From Wikipedia, the free encyclopedia
ಭರತ್ ಕುಮಾರ್ ಪೊಲಿಪು, [1] ೧೯೮೨ ರಲ್ಲಿ ಮುಂಬಯಿನಗರಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಸುಮಾರು ೩ ದಶಕಗಳ ಮುಂಬಯಿ ಜೀವನದಲ್ಲಿ ಅವರೊಬ್ಬ ಲೇಖಕ, ಸಂಘಟಕ, ರಂಗಕರ್ಮಿ, ನಾಟಕ ನಿರ್ದೇಶಕ, ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಸಂಘ ಮುಖಪತ್ರಿಕೆಯಾದ ಸ್ನೇಹಸಂಬಂಧ ಪತ್ರಿಕೆಯ ಲೇಖಕರು ಹಾಗೂ ಪ್ರಕಾಶಕರು.
ಮೂಲತಃ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪೊಲಿಪು ಅವರು ಜನಿಸಿದ ಸ್ಥಾನ. 'ಉಡುಪಿಯ ಪೂರ್ಣಪ್ರಜ್ಞ ಕಾಲೇಜಿ'ನಲ್ಲಿ ಬಿ.ಕಾಂ ಪದವಿಯನ್ನು ಗಳಿಸಿ, ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ 'ಎಂ.ಎ.ಪದವಿ'ಯನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿ ನಂತರ, ಕೆಲ ಕಾಲ ತಮ್ಮ ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿದ್ದರು. ನಂತರ ಅವರು ಪಿ.ಎಚ್.ಡಿ ಗೆ ಓದುವ ಹವ್ಯಾಸವನ್ನು ಪುನಃ ಆರಂಭಿಸಿ, ’ಮುಂಬಯಿ ಕನ್ನಡ ರಂಗಭೂಮಿ-ಒಂದು ತೌಲನಿಕ ಅಧ್ಯಯನ'[2] ವೆಂಬ ಮಹಾಪ್ರಬಂಧವನ್ನು ಕನ್ನಡ ವಿಭಾಗದ ಮುಖ್ಯಸ್ಥ, ಡಾ.ಜಿ.ಎನ್.ಉಪಾಧ್ಯರವರ ಮಾರ್ಗದರ್ಶನದಲ್ಲಿ ಮಂಡಿಸಿ,'ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ'ಯನ್ನು ಗಳಿಸಿದ್ದಾರೆ.[3]
ಪೊಲಿಪುರವರು [4] ತಮ್ಮ ಶಾಲಾ ಕಾಲೇಜು ದಿನಗಳಲ್ಲೇ ನಾಟಕ ರಂಗದಲ್ಲಿ ಆಸಕ್ತಿ ವಹಿಸಿದ್ದು, ಸ್ತ್ರೀ ಪಾತ್ರಗಳ ಮೂಲಕ ರಂಗಪ್ರವೇಶ ಮಾಡಿದ್ದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದ, ಖ್ಯಾತ ರಂಗ ನಿರ್ದೇಶಕರಾದ ಬಿ.ಆರ್.ನಾಗೇಶ್ ರವರ ಗರಡಿಯಲ್ಲಿ ಪಳಗಿದವರು. ಉದ್ಯಾವರ ಮಾಧವಚಾರ್ಯ, ಪ್ರಸನ್ನ, ಶ್ರೀನಿವಾಸ ಪ್ರಭು, ರಾಮದಾಸ್ ಮೊದಲಾದವರ ಮಾರ್ಗದರ್ಶನದಲ್ಲಿ ಜೊತೆಗೂಡಿ ಕಾರ್ಯ ನಿರ್ವಹಿಸಿದ್ದಲ್ಲದೆ, ತಮ್ಮದೇ ಆದ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡು ಗುರುತಿಸಲ್ಪಟ್ಟಿದ್ದಾರೆ. ಹಲವಾರು ತುಳು ನಾಟಕಗಳನ್ನು ರಚಿಸಿ, ಪ್ರಸ್ತುತಿಪಡಿಸಿದ್ದಾರೆ. ಶಿವರಾಮ ಕಾರಂತರ ಶಿಷ್ಯ,'ಬನ್ನಂಜೆ ಸಂಜೀವ ಸುವರ್ಣ'ರಿಂದ ಯಕ್ಷಗಾನ ಬಡಗು ತಿಟ್ಟಿನ ನೃತ್ಯಾಭ್ಯಾಸವನ್ನು ಕಲಿತಿದ್ದಾರೆ. ಮೈಸೂರು ಆರ್.ಮೋಹನ್ ರವರಿಂದ ಭರತನಾಟ್ಯ ಕಲಿತರು. ಜಿಲ್ಲಾದ್ಯಂತ ಪ್ರದರ್ಶನ ನೀಡಿದರು. ಈಗ ಅವರು, ಮುಂಬಯಿನ ರಂಗಭೂಮಿಯಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ.[5] ಪೊಲಿಪುರವರ ನಿರ್ದೇಶನದಲ್ಲಿ ಬೆಳಕುಕಂಡ ಕನ್ನಡ ನಾಟಕಗಳಗಳಲ್ಲಿ ಮುಖ್ಯವಾದದ್ದು :
ಮುಂಬಯಿನ ಪ್ರಯೋಗ ರಂಗದ ಮೂಲಕ ಅನೇಕ ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ, 'ಪ್ರಯೋಗ ಪ್ರಕಾಶನಾಲಯ'ವೆಂಬ 'ಪ್ರಕಾಶನ ಸಂಸ್ಥೆ'ಯೊಂದನ್ನು ಹುಟ್ಟು ಹಾಕಿದ್ದಾರೆ. ಅರವಿಂದ ನಾಡಕರ್ಣಿಯವರ ಕೃತಿಗಳ ವಿಮರ್ಶೆಯ 'ಬೇರು ಬಿಳಲು', 'ವಿ.ಎಸ್.ಶ್ಯಾನು ಭೋಗ್' ರವರ ಕವನ ಸಂಕಲನ 'ತಟ್ಟೀರಾಯ' ಹೊರತಂದದ್ದು ಇದೆ. ಹೀಗೆ ಮುಂದುವರೆದು ಪ್ರಯೋಗರಂಗ ತನ್ನ ಬೆಳ್ಳಿಹಬ್ಬವನ್ನು ಆಚರಿಸಿದ ಮುಂಬಯಿನ ನಾಟಕತಂಡಗಳಲ್ಲಿ ಇದೂ ಒಂದು. 'ಪೊಲಿಪು'ರವರು, ಮುಂಬಯಿನಿಂದ ಹೊರಡುವ ಕರ್ನಾಟಕ ಮಲ್ಲ, ಪತ್ರಿಕೆ ಯಲ್ಲಿ ಸಾಕಷ್ಟು ಉತ್ತಮ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. 'ಉದಯದೀಪ', 'ಸಂಜೆಸುದ್ದಿ' ಪತ್ರಿಕೆಗಳಲ್ಲಿ ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರಿನ ಪತ್ರಿಕೆ,'ಮುಂಗಾರು'ವಿಗೆ, ಮುಂಬಯಿನಿಂದಲೇ ವರದಿ/ನಾಟಕ ವಿಮರ್ಶೆಗಳನ್ನು ಬರೆಯುತ್ತಾ ಬಂದಿದ್ದಾರೆ. 'ಭರತ್ ಕುಮಾರ್' ರವರು, ಅಭಿವ್ಯಕ್ತ (ಮಂಗಳೂರು), 'ಕರ್ನಾಟಕ ನಾಟಕ ಅಕಾಡೆಮಿ '(ದಾವಣಗೆರೆ) ಇವುಗಳು ಆಯೋಜಿಸಿದ್ದ 'ವಿಚಾರಗೋಷ್ಟಿ,' 'ಸಾಹಿತ್ಯ ಕಮ್ಮಟ'ಗಳಲ್ಲಿ ಭಾಗವಹಿಸಿ ರಂಗಭೂಮಿಯ ಬಗ್ಗೆ ಪ್ರಬಂಧಗಳನ್ನು ಮಂಡಿಸಿದ್ದಾರೆ. 'ಕರ್ನಾಟಕ ಸಂಘ'ದಲ್ಲಿ ರಂಗ ಭೂಮಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ಸಮಯವನ್ನು ವಿನಿಯೋಗಿಸಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. 'ಪೊಲಿಪು' ನಿರ್ದೇಶಿಸಿದ ನಾಟಕಗಳು, ಬೆಳಗಾವಿ, ದೆಹಲಿ, ತುಮಕೂರು, ಧಾರವಾಡ, ಮೊದಲಾದ ನಗರಗಳಲ್ಲಿ ಪ್ರದರ್ಶನ ಕಂಡಿವೆ.[6]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.