ರೀಸ್ ವಿದರ್ಸ್ಪೂನ್
ಅಮೇರಿಕನ್ ನಟಿ ಹಾಗೂ ನಿರ್ಮಾಪಕಿ / From Wikipedia, the free encyclopedia
ವಿಶ್ವಕ್ಕೆ 'ರೀಸ್ ವಿದರ್ಸ್ಪೂನ್ ' ಎಂದು ಪರಿಚಿತರಾದ ಲಾರಾ ಜೀನ್ ರೀಸ್ ವಿದರ್ಸ್ಪೂನ್ (ಜನನ: 22 ಮಾರ್ಚ್ 1976) ಅಮೆರಿಕಾದ ಒಬ್ಬ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ.
1988ರಲ್ಲಿ ಅವರು ಮೂರು ಪ್ರಮುಖ ಚಲನಚಿತ್ರಗಳಲ್ಲಿ ನಟಿಸಿದರು: ಒವರ್ನೈಟ್ ಡೆಲಿವರಿ , ಪ್ಲೆಸೆಂಟ್ವಿಲ್ಲೆ ಮತ್ತು ಟ್ವಿಲೈಟ್ . ಇದರ ಮಾರನೆಯ ವರ್ಷ, ರೀಸ್ ವಿದರ್ಸ್ಪೂನ್ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಎಲೆಕ್ಷನ್ ಎಂಬ ಚಲನಚಿತ್ರದಲ್ಲಿ ನಟಿಸಿದರು. ಈ ಚಲನಚಿತ್ರದಲ್ಲಿನ ನಟನೆಗಾಗಿ ಅವರಿಗೆ ಗೋಲ್ಡನ್ ಗ್ಲೋಬ್ ನಾಮನಿರ್ದೇಶನ ಲಭಿಸಿತು. ಲೀಗಲ್ಲಿ ಬ್ಲೋಂಡ್ ಎಂಬ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ ಚಲನಚಿತ್ರದಲ್ಲಿ 'ಎಲ್ಲಿ ವುಡ್ಸ್' ಎಂಬ ವಿಶಿಷ್ಟ ಪಾತ್ರದಲ್ಲಿ ನಟನೆಯೊಂದಿಗೆ 2001ರಲ್ಲಿ ಅವರ ನಟನಾ ವೃತ್ತಿಗೆ ಪ್ರಮುಖ ತಿರುವು ಸಿಕ್ಕಿತು. 2002ರಲ್ಲಿ ಅವರು ಸ್ವೀಟ್ ಹೋಂ ಅಲಾಬಾಮಾ ಎಂಬ ಚಲನಚಿತ್ರದಲ್ಲಿ ನಟಿಸಿದರು. ಇದು ಇಲ್ಲಿಯವರೆಗೆ ಅವರ ಪಾಲಿಗೆ ಅತಿದೊಡ್ಡ ವಾಣಿಜ್ಯ ಯಶಸ್ಸು ಪಡೆದ ಚಲನಚಿತ್ರವಾಯಿತು. 2003ರಲ್ಲಿ Legally Blonde 2: Red, White & Blonde ಚಲನಚಿತ್ರದಲ್ಲಿ ಅವರು ಮುಖ್ಯ ನಟಿಯಾಗಿ ಮರಳಿದ್ದಲ್ಲದೆ ಕಾರ್ಯಕಾರೀ ನಿರ್ಮಾಪಕಿಯೂ ಆಗಿದ್ದರು. 2005ರಲ್ಲಿ, ವಾಕ್ ದಿ ಲೈನ್ ಎಂಬ ಚಲನಚಿತ್ರದಲ್ಲಿ ಜೂನ್ ಕಾರ್ಟರ್ ಕ್ಯಾಷ್ ಎಂಬ ಪಾತ್ರನಿರ್ವಹಣೆಗಾಗಿ ವಿಶ್ವವ್ಯಾಪಿ ಗಮನ ಸೆಳೆದರು ಮತ್ತು ಮೆಚ್ಚುಗೆ ಗಳಿಸಿದರು. ರೀಸ್ ವಿದರ್ಸ್ಪೂನ್ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಎನಿಸಿ ಅಕ್ಯಾಡಮಿ ಪ್ರಶಸ್ತಿ, ಗೋಲ್ಡನ್ ಗ್ಲೋಬ್, BAFTA ಹಾಗೂ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಗಳನ್ನು ಗಳಿಸಿದರು.
ರೀಸ್ ವಿದರ್ಸ್ಪೂನ್ ನಟ ಹಾಗೂ ತಮ್ಮೊಂದಿಗೆ ಕ್ರೂಯೆಲ್ ಇಂಟೆನ್ಷನ್ಸ್ ಚಲನಚಿತ್ರದಲ್ಲಿ ಸಹನಟರಾದ ರಯಾನ್ ಫಿಲಿಪ್ಸ್ರನ್ನು 1999ರಲ್ಲಿ ವಿವಾಹವಾದರು. ಅವರಿಗೆ ಆವಾ ಮತ್ತು ಡೀಕಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಜೋಡಿಯು 2006ರ ಅಂತ್ಯದಲ್ಲಿ ಪ್ರತ್ಯೇಕಗೊಂಡು, ಅಕ್ಟೋಬರ್ 2007ರಲ್ಲಿ ವಿಚ್ಛೇದನ ಹೊಂದಿತು. ರೀಸ್ ವಿದರ್ಸ್ಪೂನ್ ಟೈಪ್ ಎ ಫಿಲ್ಮ್ಸ್ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯ ಒಡತಿ. ಮಕ್ಕಳ ಮತ್ತು ಮಹಿಳೆಯರ ಸಲಹಾ ಸಂಘಟನೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಅವರು ಚಿಲ್ಡ್ರನ್ಸ್ ಡಿಫೆನ್ಸ್ ನಿಧಿ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ಅವರು ಏವನ್ ಪ್ರಾಡಕ್ಟ್ಸ್ನ ಜಾಗತಿಕ ರಾಯಭಾರಿಯಾಗಿ ನೇಮಕವಾದರು. ದಾನಧರ್ಮ ಸಂಸ್ಥೆ ಏವನ್ ಪ್ರತಿಷ್ಠಾನದಲ್ಲಿ ಅವರು ಗೌರವಾನ್ವಿತ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು.