From Wikipedia, the free encyclopedia
ಸುಶ್ರುತ ಸಂಹಿತಾ ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆ ಮೇಲಿನ ಒಂದು ಪ್ರಾಚೀನ ಸಂಸ್ಕೃತ ಪಠ್ಯ ಮತ್ತು ಈ ವಿಷಯದ ಮೇಲೆ ಪ್ರಾಚೀನ ವಿಶ್ವದಿಂದ ಉಳಿದುಕೊಂಡಿರುವ ಅಂತಹ ಅತ್ಯಂತ ಪ್ರಮುಖ ಪ್ರಕರಣ ಗ್ರಂಥಗಳ ಪೈಕಿ ಒಂದಾಗಿದೆ. ಚರಕ ಸಂಹಿತಾ, ಭೇಳ ಸಂಹಿತಾ ಮತ್ತು ಬೋವರ್ ಹಸ್ತಪ್ರತಿಯ ವೈದ್ಯಕೀಯ ಭಾಗಗಳ ಜೊತೆಗೆ, ಸುಶ್ರುತ ಸಂಹಿತಾ ಆಯುರ್ವೇದದ ಮೂಲಭೂತ ಪಠ್ಯಗಳಲ್ಲಿ ಒಂದು.[1][2] ಇದು ಪ್ರಾಚೀನ ಭಾರತದಿಂದ ಉಳಿದುಕೊಂಡಿರುವ ವೈದ್ಯಕೀಯ ವೃತ್ತಿಯ ಮೇಲಿನ ಎರಡು ಮೂಲಭೂತ ಹಿಂದೂ ಪಠ್ಯಗಳಲ್ಲಿ ಒಂದು.[3]
ಇದು ಶಸ್ತ್ರಚಿಕಿತ್ಸಾ ತರಬೇತಿ, ಉಪಕರಣಗಳು ಮತ್ತು ವಿಧಾನಗಳನ್ನು ವಿವರಿಸುವ ಐತಿಹಾಸಿಕವಾಗಿ ಅನನ್ಯ ಅಧ್ಯಾಯಗಳನ್ನು ಒಳಗೊಂಡಿರುವ ಕಾರಣ ಸುಶ್ರುತ ಸಂಹಿತಾ ಐತಿಹಾಸಿಕ ಮಹತ್ವದ್ದಾಗಿದೆ.
ಒಂದು ಪ್ರಾಚೀನ ವೈದಿಕ ಪಠ್ಯವಾದ ಶತಪಥ ಬ್ರಾಹ್ಮಣದ ಲೇಖಕನಿಗೆ ಸುಶ್ರುತ ಸಿದ್ಧಾಂತಗಳ ಬಗ್ಗೆ ತಿಳಿದಿತ್ತು, ಹಾಗಾಗಿ ಆ ಸುಶ್ರುತ ಸಿದ್ಧಾಂತಗಳ ಕಾಲವನ್ನು ಶತಪಥ ಬ್ರಾಹ್ಮಣದ ರಚನಾ ಕಾಲವನ್ನು ಆಧರಿಸಿ ನಿರ್ಧರಿಸಬೇಕು. ಒಬ್ಬ ವಿದ್ವಾಂಸನ ಪ್ರಕಾರ, ಐದು ಪುಸ್ತಕಗಳು ಮತ್ತು ೧೨೦ ಅಧ್ಯಾಯಗಳ ಸುಶ್ರುತ ಸಂಹಿತಾದ ಮೂಲ ಪದರವನ್ನು ಕ್ರಿ.ಪೂ. ೧ನೇ ಸಹಸ್ರಮಾನದಲ್ಲಿ ರಚಿಸಲಾಯಿತು, ಮತ್ತು ಕ್ರಿ.ಶ. ೧ನೇ ಸಹಸ್ರಮಾನದಲ್ಲಿ ಉತ್ತರತಂತ್ರದೊಂದಿಗೆ ಇದನ್ನು ಪರಿಷ್ಕರಿಸಿ ವಿಸ್ತರಿಸಲಾಯಿತು. ಇದರಿಂದ ಪಠ್ಯದ ಗಾತ್ರ ಆರು ಪುಸ್ತಕಗಳು ಮತ್ತು ೧೮೪ ಅಧ್ಯಾಯಗಳಾಯಿತು. ಇನ್ನೊಬ್ಬ ವಿದ್ವಾಂಸನ ಪ್ರಕಾರ, ಸುಶ್ರುತ ಸಂಹಿತಾ ಹಲವಾರು ಐತಿಹಾಸಿಕ ಪದರಗಳನ್ನು ಒಳಗೊಂಡಿದೆ ಮತ್ತು ಇದರ ರಚನೆ ಕ್ರಿಸ್ತ ಪೂರ್ವದ ಕೊನೆಯ ಶತಮಾನಗಳಲ್ಲಿ ಆರಂಭವಾಗಿರಬಹುದು ಮತ್ತು ಮತ್ತೊಬ್ಬ ಲೇಖಕನಿಂದ ಪರಿಷ್ಕರಣೆಗೆ ಒಳಪಟ್ಟು ಕೊನೆಯ ಸುದೀರ್ಘ ಅಧ್ಯಾಯವಾದ ಉತ್ತರತಂತ್ರದ ಸೇರಿಕೆಯಿಂದ ಅದರ ಈಗಿನ ಉಳಿದುಕೊಂಡಿರುವ ರೂಪದಲ್ಲಿ ಮುಕ್ತಾಯಗೊಂಡಿರಬಹುದು. ಈ ಎಲ್ಲ ಮಾಹಿತಿಗಳು ಮೊದಲ ಸುಶ್ರುತ ಸಂಹಿತಾ ಬಹುಶಃ ಸುಮಾರು ಕ್ರಿ.ಪೂ. ೧ನೇ ಸಹಸ್ರಮಾನದ ಮಧ್ಯದ ವೇಳೆಗೆ ರಚನೆಗೊಂಡಿತು ಎಂದು ಪತ್ತೆಹಚ್ಚುತ್ತವೆ.
ಪಠ್ಯದಲ್ಲಿ ಸುಶ್ರುತನನ್ನು ಲೇಖಕನಾಗಿ ಹೆಸರಿಸಲಾಗಿದೆ, ಮತ್ತು ಇವನು ತನ್ನ ಗುರು ದಿವೋದಾಸನ ಬೋಧನೆಯನ್ನು ಪ್ರಸ್ತುತಪಡಿಸಿದನು ಎಂದು ಹೇಳಲಾಗಿದೆ. ಬೌದ್ಧ ಜಾತಕಗಳಂತಹ ಪ್ರಾಚೀನ ಪಠ್ಯಗಳಲ್ಲಿ, ಇವನು ಸುಮಾರು ಕ್ರಿ.ಪೂ. ೧೨೦೦ ರಿಂದ ಕ್ರಿ.ಪೂ. ೬೦೦ ರ ನಡುವೆ ಕಾಶಿಯಲ್ಲಿನ ಒಂದು ಶಾಲೆಯಲ್ಲಿ, ಜೊತೆಗೆ ತಕ್ಷಶಿಲೆಯಲ್ಲಿನ ಮತ್ತೊಂದು ವೈದ್ಯಕೀಯ ಶಾಲೆಯಲ್ಲಿ ಬೋಧಿಸುತ್ತಿದ್ದ ಒಬ್ಬ ವೈದ್ಯನಾಗಿದ್ದ ಎಂದು ಹೇಳಲಾಗಿದೆ. ಸುಶ್ರುತ ಹೆಸರಿನ ಗೊತ್ತಿರುವ ಅತ್ಯಂತ ಮುಂಚಿನ ಉಲ್ಲೇಖಗಳಲ್ಲಿ ಒಂದು ಬೋವರ್ ಹಸ್ತಪ್ರತಿಯಲ್ಲಿದೆ. ಈ ಪಠ್ಯಕ್ಕೆ ಕೊಡುಗೆ ನೀಡಿದ ಸುಶ್ರುತ ಎಂಬ ಹೆಸರಿನ ಹಲವಾರು ಪ್ರಾಚೀನ ಲೇಖಕರಿದ್ದರು ಎಂದು ಸಾಮಾನ್ಯವಾಗಿ ವಿದ್ವಾಂಸರು ಒಪ್ಪುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.