ಮರಕುಟಿಕ (Wood pecker) ಒಂದು ಜಾತಿಯ ವೃಕ್ಷವಾಸಿ ಪಕ್ಷಿ.[1][2][3] ಇದರ ಸುಮಾರು ೨೦೦ ಪ್ರಭೇದಗಳಿದ್ದು ಪ್ರಪಂಚದೆಲ್ಲೆಡೆ ಕಂಡುಬರುತ್ತದೆ. ಕೆಲವು ಭಾಗಗಳಾದ ಆಸ್ಟ್ರೇಲಿಯಾ, ನ್ಯೂಗಿನಿ, ನ್ಯೂಜಿಲ್ಯಾಂಡ್, ಮಡಗಾಸ್ಕರ್, ಮತ್ತು ತೀವ್ರ ಧ್ರುವ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ಮರಕುಟಿಕವು ಪಿಸಿಡೆ ಎಂಬ ಕುಟುಂಬಕ್ಕೆ ಸೇರುತ್ತದೆ.

Quick Facts Scientific classification, ಉಪಕುಟುಂಬಗಳು ...
ಮರಕುಟಿಕ
Temporal range: 26–0 Ma
PreꞒ
O
S
D
C
P
T
J
K
Pg
N
Late Oligocene to present
Thumb
ಶಿಖೆಯುಳ್ಳ ಮರಕುಟಿಗ

ಮರಕುಟಿಗದ ಕುಟ್ಟುವ ಶಬ್ದ 

Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಏವೀಸ್
ಗಣ: ಪಿಸಿಫ಼ಾರ್ಮೀಸ್
ಉಪಗಣ: ಪಿಸಿ
ಕೆಳಗಣ: ಪಿಸಿಡೀಸ್
ಕುಟುಂಬ: ಪಿಸಿಡೀ
Leach, 1820
ಉಪಕುಟುಂಬಗಳು
  • ಜಿಂಗನೀ – ರೈನೆಕ್‍ಗಳು
  • ಪಿಸಿನೀ – ನೈಜ ಮರಕುಟಿಗಗಳು
  • ಪಿಕಮ್ನಿನೀ – ಪಿಕ್ಯುಲೆಟ್‍ಗಳು
  • ಸ್ಯಾಸೀನೀ - ಪಿಕ್ಯುಲೆಟ್‍ಗಳು
Close

ಭಾರತದಲ್ಲಿ 32 ಪ್ರಭೇದದ ಮರಕುಟಿಗಗಳು ಕಂಡುಬರುತ್ತದೆ. ಬೇರಾವ ಹಕ್ಕಿಗಳಿಗೂ ಪ್ರವೇಶವಿರದಂಥ ವೃಕ್ಷಕಾಂಡಗಳ ಕ್ಷೇತ್ರ ಇವುಗಳ ಆಡುಂಬೊಲವಾಗಿವೆ. ಅಂತೆಯೇ ಇಂಥ ಸನ್ನಿವೇಶಕ್ಕೆ ತಕ್ಕುದಾಗಿ ಬಾಳಲು ಇವುಗಳ ಅಂಗಚರನೆಯಲ್ಲಿ ಕೆಲವೊಂದು ಯುಕ್ತ ಮಾರ್ಪಾಡುಗಳನ್ನೂ ಕಾಣಬಹುದು.

ದೇಹರಚನೆ

Thumb
ಮರಕುಟಿಕ

ಉದ್ದನೆಯ ಗಟ್ಟಿಮುಟ್ಟಾದ ಕೊಕ್ಕು ಗಡಸು ಹಾಗೂ ಚೂಪಾಗಿದ್ದು ತೊಗಟೆಯನ್ನು ಕುಟ್ಟಲು ಯುಕ್ತವಾದ ಉಳಿಯಂತಿದೆ.[4] ಹರಿತವಾದ ಉಗುರುಗಳುಳ್ಳ ಕಾಲುಗಳು. ಮರಗಳ ಕಾಂಡಗಳಿಗೆ ಆತುಕೊಂಡು ಕೀಟಗಳನ್ನು ಹುಡುಕಬೇಕಾಗುವುದರಿಂದ ಅದಕ್ಕೆ ತಕ್ಕಂತೆ ಕಾಲುಗಳು ಮೋಟಾಗಿವೆ, ಬೆರಳುಗಳು ಉದ್ದವಾಗಿವೆ. ಇರುವ ನಾಲ್ಕು ಬೆರಳುಗಳ ಪೈಕಿ ಎರಡು ಮುಂದಕ್ಕೆ ಚಾಚಿಕೊಂಡಿದ್ದರೆ ಇನ್ನೆರಡು ಹಿಂದಕ್ಕೆ ಚಾಚಿವೆ. ಉಗುರುಗಳು ಮೊನಚಾಗಿರುವುವಲ್ಲದೆ ಬಾಗಿಕೊಂಡಿವೆ ಕೂಡ. ಇದರಿಂದ ತೊಗಟೆಗೆ ಅಂಟಿಕೊಳ್ಳಲು ಅನುಕೂಲ. ಕಾಂಡಗಳ ಮೇಲೆ ಊರಿಕೊಂಡು ಲಂಬವಾಗಿ ನಿಲ್ಲಲು ಬೇಕಾಗುವ ಆಸರೆಯನ್ನು ದೃಢವಾದ ಗರಿಗಳಿಂದ ರಚಿತವಾದ ಇವುಗಳ ತೋಕೆ ಒದಗಿಸುತ್ತದೆ.[5] ಮರಕುಟಿಗ ತನ್ನ ಕುತ್ತಿಗೆಯಲ್ಲಿರುವ ಬಲಯುತ ಸ್ನಾಯುಗಳ ಸಹಾಯದಿಂದ ಅತ್ಯಂತ ಚಟುಲಗತಿಯಲ್ಲಿ ಕೊಕ್ಕನ್ನು ಕಾಂಡಕ್ಕೆ ಘಟ್ಟಿಸಬಲ್ಲುದೆನ್ನಲಾಗಿದೆ. ಮರವನ್ನು ನಿಮಿಷಕ್ಕೆ ೧೨೦ ಬಾರಿಗಿಂತಲೂ ಹೆಚ್ಚು ಬಾರಿ ಕುಟ್ಟುವಂತೆ ವೇಗದ ಘಟ್ಟಣೆಯ ಧಕ್ಕೆಯನ್ನು ತಡೆದುಕೊಳ್ಳಲು ರಚಿತವಾದ ಗಟ್ಟಿಯಾದ ತಲೆಬುರುಡೆಗಳನ್ನು ಹಾಗೂ ಧಕ್ಕೆಯನ್ನು ಕಡಿಮೆ ಮಾಡುವ ಮಾಂಸಖಂಡಗಳನ್ನು ಹೊಂದಿರುವುದು ಇವುಗಳ ವೈಶಿಷ್ಟ್ಯ.

ಈ ಹಕ್ಕಿಯ ನಾಲಗೆ ಬಲು ಉದ್ದವಾಗಿದ್ದು ಸಾಮಾನ್ಯವಾಗಿ ತಲೆಬುರುಡೆಯ ವಿಶೇಷ ಕುಳಿಯಲ್ಲಿ ಸುರುಳಿ ಸುತ್ತಿರುತ್ತದೆ;[6] ಅಗತ್ಯ ಬಿದ್ದಾಗ ಕೊಕ್ಕಿನಿಂದ ಸುಮಾರು ದೂರಕ್ಕೆ ಹೊರಚಾಚಬಲ್ಲದು. ನಾಲಗೆಯ ತುದಿಯಲ್ಲಿ ಹಿಮ್ಮುಖವಾಗಿ ಬಾಗಿರುವ ಕೊಕ್ಕೆಗಳುಂಟು; ಅಲ್ಲದೆ ಲಾಲಾಗ್ರಂಥಿಗಳಿಂದ ಉತ್ಪತ್ತಿಯಾಗುವ ಒಂದು ವಿಧದ ಅಂಟುದ್ರವ ಇದರ ಮೇಲೆ ಲೇಪನಗೊಂಡಿರುತ್ತದೆ. ಮರಕುಟಿಗ ಕೀಟಡಿಂಬಗಳಿರುವ ತಾಣಗಳನ್ನು ಕೊಕ್ಕಿನಿಂದ ತೆರೆದಾಗ ನಾಲಿಗೆಯನ್ನು ಹಾವಿನಂತೆ ಒಳಗೆ ಚಾಚಿ ಎರೆಗಳನ್ನು ಹಿಡಿಯಬಲ್ಲದು.

Thumb

ಆಹಾರ

ಮರಗಳ ಕಾಂಡ, ರೆಂಬೆಗಳನ್ನು ಕುಟ್ಟಿ ತೊಗಟೆಗಳ ಒಳಗಿರುವ ಕ್ರಿಮಿಕೀಟಗಳನ್ನು ಭಕ್ಷಿಸುತ್ತವೆ. ಇವುಗಳ ಅಂಗರಚನೆಯೂ ಇದಕ್ಕೆ ಅನುಗುಣವಾಗಿದೆ.

ಸ್ವಭಾವ

ಮರಗಳ ಬುಡದಿಂದ ತೊಡಗಿ ವಂಕಿವಂಕಿಯಾಗಿ ಮೇಲಿನ ರೆಂಬೆಗಳಿಗೆ ಏರುವುದೂ ಮಧ್ಯೆ ಮಧ್ಯೆ ಕೀಟಗಳಿರಬಹುದಾದ ಡೊಗರುಗಳಿಗಾಗಿ ತಡಕುವುದೂ ಒಂದು ಮರದ ತುದಿಯನ್ನು ತಲಪಿದ ಮೇಲೆ ಸರ‍್ರನೆ ಬಿಟ್ಟು ಬಿಟ್ಟು ರೆಕ್ಕೆ ಬಡಿಯುತ್ತ ತರಂಗಗತಿಯಲ್ಲಿ ಮತ್ತೊಂದು ಮರದ ಬುಡಕ್ಕೆ ಹಾರುವುದೂ ಇದರ ಸ್ವಭಾವ.

ಕರ್ಕಶ ಕೂಗು ಗಟ್ಟಿಯಾಗಿರುತ್ತದೆ. ಬೇಟೆಯ ಕಾಲದಲ್ಲಿ ಇದೇ ಕೂಗನ್ನು ಪದೇ ಪದೇ ಮಾಡುತ್ತದೆಯೇ ವಿನಾ ಬೇರಾವ ವಿಶೇಷ ರೀತಿಯ ಕೂಗನ್ನು ಇದರಲ್ಲಿ ಕೇಳಲಾಗದು. ಆದರೆ ಸತ್ತು ಒಣಗಿಹೋದ ರೆಂಬೆಯ ಮೇಲೊ ತಗಡಿನ ಚಾವಣಿಯ ಮೇಲೊ ಕೊಕ್ಕನ್ನು ಗಟ್ಟಿಯಾಗಿ ಬಡಿದು ತನ್ನ ಇರವನ್ನು, ಕಾಮನೆಯನ್ನು, ಉದ್ದೇಶವನ್ನು ಜಾಹೀರುಪಡಿಸುತ್ತದೆ.[7][8]

ಸಂತಾನೋತ್ಪತ್ತಿ

ಎಲ್ಲ ಮರಕುಟಿಗಗಳೂ ಮರಗಳ ಕಾಂಡವನ್ನು ಕೊರೆದು ಒರಟುಗೂಡು ರಚಿಸುವುವು. ಮೆತ್ತೆಗಳನ್ನು ರೂಪಿಸುವ ಪರಿಪಾಟಿ ಇಲ್ಲ. ಸಾಮಾನ್ಯವಾಗಿ ಒಂದು ಸಲಕ್ಕೆ ಮೂರು ಅಚ್ಚ ಬಿಳಿಬಣ್ಣದ ಮೊಟ್ಟೆಗಳನ್ನಿಡುವುದು. ಗಂಡು ಹೆಣ್ಣುಗಳೆರಡೂ ಕಾವುಕೊಟ್ಟು ಮರಿಮಾಡಿ ಮರಿಗಳನ್ನು ಪೋಷಿಸುತ್ತವೆ.

ಪಶ್ಚಿಮ ಘಟ್ಟಗಳಲ್ಲಿ

ಪಶ್ಚಿಮ ಘಟ್ಟಗಳಲ್ಲಿ ಡೆಂಡ್ರೂಕೋಪಸ್ ಮರಾಟೆನ್ಸಿಸ್ (ಹಳದಿಹಣೆ ಮರಕುಟಿಗ), ಡೈನೋಪಿಯಮ್ ಬೆಂಗಾಲೆನ್ಸ್ (ಚಿನ್ನದ ಬೆನ್ನಿನ ಮರಕುಟಿಗ) ಮತ್ತು ಸಿಲೆಯಸ್ ಬ್ರಾಕಿಯೂರಸ್ (ಕೆಂಗಂದು ಮರಕುಟಿಗ), ಡೈನೊಪಿಯಮ್ ಜಾವನೀಸ್, ಡ್ರೈಯೊಕೋಪಸ್ ಜಾವೆನ್ಸಸ್ (ಹೆಮ್ಮರ ಕುಟುಕ), ಕ್ರೈಸೊಕೊಲಾಪ್ಟಿಸ್ ಲುಸಿಡಸ್, ಹೆಮಿಸಿರ್‌ಕಸ್ ಕ್ಯಾನಂಟೇ (ಹೃದಯಚುಕ್ಕಿ ಮರಕುಟಿಗ)ಗಳು ಪ್ರಧಾನವಾಗಿ ಕಂಡುಬರುತ್ತದೆ.

ಇವುಗಳಲ್ಲಿ ವಿಶೇಷ ಉಲ್ಲೇಖಕ್ಕೆ ಅರ್ಹವಾದದ್ದು ಕೆಂಗಂದು ಮರಕುಟಿಗ (ಸಿಲೆಯಸ್ ಬ್ರಾಕಿಯೂರಸ್) ಪ್ರಭೇದ. ಇವು ಚೊಗಳಿ ಇರುವೆ (ಪಿರಮಿಡ್ ಇರುವೆ) ಗಳ ಗೂಡಿನಲ್ಲಿ ರಂಧ್ರ ಮಾಡಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಯಾವುದೇ ಕಾರಣದಿಂದ ಗೂಡು ಸ್ವಲ್ಪವೇ ಕದಲಿದರೂ ತಂಡೋಪ ತಂಡವಾಗಿ ಹೊರಬಂದು ಶತ್ರುಗಳ ಮೇಲೆ ದಾಳಿ ನಡೆಸುವ ಈ ಇರುವೆಗಳು ಈ ಮರಕುಟಿಗ ಹಾಗೂ ಅವುಗಳ ಮರಿಗಳನ್ನು ಏನೂ ಮಾಡದಿರುವುದು ಇಂದಿಗೂ ಬಿಡಿಸಲಾಗದಿರುವ ರಹಸ್ಯ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.