From Wikipedia, the free encyclopedia
ಕತ್ತೆಕಿರುಬವು ಕರ್ನಿವೋರಾದ ಫ಼ೆಲಿಫ಼ೋರ್ಮಿಯಾ ಉಪಗಣದ ಹಾಯೆನಡಿ ಕುಟುಂಬದ ಒಂದು ಪ್ರಾಣಿ. ಕೇವಲ ನಾಲ್ಕು ಪ್ರಜಾತಿಗಳಿರುವ ಇದು ಕರ್ನಿವೋರಾದಲ್ಲಿ ನಾಲ್ಕನೇ ಅತಿ ಚಿಕ್ಕ ಜೀವಶಾಸ್ತ್ರೀಯ ಕುಟುಂಬ, ಮತ್ತು ಮಮ್ಮಾಲಿಯಾ ವರ್ಗದಲ್ಲಿನ ಅತಿ ಚಿಕ್ಕ ಕುಟುಂಬಗಳ ಪೈಕಿ ಒಂದು. ಅವುಗಳ ಅಲ್ಪ ವೈವಿಧ್ಯತೆಯ ಹೊರತಾಗಿಯೂ, ಕತ್ತೆಕಿರುಬಗಳು ಅನನ್ಯವಾಗಿವೆ ಮತ್ತು ಬಹುತೇಕ ಆಫ್ರಿಕಾದ ಹಾಗು ಕೆಲವು ಏಷ್ಯಾದ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಘಟಕಗಳಾಗಿವೆ.
ಕತ್ತೆ ಕಿರುಬ : ಮಾಂಸಾಹಾರಿ ಸ್ತನಿಗಳ ಗುಂಪಿನ (ಕಾರ್ನಿವೊರ) ಹೈಯಿನಿಡೀ ಕುಟುಂಬಕ್ಕೆ ಸೇರಿದ ಕುರೂಪಿಯಾದ ವನ್ಯಪ್ರಾಣಿ. ಇದರ ವೈಜ್ಞಾನಿಕ ನಾಮ ಹೈಯೀನ.
ಇದರಲ್ಲಿ ಎರಡು ಪ್ರಭೇದಗಳಿವೆ. ಒಂದು ಹೈ.ಸ್ಟ್ರ ಯೇಟ (ಪಟ್ಟೆಗಳಿರುವ ಕತ್ತೆಕಿರುಬ). ಇದು ಭಾರತ, ಪರ್ಷಿಯ, ಏಷ್ಯಮೈನರ್ ಮತ್ತು ಉತ್ತರ ಹಾಗೂ ಪುರ್ವ ಆಫ್ರಿಕದ ಕಾಡುಗಳಲ್ಲಿ ಕಂಡುಬರುತ್ತದೆ. ಇನ್ನೊಂದು ಹೈ.ಬ್ರುನಿಯ (ಕಂದು ಕತ್ತೆಕಿರುಬ) ಎಂಬುದು. ಇದು ದಕ್ಷಿಣ ಆಫ್ರಿಕದ ನಿವಾಸಿ.
ನಾಯಿಗಳಲ್ಲಿರುವಂಥ ಹೆಜ್ಜೆ ಮತ್ತು ಕಾಲುಗಳು, ಬಹಳ ಬಲಿಷ್ಠವಾದ ಮತ್ತು ಉದ್ದವಾದ ಮುಂಗಾಲುಗಳು, ಮೋಟಾದ ಮತ್ತು ಒಂದಕ್ಕೊಂದು ತಾಕುವಂತಿರುವ ಹಿಂಗಾಲುಗಳು, ಚಿಕ್ಕದಾದ ಪೊದೆಯಂತಿರುವ ಬಾಲ. ಬಹುಬಲಿಷ್ಠವಾದ ದವಡೆಗಳು, ಹಿಂದಕ್ಕೆ ಸೆಳೆದುಕೊಳ್ಳಲಾಗದಂಥ ಉಗುರುಗಳು. ಇವು ಈ ಎರಡೂ ಬಗೆಯ ಕತ್ತೆಕಿರುಬಗಳ ಮುಖ್ಯಲಕ್ಷಣಗಳು.
ಭಾರತದಲ್ಲಿ ಕಾಣುವ ಕತ್ತೆಕಿರುಬ ಸುಮಾರು ತೋಳದ ಗಾತ್ರದ್ದು. ಬೂದು ಮಿಶ್ರಿತ ಕಂದುಬಣ್ಣದ ಇದರ ದೇಹದ ಮೇಲೆ ಅಸ್ಪಷ್ಟವಾದ ಉದ್ದುದ್ದ ಪಟ್ಟೆಗಳಿವೆ. ಕುತ್ತಿಗೆ ಮತ್ತು ಬೆನ್ನಿನ ಉದ್ದಕ್ಕೂ ಕೇಸರಗಳ ಸಾಲಿವೆ. ಇದರ ಕೂಗು ಬಲು ವಿಚಿತ್ರವಾದುದು. ಅಟ್ಟಹಾಸದಿಂದ ಕೇಕೆಹಾಕಿ ನಗುವಂತಿರುತ್ತದೆ, ನಿಶಾಚರಿಯಾದ ಇದು ಸಾಮಾನ್ಯವಾಗಿ ಒಂಟಿಯಾಗಿಯೇ ಜೀವಿಸುತ್ತದೆ. ತನ್ನ ಆಹಾರವನ್ನು ವಾಸನೆಯಿಂದ ಪತ್ತೆಹಚ್ಚುತ್ತದೆ.
ಬೇಟೆಯಾಡುವ ಪ್ರಾಣಿಯಲ್ಲದ್ದರಿಂದ ಇದರ ಆಹಾರದಲ್ಲಿ ವೈವಿಧ್ಯವಿಲ್ಲ. ಸತ್ತ ಪ್ರಾಣಿಗಳು ಇದರ ಮುಖ್ಯ ಆಹಾರ. ಹುಲಿ, ಚಿರತೆ ಮುಂತಾದ ಮಾಂಸಾಹಾರಿ ಪ್ರಾಣಿಗಳು ತಿಂದು ಮಿಗಿಸಿದುದು ಇದರ ಪಾಲಿಗೆ. ಕೆಲವೊಮ್ಮೆ ಕುರಿ, ಆಡು, ನಾಯಿ ಮುಂತಾದ ಸಾಕುಪ್ರಾಣಿಗಳನ್ನು ಕದ್ದೊಯ್ಯುವುದೂ ಉಂಟು. ಆದರೆ ಮನುಷ್ಯನನ್ನು ಕಂಡರೆ ಭಯಪಡುವ ಈ ಪ್ರಾಣಿ ಅವನು ವಾಸಿಸುವ ಸ್ಥಳಗಳಿಂದ ದೂರವೇ ಇರುತ್ತದೆ.
ಇವುಗಳ ಸಾಂಸಾರಿಕ ಜೀವನದ ಬಗ್ಗೆ ಹೆಚ್ಚು ತಿಳಿಯದು. ಹೆಣ್ಣು ಕತ್ತೆಕಿರುಬ ಒಂದು ಬಾರಿಗೆ 2-4 ಮರಿಗಳನ್ನು ಈಯುತ್ತದೆ. ತಾಯಿಯೇ ಮರಿಗಳನ್ನು ಹಾಲೂಣಿಸಿ ಸಾಕುವುದು ಸಾಮಾನ್ಯವಾದರೂ ಕೆಲವೊಮ್ಮೆ ಗಂಡು ಹೆಣ್ಣುಗಳೆರಡೂ ಮರಿಗಳಿಗೆ ಮೊಲೆಯೂಣಿಸುತ್ತವೆ ಎಂದು ಹೇಳಲಾಗುತ್ತದೆ.
ಕತ್ತೆಕಿರುಬಗಳನ್ನು ಪಳಗಿಸುವುದೂ ಉಂಟು. ಸಾಕಿದ ಪ್ರಾಣಿಗಳು ಸಾಧುವಾಗಿಯೂ ನಂಬಿಕೆಗೆ ಅರ್ಹವಾಗಿಯೂ ಇರುತ್ತವೆ.
* IUCN Conservation Union Hyaendiae Specialist Group Archived 2011-05-07 ವೇಬ್ಯಾಕ್ ಮೆಷಿನ್ ನಲ್ಲಿ.
Seamless Wikipedia browsing. On steroids.