![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a4/Kargil.png/640px-Kargil.png&w=640&q=50)
ಕಾರ್ಗಿಲ್ ಯುದ್ಧ
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ (೧೯೯೯) / From Wikipedia, the free encyclopedia
ಕಾರ್ಗಿಲ್ ಸಂಘರ್ಷ ವೆಂದೇ ಹೆಸರಾದ ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆ (LOC) ಇರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು. ಭಾರತದಲ್ಲಿ ಈ ಸಂಘರ್ಷವನ್ನು ಆಪರೇಷನ್ ವಿಜಯ್ ಎಂದೂ ಉಲ್ಲೇಖಿಸಲಾಗುತ್ತದೆ, ಇದು ಈ ಪ್ರದೇಶದಲ್ಲಿನ ಭಾರತೀಯ ಸೇನಾ ಕಾರ್ಯಾಚರಣೆಯ ಸಂಕೇತನಾಮವಾಗಿದೆ. ಭಾರತೀಯ ವಾಯುಪಡೆಯು ಭಾರತೀಯ ಸೇನೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಸೇನೆ ಮತ್ತು ಅರೆಸೇನಾ ಪಡೆಗಳನ್ನು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಖಾಲಿಯಾದ ಭಾರತೀಯ ಸ್ಥಾನಗಳಿಂದ ಹೊರಹಾಕಿತು, ಇದನ್ನು ಆಪರೇಷನ್ ಸಫೇದ್ ಸಾಗರ್ (ಬಿಳಿ ಸಾಗರ) ಎಂದು ಹೆಸರಿಸಲಾಯಿತು.
| ||||||||||||||||||||||||||||||||
ಉಭಯ ರಾಷ್ಟ್ರಗಳ ನಡುವಿನ de facto (ವಾಸ್ತವವಾಗಿ) ಗಡಿ ರೇಖೆಯಲ್ಲಿರುವ ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ನುಸುಳಿದ್ದೇ ಯುದ್ಧಕ್ಕೆ ಕಾರಣ.[19] ಯುದ್ಧದ ಆರಂಭದ ಹಂತಗಳಲ್ಲಿ, ಕಾರ್ಗಿಲ್ ಕದನಕ್ಕೆ ಸ್ವತಂತ್ರ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆ ಕೂರಿಸಿತು, ಆದರೆ ಯುದ್ಧಾನಂತರದ ಸಾವು ನೋವುಗಳ ದಾಖಲೆಗಳು ಮತ್ತು ಆ ಬಳಿಕ ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರು ನೀಡಿದ ಹೇಳಿಕೆಗಳು, ಜನರಲ್ ಅಶ್ರಫ್ ರಷೀದ್ ನೇತೃತ್ವದ ಪಾಕಿಸ್ತಾನಿ ಅರೆಸೇನೆ ಪಡೆಗಳು ಈ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ರುಜುವಾತು ಮಾಡಿತು.[20][21][22][23] ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳು LoCಯಲ್ಲಿ ಆಕ್ರಮಿಸಿಕೊಂಡ ಭಾರತದ ಬಹುತೇಕ ನೆಲೆಗಳನ್ನು ಬಳಿಕ ಭಾರತದ ಸೇನೆಯು ಭಾರತೀಯ ವಾಯು ಪಡೆಯ ಬೆಂಬಲದೊಂದಿಗೆ ಮರುವಶಕ್ಕೆ ತೆಗೆದುಕೊಂಡಿತು. ಅಂತಾರಾಷ್ಟ್ರೀಯವಾಗಿ ರಾಜತಾಂತ್ರಿಕ ವಿರೋಧ ವ್ಯಕ್ತವಾಗಿದ್ದರಿಂದಾಗಿ, ಪಾಕಿಸ್ತಾನದ ಪಡೆಗಳು LOCಯ ಭಾರತದ ನೆಲೆಗಳಿಂದ ಬಲವಂತವಾಗಿ ಹಿಂದಕ್ಕೆ ಸರಿಯಬೇಕಾಯಿತು.
ಅತೀ ಎತ್ತರದ ಪರ್ವತಚ್ಛಾದಿತ ಪ್ರದೇಶದಲ್ಲಿ ಕಾದಾಟ ಮಾಡಿದಕ್ಕೆ ಈ ಯುದ್ಧ ಇತ್ತೀಚಿನ ಉದಾಹರಣೆಯಾಗಿದ್ದು, ಉಭಯ ಕಡೆಗಳೂ ಗಣನೀಯವಾಗಿ ಸೈನ್ಯ ವ್ಯವಸ್ಥಾಪನಾ ತಂತ್ರದ ಸಮಸ್ಯೆಗಳನ್ನು ಎದುರಿಸಬೇಕಾಯಿತು. 1969ರಲ್ಲಿ ಚೀನಾ-ಸೋವಿಯತ್ ಗಡಿ ಸಂಘರ್ಷದ ನಂತರ, ಯಾವುದೇ ಎರಡು ರಾಷ್ಟ್ರಗಳು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಅವುಗಳ ನಡುವೆ ನಡೆದ ಎರಡನೇ ನೇರ ಭೂ-ಯುದ್ಧವಾಗಿದೆ. ಭಾರತವು ತನ್ನ ಮೊದಲ ಯಶಸ್ವಿ ಪರೀಕ್ಷೆಯನ್ನು 1974 ರಲ್ಲಿ ನಡೆಸಿತು; ಅದೇ ಸಮಯದಿಂದ ರಹಸ್ಯವಾಗಿ ತನ್ನ ಪರಮಾಣು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಿದ್ದ ಪಾಕಿಸ್ತಾನವು 1998 ರಲ್ಲಿ ತನ್ನ ಮೊದಲ ಪರೀಕ್ಷೆಯನ್ನು ನಡೆಸಿತು, ಅದೂ ಕೂಡ ಭಾರತದ ಎರಡನೇ ಟೆಸ್ಟ್ ಸರಣಿಯ ಕೇವಲ ಎರಡು ವಾರಗಳ ನಂತರ.[ಸೂಕ್ತ ಉಲ್ಲೇಖನ ಬೇಕು]