ಸದಸ್ಯ:AnanthKC/ನನ್ನ ಪ್ರಯೋಗಪುಟ
From Wikipedia, the free encyclopedia
ಉಗಿ ಉತ್ಪಾದಕಗಳು
ಅಧಿಕ ಸಂಮರ್ದ ಮತ್ತು ಅಧಿಕೋಷ್ಣತೆಯಲ್ಲಿರುವ ಉಗಿಯನ್ನು ಉತ್ಪನ್ನಮಾಡುವ ಸಮಗ್ರ ಯಾಂತ್ರಿಕ ವ್ಯವಸ್ಥೆ (ಸ್ಟೀಂ ಜನರೇಟರ್ಸ್). ಇಂಧನ ದಹನದಿಂದ ಅಧಿಕೋಷ್ಟವಿರುವ ಮೂಲವನ್ನು ಏರ್ಪಡಿಸಿ ಅದರಿಂದ ಉಷ್ಣಶಕ್ತಿಯನ್ನು ನೀರಿಗೆ ವರ್ಗಾಯಿಸಿ ನೀರನ್ನು ಬಾಷ್ಪೀಕರಿಸಲು ಬಳಸುವ ಒಂದು ಸಂಮರ್ದಪುರಿತ ವ್ಯವಸ್ಥೆಯ ಹೆಸರು ಉಗಿಆವಿಗೆ (ಸ್ಟೀಂ ಬಾಯ್ಲರ್). ಇಲ್ಲಿ ಉಗಿಯನ್ನು ಪಡೆಯುವುದೂ ಅದರಲ್ಲಿ ಸುಪ್ತವಾಗಿರುವ (ಲೇಟೆಂಟ್) ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಉಪಯೋಗಿಸಿಕೊಳ್ಳುವುದೂ ಮುಖ್ಯ ಉದ್ದೇಶಗಳು. ಆದ್ದರಿಂದ ಉಷ್ಣಯಂತ್ರಗಳಲ್ಲಿ ಉಗಿಆವಿಗೆ ಒಂದು ಪ್ರಧಾನವಿಭಾಗ. ಶಕ್ತ್ಯುತ್ಪಾದನೆಗೆ ಮಾತ್ರವಲ್ಲ. ಕೈಗಾರಿಕೆಗಳಲ್ಲಿನ ಕೆಲವು ಪ್ರಕ್ರಿಯೆಗಳಲೂ ಬಿಸಿಮಾಡುವ ಕ್ರಿಯೆಯಲ್ಲೂ (ನೋಡಿ- ಉಗಿತಾಪನ) ನೀರಿನ ಉಗಿಯ ವಿನಿಯೋಗವಿರುವುದರಿಂದ ಆವಿಗೆಗಳ ಬಳಕೆ ಬಲು ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಈ ಕಾರಣದಿಂದ ಅವುಗಳ ಅಲೇಖ್ಯದಲ್ಲೂ (ಡಿಸೈನ್) ರಚನೆಯಲ್ಲೂ ರಚನೆಗೆ ಉಪಯೋಗಿಸುವ ಪದಾರ್ಥ ಹಾಗೂ ವಿಧಾನಗಳಲ್ಲೂ ಹೆಚ್ಚಿನ ಸುಧಾರಣೆ ಸಾಧ್ಯವಾಗಿದೆ. ಆದ್ದರಿಂದ ಇಂದು ಆವಿಗೆ (ಬಾಯ್ಲರ್) ಪದದ ಅರ್ಥವ್ಯಾಪ್ತಿ ವಿಶಾಲವಾಗಿ ಅದೊಂದು ಉಗಿ ಉತ್ಪಾದಕ ವ್ಯವಸ್ಥೆ (ಸ್ಟೀಂ ಜನರೇಟಿಂಗ್ ಯೂನಿಟ್) ಎಂದೇ ಪರಿಗಣಿಸಲಾಗಿದೆ. ಪ್ರಸಕ್ತ ಲೇಖನದಲ್ಲಿ ಉಗಿ, ಆವಿಗೆ ಪದಗಳನ್ನು ಈ ವಿಶಾಲ ಅರ್ಥದಲ್ಲಿ ಬಳಸಲಾಗಿದೆ. ಇಂಧನದಹನದಿಂದ ಉತ್ಪತ್ತಿಯಾದ ಉಷ್ಣವನ್ನು, ಅದನ್ನು ಒಳಗೊಂಡಿರುವ ನೀರಿಗೆ ಹಾಯಿಸುವುದರ ಮೂಲಕ, ಮೊದಲೇ ನಿಗದಿಸಿರುವ ಸಂಮರ್ದ ಮತ್ತು ಉಷ್ಣತೆಗಳ ಮಟ್ಟದ ಉಗಿಯಾಗಿ ನೀರನ್ನು ಪರಿವರ್ತಿಸುವುದೇ ಆವಿಗೆಯ ಕೆಲಸ. ಇದು ತೃಪ್ತಿಕರವಾಗಿ ನೆರವೇರಿಸಲು ಕೆಳಗಿನ ಅಂಶಗಳಿಗೆ ಗಮನವೀಯಬೇಕು. ದಹನಜನ್ಯ ಅನಿಲಗಳು ಲೋಹಮಧ್ಯಸ್ಥವಾಗಿ ನೀರನ್ನು ಸಂಧಿಸುವ ಪ್ರದೇಶ ಆದಷ್ಟು ಹೆಚ್ಚು ವಿಸ್ತಾರವಾಗಿರಬೇಕು; ಉಷ್ಣ ಸಲೀಸಾಗಿ ಪ್ರವಹಿಸುವಂತೆ ಆವಿಗೆಯ ಲೋಹ ಸಾಧ್ಯವಾದಷ್ಟು ತೆಳುವಾಗಿಯೂ ಉತ್ತಮ ಉಷ್ಣವಾಹಕವಾಗಿಯೂ ಇರಬೇಕು; ಇಂಥ ರಚನೆಯಲ್ಲಿ ಆವಿಗೆ ಸುಭದ್ರವಾಗಿರಬೇಕು. ರಚನೆಯ ಖರ್ಚು ಮಿತಿಯಲ್ಲಿರಬೇಕು: ಲೋಹದ ಎರಡೂ ಮಗ್ಗುಲುಗಳಲ್ಲಿರುವ ನೀರು (ಅಥವಾ ಉಗಿ) ಮತ್ತು ದಹನಜನ್ಯ ಅನಿಲಗಳು ಸದಾ ಚಲಿಸುತ್ತಿರಬೇಕು: ಆ ನೀರು ಸಹ ಶುಭ್ರ ಮಾತ್ರವಲ್ಲದೆ ಶುದ್ಧವಾಗಿಯೂ ಇರಬೇಕು.[1]