಿಡ್ಡ ಕುಡಿಯು ಉದ್ದ (ಸಾಮಾನ್ಯ) ಕುಡಿಯಾಗಿ ಬೆಳೆಯಬಹುದು ಅಥವಾ ಅದಕ್ಕೆ ತದ್ವಿರುದ್ಧವಾಗಿ ನಡೆಯಬಹುದು.
ಎಲೆಗಳ ರಚನೆಯು ಬೀಜದ ಸಸ್ಯಗಳಲ್ಲಿ ಅಸಾಮಾನ್ಯವಾಗಿರುತ್ತವೆ. ಅವು ಬೀಸಣಿಗೆಯ-ಆಕಾರದಲ್ಲಿದ್ದು, ಸಿರೆಗಳು (ವೈನ್ಸ್) ಹೊರಭಾಗಕ್ಕೆ ಎಲೆಯ ಅಲುಗಿಗೆ ಹರಡಿರುತ್ತವೆ. ಈ ಎಳೆಗಳು ಕೆಲವೊಮ್ಮೆ ಕವಲಾಗುತ್ತವೆ ಆದರೆ ಅಡ್ಡಕೂಡುವುದಿಲ್ಲ.[7] ಎರಡು ಸಿರೆಗಳು ಎಲೆಯ ಅಲುಗನ್ನು ತಳದಲ್ಲಿ ಪ್ರವೇಶಿಸಿ, ಮತ್ತೆ ಎರಡಾಗಿ ಕವಲಾಗುತ್ತವೆ; ಇದನ್ನು ದ್ವಿಭಾಜಕ ಸಿರಾವಿನ್ಯಾಸವೆಂದು ಕರೆಯುತ್ತಾರೆ. ಎಲೆಗಳು ಸಾಮಾನ್ಯವಾಗಿ 5–10 ಸೆಂ.ಮೀ (2-4 ಇಂಚುಗಳು)ನಷ್ಟು ಉದ್ದವಿರುತ್ತವೆ. ಕೆಲವೊಮ್ಮೆ 15 ಸೆಂ.ಮೀ (6 ಇಂಚುಗಳು)ನಷ್ಟೂ ಇರುತ್ತವೆ. ಎಲೆಗಳು ಮೈಡೆನ್ಹೇರ್ ಫರ್ನ್(ಜರೀಗಿಡ) ಆಡಿಯಾಂಟಮ್ ಕ್ಯಾಪಿಲ್ಲಸ್-ವೆನೆರಿಸ್ ನ ಕೆಲವು ಕಿವಿಹಾಲೆಯಂಥ ರಚನೆಗಳನ್ನು ಹೋಲುವುದರಿಂದ ಹಳೆಯ ಪ್ರಸಿದ್ಧವಾದ ಹೆಸರು "ಮೈಡೆನ್ಹೇರ್ ಮರ" ಎಂಬುದು ಬಂದಿದೆ.
ಉದ್ದ ಕುಡಿಗಳ ಎಲೆಗಳು ಸಾಮಾನ್ಯವಾಗಿ ಒರಟಾಗಿ ಕಚ್ಚುಗಳನ್ನು ಮಾಡಿದಂತಿರುತ್ತವೆ ಅಥವಾ ಹಾಲೆಗಳಾಗಿರುತ್ತವೆ. ಆದರೆ ಕೇವಲ ಹೊರಗಿನ ಮೇಲ್ಮೆಯಲ್ಲಿ ಸಿರೆಗಳ ಮಧ್ಯೆ ಮಾತ್ರ ಹಾಗಿರುತ್ತವೆ. ಅವು ಹೆಚ್ಚು ಶೀಘ್ರವಾಗಿ ಬೆಳೆಯುವ ಕೊಂಬೆಯ ತುದಿಗಳಲ್ಲಿ ಮತ್ತು ಗಿಡ್ಡ, ಮೋಟುಮೋಟಾದ ಕುಡಿಗಳೆರಡಲ್ಲೂ ಬೆಳೆಯುತ್ತವೆ. ಕೊಂಬೆಯ ತುದಿಗಳಲ್ಲಿ, ಅವು ಪರ್ಯಾಯಾವಾಗಿ, ನಿರ್ದಿಷ್ಟ ಅಂತರಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ ಹಾಗೂ ಕುಡಿಗಳಲ್ಲಿ, ಅವು ತುದಿಗಳಲ್ಲಿ ಗೊಂಚಲುಗೊಂಚಲಾಗಿರುತ್ತವೆ.
ಗಿಂಕ್ಗೊಗಳು ಪ್ರತ್ಯೇಕ ಲಿಂಗಗಳೊಂದಿಗೆ ಭಿನ್ನಲಿಂಗಿಗಳಾಗಿರುತ್ತವೆ. ಕೆಲವು ಮರಗಳು ಹೆಣ್ಣು ಮತ್ತೆ ಕೆಲವು ಗಂಡುಗಳಾಗಿರುತ್ತವೆ. ಗಂಡು ಸಸ್ಯಗಳು ಪ್ರತಿಯೊಂದು, ಕೇಂದ್ರ ಆಕ್ಸಿಸ್ನ ಸುತ್ತ ಸುರುಳಿಯಾಗಿ ಜೋಡಿಸಲ್ಪಟ್ಟಿರುವ ಎರಡು ಮೈಕ್ರೊಸ್ಪೊರಾಂಜಿಯಮ್ಗಳನ್ನು ಹೊಂದಿರುವ ಸ್ಪೋರೊಫಿಲ್ಗಳೊಂದಿಗೆ ಸಣ್ಣ ಪರಾಗ ಶಂಕುಗಳನ್ನು ಉತ್ಪತ್ತಿ ಮಾಡುತ್ತವೆ.
ಹೆಣ್ಣು ಸಸ್ಯಗಳು ಶಂಕುಗಳನ್ನು ಉತ್ಪತ್ತಿ ಮಾಡುವುದಿಲ್ಲ. ಎರಡು ಅಂಡಾಣು(ಮೂಲಬೀಜ)ಗಳು ಕಾಂಡದ ಕೊನೆಯಲ್ಲಿ ರಚನೆಯಾಗುತ್ತವೆ. ಫಲೀಕರಣದ ನಂತರ ಒಂದು ಅಥವಾ ಎರಡೂ ಅಂಡಾಣುಗಳು ಬೀಜಗಳಾಗಿ ಬೆಳೆಯುತ್ತವೆ. ಬೀಜವು 1.5–2 ಸೆಂ.ಮೀ ಉದ್ದವಿರುತ್ತದೆ. ಅದರ ತಿರುಳಿನ ಹೊರಗಿನ ಪದರವು (ಸಾರ್ಕೊಟೆಸ್ಟ) ತಿಳಿ ಹಳದಿ-ಕಂದು ಬಣ್ಣದಲ್ಲಿದ್ದು, ಮೃದುವಾದ ಹಣ್ಣಿನಂತೆ ಇರುತ್ತದೆ. ಇದು ನೋಡಲು ಆಕರ್ಷಕವಾಗಿರುತ್ತದೆ. ಆದರೆ ಬ್ಯುಟೊನಾಯ್ಕ್ ಆಮ್ಲ [8] ವನ್ನು (ಬ್ಯೂಟಿರಿಕ್ ಆಮ್ಲ ಎಂದೂ ಕರೆಯುತ್ತಾರೆ) ಹೊಂದಿರುತ್ತದೆ ಹಾಗೂ ಬಿದ್ದಾಗ ಹಳಸಿದ ಬೆಣ್ಣೆಯ (ಇದು ಅದೇ ರಾಸಾಯನಿಕವನ್ನು ಹೊಂದಿರುತ್ತದೆ) ಅಥವಾ ರಾಡಿ[9] ಯ ವಾಸನೆಯನ್ನು ಹೊಂದಿರುತ್ತದೆ. ಕೇಂದ್ರದಲ್ಲಿ ಹೆಣ್ಣು ಗ್ಯಾಮಿಟೊಫೈಟ್ಅನ್ನು ಆವರಿಸಿರುವ ನ್ಯುಸೆಲ್ಲಸ್ ಒಂದಿಗೆ, ಸಾರ್ಕೊಟೆಸ್ಟದ ಕೆಳಗೆ ಸ್ಕ್ಲೀರೊಟೆಸ್ಟ (ಇದನ್ನು ಸಾಮಾನ್ಯವಾಗಿ "ಚಿಪ್ಪು" ಎನ್ನಲಾಗುತ್ತದೆ) ಮತ್ತು ಕಾಗದದಂಥ ಎಂಡೊಟೆಸ್ಟವಿರುತ್ತದೆ.[10]
ಗಿಂಕ್ಗೊ ಬೀಜಗಳ ಫಲೀಕರಣವು ಸೈಕಡ್, ಜರೀಗಿಡ, ಪಾಚಿ ಮತ್ತು ಆಲ್ಗೆಗಳಂತೆ ಚಲನಶೀಲ ಸ್ಪರ್ಮ್ನಿಂದ ನಡೆಯುತ್ತದೆ. ಸ್ಪರ್ಮ್ಗಳು ದೊಡ್ಡದಾಗಿರುತ್ತವೆ (ಸುಮಾರು 250-300 ಮೈಕ್ರೊಮೀಟರ್ಗಳು) ಮತ್ತು ಸ್ವಲ್ಪ ಹೆಚ್ಚು ದೊಡ್ಡದಾಗಿರುವ ಸೈಕಡ್ಗಳ ಸ್ಪರ್ಮ್ಗಳಂತೆಯೇ ಇರುತ್ತವೆ. ಗಿಂಕ್ಗೊ ಸ್ಪರ್ಮ್ಗಳನ್ನು ಮೊದಲು ಜಪಾನೀಸ್ ಸಸ್ಯವಿಜ್ಞಾನಿ ಸ್ಯಾಕುಗೊರೊ ಹಿರಾಸೆಯು 1896ರಲ್ಲಿ ಕಂಡುಹಿಡಿದನು.[11] ಸ್ಪರ್ಮ್ಗಳು ಸಂಕೀರ್ಣವಾದ ಬಹು-ಪದರಗಳ ರಚನೆಯನ್ನು ಹೊಂದಿರುತ್ತವೆ. ಇದು ನಿಜವಾಗಿ ಸಿಲಿಯಾದಂಥ(ಲೋಮಾಂಗದಂಥ) ಚಲನೆಯನ್ನು ಹೊಂದಿರುವ ಅನೇಕ ಸಾವಿರಾರು ಫ್ಲಾಗೆಲ್ಲಮ್(ಧಾವನಕಾಂಡ)ಗಳ ಆಧಾರವಾಗಿ ರೂಪವಾಗುವ ಮೂಲಭೂತ ಅಂಶಗಳ ಅಖಂಡ ಪಟ್ಟಿಯಾಗಿದೆ. ಫ್ಲಾಗೆಲ್ಲಾ/ಸಿಲಿಯಾ ರಚನೆಯು ಸ್ಪರ್ಮ್ಅನ್ನು ಮುಂದಕ್ಕೆ ಎಳೆಯುತ್ತದೆ. ಸ್ಪರ್ಮ್ಗಳು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಎರಡು ಅಥವಾ ಮೂರು ಆರ್ಕಿಗೋನಿಯಮ್ಗಳನ್ನು ತಲುಪಲು ಸ್ವಲ್ಪ ದೂರ ಸಾಗಿದರೆ ಸಾಕಾಗುತ್ತದೆ. ಎರಡು ಸ್ಪರ್ಮ್ಗಳು ಉತ್ಪತ್ತಿಯಾಗುತ್ತವೆ, ಅವುಗಳಲ್ಲಿ ಒಂದು ಯಶಸ್ವಿಯಾಗಿ ಅಂಡಾಣುವನ್ನು ಫಲೀಕರಣ ಮಾಡುತ್ತದೆ. ಗಿಂಕ್ಗೊ ಬೀಜಗಳ ಫಲೀಕರಣವು ಅವು ಆರಂಭಿಕ ಮಾಗುವಕಾಲದಲ್ಲಿ ಬೀಳುವುದಕ್ಕಿಂತ ಸ್ವಲ್ಪ ಮೊದಲು ಅಥವಾ ನಂತರ ಕಂಡುಬರುತ್ತದೆ ಎಂದು ವ್ಯಾಪಕವಾಗಿ ಹೇಳಲಾದರೂ,[7][10] ಮೊಳಕೆಗಳು ಸಾಮಾನ್ಯವಾಗಿ ಬೀಜಗಳಲ್ಲಿ ಅವು ಮರದಿಂದ ಬಿದ್ದ ಸ್ವಲ್ಪ ಮೊದಲು ಅಥವಾ ನಂತರ ಕಂಡುಬರುತ್ತವೆ.[12]
ಗಿಂಕ್ಗೊ ಬಿಲೋಬ ಮತ್ತು ಇತರ ಜಾತಿಗಳು ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡಿದ್ದರೂ, ಪ್ರಸ್ತುತ ಈ ಮರವು ನಿಸರ್ಗ ಸಹಜ ಸ್ಥಿತಿಯಲ್ಲಿ ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತದ ವಾಯುವ್ಯ ಭಾಗದ ಟಿಯಾನ್ಮು ಶಾನ್ ಪರ್ವತ ಮೀಸಲು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಆದರೆ ಅದು ನೈಸರ್ಗಿಕ ಸ್ಥಿತಿಯಲ್ಲಿದೆಯೇ ಎಂಬುದು ಮಾತ್ರ ಪ್ರಶ್ನಾರ್ಥಕವಾಗಿದೆ. ಚೀನಾದ ಇತರ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಕೃಷಿ ಮಾಡಲಾಗುತ್ತದೆ ಮತ್ತು ಇದು ರಾಷ್ಟ್ರದ ದಕ್ಷಿಣದ ಮೂರನೇ ಭಾಗದಲ್ಲಿ ಸಾಮಾನ್ಯವಾಗಿದೆ.[13] ಇದನ್ನು ಉತ್ತರ ಅಮೆರಿಕದಲ್ಲಿ ಸುಮಾರು 200 ವರ್ಷಗಳ ಕಾಲ ಸಾಮಾನ್ಯವಾಗಿ ಕೃಷಿ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಅದನ್ನು ಪರಿಣಾಮಕಾರಿಯಾಗಿ ರಾಷ್ಟ್ರೀಯವನ್ನಾಗಿಸಿರಲಿಲ್ಲ.[14]
ಈ ಮರಗಳ ನಿಸರ್ಗ ಸಹಜ ಸ್ಥಿತಿಯ ಕಂಡುಬರುವಿಕೆಯು ವಿರಳವಾಗಿ, ಎಲೆ ಉದುರುವ ಕಾಡುಗಳಲ್ಲಿ ಮತ್ತು ಕಣಿವೆಗಳಲ್ಲಿ ಉತ್ತಮ ನೀರು ಹರಿದು ಹೋಗುವ ಆಮ್ಲೀಯ ಹಳದಿ-ಬೂದು ಮೆಕ್ಕಲಿನಲ್ಲಿ (ಅಂದರೆ ಚೆನ್ನಾಗಿ ಒಂಡುಗಟ್ಟಿದ ಮಣ್ಣು) ಕಾಣಸಿಗುತ್ತದೆ. ಆ ಮಣ್ಣು ವೈಶಿಷ್ಟ್ಯವಾಗಿ 5ರಿಂದ 5.5ನಷ್ಟು pH ಮೌಲ್ಯವನ್ನು ಹೊಂದಿರುತ್ತದೆ.[13]
ಈ ಜಾತಿಯನ್ನು ಆರಂಭಿಕವಾಗಿ ಜೀವವರ್ಗೀಕರಣ ಶಾಸ್ತ್ರದ ಪಿತಾಮಹ ಲಿನ್ನಾಯಸ್ 1771ರಲ್ಲಿ ವಿವರಿಸಿದನು. ನಿರ್ದಿಷ್ಟ ವಿಶೇಷಣ ಬಿಲೋಬ ವನ್ನು ಲ್ಯಾಟಿನ್ ಪದ ಬಿಸ್ 'ಎರಡು' ಮತ್ತು ಲೋಬ 'ಹಾಲೆಗಳಿರುವ' ದಿಂದ ಪಡೆಯಲಾಗಿದೆ, ಇದು ಎಲೆಗಳ ಆಕಾರವನ್ನು ನಿರೂಪಿಸುತ್ತದೆ.[15]
ಈ ಮರದ ಹಳೆಯ ಚೈನೀಸ್ ಹೆಸರೆಂದರೆ 銀果 ಯಿಂಗ್ಯೂ ('ಬೆಳ್ಳಿ ಹಣ್ಣು'). ಇಂದಿನ ಹೆಚ್ಚು ಸಾಮಾನ್ಯ ಹೆಸರುಗಳೆಂದರೆ - 白果 ಬೈ ಗ್ಯೂ ('ಬಿಳಿ ಹಣ್ಣು') ಮತ್ತು 銀杏 ಯಿಂಕ್ಸಿಂಗ್ ('ಬೆಳ್ಳಿ ಆಪ್ರಿಕಾಟ್'). ಬೈ ಗ್ಯೂ ಹೆಸರನ್ನು ನೇರವಾಗಿ ವಿಯೆಟ್ನಾಂನಲ್ಲಿ (ಬಾಚ್ ಕ್ವಾ ಆಗಿ) ತೆಗೆದುಕೊಳ್ಳಲಾಗಿದೆ. ಯಿಂಕ್ಸಿಂಗ್ ಹೆಸರನ್ನು ಜಪಾನೀಸ್ನಲ್ಲಿ (ぎんなん "ಗಿನ್ನನ್" ಆಗಿ) ಮತ್ತು ಕೊರಿಯನ್ನಲ್ಲಿ (은행 "ಯೂನ್ಹೇಂಗ್" ಆಗಿ) ತೆಗೆದುಕೊಳ್ಳಲಾಗಿದೆ, ಇವು ಈ ಮರವನ್ನೇ ಚೀನಾದಿಂದ ಪಡೆದುಕೊಂಡಿದ್ದವು.
ವೈಜ್ಞಾನಿಕ ಹೆಸರು ಗಿಂಕ್ಗೊ , ಜಾನಪದ ವ್ಯುತ್ಪತ್ತಿ ಶಾಸ್ತ್ರಕ್ಕೆ ಸದೃಶವಾದ ಕ್ರಿಯೆಯ ಕಾರಣದಿಂದ ಎಂಬಂತೆ ಕಂಡುಬರುತ್ತದೆ. ಚೈನೀಸ್ ಅಕ್ಷರಗಳು ವೈಶಿಷ್ಟ್ಯವಾಗಿ ಜಪಾನೀಸ್ನಲ್ಲಿ ಅನೇಕ ಉಚ್ಛಾರಣೆಗಳನ್ನು ಹೊಂದಿವೆ ಹಾಗೂ ಗಿನ್ನನ್ ಗೆ ಬಳಸುವ ಅಕ್ಷರಗಳನ್ನು 銀杏 ಗಿಂಕ್ಯೊ ಎಂಬುದಾಗಿಯೂ ಉಚ್ಛಾರಿಸಬಹುದು. 1690ರಲ್ಲಿ ಈ ಜಾತಿಯನ್ನು ನೋಡಿದ ಮೊದಲ ಪಾಶ್ಚಾತ್ಯ ಎಂಗೆಲ್ಬರ್ಟ್ ಕೇಂಫರ್ ಅವನ ಅಮೋಯನಿಟೇಟ್ಸ್ ಎಕ್ಸೋಟಿಕೆ (1712)ಯಲ್ಲಿ ಈ ಉಚ್ಛಾರಣೆಯನ್ನು ಬರೆದಿದ್ದಾನೆ; ಅವನ y ಅನ್ನು g ಆಗಿ ತಪ್ಪು ಉಚ್ಛಾರಿಸಲಾಗಿತ್ತು ಹಾಗೂ ಆ ತಪ್ಪು ಉಚ್ಛಾರಣೆಯು ಉಳಿದುಕೊಂಡಿತು.[16]
ಗಿಂಕ್ಗೊ ಒಂದು ಉಳಿದಿರುವ ಪಳೆಯುಳಿಕೆಯಾಗಿದೆ. ಈ ಪಳೆಯುಳಿಕೆಯು 270 ದಶಲಕ್ಷ ವರ್ಷಗಳಷ್ಟು ಹಿಂದಿನ ಪರ್ಮಿಯನ್ ಅವಧಿಯಿಂದ ಆಧುನಿಕ ಗಿಂಕ್ಗೊಗೆ ಗಮನಾರ್ಹವಾಗಿ ಸಂಬಂಧಿಸಿದೆ. ಗಿಂಕ್ಗೋಲ್ಸ್ ಗಣದ ಹೆಚ್ಚಾಗಿ ಮೂಲರೂಪದಂತೆ ತೋರುವ ಗುಂಪೆಂದರೆ ಟೆರಿಡೊಸ್ಪರ್ಮಟೊಫೈಟ, ಇದನ್ನು "ಬೀಜ ಜರೀಗಿಡ"ವೆಂದೂ ಕರೆಯುತ್ತಾರೆ, ನಿರ್ದಿಷ್ಟವಾಗಿ ಪೆಲ್ಟಾಸ್ಪರ್ಮೇಲ್ಸ್ ಗಣ. ಏಕಮೂಲ ವರ್ಗದ ಹತ್ತಿರದ ಈಗ ಇರುವ ಸಂಬಂಧಿಗಳೆಂದರೆ ಸೈಕಡ್ಗಳು.[17] ಇವು ಚಲನಶೀಲ ಸ್ಪರ್ಮ್ನ ವೈಶಿಷ್ಟ್ಯತೆಯನ್ನು ಹೊಂದಿರುವ, ಅಳಿದುಹೋದ G. ಬಿಲೋಬ ದೊಂದಿಗೆ ಹಂಚಿಕೊಳ್ಳುತ್ತದೆ. ಗಿಂಕ್ಗೊ ಜಾತಿಯ ಪಳೆಯುಳಿಕೆಗಳು ಮೊದಲು ಆರಂಭಿಕ ಜ್ಯುರಾಸಿಕ್ ಅವಧಿಯಲ್ಲಿ ಕಂಡುಬಂದಿತು. ಇದು ಲಾರೇಶಿಯಾದ್ಯಂತ ಮಧ್ಯ ಜ್ಯುರಾಸಿಕ್ ಮತ್ತು ಆರಂಭಿಕ ಕ್ರಿಟೇಷಿಯಸ್ ಅವಧಿಯಲ್ಲಿ ವೈವಿಧ್ಯಗೊಳಿಸಲ್ಪಟ್ಟಿತು ಮತ್ತು ಹರಡಿತು. ಇದರ ವೈವಿಧ್ಯತೆಯು ಕ್ರಿಟೇಷಿಯಸ್ ಅವಧಿಯು ಮುಂದುವರಿದಂತೆ ಕ್ಷೀಣವಾಯಿತು ಹಾಗೂ ಪೇಲಿಯೊಸೀನ್ ಅವಧಿಯಲ್ಲಿ ಗಿಂಕ್ಗೊ ಆಡಿಯಂಟಾಯ್ಡೆಸ್ ಮಾತ್ರ ಉತ್ತರಾರ್ಧ ಗೋಳದಲ್ಲಿ ಉಳಿದುಕೊಂಡ ಗಿಂಕ್ಗೊ ಜಾತಿಯಾಗಿತ್ತು. ಆ ಸಂದರ್ಭದಲ್ಲಿ ದಕ್ಷಿಣಾರ್ಧ ಗೋಳದಲ್ಲಿ ಸ್ಪಷ್ಟವಾದ ಭಿನ್ನ (ಮತ್ತು ಕಡಿಮೆ ದಾಖಲಾದ) ಜಾತಿಯೊಂದು ಅಸ್ತಿತ್ವದಲ್ಲಿತ್ತು. ಪ್ಲಿಯೊಸೀನ್ ಅವಧಿಯ ಕೊನೆಯಲ್ಲಿ ಗಿಂಕ್ಗೊ ಪಳೆಯುಳಿಕೆಗಳು, ಆಧುನಿಕ ಜಾತಿಗಳು ಉಳಿದುಕೊಂಡಿರುವ ಕೇಂದ್ರ ಚೀನಾದ ಕೆಲವು ಸಣ್ಣ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಪಳೆಯುಳಿಕೆ-ದಾಖಲೆಯಿಂದ ಕಣ್ಮರೆಯಾದವು. ಗಿಂಕ್ಗೊ ದ ಉತ್ತರಾರ್ಧ ಗೋಳದ ಪಳೆಯುಳಿಕೆ ಜಾತಿಯನ್ನು ವಿಶ್ವಾಸಾರ್ಹವಾಗಿ ಪ್ರತ್ಯೇಕಿಸಬಹುದೇ ಎಂಬುದು ಅನಿಶ್ಚಿತವಾಗಿದೆ. ಉತ್ತಾರಾರ್ಧ ಗೋಳದಲ್ಲಿ ಸಂಪೂರ್ಣ ಸೆನಜಾಯ್ಕ್ ಅವಧಿಯಲ್ಲಿ ಒಂದು ಅಥವಾ ಎರಡು ಜಾತಿಗಳು ಮಾತ್ರ ಅಸ್ತಿತ್ವದಲ್ಲಿದ್ದವು ಎಂದು ವಿಕಾಸದ ನಿಧಾನಗತಿಯ ಬೆಳವಣಿಗೆ ಮತ್ತು ಈ ಜಾತಿಗಳ ಮರಗಳ ನಡುವಿನ ರೂಪವೈಜ್ಞಾನಿಕ ಹೋಲಿಕೆಯು ಸೂಚಿಸಿದೆ, ಅವುಗಳೆಂದರೆ - ಇಂದಿನ G. ಬಿಲೋಬ (G. ಆಡಿಯಂಟಾಯ್ಡೆಸ್ ಅನ್ನೂ ಒಳಗೊಂಡು) ಮತ್ತು ಸ್ಕಾಟ್ಲ್ಯಾಂಡ್ನ ಪೇಲಿಯೊಸೀನ್ನ G. ಗಾರ್ಡ್ನೆರಿ .[18]
ರೂಪ ವೈಜ್ಞಾನಿಕವಾಗಿ, G. ಗಾರ್ಡ್ನೆರಿ ಮತ್ತು ದಕ್ಷಿಣಾರ್ಧ ಗೋಳದ ಜಾತಿಗಳು ಮಾತ್ರ ತಿಳಿದ, ನಿಸ್ಸಂದಿಗ್ಧವಾಗಿ ಗುರುತಿಸಬಹುದಾದ, ಜ್ಯುರಾಸಿಕ್-ಅವಧಿಗಿಂತ-ಹಿಂದೆ ಇದ್ದ ಗುಂಪುಗಳಾಗಿವೆ. ಉಳಿದವು ಇಕೊಟೈಪ್ಸ್ ಅಥವಾ ಉಪಜಾತಿಗಳಾಗಿರಬಹುದು. G. ಬಿಲೋಬ ವು ವ್ಯಾಪಕವಾಗಿ ಕಂಡುಬಂದಿತ್ತು, ಗಮನಾರ್ಹ ತಳೀಯ ನಮ್ಯತೆಯನ್ನು ಹೊಂದಿತ್ತು ಹಾಗೂ ತಳಿವಿಜ್ಞಾನದ ಪ್ರಕಾರ ವಿಕಾಸವಾದರೂ ಇದು ಹೆಚ್ಚು ಹೊಸ ಜಾತಿಗಳ ರೂಪುಗೊಳ್ಳುವಿಕೆಯನ್ನು ತೋರಿಸಲಿಲ್ಲವೆಂಬುದು ಇದರ ಸೂಚಿತವಾಗಿದೆ. ಒಂದೇ ಜಾತಿಯು ಅನೇಕ ದಶಲಕ್ಷಗಳಷ್ಟು ವರ್ಷಗಳ ಕಾಲ ಹೊಂದಿಕೊಂಡಿರುವ ಮೂಲ ಸ್ವಭಾವದಲ್ಲಿ ಅಸ್ತಿತ್ವದಲ್ಲಿರುವುದು ಅಸಂಭವವಾಗಿ ಕಂಡುಬಂದರೂ, ಗಿಂಕ್ಗೊದ ಜೀವನ-ಇತಿಹಾಸದ ಅನೇಕ ಪರಿಮಾಣಗಳು ಇದಕ್ಕೆ ಸರಿಹೊಂದುತ್ತವೆ. ಅವುಗಳೆಂದರೆ: ದೀರ್ಘಾಯುಷ್ಯ; ನಿಧಾನ ಸಂತಾನೋತ್ಪತ್ತಿ ದರ; ಸೆನೊಜಾಯ್ಕ್ ಮತ್ತು ನಂತರದ ಅವಧಿಗಳಲ್ಲಿ) ಪಳೆಯುಳಿಕೆ ದಾಖಲೆಯಿಂದ ಕಂಡುಹಿಡಿಯಲಾದ ಪರಿಸರ ವಿಜ್ಞಾನದ ಸಾಂಪ್ರದಾಯಿಕತೆಯೊಂದಿಗೆ ಜತೆಗೂಡಿದ, ವ್ಯಾಪಕ, ಹೊಂದಿಕೊಂಡಿರುವ, ಆದರೆ ದೃಢವಾಗಿ ಸಂಕುಚಿಸುವ ಹರಡಿಕೆ (ಕದಡಿದ ಹಳ್ಳದ ಬದಿಯ ಪರಿಸರಕ್ಕೆ ನಿರ್ಬಂಧ).[19]
ಆಧುನಿಕ ಕಾಲದ G. ಬಿಲೋಬ ವು ಚೆನ್ನಾಗಿ ನೀರಿರುವ ಮತ್ತು ಹರಿದುಹೋಗುವ ಪರಿಸರದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ[20] ಹಾಗೂ ಅಂತಹುದೇ ಪಳೆಯುಳಿಕೆ ಗಿಂಕ್ಗೊ ಅಂತಹುದೇ ಪರಿಸರದಲ್ಲಿ ಚೆನ್ನಾಗಿ ಬೆಳೆಯುತ್ತಿತ್ತು: ಪಳೆಯುಳಿಕೆ ಗಿಂಕ್ಗೊ ಪ್ರದೇಶಗಳ ದಾಖಲೆಯು ಅದು ಮೂಲವಾಗಿ ಹಳ್ಳ ಮತ್ತು ನೆರೆಯೊಡ್ಡಗಳುದ್ದಕ್ಕೆ ಕದಡಿದ ಪರಿಸರದಲ್ಲಿ ಬೆಳೆಯುತ್ತದೆಂಬುದನ್ನು ಸೂಚಿಸುತ್ತದೆ.[19] ಆದ್ದರಿಂದ ಗಿಂಕ್ಗೊ "ಪರಿಸರ ವಿಜ್ಞಾನದ ವಿರುದ್ಧೋಕ್ತಿ"ಯನ್ನು ಸೂಚಿಸುತ್ತದೆ ಏಕೆಂದರೆ ಅದು ಕದಡಿದ ಪರಿಸರದಲ್ಲಿ ಜೀವಸಲು ಸೂಕ್ತವಾದ ಕೆಲವು ವಿಶೇಷ ಲಕ್ಷಣಗಳನ್ನು (ಅಬೀಜ ಸಂತಾನೋತ್ಪತ್ತಿ) ಹೊಂದಿರುತ್ತದೆ ಹಾಗೂ ಅದರ ಹೆಚ್ಚಿನ ಇತರ ಜೀವನ-ಚರಿತ್ರೆಯ ಲಕ್ಷಣಗಳು (ನಿಧಾನ ಬೆಳವಣಿಗೆ, ದೊಡ್ಡ ಬೀಜದ ಗಾತ್ರ, ತಡವಾದ ಸಂತಾನೋತ್ಪತ್ತಿ ಮಾಡುವ ಅಂಗದ ಬೆಳವಣಿಗೆ) ಕದಡಿತ ಪರಿಸರದಲ್ಲಿ ಬೆಳೆಯುವ ಆಧುನಿಕ ಸಸ್ಯಗಳು ತೋರಿಸುವ ಲಕ್ಷಣಗಳಿಗೆ ವಿರುದ್ಧವಾಗಿವೆ.[21]
ಗಿಂಕ್ಗೊ ಕದಡಿದ ಹಳ್ಳದ-ಬದಿಯ ಪರಿಸರದಲ್ಲಿ ಬೆಳೆಯಲು ಆಂಜಿಯೊಸ್ಪರ್ಮ್(ಆವೃತಬೀಜಿ)-ಮುಂಚಿನ ಕಾರ್ಯವಿಧಾನವನ್ನು ಬಳಸಬಹುದೆಂದು ಈ ಜಾತಿಯ ನಿಧಾನಗತಿಯ ವಿಕಾಸವು ಹೇಳುತ್ತದೆ. ಗಿಂಕ್ಗೊ ಜರೀಗಿಡ, ಸೈಕಡ್ ಮತ್ತು ಸೈಕಡಿಯಾಡ್ಗಳು ಕದಡಿದ ಹಳ್ಳದ-ಬದಿಯ ಪರಿಸರದಲ್ಲಿ ಬೆಳೆಯುತ್ತಿದ್ದ ಸಂದರ್ಭದಲ್ಲಿ, ಹೂಬಿಡುವ ಸಸ್ಯಗಳಿಗಿಂತ ಮೊದಲಿನ ಅವಧಿಯಲ್ಲಿ ತಗ್ಗಾದ, ತೆರೆದ, ಪೊದೆಗಳಿಂದ ತುಂಬಿದ ಮೇಲಾವರಣದಂತೆ ರೂಪುಗೊಂಡು ವಿಕಾಸ ಹೊಂದಿತು. ಗಿಂಕ್ಗೊಗಳ ದೊಡ್ಡ ಬೀಜಗಳು ಮತ್ತು "ಬೋಲ್ಟಿಂಗ್" ಗುಣವು -ಬದಿಯ ಕೊಂಬೆಗಳು ಉದ್ದವಾಗುವುದಕ್ಕಿಂತ ಮೊದಲು ಅದು 10 ಮೀಟರ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ- ಅಂತಹ ಪರಿಸರಕ್ಕೆ ಮಾರ್ಪಾಡುಗಳಾಗಿರಬಹುದು. ಗಿಂಕ್ಗೊ ಜಾತಿಯಲ್ಲಿನ ಭಿನ್ನತೆಯು ಕ್ರಿಟೇಷಿಯ ಅವಧಿಯಲ್ಲಿ (ಜರೀಗಿಡ, ಸೈಕಡ್ ಮತ್ತು ಸೈಕಡಿಯಾಡ್ಗಳೊಂದಿಗೆ) ಹೂಬಿಡುವ ಸಸ್ಯಗಳು ಬೆಳೆದ ಸಂದರ್ಭದಲ್ಲಿ ಕಂಡುಬಂದಿತು ಹಾಗೂ ಕದಡಿದ ಪರಿಸರಕ್ಕೆ ಉತ್ತಮ ಮಾರ್ಪಾಡುಗಳನ್ನು ಹೊಂದುವುದರೊಂದಿಗೆ ಹೂಬಿಡುವ ಸಸ್ಯಗಳು ಗಿಂಕ್ಗೊವನ್ನು ಮತ್ತು ಅದರ ಸಂಬಂಧಿ ಸಸ್ಯಗಳನ್ನು ಸ್ಥಾನಾಂತರಿಸಿದವು.[22]
ಗಿಂಕ್ಗೊ ವನ್ನು ಪ್ರತಿ ಭಾಗಕ್ಕೆ ನಾಲ್ಕು ಸಿರೆಗಳನ್ನು ಹೊಂದಿರುವ ಎಲೆಗಳನ್ನು ಒಳಗೊಂಡ ಸಸ್ಯಗಳನ್ನು ಹಾಗೂ ಬೈರ ವನ್ನು ಪ್ರತಿ ಭಾಗಕ್ಕೆ ನಾಲ್ಕಕ್ಕಿಂತ ಕಡಿಮೆ ಸಿರೆಗಳನ್ನು ಹೊಂದಿರುವವುಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ. ಸ್ಫೆನೊಬೈರ ವನ್ನು ಪ್ರತ್ಯೇಕ ಎಲೆಯ ಕಾಂಡವನ್ನು ಹೊಂದಿರದೆ ಅಗಲವಾದ ಬೆಣೆಯಾಕಾರದ ಎಲೆಯನ್ನೊಳಗೊಂಡ ಸಸ್ಯಗಳನ್ನು ವರ್ಗೀಕರಿಸಲು ಉಪಯೋಗಿಸಲಾಗುತ್ತದೆ. ಟ್ರಿಕೊಪಿಟಿಸ್ ಅನ್ನು ಸಿಲಿಂಡರಿನಾಕಾರದ (ಚಪ್ಪಟೆಯಲ್ಲದ) ಎಳೆಯಂತಹ ಅಂತಿಮ ಭಾಗಗಳೊಂದಿಗೆ ಬಹು-ಕವಲುಗಳಿರುವ ಎಲೆಗಳನ್ನು ಹೊಂದಿರುವ ಸಸ್ಯವಾಗಿ ಪ್ರತ್ಯೇಕಿಸಲಾಗಿದೆ; ಇದು ಗಿಂಕ್ಗೊಫೈಟಕ್ಕೆ ಸೇರಿದ ಒಂದು ಆರಂಭಿಕ ಪಳೆಯುಳಿಕೆಯಾಗಿದೆ.
ಗಿಂಕ್ಗೊವನ್ನು ಚೀನಾದಲ್ಲಿ ಬಹುಕಾಲದಿಂದ ಕೃಷಿ ಮಾಡಲಾಗುತ್ತಿದೆ; ಅಲ್ಲಿನ ದೇವಸ್ಥಾನಗಳಲ್ಲಿ ನೆಟ್ಟ ಕೆಲವು ಮರಗಳು ಸುಮಾರು 1,500 ವರ್ಷಗಳಷ್ಟು ಹಳೆಯದೆಂದು ನಂಬಲಾಗುತ್ತದೆ. ಇದನ್ನು ಯುರೋಪಿಯನ್ನರು ಪಡೆದುದರ ಬಗೆಗಿನ ಮೊದಲ ದಾಖಲೆಯು 1690ರಲ್ಲಿ ಜಪಾನೀಸ್ ದೇವಸ್ಥಾನದ ಉದ್ಯಾನಗಳಲ್ಲಿ ಕಂಡುಬಂದಿದೆ. ಅಲ್ಲಿ ಮರಗಳನ್ನು ಜರ್ಮನ್ ಸಸ್ಯಶಾಸ್ತ್ರಜ್ಞ ಎಂಗೆಲ್ಬರ್ಟ್ ಕೇಂಫರ್ ನೋಡಿಕೊಳ್ಳುತ್ತಿದ್ದನು. ಬೌದ್ಧ ಧರ್ಮ ಮತ್ತು ಕನ್ಫ್ಯೂಷಿಯನ್ ಧರ್ಮದಲ್ಲಿನ ಇದರ ಸ್ಥಿತಿಯಿಂದಾಗಿ, ಗಿಂಕ್ಗೊವನ್ನು ಕೊರಿಯಾ ಮತ್ತು ಜಪಾನಿನ ಕೆಲವು ಭಾಗಗಳಲ್ಲೂ ವ್ಯಾಪಕವಾಗಿ ಬೆಳೆಸಲಾಯಿತು; ಎರಡೂ ಪ್ರದೇಶಗಳಲ್ಲಿ, ಗಿಂಕ್ಗೊಗಳನ್ನು ನೈಸರ್ಗಿಕ ಅರಣ್ಯಗಳಿಗೆ ಹರಡುವುದರೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಅದರ ಪಳಗಿಸುವಿಕೆಯೂ ಕಂಡುಬಂದಿತು.
ಕೆಲವು ಪ್ರದೇಶಗಳಲ್ಲಿ, ಹೆಚ್ಚು ಉದ್ದೇಶಪೂರ್ವಕವಾಗಿ ಬೆಳೆಯುವ ಗಿಂಕ್ಗೊಗಳೆಂದರೆ ಗಂಡು ಪ್ರಭೇದಗಳು, ಬೀಜಗಳಿಂದ ಹುಟ್ಟುವ ಸಸ್ಯಗಳನ್ನು ಕಸಿಮಾಡಲಾಗುತ್ತದೆ ಏಕೆಂದರೆ ಗಂಡು ಮರಗಳು ಬೀಜಗಳನ್ನು ಉತ್ಪತ್ತಿ ಮಾಡುವುದಿಲ್ಲ. ಹೆಚ್ಚು ಪ್ರಸಿದ್ಧ ಪ್ರಭೇದವೆಂದರೆ 'ಆಟಮನ್ ಗೋಲ್ಡ್', ಇದು ಗಂಡು ಸಸ್ಯದ ಅಬೀಜ ಸಂತಾನವಾಗಿದೆ.
ಗಿಂಕ್ಗೊಗಳು ಪಟ್ಟಣದ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಅಲ್ಲಿನ ಮಾಲಿನ್ಯ ಮತ್ತು ಸೀಮಿತ ಮಣ್ಣಿನ ಜಾಗವನ್ನು ಸಹಿಸಿಕೊಳ್ಳುತ್ತವೆ.[23] ಅವು ಪಟ್ಟಣದ ಪರಿಸರದಲ್ಲೂ ವಿರಳವಾಗಿ ರೋಗಗಳಿಗೆ ತುತ್ತಾಗುತ್ತವೆ ಮತ್ತು ಕೆಲವು ಕೀಟಗಳ ದಾಳಿಗೆ ಒಳಗಾಗುತ್ತವೆ.[24][25] ಈ ಕಾರಣದಿಂದಾಗಿ ಮತ್ತು ಅವುಗಳ ಅಂದದಿಂದಾಗಿ, ಗಿಂಕ್ಗೊಗಳು ಅತ್ಯುತ್ತಮ ನಗರದ ಮತ್ತು ನೆರಳಿನ ಮರಗಳಾಗಿವೆ ಹಾಗೂ ಅವನ್ನು ವ್ಯಾಪಕವಾಗಿ ಅನೇಕ ರಸ್ತೆಗಳುದ್ದಕ್ಕೂ ನೆಡಲಾಗುತ್ತದೆ.
ಗಿಂಕ್ಗೊಗಳು ಪೆಂಜಿಂಗ್ ಮತ್ತು ಬೋನ್ಸೈ ಆಗಿ ಬೆಳೆಸಲೂ ಅತ್ಯುತ್ತಮ ಮರಗಳಾಗಿವೆ; ಅವನ್ನು ಕೃತಕವಾಗಿ ಸಣ್ಣದಾಗಿ ಶತಮಾನಗಳಷ್ಟು ಕಾಲ ಇಡಬಹುದು. ಈ ಮರಗಳನ್ನು ಬೀಜಗಳಿಂದ ಬೆಳೆಸಲು ಬಹುಸುಲಭವಾಗಿದೆ.
ಗಿಂಕ್ಗೊದ ಶಾಶ್ವತವಾದ ವ್ಯಾಪ್ತಿನಿರ್ಧಾರದ ಅತ್ಯತ್ತಮ ಉದಾಹರಣೆಯು ಜಪಾನ್ನ ಹಿರೋಷಿಮಾದಲ್ಲಿ ಕಂಡುಬರುತ್ತದೆ. 1945ರ ಪರಮಾಣು ಬಾಂಬ್ ಸ್ಫೋಟದ ಸಂದರ್ಭದಿಂದ 1–2 ಕಿಮೀನಷ್ಟು ವ್ಯಾಪ್ತಿಯ ಪ್ರದೇಶದಲ್ಲಿ ಬೆಳೆಯುತ್ತಿರುವ ಗಿಂಕ್ಗೊದ ಆರು ಮರಗಳು ಸ್ಫೋಟದ ನಂತರ ಉಳಿದ ಕೆಲವು ವಸ್ತುಗಳಲ್ಲಿ ಒಂದಾಗಿವೆ (ಫೋಟೋಗಳು ಮತ್ತು ವಿವರಗಳು). ಆ ಪ್ರದೇಶದಲ್ಲಿ ಹೆಚ್ಚುಕಡಿಮೆ ಇತರ ಎಲ್ಲಾ ಸಸ್ಯಗಳು (ಮತ್ತು ಪ್ರಾಣಿಗಳು) ನಾಶಗೊಂಡಿದ್ದವು. ಗಿಂಕ್ಗೊಗಳು ಸುಟ್ಟುಹೋಗಿದ್ದರೂ, ಉಳಿದುಕೊಂಡು, ಮತ್ತೆ ಶೀಘ್ರದಲ್ಲಿ ಚೆನ್ನಾಗಿ ಬೆಳೆದವು. ಆ ಮರಗಳು ಇಂದೂ ಜೀವಂತವಾಗಿವೆ.
ಗಿಂಕ್ಗೊದ ಎಲೆಯು ಜಪಾನಿಯರ ಚಹಾ ಸಂಪ್ರಾದಾಯಾಚರಣೆಯು ಹುಟ್ಟಿಕೊಂಡ ಉರಾಸೆಂಕೆ ಶಾಲೆಯ ಸಂಕೇತವಾಗಿದೆ. ಈ ಮರವು ಚೀನಾದ ರಾಷ್ಟ್ರೀಯ ಮರವಾಗಿದೆ.
ಬೀಜಗಳೊಳಗಿನ ಕರಟಕಾಯಿಯಂಥ ಗ್ಯಾಮಿಟೊಫೈಟ್ಗಳು ಏಷ್ಯಾದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ ಹಾಗೂ ಇವು ಸಾಂಪ್ರದಾಯಿಕ ಚೈನೀಸ್ ಆಹಾರವಾಗಿವೆ. ಗಿಂಕ್ಗೊ ಬೀಜಕೋಶಗಳನ್ನು ಕಾಂಗೀಯಲ್ಲಿ ಬಳಸುತ್ತಾರೆ. ಇವನ್ನು ಹೆಚ್ಚಾಗಿ ಮದುವೆ ಮತ್ತು ಚೈನೀಸ್ ಹೊಸವರ್ಷದಂಥ ವಿಶೇಷ ಸಂದರ್ಭಗಳಲ್ಲಿ (ಬುದ್ಧನ ಡಿಲೈಟ್ ಎನ್ನುವ ಸಸ್ಯಹಾರಿ ಆಹಾರದ ಭಾಗವಾಗಿ) ಉಪಯೋಗಿಸುತ್ತಾರೆ. ಚೈನೀಸ್ ಸಂಸ್ಕೃತಿಯಲ್ಲಿ ಅವನ್ನು ಆರೋಗ್ಯಕ್ಕೆ ಪ್ರಯೋಜನಕಾರಿಗಳೆಂದು ನಂಬಲಾಗುತ್ತದೆ; ಕೆಲವರು ಅವು ಕಾಮೋತ್ತೇಜಕ ಅಂಶಗಳನ್ನು ಹೊಂದಿವೆಯೆಂದು ಭಾವಿಸುತ್ತಾರೆ. ಜಪಾನೀಸ್ ಅಡುಗೆಯವರು ಗಿಂಕ್ಗೊ ಬೀಜಗಳನ್ನು (ಗಿನ್ನನ್ ಎನ್ನುತ್ತಾರೆ) ಚವನ್ಮುಂಶಿ ಯಂತಹ ತಿನಿಸುಗಳಿಗೆ ಸೇರಿಸುತ್ತಾರೆ. ಬೇಯಿಸಿದ ಬೀಜಗಳನ್ನು ಹೆಚ್ಚಾಗಿ ಇತರ ತಿನಿಸುಗಳೊಂದಿಗೆ ತಿನ್ನಲಾಗುತ್ತದೆ.
ಇದನ್ನು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ (ಒಂದು ದಿನಕ್ಕೆ ಸುಮಾರು 5 ಬೀಜಗಳು) ಅಥವಾ ದೀರ್ಘ ಕಾಲ ಸೇವಿಸಿದರೆ, ಬೀಜದ ಕಚ್ಚಾ ಗ್ಯಾಮಿಟೊಫೈಟ್ (ತಿರುಳು) MPNನಿಂದ (4-ಮೀಥಾಕ್ಸಿಪೈರಿಡಾಕ್ಸಿನ್) ವಿಷದ ಪರಿಣಾಮವನ್ನುಂಟುಮಾಡಬಹುದು. MPNನಿಂದ ಉಂಟಾಗುವ ಸೆಳವನ್ನು ಪೈರಿಡಾಕ್ಸಿನ್ನಿಂದ ತಡೆಗಟ್ಟಬಹುದು ಅಥವಾ ಕೊನೆಗೊಳಿಸಬಹುದೆಂದು ಅಧ್ಯಯನಗಳು ಕಂಡುಹಿಡಿದಿವೆ.
ಕೆಲವರು ಹೊರಗಿನ ಮೃದುವಾದ ಆವರಣ ಸಾರ್ಕೊಟೆಸ್ಟದಲ್ಲಿನ ರಾಸಾಯನಿಕಗಳಿಗೆ ಸೂಕ್ಷ್ಮಗ್ರಾಹಿಯಾಗಿರುತ್ತಾರೆ. ಇವರು ಬೀಜಗಳನ್ನು ಬಳಕೆಗಾಗಿ ತಯಾರಿ ನಡೆಸುವಾಗ ಬಿಸಾಡಬಹುದಾದ ಕೈಚೀಲಗಳನ್ನು ಧರಿಸಿಕೊಂಡು, ಎಚ್ಚರಿಕೆಯಿಂದ ಬೀಜಗಳನ್ನು ಕೈಯಿಂದ ಮುಟ್ಟಬೇಕಾಗುತ್ತದೆ. ಇದರಿಂದ ಉಂಟಾಗುವ ಚರ್ಮದ ಉರಿಯೂತ ಅಥವಾ ಗುಳ್ಳೆಗಳಂತಹ ರೋಲಕ್ಷಣಗಳು ವಿಷಕಾರಿ ಐವಿಯ ಸಂಪರ್ಕದಿಂದ ಉಂಟಾಗುವಂತೆಯೇ ಇರುತ್ತವೆ. ಮೃದುವಾದ ಹೊದಿಕೆಯನ್ನು ತೆಗೆದ ನಂತರ ಬೀಜಗಳು ಕೈಯಿಂದ ಮುಟ್ಟಲು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ.
ಗಿಂಕ್ಗೊ ಎಲೆಗಳ ಸತ್ವಗಳು ಫ್ಲೇವನಾಯ್ಡ್ ಗ್ಲೈಕೊಸೈಡ್ಗಳನ್ನು ಮತ್ತು ಟರ್ಪೆನಾಯ್ಡ್ಗಳನ್ನು ಹೊಂದಿರುತ್ತವೆ (ಗಿಂಕ್ಗೊಲೈಡ್ಗಳು, ಬಿಲೋಬಲೈಡ್ಗಳು) ಹಾಗೂ ಇವನ್ನು ಔಷಧ-ವಿಜ್ಞಾನದಲ್ಲಿ ಬಳಸುತ್ತಾರೆ. ಗಿಂಕ್ಗೊ ಪೂರೈಕೆಗಳನ್ನು ಸಾಮಾನ್ಯವಾಗಿ ಪ್ರತಿ ದಿನಕ್ಕೆ 40–200 ಮಿಗ್ರಾಂನಷ್ಟು ಪ್ರಮಾಣದಲ್ಲಿ ತೆಗೆಯಲಾಗುತ್ತದೆ. ಇತ್ತೀಚೆಗೆ ಪ್ರಾಯೋಗಿಕ ಪ್ರಯೋಗಗಳು, ಬುದ್ಧಿಮಾಂದ್ಯಕ್ಕೆ ಚಿಕಿತ್ಸೆ ನೀಡಲು ಅಥವಾ ಸಾಮಾನ್ಯ ಜನರಲ್ಲಿ ಆಲ್ಜೈಮರ್ ರೋಗದ ದಾಳಿಯನ್ನು ತಡೆಗಟ್ಟಲು ಗಿಂಕ್ಗೊ ನಿಷ್ಪರಿಣಾಮಕಾರಿಯಾಗಿದೆ ಎಂದು ತೋರಿಸಿಕೊಟ್ಟಿವೆ.[26][27]
ಗಿಂಕ್ಗೊ ನೂಟ್ರಾಪಿಕ್ ಗುಣಲಕ್ಷಣಗಳನ್ನು ಹೊಂದಿದೆಯೆಂದು ನಂಬಲಾಗುತ್ತದೆ. ಇದನ್ನು ಮುಖ್ಯವಾಗಿ ಸ್ಮರಣ ಶಕ್ತಿ[28] ಮತ್ತು ಏಕಾಗ್ರತೆ ವರ್ಧಿಸುವ ಹಾಗೂ ತಲೆಸುತ್ತುವ-ಪ್ರತಿರೋಧಕ ಅಂಶವಾಗಿ ಬಳಸಲಾಗುತ್ತದೆ. ಆದರೆ ಅಧ್ಯಯನಗಳು ಅದರ ಪರಿಣಾಮಕಾರಿತ್ವದ ಬಗ್ಗೆ ಭಿನ್ನಾಭಿಪ್ರಾಯವನ್ನು ತೋರಿಸುತ್ತವೆ. ಸ್ಮರಣ ಶಕ್ತಿ ಕಳೆದುಕೊಳ್ಳುವುದನ್ನು ತಡೆಗಟ್ಟುವ ಗಿಂಕ್ಗೊ ಬಿಲೋಬದ ಸಾಮರ್ಥ್ಯವನ್ನು ನಿರ್ಣಯಿಸುವ ಅತಿದೊಡ್ಡ ಮತ್ತು ದೀರ್ಘಕಾಲದ ಸ್ವತಂತ್ರ ಪ್ರಾಯೋಗಿಕ ಪ್ರಯೋಗವು, ಇದರ ಪೂರೈಕೆಯು ಬುದ್ಧಿಮಾಂದ್ಯವನ್ನು ಅಥವಾ ಆಲ್ಜೈಮರ್ನ ರೋಗವನ್ನು ತಡೆಗಟ್ಟುವುದಿಲ್ಲವೆಂದು ತೋರಿಸಿಕೊಟ್ಟಿತು.[29] ಗಿಂಕ್ಗೊವನ್ನು ಮಾರಾಟ ಮಾಡುತ್ತಿದ್ದ ಸಂಸ್ಥೆಯು ಬಂಡವಾಳ ಒದಗಿಸಿದ ಕೆಲವು ಅಧ್ಯಯನಗಳು ನೀಡಿದ ನಿರ್ಣಯದ ಬಗ್ಗೆ ಕೆಲವು ವಾದವಿವಾದಗಳು ಎದ್ದವು.[30]
2002ರಲ್ಲಿ, "ಗಿಂಕ್ಗೊ ಫಾರ್ ಮೆಮರಿ ಎನ್ಹ್ಯಾಂಸ್ಮೆಟ್: ಎ ರ್ಯಾಂಡಮೈಜ್ಡ್ ಕಂಟ್ರೋಲ್ಡ್ ಟ್ರೈಯಲ್" ಎಂಬ ಶೀರ್ಷಿಕೆಯ ಹೆಚ್ಚು-ನಿರೀಕ್ಷೆಯ ಪೇಪರೊಂದು JAMA ದಲ್ಲಿ (ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ) ಕಂಡುಬಂದಿತು. ಸ್ಕ್ವಾಬೆಯ ಬದಲಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆನ್ ಏಜಿಂಗ್ ಪ್ರಾಯೋಜಿಸಿದ ಈ ವಿಲಿಯಮ್ಸ್ ಕಾಲೇಜ್ ಅಧ್ಯಯನವು, ಆರೋಗ್ಯವಂತ ಸ್ವಯಂಪ್ರೇರಿತ 60ಕ್ಕಿಂತ ಹೆಚ್ಚು ವಯಸ್ಸಾದವರಿಗೆ ಗಿಂಕ್ಗೊವನ್ನು ಸೇವಿಸುವಂತೆ ನೀಡಿ, ನಂತರ ಪರಿಣಾಮಗಳನ್ನು ಪರಿಶೀಲಿಸಿತು. ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ನ ಗಿಂಕ್ಗೊ ಫ್ಯಾಕ್ಟ್ ಶೀಟ್ Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಸೂಚಿಸಲಾದ ನಿರ್ಣಯವು ಹೀಗೆ ಹೇಳುತ್ತದೆ: "ತಯಾರಕರ ಸೂಚನೆಗಳನ್ನು ಅನುಸರಿಸಿ ತೆಗೆದುಕೊಂಡರೆ, ಗಿಂಕ್ಗೊ ಆರೋಗ್ಯಪೂರ್ಣ ಜ್ಞಾನಗ್ರಹಣ ಕ್ರಿಯೆಯನ್ನು ಹೊಂದಿರುವ ವಯಸ್ಕರಿಗೆ ಸ್ಮರಣ ಶಕ್ತಿಯಲ್ಲಿ ಅಥವಾ ಸಂಬಂಧಿತ ಜ್ಞಾನಗ್ರಹಣದಲ್ಲಿ ಯಾವುದೇ ಗಮನಾರ್ಹ ಪ್ರಯೋಜನವನ್ನು ನೀಡುವುದಿಲ್ಲ". ... ಈ ಖಂಡೆನೆಗೊಳಗಾದ ನಿರ್ಧಾರಣೆಯ ಪರಿಣಾಮವು, ಸಮಕಾಲೀನ ಸ್ಕ್ವಾಬೆ-ಪ್ರಾಯೋಜಿತ ಅಧ್ಯಯನವು ಕಡಿಮೆ ಜನಪ್ರಿಯತೆಯ ಪತ್ರಿಕೆ ಹ್ಯೂಮನ್ ಸೈಕೊಫಾರ್ಮಕಾಲಜಿಯಲ್ಲಿ ಪ್ರಕಟಣೆಯಾಗುವುದರೊಂದಿಗೆ ಅಭಿವೃದ್ಧಿಗೊಂಡಿತು. ಜೆರ್ರಿ ಫಾಲ್ವೆಲ್ಸ್ ಲಿಬರ್ಟಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಈ ಪ್ರತಿಸ್ಪರ್ಧಿ ಅಧ್ಯಯನವು JAMAದಿಂದ ನಿರಾಕರಿಸಲ್ಪಟ್ಟಿತು ಹಾಗೂ ವಿಭಿನ್ನ ನಿರ್ಣಯಕ್ಕೆ ಬರಲಾಯಿತು: "ಜ್ಞಾನಗ್ರಹಣದ ನ್ಯೂನ್ಯತೆಯಿರುವ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಕೆಲವು ನರ-ಮಾನಸಿಕ/ಸ್ಮರಣ ಶಕ್ತಿಯ ಕ್ರಿಯೆಗಳನ್ನು ವರ್ಧಿಸುವಲ್ಲಿ ಗಿಂಕ್ಗೊ ಬಿಲೋಬ EGb 761ರ ಪ್ರಬಲ ಪರಿಣಾಕಾರಿತ್ವವನ್ನು ಬೆಂಬಲಿಸುವ ವ್ಯಾಪಕವಾದ ಸಾಕ್ಷ್ಯಧಾರವಿದೆ."
ಕೆಲವು ಅಧ್ಯಯನಗಳ ಪ್ರಕಾರ, ಗಿಂಕ್ಗೊ ಗಮನಾರ್ಹವಾಗಿ ಆರೋಗ್ಯವಂತರಲ್ಲಿ ಜಾಗರೂಕತೆಯನ್ನು ಸುಧಾರಿಸಬಹುದು.[31][32] ಅಂತಹ ಒಂದು ಅಧ್ಯಯನವು, ಆ ಪರಿಣಾಮವು ಹೆಚ್ಚುಕಡಿಮೆ ತಕ್ಷಣದಲ್ಲಾಗುತ್ತದೆ ಹಾಗೂ ಸೇವಿಸಿದ 2.5 ಗಂಟೆಗಳ ನಂತರ ಅದರ ಉನ್ನತಿಯನ್ನು ತಲುಪುತ್ತದೆ ಎಂದು ಸೂಚಿಸಿದೆ.[33]
ಇಲಿಗಳ ಮೇಲೆ ನಡೆಸಿದ ಬಳಕೆಗೆ-ಮುಂಚಿನ ಪ್ರಯೋಗದ ಧನಾತ್ಮಕ ಫಲಿತಾಂಶಗಳ ಆಧಾರದಲ್ಲಿ ಗಿಂಕ್ಗೊವನ್ನು ಆಲ್ಜೈಮರ್ನ ರೋಗದ ಚಿಕಿತ್ಸೆಗೆ ಬಳಸಬಹುದೆಂದು ಸೂಚಿಸಲಾಯಿತು.[34] ಆದರೆ JAMA ದಲ್ಲಿ 2008ರಲ್ಲಿ ಪ್ರಕಟವಾದ ಯಾದೃಚ್ಛಿಕರಿಸಿದ ನಿಯಂತ್ರಿತ ಪ್ರಾಯೋಗಿಕ ಪ್ರಯೋಗವೊಂದು, ಮಾನವರ ಬುದ್ಧಿಮಾಂದ್ಯದ ಚಿಕಿತ್ಸೆಯಲ್ಲಿ ಇದರ ಬಳಕೆಯು ನಿಷ್ಫಲಕಾರಿಯಾಗಿದೆಯೆಂದು ಕಂಡುಹಿಡಿಯಿತು..[26][35] JAMA ದಲ್ಲಿ 2009ರಲ್ಲಿ ಪ್ರಕಟವಾದ ಮತ್ತೊಂದು ಯಾದೃಚ್ಛಿಕರಿಸಿದ ನಿಯಂತ್ರಿತ ಪ್ರಾಯೋಗವು, ಜ್ಞಾನಗ್ರಹಣದ ಕುಗ್ಗುವಿಕೆ ಅಥವಾ ಬುದ್ಧಿಮಾಂದ್ಯವನ್ನು ತಡೆಗಟ್ಟುವಲ್ಲಿ ಗಿಂಕ್ಗೊದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಕಂಡುಹಿಡಿಯಿತು.[27]
ಅನೇಕ ಸಂಘರ್ಷದ ಸಂಶೋಧನಾ ಫಲಿತಾಂಶಗಳ ಹೊರತು, ಗಿಂಕ್ಗೊ ಸತ್ವವು ಮಾನವನ ದೇಹದ ಮೇಲೆ ಮೂರು ಪರಿಣಾಮಗಳನ್ನು ಹೊಂದಿದೆ: ಹೆಚ್ಚಿನ ಅಂಗಾಶಗಳಿಗೆ ಮತ್ತು ಅಂಗಗಳಿಗೆ ರಕ್ತದ ಹರಿಯುವಿಕೆಯನ್ನು (ಲೋಮನಾಳದಲ್ಲಿನ ಸೂಕ್ಷ್ಮ-ರಕ್ತಪರಿಚಲನೆಯನ್ನೂ ಒಳಗೊಂಡು) ಸುಧಾರಿಸುತ್ತದೆ; ಸ್ವತಂತ್ರ ರ್ಯಾಡಿಕಲ್ಗಳಿಂದಾಗುವ ಆಕ್ಸಿಡೀಕಾರಕ ಜೀವಕೋಶಗಳ ಹಾನಿಯ ವಿರುದ್ಧ ರಕ್ಷಣೆಯನ್ನು ನೀಡುತ್ತದೆ; ಹಾಗೂ ಅನೇಕ ಹೃದಯರಕ್ತನಾಳದ, ಮೂತ್ರಪಿಂಡಗಳ, ಶ್ವಾಸಕೋಶದ ಮತ್ತು ಕೇಂದ್ರ ನರಮಂಡಲದ ಕಾಯಿಲೆಗಳು ಉಂಟಾಗಲು ಕಾರಣವಾಗುವ ಕಿರುಬಿಲ್ಲೆ-ಸಕ್ರಿಯಗೊಳಿಸುವ ಅಂಶದ ಹೆಚ್ಚಿನ ಪರಿಮಾಣಗಳನ್ನು (ಕಿರುಬಿಲ್ಲೆಗಳ ಗುಂಪುಗೂಡುವಿಕೆ, ರಕ್ತ ಹೆಪ್ಪುಗಟ್ಟುವಿಕೆ)[36] ತಡೆಗಟ್ಟುತ್ತದೆ. ಗಿಂಕ್ಗೊವನ್ನು ಮರುಕಳಿಸುವ ಕುಂಟು ನಡಿಗೆಯ ಚಿಕಿತ್ಸೆಗೆ ಬಳಸಲಾಗುತ್ತದೆ.
ಕೆಲವು ಅಧ್ಯಯನಗಳು ಗಿಂಕ್ಗೊದಿಂದ ಕಿವಿಮೊರೆತದ ರೋಗಲಕ್ಷಣಗಳನ್ನು ಗುಣಪಡಿಸಬಹುದೆಂದು ಸೂಚಿಸುತ್ತವೆ.[37]
ಗಿಂಕ್ಗೊ ಸ್ಕ್ಲೆರೊಸಿಸ್ನಲ್ಲಿ ಪ್ರಯೋಜನಕಾರಿಯಾಗಿದೆ ಹಾಗೂ ಗಂಭೀರ ಪ್ರತಿಕೂಲ ಪರಿಣಾಮ ದರಗಳನ್ನು ಹೆಚ್ಚಿಸದೆ ಜ್ಞಾನಗ್ರಹಣದಲ್ಲಿ[38] ಮತ್ತು ಬಳಲಿಕೆಯಲ್ಲಿ[38] ಸಾಧಾರಣ ಮಟ್ಟದ ಉಪಶಮನಗಳನ್ನು ತೋರಿಸುತ್ತದೆ ಎಂದು ಪೂರ್ವಭಾವಿ ಅಧ್ಯಯನಗಳು ಸೂಚಿಸುತ್ತವೆ.
2003ರಲ್ಲಿ ಭಾರತದ ಚಂಡೀಗರ್ನ ಪೋಸ್ಟ್ಗ್ರ್ಯಾಜ್ವೇಟ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್ನ ಚರ್ಮಶಾಸ್ತ್ರ ವಿಭಾಗವು ನಡೆಸಿದ ಅಧ್ಯಯನವೊಂದು, ವಿಟಿಲಿಗೊದ ಬೆಳವಣಿಗೆಯನ್ನು ತಡೆಗಟ್ಟಲು ಗಿಂಕ್ಗೊ ಒಂದು ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ನಿರ್ಣಯಿಸಿದೆ.[39]
ಗಿಂಕ್ಗೊ ವಿಶೇಷವಾಗಿ ರಕ್ತ ಪರಿಚಲನೆಯ ಕಾಯಿಲೆಗಳನ್ನು ಹೊಂದಿರುವವರಿಗೆ ಮತ್ತು ಐಬುಪ್ರೋಫೆನ್, ಆಸ್ಪರಿನ್ ಅಥವಾ ವಾರ್ಫರಿನ್ನಂತಹ ಹೆಪ್ಪುರೋಧಕಗಳನ್ನು ತೆಗೆದುಕೊಳ್ಳುವವರಿಗೆ ಅನಪೇಕ್ಷಿತ ಪರಿಣಾಮಗಳನ್ನು ಹೊಂದಿರಬಹುದು. ಆದರೆ ಗಿಂಕ್ಗೊ ಆರೋಗ್ಯವಂತ ವ್ಯಕ್ತಿಗಳಲ್ಲಿ ವಾರ್ಫರಿನ್ನ ಹೆಪ್ಪುರೋಧಕ ಗುಣಲಕ್ಷಣಗಳ ಅಥವಾ ಫಾರ್ಮಕೊಡೈನಮಿಕ್ಸ್ನ ಮೇಲೆ ಯಾವುದೇ ಪರಿಣಾಮವನ್ನು ಹೊಂದಿಲ್ಲವೆಂದು ಇತ್ತೀಚಿನ ಅಧ್ಯಯನಗಳು ಕಂಡುಹಿಡಿದಿದೆ.[40][41] ಕೆಲವು ಪ್ರಕಾರದ ಉಪಶಾಮಕ-ನಿರೋಧಕಗಳನ್ನು (ಮೋನೊಅಮೈನ್ ಆಕ್ಸಿಡೀಕಾರಕ ನಿರೋಧಕಗಳು ಮತ್ತು ಸೆರಟೋನಿನ್ ಪುನಃಗ್ರಹಿಸುವ ಪ್ರತಿರೋಧಕಗಳು[42][43]) ತೆಗೆದುಕೊಳ್ಳುವವರು ಅಥವಾ ಗರ್ಭಿಣಿಯರು ವೈದ್ಯರನ್ನು ಭೇಟಿ ಮಾಡದೆ ಗಿಂಕ್ಗೊವನ್ನು ಸೇವಿಸಬಾರದು.
ಗಿಂಕ್ಗೊದ ಅಡ್ಡಪರಿಣಾಮಗಳು ಮತ್ತು ಅಪಾಯಗಳೆಂದರೆ: ರಕ್ತಸೋರುವಿಕೆಯ ಅಪಾಯ ಹೆಚ್ಚಬಹುದು, ಜಠರಗರುಳಿನ ಅಸ್ವಸ್ಥತೆ, ಪಿತ್ತೋದ್ರೇಕ, ವಾಂತಿ, ಭೇದಿ, ತಲೆನೋವು, ತಲೆಸುತ್ತುವಿಕೆ, ಹೃದಯ ಬಡಿತ ಹೆಚ್ಚಾಗುವಿಕೆ ಮತ್ತು ಚಡಪಡಿಕೆ.[43][44] ಯಾವುದೇ ಅಡ್ಡಪರಿಣಾಮಗಳು ಅನುಭವಕ್ಕೆ ಬಂದರೆ, ಅದರ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು.
ವಾರ್ಫರಿನ್ ಅಥವಾ ಕೌಮಡಿನ್ನಂತಹ ಔಷಧೀಯ ರಕ್ತ ಹೆಪ್ಪುರೋಧಕಗಳನ್ನು ಸೇವಿಸುವವರು ಗಿಂಗ್ಕೊ ಬಿಲೋಬದ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಮೊದಲು ಅವರ ವೈದ್ಯರನ್ನು ಭೇಟಿ ಮಾಡಬೇಕು ಏಕೆಂದರೆ ಇದು ಹೆಪ್ಪುರೋಧಕ-ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.
ಗಿಂಗ್ಕೊ ಬಿಲೋಬ ಎಲೆಗಳಲ್ಲಿ ಅಮೆಂಟೊಫ್ಲೇವನ್ ಇರುವಿಕೆಯು CYP3A4 ಮತ್ತು CYP2C9 ಮೊದಲಾದವುಗಳ ಪ್ರಬಲ ಪ್ರತಿರೋಧದ ಮೂಲಕ ಹೆಚ್ಚಿನ ಔಷಧಿಗಳೊಂದಿಗೆ ಪರಸ್ಪರ ಕ್ರಿಯೆ ನಡೆಸುವಂತೆ ಮಾಡುತ್ತದೆ; ಆದರೆ ಇದನ್ನು ಬೆಂಬಲಿಸುವ ಯಾವುದೇ ಪ್ರಾಯೋಗಿಕ ಸಾಕ್ಷ್ಯಗಳಿಲ್ಲ. ಅಮೆಂಟೊಫ್ಲೇವನ್ ಪ್ರಮಾಣವು ವಾಣಿಜ್ಯ ಗಿಂಗ್ಕೊ ಬಿಲೋಬದ ಉತ್ಪನ್ನಗಳಲ್ಲೂ ಕಂಡುಬರುವ ಸಾಧ್ಯತೆಯಿರುತ್ತದೆ, ಆದರೆ ಇದು ಔಷಧೀಯವಾಗಿ ತುಂಬಾ ಕಡಿಮೆ ಕ್ರಿಯಾಕಾರಿಯಾಗಿರುತ್ತದೆ.
ಗಿಂಕ್ಗೊ ಬಿಲೋಬ ಎಲೆಗಳು ಉರುಷಿಯಾಲ್ಗಳೆನ್ನುವ ಪ್ರಬಲ ಅಲರ್ಜಿಕಾರಕಗಳೊಂದಿಗೆ ಉದ್ದ-ಸರಪಳಿಯ ಆಲ್ಕೈಲ್ಫೀನಾಲ್ಗಳನ್ನೂ (ವಿಷಕಾರಿ ಐವಿಯಂತೆ) ಹೊಂದಿರುತ್ತವೆ.[45] ಬಹುಹಿಂದಿನಿಂದಲೂ ವಿಷಕಾರಿ ಐವಿ, ಮಾವಿನ ಹಣ್ಣುಗಳು ಮತ್ತು ಇತರ ಉರುಷಿಯಾಲ್-ಉತ್ಪಾದಿಸುವ ಸಸ್ಯಗಳಿಗೆ ಪ್ರಬಲ ಅಲರ್ಜಿಯ ಪ್ರತಿಕ್ರಿಯೆಗಳನ್ನು ಹೊಂದಿರುವವರು ಗಿಂಕ್ಗೊ-ಒಳಗೊಂಡಿರುವ ಗುಳಿಗೆ, ಸಂಯುಕ್ತ ಅಥವಾ ಪದಾರ್ಥಗಳನ್ನು ಸೇವಿಸಿದಾಗ ಪ್ರತಿಕೂಲ ಕ್ರಿಯೆಯ ಪರಿಣಾಮಕ್ಕೆ ಒಳಗಾಗುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.