ಭಾಷಾ ಕುಟುಂಬ From Wikipedia, the free encyclopedia
ಇರಾನ್ ಮತ್ತು ಅದರ ಸೀಮಾವರ್ತಿ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಭಾಷೆಗಳು. ಇಂಡೋ-ಇರಾನೀ ಭಾಷಾಪರಿವಾರದ ಇರಾನೀ ಉಪಶಾಖೆಯಿಂದ ಅಥವಾ ಇಂಡೋ-ಯೂರೋಪಿಯನ್ ಭಾಷಾಪರಿವಾರದ ಆರ್ಯ ಶಾಖೆಯಿಂದ ಇವು ಕವಲೊಡೆದವು. ಭಾರತ ಮತ್ತು ಪಾಕಿಸ್ತಾನಗಳಲ್ಲಿ ಬಳಕೆಯಲ್ಲಿರುವ ಇಂಡೋ-ಆರ್ಯನ್ ಭಾಷೆಗಳೇ ಇರಾನೀ ಭಾಷೆಗಳಿಗೆ ತೀರ ಹತ್ತಿರದ ಸಂಬಂಧಿಗಳು.
ಇರಾನೀ ಭಾಷೆಗಳ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂಬ ಮೂರು ವಿಭಾಗಗಳಲ್ಲಿ ವರ್ಗೀಕರಿಸಬಹುದು. ಪ್ರಾಚೀನ ಇರಾನಿನಲ್ಲಿ (ಕ್ರಿ.ಪೂ.೧೦೦೦-೪೦೦) ಹಲವು ಸ್ಥಳೀಯ ರೂಪಗಳು ಅಥವಾ ಉಪಭಾಷೆಗಳಿದ್ದುವು. ಅವುಗಳಲ್ಲಿ ಎರಡರ ವಿಚಾರದಲ್ಲಿ ವಿವರಗಳು ದೊರೆತಿವೆ. ಕೆಲವು ಶಬ್ದರೂಪಗಳಿಂದ ಮೂರನೆಯ ಉಪಭಾಷೆಯೊಂದರ ಅಸ್ತಿತ್ವ ತಿಳಿದು ಬಂದಿದೆ. ಇದನ್ನು ಮೀಡೀಯದೇಶದ್ದೆಂದು ಕರೆಯಲಾಗಿದೆ. ಇದು ಮೂಲತಃ ಪಶ್ಚಿಮ ಇರಾನಿನಲ್ಲಿ ಬಳಕೆಯಲ್ಲಿತ್ತು. ನಮಗೆ ಗೊತ್ತಿರುವ ಎರಡು ಪ್ರಾಚೀನ ಇರಾನೀ ಭಾಷೆಗಳಲ್ಲಿ ಒಂದು ಪ್ರಾಚೀನ ಮತ್ತು ಆಧುನಿಕ ಪಾರ್ಸಿ ಭಾಷೆಗಳ ಮೂಲಭಾಷೆಯಾಗಿದೆ. ನೈಋತ್ಯ ಇರಾನಿನಲ್ಲಿ ಬಳಕೆಯಲ್ಲಿದ್ದ ಈ ಭಾಷೆ ಅಕಮೇನಿಯನ್ ಚಕ್ರವರ್ತಿಗಳ (ಕ್ರಿ. ಪೂ. ೫೫೮ರಿಂದ ೩೩೧ರ ವರೆಗೆ) ತಾಯ್ನುಡಿಯಾಗಿತ್ತು. ಅಕೇಮೆನಿಡೇವಂಶದ ಶಾಸನಗಳಿಂದಲೇ ಪ್ರಾಚೀನ ಪಾರ್ಸಿ ಭಾಷೆಯ ಸ್ವರೂಪ ನಮಗೆ ತಿಳಿದುಬಂದಿದೆ. ಈ ಶಾಸನಗಳು ಸರಳರೂಪದ ಕೋಣಾಕಾರದ ಅಕ್ಷರಗಳಲ್ಲಿ ಇವೆ. ಮತ್ತೊಂದು ಪ್ರಾಚೀನ ಇರಾನೀ ಭಾಷೆಯೆಂದರೆ ಅವೆಸ್ತ (ನೋಡಿ- ಅವೆಸ್ತ). ಜರತುಷ್ಟ್ರ ಧರ್ಮದ ಧಾರ್ಮಿಕ ಸಾಹಿತ್ಯದಿಂದ ಈ ಭಾಷೆಯ ಸ್ವರೂಪ ತಿಳಿದುಬಂದಿದೆ. ಭಾರತದಲ್ಲಿ ಕಾಣಬರುವ ಪಾರ್ಸಿ ಜನಾಂಗಕ್ಕೆ ಇಲ್ಲಿಯವರೇ ಮೂಲಪುರುಷರು, ಜರತುಷ್ಟ್ರನದು ಪ್ರಾಚೀನ ಇರಾನಿನ ಧರ್ಮವಾಗಿತ್ತು. ವೇದಕಾಲದ ಭಾರತೀಯರ ಧರ್ಮ ಈ ಧರ್ಮಕ್ಕೆ ಹತ್ತಿರದ ಸಂಬಂಧಿಯಾಗಿದ್ದ ಪ್ರಾಚೀನ ಆರ್ಯ ಧರ್ಮದ ಮೇಲೆ ಪ್ರಭಾವವನ್ನು ಬೀರಿತು. ಅವೆಸ್ತಭಾಷೆ ಮೀಡೀಯದ ಭಾಷೆಗೆ ಹತ್ತಿರದ ಸಂಬಂಧಿಯಾಗಿರುವ ಭಾಷೆ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ಅದು ಪೂರ್ವ ಅಥವಾ ಈಶಾನ್ಯ ಇರಾನ್ ಪ್ರದೇಶಕ್ಕೆ ಸೇರಿದ್ದ ಭಾಷೆ ಎಂಬುದು ಇತರರ ಅಭಿಪ್ರಾಯ.ಮಧ್ಯಕಾಲೀನ ಇರಾನಿನಲ್ಲಿ (ಕ್ರಿ. ಪೂ. ೪೦೦-ಕ್ರಿ. ಶ. ೮೦೦) ಪಹ್ಲವಿ, ಸೊಗ್ಡಿಯನ್ ಮತ್ತು ಶಕ ಭಾಷೆಗಳು ಸೇರಿವೆ. ಪ್ರಾಚೀನ ಪಾರ್ಸಿ ಭಾಷೆಯಿಂದ ಹುಟ್ಟಿರುವುದಾದರೂ ಪಹ್ಲವಿಯ ಮೇಲೆ ಇತರ ಉಪಭಾಷೆಗಳ ಮತ್ತು ಸಿಮಿಟಿಕ್ ಭಾಷೆಗಳ ಪ್ರಭಾವ ಬಿದ್ದಿರುವುದು ಕಂಡುಬರುತ್ತದೆ. ಇದು ಇರಾನಿನ ಸಸ್ಸೇನಿಯನ್ ರಾಜರ ಕಾಲದಲ್ಲಿ (ಕ್ರಿ. ಶ.೨೨೬ -೬೫೨) ಅಧಿಕೃತ ಭಾಷೆಯಾಗಿತ್ತು. ಅರಾಮೇಯಿಕ್ ಲಿಪಿಯಿಂದ ಹುಟ್ಟಿದ ಒಂದು ಲಿಪಿಯಲ್ಲಿ ಇದನ್ನು ಬರೆಯಲಾಗುತ್ತಿತ್ತು. ಸಿಮಿಟಿಕ್ ಪ್ರಭಾವಕ್ಕೆ ಒಳಗಾಗದಿದ್ದ ಪಹ್ಲವಿಯ ಒಂದು ರೂಪ ಪೂರ್ವ ಇರಾನಿನಲ್ಲಿ ಬಳಕೆಯಲ್ಲಿತ್ತು. ಇದೇ ಮುಂದೆ ಭಾರತಕ್ಕೆ ವಲಸೆಬಂದ ಜರತುಷ್ಟ್ರಾನುಯಾಯಿಗಳ ಭಾಷೆಯಾಯಿತು. ಇದನ್ನು ಪಾರ್ಸಿ (ಅಥವಾ ಪಜೆóಂಡ್) ಎಂದು ಕರೆಯುತ್ತಾರೆ.೨೦ನೆಯ ಶತಮಾನದಲ್ಲಿ ಬೆಳಕಿಗೆ ಬಂದ ಹಸ್ತಪ್ರತಿ ಅವಶೇಷಗಳಿಂದ ಸೊಗ್ಡಿಯನ್ ಮತ್ತು ಶಕ ಭಾಷೆಗಳ ವಿಚಾರ ತಿಳಿದುಬಂದಿದೆ.
ಆಧುನಿಕ ಇರಾನೀ ಭಾಷೆಗಳಲ್ಲಿ ಪಾರ್ಸಿ ಭಾಷೆಯೇ (ಅಥವಾ ಆಧುನಿಕ ಪಾರ್ಸಿಯೇ) ಅತ್ಯಂತ ಪ್ರಮುಖವಾದುದು. ಆನುವಂಶಿಕವಾದ ಪ್ರತ್ಯಯ ಸಂಬಂಧಿಗಳಾದ ಎಲ್ಲ ಕುರುಹುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿರುವ ದೃಷ್ಟಿಯಿಂದ ಬೇರಾವುದೇ ಇಂಡೋ-ಯೂರೋಪಿಯನ್ ಭಾಷೆಯೂ ಮುಟ್ಟದಿರುವಂಥ ಪರಿಷ್ಕøತಾವಸ್ಥೆಯನ್ನು (ಕೊಂಚಮಟ್ಟಿಗೆ ಇಂಗ್ಲಿಷ್ ಇದನ್ನು ಸಾಧಿಸಿದೆ) ತೋರುವ ಇದು ಅತ್ಯಂತ ಸಮೃದ್ಧವಾದ ಭಾಷೆ.ಕುರ್ದಿಶ್ (ಮತ್ತು ಅದರ ಉಪಭಾಷೆಗಳು) ಮಜóಂದ್ರಾನಿ (ಕ್ಯಾಸ್ಪಿಯನ್ ಪ್ರದೇಶದಲ್ಲಿ) ಓಸ್ಸೆಟಿಕ್ (ಪೂರ್ವಇರಾನ್ ಪ್ರದೇಶಕ್ಕೆ ಸೇರಿರುವುದಾದರೂ ಇಂದು ಕಕೇಸಿಯನ್ ವಲಯದಲ್ಲಿ ಬಳಕೆಯಲ್ಲಿದೆ), ಪಷ್ಟೊ (ಆಫ್ಘಾನಿಸ್ತಾನದಲ್ಲಿ ಬಳಕೆಯಲ್ಲಿದೆ.), ಬಲೋಚಿ (ಬಲೋಚಿಸ್ತಾನದಲ್ಲಿ ಬಳಕೆಯಲ್ಲಿದೆ), ಮತ್ತು ಘೆಲ್ ಛಾಹ್ (ಅಥವಾ ಪಾಮಿರ್ ಉಪಭಾಷೆಗಳು)- ಇವು ಇತರ ಆಧುನಿಕ ಇರಾನೀ ಭಾಷೆಗಳು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.