ರಕ್ತ ಸಂಬಂಧ
From Wikipedia, the free encyclopedia
ರಕ್ತ ಸಂಬಂಧ ಎಂದರೆ ಪೂರ್ವಿಕರ (ಪೂರ್ವಜರು, ಮೂಲಪುರುಷರು) ವಂಶದಲ್ಲಿ ಹುಟ್ಟಿ, ಬೆಳೆದುಬಂದಿರುವ, ಆ ವಂಶದ ಕೆಲವೊಂದು ಮೂಲಭೂತ ಲಕ್ಷಣಗಳು ಎನಿಸಿಕೊಂಡಿರುವ ವಂಶವಾಹೀ ಗುಣಗಳನ್ನು ಪಡೆದುಕೊಂಡು, ಬೇರೆ ಬೇರೆ ಕುಟುಂಬಗಳಿಗೆ ಸೇರಿರುವ ಸದಸ್ಯರಲ್ಲಿ (ಬಂಧುಗಳು) ಕಂಡುಬರುವ ಸ್ವಭಾವ, ಗುಣ, ಇಲ್ಲವೆ ಸಂಬಂಧ (ಕಿನ್ಷಿಪ್). ಇದಕ್ಕೆ ಬಂಧುತ್ವ ಎಂಬ ಹೆಸರೂ ಇದೆ. ಹೀಗಾಗಿ ಈ ಪರಿಕಲ್ಪನೆ ಸಾಮಾಜಿಕ ಹಾಗು ಸಾಂಸ್ಕೃತಿಕ ಅಂಶಗಳನ್ನು ಆಧರಿಸಿರುವಂಥದ್ದಾಗಿದೆ. ಇಲ್ಲಿ ವಿವಾಹ ಎನ್ನುವುದು ರಕ್ತಸಂಬಂಧವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾನವ ಜೀವನದ ಮೂರು ಮೂಲಭೂತ ಸಂಗತಿಗಳು ಎಂದರೆ ಸಂಭೋಗ, ಜನನ ಮತ್ತು ಮರಣ. ಸಂಭೋಗ ಎನ್ನುವುದು ಗಂಡು - ಹೆಣ್ಣುಗಳ ನಡುವೆ ಜರುಗುವ ಲೈಂಗಿಕ ಕ್ರಿಯೆ. ಜನನ ಎನ್ನುವುದು ಈ ಕ್ರಿಯೆಯ ಉತ್ತರೋತ್ತರ ಪರಿಣಾಮ. ಮರಣ ಎನ್ನುವುದು ವ್ಯಕ್ತಿಯ ಅವಸಾನಘಟ್ಟ, ಈ ಮೂರು ಪ್ರಕ್ರಿಯೆಗಳ ನಡುವೆ ಏರ್ಪಡುವ ಅಮೂರ್ತಬಂಧನವೇ ರಕ್ತಸಂಬಂಧ. ವ್ಯಕ್ತಿಯೊಬ್ಬನ ಮರಣ ಅವನ ಜೀವನ ಪ್ರಕ್ರಿಯೆಯಲ್ಲಿ ಸಂಬಂಧಿಗಳ ನಡುವೆ ಅಂತರವನ್ನು ಏರ್ಪಡಿಸುವುದಾದರೂ ಆ ಸ್ಥಾನದ ಪೂರೈಕೆಯ ಆವಶ್ಯಕತೆಯನ್ನು ಸೂಚಿಸುತ್ತದೆ.
ಈ ಮೂಲಭೂತ ಪರಿಕಲ್ಪನೆಗಳ ವಿಚಾರವಾಗಿ ತಾರ್ಕಿಕ ವಿಶ್ಲೇಷಣೆ ಮಾಡುವ ಕೆಲಸ ರಕ್ತಸಂಬಂಧದ ಅಧ್ಯಯನದಲ್ಲಿ ಅಡಕವಾಗಿದೆ. ಮನುಷ್ಯನ ಹೊರತಾಗಿ ಇತರ ಪ್ರಾಣಿಗಳಿಗೆ ಈ ಸಂಬಂಧವನ್ನು ಕಲ್ಪಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಇದು ಎಲ್ಲ ಸಾಮಾಜಿಕ ಸಂಬಂಧಗಳಿಗಿಂತಲೂ ಪ್ರಬಲವೆನಿಸುವ ಸಂಬಂಧವೂ ಹೌದು. ಸರಳ ಸಮಾಜಗಳಲ್ಲಿ ರಕ್ತಸಂಬಂಧ ಅವುಗಳ ಎಲ್ಲ ಅಂಗಗಳಲ್ಲಿಯೂ ಪ್ರಾಧಾನ್ಯವನ್ನು ಪಡೆದುಕೊಂಡಿವೆ. ರಕ್ತಸಂಬಂಧದ ಆಧಾರದ ಮೇಲೆ ಏರ್ಪಟ್ಟ ಗುಂಪು ಗಾತ್ರದಲ್ಲಿ ಅತಿದೊಡ್ಡದಾಗಿದ್ದರೆ ಅದರಿಂದ ಅನಾನುಕೂಲಗಳೂ ಹೆಚ್ಚುತ್ತವೆ. ಆದ್ದರಿಂದ ಎಲ್ಲ ಸಮಾಜಗಳಲ್ಲಿಯೂ ಅದರ ಗಾತ್ರವನ್ನೂ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಇದು ಸಾಮಾನ್ಯವಾಗಿ ವಂಶಾನುಕ್ರಮದ ನಿಯಮಗಳ ಮೂಲಕ ನಡೆಯುವಂಥದು.
ಪ್ರಾಥಮಿಕ ಸಂಬಂಧಿಗಳ ನಡುವಿನ ಲೈಂಗಿಕ ನಿಷೇಧದ ತತ್ತ್ವವನ್ನು ಆಧರಿಸಿ ಬಂಧುತ್ವ ವ್ಯವಸ್ಥೆಯ ಸೌಧವನ್ನು ನಿರ್ಮಿಸಲಾಗಿದೆ. ಪ್ರಾಥಮಿಕ ಬಂಧುಗಳೆಂದರೆ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ, ಮಗ ಮತ್ತು ಮಗಳು, ಪ್ರಾಥಮಿಕ ಸಂಬಂಧಿಗಳ ನಡುವಿನ ಲೈಂಗಿಕ ಸಂಬಂಧಕ್ಕೆ ಅಗಮ್ಯಗಮನ (ಇನ್ಸೆಸ್ಟ್) ಎಂದು ಹೆಸರು.[1][2][3][4][5][6][7] ಈ ಸಂಬಂಧದ ನಿಷೇಧಕ್ಕೆ ಅಗಮ್ಯಗಮನ (ಇನ್ಸೆಸ್ಟ್ ಟ್ಯಾಬೂ) ಎಂದು ಹೆಸರು. ಈ ನಿಷೇಧವನ್ನು ಇತರ ದೂರದ ಕೆಲವು ಸಂಬಂಧಿಗಳಿಗೂ ವಿಸ್ತರಿಸಲಾಗುತ್ತದೆ. ಎಲ್ಲ ಸಮಾಜಗಳಲ್ಲಿಯೂ ಅಗಮ್ಯ ಗಮನದ ಕೆಲವು ಘಟನೆಗಳು ನಡೆದಿರುವ ಪ್ರಸಂಗಗಳೂ ಇವೆ. ಆದ್ದರಿಂದಲೇ ಈ ನಿಷೇಧದ ಅಗತ್ಯ ಕಂಡುಬಂದಿರುವುದು ಹಿಂದಿನ ಕಾಲದ ಕೇವಲ ಕೆಲವೇ ಸಮಾಜಗಳಲ್ಲಿ; ಆ ಸಮಾಜಗಳ ಕೆಲವು ವ್ಯಕ್ತಿಗಳಿಗೆ ಮಾತ್ರ. ವಿಶೇಷವಾಗಿ ರಾಜಕುಟುಂಬದವರಿಗೆ ಅಗಮ್ಯ ಗಮನಕ್ಕೆ ಅವಕಾಶ ದೊರೆಯುತ್ತಿತ್ತು. ಈಗಿನ ಯಾವುದೇ ಸಮಾಜದವರಲ್ಲಿ ಅಗಮ್ಯಗಮನ ಸಂಪ್ರದಾಯವಾಗಿ ಉಳಿದಿಲ್ಲ.
ಬಂಧುತ್ವದ ಅಧ್ಯಯನದಲ್ಲಿ ಅಹಂ (ಈಗೋ) ಎಂಬ ಪರಿಕಲ್ಪನೆ ಪ್ರಧಾನವಾಗಿ ಇರುವಂಥದು. ಯಾವ ವ್ಯಕ್ತಿಯ ಮೂಲಕ ಸಂಬಂಧಗಳನ್ನು ಗುರುತಿಸುತ್ತೇವೆಯೋ ಅವನನ್ನು ಇಲ್ಲವೆ ಅವಳನ್ನು ಅಹಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಇಬ್ಬರ ನಡುವಿನ ಕೆಲವು ಸಂಬಂಧಗಳ ಮಧ್ಯೆ ಕೊಂಡಿಯೆನಿಸುವ ಕೆಲವು ಬಂಧು ವರ್ಗದವರೂ ಇರುತ್ತಾರೆ.