Remove ads
ಮಹಾರಾಷ್ಟ್ರದ ಪುಣೆಯ ಹತ್ತಿರ ಇರುವ ಧಾರ್ಮಿಕ ಕ್ಷೇತ್ರ From Wikipedia, the free encyclopedia
ಆಳಂದಿಯು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಪಟ್ಟಣವಾಗಿದೆ. ಈ ಪಟ್ಟಣವು ಧಾರ್ಮಿಕ ಕ್ಷೇತ್ರ ಮತ್ತು ೧೩ನೇ ಶತಮಾನದ ಮರಾಠಿ ಸಂತ ಜ್ಞಾನೇಶ್ವರರ ಸಮಾಧಿ ಸ್ಥಳವಾಗಿ ಪ್ರಸಿದ್ಧವಾಗಿದೆ.
ಆಳಂದಿ | |
---|---|
ಪಟ್ಟಣ | |
Coordinates: 18.677°N 73.897°E | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಜಿಲ್ಲೆ | ಪುಣೆ |
Government | |
• Type | ಪುರಸಭೆ |
• Body | ಭಾಜಪ |
Elevation | ೫೭೭ m (೧,೮೯೩ ft) |
Population (೨೦೧೧) | |
• Total | ೨೮೫೬೭ |
ಭಾಷೆಗಳು | |
• ಅಧಿಕೃತ | ಮರಾಠಿ |
Time zone | UTC+5:30 (ಐಎಸ್ಟಿ) |
ಪಿನ್ ಕೋಡ್ | |
Vehicle registration | MH 14 |
ಆಳಂದಿಗೆ ಉದ್ದವಾದ ಇತಿಹಾಸವಿದ್ದರೂ ೧೨೯೬ರಲ್ಲಿ ಸಂತ ಜ್ಞಾನೇಶ್ವರರು ಆಗ ಇದ್ದ ಸಿದ್ಧೇಶವರ ದೇವಸ್ಥಾನ ಆವರಣದಲ್ಲಿ ಸಮಾಧಿ ಆದಮೇಲೆ ಪ್ರಾಮುಖ್ಯತೆ ಪಡೆಯಿತು.[೧][೨][೩] ಸುಮಾರು ೧೫೮೦-೧೬೦೦ರಲ್ಲಿ ಸಮಾಧಿಯ ಮೇಲೆ ಅಂಬೇಡ್ಕರ್ ದೇಶಪಾಂಡೆ ಒಂದು ದೇವಾಲಯವನ್ನು ಕಟ್ಟಿದರು. ಮರಾಠಾ ಸಾಮ್ರಾಜ್ಯದ ಹೊತ್ತಿನಲ್ಲಿ ದೇವಾಲಯವನ್ನು ವಿಸ್ತರಿಸಲಾಯಿತು.[೪][೫] ೧೭೭೮ರಲ್ಲಿ ಪೇಶ್ವಾರಿಂದ ಆಳಂದಿಯನ್ನು ಮರಾಠಾ ಸಾಮ್ರಾಜ್ಯದ ಮುತ್ಸದ್ದಿಯಾದ ಮಹದ್ಜಿ ಶಿಂಧೆ ಅವರಿಗೆ ವಹಿಸಿಕೊಡಲಾಯಿತು. ಇದಾದ ಎರಡು ದಶಕಗಳ ಕಾಲ ಶಿಂಧೆ ಕುಟುಂಬದ ಹೊಣೆಯಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಯಿತು.[೬]
೧೮೨೦ರ ದಶಕದಲ್ಲಿ ಗ್ವಾಲಿಯರ್ನ ಶಿಂಧ್ಯಾರ ಆಸ್ಥಾನಿಕರಾದ ಹೈಬತ್ರಾವ್ಬುವ ಅರ್ಫಾಳ್ಕರ್ ಅವರು, ಜ್ಞಾನೇಶ್ವರರ ಪಾದುಕೆಯನ್ನು ಪಲ್ಲಕ್ಕಿ ಉತ್ಸವದಲ್ಲಿ ಪಂಢರಪುರಕ್ಕೆ ಕೊಂಡೊಯ್ಯುವ ಸಂಪ್ರದಾಯವನ್ನು ಆರಂಭಿಸಿದರು. ಇದನ್ನು ಪಂಢರಪುರ ವಾರಿ ಎಂದು ಕರೆಯುತ್ತಾರೆ. ಸ್ವ-ಇಚ್ಛೆಯಂತೆ ಹೈಬತ್ರಾವ್ಬುವ ಅವರನ್ನು ದೇವಾಲಯದ ಆವರಣದ ಮೊದಲ ಮೆಟ್ಟಿಲಿನ ಕೆಳಗೆ ಸಮಾಧಿ ಮಾಡಲಾಯಿತು.[೧]
ಸಣ್ಣ ಊರಾಗಿದ್ದರೂ ಬ್ರಿಟೀಷರ ಕಾಲದಲ್ಲಿ ಪುರಸಭೆಯಾಗಿ ಮಾಡಲಾಯಿತು. ೧೯ನೇ ಶತಮಾನದ ಕೊನೆಯಲ್ಲಿ ವರ್ಷಕ್ಕೆ ಸುಮಾರು ೫೦,೦೦೦ ಸಾವಿರದಷ್ಟು ಯಾತ್ರಿಕರು ಆಳಂದಿಗೆ ಬರುತ್ತಿದ್ದರು. ಇವರಿಂದ ಕರವನ್ನು ಸಂಗ್ರಹಿಸಿ ಪುರಸಭೆಯ ಆಡಳಿತ ನಡೆಸಲಾಗುತ್ತಿತ್ತು.[೭]
ಆಳಂದಿಯು (18°40′37.42″N 73°53′47.76″E[೮]) ಇಂದ್ರಾಯಣಿ ನದಿಯ ದಡದಲ್ಲಿದೆ. ಇದು ಪುಣೆ ಜಿಲ್ಲೆಯ ಖೇಡ್ ತಾಲ್ಲೂಕಿನಿಂದ ೧೮.೮ ಕಿ.ಮಿ ದೂರದಲ್ಲಿದ್ದು, ಪುಣೆ ಮಹಾನಗರದ ಉತ್ತರ ತುದಿ ಭಾಗದಲ್ಲಿದೆ. ಆಳಂದಿಯು ಸರಾಸರಿ ೫೭೭ ಮಿ (೧,೮೯೩ ಅಡಿ) ಎತ್ತರದಲ್ಲಿದೆ.
೨೦೧೧ರಲ್ಲಿ ಆಳಂದಿಯ ಜನಸಂಖ್ಯೆಯು ೨೮,೫೬೭ ಆಗಿತ್ತು. ೫೬% ಪುರುಷರು ಮತ್ತು ೪೪% ಮಹಿಳೆಯರು ಆಗಿದ್ದರು.[೯] ಮರಾಠಿಯು ಇಲ್ಲಿನ ಪ್ರಧಾನ ಭಾಷೆ. ಆಳಂದಿಯ ಸಾಕ್ಷರತಾ ಪ್ರಮಾಣವು ೭೩% ಆಗಿದೆ (ಪುರುಷರಲ್ಲಿ ೮೨%, ಮಹಿಳೆಯರಲ್ಲಿ ೬೮%). ಇದು ರಾಷ್ಟ್ರೀಯ ಸರಾಸರಿಯಾದ ೭೪.೦೪% ಕ್ಕಿಂತ ಕಡಿಮೆಯಾಗಿದೆ. ಶೇಕಡ ೧೩% ಜನಸಂಖ್ಯೆಯು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹತ್ತಿತ ನಂಟು ಹೊಂದಿರುವ ಮರಾಠ ಕುರ್ಹಾಡೆ-ಪಾಟಿಲ್ ಮತ್ತು ಘುಡಾರೆ-ಪಾಟಿಲ್ ವರ್ಗದವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ.
ಸಾಂಪ್ರದಾಯಿಕವಾಗಿ ಹಿಂದೂ ವಿಧುವೆಯರು ಧಾರ್ಮಿಕ ಕ್ಷೇತ್ರಗಳಾದ ಪಂಢರಪುರ ಮತ್ತು ಆಳಂದಿಯಲ್ಲಿ ನೆಲೆಸಲು ಬರುತ್ತಾರೆ.[೧೦]
ಆಳಂದಿಯಲ್ಲಿ ಒಂದು ನಗರಾಧ್ಯಕ್ಷರು ನೇತೃತ್ವವಹಿಸುವ ಪುರಸಭೆ ಇದೆ. ೨೦೧೬ರ ಪುರಸಭೆ ಚುನಾವಣೆಯಲ್ಲಿ ಶಿವಸೇನೆಯನ್ನು ಸೋಲಿಸಿ ಭಾಜಪದ ಅಭ್ಯರ್ಥಿ ವೈಜಯಂತಿ ಉಮೇರ್ಗೆಕರ್-ಕಾಂಬ್ಳೆ ಅವರು ನಗರಾಧ್ಯಕ್ಷರಾಗಿ ಆಯ್ಕೆಯಾದರು. ೧೮ ಸದಸ್ಯರ ಪುರಸಭೆಯಲ್ಲಿ ಭಾಜಪ ಬಹುಮತವನ್ನು ಹೊಂದಿದೆ.[೧೧]
ಆಳಂದಿಯು ಪುಣೆ ಜಿಲ್ಲೆಯ ಖೇಡ್ ತಾಲ್ಲೂಕಿನಲ್ಲಿ ಬರುತ್ತದೆ. ಮಹಾರಾಷ್ಟ್ರ ವಿಧಾನಸಭೆಯ ಖೇಡ್ ಆಳಂದಿ ಕ್ಷೇತ್ರ ಮತ್ತು ಲೋಕಸಭೆಯಲ್ಲಿ ಶಿರೂರು ಕ್ಷೇತ್ರದ ಅಡಿ ಬರುತ್ತದೆ. ಪ್ರಸ್ತುತ ಎನ್ಸಿಪಿಯ ಡಾ. ಅಮೋಲ್ ಖೋಲ್ಕೆ ಅವರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.[೧೨]
ಆಳಂದಿಯು ಸಂತ ಜ್ಞಾನೇಶ್ವರರ ಸಮಾಧಿ ಸ್ಥಳವಾಗಿದ್ದು, ಮರಾಠಿ ಜನರಿಗೆ ತೀರ್ಥ ಕ್ಷೇತ್ರವಾಗಿದೆ. ಜ್ಞಾನೇಶ್ವರರ ಭಕ್ತರು ತಮ್ಮ ಗುರುಗಳು ಇನ್ನೂ ಬದುಕಿರುವುದಾಗಿ ನಂಬುತ್ತಾರೆ.[೧೩][೧೪][೧೫] ಜ್ಞಾನೇಶ್ವರರ ಸಮಾಧಿಯಮೇಲೆ ಒಂದು ದೇವಾಲಯವನ್ನು ಕಟ್ಟಲಾಗಿದ್ದು, ಯಾತ್ರಾರ್ಥಿಗಳು, ಮುಖ್ಯವಾಗಿ ವಾರ್ಕರಿ ಪಂಥಕ್ಕೆ ಸೇರಿದವರು ತೀರ್ಥಯಾತ್ರೆಗೆ ಬರುತ್ತಾರೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಏಕಾದಶಿಯಂದು ಸುಮಾರು ೬೦-೭೦ ಸಾವಿರ ಭಕ್ತರು ಆಳಂದಿಗೆ ಬರುತ್ತಾರೆ.[೧೬]
ಪ್ರತಿ ವರ್ಷ ಪಂಢರಪುರ ವಾರಿ ಎಂಬ ೨೧ ದಿನಗಳ ಪಲ್ಲಕ್ಕಿ ಉತ್ಸವದಲ್ಲಿ ಸಂತ ಜ್ಞಾನೇಶ್ವರರ ಪಾದುಕೆಗಳನ್ನು ಆಳಂದಿಯಿಂದ ಪಂಢರಪುರಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಪಂಢರಪುರಕ್ಕೆ ಆಷಾಢ ಏಕಾದಶಿಯ ದಿನ ಬಂದು ತಲುಪುತ್ತದೆ (ಜೂನ್ - ಜುಲೈ ಸಮಯದಲ್ಲಿ). ೧೫೦ ಕಿ.ಮಿ ಉದ್ದ ಸಾಗುವ ಪಲ್ಲಕ್ಕಿ ಉತ್ಸವವನ್ನು ನೋಡಲು ಲಕ್ಷಾಂತರ ವಾರ್ಕರಿ ಭಕ್ತರು ಸೇರುತ್ತಾರೆ.[೧೭][೧೮][೧೯]
ಆಳಂದಿಯ ಅತಿದೊಡ್ಡ ಹಬ್ಬವು ಪ್ರತಿ ವರ್ಷದ ಕಾರ್ತಿಕ ವೈದ್ಯ ಏಕಾದಶಿಯಂದು ನಡೆಯುತ್ತದೆ. ಇದು ಸಂತ ಜ್ಞಾನೇಶ್ವರರು ಸಮಾಧಿಯಾದ ದಿನಕ್ಕೆ ಹತ್ತಿರವಾಗಿದೆ. ಈ ಹಬ್ಬ ಅಥವಾ ಯಾತ್ರೆಗೋಸ್ಕರ ಬಹಳಷ್ಟು ಜನರು ಬರುವುದರಿಂದ, ಸ್ಥಳೀಯರಿಗೆ ಅರ್ಥಿಕ ಮಹತ್ವ ಹೊಂದಿದೆ.[೨೦][೨೧]
ಇಂದ್ರಾಯಣಿ ನದಿಯಲ್ಲಿ ಸ್ನಾನ ಮಾಡುವುದು ಭಕ್ತರಿಗೆ ವಿಶೇಷವಾಗಿದೆ. ಆದರೆ ನದಿಯ ಮೇಲ್ಪಾತ್ರದ ಪ್ರದೇಶಗಳಿಂದ ಕೊಳಚೆ ನೀರನ್ನು ನದಿಗೆ ಹರಿಬಿಡುತ್ತಿರುವುದರಿಂದ ಮಲಿನವಾಗಿದೆ.[೨೨]
ಧಾರ್ಮಿಕ ಕ್ಷೇತ್ರವಾದ್ದರಿಂದ ಸಾಂಪ್ರದಾಯಿಕವಾಗಿ ಆಳಂದಿಯುದ್ದದ ಇಂದ್ರಾಯಣಿ ನದಿಯನ್ನು ಸಂರಕ್ಷಿತ ಪ್ರದೇಶವಾಗಿದ್ದು, ಮೀನುಗಾರಿಕೆ ನಡೆಯುವುದಿಲ್ಲ. ಇದರಿಂದಾಗಿ ಡೆಕ್ಕನ್ ಮಹ್ಸೀರ್ ಮುಂತಾದ ಮೀನುಗಳಿಗೆ ಆಶ್ರಯ ತಾಣವಾಗಿದೆ.[೨೩]
ಭಕ್ತಾದಿಗಳು ಆಳಂದಿಗೆ ಭೇಟಿ ನೀಡಿದಾಗ ಊರಿನ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ.
ಆಳಂದಿ ಮತ್ತು ಸುತ್ತಮುತ್ತ ಇರುವ ಧಾರ್ಮಿಕ ಮಹತ್ವವುಳ್ಳ ಕ್ಷೇತ್ರಗಳು -
ಪಟ್ಟಣದಲ್ಲಿ ಸುಮಾರು ಧರ್ಮಶಾಲೆಗಳಿದ್ದು, ಪದ್ಮಶಾಲಿ, ಮಾಹೇಶ್ವರಿ ಸೇರಿದಂತೆ ಆಯಾ ಸಮುದಾಯದವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತದೆ.[೨೭][೨೮] ಕೆಲ ಧರ್ಮಶಾಲೆಗಳಲ್ಲಿ ವಿವಿಧ ದೇವತೆ ಮತ್ತು ವಾರ್ಕರಿ ಸಂತರಿಗೆ ಗುಡಿಗಳಿವೆ.[೨೯]
ಆಳಂದಿಯು ಧಾರ್ಮಿಕ ಕ್ಷೇತ್ರವಾದ್ದರಿಂದ ಆರ್ಥಿಕತೆಯು ಮುಖ್ಯವಾಗಿ ಅದರ ಮೇಲೆ ಅವಲಂಬಿತವಾಗಿದೆ. ವರ್ಷಕ್ಕೆರಡು ಬಾರಿ ದೊಡ್ಡ ಪ್ರಮಾಣದಲ್ಲಿ ಹಬ್ಬವಿದ್ದರೂ, ವರ್ಷಾದ್ಯಂತ ಇಡೀ ಮಹಾರಾಷ್ಟ್ರದಿಂದ ಯಾತ್ರಾರ್ಥಿಗಳು ಆಳಂದಿಗೆ ಭೇಟಿ ನೀಡುತ್ತಾರೆ. ಯಾತ್ರಿಕರ ಅಗತ್ಯಗಳನ್ನು ಬ್ರಾಹ್ಮಣರು ಪೂರೈಸುತ್ತಾರೆ. ಮುಖ್ಯ ದೇವಾಲಯದ ಸಂಕೀರ್ಣದ ಹೊರಗೆ ಮಾರಾಟಗಾರರು ಧಾರ್ಮಿಕ ಸಾಮಗ್ರಿ ಮತ್ತು ಪುಸ್ತಕಗಳನ್ನು, ಸಮಾಧಿಯಲ್ಲಿ ಪೂಜಿಸಲು ಹೂಮಾಲೆ ಮತ್ತು ಅರಿಶಿನ ಇತ್ಯಾದಿಗಳನ್ನು ಮಾರುತ್ತಾರೆ. ಪದ್ಮಶಾಲಿಯಂತಹ ಮರಾಠಿ ಹಿಂದೂ ಜಾತಿಯವರು ಧರ್ಮಶಾಲೆ (ಯಾತ್ರಿಕರ ವಿಶ್ರಾಂತಿ ಗೃಹಗಳು) ಕಟ್ಟಿದ್ದು, ತಮ್ಮ ಜಾತಿಯ ಯಾತ್ರಾರ್ಥಿಗಳಿಗೆ ವಸತಿ ಒದಗಿಸುತ್ತದೆ.[೩೦] ದೇವಾಲಯದ ಎರಡು ಪ್ರಮುಖ ಉತ್ಸವಗಳಲ್ಲಿ ಒಂದು ಜ್ಯೇಷ್ಠ ಮಾಸದಲ್ಲಿ (ಜೂನ್ ಕೊನೆ - ಜುಲೈ ಆರಂಭದಲ್ಲಿ), ಜ್ಞಾನೇಶ್ವರರ ಪಲ್ಲಕ್ಕಿಯು ಪಂಢರಪುರ ವಾರಿಗೆ ತೆರಳಿದಾಗ, ಹಾಗೂ ಇನ್ನೊಂದು ಕಾರ್ತಿಕ ಮಾಸದ ದ್ವಿತೀಯಾರ್ಧದಲ್ಲಿ (ನವೆಂಬರ್) ನಡೆಯುತ್ತದೆ. ಈ ಉತ್ಸವಗಳ ವೇಳೆಯಲ್ಲಿ ಯಾತ್ರಾರ್ಥಿಗಳಿಗೆ ವಸತಿ, ಅಡುಗೆ ಮತ್ತು ಇತರ ಸೇವೆಗಳನ್ನು ನೀಡುವ ಮೂಲಕ ಸ್ಥಳೀಯರು ಸಾಕಷ್ಟು ಆದಾಯವನ್ನು ಗಳಿಸುತ್ತಾರೆ. ಆದರೆ ಸಾಕಷ್ಟು ಸ್ಥಳೀಯರಿಗೆ ಈ ಉತ್ಸವಗಳ ಬಗ್ಗೆ ನಕಾರಾತ್ಮಕ ಭಾವನೆಯೂ ಇದೆ.[೩೧] ಸಾರ್ವಜನಿಕ ಆರೋಗ್ಯ ಕಾಪಾಡಲು ಪುರಸಭೆಯು ಯಾತ್ರಾ ಮತ್ತು ಸರಕು ಕರವನ್ನು ಪಡೆಯುತ್ತದೆ. ಆಳಂದಿಯು ಧಾರ್ಮಿಕ ಕ್ಷೇತ್ರವಾದ್ದರಿಂದ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ೧೯೯೧ರ ಪುಣೆ ಮಹಾನಗರ ವಲಯದ ವರದಿಯಲ್ಲಿ ಇದೆ.[೩೨]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.