From Wikipedia, the free encyclopedia
ಮನುಸ್ಮೃತಿ ಅಥವಾ "ಮನುವಿನ ನಿಯಮಗಳು"; ಮಾನವಧರ್ಮಶಾಸ್ತ್ರ ಎಂದೂ ಪರಿಚಿತವಾಗಿದೆ.[೧] ಹಿಂದೂ ಧರ್ಮದ ಧರ್ಮಶಾಸ್ತ್ರ ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಮನು ಎಂಬ ಧರ್ಮಶಾಸ್ತ್ರಕಾರ ರಚಿಸಿದ ಈ ಕೃತಿ ಹಿಂದುಗಳ ಆಚಾರ ವಿಚಾರಗಳನ್ನು ನಿರ್ಧರಿಸುತ್ತದೆ. ಪಠ್ಯವು ಮನ್ವಂತರ ಕಾಲದ್ದು. ಮನ್ವಂತರವೆಂದರೆ ಐದು ವರ್ಷಗಳಿಗೊಮ್ಮೆ ಬದಲಾಗುವ ಅಧಿಕೃತ ಕಾನೂನು ಸಚಿವಾಲಯವಾಗಿತ್ತು. ಐದು ವರ್ಷಗಳಿಗೊಮ್ಮೆ ಮನುವಿನ ಸ್ಥಾನ ಬದಲಾಗುತ್ತಿತ್ತು. ಮನುವು, ಅವರಿಗೆ "ಎಲ್ಲ ಸಾಮಾಜಿಕ ವರ್ಗಗಳ ನಿಯಮ" ಹೇಳೆಂದು ಬೇಡಿಕೊಳ್ಳುವ, ಋಷಿಗಳಿಗೆ ಕೊಟ್ಟ ಒಂದು ಪ್ರವಚನದ ರೂಪದಲ್ಲಿದೆ. ಮನುಸ್ಮೃತಿಯು ಅದನ್ನು ಅನುಸರಿಸಿದ ಎಲ್ಲ ಮುಂದಿನ ಧರ್ಮಶಾಸ್ತ್ರಗಳಿಗೆ ಸ್ವೀಕಾರಾರ್ಹ ಮಾನದಂಡವಾಯಿತು.
ಯಾಜ್ಞವಲ್ಕ್ಯ, ನಾರದ, ವಿಷ್ಣು ಇತ್ಯಾದಿ ಹತ್ತಾರು ಸ್ಮೃತಿಗ್ರಂಥಗಳಿದ್ದರೂ ಅವೆಲ್ಲಕ್ಕೂ ಹೆಚ್ಚಿನ ಪ್ರಾಮಾಣ್ಯ ಈ ಸ್ಮೃತಿಗೆ ಪರಂಪರಾಗತವಾಗಿ ಪ್ರಾಪ್ತವಾಗಿದೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ದೀರ್ಘ ಕಾಲಾವಧಿಯುದ್ದಕ್ಕೂ ಮನುಸ್ಮೃತಿ ಭಾರತೀಯ ಸನಾತನಧರ್ಮದ, ಜನಜೀವನದ ಆಚಾರ ವಿಚಾರಗಳ ಹಾಗೂ ಐಹಿಕ ಆಮುಷ್ಮಿಕ ನೆಲೆ ಬೆಲೆಗಳ ನಿಯಾಮಕ ಗ್ರಂಥವೆಂದು ಮನ್ನಣೆ ಪಡೆದಿದೆ. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿಯೇ ಯದ್ವೈ ಮನು ರವದತ್ ತದ್ ಭೇಷಜಂ ಎಂದರೆ ಮನು ಏನು ಹೇಳಿರುವನೊ ಅದೇ ಪರಮೌಷಧ ಎಂಬ ಭಾವನೆಯಿದ್ದುದನ್ನು ನೋಡುತ್ತೇವೆ. ಬೃಹಸ್ಪತಿ ತನ್ನ ಮನುಸ್ಮೃತಿಯಲ್ಲಿ ಮಹಿಮೆಯನ್ನು ಹೀಗೆ ಕೊಂಡಾಡುತ್ತಾನೆ:
ವೇದಾರ್ಥೋಪನಿಬದ್ಧತ್ವಾತ್ ಪ್ರಾಧಾನ್ಯಂ ಹಿ ಮನೋಃ ಸ್ಮೃತೇಃ ಮನ್ವರ್ಥವಿಪರೀತಾ ತು ಯಾ ಸ್ಮೃತಿಃ ಸಾ ನ ಶಸ್ಯತೇ
ವೇದಾರ್ಥವನ್ನು ಸರಿಯಾಗಿ ಒಳಗೊಂಡಿರುವುದರಿಂದಲೇ ಮನುಸ್ಮೃತಿಗೆ ಪ್ರಾಧಾನ್ಯ. ಇದರ ವಿರುದ್ಧವಾದ ಸ್ಮೃತಿವಾಕ್ಯ ಏನಿದ್ದರೂ ಅದಕ್ಕೆ ಬೆಲೆಯಿಲ್ಲ. ಪೌರಣಿಕರ ಸಂಪ್ರದಾಯದಂತೆ ಸ್ವಾಯಂಭುವ ಬ್ರಹ್ಮನ ಮಾನಸಪುತ್ರ. ಈತನೇ ಧರ್ಮ ಶಾಸ್ತ್ರಸಾರವನ್ನು ಮರೀಚೆ, ಭೃಗು ಮುಂತಾದ ಗುರು ಶಿಷ್ಯಪರಂಪರೆಯಲ್ಲಿ ಪ್ರಚಾರಕ್ಕೆ ತಂದವ. ಈಗ ಉಪಲಬ್ಧವಿರುವ ಸಂಕಲನಕ್ಕೆ ಭೃಗುಸಂಹಿತೆಯೆಂದು ಹೆಸರು. ಕಾಲದಿಂದ ಕಾಲಕ್ಕೆ ಮನುಸ್ಮೃತಿ ರೂಪಾಂತರ ತಳೆಯುತ್ತ ಹೋಗಿರಬೇಕೆಂದು ತೋರುತ್ತದೆ. ಭಾರ್ಗವೀಯ ಮನುಸಂಹಿತೆಯಂತೆ ನಾರದೀಯ ಮನುಸಂಹಿತೆಯೂ ಉಂಟು.
ಇದು ವಿಹಿತ ಧರ್ಮಗಳ ಒಂದು ಸಂಹಿತೆ ಮಾತ್ರವಲ್ಲ. ಪ್ರಾಚೀನ ಸಾಹಿತ್ಯದ ಒಂದು ಶ್ರೇಷ್ಠ ಕೃತಿ ಎನಿಸಿದೆ. ಇದರಲ್ಲಿಯ ಶ್ಲೋಕಗಳು ಅನೇಕ ಮೌಲಿಕ ವಿಚಾರಗಳನ್ನೂ ಉದಾತ್ತ ಸದ್ಗುಣಗಳನ್ನೂ ಧ್ಯೇಯ ಧೋರಣೆಗಳನ್ನೂ ನಿರೂಪಿಸುತ್ತವೆ. ಇದರಲ್ಲಿ ಸುಭಾಷಿತಗಳನ್ನೂ ನೀತಿ ವಾಕ್ಯಗಳನ್ನೂ ಗಮನಿಸದೆ ಹೋದರೆ ಇದರ ಗುಣವಿವೇಚನೆ ಅಪೂರ್ಣವಾದಂತೆ. ಅಂಥ ಕೆಲವು ಉದಾಹರಣೆಗಳು:
ಕೂದಲು ಬೆಳ್ಳಗಾದವ ಹಿರಿಯನಲ್ಲ; ವಯಸ್ಸಿನಿಂದ ಹಿರಿಯನಾದರೂ ಬಹುಶ್ರುತನಾದವನನ್ನು ದೇವತೆಗಳು ಗೌರವಿಸುತ್ತಾರೆ. ನೋವಾಗದ ರೀತಿಯಲ್ಲಿ ಜನತೆಗೆ ಹಿತವನ್ನು ಬೋಧಿಸಬೇಕು. ಪುಣ್ಯವನ್ನು ಬಯಸುವವ ಸವಿಯಾದ ನುಡಿಗಳನ್ನು ಆಡಬೇಕು: ಅವಮಾನಹೊಂದಿದವ ಸುಖವಾಗಿ ಮಲಗಿ ಸುಖವಾಗಿಯೇ ಎದ್ದು ಲೋಕದಲ್ಲಿ ಸಂಚರಿಸಬಹುದು. ಅವಮಾನಪಡಿಸಿದವ ಮಾತ್ರ ಹಾಳಾಗುತ್ತಾನೆ. ತೃಪ್ತಿಯೇ ಸುಖದ ಮೂಲ, ಅದರ ಅಭಾವವೇ ದುಃಖ, ಸ್ವಾವಲಂಬವೇ ಸುಖ. ಕಷ್ಟಸಾಧ್ಯ ಎನಿಸಿದರೂ ಅಂತರಾತ್ಮ ಮೆಚ್ಚುವುದನ್ನೇ ಮಾಡಬೇಕು. ಎಲ್ಲ ಶುದ್ಧಿಗಿಂತ ಆರ್ಥಿಕ ಶುದ್ಧಿ ಮುಖ್ಯ : ಅವನೇ ನಿರ್ಮಾಲ, ನೀರು ಮೊದಲಾದವುಗಳಿಂದ ತೊಳೆದು ಕೊಂಡವನಲ್ಲ. ಧರ್ಮವೊಂದೇ ಮರಣದ ಅನಂತರ ಬರುವ ಜೊತೆಗಾರ. ಉಳಿದವೆಲ್ಲ ದೇಹದೊಂದಿಗೆ ಮಣ್ಣಾಗುವುವು. ಮನುಷ್ಯನಿಗೆ ಆತ್ಮವೇ ಸಾಕ್ಷಿ. ಅಂಥ ಆತ್ಮವನ್ನು ಕಡೆಗಣಿಸಬಾರದು.
ಮನುವಿನ ಧರ್ಮಶಾಸ್ತ್ರದಲ್ಲಿ ಪ್ರತಿಪಾದಿತವಾಗಿರುವ ಧರ್ಮ ಶಾಶ್ವತ ಸುಖದತ್ತ ಕರೆದೊಯ್ಯುವ ಹಿರಿಯಾಸೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಮನುಸ್ಮೃತಿ ಬೈಬಲಿಗಿಂತ ಹಿರಿದಾದುದು ಎಂದು ತತ್ವ್ವಶಾಸ್ತ್ರಜ್ಞ ನೀಚೆ ಹೇಳಿದರೆ ಕೀತ್ ಹೀಗೆ ಹೇಳುತ್ತಾನೆ: ಮನುಸ್ಮೃತಿ ಒಂದು ಧರ್ಮಶಾಸ್ತ್ರವೆಂಬ ದೃಷ್ಟಿಯಿಂದ ಮಾತ್ರ ಮಹತ್ತ್ವ ಪಡೆದಿಲ್ಲ. ಜೀವನದ ಒಂದು ತತ್ತ್ವಜ್ಞಾನವನ್ನು ಅಭಿವ್ಯಕ್ತಗೊಳಿಸಿದೆ ಎಂಬ ದೃಷ್ಟಿಯಿಂದ ಅದಕ್ಕೆ ಮಹತ್ತ್ವ ಬಂದಿದೆ. ಮನುಸ್ಮೃತಿಯಲ್ಲಿ ಜನತೆಯ ಜೀವಾಳವನ್ನೇ ಕಾಣುತ್ತೇವೆ. ಬೃಹಸ್ಪತಿ ತನ್ನ ಸ್ಮೃತಿಯಲ್ಲಿ ಹೀಗೆ ಹೇಳಿದ್ದಾನೆ: ಧರ್ಮಾರ್ಥ ಬೋಧಕನಾದ ಮನು ಪ್ರವೇಶ ಮಾಡುವತನಕ ಮಾತ್ರ ಉಳಿದ ಶಾಸ್ತ್ರಗಳು ಮೆರೆದಾಡಬಹುದು.
ಮನುಸ್ಮೃತಿಯ ಲೇಖಕನ ಹಾಗೂ ಅವನ ಕಾಲದ ಬಗೆಗೆ ಆಧುನಿಕ ಸಂಶೋಧಕ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಸಂಹಿತೆಗೆ ಮೂಲ ಮಾನವಶಾಖೆಯ ಒಂದಾನೊಂದು ಧರ್ಮಸೂತ್ರವಾಗಿದ್ದಿರಬೇಕೆಂದೂ ಅದೀಗ ನಷ್ಟವಾಗಿದೆಯೆಂದೂ ಬುಹ್ಲರ್ ಮುಂತಾದ ಪಾಶ್ಚಾತ್ಯ ವಿದ್ವಾಂಸರು ವಾದಿಸುತ್ತಾರೆ. ಆದರೆ ಈ ವಾದದಲ್ಲಿ ಹುರುಳಿಲ್ಲವೆಂಬುದನ್ನು ಮಹಮಹೋಪಾಧ್ಯಾಯ ಪಿ.ವಿ ಕಾಣೆ ಅವರು ಧರ್ಮಶಾಸ್ತ್ರದ ಇತಿಹಾಸದಲ್ಲಿ ಕೂಲಂಕೂಷವಾಗಿ ತೋರಿಸಿಕೊಟ್ಟಿದ್ದಾರೆ. ನಿರುಕ್ತ, ಮಹಾಭಾರತ, ಪುರಾಣಗಳಲ್ಲಿ ಮನುರಬ್ರವೀತ್ ಅಥವಾ ಮನುವಿನ ವಚನವೆಂದು ನಿರ್ದೇಶ ಬರುವ ಅನೇಕ ಅವತರಣಿಕೆಗಳಲ್ಲಿ ಕೆಲವೊಂದು ಮಾತ್ರ ಉಪಲಬ್ಧ ಮನುಸ್ಮೃತಿಯಲ್ಲಿ ಕಾಣಬರುತ್ತವೆ; ಮಿಕ್ಕವೆಷ್ಟೋ ಕಾಣಿಸುವುದಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದ ವೇಳೆಗೆ ಮಾನವಾಃ ಎಂಬ ಧರ್ಮಚಿಂತಕರ ಉಲ್ಲೇಖವಿದೆ. ಒಟ್ಟಿನಲ್ಲಿ ಮೇಲೆ ಕ್ರಿಸ್ತಪೂರ್ವದಷ್ಟು ಪ್ರಾಚೀನವಿರಬಹುದಾದ ಮನು ಬರೆದನೆಂದು ಭಾವಿಸಲಾಗುತ್ತಿದ್ದ, ವಚನಗಳ ಆಧಾರದ ಮೇಲೆ ಕ್ರಿಸ್ತಶಕ ಎರಡನೆಯ ಶತಮಾನದ ವೇಳೆಗೆ ನೂತನ ವಿಷಯಗಳನ್ನು ಕೂಡಿಸಿಕೊಂಡು ರಚಿತವಾಗಿರಬಹುದಾದ ರಚನೆಯೇ ಮನುಸ್ಮೃತಿ ಎಂದು ಇಂದಿನ ವಿದ್ವಾಂಸರ ತೀರ್ಮಾನ. ಈಗಿನ ಮನುಸ್ಮೃತಿಯಲ್ಲಿ ಯವನ, ಶಕ, ಕಂಬೋಜ, ಚೀನ ಮುಂತಾದ ಉಲ್ಲೇಖಗಳು ಬರುವುದೇ ಈ ನಿರ್ಣಯಕ್ಕೆ ಪೋಷಕವಾದ ಐತಿಹಾಸಿಕ ಆಧಾರ. ಮನುಸ್ಮೃತಿಯ ಕೆಲವು ಪ್ರಯೋಗಗಳು ಅಪಾಣಿನೀಯವಿರುವುದು ಕೆಲವೊಮ್ಮೆ ಪಾಣಿನೀ ವ್ಯಾಕರಣಾನುಸಾರ ಪೂರ್ವಪಾಠಗಳನ್ನು ತಿದ್ದಿರುವಂತೆ ಕಾಣುವುದೂ ಮೇಲಿನ ನಿರ್ಣಯವನ್ನೇ ಸಮರ್ಥಿಸುತ್ತವೆ.
ಈಗಿನ ಮನುಸ್ಮೃತಿಯಲ್ಲಿ ಅಧ್ಯಾಯಗಳು ಒಟ್ಟು 2,694 ಶ್ಲೋಕಗಳೂ ಇವೆ. ಮನು ನಿರೂಪಿಸಿರುವ ವಿಷಯಗಳ ವ್ಯಾಪ್ತಿ ಹೀಗಿದೆ:
1. ಬ್ರಹ್ಮನ ಉತ್ಪತ್ತಿ ಮತ್ತು ಪ್ರಪಂಚ ಸೃಷ್ಟಿಯ ವಿಚಾರ, ಚಾತುರ್ವಣ್ಯಗಳ ಉತ್ಪತ್ತಿ, ಮನ್ವಂತರಗಳು, ಚತುರ್ಯುಗಗಳು, ಆಯಃಪ್ರಮಾಣ, ಚಾತುರ್ವಣ್ಯಗಳ ವಿಹಿತ ಕರ್ಮಗಳು.
2. ಧರ್ಮದ ಸಾಮಾನ್ಯ ಲಕ್ಷಣವನ್ನು ಮನು ನಾಲ್ಕು ರೀತಿಯಲ್ಲಿ ವಿವರಿಸಿದ್ದಾನೆ:
ವೇದಃಸ್ಮೃತಿ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ ಏತಚ್ಚತುರ್ವಿಧಂ ಪ್ರಾಹುಃ ಸಾಕ್ಷಾದ್ಧರ್ಮಸ್ಯ ಲಕ್ಷಣಂ
ಎಂದರೆ ವೇದ, ಸ್ಮೃತಿ, ಸಜ್ಜನರ ಆಚರಣೆ, ತನ್ನ ಆತ್ಮಸಂತೋಷ ಈ ನಾಲ್ಕು ಧರ್ಮದ (ಸ್ವರೂಪದ) ಲಕ್ಷಣಗಳು. ಭಾರತ ದೇಶವೇ ಧರ್ಮಭೂಮಿ. ಧಮಾಚರಣೆಯ ಪಾಠವನ್ನು ಈ ದೇಶದ ಜನರಿಂದಲೇ ಪ್ರಪಂಚದ ಎಲ್ಲ ಮಾನವರೂ ಕಲಿಯುವಂತಿರುತ್ತದೆ.
ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ
ಗರ್ಭಾದಾನ ಇತ್ಯಾದಿ 16 ಸಂಸ್ಕಾರಗಳು, ವೇದಾಧ್ಯಯನ ವಿಧಿ, ಪ್ರಣವ ಪ್ರಶಂಸೆ, ಆಚಾರ್ಯ, ಉಪಾಧ್ಯಾಯ, ಗುರುಗಳ ಪ್ರಶಂಸೆ, ವಾಣಿಯ ಪ್ರಶಂಸೆ, ಗುರು ಶುಶ್ರೂಷೆ, ಮಾತಾಪಿತೃ ಸೇವೆ ಇತ್ಯಾದಿಗಳ ಪ್ರಶಂಸೆ.
3. ಗೃಹಸ್ಥಾಶ್ರಮ ಪ್ರಶಂಸೆ, ಕನ್ಯಾ ಲಕ್ಷಣ ಪ್ರಶಂಸೆ, ಸವರ್ಣ ಸ್ತ್ರೀ ಪ್ರಶಂಸೆ, ವಿವಾಹ ಪ್ರಶಂಸೆ, ಎಂಟು ಬಗೆಯ ವಿವಾಹವಿಧಿಗಳು, ಕನ್ಯಾವಿಕ್ರಯದೋಷ, ಸಾಲಂಕೃತ ಕನ್ಯಾದಾನ, ಪಂಚಮಹಾ ಯಜ್ಞಗಳು, ನಿತ್ಯಶ್ರಾದ್ಧ ಇತ್ಯಾದಿಗಳ ವಿವರಣೆ.
4. ಜೀವನೋಪಾಯಗಳು, ಸಂತೋಷ ಪ್ರಶಂಸೆ, ಸೋಮಾದಿಯಾಗಗಳು, ಸ್ವಾಧ್ಯಾಯ, ಅನಧ್ಯಾಯ, ಆತ್ಮಗೌರವ, ಸದಾಚಾರಗಳ ಪ್ರಶಂಸೆ, ಪರಾಧೀನ ಸೇವೆಯ ನಿಂದೆ, ಸುಖದುಃಖಗಳ ವಿವೇಚನೆ, ಅನ್ನದಾನ ಪ್ರಶಂಸೆ ಇತ್ಯಾದಿ.
ಸರ್ವಂ ಪರವಶಂ ದುಃಖಂ ಸರ್ವಮಾತ್ಮವಶಂ ಸುಖಂ
ಇನ್ನೊಬ್ಬರ ಅಧೀನವಾಗಿರುವುದೇ ದುಃಖ, ಸ್ವಾತಂತ್ರ್ಯವೇ ಸುಖ. ಅಧರ್ಮ, ಹಿಂಸೆ, ಅನ್ಯಾಯದಿಂದ ದುಡ್ಡು ಮಾಡಿದವ ಎಂದೂ ಸುಖವಾಗಿ ಬಾಳಲಾರ ಎಂಬುದು ಮನುವಿನ ಸಿದ್ಧಾಂತ.
ಅಧಾರ್ಮಿಕೋ ನರೋ ಯೋ ಹಿ ಯಸ್ಯ ಚಾಪ್ಯನೃತಂ ಧನಂ ಹಿಂಸಾರತಶ್ಚ ಯೋ ನಿತ್ಯಂ ನೇಹಾಸೌ ಸುಖ ಮೇಧತೇ
5. ಮಾಂಸದಲ್ಲಿ ಭಕ್ಷ ಅಭಕ್ಷ್ಯಗಳು : ಸಪಿಂಡರ ವಿಚಾರ, ಆಶೌಚ ನಿರ್ಣಯ, ಸ್ತ್ರೀ ಧರ್ಮಗಳು.
6. ವಾನಪ್ರಸ್ಥಾಶ್ರಮದ ನಿಯಮಗಳು, ಫಲಮೂಲಗಳ ಆಹಾರ, ಪಂಚಯಜ್ಞಗಳು, ಅತಿಥಿಚರ್ಯೆ, ಸಂನ್ಯಾಸಿಯ ಧರ್ಮಗಳು, ಧ್ಯಾನಯೋಗ, ಮೋಕ್ಷಸಾಧಕ ಕರ್ಮಗಳು ಇತ್ಯಾದಿಗಳ ವಿವರಣೆ.
7. ರಾಜಧರ್ಮ, ರಾಜಪ್ರಶಂಸೆ, ದಂಡನೀತಿ ಪ್ರಶಂಸೆ, ರಾಜಕೃತ್ಯಗಳು, ಸಚಿವ, ದೂತ, ಸೇನಾಪತಿ, ಪುರೋಹಿತರ ವಿವೇಚನೆ, ದುರ್ಗರಕ್ಷಣೆ, ಕರಗ್ರಹಣ, ಸಂಧಿ ವಿಗ್ರಹಾದಿ ಕರ್ತವ್ಯ, ಮಿತ್ರರ ಗುಣಗಳು ಇತ್ಯಾದಿಗಳ ವಿವರಣೆ.
8. ವ್ಯವಹಾರಗಳು, 18 ರೀತಿಯ ವಿವಾದಗಳು. ಸಾಕ್ಷಿಗಳು, ಸತ್ಯಪ್ರಶಂಸೆ, ಅಸತ್ಯದಪಾಪ, ಶಪಥ, ಗಡಿ ವ್ಯಾಜ್ಯಗಳು, ವಾಕ್ಪಾರುಷ್ಯಕ್ಕೆ ದಂಡ, ವಿಕ್ರೇಯ ವಸ್ತುಗಳ ವ್ಯವಹಾರ, 17 ಪ್ರಕಾರದ ದಾಸರು, ಆಯವ್ಯಯ ವಿವೇಚನೆ.
9. ಸ್ತ್ರೀರಕ್ಷಣೆ, ಸ್ತ್ರೀ ಸ್ವಭಾವ, ಸ್ತ್ರೀ ಧರ್ಮ, ದಾಯಭಾಗ, ಸ್ತ್ರೀಧನ, ಆಸ್ತಿಹಂಚಿಕೆ, ವಿವಿಧ ಅಪರಾಧಗಳಿಗೆ ದಂಡನೆ, ಬ್ರಹ್ಮ ಕ್ಷೇತ್ರಗಳ ಪರಸ್ಪರ ಸಹಕಾರದ ಅಗತ್ಯ ಇತ್ಯಾದಿಗಳ ವಿವರಣೆ.
10. ವರ್ಣಸಂಕರ, ವ್ರಾತ್ಯ, ದಸ್ತು, ಚಂಡಾಲ, ತ್ರೈ ವರ್ಣಿಕರ ಕರ್ತವ್ಯಗಳು, ಆಪದ್ಧರ್ಮ, ಪರಧರ್ಮದಿಂದ ಜೀವಿಕೆ ಮಾಡುವುದಕ್ಕೆ ನಿಷೇಧ, ಧನಾರ್ಜನೆಯ ಏಳು ಪ್ರಕಾರಗಳು, ಹತ್ತು ಜೀವನವೃತ್ತಿಗಳು ಇತ್ಯಾದಿ.
11. ಸ್ನಾತಕರ ಪ್ರಕಾರಗಳು. ಸೋಮಯಾಗಕ್ಕೆ ಅಧಿಕಾರಿ, ದೇವಬ್ರಾಹ್ಮಣರ ವಿತ್ತಾಪಹಾರಕ್ಕೆ ಪ್ರಾಯಶ್ಚಿತ್ತ, ಪಂಚಮಹಾಪಾತಕಗಳು, ಸುರಾಪಾನಕ್ಕೆ ಪ್ರಾಯಶ್ಚಿತ್ತ, ಪ್ರಾಜಾಪತ್ಯಾದಿ ವ್ರತಗಳು ಇತ್ಯಾದಿ.
12. ಶುಭಾಶುಭ ಕರ್ಮಗಳಿಗೆ ಫಲಗಳು. ತ್ರಿವಿಧ ಮಾನಸ ಕರ್ಮಗಳು. ಚತುರ್ವಿಧ ವಾಚಿಕ ಕರ್ಮಗಳು. ತ್ರಿವಿಧ ಶಾರೀರಿಕ ಕರ್ಮಗಳು ಕ್ಷೇತ್ರಜ್ಞ, ಜೀವಾತ್ಮ, ತ್ರಿಗುಣಲಕ್ಷಣ, ಮೋಕ್ಷಪ್ರಾಪ್ತಿ,
ಸಾಮಾನ್ಯವಾಗಿ ಭಾರತೀಯ ರಾಜರೆಲ್ಲ ಮನುವಿನ ರಾಜನೀತಿಯನ್ನೇ ಮೇಲ್ಪಂಕ್ತಿಯಾಗಿಟ್ಟುಕೊಂಡು ರಾಜ್ಯ ನಡೆಸುತ್ತಿದ್ದುದನ್ನು ಭಾರತೀಯ ಪ್ರಾಚೀನ ಶಿಲಾಶಾಸನಗಳು ಸಾರುತ್ತವೆ: ಸಾಹಿತ್ಯವೂ ಎತ್ತಿತೋರಿಸುತ್ತದೆ. ಮನುವಿನ ಸಿದ್ಧಾಂತದಂತೆ ರಾಜ್ಯಕ್ಕೆ ಸ್ವಾಮಿ, ಅಮಾತ್ಯ, ಪುರ, ರಾಜ್ಯ, ಕೋಶ, ದಂಡ ಮತ್ತು ಮಿತ್ರ ಎಂದು ಸಪ್ತಾಂಗಗಳಿರುತ್ತವೆ, ಮನು ಇವನ್ನೇ ಸಪ್ತಪ್ರಕೃತಿಗಳೆನ್ನುತ್ತಾನೆ. ಇವುಗಳ ಪರಸ್ಪರ ಸಹಕಾರದಿಂದ ಮಾತ್ರ ರಾಜ್ಯಭಾರಕ್ಕೆ ಸ್ಥೈರ್ಯ ಲಭಿಸುತ್ತದೆ. ಇವುಗಳಲ್ಲಿ ಒಂದು ಇನ್ನೊಂದಕ್ಕಿಂತ ಹೆಚ್ಚೆನ್ನುವಂತಿಲ್ಲ.
ರಾಜತ್ವಕ್ಕೆ ದೈವೀವ್ಯುತ್ಪತ್ತಿಯನ್ನು ಮನು ಹೇಳಿದ್ದಾನೆ. ರಾಜನೆಂದರೆ ಇಂದ್ರ, ವಾಯು, ಯಮ, ಸಾರ್ಯ, ಅಗ್ನಿ, ವರುಣ, ಚಂದ್ರ, ಕುಬೇರ ಈ ದೇವತಾಂಶಗಳ ಕೇಂದ್ರವೆಂದೇ ಅವನ ಕಲ್ಪನೆ. ಆದ್ದರಿಂದ ಪ್ರಜೆಗಳು ಎಂದೂ ರಾಜನಿಗೆ ವಿರೋಧ ಸೂಚಿಸುವಂತಿಲ್ಲ. ಧರ್ಮಕ್ಕೆ ಚ್ಯುತಿಬಾರದಂತೆ ಪ್ರಜೆಗಳನ್ನು ಸಂರಕ್ಷಿಸುತ್ತ ದಂಡಪ್ರಯೋಗ ಮಾಡುವುದು ರಾಜನ ಕರ್ತವ್ಯ. ದಂಡವೇ ಸರ್ವ ರಕ್ಷಕವೆಂದು ಮನುವಿನ ಸಿದ್ಧಾಂತ.
ರಾಜ ಮನಸ್ವಿಯಾಗಿ ಅಧಿಕಾರ ನಡೆಸದಂತೆ ಅವನಿಗೆ ಅಂಕುಶಪ್ರಾಯವಾದ ಮಂತ್ರಿ ಪರಿಷತ್ತನ್ನು ಮನು ಹೇಳಿದ್ದಾನೆ. ಈ ಪರಿಷತ್ತಿನಲ್ಲಿ ಏಳೆಂಟು ಜನರಿರಬೇಕೆಂದು ವಿಧಿಸಿದ್ದಾನೆ. ಇವೆರೆಲ್ಲರೂ ಅಭಿಜ್ಞರೂ ನಿಪುಣರೂ ರಾಜನೀತಿ ಪಾರಂಗತರೂ ಆಗಿರಬೇಕೆನ್ನುತ್ತಾನೆ.
ಕಾಯಿದೆಯ ಮತ್ತು ನ್ಯಾಯವಿಚಾರಣೆಯ ವಿಷಯದಲ್ಲಿಯೂ ಮನುವಿನ ವಿಚಾರಗಳು ಮನವೀಯವಿರುವುವಲ್ಲದೆ ಭಾರತೀಯ ನ್ಯಾಯಾಲಯಗಳಲ್ಲಿ ಮನ್ನಣೆಗೂ ಪಾತ್ರವಾಗುತ್ತಿವೆ. ಸಾಲ, ಸ್ವಾಮಿತ್ವ, ವಿಕ್ರಯ, ಭಾಗೀದಾರಿ, ವೇತನ, ಪ್ರತಿಜ್ಞಾಭಂಗ, ಕ್ರಯವಿಕ್ರಯ, ಗಡಿವಿವಾದ, ಹೊಡೆದಾಟ, ಬಡಿದಾಟ, ಕಳ್ಳತನ, ದರೋಡೆ, ಸ್ತ್ರೀಯರ ಅಪಹರಣ, ದಾಯಭಾಗ ಮುಂತಾದ ಹದಿನೆಂಟು ವ್ಯವಹಾರಗಳ ವಿಷಯದ ಮೇಲೆ ನ್ಯಾಯಾಲಯದಲ್ಲಿ ಹೇಗೆ ನ್ಯಾಯವಿಚಾರಣೆ ನಡೆಯಬೇಕೆಂಬುದನ್ನು ಮನು ಮಾರ್ಮಿಕವಾಗಿ ವಿವರಿಸಿದ್ದಾನೆ. ಮನು ನ್ಯಾಯಾಲಯಕ್ಕೆ ಧರ್ಮಸಭೆ ಎನ್ನುತ್ತಾನೆ. ರಾಜನೇ ಅದರ ಅಧ್ಯಕ್ಷನಾದಾಗ ಅವನಿಗೆ ಧರ್ಮಾಧ್ಯಕ್ಷನೆಂದು ಹೆಸರು. ವಾದಿ, ಪ್ರತಿವಾದಿ, ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿ ನ್ಯಾಯನಿರ್ಣಯದಲ್ಲಿ ರಾಜನಿಗೆ ಸಹಕರಿಸಲು ಪ್ರಾಡ್ವಿವಾಕ ಎಂಬ ನ್ಯಾಯಾಧೀಶರಿರುತ್ತಿದ್ದರು.
ರಾಜ್ಯಭಾರ ಸರಿಯಾಗಿ ನಡೆಯಲು, ಪ್ರಜಾಹಿತದ ಕಾರ್ಯ ಸತತವಾಗಿ ಸಾಗಲೂ ಬೇಕಾಗುವ ಬೃಹತ್ಪ್ರಮಾಣದ ಹಣವನ್ನು ರಾಜ ಹೇಗೆ ಸಂಪಾದಿಸಬೇಕು, ಬೊಕ್ಕಸಕ್ಕೆ ನಿಧಿ ಕೂಡಿಸುವ ತೆರಿಗೆಯ ಪ್ರಕಾರಗಳೇನು ಇವೆಲ್ಲವನ್ನೂ ಮನು ವಿವರಿಸಿದ್ದಾನೆ.
ನಗರ ರಕ್ಷಣೆಗಾಗಿಯೇ ಅಧಿಕಾರಿವರ್ಗದವರಿರಬೇಕೆಂಬೂದನ್ನೂ ನಿರೂಪಿಸಿದ್ದಾನೆ. ಮನುವಿನ ಕಾಲದಲ್ಲಿ ವರ್ಣಾಶ್ರಮಧರ್ಮ ಪ್ರತಿಷ್ಠಿತವಾಗಿದ್ದುದನ್ನು ಕಾಣುತ್ತೇವೆ. ಅನಾರ್ಯರ ವರ್ತನೆಯಿಂದ ಆರ್ಯಸಂಸ್ಕೃತಿಯನ್ನು ಪ್ರತ್ಯೇಕಿಸಿ ಅದರ ರೂಪರೇಷೆಯನ್ನು ಅಮೂಲಾಗ್ರವಾಗಿ ಒದಗಿಸಿರುವ ಕೀರ್ತಿ ಮನುವಿನದಾಗಿದೆ.
ಮನುಸ್ಮೃತಿಯ ವಚನಗಳನ್ನು ಹೇರಳವಾಗಿ ಮುಂದಿನ ಇತರ ಸ್ಮೃತಿಗಳು ಉಲ್ಲೇಖಿಸಿ ಅದರ ಮಹಿಮೆಯನ್ನು ಸೂಚಿಸುತ್ತವೆ. ಭಾರತೀಯರು ವಲಸೆ ಹೋದ ಕಂಬೋಜ, ಜಾವ ಮುಂತಾದ ದೂರಪ್ರಾಚ್ಯ ದೇಶಗಳಲ್ಲಿ ಕೂಡ ಮನು ಧರ್ಮಶಾಸ್ತ್ರಕ್ಕೆ ರಾಜ್ಯಭಾರ ಕ್ರಮದಲ್ಲಿ ಹಾಗೂ ವ್ಯವಹಾರ ನಿರ್ಣಯದಲ್ಲಿ ಪ್ರಾಶಸ್ತ್ಯವಿತ್ತೆಂಬುದನ್ನು ಸೂಚಿಸುವ ಶಾಸನಗಳು ದೊರೆತಿವೆ.
ಮನಸ್ಮೃತಿ ಬಲು ವಿಖ್ಯಾತವಾದ ಧರ್ಮಶಾಸ್ತ್ರ ಗ್ರಂಥವಾದ್ದರಿಂದ ಅದರ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಟೀಕೆಗಳೂ ರಚಿತವಾಗಿದೆ. ಮನುಸ್ಮೃತಿಯ ಮೇಲಿನ ಟೀಕೆಗಳಲ್ಲಿ ಮೇಧಾತಿಥಿ, ಗೋವಿಂದರಾಜ, ಕುಲ್ಲೂಕ, ನಾರಾಯಣ, ರಾಘವಾನಂದ, ನಂದನ, ರಾಮಚಂದ್ರ, ಇವರು ರಚಿಸಿದವು ಉಲ್ಲೇಖನೀಯವಾಗಿದೆ. ಭಾರತದ ಪ್ರತಿಯೊಂದು ಪ್ರದೇಶದಲ್ಲೂ ಮನುಸ್ಮೃತಿ ಮೇಲಿಂದ ಮೇಲೆ ಮುದ್ರಿತವಾಗಿ ಅನೇಕ ಸಂಸ್ಕರಣಗಳನ್ನು ಹೊಂದಿದೆ. ನ್ಯಾಯಾಲಯಗಳ ಉಪಯೋಗವೂ ಮನುಸ್ಮೃತಿಗಿದ್ದುದರಿಂದ ಇವಕ್ಕೆ ಅನೇಕ ಇಂಗ್ಲೀಷ್ ಹಾಗೂ ದೇಶಭಾಷೆಗಳ ಭಾಷಾಂತರಗಳೂ ದೊರೆಯುತ್ತವೆ. ಸ್ವತಂತ್ರ ಭಾರತದಲ್ಲಿಯೂ ಹಿಂದೂ ಕಾಯಿದೆಯ ಕೆಲವಂಶಗಳ ಸಮಗ್ರ ಕಲ್ಪನೆಗೆ ಮನುಸ್ಮೃತಿಯ ಪರಿಚಯ ಅಗತ್ಯ ಎನಿಸುತ್ತದೆ.
ಮನುಸ್ಮೃತಿ ಬಗ್ಗೆ ವಿಖ್ಯಾತ ದಾರ್ಶನಿಕ ಫ್ರೆಡರಿಕ್ ನೀಷೆ ತನ್ನ "ದಿ ಟ್ವೆಲೈಟ್ ಒಫ಼್ ದಿ ಐಡಲ್ಸ್" (The twilight of the Idols) ಎಂಬ ಪುಸ್ತಕದಲ್ಲಿ ಬರೆದಿರುವ ಅಭಿಪ್ರಾಯ ಉಲ್ಲೇಖನೀಯವಾಗಿದೆ. " ಮನುಸ್ಮೃತಿಯಂತಹ ಧರ್ಮಶಾಸ್ತ್ರ ಗ್ರಂಥವು ಶತಶತಮಾನಗಳ ಉದ್ದಕ್ಕೂ ಬೆಳೆದು ಬಂದ ಅನುಭವ,ವಿವೇಕ,ನೀತಿ ನಿಷ್ಠೆಗಳ ಪ್ರಯೋಗದ ಸಾರಾಂಶ. ಅದು ಕಲ್ಪಿಸಿಕೊಟ್ಟಿರುವುದು ಕೇವಲ ಸಮಯಾನುಕೂಲವಾದ ಉಪಾಯಗಳನ್ನಲ್ಲ, ಅಂತಿಮ ತೀರ್ಮಾನಗಳನ್ನು... ಒಂದು ಜನಾಂಗದ ಬೆಳವಣಿಗೆಯ ಈ ಒಂದು ಘಟ್ಟದಲ್ಲಿ ಅತ್ಯಂತ ಮಾರ್ಮಿಕ ದೃಷ್ಟಿಯುಳ್ಳ ಈ ಗ್ರಂಥವು ಜನತೆಯು ಹೇಗೆ ಬಾಳಬೇಕೆಂದು ವಿಧಿಸುವ ಲೋಕಾನುಭವದ ತೀರ್ಪನ್ನ ಕೊಡುತ್ತದೆ.ಅಂದರೆ, ಯಾವ ಅನುಭವವನ್ನು ಅನುಸರಿಸುವುದರಿಂದ ಮಾತ್ರವೇ ಜನತೆಯು ಉಳಿಯಬಲ್ಲುದೋ ಅದನ್ನು ಇಲ್ಲಿ ಅಂತಿಮವಾಗಿ ತೀರ್ಮಾನಿಸಲಾಗಿದೆ...ಮನುಸ್ಮೃತಿಯಂತಹ ಧರ್ಮಶಾಸ್ತ್ರಗ್ರಂಥವೊಂದನ್ನು ರಚಿಸುವುದೆಂದರೆ- ಒಂದು ಜನಾಂಗವು ಇನ್ನು ಮುಂದೆ ಮೇಲುಗೈಯಾಗಲು,ಪರಿಪೂರ್ಣತೆಯನ್ನು ಪಡೆಯಲು,ಅತ್ಯುನ್ನತ ಬಾಳನ್ನು ಬದುಕುವ ಕಲೆಯನ್ನು ಕಲಿಯುವ ಮಹದಾಶೆಯನ್ನುತಳೆಯಲು ಅವಕಾಶ ಕಲ್ಪಿಸಿಕೊಡುವುದು ಎಂದರ್ಥ. ವರ್ಣಗಳ ಈ ವ್ಯವಸ್ಥೆಯು ಶ್ರೇಷ್ಠತಮವಾದೊಂದು ಮೂಲಭೂತ ನಿಯಮ, ನಿಸರ್ಗವೇ ಅನುಮೋದಿಸಿದ ನಿಯಮ,ಅತ್ಯುನ್ನತ ಮಟ್ಟದ ನೈಸರ್ಗಿಕ ನ್ಯಾಯ. ಇದರಲ್ಲಿ ಯಾವುದೇ ಬಗೆಯ ಸ್ವಚ್ಛಂದತೆ, ಯಾವುದೇ ರೀತಿಯ "ಆಧುನಿಕ ಭಾವನೆಯ" ಕಾರುಬಾರೂ ಇಲ್ಲ. ಸುಭದ್ರವಾದ ಪ್ರತಿಯೊಂದು ಸಮಾಜದಲ್ಲೂ ಪರಸ್ಪರ ಪ್ರಭಾವ ಬೀರುವ,ಆದರೆ ದೈಹಿಕವಾಗಿ ಬೇರೆಬೇರೆ ಸೆಳವುಗಳಿಗೆ ಸಿಕ್ಕಿ ಪ್ರತ್ಯೇಕಗೊಳ್ಳುವ ಮೂರು ಬಗೆಯ ಜನ ಇರುತ್ತಾರೆ.ಒಂದೊಂದು ಬಗೆಯವರಿಗೂ ತಮ್ಮದೇ ಆದ ಕ್ಶೇಮಲಾಭ, ತಮ್ಮದೇ ಆದ ಪರಿಶ್ರಮಕ್ಷೇತ್ರ,ತಮಗೇ ವಿಶಿಷ್ಟವಾದ ಪರಿಪೂರ್ಣತಾ ಭಾವನೆ, ತಮಗೇ ವಿಶಿಷ್ಟವಾದ ಶ್ರೇಷ್ಟತೆ-ಇವೆಲ್ಲ ಇರುತ್ತದೆ.ಬುದ್ಧಿ ಪ್ರಧಾನರಾದವರು, ದೇಹಬಲ,ಮನೋಬಲವುಳ್ಳವರು,ಮತ್ತು ಅದೂ ಇಲ್ಲ ಇದೂ ಇಲ್ಲ ಎಂಬ ಕೇವಲ ಸಾಮಾನ್ಯರಾದ ಮೂರನೆಯವರು. ಈ ವರ್ಗಗಳಲ್ಲಿ ಒಂದರಿಂದ ಒಂದನ್ನು ಬೇರ್ಪಡಿಸಿರುವುದು ನಿಸರ್ಗವೇ ಹೊರತು ಮನುವಲ್ಲ;ಕೊನೆಯ ವರ್ಗಕ್ಕೆ ಸೇರಿದವರೇ ಹೆಚ್ಚು ಸಂಖ್ಯೆಯಲ್ಲಿರುತ್ತಾರೆ."[೨]
ಮನ್ವಂತರದ ಪರಿಕಲ್ಪನೆಗೂ, ದೇಶದ ರಾಜಕೀಯ ವ್ಯವಸ್ಥೆಗೂ ಸಂಬಂಧವಿದೆ. ಒಂದು ನಿರ್ಧಿಷ್ಟ ಅವಧಿಯವರೆವಿಗೂ ಒಂದು ನಿಯೋಗದ ಕೈಯಲ್ಲಿ ಪ್ರಭುತ್ವ ಇರುತ್ತದೆ. ಈ ನಿಯೋಗದ ಅಧಿಕಾರಿ ಮನು. ಇವರೊಂದಿಗೆ ಸಪ್ತರ್ಷಿಗಳು ,ಸ್ವರ್ಗಲೋಕದ ಅಧಿಪತಿ ಇಂದ್ರ ಇರುತ್ತಾನೆಂದು ನಂಬುತ್ತಾರೆ. ಈ ಅವಧಿಯ ಹೆಸರೇ ಮನ್ವಂತರ ಯುಗ. ಒಬ್ಬ ಮನುವಿನ ಅವಧಿ ಮುಗಿದ ಬಳಿಕ ಮತ್ತೊಬ್ಬ ಮನು ಅಧಿಕಾರಕ್ಕೆ ಬರುತ್ತಾನೆ. ಹೀಗೆ ಹದಿನಾಲ್ಕು ಮನ್ವಂತರಗಳಿಗೆ ಒಂದು ಕಾಲ ಚಕ್ರ ಮುಗಿಯುತ್ತದೆ. ಈಗಾಗಲೇ ಏಳು ಜನ ಮನುಗಳು ಸಂದು ಹೋಗಿದ್ದಾರೆ. ಅವರೆಂದರೆ-
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.