ಚಾಂದ್ರಮಾನ
From Wikipedia, the free encyclopedia
From Wikipedia, the free encyclopedia
ಚಾಂದ್ರಮಾನ - ಚಂದ್ರನ ಗತಿಯನ್ನನುಸರಿಸಿ ಇರುವ ಒಂದು ವಿಧದ ಕಾಲಗಣನೆ; ಚಾಂದ್ರ, ಸೌರ, ನಾಕ್ಷತ್ರ, ಸಾವನ, ಬಾರ್ಹಸ್ವತ್ಯವೆಂಬ ಐದು ವಿದ್ಯಮಾನಗಳಲ್ಲಿ ಒಂದು.
ತಮ್ಮ ತಮ್ಮ ಕಕ್ಷೆಗಳಲ್ಲಿ ಸಂಚರಿಸುತ್ತಿರುವ ಸೂರ್ಯಚಂದ್ರರು ನಮಗೆ ಒಂದೇ ರೇಖೆಯಲ್ಲಿರುವಂತೆ ಕಾಣುವ ದಿನ ಅಮಾವಾಸ್ಯೆ. ಇದು ಸಾಮಾನ್ಯವಾಗಿ ಮೂವತ್ತು ದಿವಸಗಳಿಗೊಮ್ಮೆ ಸಂಭವಿಸುತ್ತದೆ.
ಎರಡು ಅಮಾವಾಸ್ಯೆಗಳ ಮಧ್ಯವರ್ತಿಕಾಲಕ್ಕೆ ಒಂದು ಚಾಂದ್ರಮಾನ ಮಾಸವೆಂದು ಹೆಸರು.
ಚಾಂದ್ರಮಾನವರ್ಷ ಚೈತ್ರ ಶುಕ್ಲ ಪ್ರಥಮೆಯ ದಿವಸ ಪ್ರಾರಂಭವಾಗುತ್ತದೆ. ಅಲ್ಲಿಂದ ಕ್ರಮವಾಗಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶೀರ್ಷ, ಪುಷ್ಯ, ಮಾಘ, ಫಾಲ್ಗುಣ ಎಂಬ ಹನ್ನೆರಡು ಚಾಂದ್ರಮಾನ ಮಾಸಗಳು ಕ್ರಮವಾಗಿ ಬಂದು ಮತ್ತೆ ಚೈತ್ರಮಾಸ ಬರುತ್ತದೆ. ಈ ಹನ್ನೆರಡು ತಿಂಗಳುಗಳ ಕಾಲಕ್ಕೆ ಒಂದು ಚಾಂದ್ರಮಾನವರ್ಷವೆಂದು ಹೆಸರು.
ಈ ವರ್ಷಗಳನ್ನು ಪ್ರಭವ, ವಿಭವ ಮೊದಲಾದ ಅರುವತ್ತು ಸಂವತ್ಸರಗಳ ಹೆಸರುಗಳಿಂದ ಕರೆಯುತ್ತಾರೆ.
ಮೂರು ವರ್ಷಗಳಿಗೊಮ್ಮೆ ಚಾಂದ್ರಮಾನ ವರ್ಷದಲ್ಲಿ ಹದಿಮೂರು ತಿಂಗಳುಗಳಿರುತ್ತವೆ. ಅಧಿಕವಾದ ಒಂದು ತಿಂಗಳನ್ನು ಅಧಿಕ ಮಾಸವೆಂದು ಕರೆಯುತ್ತಾರೆ. ಪ್ರತಿಯೊಂದು ಚಾಂದ್ರಮಾನ ತಿಂಗಳಿನಲ್ಲೂ ಸೂರ್ಯನ ರಾಶ್ಯಂತರ ಸಂಕ್ರಮಣವಿರಬೇಕು. ಯಾವ ಚಾಂದ್ರಮಾನ ತಿಂಗಳಿನಲ್ಲಿ ಸೂರ್ಯ ಸಂಕ್ರಮಣವಿರುವುದಿಲ್ಲವೋ ಆ ಮಾಸ ಅಧಿಕವಾಗುತ್ತದೆ.
ಹೀಗೆಯೇ ಒಂದು ಚಾಂದ್ರಮಾನ ಮಾಸದಲ್ಲಿ ಎರಡು ಸೂರ್ಯ ಸಂಕ್ರಮಣಗಳು ಬಂದಲ್ಲಿ ಆಗ ಆ ಚಾಂದ್ರಮಾನ ಮಾಸವನ್ನು ಕ್ಷಯಮಾಸವೆಂದು ಕರೆಯುತ್ತಾರೆ. ಈ ಅಧಿಕ ಮತ್ತು ಕ್ಷಯ ಮಾಸಗಳು ಚಾಂದ್ರಮಾನ ಮಾಸಗಣನೆಯಲ್ಲಿ ಮಾತ್ರ ಸಂಭವಿಸುತ್ತವೆ.
ಒಂದು ಚಾಂದ್ರಮಾನ ವರ್ಷದಲ್ಲಿ 360 ತಿಥಿಗಳನ್ನೊಳಗೊಂಡ 354 ದಿವಸಗಳಿರುತ್ತವೆ. ಅಧಿಕಮಾಸ ಬಂದಾಗ 390 ತಿಥಿಗಳನ್ನೊಳಗೊಂಡ 384 ದಿವಸಗಳಿರುತ್ತವೆ.
ಚಾಂದ್ರಮಾನ ಮಾಸಾರಂಭದಿಂದಲೇ ಪಕ್ಷ ಮತ್ತು ತಿಥಿಗಳು ಪ್ರಾರಂಭವಾಗುತ್ತವೆ. ಅಮಾವಾಸ್ಯೆಯಾದ ಮರುದಿವಸದಿಂದ ಪೂರ್ಣಿಮ ತಿಥಿ ಪೂರ್ತಿ ಶುಕ್ಲಪಕ್ಷ. ಚಂದ್ರನಲ್ಲಿ ಶೌಕ್ಲ ವೃದ್ಧಿಗೊಳ್ಳುವುದರಿಂದ ಈ ಪಕ್ಷಕ್ಕೆ ಶುಕ್ಲಪಕ್ಷವೆಂಬ ಹೆಸರು ಬಂದಿದೆ. ಪೂರ್ಣಿಮಾ ತಿಥಿಯ ಮಾರನೆಯ ದಿವಸದಿಂದ ಅಮಾವಾಸ್ಯೆ ವರೆಗೆ ಚಂದ್ರನಲ್ಲಿ ಶೌಕ್ಲ ಕುಂದುತ್ತ ಕಪ್ಪು ಹೆಚ್ಚಾಗುವುದರಿಂದ ಇದಕ್ಕೆ ಕೃಷ್ಣಪಕ್ಷವೆಂಬ ಹೆಸರು ಬಂದಿದೆ.
ಚಾಂದ್ರಮಾನ ಮಾಸವನ್ನು ಶುಕ್ಷಪಕ್ಷದಿಂದ ಪ್ರಾರಂಭಮಾಡಿ ಗಣನೆ ಮಾಡುವುದು ಅಧಿಕವಾಗಿ ರೂಢಿಯಲ್ಲಿದೆ. ಉತ್ತರ ಭಾರತದ ಕೆಲವು ದೇಶಗಳಲ್ಲಿ ಕೃಷ್ಣಪಕ್ಷದಿಂದ ಪ್ರಾರಂಭಿಸಿ ಮಾಸಗಣನೆ ಮಾಡುವುದೂ ಉಂಟು.
ಚಾಂದ್ರಮಾನ ಮಾಸ ಗಣನೆ ಮಹಮ್ಮದೀಯರಲ್ಲಿ ಪ್ರಚಲಿತವಾಗಿದೆ. ಚಂದ್ರದರ್ಶನವೇ ಅವರ ಮಾಸಾರಂಭಕ್ಕೆ ಮುಖ್ಯ. ಅಲ್ಲಿಂದ ಮುಂದಿನ ಚಂದ್ರದರ್ಶನದವರೆಗೆ ಒಂದು ಮಾಸದ ಅವಧಿ. ಅಮಾವಾಸ್ಯೆ ಕಳೆದ ಬಳಿಕ ಚಂದ್ರದರ್ಶವನಾದ ಮಾರನೆಯ ದಿವಸ ಒಂದನೆಯ ಚಂದು ಎಂದರೆ ಮಾಸಾರಂಭದ ಮೊದಲ ದಿವಸ. ಹಿಂದೂ ಪದ್ಧತಿಯಲ್ಲಿ ತಿಥಿಗಳಿಂದ ಮಾಸವನ್ನು ವಿಭಾಗಿಸಿದ್ದರೆ ಮಹಮ್ಮದೀಯರಲ್ಲಿ ಚಂದ್ರದರ್ಶನಗಳಿಂದ ವಿಭಾಗಿಸಿದ್ದಾರೆ. ಚಾಂದ್ರಮಾನವನ್ನು ಆಶ್ರಯಿಸಿದ್ದರೂ ಅವರಿಗೆ ಅಧಿಕಮಾಸ ಮತ್ತು ಕ್ಷಯಮಾಸಗಳ ಗಣನೆ ಇಲ್ಲ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.