From Wikipedia, the free encyclopedia
ಶರಾವತಿ ನದಿಯು ಕರ್ನಾಟಕದ ಪ್ರಮುಖ ನದಿಗಳಲ್ಲೊಂದು. ಈ ನದಿಯು ಭಾರತದ ಪಶ್ಮಿಮ ದಿಕ್ಕಿನಲ್ಲಿ ಹರಿಯುವ ನದಿಗಳಲ್ಲಿ ಒಂದಾಗಿದೆ. ಈ ಆಣೆಕಟ್ಟು ೨.೪ಕಿ. ಮೀ. ಉದ್ದವನ್ನು ಹೊಂದಿದೆ. ಹೊನ್ನಾವರದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವ ಶರಾವತಿ ನದಿಯು ಹರಿಯುವ ಉದ್ದ ಸುಮಾರು ೧೨೮ ಕಿ.ಮೀ. ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ. ಜೋಗದಲ್ಲಿ ಶರಾವತಿ ೯೦೦ ಅಡಿ ಧುಮುಕಿ ಜೋಗ ಜಲಪಾತವನ್ನು ಸೃಷ್ಟಿಸಿದೆ. ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ. ಆಣೆಕಟ್ಟೆಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ದೀರ್ಘಕಾಲದವರೆಗೆ ಕರ್ನಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು. ನದಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಅನೇಕ ಜೀವವೈವಿಧ್ಯತೆಯಿಂದ ಸಮೃದ್ಧವಾಗಿದೆ ಮತ್ತು ಅನೇಕ ರೀತಿಯ ಅಪರೂಪದ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.
ಶರಾವತಿ ನದಿಯು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುತ್ತದೆ. ಪ್ರಾಚೀನ ದಂತಕಥೆಯ ಪ್ರಕಾರ, ಸೀತಾ ದೇವಿಗೆ ಬಾಯಾರಿಕೆ ಆದಾಗ ರಾಮ ದೇವರು ತನ್ನ ಬಾಣವನ್ನು ನೆಲಕ್ಕೆ ಹಾರಿಸಿದ ಸಂದರ್ಭದಲ್ಲಿ ಬಾಣವು ಭೂಮಿಗೆ ಅಪ್ಪಳಿಸಿ ನೀರು ಸುರಿಯಿತು. ಈ ಘಟನೆಯೊಂದಿಗೆ ಹುಟ್ಟಿದ ನದಿಯನ್ನು 'ಶರಾವತಿ' ಎಂದು ಕರೆಯಲಾಗುತ್ತದೆ.[೧] 'ಶರಾ' ಎಂದರೆ ಬಾಣ ಎಂಬ ಅರ್ಥವನ್ನು ನೀಡುತ್ತದೆ. ನದಿಯ ಪ್ರಮುಖ ಉಪನದಿಗಳು :ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲ್ಕುಂಜಿ, ಯೆನ್ನೆಹೊಳೆ, ಹರ್ಲಿಹೊಳೆ, ನಾಗೋಡಿಹೊಳೆ.
ಲಿಂಗನಮಕ್ಕಿ ಅಣೆಕಟ್ಟನ್ನು ೧೯೬೪ರಲ್ಲಿ ಶರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಯಿತು.
ಗೇರುಸೊಪ್ಪ ಆಣೆಕಟ್ಟು ಯೋಜನೆ ೨೦೦೨ರಲ್ಲಿ ಪೂರ್ಣಗೊಂಡಿತು. ಇದರ ಮುಖ್ಯ ಉದ್ದೇಶ ವಿದ್ಯುತ್ ಉತ್ಪಾದನೆ. ಇದನ್ನು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಬಳಿ ನಿರ್ಮಿಸಲಾಯಿತು. ಇದು ೫೬ ಮೀಟರ್ ಎತ್ತರ ಮತ್ತು ೫೪೫ ಮೀಟರ್ ಉದ್ದವನ್ನು ಹೊಂದಿದೆ. ಗೇರುಸೊಪ್ಪ ಆಣೆಕಟ್ಟಿನ ಬಲದಂಡೆಯಲ್ಲಿರುವ ಪವರ್ ಹೌಸ್ ನಾಲ್ಕು ಫ್ರಾನ್ಸಿಸ್ ಮಾದರಿಯ ಟರ್ಬೈನ್ ಗಳನ್ನು ಒಳಗೊಂಡಿದೆ.
ಜೋಗ ಜಲಪಾತ ಭಾರತದ ಮೂರನೇ ಅತೀ ಎತ್ತರವಾದ ಜಲಪಾತವಾಗಿದೆ. ಮೊದಲ ಅತ ಎತ್ತರದ ಕುಂಚಿಕಲ್ ಜಲಪಾತ ಮತ್ತು ಎರಡನೇ ಎತ್ತರದ ಬರ್ಕಣ ಜಲಪಾತ , ಶಿವಮೊಗ್ಗ ಜಿಲ್ಲೆಯಲ್ಲಿದೆ.[೨] ಶರವತಿ ನದಿ ರಾಜ, ರೋವರ್, ರಾಕೆಟ್ ಮತ್ತು ರಾಣಿ , ಹೀಗೆ ನಾಲ್ಕು ವಿಭಾಗಗಳಾಗಿ ಆಳವಾದ ಕಮರಿಗೆ ಇಳಿಯುತ್ತದೆ.[೩][೪]
ನದಿಯ ಬಹುಪಾಲು ಪಶ್ಮಿಮ ಘಟ್ಟದಲ್ಲಿ ಇದ್ದು, ಶರಾವತಿ ನದಿಯ ಜಲಾನಯಾನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಸರಾಸರಿ ವಾರ್ಷಿಕ ಮಳೆಯು ಪಶ್ಮಿಮ ಭಾಗದಲ್ಲಿ ೬೦೦ಮಿ.ಮೀ ನಿಂದ ಜಲಾನಯನದ ಪೂರ್ವ ಭಾಗದಲ್ಲಿ ೧೭೦೦ ಮಿ.ಮೀ. ಜೂನ್ ನಿಂದ ಸಪ್ಟೆಂಬರ್ ವರೆಗೆ ಶೇಕಡ ೯೫ರಷ್ಟು ಮಳೆಯಾಗುತ್ತದೆ.
ಎಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 35.8oC ಮತ್ತು ಸರಾಸರಿ ದೈನಂದಿನ ತಾಪಮಾನ 22.2oC ರಷ್ಟು ಹೊಂದಿರುತ್ತದೆ.
ಶರಾವತಿ ನದಿ ಜಲಾನಯ ಪ್ರದೇಶವು ಜೀವವೈವಿಧ್ಯತೆಯಿಂದ ಕೂಡಿದೆ. ಜಲಾನಯನ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬುಫೊನಿಡೆ,ಇಚ್ಥಿಯೊಫಿಡೆ, ಮೈಕ್ರೋಹೈಲಿಡೆ, ರಾಣಿಡೆ ಮತ್ತು ರಾಕೊಫೊರಿಡೆ ಕುಟುಂಬಗಳಿಗೆ ಸೇರಿದ ೨೩ ಉಭಯಚರಗಳನ್ನು ದಾಖಲಿಸಲಾಗಿದೆ.[೫]
ಹೊನ್ನೇಮರಡು ಲಿಂಗನಮಕ್ಕಿ ಅಣೆಕಟ್ಟಿನಿಂದ ರೂಪಿತಗೊಂಡ ಜಲಾಶಯದ ದ್ವೀಪವಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ.[೬] ಈ ಸ್ಥಳವು ಜಲ ಕ್ರೀಡೆಗಳಿಗೆ ಉತ್ತಮವಾಗಿದೆ ಮತ್ತು ಇದೊಂದು ಆಕರ್ಷೀಣಿಯ ಸ್ಥಳವಾಗಿದೆ. ಕ್ಯಾನೋಯಿಂಗ್, ಕಯಾಕಿಂಗ್, ವಿಂಡ್ ಸರ್ಫಿಂಗ್ ಇಲ್ಲಿನ ಕೆಲವು ಜಲ ಕ್ರೀಡೆಗಳು.
.ಶರಾವತಿ ಪಾಲಿಗೆ ಮರಣ ಮೃದಂಗವಾಗಲಿದೆಯೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ?
Seamless Wikipedia browsing. On steroids.