ಮುಂಡೇಶ್ವರಿ ದೇವಾಲಯ
From Wikipedia, the free encyclopedia
ಮುಂಡೇಶ್ವರಿ ದೇವಿ ದೇವಾಲಯವು[1] ಭಾರತದ ಬಿಹಾರ ರಾಜ್ಯದ ಕೈಮೂರ್ ಜಿಲ್ಲೆಯ ಕೌರಾದಲ್ಲಿ ಮುಂಡೇಶ್ವರಿ ಗುಡ್ಡಗಳ ಮೇಲೆ ಸ್ಥಿತವಾಗಿದೆ. ಇದು ಒಂದು ಪ್ರಾಚೀನ ದೇವಾಲಯವಾಗಿದ್ದು ಶಿವ ಮತ್ತು ಶಕ್ತಿಯರ ಪೂಜೆಗೆ ಸಮರ್ಪಿತವಾಗಿದೆ. ಇದು ಭಾರತದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.[2][3][4] ಇದು ಭಾರತದ ಅತ್ಯಂತ ಹಳೆಯ ಕಾರ್ಯಾತ್ಮಕ ಹಿಂದೂ ದೇವಾಲಯವೆಂದೂ ಪರಿಗಣಿತವಾಗಿದೆ.[5][6] ಭಾರತದ ಪುರಾತತ್ವ ಸರ್ವೇಕ್ಷಣೆಯು (ಎಎಸ್ಐ) ಸ್ಥಳದಲ್ಲಿ ನಿಲ್ಲಿಸಿದ ಮಾಹಿತಿ ಫಲಕವು ಈ ದೇವಾಲಯದ ಕಾಲಮಾನ ನಿರ್ಧಾರವು ಕ್ರಿ.ಶ. ೬೨೫ ಎಂದು ಸೂಚಿಸುತ್ತದೆ. ಕ್ರಿ.ಶ. ೬೩೫ರ ಕಾಲಮಾನದ್ದೆಂದು ನಿರ್ಧರಿಸಲಾದ ಹಿಂದೂ ಶಾಸನಗಳು ದೇವಾಲಯದಲ್ಲಿ ದೊರಕಿವೆ. ಈ ದೇವಾಲಯವು ೧೯೧೫ರಿಂದ ಎಎಸ್ಐ ಅಡಿಯಲ್ಲಿ ರಕ್ಷಿತ ಸ್ಮಾರಕವಾಗಿದೆ. ಅಸಾಮಾನ್ಯ ರಾಕ್ಷಸನಾದ ಮಹಿಷಾಸುರನ ಸೋದರರು ಮತ್ತು ದಳವಾಯಿಗಳಾಗಿದ್ದ ಚಂಡ ಮತ್ತು ಮುಂಡರು ಈ ಪ್ರದೇಶವನ್ನು ಆಳುತ್ತಿದ್ದರು ಎಂದು ಸ್ಥಳೀಯ ಜಾನಪದಗಳು ಹೇಳುತ್ತವೆ. ಮುಂಡನು ದೇವಿ ಮುಂಡೇಶ್ವರಿ ಭವಾನಿ ದೇವಾಲಯವನ್ನು ನಿರ್ಮಿಸಿದನು. ಅವನ ತಮ್ಮ ಚಂಡನು ಚೈನ್ಪುರ್ ಹತ್ತಿರದ ಮದುರಾನಾ ಗುಡ್ಡದ ಮೇಲಿರುವ ಚಂಡೇಶ್ವರಿ ದೇವಾಲಯವನ್ನು ನಿರ್ಮಿಸಿದನು.