ಕೇರಳದಲ್ಲಿನ ನಗರ From Wikipedia, the free encyclopedia
ಕೊಲ್ಲಂ ಭಾರತದ ಕೇರಳ ರಾಜ್ಯದಲ್ಲಿನ ಒಂದು ಪುರಾತನ ಬಂದರು ಮತ್ತು ನಗರವಾಗಿದೆ. ಇದು ಅರಬ್ಬೀ ಸಮುದ್ರದ ಮಲಬಾರ್ ತೀರದ ಮೇಲೆ ಸ್ಥಿತವಾಗಿದೆ.[1] ಇದು ರಾಜ್ಯದ ರಾಜಧಾನಿ ತಿರುವನಂತಪುರದಿಂದ 66 ಕಿಲೋಮೀಟರ್ ದೂರದಲ್ಲಿದೆ.[2] ಈ ನಗರವು ಅಷ್ಟಮುಡಿ ಸರೋವರ ಮತ್ತು ಕಲ್ಲಡ ನದಿಯ ದಡದಲ್ಲಿದೆ.[3][4][5]
ಅರಬ್ಬರು, ಫೀನಿಷಿಯನ್ನರು, ಚೈನೀಸರು, ಇಥಿಯೋಪಿಯನ್ನರು, ಸಿರಿಯನ್ನರು, ಯಹೂದಿಗಳು, ಚಲ್ದೀಯರು ಮತ್ತು ರೋಮನ್ನರ ಕಾಲದಿಂದಲೂ ಕೊಲ್ಲಂ ಪ್ರಬಲವಾದ ವಾಣಿಜ್ಯ ಖ್ಯಾತಿಯನ್ನು ಹೊಂದಿದೆ.[6] ಇದನ್ನು 14 ನೇ ಶತಮಾನದಲ್ಲಿ ಇಬ್ನ್ ಬಟುಟಾ ತನ್ನ ಇಪ್ಪತ್ನಾಲ್ಕು ವರ್ಷಗಳ ಪ್ರಯಾಣದ ಸಮಯದಲ್ಲಿ ತಾನು ನೋಡಿದ ಐದು ಭಾರತೀಯ ಬಂದರುಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾನೆ.[7] ಕೊಲ್ಲಮ್ನಲ್ಲಿ ಪೂರ್ಣ ಏಳಿಗೆಯಲ್ಲಿದ್ದ ಚೀನಾದ ವಸಾಹತು ಇತ್ತು. ವೆನೆಷಿಯನ್ ಪ್ರಯಾಣಿಕ ಮಾರ್ಕೊ ಪೊಲೊ, ಪಶ್ಚಿಮ ಕರಾವಳಿಯ ಕೊಲ್ಲಂ ಮತ್ತು ಇತರ ಪಟ್ಟಣಗಳಿಗೆ ಭೇಟಿ ನೀಡಿದನು.[8] ಕೊಲ್ಲಂನಲ್ಲಿ ಸೇಂಟ್ ಥಾಮಸ್ ಸ್ಥಾಪಿಸಿದ ಏಳು ಚರ್ಚ್ಗಳಲ್ಲಿ ಒಂದು ಮತ್ತು ಕೇರಳದಲ್ಲಿ ಮಲಿಕ್ ದೀನಾರ್ ಸ್ಥಾಪಿಸಿದ 10 ಹಳೆಯ ಮಸೀದಿಗಳಲ್ಲಿ ಒಂದಿದೆ.
ಕೊಲ್ಲಂ ದಕ್ಷಿಣ ಕೇರಳದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.
ಕೊಲ್ಲಂ ಎಂಬ ಹೆಸರು ಸಂಸ್ಕೃತ ಪದ ಕೊಲ್ಲಂನಿಂದ ಬಂದಿದೆ ಎಂದು ನಂಬಲಾಗಿದೆ, ಅಂದರೆ ಮೆಣಸು.
ಇಲ್ಲಿ 400 ವರ್ಷಗಳಷ್ಟು ಹಳೆಯದಾದ ಆನಂದವಲ್ಲೀಶ್ವರಂ ಶ್ರೀ ಮಹಾದೇವರ ದೇವಸ್ಥಾನವಿದ್ದು ಇದು ಪುರಾತನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ 400 ವರ್ಷಗಳಷ್ಟು ಹಳೆಯ ಗರ್ಭಗುಡಿಯನ್ನು ತೇಗದಲ್ಲಿ ನಯಗೊಳಿಸಲಾಗಿದೆ.[9] ಅಮ್ಮಚಿವೀಡು ಮುಹೂರ್ತಿ ದೇವಸ್ಥಾನವು ನಗರದ ಇನ್ನೊಂದು ಪ್ರಮುಖ ದೇವಸ್ಥಾನವಾಗಿದ್ದು ಇದನ್ನು ಸುಮಾರು 600 ವರ್ಷಗಳ ಹಿಂದೆ ಕೊಲ್ಲಂನ ಶ್ರೀಮಂತರಾದ ಅಮ್ಮಾಚಿ ವೀಡು ಕುಟುಂಬವು ಸ್ಥಾಪಿಸಿತು.[10][11] ಆಶ್ರಮಂ ಶ್ರೀಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ಹತ್ತು ದಿನಗಳ ಉತ್ಸವ ನಡೆಯುತ್ತದೆ.[12] ಕೊತ್ತನ್ಕುಲಂಗರ ದೇವಿ ದೇವಸ್ಥಾನವು ಕೇರಳದ ವಿಶ್ವಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಚಮಯವಿಲಕ್ಕು ಆಚರಣೆಗಾಗಿ ಪುರುಷರು ಹೆಂಗಸರ ಉಡುಪನ್ನು ಧರಿಸುತ್ತಾರೆ. ಇದು ಸಾಂಪ್ರದಾಯಿಕ ಹಬ್ಬಗಳ ಒಂದು ಭಾಗವಾಗಿದೆ. ಪುರುಷರು ದೊಡ್ಡ ದೀಪಗಳನ್ನು ಸಹ ಹೊರುತ್ತಾರೆ. ಇದಲ್ಲದೆ ಹತ್ತಿರ ಇರುವ ಇತರ ದೇವಾಲಯಗಳೆಂದರೆ ಕೊಟ್ಟರಕ್ಕರಾ ಶ್ರೀ ಮಹಾಗಣಪತಿ ಕ್ಷೇತ್ರ,[13] ಪುಟ್ಟಿಂಗಲ್ ದೇವಿ ದೇವಾಲಯ,[14] ಪಳಯಿದಂ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ, ಪೋರುವಳಿ ಪೇರುವಿರುತಿ ಮಲನಾಡ ದೇವಾಲಯ,[15] ಸಸ್ತಮ್ಕೊಟ್ಟ ಶ್ರೀ ಧರ್ಮ ಸಸ್ತ ದೇವಾಲಯ,[16] ಶಕ್ತಿಕುಲಂಗರ ಶ್ರೀ ಧರ್ಮ ಸಸ್ತ ದೇವಸ್ಥಾನ,[17] ತೃಕ್ಕಡವೂರು ಶ್ರೀ ಮಹಾದೇವ ದೇವಸ್ಥಾನ, ಕಟ್ಟಿಲ್ ಮೆಕ್ಕತಿಲ್ ದೇವಿ ದೇವಸ್ಥಾನ,[18] ಪದನಾಯರ್ಕುಲಂಗರ ಮಹಾದೇವ ದೇವಸ್ಥಾನ ಕರುಣಾಗಪಲ್ಲಿ,[19] ಅಷ್ಟಮುಡಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ.
ತಂಗಸ್ಸೇರಿಯಲ್ಲಿರುವ ಇನ್ಫಂಟ್ ಜೀಸಸ್ ಕ್ಯಾಥೆಡ್ರಲ್ ಅನ್ನು ಪೋರ್ಚುಗೀಸರು 1614 ರಲ್ಲಿ ಸ್ಥಾಪಿಸಿದರು. ನೀಂದಕರದಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ನಗರದ ಇನ್ನೊಂದು ಪ್ರಮುಖ ಚರ್ಚ್. ಮುನ್ರೋ ದ್ವೀಪದಲ್ಲಿ ಡಚ್ ಚರ್ಚ್ ಇದ್ದು ಇದನ್ನು 1878 ರಲ್ಲಿ ಡಚ್ಚರು ನಿರ್ಮಿಸಿದರು.[20] ಕಚ್ಚೇರಿಯಲ್ಲಿರುವ ಅವರ್ ಲೇಡಿ ಆಫ್ ವೆಲಂಕಣ್ಣಿ ಸ್ಥಾನವು ಕೊಲ್ಲಂ ನಗರದ ಇನ್ನೊಂದು ಪ್ರಮುಖ ಕ್ರಿಶ್ಚಿಯನ್ ಆರಾಧನಾ ಸ್ಥಳವಾಗಿದೆ. ಕಡವೂರಿನ ಸಂತ ಕಾಸಿಮಿರ್ ಚರ್ಚ್,[21] ಕವನಾಡಿನಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್, ತೊಪ್ಪುವಿನ ಸೇಂಟ್ ಸ್ಟೆಫೆನ್ಸ್ [22] ಮತ್ತು ಕಡಪ್ಪಕಡದಲ್ಲಿರುವ ಸೇಂಟ್ ಥಾಮಸ್ ಚರ್ಚ್ ಕೊಲ್ಲಂನ ಇತರ ಪ್ರಮುಖ ಕ್ರಿಶ್ಚಿಯನ್ ಚರ್ಚುಗಳು.[23][24]
ಮುಸ್ಲಿಮರು ಮತ್ತು ಮಸೀದಿಗಳು
ಕೊಟ್ಟುಕಾಡು ಜುಮಾ ಮಸೀದಿ, ಏಲಂಪಲ್ಲೂರ್ ಜುಮಾ-ಎ-ಮಸೀದಿ, ವಲಿಯಪಲ್ಲಿ, ಚಿನ್ನಕಾಡ ಜುಮಾ ಮಸೀದಿ, ಕೊಲ್ಲುರವಿಲಾದ ಜುಮಾ-ಅತ್ ಪಲ್ಲಿ, ತಟ್ಟಮಾಲಾದ ಜುಮಾ-ಅತ್ ಪಲ್ಲಿ ಮತ್ತು ಕೋಯಿವಿಲ ಜುಮಾ ಮಸೀದಿ ಕೊಲ್ಲಮ್ನ ಪ್ರಮುಖ ಮಸೀದಿಗಳಾಗಿವೆ.[25][26]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.