ಸಸ್ಯಗಳ ಕುಲ From Wikipedia, the free encyclopedia
ಕ್ಲಿಯೋಮೀ ಕ್ಲಿಯೋಮೇಸೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಸಸ್ಯ. ಜೇಡರಹುಳುವಿನ ಆಕಾರದ ಹೂಬಿಡುವುದರಿಂದ ಕೆಲವೊಮ್ಮೆ ಜೇಡರ ಹೂ ಗಿಡ ಎಂದೂ ಕರೆಯಲಾಗುತ್ತದೆ[1][2].
ಇದರಲ್ಲಿ ಸುಮಾರು 140ಕ್ಕೂ ಹೆಚ್ಚು ಪ್ರಭೇದಗಳಿವೆ. ಭಾರತದಲ್ಲಿ ಸುಮಾರು 13 ಪ್ರಭೇದಗಳಿವೆ. ಕ್ಲಿ.ಐಕೊಸ್ಯಾಂಡ್ರ ಎಂಬುದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಉದ್ಯಾನ ಪ್ರಾಮುಖ್ಯವಿರುವ ಪ್ರಭೇದಗಳೂ ಇಲ್ಲದಿಲ್ಲ. ಇವುಗಳಲ್ಲಿ ಮುಖ್ಯವಾದವು ಕ್ಲಿಯೋಮೀ ಸ್ಟೈನೋಸ, ಕ್ಲಿ.ಸ್ಪೀಶಿಯೊಸಿಸ್ಸಿಮ ಮತ್ತು ಕ್ಲಿ.ಸೆರುಲೇಟ.
ಪೊದೆಯಂತೆ ತುಂಬಿಕೊಂಡು ಬೆಳೆದು, ರೆಂಬೆಗಳಿಂದ ಹೊರಚಾಚುವ ಬಿಳಿ, ಹಳದಿ ಇಲ್ಲವೆ ಊದಾ ಬಣ್ಣದ ಹೂಗಳನ್ನು ಬಿಡುವುದರಿಂದ ಈ ಪ್ರಭೇದಗಳನ್ನು ತೋಟಗಳಲ್ಲಿ ಮಡಿಗಳಲ್ಲೊ, ಪಸಲೆಗಳ ಅಂಚಿನಲ್ಲೊ ಅಂದಕ್ಕಾಗಿ ಬೆಳೆಸಲಾಗುತ್ತದೆ. ಎಲ್ಲ ಪ್ರಭೇದಗಳೂ ಸುಮಾರು 2'-3' ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಮೂಲಿಕೆ ಇಲ್ಲವೆ ಪೊದೆಸಸ್ಯಗಳು. ಎಲೆಗಳು ಸರಳ ಇಲ್ಲವೆ 3-7 ಕಿರುಪತ್ರಗಳಿರುವ ಸಂಯುಕ್ತ ಮಾದರಿಯವು. ಹೂಗಳು ಒಂಟಿಯಾಗಿಯೊ ಅಂತ್ಯಾರಂಭಿ ಹೂ ಗೊಂಚಲುಗಳಲ್ಲೊ ಹುಟ್ಟುತ್ತವೆ. ಪ್ರತಿ ಹೂವಿನಲ್ಲಿ ಬಿಡಿಬಿಡಿಯಾದ 4 ಪುಷ್ಪಪತ್ರಗಳು ಬಿಡಿಬಿಡಿಯಾದ 4 ದಳಗಳು, 6 ಕೇಸರಗಳು, 2 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥನದ ಅಂಡಾಶಯ ಇವೆ. ಅಂಡಾಶಯಕ್ಕೆ ಕೇಸರಗಳಿಗಿಂತಲೂ ಉದ್ದವಾದ ತೊಟ್ಟು ಇದೆ. ಈ ತೊಟ್ಟನ್ನು ಗೈನೋಫೋರ್ ಎನ್ನಲಾಗುತ್ತದೆ.
ಕ್ಲಿಯೋಮೀ ಸಸ್ಯದ ವಿವಿಧ ಪ್ರಭೇದಗಳನ್ನು ಬೀಜಗಳಿಂದ ಸುಲಭವಾಗಿ ವೃದ್ಧಿ ಮಾಡಬಹುದು. ಇವುಗಳ ಬೆಳೆವಣಿಗೆಗೆ ಫಲವತ್ತಾಗಿರುವ ಜೌಗಿಲ್ಲದ ಮಣ್ಣು ಮತ್ತು ಧಾರಾಳವಾಗಿ ಬಿಸಿಲು ಗಾಳಿಯಿರುವ ವಾತಾವರಣ ಯೋಗ್ಯವಾದದ್ದು. ಬೀಜಗಳನ್ನು ಬಿತ್ತುವುದಕ್ಕೆ ಮುಂಚೆ ಅವನ್ನು ಸುಮಾರು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಇದರಿಂದ ಬೀಜಗಳು ಸುಲಭವಾಗಿ ಮೊಳೆಯುತ್ತವೆ. ಒತ್ತಾಗಿರುವ ಸಸಿಗಳನ್ನು ಬಿತ್ತನೆ ಮಾಡಿದ ಮೂರು ವಾರಗಳಲ್ಲಿ ವಿರಳಮಾಡಿ, ಗಿಡಗಳ ತುದಿಯನ್ನು ಚಿವುಟಿಹಾಕಬೇಕು. ಬೀಜ ಬಿತ್ತಿದ ಸುಮಾರು ಮೂರು ತಿಂಗಳಿಗೆ ಗಿಡಗಳು ಹೂಬಿಡಲು ಆರಂಭಿಸುತ್ತವೆ.
ಕ್ಲಿಯೋಮೀ ಐಕೊಸ್ಯಾಂಡ್ರ ಪ್ರಭೇದಕ್ಕೆ ಔಷಧೀಯ ಗುಣಗಳಿವೆ. ಗಾಯ ಮತ್ತು ಹುಣ್ಣುಗಳಿಗೆ ಲೇಪಿಸಲು ಇದರ ಎಲೆಗಳನ್ನು ಬಳಸುತ್ತಾರೆ. ಎಲೆಗಳಿಗೆ ಪ್ರತ್ಯುದ್ರೇಕಕಾರಿ, ಸ್ವೇದಕಾರಿ ಮತ್ತು ಚರ್ಮದ ಮೇಲೆ ಗುಳ್ಳೆಗಳೆಬ್ಬಿಸುವ ಗುಣಗಳೂ ಇವೆ. ಈ ಗಿಡದ ಬೀಜ ಒಳ್ಳೆಯ ಜಂತುನಾಶಕವೆಂದು ಹೇಳಲಾಗಿದೆ. ಬಡವರು ಈ ಪ್ರಭೇದವನ್ನು ತರಕಾರಿಯಾಗಿ ಬಳಸುವುದುಂಟು (ಈ ಗಿಡಕ್ಕೆ ನಾಯಿಬೇಲ ಎಂಬ ಆಡುಮಾತಿನ ಹೆಸರಿದೆ). ಕ್ಲಿಯೋಮೀಯ ಇನ್ನೊಂದು ಪ್ರಭೇದವಾದ ಬ್ರಾಕಿಕಾರ್ಪವನ್ನು ಕಜ್ಜಿ, ಸಂಧಿವಾತ ಮತ್ತು ವಿವಿಧ ಬಗೆಯ ಊತಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಫೆಲಿನ ಪ್ರಭೇದ ರಕ್ತಪಿತ್ತರೋಗಕ್ಕೆ ಮದ್ದು ಎನಿಸಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.