From Wikipedia, the free encyclopedia
You must add a |reason=
parameter to this Cleanup template - replace it with {{Cleanup|ಲೇಖನದ ಗುಣಮಟ್ಟ|reason=<Fill reason here>}}
, or remove the Cleanup template.
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಶಿಲ್ಪ ಎಂದರೆ ಸಾಮಾನ್ಯವಾಗಿ ಅಮೃತಶಿಲೆಯಂತಹ ಕಲ್ಲು ಅಥವಾ ಲೋಹ, ಗಾಜು, ಅಥವಾ ಕಟ್ಟಿಗೆಯಂತಹ ಗಟ್ಟಿ ವಸ್ತುಗಳಿಗೆ ಆಕಾರ ಕೊಟ್ಟು ಅಥವಾ ಇವನ್ನು ಒಗ್ಗೂಡಿಸಿ ಅಥವಾ ಜೇಡಿಮಣ್ಣು, ಬಟ್ಟೆಗಳು, ಪ್ಲಾಸ್ಟಿಕ್ಗಳು, ಪಾಲಿಮರ್ಗಳು, ಮೃದುವಾದ ಲೋಹಗಳಂತಹ ಹೆಚ್ಚು ಮೃದುವಾದ ವಸ್ತುಗಳನ್ನು ಸಹ ಬಳಸಿ ಸೃಷ್ಟಿಸಲಾದ ಮೂರು ಆಯಾಮದ ಕಲಾಕೃತಿ. ಈ ಪದವನ್ನು ಧ್ವನಿ, ಪಠ್ಯ ಮತ್ತು ಬೆಳಕು ಸೇರಿದಂತೆ ಕಲಾಕೃತಿಗಳಿಗೆ ವಿಸ್ತರಿಸಬಹುದು.
ವಸ್ತುಗಳನ್ನು ಕೆತ್ತನೆಯಂತಹ ತೆಗೆಯುವಿಕೆ ಕ್ರಿಯೆಯಿಂದ ಬೇಕಾದ ರೂಪಕ್ಕೆ ತರಬಹುದು; ಅಥವಾ ಬೆಸುಗೆಯಂತಹ ಕ್ರಿಯೆಯಿಂದ ಅವನ್ನು ಸಂಯೋಜಿಸಬಹುದು, ಸುಡುವಿಕೆಯ ಕ್ರಿಯೆಯಿಂದ ಅವನ್ನು ಗಡಸಾಗಿಸಬಹುದು, ಅಥವಾ ನಿರ್ದಿಷ್ಟ ಆಕಾರ ಬರುವಂತೆ ಎರಕ ಹೊಯ್ಯಬಹುದು. ಬಣ್ಣದಂತಹ ಮೇಲ್ಮೈ ಅಲಂಕಾರವನ್ನು ಲೇಪಿಸಬಹುದು. ಶಿಲ್ಪಕಲೆಯನ್ನು ಬಾಗು/ಮಣಿ ಕಲೆಗಳಲ್ಲಿ ಒಂದು ಎಂದು ವರ್ಣಿಸಲಾಗಿದೆ ಏಕೆಂದರೆ ಇದು ಆಕಾರ ನೀಡಬಹುದಾದ ಅಥವಾ ಸಮನ್ವಯಗೊಳಿಸಬಹುದಾದ ಸಾಮಗ್ರಿಗಳ ಬಳಕೆಯನ್ನು ಒಳಗೊಂಡಿರಬಹುದು. ಹುಡುಕಲ್ಪಟ್ಟ ವಸ್ತುಗಳನ್ನು ಶಿಲ್ಪಗಳೆಂದು ಪ್ರಸ್ತುತಪಡಿಸಬಹುದು.
ಶಿಲ್ಪವು ಸಾರ್ವಜನಿಕ ಕಲೆಯ ಒಂದು ಪ್ರಮುಖ ರೂಪವಾಗಿದೆ. ಉದ್ಯಾನದ ಹಿನ್ನೆಲೆಯಲ್ಲಿನ ಶಿಲ್ಪಗಳ ಸಂಗ್ರಹವನ್ನು ಶಿಲ್ಪ ಉದ್ಯಾನ ಎಂದು ಸೂಚಿಸಬಹುದು.
ಶಿಲ್ಪಗಳಲ್ಲಿ ಬಳಸಲಾಗುವ ವಸ್ತುಗಳು ವೈವಿಧ್ಯಮಯವಾಗಿವೆ ಮತ್ತು ಇತಿಹಾಸದುದ್ದಕ್ಕೂ ಬದಲಾಗಿವೆ. ಶಿಲ್ಪಿಗಳು ಸಾಮಾನ್ಯವಾಗಿ ಸಾಧ್ಯವಾದಷ್ಟು ಶಾಶ್ವತವಾಗಿರುವ ಕಲಾಕೃತಿಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಮತ್ತು ಕಂಚು ಹಾಗೂ ಕಲ್ಲಿನಂತಹ (ಅಮೃತಶಿಲೆ, ಸುಣ್ಣದಕಲ್ಲು, ಪೊರ್ಫ಼ರಿ, ಮತ್ತು ಬೆಣಚುಕಲ್ಲು) ಬಾಳಿಕೆ ಬರುವ ಹಾಗೂ ಆಗಾಗ್ಗೆ ದುಬಾರಿ ವಸ್ತುಗಳಲ್ಲಿ ಕೆಲಸ ಮಾಡಿದ್ದಾರೆ. ಹೆಚ್ಚು ಅಪರೂಪವಾಗಿ, ಚಿನ್ನ, ಬೆಳ್ಳಿ, ಜೇಡ್, ಮತ್ತು ದಂತದಂತಹ ಬೆಲೆಬಾಳುವ ವಸ್ತುಗಳನ್ನು ಹೊದಿಸಿದ ಕೃತಿಗಳಿಗಾಗಿ ಬಳಸಲಾಗಿತ್ತು. ಹೆಚ್ಚು ಸಾಮಾನ್ಯ ಮತ್ತು ಕಡಿಮೆ ಬೆಲೆಯ ವಸ್ತುಗಳನ್ನು ವ್ಯಾಪಕ ಬಳಕೆಗಾಗಿ ಶಿಲ್ಪಗಳಲ್ಲಿ ಬಳಸಲಾಗಿತ್ತು. ಇವುಗಳಲ್ಲಿ ಗಾಜು, ಗಟ್ಟಿಮರಗಳು (ಉದಾಹರಣೆಗೆ ಓಕ್, ಬಾಕ್ಸ್ ದಾರು, ಮತ್ತು ನಿಂಬೆ ಮರ); ಟೆರಾಕೊಟಾ ಮತ್ತು ಇತರ ಪಿಂಗಾಣಿ ವಸ್ತುಗಳು, ಮತ್ತು ಪ್ಯೂಟರ್ ಹಾಗೂ ಸತುವಿನಂತಹ (ಸ್ಪೆಲ್ಟರ್) ಎರಕಹೊಯ್ದ ಲೋಹಗಳು ಸೇರಿದ್ದವು.
ಶಿಲ್ಪಗಳಿಗೆ ಹಲವುವೇಳೆ ಬಣ್ಣ ಲೇಪಿಸಲಾಗುತ್ತದೆ, ಆದರೆ ಸಾಮಾನ್ಯವಾಗಿ ಕಾಲಕ್ಕೆ, ಅಥವಾ ನವೀಕಾರಕಗಳಿಗೆ ತಮ್ಮ ಬಣ್ಣ ಕಳೆದುಕೊಳ್ಳುತ್ತವೆ. ಶಿಲ್ಪಗಳನ್ನು ಸೃಷ್ಟಿಸುವಲ್ಲಿ ಅನೇಕ ಭಿನ್ನ ಚಿತ್ರಕಲಾ ತಂತ್ರಗಳನ್ನು ಬಳಸಲಾಗಿದೆ. ಇವುಗಳಲ್ಲಿ ಟೆಂಪರಾ, ತೈಲ ವರ್ಣಚಿತ್ರ, ಗಿಲೀಟು ಮಾಡುವುದು, ಮನೆ ಬಣ್ಣ, ವಾಯುದ್ರವ, ಗಾಜುಲೇಪ ಮತ್ತು ಸಿಕತಕ್ಷೇಪಣ ಸೇರಿವೆ.
ಅನೇಕ ಶಿಲ್ಪಿಗಳು ಕೃತಿಗಳನ್ನು ಸೃಷ್ಟಿಸಲು ಹೊಸ ರೀತಿಗಳನ್ನು ಮತ್ತು ವಸ್ತುಗಳನ್ನು ಹುಡುಕುತ್ತಾರೆ. ಪಾಬ್ಲೋ ಪಿಕಾಸೋನ ಅತ್ಯಂತ ಪ್ರಸಿದ್ಧ ಶಿಲ್ಪಗಳಲ್ಲಿ ಒಂದು ಸೈಕಲ್ ಭಾಗಗಳನ್ನು ಒಳಗೊಂಡಿತ್ತು. ಅಲೆಕ್ಸಾಂಡರ್ ಕ್ಯಾಲ್ಡರ್ ಮತ್ತು ಇತರ ಆಧುನಿಕತಾವಾದಿಗಳು ಬಣ್ಣದ ಉಕ್ಕನ್ನು ಅದ್ಭುತವಾಗಿ ಬಳಸಿದರು. 1960ರ ದಶಕದಿಂದ, ಅಕ್ರಿಲಿಕ್ಗಳು ಮತ್ತು ಇತರ ಪ್ಲಾಸ್ಟಿಕ್ಗಳನ್ನು ಕೂಡ ಬಳಸಲಾಗಿದೆ. ಆಂಡಿ ಗೋಲ್ಡ್ಸ್ವರ್ದಿ ತನ್ನ ಅಸಾಮಾನ್ಯ ಕ್ಷಣಿಕ ಶಿಲ್ಪಗಳನ್ನು ನೈಸರ್ಗಿಕ ಹಿನ್ನೆಲೆಗಳಲ್ಲಿ ಬಹುತೇಕ ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳಿಂದ ಸೃಷ್ಟಿಸುತ್ತಾನೆ. ಹಿಮ ಶಿಲ್ಪ, ಮರಳು ಶಿಲ್ಪ, ಮತ್ತು ಅನಿಲ ಶಿಲ್ಪದಂತಹ ಕೆಲವು ಶಿಲ್ಪಗಳು ಉದ್ದೇಶಪೂರ್ವಕವಾಗಿ ಅಲ್ಪಾಯಸ್ಸಿನದಾಗಿರುತ್ತವೆ. ಮಿರೋ, ಮಾರ್ಸೆಲ್ ಡಚಾಂಪ್, ವ್ಯೂಸ್ ಕ್ಲೀನ್, ಜಾನ್ ಚೇಂಬರ್ಲೇನ್, ಜೀನ್ ಟಿಂಗ್ವೆಲಿ, ರಿಚರ್ಡ್ ಸ್ಟ್ಯಾನ್ಕೀವಿಜ಼್, ಲ್ಯಾರಿ ಬೆಲ್, ಕಾರ್ಲ್ ಆಂಡ್ರೆ, ಲೂಯಿಸ್ ಬೂರ್ಜ್ವಾ, ಜಿಮ್ ಗ್ಯಾರಿ, ಮತ್ತು ಇತರರು ಸೇರಿದಂತೆ ಅನೇಕ ಶಿಲ್ಪಿಗಳು ತಮ್ಮ ಕೃತಿಗಳನ್ನು ನಿರ್ಮಾಣಮಾಡಲು ಗಾಜು, ವರ್ಣರಂಜಿತ ಗಾಜು, ವಾಹನದ ಭಾಗಗಳು, ಉಪಕರಣಗಳು, ಯಂತ್ರಭಾಗಗಳು, ಹಾರ್ಡ್ವೇರ್ ಅನ್ನು ಬಳಸಿದರು.
ಶಿಲ್ಪಿಗಳು ಹಲವುವೇಳೆ ಪ್ಯಾರಿಸ್ ಗಾರೆ, ಮೇಣ, ಜೇಡಿಮಣ್ಣು ಪ್ಲ್ಯಾಸ್ಟಸೀನ್ನಂತಹ ಅಲ್ಪಕಾಲಿಕ ವಸ್ತುಗಳಿಂದ ನಕಾಸೆಗಳೆಂದು ಕರೆಯಲ್ಪಡುವ ಸಣ್ಣ ಪೂರ್ವಭಾವಿ ಕೃತಿಗಳನ್ನು ನಿರ್ಮಿಸುತ್ತಾರೆ, ಉದಾಹರಣೆಗೆ ಆಲ್ಫ್ರೆಡ್ ಗಿಲ್ಬರ್ಟ್ ಪಿಕ್ಯಾಡಿಲಿ ಸರ್ಕಸ್, ಲಂಡನ್ನಲ್ಲಿ 'ಈರಾಸ್'ನ್ನು ನಿರ್ಮಿಸಿದಂತೆ. ರೆಟ್ರೊ ಆರ್ಕಿಯಾಲಜಿಯಲ್ಲಿ, ಈ ವಸ್ತುಗಳು ಸಾಮಾನ್ಯವಾಗಿ ಅಂತಿಮ ಉತ್ಪನ್ನವಾಗಿರುತ್ತವೆ.
ಶಿಲ್ಪಿಗಳು ಕೆಲವೊಮ್ಮೆ ಹುಡುಕಲ್ಪಟ್ಟ ವಸ್ತುಗಳನ್ನು ಬಳಸುತ್ತಾರೆ.
ಪರಿಚಿತವಿರುವ ಮೊದಲ ಶಿಲ್ಪಗಳು ಸಿಂಧೂತಟದ ನಾಗರೀಕತೆಯ (3300-1700 BC) ಕಾಲದ್ದಾಗಿವೆ ಮತ್ತು ಆಧುನಿಕ ಪಾಕಿಸ್ತಾನದ ಮೋಹನ್ಜೋದಡೊ ಹಾಗೂ ಹಡಪ್ಪಾ ಸ್ಥಳಗಳಲ್ಲಿ ಕಂಡುಬರುತ್ತವೆ. ನಂತರ, ಹಿಂದೂ ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳು ಮತ್ತಷ್ಟು ಅಭಿವೃದ್ಧಿಯಾದಂತೆ, ಭಾರತವು ಕಂಚಿನ ಶಿಲ್ಪಗಳು ಮತ್ತು ಬಹಳ ಸಂಕೀರ್ಣತೆಯ ಕಲ್ಲಿನ ಕೆತ್ತನೆಗಳನ್ನು ನಿರ್ಮಾಣಮಾಡಿತು, ಉದಾಹರಣೆಗೆ ವಿವಿಧ ಹಿಂದೂ, ಜೈನ ಮತ್ತು ಬೌದ್ಧ ಮಂದಿರಗಳನ್ನು ಚೆಲುವಾಗಿಸುವ ಪ್ರಸಿದ್ಧ ದೇವಾಲಯ ಕೆತ್ತನೆಗಳು. ಇವುಗಳಲ್ಲಿ ಕೆಲವು, ಉದಾಹರಣೆಗೆ ಎಲ್ಲೋರ ಮತ್ತು ಅಜಂತಾದ ಗುಹಾ ದೇವಾಲಯಗಳು, ಭಾರತೀಯ ಕಲ್ಲು ಕೆತ್ತನೆಯ ವಾಸ್ತುಶಿಲ್ಪದ ಉದಾಹರಣೆಗಳಾಗಿವೆ, ಮತ್ತು ಬಹುಶಃ ವಿಶ್ವದಲ್ಲಿನ ಅತಿ ದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷಿ ಶಿಲ್ಪ ಯೋಜನೆಗಳಾಗಿವೆ.
ಮಥುರಾದ ಗುಲಾಬಿ ಬಣ್ಣದ ಮರಳುಶಿಲೆಯ ಶಿಲ್ಪಗಳು ಗುಪ್ತ ಸಾಮ್ರಾಜ್ಯದ ಕಾಲದಲ್ಲಿ (4-6 ಶತಮಾನ) ವಿಕಸನಗೊಂಡವು ಮತ್ತು ವಿನ್ಯಾಸದಲ್ಲಿ ಬಹಳ ನವಿರಾದ ಕಾರ್ಯಗತಗೊಳಿಸುವಿಕೆ ಮತ್ತು ನಾಜೂಕು ಮುಟ್ಟಿದವು. ಗುಪ್ತರ ಅವಧಿಯ ಕಲೆಯು ನಂತರ ಸೂಯಿ ಸಾಮ್ರಾಜ್ಯ ಸಮಯದಲ್ಲಿ ಚೀನೀ ಶೈಲಿಗಳ ಮೇಲೆ, ಮತ್ತು ಉಳಿದ ಪೂರ್ವ ಏಷ್ಯಾದ ಉದ್ದಕ್ಕಿನ ಕಲಾತ್ಮಕ ಶೈಲಿಗಳ ಮೇಲೆ ಪ್ರಭಾವ ಬೀರಿತು. ತಿಳಿಗಚ್ಚು, ಪದರಶಿಲೆ ಅಥವಾ ಜೇಡಿಮಣ್ಣಿನಲ್ಲಿನ ಅಫ್ಘಾನಿಸ್ಥಾನದ ಹೆಚ್ಚು ನವೀನ ಶಿಲ್ಪಗಳು ಭಾರತೀಯ ಉತ್ತರಗುಪ್ತ ವಿಲಕ್ಷಣತೆ ಮತ್ತು ಶಾಸ್ತ್ರೀಯ ಪ್ರಭಾವದ ಪ್ರಬಲವಾದ ಸಮ್ಮಿಶ್ರಣವನ್ನು ಪ್ರದರ್ಶಿಸುತ್ತವೆ. ದಕ್ಷಿಣ ಭಾರತದ ಚೋಳ ಸಾಮ್ರಾಜ್ಯದ (ಸು. 850-1250) ಪ್ರಸಿದ್ಧ ಕಂಚಿನ ಶಿಲ್ಪಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ; ನಟರಾಜನ ಅಪ್ರತಿಮ ಆಕೃತಿಯು ಉತ್ಕೃಷ್ಟ ಉದಾಹರಣೆಯಾಗಿದೆ. ಭಾರತೀಯ ಶಿಲ್ಪಕಲೆಯ ಸಂಪ್ರದಾಯಗಳು 20 ನೇ ಮತ್ತು 21 ನೇ ಶತಮಾನಗಳಲ್ಲಿ ಮುಂದುವರೆಯುತ್ತಿವೆ, ಉದಾಹರಣೆಗೆ ಪಲ್ಲವ ಸಾಮ್ರಾಜ್ಯದಿಂದ ಹುಟ್ಟಿಕೊಂಡ ಮಹಾಬಲಿಪುರಂನಲ್ಲಿರುವ ಬೆಣಚುಕಲ್ಲು ಕೆತ್ತನೆಗಳು. ಸಮಕಾಲೀನ ಭಾರತೀಯ ಶಿಲ್ಪಕಲೆಯು ವಿಶಿಷ್ಟವಾಗಿ ಬಹುರೂಪಿಯಾಗಿದೆ, ಆದರೆ ಧ್ರುವ ಮಿಸ್ತ್ರಿಯಂತಹ ಹೆಸರಾಂತ ವ್ಯಕ್ತಿಗಳನ್ನು ಒಳಗೊಂಡಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.