From Wikipedia, the free encyclopedia
ಉರ್ವಶಿ- ಭಾರತೀಯ ವೇದಪುರಾಣ ಕಾವ್ಯಗಳಲ್ಲಿ ಕೋರೈಸುತ್ತಿರುವ, ರುದ್ರ ರಮಣೀಯ ವ್ಯಕ್ತಿತ್ವ ಹಾಗೂ ಚಾರಿತ್ರ್ಯವನ್ನುಳ್ಳ ಒಬ್ಬ ಅಪ್ಸರೆ. ಋಗ್ವೇದ ಸಂಹಿತದಲ್ಲಿ ಸಂವಾದರೂಪದಲ್ಲಿ ಮಂತ್ರಿತವಾಗಿರುವ ಉರ್ವಶೀ-ಪುರೂರವರ ಕಥೇ ಶತಪಥ ಬ್ರಾಹ್ಮಣ, ಋಜುರ್ವೇದಕಾರಕ, ಸದ್ಗುರು ಶಿಷ್ಯರ ಸರ್ವಾನುಕ್ರಮಣಿಯ ವ್ಯಾಖ್ಯಾನ, ವಾಯು, ವಿಷ್ಣು. ಮತ್ಸ್ಯಪುರಾಣಗಳು ಹಾಗು ಬೃಹದ್ದೇವತಾ, ಮಹಾಭಾರತ, ಆದಿಪರ್ವ, ಕಥಾಸರಿತ್ಸಾಗರಗಳಲ್ಲಿ ಬಗೆ ಬಗೆಯಾಗಿ ರೂಪುಗೊಂಡು ಕಾಳಿದಾಸನ ವಿಕ್ರಮೋರ್ವಶೀಯ ನಾಟಕದಲ್ಲಿ ವಿಪ್ರಲಂಭ ಶೃಂಗಾರದ ರಮ್ಯ ಕಥೆ ಮಾತ್ರವಾಗಿ ಉಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಮಹರ್ಷಿ ಅರವಿಂದರ ಖಂಡಕಾವ್ಯವೊಂದರಲ್ಲಿ ಈ ಕಥೆಯೇ ಸಾವಯವಪೂರ್ಣಶಿಲ್ಪವಾಗಿ, ಕೊಂಚ ಮಟ್ಟಿಗೆ ವೇದಕಥೆಯ ನಿಶಿತೋಜ್ವಲತೆಯನ್ನೂ ಕಾಳಿದಾಸ ನಾಟಕಕಥೆಯ ರಮ್ಯತೆಯನ್ನೂ ಮೈಗೂಡಿಸಿಕೊಂಡಿದೆ, ಎಷ್ಟೇ ಅಮತ್ರ್ಯವಾದುದಾದರೂ ಅಲಭ್ಯವಾದುದಾದರೂ ಉರ್ವಶಿಯ ಪ್ರಣಯಲಾಭ ಪುರೂರವನಿಗಾಗುತ್ತದೆ. ಆದರದಕ್ಕೆ ಆತ ಕೊಟ್ಟ ಬೆಲೆ ಅನಂತಪತನ-ಎಂಬುದು ಅರವಿಂದರ ದರ್ಶನ. ಕವಿವರ್ಯ ಠಾಕೂರರಿಗೆ ಉರ್ವಶಿ ಅನಂತ ಯೌವನವಾಗಿ ವಿಶ್ವದ ಅನಾದಿಯಾದ ಏಕೈಕ ಪ್ರೇಯಸಿಯಾಗಿ, ಸೃಷ್ಟಿಯ ಸೌಂದರ್ಯದ ಅಂತರಂಗವಾಗಿ ಮತ್ರ್ಯಮಾನವ ಹೃದಯದಲ್ಲಿ ನಾನಾ ಭಾವತರಂಗವೆಬ್ಬಿಸುವ ಪ್ರೇರಣೆಯಾಗಿ ಕಾಣುತ್ತಾಳೆ.[೧]
ಋಗ್ವೇದ ಸಂಹಿತದ 18 ಋಕ್ಗಳಲ್ಲಿ ಮಿಂಚಿರುವುದು ಉರ್ವಶೀ ಪುರೂರವರ ಸಮಾಗಮಾನಂತರದ ವಿಯೋಗಸಂಧಿಯ ಕಥೆ. ಪುರೂರವನಿಗೆ ಪ್ರಿಯಕರಳಾಗಿದ್ದ ಈ ಅಪ್ಸರೆ ತನ್ನ ಮಾವನಿಗೆ ಅನ್ನಪಾನಾದಿಗಳನ್ನು ಸಮಯಕ್ಕೆ ತಕ್ಕಂತೆ ಒದಗಿಸುತ್ತ ರಾತ್ರಿ ಹಗಲೆನ್ನದೆ ನಾಲ್ಕು ವರ್ಷಕಾಲ ಸಂಸಾರಮಾಡಿಕೊಂಡಿರುತ್ತಾಳೆ. ಪತಿಯನ್ನು ತನ್ನ ಬಸಿರಿನಲ್ಲಿ ಪುತ್ರರೂಪದಲ್ಲಿ ಹೊತ್ತಿರುತ್ತಾಳೆ. ಆದರೂ ಮತ್ರ್ಯನಿಗೆ ದೀರ್ಘಲಭ್ಯಳಾಗದ ಈ ಅಮೃತಾಸು ಕಾಮಿನಿ, ಸೂರ್ಯೋದಯ ನಂತರದಲ್ಲಿ ಕರಗುವ ಉಷೆಯಂತೆ, ಕೈ ಹಿಡಿತಕ್ಕೆ ಸಿಕ್ಕದ ಗಾಳಿಯಂತೆ ಪುರೂರವನಿಗೆ ದಕ್ಕದಾಗುತ್ತಾಳೆ ದ್ಯುಲೋಕದಿಂದ ಮಿಂಚಿನಂತೆರಗಿ ಬಂದು ಆ ದಿವ್ಯಲೋಕದ ಉದಕವನ್ನು ತಂದಿತ್ತು ತನ್ನನ್ನು ಅಗಲುತ್ತಿರುವ ಈ ವಿದುಷಿ ಅಪ್ಸರೆಯನ್ನು ಪುರೂರರವ ಬಗೆಬಗೆಯಾಗಿ ಬೇಡಿಕೊಳ್ಳುತ್ತಾನೆ; ಹಸಿದ ತೋಳಗಳಿಗೆ ತಾನು ಉಣಿಸಾಗುವುದಾಗಿಯೂ ಮೃತ್ಯುವಿನ ತೊಡೆಗೆ ತಲೆಯೊಡ್ಡುವುದಾಗಿಯೂ ಅಂಗಲಾಚುತ್ತಾನೆ. ಅಂತರಿಕ್ಷವನ್ನೆಲ್ಲ ತುಂಬುಬೆಳಕಿನಿಂದ ತುಂಬುವ ಆ ಅಬ್ಬೇವತೆ ಉರ್ವಶಿಯನ್ನು ಮಾನವಶ್ರೇಷ್ಠನಾದ (ವಸಿಷ್ಠ) ಪುರೂರವ ಮತ್ತೆ ಪಡೆಯುವ ಆಶಯ ತೋರಿ ಬೇಡುತ್ತಾನೆ. ಆದರೆ ದೃಢಮನಸ್ಕಳಾದ ಉರ್ವಶಿ ಆಗ ಘೋರೆಯಾಗಿ ಹೆಣ್ಣಿನ ಸ್ನೇಹ ಚಿರವಲ್ಲವೆಂದು ಆತನನ್ನು ಝಳಪಿಸುತ್ತಾಳೆ. ಹಾಗೂ ತಾನು ಮಾತ್ರ ಇನ್ನು ಮಾನವರಿಗೆ ಅಲಭ್ಯಳೆಂದೂ ಸ್ವರ್ಗದಲ್ಲಿ ಮಾತ್ರ ಪುರೂರವ ತನ್ನನ್ನು ಕೂಡುವನೆಂದೂ ಸ್ಪಷ್ಟಪಡಿಸುತ್ತಾಳೆ.
[೨]ಋಗ್ವೇದದ ಅನಂತರದ ಶತಪಥ ಬ್ರಾಹ್ಮಣ ಈ ವೇದಕಥೆಯ ಪೂರ್ವೋತ್ತರ ಸ್ವರೂಪಗಳನ್ನು ಕಲ್ಪಿಸುತ್ತದೆ. ಇಲ್ಲಿನ ಉರ್ವಶಿ ಪುರೂರವನನ್ನುಳಿದು ಹೋದ ಅನಂತರ ಅವನ ಗೋಳನ್ನು ಕೇಳಲಾರದೆ ಮನಕರಗಿ ಒಂದು ರಾತ್ರಿ ಮಾತ್ರ ಅವನನ್ನು ಕೂಡಿ ಗರ್ಭಿಣಿಯಾಗುತ್ತಾಳೆ. ಮಹಾಭಾರತ, ಬ್ರಹ್ಮಾಂಡ ಪುರಾಣಗಳಲ್ಲಿ ಬರುವ ಪುರೂರವ ಪರಾಕ್ರಮಿಯಾದರೂ ಸಾಧು ಸಂತರಿಗೆ ಹಿಂಸಕನಾಗಿದ್ದು ಶಕ್ತಿಹೀನನಾಗುತ್ತಾನೆ. ಆಮೇಲೆ ಗಂಧರ್ವಲೋಕದಿಂದ ಯಜ್ಞಾರ್ಥವಾಗಿ ಅಗ್ನಿಯನ್ನು ತಂದು ಪೂಜಿಸಿ ಉರ್ವಶಿಯನ್ನೊಲಿದು ಆಯುವ ಮೊದಲಾದ ಆರು ಮಕ್ಕಳನ್ನು ಪಡೆಯುತ್ತಾನೆ. ಚತುರ್ವರ್ಣದ ಎಲ್ಲರಿಂದಲೂ ಅತಿಯಾಗಿ ಕಂದಾಯವನ್ನು ವಸೂಲು ಮಾಡುತ್ತಿದ್ದುದರಿಂದ ಪುರೂರವ ದುರ್ಗತಿ ಹೊಂದಿದನೆಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹೇಳಿದೆ. ಈ ವೇದಕಥೆ ನಮ್ಮವರೇ ಆದ ಕವಿಗಳಿಗೆ ಪುರಾಣಕಾರರಿಗೆ ಬೇರೆಬೇರೆ. ಅನುಭವವನ್ನು ತಂದಂತೆ ಪಾಶ್ಚಾತ್ಯ ವಿದ್ವಾಂಸರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅರ್ಥವನ್ನು ನೀಡಿದೆ. ಉರ್ವಶಿ-ಪುರೂರವ ಎಂದರೆ ಮಿಂಚು ಗುಡುಗು ಎಂದು ಯಾಕರ ವ್ಯಾಖ್ಯೆ. ಉರ್ವಶಿ ಎಂದರೆ ಮಹಾಯಶಸ್ವಿನಿ, ಸುಂದರ ತೊಡೆಗಳಿಂದ ಸುಖಾಸ್ಪದೆ, ಮಹಾಕಾಮಿನಿ ಎಂಬ ಮೂರು ಬಗೆಯ ನಿರ್ವಚನವನ್ನು ಅವರೇ ನೀಡುತ್ತಾರೆ. ಅರಣಿಗಳಿಂದ ಯಜ್ಞಾಗ್ನಿ ಮಂಥನ ಮಾಡುವುದಕ್ಕೆ ಇವರು ಶತಪಥ ಬ್ರಾಹ್ಮಣದಲ್ಲಿ ಸಂಕೇತವಾಗುತ್ತಾರೆ. ಮಾನವ ಸಂಭೋಗಕ್ಕೂ ಈ ಉರ್ವಶೀ ಪುರೂರವ ಮಂಥನ (ಅಗ್ನಿ ಮಂಥನ) ಸಂಕೇತವಾಗುತ್ತದೆ (ಬೃಹದಾರಣ್ಯಕ ಉಪನಿಷತ್ತು). ಪಾಶ್ಚಾತ್ಯ ವೇದವಿದ್ವಾಂಸ ಮ್ಯಾಕ್ಸ್ಮುಲ್ಲರ್ ಅವರಿಗೆ ಉರ್ವಶೀ-ಪುರೂರವ ಕಥಾನಕ ಉಷೆ ಸೂರ್ಯರ ನಿತ್ಯ ಪ್ರಣಯದ ಯೋಗಾಯೋಗಕ್ಕೆ ಸಂಕೇತವಾಗಿದೆ. ಉರ್ವಶಿ ಪುರೂರವನನ್ನು ಪ್ರೀತಿಸುವುದೇ ಸೂರ್ಯೋದಯ. ಉಷೆಯೇ ಉರ್ವಶಿ; ಸೂರ್ಯ ಪುರೂರವ. ನಗ್ನ ಪುರೂರವನನ್ನು ಕಂಡು ಮರೆಯಾಗುವ ಉರ್ವಶಿಯಂತೆ ಸ್ಪಷ್ಟ ಸೂರ್ಯನನ್ನು ಕಂಡು ಉಷೆ ಕರಗುತ್ತಾಳೆ; ಮತ್ತೆ ಪುರೂರವ ಉರ್ವಶಿಯರ ಸಮಾಗಮ ಸಾಯಂಸಂಧ್ಯೆಯಲ್ಲೆ. ಮ್ಯಾಕ್ಸ್ಮುಲ್ಲರ್ ಅವರ ಈ ರಮ್ಯಕಲ್ಪನೆಯೆ ವಿಲ್ಸನ್ ಅವರದೂ ಆಗಿರುವಂತೆ ತೋರುತ್ತದೆ. ಆದರೆ ಕೀತ್ ಅವರಿಗೆ ಈ ಯಾವ ಅರ್ಥವೂ ಸ್ಫುರಿಸುವುದಿಲ್ಲ. ಡಿ.ಡಿ. ಕೋಸಾಂಬಿ ಅವರಾದರೊ ಇದರಲ್ಲಿ ಸಾಮಾಜಿಕ ಸ್ಥಿತ್ಯಂತರಗಳ ಸೂಚನೆಯನ್ನು ಕಾಣುತ್ತಾರೆ. ಮಾತೃಪ್ರಧಾನ ಸಮಾಜವನ್ನು ಸ್ಥಿತ್ಯಂತರಗಳ ಸೂಚನೆಯನ್ನು ಕಾಣುತ್ತಾರೆ. ಮಾತೃಪ್ರಧಾನ ಸಮಾಜವನ್ನು ಪಿತೃಪ್ರಧಾನ ವ್ಯವಸ್ಥೆ ಆಕ್ರಮಿಸಲಿದ್ದ ಸಂಕ್ರಮಣ ಕಾಲದಲ್ಲಿದ್ದವನೆ ಪುರೂರವ. ಪುರೂರವ ತನ್ನನ್ನು ಮತ್ತೆ ಕೂಡಬೇಕಾದರೆ ಪುನರ್ಜನ್ಮವೆತ್ತಿ ಗಂಧರ್ವನಾಗಿ ಬರಬೇಕೆಂದು ಚೊಚ್ಚಲತಾಯಿ ಉರ್ವಶಿ ಹೇಳುವುದನ್ನು ನೋಡಿದರೆ ಒಬ್ಬ ಮಗ ಹುಟ್ಟಿದ ಅನಂತರ ತಂದೆ ತನ್ನನ್ನು ತಾನು ಬಲಿಕೊಟ್ಟುಕೊಳ್ಳಬೇಕೆಂಬ ಸಾಮಾಜಿಕ ನಿಯಮ ಅಂದು ಇದ್ದಿರಬಹುದೆಂದು ಕೋಸಂಬಿಯವರ ಊಹೆ. ಅಲ್ಲದೆ ಅವರಿಗೆ ಋಗ್ವೇದದ ಉರ್ವಶೀ-ಪುರೂರವರ ಸಂವಾದ ಗಂಡಿನ ಬಲಿದಾನದ ಪಳೆಯುಳಿಕೆಯಾಗಿ ತೋರುತ್ತದೆ.
ಯಾರಿಗೆ ಹೇಗೆ ಕಂಡರೂ ಈ ಮಿಂಚಿನಂಥ ಉರ್ವಶೀ-ಪುರೂರವರ ಪ್ರಣಯಕಥೆ ಮಹಾಭಾರತದಲ್ಲಿ ಅದೇ ವಂಶದ ವೀರಪುತ್ರನಾದ ಅರ್ಜುನನನ್ನು ಇಂದ್ರೇಚ್ಚೆಯಂತೆ ಮೋಹಿಸಿ ಹತಾಶಳಾಗಿ ಶಪಿಸುವ ಗತಿ ಬರುತ್ತದೆ. (ಈ ಕಥೆ ಮಹಾಭಾರತದ ಸೂಕ್ತಂಕರ್ ಪರಿಷ್ಕøತ ಮುದ್ರಣದಲ್ಲಿಲ್ಲದಿದ್ದರೂ ಸಾಮಾನ್ಯ ಪ್ರತಿಯಲ್ಲಿ ಇದ್ದೇ ಇದೆ). ಪಂಪಕವಿಯಲ್ಲಿ ಅರ್ಜುನನಿಗೆ ಶಾಪ ಕೊಟ್ಟವಳು ಉರ್ವಶಿಯಲ್ಲ, ರಂಭೆಯೆಂಬೊಬ್ಬ ಅಪ್ಸರೆ, ತೆಲುಗಿನ ನನ್ನಯ್ಯ ಭಾರತದಲ್ಲಿ ಉರ್ವಶಿ ಅರ್ಜುನ ಪ್ರಸಂಗವೇನೋ ಸ್ವಲ್ಪ ವಿಸ್ತಾರವಾಗಿಯೇ ಬರುತ್ತದಾದರೂ ಅದು ಮಹೋಜ್ವಲ ರೂಪ ತಾಳುವುದು ಕುಮಾರವ್ಯಾಸ ಭಾರತದಲ್ಲಿ, ಅಲ್ಲಿ ಬರುವ ಕುಪಿತ ಉರ್ವಶಿ ಋಗ್ವೇದ ಸಂಹಿತದ ಅಪ್ಸರೆಯ ರುದ್ರಸ್ಮಿತವನ್ನೇ ಮೆರೆಯುತ್ತಾಳೆ. ಇಂದ್ರಕೀಲ ಪರ್ವತದಿಂದ ಅಮರಾವತಿಗೆ ಹೋಗಿ ಇಂದ್ರನ ಆತಿಥ್ಯದಲ್ಲಿದ್ದ ಅರ್ಜುನನ್ನು ಮೋಹಿಸಿ ತನ್ನಿಷ್ಟಾರ್ಥ ನೆರವೇರದಿರಲು ಈಕೆ ಆತನನ್ನು ನಪುಂಸಕನಾಗೆಂದು ಶಪಿಸುತ್ತಾಳೆ. ನಂಜುಂಡ ಕವಿ ತನ್ನ ಕುಮಾರರಾಮನನ್ನು ಅರ್ಜುನನ ಅವತಾರವೆಂದೂ ಉರ್ವಶಿಯನ್ನು ರತ್ನಾಜಿಯೆಂದು ಕಲ್ಪಿಸಿಕೊಂಡಿದ್ದಾನೆ.
ಋಗ್ವೇದದ ಉಷೋದಯದೊಡನೆ ಕಣ್ತೆರೆದು ಬಂದ ಈ ಅಪ್ಸರೆಯಾದರೂ ಯಾರ ಮಗಳು? ತಪೋನಿರತರಾಗಿದ್ದ ತಮ್ಮನ್ನು ಕೆದಕಲು ಬಂದ ಅಪ್ಸರಗಣಕ್ಕೆ ನಾಚಿಕೆ ಉಂಟುಮಾಡಲು ನಾರಾಯಣ ಋಷಿ ತನ್ನ ತೊಡೆಯನ್ನು ಕೆರೆದು ಸೃಷ್ಟಿಸಿದ ಅಪೂರ್ವಸುಂದರಿಯೆ ಈಕೆ. ಆದರೆ ರವೀಂದ್ರನಾಥ ಠಾಕೂರರು ಹೇಳುತ್ತಾರೆ-ಎಂದೂ ನೀನು ಮುಗುಳಾಗಿರಲಿಲ್ಲವೆ, ಬಾಲಕಿಯಾಗಿರಲಿಲ್ಲವೆ. ಅನಂತ ಯೌವನೆ?. . . . ತಾಯಿ ಅಲ್ಲ, ಕನ್ಯೆಯಲ್ಲ, ವಧುವಲ್ಲ ಸುಂದರಿ ಹೇ ರೂಪಸಿ, ಹೇ ನಂದನವಾಹಿನಿ-ಎಂದು (ಮಾಸ್ತಿಯವರ ಗ್ರಂಥದಿಂದ). ಈ ನಿತ್ಯ ಕನ್ಯೆ, ಚಿರತರುಣಿ ಕೂಡ ಅವರಿಗೊಮ್ಮೆ ಅಸ್ತಾಚಲವಾಹಿನಿಯಾಗಿ ಕಾಣುತ್ತಾಳೆ. (ಎಸ್.ಎನ್.ಎಸ್.ಎಚ್.)
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.