ತುಳಸಿ ಪೂಜೆ - ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಈ ದಿನವೂ ಪಟಾಕಿಯ ಮಹಾಪೂರವೇ ಜರುಗುತ್ತದೆ.

ತುಳಸಿ ಪುರಾಣ

  • ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಜಲಂಧರನು ರಣಭೂಮಿಯಲ್ಲಿ ಮಡಿದನಂತೆ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ.
  • ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ(ಹೋಲಿಕೆ) ಇಲ್ಲವಾದ್ದರಿಂದ,ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು.

ಭಗವಂತೋತ್ಥಾನ

ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯ ವ್ರತವನ್ನು ಈ ದಿವಸ ಮುಕ್ತಾಯಗೊಳಿಸಬೇಕು.

ವ್ರತಾಚರಣೆ

ಈ ದ್ವಾದಶಿಯಲ್ಲಿ ಕ್ಷೀರಾಬ್ಧಿಶಯನ ವ್ರತವನ್ನು ಆಚರಿಸುತ್ತಾರೆ. ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು (ಕಾಯಿಸಹಿತವಾದ ನೆಲ್ಲಿಗಿಡವನ್ನು) ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪುಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನ ದಲ್ಲಿಟ್ಟು ಉತ್ಸವಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪುಜಿಸಿ ದೀಪಗಳಿಂದ ಅಲಂಕರಿಸಿ ಪುಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನನಿವೇದನ ಒಂದು ವಿಶೇಷ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿ ಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಲಸೀ ಆವಾಸವಾದ ಬೃಂದಾವನದಲ್ಲಿ ತುಲಸೀ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ. ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದ. ಈ ದ್ವಾದಶಿಯಲ್ಲಿ ಧಾತ್ರೀ ತುಲಸೀ ಸಹಿತ ಲಕ್ಷ್ಮೀನಾರಾಯಣನನ್ನು ಪುಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ-ಎಂದು ವ್ರತಮಹಾತ್ಮ್ಯೆ ತಿಳಿಸುತ್ತದೆ.

Quick Facts
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.