Remove ads
From Wikipedia, the free encyclopedia
ಒಂದೇ ಒಂದು ಶಾಸನ ಸಭೆಯುಳ್ಳ(ವಿಧಾನ ಸಭೆ ಮಾತ್ರ) ರಾಜ್ಯಗಳಲ್ಲಿ ವಿಧಾನ ಸಭೆ ಮುಖ್ಯ ಭೂಮಿಕೆಯಾಗಿಯೂ ಹಾಗೂ ಎರಡು ಶಾಸನ ಸಭೆ(ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು)ಗಳುಳ್ಳ ರಾಜ್ಯಗಳಲ್ಲಿ ಕೆಳಮನೆಯಾಗಿಯೂ ವಿಧಾನ ಸಭೆ ಕಾರ್ಯ ನಿರ್ವಹಿಸುತ್ತದೆ.
ಕೇಂದ್ರದಲ್ಲಿ ಲೋಕಸಭೆ ಕೆಳಮನೆಯಾದರೆ, ರಾಜ್ಯ ಸಭೆ ಮೇಲ್ಮನೆಯಾಗಿರುತ್ತದೆ. ಅಂತೆಯೇ ರಾಜ್ಯಗಳಲ್ಲಿ ವಿಧಾನ ಸಭೆ ಕೆಳಮನೆಯಾಗಿದ್ದು, ವಿಧಾನ ಪರಿಷತ್ತು ಮೇಲ್ಮನೆಯಾಗಿರುತ್ತದೆ. ವಿಧಾನ ಪರಿಷತ್ತು ಎಲ್ಲ ರಾಜ್ಯಗಳಲ್ಲೂ ಕಡ್ಡಾಯವಲ್ಲ. ಸದ್ಯಕ್ಕೆ ಭಾರತದ ೭ ರಾಜ್ಯಗಳು ವಿಧಾನ ಪರಿಷತ್ತು ಹೊಂದಿವೆ. ರಾಜ್ಯದ ಸ್ಥಾನ ಮಾನವಿಲ್ಲದ ಎರಡು ಕೇಂದ್ರಾಡಳಿತ ಪ್ರದೇಶಗಳು ವಿಧಾನಸಭೆಯನ್ನು ಹೊಂದಿವೆ. ಅವುಗಳೆಂದರೆ ದೆಹಲಿ ಮತ್ತು ಪುದುಚೇರಿ.
ವಿಧಾನಸಭೆಯ ಸದಸ್ಯರು ವಿಧಾನಸಭೆಯ ವ್ಯಾಪ್ತಿಯ ಒಂದು ಕ್ಷೇತ್ರದ ಹದಿನೆಂಟು ವಯಸ್ಸು ಮೀರಿದ ಮತದಾರರಿಂದ ನೇರವಾಗಿ ಆಯ್ಕೆಯಾಗಿರುತ್ತಾರೆ. ವಿಧಾನಸಭೆಯ ಸದಸ್ಯರ ಬಲವನ್ನು ಭಾರತದ ಸಂವಿಧಾನ ೬೦ಕ್ಕೆ ಕಡಿಮೆ ಹಾಗು ೫೦೦ಕ್ಕೆ ಹೆಚ್ಚು ಇರಬಾರದು ಎಂದು ನಮೂದಿಸಿದೆ. ಆದಾಗ್ಯೂ ಕೆಲ ಚಿಕ್ಕ ರಾಜ್ಯಗಳ ವಿಚಾರದಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕೆ ಕಡಿಮೆಯಿದೆ. ಗೋವಾ, ಸಿಕ್ಕಿಂ, ಮಿಝೋರಾಂ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚ್ಚೇರಿಯಲ್ಲಿ ವಿಧಾನ ಸಭಾ ಸದಸ್ಯರ ಸಂಖ್ಯೆ ೬೦ಕ್ಕಿಂತಲೂ ಕಡಿಮೆಯಿದ್ದು ಆ ರಾಜ್ಯಗಳಿಗೆ ವಿಧಾನಸಭಾ ಸದಸ್ಯರ ಸಂಖ್ಯಾ ಬಲದ ವಿಚಾರದಲ್ಲಿ ಸಡಿಲಿಕೆ ಕೊಡಲಾಗಿದೆ.
ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಒಬ್ಬ ವ್ಯಕ್ತಿಯನ್ನು ವಿಧಾನಸಭಾ ಸದಸ್ಯನಾಗಿ ನೇಮಕ ಮಾಡಿಕೊಳ್ಳಬಹುದು. ಆ ವ್ಯಕ್ತಿ ಅಲ್ಪ ಸಂಖ್ಯಾತ ಪ್ರತಿನಿಧಿಯಂತಿದ್ದು, ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿದ್ದರೆ ಅದನ್ನು ಸರಿದೂಗಿಸಲು ರಾಜ್ಯಪಾಲರಿಂದ ನೇಮಕವಾಗುತ್ತಾನೆ. ಎಲ್ಲ ವಿಧಾನಸಭಾ ಸದಸ್ಯರ ಕಾಲಾವಧಿ ಐದು ವರ್ಷಗಳಾಗಿದ್ದು ಆ ಸರ್ಕಾರದ ಐದು ವರ್ಷ ಮುಗಿಯುತ್ತಿದ್ದಂತೆಯೇ ಚುನಾವಣೆ ಎದುರಿಸಬೇಕಾಗುತ್ತದೆ.
ಒಂದು ವಿಧಾನ ಸಭೆಯ ಅವಧಿ ಐದು ವರ್ಷಗಳಾಗಿರುತ್ತದೆ. ತುರ್ತು ಪರಿಸ್ಥಿತಿಗಳಂತಹ ಸಂಧರ್ಭದಲ್ಲಿ ವಿಧಾನ ಸಭೆಯ ಅವಧಿಯನ್ನು ರಾಜ್ಯ ಪಾಲರು ವಿಸ್ತರಿಸಬಹುದು ಅಥವಾ ಕಡಿತ ಮಾಡಲೂಬಹುದು. ವಿಧಾನ ಸಭೆಯ ಅವಧಿಯನ್ನು ರಾಜ್ಯಪಾಲರು ಗರಿಷ್ಠ ೬ ತಿಂಗಳವರೆಗೆ ವಿಸ್ತರಿಸಬಹುದು.
ಮುಖ್ಯಮಂತ್ರಿಗಳ ಮನವಿಯ ಆಧಾರದ ಮೇಲೆ ವಿಧಾನ ಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ವಿಧಾನ ಸಭೆಯಲ್ಲಿ ವಿಶ್ವಾಸಮತ ಗಳಿಸುವಲ್ಲಿ ವಿಫಲವಾದರೆ ಅಥವಾ ಸರ್ಕಾರ ರಚಿಸಲು ಅವಶ್ಯವಾದ ಸದಸ್ಯ ಬಲ ಹೊಂದಿಲ್ಲವಾದರೆ ರಾಜ್ಯಪಾಲರು ವಿಧಾನಸಭೆ ವಿಸರ್ಜಿಸಲು ಅವಕಾಶವಿದೆ.
ವಿಧಾನ ಸಭೆಯ ಸದಸ್ಯನಾಗಲು ಇಚ್ಛಿಸುವ ವ್ಯಕ್ತಿಯು ಚುನಾವಣೆಯಲ್ಲಿ ಯಾವುದಾದರೂ ಒಂದು ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಫರ್ಧಿಸಬೇಕು. ಸ್ಫರ್ಧಿಸುವ ಮುನ್ನ ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.
ವಿಧಾನ ಸಭೆಯ ಕಾರ್ಯ ಕಲಾಪಗಳು, ಅಧಿವೇಶನಗಳು ವಿಧಾನ ಸಭಾಧ್ಯಕ್ಷ(ಸ್ಪೀಕರ್) ರ ನೇತೃತ್ವದಲ್ಲಿ ನಡೆಯುತ್ತವೆ. ಸಭಾಧ್ಯಕ್ಷರ ಗೈರುಹಾಜರಿ ಸಂಧರ್ಭಗಳಲ್ಲಿ ಉಪಸಭಾಧ್ಯಕ್ಷರು ವಿಧಾನ ಸಭೆಯನ್ನು ಮುನ್ನಡೆಸುತ್ತಾರೆ. ಸ್ಪೀಕರ್ ರವರು ಶೂನ್ಯ ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸಲಿದ್ದು ಸಭೆಯಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು, ಮಾತು ಕತೆಗಳನ್ನು ನಿಭಾಯಿಸುತ್ತಾರೆ.
ವಿಧಾನ ಸಭೆಯು ವಿಧಾನ ಪರಿಷತ್ ನಷ್ಟೇ ಸಾಂವಿಧಾನಿಕ ಶಕ್ತಿಯುಳ್ಳದ್ದಾಗಿರುತ್ತದೆ. ಇದಕ್ಕೆ ಹಣಕಾಸಿನ ಮಸೂದೆ ಹೊರತಾಗಿರುತ್ತದೆ. ಹಣಕಾಸಿನ ಮಸೂದೆ ವಿಧಾನಪರಿಷತ್ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಆ ವಿಚಾರದಲ್ಲಿ ವಿಧಾನಸಭೆಯೇ ಮುಖ್ಯವಾಗಿರುತ್ತದೆ.
ರಾಜ್ಯ ಪಟ್ಟಿ ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯದ ಮೇಲೆ ಶಾಸನ ಮಾಡುವ ಅಧಿಕಾರ ವಿಧಾನಸಭೆಗೆ ಇದೆ, ಶಾಸನ ಕಾಯ್ದೆ ಆಗಬೇಕಾದರೆ ರಾಜ್ಯದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಸಹಿ ಪಡೆಯಬೇಕು. ರಾಜ್ಯಪಾಲರು ಕೆಲವು ಮಸೂದೆಗಳನ್ನು ಒಪ್ಪಿಕೊಳ್ಳ ಬಹುದು ಅಥವಾ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಬಹುದು.
ಹಣಕಾಸಿನ ಅಧಿಕಾರ- ಹಣಕಾಸಿನ ವಿಷಯದಲ್ಲಿ ಸಂಬಂಧಿಸಿದಂತೆ ವಿಧಾನಸಭೆಗೆ ಹೆಚ್ಚಿನ ಅಧಿಕಾರ ಲಭಿಸಿದೆ.ಹಣಕಾಸಿನ ಮಸೂದೆಯನ್ನು ವಿಧಾನಸಭೆಯ ಒಪ್ಪಿಗೆಯ ನಂತರ ವಿಧಾನ ಪರಿಷತ್ಗೆ ಕಳಿಸಲಾಗುತ್ತದೆ ವಿಧಾನ ಪರಿಷತ್ ಮಸೂದೆಯನ್ನು ತಿರಸ್ಕರಿಸಲು ಅಧಿಕಾರವಿರುವುದಿಲ್ಲ ಕೇವಲ ಸೂಚನೆಗಳನ್ನು ನೀಡಬಹುದು. ವಿಧಾನಸಭೆಗೆ ಸಲಹೆ ಸೂಚನೆಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವಿದೆ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.