ಕಾರ್ಬೋಹೈಡ್ರೇಟುಗಳು
From Wikipedia, the free encyclopedia
ಪಾಲಿಹೈಡ್ರಾಕ್ಸಿ ಆಲ್ಡಿಹೈಡುಗಳು ಇಲ್ಲವೆ ಪಾಲಿಹೈಡ್ರಾಕ್ಸಿ ಕೀಟೋನುಗಳು. ಜಲವಿಶ್ಲೇಷಣೆಗೆ ಒಳಪಡಿಸಿದಾಗ ಮೇಲಿನ ಎರಡು ಸಂಯುಕ್ತಗಳಲ್ಲಿ ಯಾವುದೇ ಒಂದನ್ನು ನೀಡುವ ವಸ್ತುಗಳಿಗೂ ಇದೇ ಹೆಸರಿದೆ. ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ದೃಷ್ಟಿಗಳಿಂದ ಕಾರ್ಬೋಹೈಡ್ರೇಟುಗಳು ಪ್ರಾಮುಖ್ಯವಾದವೂ ಹೌದು. ಕುತೂಹಲಕರವಾದವೂ ಹೌದು. ಆಹಾರ ಪದಾರ್ಥಗಳ ರೂಪದಲ್ಲಿ ಅವು ಮನುಷ್ಯರಿಗೂ ಪ್ರಾಣಿಗಳಿಗೂ ವಿಪುಲಶಕ್ತಿಯ ಆಕರಗಳು. ಅಲ್ಲದೆ ಅವು ಭೂಮಿಯ ಗತಕಾಲದಲ್ಲಿ ಹುದುಗಿಹೋಗಿ ಪರಿವರ್ತನೆಗೊಂಡು ಕಲ್ಲಿದ್ದಲು ಹಾಗೂ ಪೀಟ್ ರೂಪ ತಳೆದು ಪುನಃ ಶಕ್ತಿಯ ಮೂಲಗಳಾಗಿವೆ. ಸಸ್ಯಕೋಶದಲ್ಲಿ ದೊರೆಯುವ ಸ್ಟಾರ್ಚ್ ಮತ್ತು ಪ್ರಾಣಿಗಳ ಅಂಗಾಂಶಗಳಲ್ಲಿ ದೊರೆಯುವ ಗ್ಲೈಕೊಜನ್-ಇವು ಕಾರ್ಬೋಹೈಡ್ರೇಟುಗಳ ಪ್ರಮುಖ ನಿಧಿಗಳು. ಇವೆರಡೂ ಡಿ-ಗ್ಲೂಕೋಸಿನ ಬಹ್ವಂಗಿಗಳು (ಪಾಲಿಮರ್ಸ್). ಸ್ತನಿಗಳಲ್ಲಿ ಗ್ಲೈಕೋಲಿಪೊಪ್ರೊಟಿನುಗಳು-ಲಿಪಿಡ್ಗಳಿಗೆ ಬದ್ಧವಾಗಿರುವ ಗ್ಲೈಕೋಪ್ರೋಟೀನುಗಳು-ಕೋಶದ ಪೊರೆಗಳ ಬೃಹತ್ ಆವಶ್ಯಕ ರಚನಾತ್ಮಕ ಭಾಗಗಳಾಗಿಯೂ ಕೋಶದ ಕಣದಂಥ (ವಿವಿಕ್ತ) ಅಂಗಕಗಳಾಗಿಯೂ (ಆರ್ಗ್ನೆಲ್ಸ್) ಪ್ರಮುಖವಾಗಿವೆ. ಬಹು ಶರ್ಕರ-ಪ್ರೋಟೀನ್ ಸಂಬದ್ಧಗಳು ನಿರೋಧಕಗಳ ಉತ್ಪತ್ತಿಯಲ್ಲಿ ನಿರೋಧಜನಕಗಳಾಗಿ ಪಾತ್ರ ವಹಿಸುವ ಸಾಮಥ್ರ್ಯ ಪಡೆದಿವೆ. ಬಹುಶರ್ಕರಗಳು ದೇಹದಲ್ಲಿ ಬಾಹ್ಯಕೋಶಿಕ (ಪಾಚಕ) ಆಧಾರ ವಸ್ತುಗಳ ಪ್ರಮುಖ ಭಾಗಗಳಾಗಿಯೂ ಇವೆ.[1]