ಸುನಾಮಿ
From Wikipedia, the free encyclopedia
ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ ಸರಣಿಗೆ ಸುನಾಮಿ (ತ್ಸುನಾಮಿ) ಎಂದು ಕರೆಯಲಾಗುತ್ತದೆ. ಭೂಕಂಪ[1], ಜ್ವಾಲಾಮುಖಿ[2], ಬಾಹ್ಯಾಕಾಶದ ಬೃಹತ್ ಗಾತ್ರದ ವಸ್ತುವಿನ ಅಪ್ಪಳಿಕೆ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಪಡೆದಿವೆ. ಸುನಾಮಿಯು, ಗಮನಕ್ಕೆ ಬಾರದಷ್ಟು ಸಣ್ಣ ಪ್ರಮಾಣದಿಂದ ಹಿಡಿದು ಅತ್ಯಂತ ಹಾನಿಕರವಾದ ನೈಸರ್ಗಿಕ ವಿಕೋಪದವರೆಗೂ ತನ್ನ ಪ್ರಭಾವ ಬೀರಬಲ್ಲುದಾಗಿದೆ.
ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು. ಇಲ್ಲಿ "ತ್ಸು"(津) ಅಂದರೆ "ಬಂದರು" ಹಾಗು "ನಾಮಿ"( 波) ಎಂದರೆ "ಅಲೆ". ಜಪಾನಿ ಭಾಷೆಯಲ್ಲಿ ಸುನಾಮಿ ಪದವನ್ನು ಏಕವಚನ ಹಾಗೂ ಬಹುವಚನದಲ್ಲಿ ಬಳಸುತ್ತಾರೆ, ಆದರೆ ಕನ್ನಡದಲ್ಲಿ ಬಹುವಚನವಾಗಿ "ಸುನಾಮಿಗಳು" ಎಂದೂ ಇಂಗ್ಲಿಷಿನಲ್ಲಿ "tsunamis" ಎಂದು ಕರೆಯಲಾಗುತ್ತದೆ. ಸುನಾಮಿಯು ಸಾಗರದ ತೀರಾ ಒಳ-ಮೇಲ್ಮೈನಲ್ಲಿ ಘಟಿಸುವಂತಹದಲ್ಲ; ಇದು ಅತಿ ದೂರದಲ್ಲಿ ತುಂಬಾ ಚಿಕ್ಕ ವಿಸ್ತಾರವುಳ್ಳ (ಅಲೆಗಳ ಎತ್ತರ) ಹಾಗೂ ತೀರ ಉದ್ದವಾದ ತರಂಗಗಳನ್ನು ಹೊಂದಿರುತ್ತದೆ (ಬಹಳಷ್ಟು ಬಾರಿ ನೂರಾರು ಕಿಲೋಮೀಟರ್ ಉದ್ದವುಳ್ಳದಾಗಿರುತ್ತದೆ). ಇದೇ ಕಾರಣಕ್ಕೆ ಸಮುದ್ರದಲ್ಲಿ ಬಹಳಷ್ಟು ಬಾರಿ ಇದನ್ನು ಯಾರೂ ಗಮನಿಸುವುದೇ ಇಲ್ಲ.
ಸುನಾಮಿಯನ್ನು ದೈತ್ಯ ಅಲೆಗಳು ಎಂದೂ ಸಂಬೋಧಿಸುವುದುಂಟು, ಕಾರಣ ಇದರ ಅತೀವ ಉಬ್ಬರ - ಇಳಿತಗಳು. ಈ ದೈತ್ಯ ಅಲೆಗಳು ಬಹಳಷ್ಟು ಬಾರಿ ಸೂರ್ಯ ಚಂದ್ರರ ಗುರುತ್ವಾಕರ್ಷಣ ಸೆಳೆತದಿಂದಾಗಿ ಉಂಟಾಗುವ ಸ್ವಾಭಾವಿಕ ಉಬ್ಬರ - ಇಳಿತಗಳು. ಆದರೆ ಇದನ್ನು ಸಮುದ್ರ ಅಧ್ಯಯನ ಮಾಡುವ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ.
== ಕಾರಣಗಳು ==
ಸಮುದ್ರದ ಕೆಳಪದರಿನಲ್ಲಿ ಏಕಾಏಕಿ ಉಂಟಾಗುವ ವಿಕೃತೀಕರಣ ಅಲ್ಲಿರುವ ನೀರನ್ನು ನೇರವಾಗಿ(ಲಂಬವಾಗಿ) ಹೊರಚೆಲ್ಲುತ್ತದೆ, ಇದೇ ಸುನಾಮಿಗೆ ಕಾರಣ. ಮಹಾಸಮುದ್ರಗಳಡಿಯ ಭೂಮಿಯ ಹೊರ ಪದರಿನಲ್ಲಿ ಹಲವೆಡೆ ಬಿರುಕುಗಳಿದ್ದು (ಆಂಗ್ಲಭಾಷೆಯಲ್ಲಿ: ಪ್ಲೇಟ್ ಬೌಂಡರಿ), ಭಾಗಗಳಾಗಿ ಬೇರ್ಪಡೆಯಾಗಿದೆ. ಈ ಭಾಗಗಳು ಸ್ಥಾನ ಪಲ್ಲಟಗೊಳ್ಳುವುದು ಈ ವಿಕೃತಿಗೆ ಕಾರಣ.
ವಿಶೇಷವಾಗಿ, ಈ ಭಾಗಗಳು ಒಂದರಮೇಲೊಂದು ಜರುಗಿದರೆ ಸುನಾಮಿಗೆ ಎಡೆಗೊಡುವ ಪ್ರಮೇಯ ಹೆಚ್ಚಾಗುತ್ತದೆ. ಸಮುದ್ರದ ಕೆಳಗಿನ ಪದರು ಖಂಡಗಳ ಪದರಿನಡಿಗೆ ಹೊಕ್ಕಾಗ, ಖಂಡದ ಪದರಿನ ಅಂಚನ್ನು ಕೆಲವೊಮ್ಮೆ ತನ್ನೊಂದಿಗೆ ಒಯ್ಯುತ್ತದೆ. ಕ್ರಮೇಣ, ಈ ಅಂಚಿನ ಮೇಲೆ ಬಹಳ ಒತ್ತಡ ಉಂಟಾಗಿ ಅದು ಹಿಂದಕ್ಕೆ ಮಗುಚುತ್ತದೆ. ಇದರ ರಭಸಕ್ಕೆ ಉಂಟಾಗುವ ಅಲೆಗಳು ಹೊರಪದರಿನಲ್ಲಿ ಹಬ್ಬಿ ಸಮುದ್ರದಡಿಯ ಭೂಕಂಪವನ್ನು ಉಂಟುಮಾಡುತ್ತದೆ. ಸಮುದ್ರದಡಿಯಲ್ಲಿ ಕೆಲವೊಮ್ಮೆ ಉಂಟಾಗುವ ಭೂಕುಸಿತಗಳು, ಜ್ವಾಲಾಮುಖಿಗಳ ಉದ್ಭವಗಳು ಮತ್ತು ಹಳೆ ಜ್ವಾಲಾಮುಖಿಗಳ ಅವಶೇಷಗಳ ಕುಸಿತಗಳು ಕೂಡ ಮೇಲಿರುವ ನೀರನ್ನು ತಲ್ಲಣಗೊಳಿಸಿ ಸುನಾಮಿಯನ್ನುಂಟು ಮಾಡಬಹುದು.
ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರದೂಡಲ್ಪಟ್ಟ ಜಲರಾಶಿಯು ,ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವಾಗ ಅಲೆಗಳು ರೂಪುಗೊಳ್ಳುತ್ತವೆ ಹಾಗೂ ಇವು ಕೊಳದೊಳಗಿನ ಸಣ್ಣ ಅಲೆಗಳಂತೆ ಸಾಗರದುದ್ದಕ್ಕೂ ಹರಡುತ್ತವೆ.
ಸುನಾಮಿಗಳ ಬಗ್ಗೆ ಹಿಂದೆ ಇದ್ದ ನಂಬಿಕೆಗಳಿಂದ ಬೇರೆಯಾಗಿ,೧೯೫೦ರಲ್ಲಿ ದೊಡ್ಡ ಗಾತ್ರದ ಸುನಾಮಿಗಳಿವೆ ಹಾಗೂ ಅವು ಭೂಕುಸಿತ,ಜ್ವಾಲಾಮುಖಿಯ ಸ್ಫೋಟನ ಮತ್ತು ತೀವ್ರತರ ಘಟನೆಗಳಿಂದ ಸಂಭವಿಸುತ್ತವೆ ಎಂದು ಕಂಡುಹಿಡಿದರು.ನೀರಿಗೆ ಬೀಳುತ್ತಿದ್ದ ಭಗ್ನಾವಶೇಷಗಳ ಶಕ್ತಿ ಅಥವಾ ಭಗ್ನಾವಶೇಷಗಳು ನೀರಿಗೆ ವರ್ಗಾವಣೆಗೊಂಡ ತಕ್ಷಣ ವ್ಯಾಪಕವಾಗಿ ಹರಡುತ್ತಿದ್ದುದರಿಂದ,ಇಂತಹ ಘಟನೆಗಳು ನೀರಿನ ಪರಿಮಾಣವನ್ನು ವೇಗವಾಗಿ ಸ್ಥಾನಪಲ್ಲಟಗೊಳಿಸುತ್ತಿದ್ದವು.ಈ ವಿಕೃತೀಕರಣಗಳಿಂದ ಉಂಟಾದ ಸುನಾಮಿಗಳು,ಕೆಲವು ಭೂಕಂಪಗಳಿಂದ ಸಾಗರದಗಲಕ್ಕೂ ಹರಡುವ ಸುನಾಮಿಗಳಂತಲ್ಲದೆ,ಸಾಮಾನ್ಯವಾಗಿ ಬೇಗ ಚದುರಿ ಹೋಗುತ್ತಿದ್ದವು ಹಾಗೂ ಸಮುದ್ರದ ಕೆಲ ಭಾಗಕ್ಕೆ ಮಾತ್ರ ಧಕ್ಕೆಯಾಗುತ್ತಿದ್ದ ಕಾರಣ,ಬಹುದೂರದ ಕಡಲತೀರಕ್ಕೆ ಹರಡುವ ಸಾಧ್ಯತೆ ಕಡಿಮೆ ಇತ್ತು.ಅದರೆ ಈ ಘಟನೆಗಳು ಸುಮಾರು ದೊಡ್ಡವಾದ ಸ್ಥಳೀಯ ಆಘಾತಕಾರಿ ಅಲೆ(local shock waves)ಗಳನ್ನು(solitions) ಹುಟ್ಟು ಹಾಕಬಲ್ಲವು.ಉದಾಹರಣೆಗೆ ಲಿಟುಯ ಕೊಲ್ಲಿ(Lituya Bay)ಯ ಶಿರೋಭಾಗದಲ್ಲಿ ಸಂಭವಿಸಿದ ಭೂಕುಸಿತ ಅಂದಾಜು ೫೦-೧೫೦ ಮೀ.ನಷ್ಟು ನೀರಿನ ಅಲೆಗಳನ್ನು ಸೃಷ್ಟಿಸಿತು ಹಾಗೂ ಸ್ಥಳೀಯ ಪರ್ವತಗಳ ೫೨೪ ಮೀ.ನಷ್ಟುಎತ್ತರ ತಲುಪಿತು.ಒಟ್ಟಾರೆ ಅತ್ಯಂತ ಪರಿಣಾಮಕಾರಿ ದೊಡ್ಡ ಭೂಕುಸಿತ ಸಾಗರದಗಲಕ್ಕೂ ಪ್ರಭಾವ ಬೀರಬಲ್ಲ ಒಂದು ದೈತ್ಯ ಸುನಾಮಿಯನ್ನು ಸೃಷ್ಟಿಸಬಲ್ಲುದು.