- ಛಂದಸ್ಸು: ವರಕವಿಯಾದ ಈತನು ಕುಮಾರವ್ಯಾಸನ ನಂತರದ ಹೆಚ್ಚು ಜನಪ್ರಿಯ ಕವಿ. ಸಂಸ್ಕೃತ, ಹಳಗನ್ನಡ ಮತ್ತು ಹೊಸಗನ್ನಡ ಇವುಗಳಲ್ಲಿ ಸಂಪೂರ್ಣ ಪಾಂಡಿತ್ಯ ಪಡೆದವನು. ರಸಗರ್ಭಿತವಾದ ಈ ಉದ್ಗ್ರಂಥವನ್ನು ಮೂವತ್ನಾಲ್ಕು ಸಂಧಿಗಳಾಗಿ ವಿಭಾಗಿಸಿ ಜನರ ಮನಮೆಚ್ಚುವಂತೆ ವಾರ್ಧಿಕ ಷಟ್ಪದಿಯಲ್ಲಿ ಬರೆದಿದ್ದಾನೆ. ಆಗ ಕಾಗದ ಮುದ್ರಣವಿರದಿದ್ದರಿಂದ ಇದನ್ನು ತಾಳೆಗರಿಯಲ್ಲಿ ಬರೆದಿದ್ದಾನೆ.
- ಅವನೇ ತನ್ನ ಕಾವ್ಯದ ಲಕ್ಷಣವನ್ನು ಪೀಠಿಕೆಯಲ್ಲಿ ಹೀಗೆ ವರ್ಣಿಸಿದ್ದಾನೆ:
- ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ|
- ತಾರದೆ ನಿಜಾನ್ವಯ ಕ್ರಿಯೆಗಳ್ಗೆ ದೂಷಣಂ|
- ಬಾರದೆ,ವಿಶೇಷಗುಣಗಣ ಕಲಾಗೌರವಂ ತೀರದೆ, ದುರುಕ್ತಿಗಳ್ಗೆ||
- ಸೇರದೆ, ಸುಮಾರ್ಗದೊಳ್ನೆಡೆವ ಸತ್ಪುರುಷನ ಗ-|
- ಭೀರ ದೆಸೆಯಿಂ ಪೊಲ್ವ ಕಾವ್ಯ ಪ್ರಬಂಧಮಂ|
- ಶಾರದೆಯ ಕರುಣದಿಂ ಪೇಳ್ವೆನಾಂ, ದೋಷಮಂತೊರೆದೆಲ್ಲಮುಂ ಕೇಳ್ವುದು||
- (ಪದಗಳಿಗೆ ಎರಡೆರಡು ಅರ್ಥವಿಟ್ಟು ಹೇಳಿದೆ):ಪರರ ಅರ್ಥವನ್ನು ಎಂದರೆ ಹಣವನ್ನು ಅಪಹರಿಸದ, ಪೂಜ್ಯರಿಗೆ (ಯತಿಗಳಿಗೆ) ಅಗೌರವ ತೋರದ, ನಿತ್ಯದ ಕರ್ತವ್ಯಗಳನ್ನು ಬಿಡದ, ಉತ್ತಮ ಗುಣಗಳ ನಡತೆಗೆ ತಪ್ಪದ, ಕೆಟ್ಟ ಮಾತನ್ನಾಡದ, ಸನ್ಮಾರ್ಗಲ್ಲಿ ನೆಡವ ಸತ್ಪುರುಷನಂತೆ, -(ಪುನಃ ಅದೇ ಪದಗಳಿಗೆಬೇರೆ ಅರ್ಥ) ಕೃತಿಚೌರ್ಯ ಮಾಡದೆ(ಪಾರದೆ ಪರರ ಅರ್ಥವನ್ನು), ಕಾವ್ಯದ ಯತಿಗೆ ಭಂಗಬರದಂತೆ (ಯತಿ:ಓದಿನಲ್ಲಿ ಛಂದಸ್ಸಿಗೆ ತಕ್ಕ ನಿಲುಗಡೆ), ವ್ಯಾಕರಣ ದೋಷವಿಲ್ಲದೆ, ವಿಶೇಷ ಕಾವ್ಯಲಕ್ಷಣದಿಂದ, ಅಪಶಬ್ಧ-ಕೀಳು/ತಪ್ಪು ಭಾಷೆ ಇರದಂತೆ (ದುರುಕ್ತಿ), ಗಂಭೀರ ಲಕ್ಷಣದ (ಸತ್ಪುರುಷನಂತಿರುವ) ಕಾವ್ಯವನ್ನು ಶಾರದಾದೇವಿಯ ಕೃಪೆಯಿಂದ ಹೇಳುವೆನು- ದೋಷವಿದ್ದರೆ ಅದನ್ನು ಬಿಟ್ಟು (ತೊರೆದು), ಪೂರ್ಣವಾಗಿ ಆಲಿಸಿರಿ. ಈ ಬಗೆಯ ದ್ವಂದಾರ್ಥವಿರುವ ಅನೇಕ ಪದ್ಯಗಳು ಈ ಕಾವ್ಯದಲ್ಲಿವೆ.
- ಕಾವ್ಯದ ಗುಣ ಛಂದಸ್ಸು ಲಕ್ಷಣಮಲಂಕಾರ ಭಾವರಸದೊಂದಿಗೆ ಸತ್ಕೃತಿ ಚಮತ್ಕೃತಿ ಕಾವ್ಯದ ಗುಣ - ಹಾಗೆ ತನ್ನ ಕೃತಿ ಇದೆ ಎಂದಿದ್ದಾನೆ ಕವಿ, ಅದು ನಿಜವಾಗಿದೆ.
- ಯುದ್ಧದವರ್ಣನೆ, ಬೇಟದ ವರ್ಣನೆ,ಕರುಣಭಾವ, ಆಯಾ ರಸೋತ್ಕರ್ಷವನ್ನು ಉಂಟು ಮಾಡುವಂತೆ ವರ್ಣಿತವಾಗಿವೆ. ಕಾವ್ಯವು ನವರಸದಿಂದ ತುಂಬಿದ್ದರೂ ಶೃಂಗಾರ ವೀರ ರಸಗಳಿಗೆ ಪ್ರಾಧಾನ್ಯ ನೀಡಿದ್ದಾನೆ. ರಸಿಕರ ಹೃದಯವನ್ನು ಸೂರೆಗೊಳ್ಳತ್ತಾನೆ.
ಶೃಂಗಾರ ರಸ
ಉದಾಹರಣೆಗೆ:
ಚಂದ್ರಹಾಸನ ಕಥೆಯಲ್ಲಿ, ದುಷ್ಟಬುದ್ಧಿಯ ಅರಮನೆಯ ಕೈತೋಟದಲ್ಲಿ ಅವನ ಪತ್ರಸಂದೇಶದೊಡನೆ ಬಂದು ವಿಶ್ರಾಂತಿಗೆ ಮಲಗಿ ನಿದ್ರೆಯಲ್ಲಿದ್ದಾಗ ದುಷ್ಟಬುದ್ಧಿಯ ಮಗಳು 'ವಿಷಯೆ' ಅವನನ್ನು ನೋಡಿ ಮೋಹಿಸಿ- ಅವನ ಬಳಿಗೆಹೋಗಿ ಸೊಂಟದಲ್ಲಿದ್ದ ಪತ್ರವನ್ನು ತೆಗೆಯುವ ಮೊದಲು ಅವಳ ಭಾವ:*ಆ ಸಂಧರ್ಭ:
- ಬೆಚ್ಚನಾದೆದೆಯಿಂದ ಕಾತರಿಸಿ ಮುದುಡುಗೊಂ
- ಡೆಚ್ಚರಿಂದೇಳ್ವ ರೋಮಾಂಚನದೊಳಾಸೆ ಮುಂ
- ಬೆಚ್ಚಿ ಬೆಮರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳ್ವೆನು||೨೨||೩೦||
- ಸುತ್ತ ನೋಡುವಳೊಮ್ಮೆ ನೂಪುರವಲುಗದಂತೆ|
- ಹತ್ತೆ ಸಾರುವಳೊಮ್ಮೆ ಸೋಂಕಲೆಂತಹುದೆಂದು|
- ಮುರಿದಪಳೊಮ್ಮೆ ಹೆಜ್ಜೆಹೆಜ್ಜೆಯ ಮೇಲೆ ಸಲ್ವಳಮ್ಮದೆ ನಿಲ್ವಳು||೨೩||ಸಂ.೩೦||
ವೀರ ರಸ
- ಸಾರಥಿಯ ಬಲ್ಪಿಂದ ಕೌರವ ಬಲದ ನಿಖಿಳ
- ವೀರರಂ ಗೆಲ್ದೆಯಲ್ಲದೆ ನಿನ್ನನೀ ಧರೆಯೊ
- ಳಾರರಿಯರಕಟ ! ನೀಮ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು||
- ಇನ್ನು ಹಯವಂ ಬಿಡುವನಲ್ಲ, ನಿನಗೆಮ್ಮ ತಾ
- ತಂ ನಳಿನನಾಭನ ಸಹಾಯಮಿಲ್ಲದೆ ಬರಿದೆ
- ತನ್ನನಳಕಿಸಲರಿಯೆ ಕಕ್ಕುಲತೆ ಬೇಡ, ನಡೆ ಹಸ್ತಿನಾಪುರಕೆ ಮರಳಿ||
- ಸಾರೆನ್ನಗಂ ಬರಿದೆ ಬಳಲಬೇಡೆಮ್ಮಲ್ಲಿ
- ಹಾರೈಸದಿರ್ಜಯವ'ನೆನುತೆಚ್ಚೊಡರ್ಜುನನ
- ತೇರಿರದೆ ತಿರ್ರನೆ ತಿಗುರಿಯಂತೆತಿರುಗಿತದನೇನೆಂಬನದ್ಭುತವನು||
ಭೀಭತ್ಸ
- ಕಡಿಕಡಿದು ಬಿದ್ದ ಕೈಕಾಲ್ಗಳಿಂ ತೋಳ್ಗಳಿಂ
- ಪೊಡೆಗೆಡದ ಹೇರೊಡಲ ಸೀಳ್ಗಳಿಂ ಪೋಳ್ಗಳಿಂ
- ಮಡಿಮಡಿದುರುಳ್ವ ಕಟ್ಟಾಳ್ಗಳಿಂ ಬಾಳ್ಗಳೊಂದೊಡೆವ ತಲೆವೋಳ್ಗಳಿಂದ||
ಹಾಸ್ಯ
- ಭೀಮ ಕೃಷ್ಣನನ್ನು ಕಾಣುವ ಸಂದರ್ಭ:ಸತ್ಯಭಾಮೆ ರುಕ್ಮಿಣಿಗೆ ಛೇಡಿಸುವಿಕೆ;
- ನಿಮ್ಮ ಬಂಧನವ ಬಿಡಿಸಿದವಂಗೆ ತವೆ ಬಂಧ
- ನಮ್ಮೊಳಗೇಕಾಯ್ತು? ದಿವಿಜರಂಪರೆದವಂ
- ಚಿಮ್ಮಟಿಗೆಯ ಪಿಡಿಯಲೇತಕೆ?
- ಕೀಟಲೆಗಾಗಿ ಭೀಮನನ್ನು ಕೃಷ್ಣನ ಮನೆಬಾಗಿಲಲ್ಲಿ ಊಟದ ಸಮಯವೆಂದು ತಡೆದಾಗ, ಭೀಮ ಛೇಡಿಸುವುದು:
- ಆರೋಗಣೆಯ ಸಮಯಮಾರ್ಗೆ? ಭೂತಂ ಪೊಯ್ದದಾರನೀ ಮನೆಯೊಳಿಂತೀಗಳೇತಕೆ ಮೌನಂ|.....
- ಬಿಡದೆ ಕಳವಿಂದ ಲೋಗರ ಮನೆಗಳಂ ಪೊಕ್ಕು|
- ತುಡು ತಿಂದವನ ಭೋಜನಕ್ಕೆ ಮೃಷ್ಟಾನ್ನಮಾ
- ದೊಡೆ ಕೆಲಬಲಂಗಳ ನೋಡುವಗೆ ಗೋವಳಂಗರಸುತನಮಾದ ಬಳಿಕ||
- ಪಡವಿಯಂ ಕಂಡು ನೆಡೆವನೆ? ಮುಳಿದು ಮಾವನಂ
- ಬಡಿದವಂ ನಂಟರನರಿವನೆ? ಮೊಲೆಗೊಟ್ಟವಳಸು
- ಗುಡಿದವಂ ಪುರುಷಾರ್ಥಿಯಾದಪನೆ? ನಾವಜ್ಞರೆಂದು ಮಾರುತಿ ನುಡಿದನು||
- (ಮಾವನನ್ನು ಕೊಂದವನಿಗೆ ನೆಂಟರ ಸಂಬಂಧ ತಿಳಿಯದು, ಮೊಲೆಹಾಲುಕೊಟ್ಟವಳ ಪ್ರಾಣ ತೆಗೆದವ, ನಾವು ಅಜ್ಞರು-ಬುದ್ಧಿಯಿಲ್ಲ ಇಲ್ಲಿಗೆ ಬಂದೆ)
ಭಯಾನಕ
- ದುಷ್ಟಬುದ್ದಿಯು ಕೊಲೆಯಾದ ಮಗನನ್ನು ಅಂಬಿಕಾ/ಚಂಡಿಕಾದೇವಿಯ ಗುಡಿಯಲ್ಲಿ ಕಾಣುವ ಸಂದರ್ಭದಲ್ಲಿ:
- ಪರಿದ ಪೂಮಾಲೆಗಳ ಬಣ್ಣಗೂಗ್ಗಳ ಬಲಿಯ|
- ಮೊರದ ಪಳಗೊಳ್ಳಿಗಳ ಭಸ್ಮದಡೆದೋಡುಗಳ|
- ಮುರಿದ ಗೂಡಂಗಳ ಕಳಲ್ದ ಶಿಬಿಕೆಗಳ ಚತೆಯೊಳ್ಬೇವ ಕುಣಂಪಂಗಳ||
- ತುರಿಗೆದೆಲುವಿನ ಜಂಬುಕಾವಳಿಯ ಗೂಗೆಗಳ|
- ಬಿರುದನಿಯ ಭೂತ ಬೇತಾಳ ಸಂಕುಲದಡಗಿ|
- ನರಕೆಗಳ ಸುಡುಗಾಡೊಳಾಮಂತ್ರಿ ಚಂಡಿಕಾಲಯದೆಡೆಗೆ ನೆಡೆತಂದನು||ಪದ್ಯ೫೫||ಸಂಧಿ೩೧||
- ಇದು ಚಂಡಿಕಾ ಗುಡಿಗೆ ಬರುವಾಗ ದಾರಿಯಲ್ಲಿರುವ ಸ್ಮಶಾನದ ವರ್ಣನೆ.
ಕರುಣ ರಸ
- ಲಕ್ಷ್ಮಣ, ರಾಮನಾಜ್ಞೆಯಂತೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹಿಂತಿರುಗುವ ಸಮಯ:
- ತರಣಿಕುಲ ಸಾರ್ವಭೌಮನ ರಾಣಿಯಂ ಬನದೊ
- ಳಿರಿಸಿ ಪೋದಪೆನೆಂತೊ? ಪೋಗದಿರ್ದೊಡೆ ಸಹೋ
- ದರನೇನೆಂದಪನೋ ಹಾ ಯೆಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು||೧೩||
- ಉಕ್ಕಿದವು ಕಂಬನಿಗಳಧರೋಷ್ಣಮದಿರಿ ತಲ|ಗಿಕ್ಕಿ ತಿರುಪಿದವೊಲಾಯ್ತು-ಒಡಲೊಳೆಡೆವರಿಯದು-
- ಉಸಿ|ರೊಕ್ಕು-ಉರೆ -ಕಂಪಿಸಿದುದು -ಅವಯುವಂ ಕರಗಿತು-ಎರ್ದೆ ಸೈರಣೆ ಸಮತೆಗೆಟ್ಟುದು||
- ಸಿಕ್ಕಿದವು ಕಂಠದೊಳ್ಮಾತುಗಳು -ಸೆರೆ ಬಿಗಿದು ಮಿಕ್ಕು ಮೀರುವ ಶೋಕದಿಂದ ----ಅವನಿಸುತೆಗಿಂತೆಂದನು||೧೪||
- ದೇವಿ ನಿನಗಿನ್ನೆಗಂ ಪೇಳ್ದುದಿಲ್ಲಪವಾದ|
- ಮಾವರಿಸೆ ನಿನ್ನನೊಲ್ಲದೆ ರಘುಕುಲೋದ್ವಹಂ|
- ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾ ಎಂದೆನಗೆ :ನೇಮಿಸಿದೊಡೆ||
- ಆ ವಿಭುವಿನಾಜ್ಞೆಯಂ ಮೀರಲರಿಯದೆ ನಿಮ್ಮ|
- ನೀವಿಪಿನಕೆ ಕೊಂಡು ಬಂದೆ---
- ಎಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಭಾಷ್ಪಲೋಚನನಾದನು||೧೫
- ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತಕದಳಿ|
- ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ|
- ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಲಂಗನೆ ಧರೆಗೆ ನಡುನಡುಗುತ||೧೬||
- ---ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ?||
- ಕೈಯಾರೆ ಖಡ್ಗಮಂ ಕೊಟ್ಟು, ತನ್ನರಸಿಯಂ|
- ಹೊಯ್ಯೆಂದು ಪೇಳದಡವಿಗೆ ಕಳುಹಿ ಬಾಯೆಂದ|
- ನಯ್ಯಯ್ಯೋ! ರಾಘವ ಕಾರುಣ್ಯನಿದಿಯೆಂದಳಲ್ದಳಂಭೋಜ ನೇತ್ರೆ||೧೭||ಸಂಧಿ ೧೯||
- --ಪೋಗು ನೀಂ ಕೊಂದುಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರದಂದುಗಂ, ಕಾನನದೊಳು ಬಂದುದಂ ಕಾಣ್ಬೆನು--||೨೪||
- ಆದರೆ ಆಗಲೂ ಅವಳು ತನ್ನನ್ನು ಏನೂ ಅಪರಾಧ ಮಾಡದಿದ್ದರೂ 'ತನ್ನ ಮಗ ನನ್ನನು ಬಿಟ್ಟನೆಂದು ಕೌಸಲ್ಯೆಯ ಪಾದಗಳಿಗೆ ನನ್ನ ವಂದನೆ ತಿಳಿಸಿ ಹೇಳು', ಎನ್ನುತ್ತಾಳೆ.
ರೌದ್ರ ರಸ
- ಸುರಥನೊಡನೆ ಯುದ್ಧ: ಕೃಷ್ಣ ಅರ್ಜುನನಿಗೆ ದಿವ್ಯಾಸ್ತ್ರ ತೊಟ್ಟು ತೋಳುಗಳನ್ನು ಕತ್ತರಿಸು ಎಂದಾಗ:
- ನರನಾನುಡಿಗೆ ಮುನ್ನಮೆಚ್ಚು ಕೆಡಪಿದನಾತ|
- ನನುರುಭುಜನೈವೆಡೆಯ ಭುಜಗೇಂದ್ರನಂದದಿಂ|
- ಧರೆಯೋಳ್ಪರಳ್ದುದು ಪೊಯ್ದುದುರೆ ಕೊಂದುದಾಕ್ಷಣಂ ಪರಬಲವನು||೧೪||
- ತೋಳ್ಗಳರಡುಂ ಕತ್ತರಿಸಿ ಬೀಳೆ ಮತ್ತೆ ಕ|
- ಟ್ಟಾಳ್ಗಳ ಶಿರೋಮಣಿ ಸುರಥನಾಕಿರೀಟಿಯಂ|
- ಕಾಲ್ಗಳಿಂದೊದೆದು ಕೆಡಹುನೆಂದು ಭರದಿಂದ ಬೊಬ್ಬಿರಿಯಲೈತರಲ್ಕೆ||
- ಕೋಲ್ಗಳಿಂ ತೊಡೆಗಳಂ ಕತ್ತರಿಸೆ|
- ನಾದಿದವು ಧೂಳ್ಗಳರುಣಾಂಬುವಿಂದೆದೆಯೊಳ್ತೆವಳ್ದಹಿಯ
- ವೋಲ್ಗಂಡುಗಳಲಿಧನಂಜಯನ ಸಮ್ಮುಖಕೆ ಮೇಲಾಯ್ದನವನೇವೇಳ್ವೆನು||೧೫||
- ---ಫಲುಗುಣಂ
- ಬೇಗ ಸುರಥನ ಶಿರವನರಿಯಲಾತಲೆ ಬಂದು|
- ತಾಗಿತತಿ ಭರದೋಳ್ ನರನ ವಕ್ಷವಂ ಕೆಡಹಿತಾವರೂಥಾಗ್ರದಿಂದ||೧೬|| ಸಂಧಿ ೧೪||
- ಸುರಥನ ಭುಜ ಕತ್ತರಿಸಿದರೆ ರಕ್ತ ಆಖಾಶಕ್ಕೆ ಹಾರಿತು, ಆದರೂ ಕಾಲಿನಿಂದ ರಥದ ಕಡೆ ನುಗ್ಗಿದ, ಕಾಲು ಕತ್ತರಿಸಿದರೆ ತೆವಳುತ್ತಾ ಬಂದ, ತಲೆ ಕತ್ತರಿಸಿದರೆ, ಆ ತಲೆ ವೇಗವಾಗಿಬಂದು ಪಾರ್ಥನ ಎದೆಗೆ ಬಡಿದು ಅವನನ್ನು ರಥದಿಂದ ಕೆಳಗೆ ಕೆಡಹಿತು.
ಅದ್ಬುತ
- ಯಜ್ಞದ ಕುದುರೆಯು ಪಾರ್ವತಿಯ ತಪೋಭೂಮಿಯಾಗಿದ್ದ ಕಾಡಿನಲ್ಲಿ ಅವಳ ಶಅಪದಿಂದ ಹೆಣ್ಣು ಕುದುರೆಯಾಗಿ ನಂತರ ಕೊಳದ ನೀರು ಕುಡಿದು ಬ್ರಹ್ಮಶಾಪದಿಂದ ಹುಲಿಯಾಗಿ ಕೃಷ್ಣನ ಕೃಪೆಯಿಂದ ಮೊದಲಿನಂತಾಯಿತು.
- ಹಯಮುತ್ತರಾಭಿಮುಖವಾಗಿ ಪಾರಿಪ್ಲವ ಧ
- ರೆಯೊಳೈದಿ ಪೆಣ್ಗುದುರೆಯಾಗಿ, ಪುಲಿಯಾಗಿ, ವಿ
- ಸ್ಮಯದಿಂದೆ ಪಾರ್ಥನಂ ಬೆದರಿಸಿ, ಮುರಾರಿಯ ಮಹಿಯಿಂದ ಮುನ್ನಿನಂತೆ||
- ನಿಯಮಿತ ಮಖಾಶ್ವಮಾದತ್ತು-- ||೭||ಸಂಧಿ ೧೫||
ಶಾಂತ
- ಬಕದಾಲ್ಬ್ಯ ಮುನಿಯು ಪ್ರಳಯಕಾಲದಲ್ಲಿ ಹರಿಯು ಆಲದೆಲೆಯ ಮೇಲೆ ಮಲಗಿದುದನ್ನು ಕಂಡುದನ್ನು ಅರ್ಜುನನಿಗೆ ಹೇಳಿದುದು:
- "ಅಂದು ಸಲಿಲದೊಳೊಳಾಳ್ದ ತನಗಾಲದೆಲೆಯಮೇ
- ಲೊಂದೊಂದು ಬಾರಿ ಬಾಲಕನಾಗಿ ಮೈದೊರಿ|
- ನಿಂದು ಮಾತಾಡಿಸದೆ ನೋಡದೆ ವಿಚಾರಿಸದೆ ದೂರ ದೂರದೊಳಿರ್ಪನ್||
- ಇಂದು ನಿಮ್ಮೈವರಂಕೂಡಿಕೊಂಡಿಲ್ಲಿಗೈ|
- ತಂದು ಕರುಣಿಸಿದನೀಹರಿ ಕೃಷ್ಣರೂಪದಿಂ|
- ಸಂದುದಿನ್ನೀತನೆ ಸದಾಶ್ರಯಂ ಮರೆವುಗುವೊಡೆನಗೆಂದು ಮುನಿನುಡಿದನು||೩೩|| ಸಂದಿ ೩೨||
- ವ್ಯಾಸರು ಅಶ್ವಮೇಧ ಯಾಗ ಮಾಡಲು ಹೇಳಿದ ನಂತರ ಕೃಷ್ಣ ಅಸ್ತಿನಾವತಿಗೆ ಭೇಟಿಕೊಟ್ಟಾಗ:
- ದಾಯಾದರಿಲ್ಲ ಮಾರ್ಮಲೆವ ಪರಮಂಡಲದ|
- ನಾಯಕರ ಸುಳಿವಿಲ್ಲ, ನಿನ್ನಾಳ್ಕೆಗೆಲ್ಲಿಯುಮ|
- ಪಾಯಮವನಿಯೊಳಿಲ್ಲಮಿನ್ನು ದಿಗ್ವಿಜಯಮಿಲ್ಲವಸರದ ಬೇಂಟೆಯಿಲ್ಲ||
- ವಾಯುನಂದನ ಧನಂಜಯರೊಳೆರವಿಲ್ಲ,ಮಾ|
- ದ್ರೇಯರೊಳ್ತಪ್ಪಿಲ್ಲ ಚತುರಂಗಕೆಡರಿಲ್ಲ|
- ರಾಯ, ನಿನಗೇನು ಮಾಡುವ ರಾಜಕಾರ್ಯಮೆಂದು ಮುರಧ್ವಂಸಿ ನಗುತ||೫೪||ಸಂಧಿ ೨||
[1]