ಕನ್ನಡ ಭಾಷೆಯಲ್ಲಿ ಮೃತ ಸಮುದ್ರ ( ಹೀಬ್ರೂ ಭಾಷೆಯಲ್ಲಿ ಲವಣದ ಸಮುದ್ರ, ಅರಾಬಿಕ್ ಭಾಷೆಯಲ್ಲಿ ಮೃತ ಸಮುದ್ರ) ಎಂದು ಕರೆಯಬಹುದಾದ ಸಮುದ್ರವನ್ನು 'ಡೆಡ್ ಸೀ' ಎಂದು ಗುರುತಿಸಲಾಗಿದೆ. ಇಸ್ರೇಲ್‍‍ ಮತ್ತು ಜೋರ್ಡಾನ್‍‍ ರಾಷ್ಟ್ರಗಳ ನಡುವೆ ಇರುವ ಒಂದು ವಿಶಾಲ ಲವಣ ಸರೋವರ. ಸಮುದ್ರ ಮಟ್ಟದಿಂದ ೪೨೨ ಮೀಟರ್ ಕೆಳಗೆ ಇರುವ ಮೃತ ಸಮುದ್ರ ಮತ್ತು ಅದರ ತೀರಗಳು ಭೂಮಿಯ ನೆಲಪ್ರದೇಶದಲ್ಲಿ ಅತ್ಯಂತ ತಗ್ಗಿನ ಸ್ಥಳಗಳಾಗಿವೆ. ಮೃತ ಸಮುದ್ರವು ಜಗತ್ತಿನಲ್ಲಿನ ಉಪ್ಪಿನ ಸರೋವರಗಳ ಪೈಕಿ ಅತ್ಯಂತ ಆಳವುಳ್ಳದ್ದಲ್ಲದೆ ಅತ್ಯಂತ ಹೆಚ್ಚು ಲವಣಯುಕ್ತ ಜಲಸಮೂಹಗಳಲ್ಲಿ ಒಂದಾಗಿದೆ. ಮೃತ ಸಮುದ್ರದ ನೀರಿನಲ್ಲಿ ೩೩.೭ ಶೇಕಡಾ ಲವಣಗಳಿವೆ. ಇದು ಸಾಗರಗಳ ನೀರಿಗಿಂತ ೮.೬ ಪಟ್ಟು ಹೆಚ್ಚು ಉಪ್ಪಾಗಿರುತ್ತದೆ. ಮೃತ ಸಮುದ್ರ ಇಷ್ಟು ಲವಣಯುಕ್ತವಾಗಿರುವುದರಿಂದಾಗಿ ಅದರ ನೀರಿನಲ್ಲಿ ಯಾವುದೇ ಜೀವಿಗಳು ಬದುಕಲು ಸಾಧ್ಯವಿಲ್ಲವಾಗಿದೆ. ಆದ್ದರಿಂದಲೇ ಈ ಜಲಸಮೂಹಕ್ಕೆ ಮೃತಸಮುದ್ರ ಎಂಬ ಹೆಸರು ಬಂದಿರುತ್ತದೆ.

Thumb
ಮೃತ ಸಮುದ್ರದ ಉಪಗ್ರಹ ಚಿತ್ರ.

ಪ್ರವಾಸಿಗಳ ಆಕರ್ಷಣಾ ಕೇಂದ್ರ

ಜೊತೆಗೆ ಈ ಪ್ರಮಾಣದ ಲವಣಗಳಿಂದಾಗಿ ಇದರ ನೀರಿನ ಸಾಂದ್ರತೆಯು ಬಲು ಹೆಚ್ಚಾಗಿದ್ದು ಇದರಲ್ಲಿ ಮನುಷ್ಯರು ಮುಳುಗಲಾರರು. ಈ ವೈಶಿಷ್ಟ್ಯದಿಂದಾಗಿ ಮೃತ ಸಮುದ್ರವು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದು. ಇದರ ನೀರಿನ ಮೇಲೆ ಸರಾಗವಾಗಿ ತೇಲುತ್ತ ಸಮಯ ಕಳೆಯುವುದು ಪ್ರವಾಸಿಗರಿಗೊಂದು ಮೋಜು. ಮೃತ ಸಮುದ್ರದ ಉದ್ದ ೬೭ ಕಿ.ಮೀ. ಮತ್ತು ಅತ್ಯಂತ ಹೆಚ್ಚಿನ ಅಗಲ ೧೮ ಕಿ.ಮೀ. ಜೋರ್ಡಾನ್ ಬಿರುಕು ಕಣಿವೆಯಲ್ಲಿರುವ ಮೃತ ಸಮುದ್ರಕ್ಕೆ ಮುಖ್ಯ ಒಳಹರಿವು ಜೋರ್ಡಾನ್ ನದಿ. ಮೃತ ಸಮುದ್ರದ ಲವಣಗಳು ವಾಣಿಜ್ಯ ಉತ್ಪನ್ನಗಳಾಗಿ ಬಿಕರಿಯಾಗುತ್ತವೆ. ಇತ್ತೀಚಿನ ದಶಕಗಳಲ್ಲಿ ಜೋರ್ಡಾನ್ ನದಿಯ ನೀರನ್ನು ಕೃಷಿಗಾಗಿ ಬಳಸುವುದು ಹೆಚ್ಚಿದ್ದು ಅದರ ಪರಿಣಾಮವಾಗಿ ನದಿಯ ಹರಿವಿನಲ್ಲಿ ಗಮನಾರ್ಹ ಇಳಿತವುಂಟಾಗಿದೆ. ಜೊತೆಗೆ ಮೃತ ಸಮುದ್ರದಿಂದ ಯಾವುದೇ ಹೊರಹರಿವು ಇಲ್ಲದಿದ್ದು ಇಲ್ಲಿ ಸಂಗ್ರಹವಾಗುತ್ತಿರುವ ಲವಣಗಳು ಶಾಶ್ವತವಾಗಿ ಇದರ ನೀರಿನಲ್ಲಿಯೇ ಉಳಿಯುವುವು. ಈ ಕಾರಣಗಳಿಂದಾಗಿ ಮೃತ ಸಮುದ್ರದ ಲವಣದ ಅಂಶ ಕ್ರಮೇಣ ಹೆಚ್ಚುತ್ತಿದೆ. ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಅತ್ಯಲ್ಪವಾಗಿದ್ದು ಮೃತ ಸಮುದ್ರಕ್ಕೆ ಸೇರುವ ಸಿಹಿನೀರಿನ ಪ್ರಮಾಣ ಅಗಣನೀಯ. ಮೃತ ಸಮುದ್ರದ ಇನ್ನೊಂದು ವೈಚಿತ್ರ್ಯವೆಂದರೆ ಬಂಡೆಯ ಕಲ್ಲುಗಳ ತುಣುಕುಗಳನ್ನು ಉಗಿಯುವಿಕೆ. ಮೃತ ಸಮುದ್ರದ ನೀರಿನ ಬಲಯುತ ಲವಣಗಳು ಅಡಿಯ ನೆಲದ ಬಂಡೆಯನ್ನು ಕೊರೆದು ಛಿದ್ರಗೊಳಿಸುತ್ತವೆ. ಈ ತುಣುಕುಗಳು ಆಗಾಗ್ಗೆ ನೀರಿನಿಂದ ಹೊರಗೆಸೆಯಲ್ಪಡುತ್ತವೆ.

ದೈವದತ್ತ ಚಿಕಿತ್ಸಾಲಯ

ಮೃತ ಸಮುದ್ರದ ಪರಿಸರದಲ್ಲಿ ದೊಡ್ಡ ಸಂಖ್ಯೆಯ ಪ್ರಕೃತಿ ಚಿಕಿತ್ಸಾಲಯಗಳು ತಲೆಯೆತ್ತಿವೆ. ಇದರ ನೀರಿನಲ್ಲಿನ ಖನಿಜಗಳು, ಮಾಲಿನ್ಯವಿಲ್ಲದ ಶುಭ್ರ ವಾತಾವರಣ, ಕಡಿಮೆಯಿರುವ ಅತಿನೇರಳೆ ವಿಕಿರಣ, ಬಲು ತಗ್ಗಿನಲ್ಲಿರುವುದರಿಂದ ಹೆಚ್ಚಿರುವ ಗಾಳಿಯ ಒತ್ತಡಗಳು ಮಾನವರ ಕೆಲ ಬಗೆಯ ವ್ಯಾಧಿಗಳಿಗೆ ಉತ್ತಮ ಶಮನಕಾರಿಗಳಾಗಿವೆ. ಉಳಿದಂತೆ ಉಪ್ಪು ಮತ್ತು ಇತರ ಲವಣಗಳ ಉತ್ಪಾದನೆ ಮೃತ ಸಮುದ್ರ ಪ್ರದೇಶದ ಮುಖ್ಯ ಉದ್ದಿಮೆಗಳಾಗಿವೆ. ಮೃತ ಸಮುದ್ರದ ನೀರಿನ ಮಟ್ಟ ದಿನೇದಿನೇ ಕಡಿಮೆಯಾಗುತ್ತಿದ್ದು ಇದರಿಂದಾಗಿ ನೀರಿನಲ್ಲಿನ ಲವಣದ ಪ್ರಮಾಣ ಹೆಚ್ಚುತ್ತಿರುವುದಲ್ಲದೆ ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಮೃತ ಸಮುದ್ರ ಪೂರ್ಣವಾಗಿ ಬತ್ತಿಹೋಗಿ ಭೂಮಿಯ ಮೇಲಿನಿಂದ ಮಾಯವಾಗುವ ಭೀತಿಯಿದೆ.

Thumb
ಮೃತ ಸಮುದ್ರದ ದಡದಲ್ಲಿ ಸಂಗ್ರಹವಾಗುತ್ತಿರುವ ಉಪ್ಪು.
Thumb
ಮೃತ ಸಮುದ್ರದಲ್ಲಿ ಸರಾಗವಾಗಿ ತೇಲುತ್ತಿರುವ ಪ್ರವಾಸಿ.
Thumb
ಪ್ರಕ್ಷುಬ್ಧ ಮೃತ ಸಮುದ್ರ.
Thumb
ಜಗತ್ತಿನ ನೆಲದ ಮೇಲಿನ ಅತಿ ತಗ್ಗಿನ ಸ್ಥಾನ

ಚಿತ್ರಗಳ ಗ್ಯಾಲರಿ

ಬಾಹ್ಯ ಸಂಪರ್ಕಕೊಂಡಿಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.