Remove ads
From Wikipedia, the free encyclopedia
ಸಾಮಾನ್ಯವಾಗಿ ಕೈಕಾಲುಗಳ ಸ್ನಾಯುಗಳಲ್ಲಿ, ಕೆಲವೊಮ್ಮೆ ಒಳಾಂಗಗಳ ಸ್ನಾಯುಗಳಲ್ಲೂ ಯಾವ ಮುನ್ಸೂಚನೆಯಿಲ್ಲದೆ ಸೆಳೆತ ಉಂಟಾಗಿ ಅಲ್ಲಿ ನೋವಾಗುವುದುಂಟು. ಸ್ನಾಯುಗಳು ಸಂಕುಚನಗೊಳ್ಳುತ್ತವೆ ಅವು ಸೇದುತ್ತವೆ. ಇಂತಹ ಸೆಳೆತಕ್ಕೆ ಕೆಲವರು ಉಳುಕು ಅಥವಾ ಚಳುಕು ಅಂತ ಕರೆಯುವುದು ಸಮಂಜಸವೆನಿಸುವುದಿಲ್ಲ. ಮುಟ್ಟಾಗುವಾಗ ಕೆಳ ಹೊಟ್ಟೆಸೆಳೆತ, ಕರಳುಗಳ ಸುತ್ತಣ ಸ್ನಾಯುಗಳ ಸೆಳೆತದಿಂದಾಗುವ ನೋವು, ರಕ್ತ ನಾಳಗಳ ಸ್ನಾಯುಗಳ ಸಂಕುಚನದಿಂದಾಗುವ ಕೈಕಾಲು ಸೇದುವಿಕೆ, ಜಠರದ ಸೆಳೆತಗಳು ಆಗಾಗ ಕಂಡುಬರುತ್ತವೆ. ಕುತ್ತಿಗೆಯ ಸ್ನಾಯು ಒಂದರಲ್ಲಿ ಹೀಗೆ ಬಿಟ್ಟು ಬಿಟ್ಟು ಸೆಡೆತವಾಗುವುದರಿಂದ ಸೊಟ್ಟಕತ್ತು ಇಲ್ಲವೆ ಉರುಗುಗೊರಲು ಉಂಟಾಗಿ ತಲೆ ಎದುರು ಪಕ್ಕಕ್ಕೆ ಬಾಗುವುದು.
ಕೈಕಾಲುಗಳ ಸೆಳೆತಕ್ಕೆ ಹಲವಾರು ಕಾರಣಗಳಿವೆ. ಈಜುವವರಲ್ಲಿ ಮಿತಿಮೀರಿದ ದಣಿವಿನಿಂದ ಕೈಕಾಲುಗಳು ಸೋತು ಹೋಗಿ ಸಹಾಯ ಸಿಗದಿದ್ದರೆ ನೀರಿನಲ್ಲಿ ಮುಳುಗಿ ಹೋಗಬಹುದು. ಇದೇ ರೀತಿ ಫುಟ್ ಬಾಲ್, ಬಾಸ್ಕೆಟ್ ಬಾಲ್, ಹಾಕಿ ಅಥವಾ ಇನ್ನಿತರ ಆಟಗಾರರಲ್ಲಿ ಪ್ರಚಂಡ ಚಟುವಟಿಕೆಯಿಂದ ಕೈಯೋ ಕಾಲೋ ಸೋತು ಕುಕ್ಕರಿಸಿ ಬೀಳುವಂತಾಗುವುದು. ಇಲ್ಲಿ ಸ್ನಾಯು ಸೆಳೆತಕ್ಕಿಂತ ಸ್ನಾಯು ಸೋಲುವಿಕೆ (ಮಸಲ್ ಫಟೀಗ) ಕಾಣುತ್ತೇವೆ.
ಎಷ್ಟೋವೇಳೆ ಮಲಗಿದ್ದವರ ಕಾಲಿನ ಖಂಡದಲ್ಲಿ (ಕಾಫ್) ಜೋರಾಗಿ ಸೆಳೆತ ಮೂಡಿದಾಗ ನೋವಿನಿಂದಾಗಿ ಎಚ್ಚರಗೊಳ್ಳುವಂತಾಗುತ್ತದೆ. ಹಿಂದಿನ ದಿನ ವ್ಯಕ್ತಿ ಆಯಾಸದ ಕೆಲಸ ಮಾಡಿದ್ದರೆ ಇಂತಹದ್ದು ಕಾಣುವುದು ಸಾಮಾನ್ಯ. ಈ ಸ್ನಾಯು ಸೆಳೆತದ ನೋವು ತಾನಾಗಿಯೇ ಕಡಿಮೆಯಾಗಬಹುದು ಇಲ್ಲವೆ ನೋವು ಶಮನ ಮಾಡವ ಔಷಧಿ ಸೇವಿಸಬೇಕಾಗುತ್ತದೆ. ಕಾಲಿನ ಧಮನಿಗಳು ಸಂಕುಚನಗೊಂಡರೆ ವ್ಯಕ್ತಿ ಒಂದಿಷ್ಟುದೂರ ಹೆಜ್ಜೆ ಹಾಕುತ್ತಿರುವಂತೆ ಕಾಲಿನ ಖಂಡದಲ್ಲಿ ಸೆಳೆತ ಪ್ರಾರಂಭಿಸುತ್ತದೆ. ನೋವು ಹೆಚ್ಚಾಗುತ್ತದೆ. ವಿಶ್ರಾಂತಿ ಪಡೆದು ಮತ್ತೆ ನಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಕುಂಟುನಡೆ (ಇಂಟರ ಮಿಟೆಂಟಕ್ಲಾಡಿ ಕೇಷ್ನ್) ಎನ್ನುತ್ತಾರೆ. ಧೂಮಪಾನಿಗಳಲ್ಲಿ, ತಂಬಾಕು ಸೇವಿಸುವವರಲ್ಲಿ ಮಾತ್ರ ಕಾಣುವ ಈ ರೋಗದಿಂದಾಗಿ ಕಾಲಿನ ಬೆರಳು, ಪಾದ, ಮುಂಗಾಲುಗಳು ಹಂತ ಹಂತವಾಗಿ ರಕ್ತಹೀನತೆಯ ಅಳಿಗೊಳಪಕ್ಕೆ (ಗ್ಯಾಂಗ್ರೀನ್) ತುತ್ತಾಗುತ್ತವೆ. ಆಗ ಬೆರಳಾಗಲಿ, ಪಾದವಾಗಲಿ ಇಲ್ಲ ಮುಂಗಾಲಾಗಲಿ ಎಲ್ಲಿಯವರೆಗೆ ರಕ್ತನಾಳಗಳು ಮುಚ್ಚಿಕೊಂಡಿರುತ್ತವೆಯೋ ಆ ಭಾಗದಲ್ಲಿ ಅಂಗಕಡಿತದ ಶಸ್ತ್ರಕ್ರಿಯೆ ಮಾಡಬೇಕಾಗುತ್ತದೆ.
ವಿಪರೀತ ಬೆವರಿದಾಗ ದೇಹದೊಳಗಿಂದ ನೀರು, ಉಪ್ಪು ಕಳೆದು ಹೋಗಿ ಕೈ.ಕಾಲು, ಹೊಟ್ಟೆಯ ಸ್ನಾಯುಗಳಲ್ಲಿ ಬೇಗೆಯ ಸೆಳೆತ ಕಾಣಿಸುತ್ತದೆ. ಮುಮ್ಮಡಿಸುವ ಸ್ನಾಯುಗಳಲ್ಲಿ ಇಂತಹ ಸೆಳೆತ ಸಾಮಾನ್ಯವಾಗಿ ಜೋರಾಗಿರುತ್ತದೆ. ಸ್ನಾಯುಗಳು ಗಂಟು ಗಂಟಾಗಿ ಕಾಣಬಹುದು. ಚರ್ಮ ತಣ್ಣಗೆ ಬಿಳಚಿಕೊಂಡಿರುತ್ತದೆ. ಸಾಕಷ್ಟು ನೀರು ಉಪ್ಪನ್ನು ಕೊಟ್ಟು ಕೂಡಲೇ ಉಪಚರಿಸಬೇಕು. ಕ್ಷಾರತೆಯಿಂದ (ಆಲ್ಕಲೋಸಿಸ್) ನರಗಳ ಸ್ನಾಯುಗಳ ಉದ್ರೇಕ ಹೆಚ್ಚಿ ಕೈಕಾಲುಗಳ “ಸ್ನಾಯು ಸೆಟೆತ” (ಟೆಟನಿ) ಆಗುತ್ತದೆ. ಆಗ ರಕ್ತದಲ್ಲಿನ ಸುಣ್ಣದಾಂಶದ ಮಟ್ಟ ಬಹಳಷ್ಟು ಕುಸಿಯುತ್ತದೆ. ರಕ್ತದೊಳಗೆ ಕಾಲ್ಸಿಯಂ ನೀಡಿದರೆ ಕೂಡಲೆ ವಾಸಿಯಾಗುತ್ತದೆ.
ಸ್ನಾಯುಗಳ ಸೆಳೆತಗಳು ಹಲವಾರು ರೋಗಗಳಲ್ಲಿ ಕಾಣುತ್ತೇವೆ. ಹಲನರ ಜಡ್ಡು (ಮಲ್ಟಿಪಲ್ ಸ್ಕ್ಲೀರೋಸಿಸ್) ಪಾರ್ಕಿನ್ಸೋನಿಸಂ ರೋಗಗಳಲ್ಲಿ ಸಾಮಾನ್ಯವಾಗಿ ಸ್ನಾಯು ಸೆಳೆತ ಕಾಣಿಸುತ್ತದೆ. ದಿನ ನಿತ್ಯದ ಕೆಲಸ ಮಾಡುವಾಗ, ಕಸುಬಿನ ಕೆಲಸ ನಿರ್ವಹಿಸುವಾಗ ಒಂದೇ ಸಮನೆ ಬಳಕೆಯಾಗುವ ಕೆಲವು ಸ್ನಾಯುಗಳು ಬಳಲಿ ಸೆಳೆತಕ್ಕೊಳಗಾಗುತ್ತವೆ. ಪ್ರಾರಂಭದಲ್ಲಿ ಕೈಲಿರುವ ಕೆಲಸ ಮಾಡಲು ಹೋದಾಗ ಕಷ್ಟವಾಗುತ್ತದೆ. ಬರುಬರುತ್ತ ನೋವು ಜೋರಾಗಿ ತೊಂದರೆಯಾಗುತ್ತದೆ. ಬರೆಯುವವರಿಗೆ ಲೇಖನಿ ಸರಾಗವಾಗಿ ಸಾಗುವುದಿಲ್ಲ, ಟೈಪು ಮಾಡುವವರಿಗೆ ಸರಿಯಾದ ಗುಂಡಿ ಒತ್ತುವುದಾಗುವುದಿಲ್ಲ, ನೇಕಾರನಿಗೆ ಬಟ್ಟೆ ನೇಯುವುದಾಗುವುದಿಲ್ಲ; ಶಿಲ್ಪಿ ಕೈ ಕಟ್ಟಿ ಕುಳಿತು ಕೊಳ್ಳುವಂತಾಗಬಹುದು. ಹೀಗೆ ಅನೇಕಾನೇಕ ಕಸುಬಿನವರು ಸ್ನಾಯು ಸೆಳೆತಕ್ಕೊಳಗಾಗಿ ನೋವು ಅನುಭವಿಸುವುದಲ್ಲದೆ ಮಾನಸಿಕ ಅಸಮಾಧಾನಕ್ಕೆ ಒಳಗಾಗಬಹುದು. ಕಸುಬು ಬದಲಾಯಿಸುವುದರಿಂದ ಸೆಳೆತ ಕಡಿಮೆಯಾಗುವ ಸಂಭವವಿದೆ. ಆದರೂ ಸ್ನಾಯು ಸೆಳೆತದ ನಿಜಕಾರಣ ಕಂಡುಕೊಂಡು ತಕ್ಕ ಚಿಕಿತ್ಸೆ ನೀಡಬೇಕು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.