ಎಮಲ್ಷನ್
From Wikipedia, the free encyclopedia
ಒಂದು ದ್ರವವನ್ನು ಕುರಿತು ಅಮಿಶ್ರಣೀಯವಾದ (ಇಮ್ಮಿಸಿಬಲ್) ಇನ್ನೊಂದು ದ್ರವದಲ್ಲಿ ಮೊದಲಿನ ದ್ರವದ ಪರಿಕ್ಷೇಪಣ. ಆಲಿವ್ ಎಣ್ಣೆ ಮತ್ತು ನೀರು ಪರಸ್ಪರ ಮಿಳಿತವಾಗುವುದಿಲ್ಲ. ಇಂಥ ದ್ರವ ಜೋಡಿಯನ್ನು ತೀವ್ರವಾಗಿ ಕುಲುಕಿದಾಗ ಒಂದು ದ್ರವ ಸೂಕ್ಷ್ಮಹನಿಗಳ ರೂಪದಲ್ಲಿ ಮತ್ತೊಂದರಲ್ಲಿ ಪರಿಕ್ಷೇಪಿತವಾಗುವುದು. ಇಂಥ ನಿಕಟ ದ್ರವಮಿಶ್ರಣವೇ ಎಮಲ್ಷನ್. ಹನಿಗಳಾಗಿ ಹಂಚಿಹೋಗಿರುವ ದ್ರವವನ್ನು ಪರಿಕ್ಷೇಪಿತ ವಸ್ತುವೆಂದೂ (ಡಿಸ್ಪರ್ಸ್ಡ್ ಫೇಸ್) ಅದನ್ನು ಲೀನಮಾಡಿಕೊಂಡಿರುವ ಮತ್ತೊಂದು ದ್ರವವನ್ನು ಪರಿಕ್ಷೇಪಣ ಮಾಧ್ಯಮವೆಂದೂ (ಡಿಸ್ಪರ್ಶನ್ ಮೀಡಿಯಂ) ಪರಿಗಣಿಸಲಾಗುವುದು. ಸಾಮಾನ್ಯವಾಗಿ ಒಂದು ದ್ರವ ನೀರಾಗಿದ್ದು ಮತ್ತೊಂದು ಎಣ್ಣೆಯಂಥ ವಸ್ತುವಾಗಿರುವ ಸಂದರ್ಭಗಳೇ ಹೆಚ್ಚು. ಹೀಗಾಗಿ ನೀರು-ಎಣ್ಣೆ ಎಮಲ್ಷನುಗಳೆಂದು ಎರಡು ಸ್ಥೂಲ ವರ್ಗಗಳಾಗಿ ವಿಭಾಗಿಸುವುದು ರೂಢಿ. ಎಣ್ಣೆ ಪರಿಕ್ಷೇಪಣ ಮಾಧ್ಯಮವಾಗಿದ್ದರೆ ನೀರು/ಎಣ್ಣೆ ಎಮಲ್ಷನ್ ಎನಿಸಿಕೊಳ್ಳುತ್ತದೆ. ಇದಕ್ಕೆ ಬೆಣ್ಣೆ ಮತ್ತು ಕೋಲ್ಡ್ ಕ್ರೀಮ್ ಉದಾಹರಣೆಗಳು. ನೀರು ಪರಿಕ್ಷೇಪಣ ಮಾಧ್ಯಮವಾಗಿದ್ದರೆ ಎಣ್ಣೆ/ನೀರು ಎಮಲ್ಷನ್ ಪ್ರಾಪ್ತವಾಗುವುದು. ಇದಕ್ಕೆ ಹಾಲು, ವ್ಯಾನಿಷಿಂಗ್ ಕ್ರೀಮ್, ಸ್ಕಾಟ್ಸ್ ಎಮಲ್ಷನ್, ಫೆನೈಲ್ ಮತ್ತು ಲೈಸಾಲ್ ನಿದರ್ಶನಗಳು.
![Thumb image](http://upload.wikimedia.org/wikipedia/commons/thumb/c/ca/Emulsions.svg/180px-Emulsions.svg.png)
- ಎರಡು ಬೆರೆಯದ ದ್ರವಗಳು, ಇನ್ನೂ ಎಮಲ್ಸೀಕರಿಸಿಲ್ಲ
- ವಸ್ತು I ರಲ್ಲಿ ಚದುರಿದ ವಸ್ತು II ರ ಎಮಲ್ಷನ್
- ಅಸ್ಥಿರವಾದ ಎಮಲ್ಷನ್ ಹಂತಹಂತವಾಗಿ ಬೇರ್ಪಡುತ್ತದೆ
- ವಸ್ತು I ಮತ್ತು ವಸ್ತು IIರ ನಡುವಿನ ಸಂಧಿಸ್ಥಳದ ಮೇಲೆ ಬಾಹ್ಯತಲ ಸಾಂದ್ರತಾಹ್ರಾಸಕವು (ಕಣಗಳ ಸುತ್ತಲೂ ರೂಪರೇಖೆಯಿದೆ) ತನ್ನನ್ನು ತಾನು ಸ್ಥಾಪಿಸಿಕೊಂಡು ಎಮಲ್ಷನನ್ನು ಸ್ಥಿರೀಕರಿಸುತ್ತದೆ