From Wikipedia, the free encyclopedia
ದೇಶದ ಆರ್ಥಿಕ ಅಭಿವೃದ್ಧಿಯೆಂಬುದು ಬಹಳ ಕ್ಲಿಷ್ಟವಾದ ಪ್ರಕ್ರಿಯೆಯಾಗಿದೆ. ಆರ್ಥಿಕ ಪ್ರಗತಿಯೆಂದರೆ ರಾಷ್ಟ್ರದ ನೈಜ್ಯ ಸರಕುಗಳ ಉತ್ಪಾದನೆ ಮತ್ತು ಹೆಚ್ಚಳವೆಂದು ಅರ್ಥ. ಅದರಂತೆ ರಾಷ್ಟ್ರದಲ್ಲಿಯ ಉತ್ಪಾದನೆಯ ಮೊತ್ತ ದೇಶದಲ್ಲಿ ಹಣಕಾಸಿನ ಲಭ್ಯತೆಯನ್ನು ಅವಲಂಬಿಸಿದೆ.[೧] ಆಧುನಿಕ ವ್ಯವಹಾರದ ಜಗತ್ತು ಬಂಡವಾಳ ಹೆಚ್ಚು ಹೆಚ್ಚು ಬೇಕಾಗುವಂತಹ ತಾಂತ್ರಿಕತೆಯನ್ನು, ಉತ್ಪಾದನಾ ಪದ್ಧತಿಗಳನ್ನು ಮತ್ತು ಹೂಡಿಕೆಯ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಈ ಬಂಡವಾಳವು ಉಳಿತಾಯ, ಹಣಕಾಸು ಮತ್ತು ಹೂಡಿಕೆಗಳಿಂದ ರೂಪಗೊಳ್ಳುತ್ತದೆ ಮತ್ತು ಆರ್ಥಿಕ ಚಟುವಟಿಕೆಗೆ ಲಭ್ಯವಾಗುತ್ತದೆ.
ಉಳಿತಾಯ, ಹಣಕಾಸು ಮತ್ತು ಹೂಡಿಕೆಗಳ ಮೂಲಕ ರಾಷ್ಟ್ರದ ಆರ್ಥಿಕ ಪ್ರಗತಿಯನ್ನು ವೃದ್ಧಿಗೊಳಿಸಲು ಪ್ರಯತ್ನಿಸುವ ಸಂಘಟಿತ ಕ್ರಮವೇ ಹಣಕಾಸಿನ ಪದ್ಧತಿಯಾಗಿದೆ. ಹಣಕಾಸನ್ನು ವ್ಯವಹಾರದಲ್ಲಿ 'ಜೀವರಕ್ಷಕ ರಕ್ತ'ವೆಂದು ವಿವರಿಸುತ್ತರೆ. ಹಣಕಾಸು ಒಂದು ಹಣಕಾಸಿನ ವ್ಯವಸ್ಥೆಯಿಂದ ಲಭ್ಯವಾಗುತ್ತದೆ.[೨] ಹಣಕಾಸಿನ ವ್ಯವಸ್ಥೆಯೆಂದರೆ "ಕೆಲವೊಂದು ಆರ್ಥಿಕ ಮತ್ತು ಹಣಕಾಸಿನ ಚಟುವಟಿಕೆಗಳು ವ್ಯವಸ್ಥಿತವಾಗಿ ಜೋಡಿಸಿದ, ಜಂಟಿಯಾಗಿ ಸಂಯೋಜಿತಗೊಂಡು ನಿರ್ವಾಹಣೆಗೊಳ್ಳುತ್ತಿರುವ ಸಂಘಟನೆಯಾಗಿದೆ".
ಹಣಕಾಸಿನ ವ್ಯವಸ್ಥೆಯು ದೇಶದ ಆರ್ಥಿಕ ಪ್ರಗತಿಯಲ್ಲಿ ಅತಿ ಮಹತ್ವದ ಪಾತ್ರವನ್ನು ವಹಿಸುತ್ತದೆ.[೩] ಅವೆರಡೂ ಸಕಾರಾತ್ಮಕವಾಗಿ ನೇರವಾದ ಸಂಬಂಧವನ್ನು ಹೊಂದಿವೆ. ಇದರ ಅರ್ಥ, ಹಣಕಾಸಿನ ವ್ಯವಸ್ಥೆಯು ದಕ್ಷವಾಗಿದ್ದರೆ, ಆರ್ಥಿಕ ಅಭಿವೃದ್ಧಿಯು ಅತಿ ಗರಿಷ್ಠ ವೇಗದಲ್ಲಿ ಸಾಗುತ್ತದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಲ್ಲಿ ಅತ್ಯಂತ ದಕ್ಷ ರೀತಿಯ ಮತ್ತು ವ್ಯವಸ್ಥಿತವಾಗಿ ಕಾರ್ಯಗೈಯ್ಯುವ ಹಣಕಾಸಿನ ವ್ಯವಸ್ಥೆಯು ಕಾರ್ಯರೂಪದಲ್ಲಿ ಇರುವುದನ್ನು ಕಾಣುತ್ತೇವೆ. ಈ ಹಣಕಾಸಿನ ವ್ಯವಸ್ಥೆಯ ಮುಖ್ಯ ಉದ್ದೇಶವೇನೆಂದರೆ ಉಳಿತಾಯಗಾರರು, ಹೂಡಿಕೆದಾರರು ಮತ್ತು ಹಣಕಾಸು ನಡುವೆ ಸಂಬಂಧ ಕಲ್ಪಿಸುವುದು. ಈ ಮೂರು (ಉಳಿತಾಯ, ಹಣಕಾಸು, ಹೂಡಿಕೆ) ಎಷ್ಟೊಂದು ವೇಗವಾಗಿ ಚಲಿಸುತ್ತವೆಯೋ ಅಷ್ಟೇ ತೀವ್ರಗತಿಯಲ್ಲಿ ಆರ್ಥಿಕ ಪ್ರಗತಿಯು ಸಾಗುತ್ತದೆ. ಅವುಗಳ ಗತಿಯೇ ಆರ್ಥಿಕ ಪ್ರಗತಿಯ ಗತಿಯನ್ನು ನಿರ್ಧರಿಸುತ್ತದೆ ಮತ್ತು ಸೂಚಿಸುತ್ತದೆ, ಒಂದು ದಕ್ಷ ಹಣಕಾಸಿನ ವ್ಯವಸ್ಥೆಯ ಉದ್ದೇಶಗಳನ್ನು ಈ ರೀತಿಯಾಗಿ ಹೇಳಬಹುದು.
ಬಂಡವಾಳ ರಚನೆ: ಆರ್ಥಿಕತೆಯ ಚಕ್ರಗಳು ಚಲಿಸುವುದೇ ಬಂಡವಾಳದಿಂದ. ಬಂಡವಾಳವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಬಂಡವಾಳದ ರಚನೆ ಎಂದರೆ ಹೂಡಿಕೆಯ ಹತ್ತಾರು ಚಟುವಟಿಕೆಗಳಿಗಾಗಿ ಬೇಕಾಗುವ ನಿಧಿಯ ಸಂಗ್ರಹಣೆ ಎಂದರ್ಥ.[೪]
ಉಳಿತಾಯದ ಸಂಗ್ರಹಣೆ: ಬಂಡವಾಳದ ರಚನೆ ರೂಪುಗೊಳ್ಳುವಿಕೆಯು ಉಳಿತಾಯದ ಮೇಲೆ ನೇರವಾಗಿ ಅವಲಂಬಿತವಾಗಿದೆ. ಉಳಿತಾಯವೆಂದರೆ ಜನರ ಖರ್ಚಿಗಿಂತ ಹೆಚ್ಚಾಗಿರುವ ಆದಾಯದ ಒಂದು ಭಾಗ. ಇದರಲ್ಲಿ ಖರ್ಚನ್ನು ಮಿತಗೊಳಿಸುವುದು ಮುಖ್ಯವಾದ ವಿಷಯ.[೫]
ಹಣಕಾಸಿನ ಪೂರೈಕೆ: ಉಳಿತಾಯ ಸಂಗ್ರಹಣೆಗೆ ನಿಜವಾಗಿಯೂ ಅರ್ಥ ಬರುವುದೆಂದರೆ ಅದು ಬೇಕಾದವರಿಗೆ ಮತ್ತು ಹೂಡಿಕೆದಾರರಿಗೆ ತಲುಪಿದಾಗ ಮಾತ್ರ. ಹಣಕಾಸಿನ ವ್ಯವಸ್ಥೆಯು ಬಂಡವಾಳದ ಪೂರೈಕೆಯ ಉದ್ದೇಶವನ್ನು ಹೊಂದಿದೆ.
ಹೂಡಿಕೆಗೆ ಪ್ರವರ್ತನೆ: ಸಂಗ್ರಹಿಸಿದ ಹಣಕಾಸಿಗೆ ಅರ್ಥ ಬರಬೇಕೆಂದರೆ ಅದು ಹೂಡಿಕೆಯಾಗಿ ಪರಿವರ್ತಿತಗೊಳ್ಳಬೇಕು. ಹೂಡಿಕೆಯೆಂದರೆ ಉತ್ಪಾದನೆಯ ಚಟುವಟಿಕೆಗಳಿಗಾಗಿ ಹಣಕಾಸಿನ ಬಳಕೆಯಾಗುವುದು.
ತ್ವರಿತ ವರ್ಗಾವಣೆ: ಹಣಕಾಸಿನ ವ್ಯವಸ್ಥೆಯು ಉಳಿತಾಯ, ಹಣಕಾಸು ಮತ್ತು ಹೂಡಿಕೆಗಳ ಮೇಲೆ ನಿಗಾವಹಿಸುತ್ತದೆ. ಇದನ್ನು ವರ್ಗಾವಣೆಯ ಪ್ರಕ್ರಿಯೆ ಎಂದೆನ್ನಬಹುದು. ಈ ವರ್ಗಾವಣೆಯ ಪ್ರಕ್ರಿಯೆಯು ಹಲವಾರು ಸಂಬಂಧಿತ ಚಟುವಟಿಕೆಗಳನ್ನು ಸುವ್ಯವಸ್ಥಿತವಾಗಿ ಜೋಡಣೆಗೊಳಿಸುವ ಒಂದು ವ್ಯವಸ್ಥೆಯಾಗಿದೆ.
ಸಂಪನ್ಮೂಲದ ಹಂಚಿಕೆ: ಬಂಡವಾಳ ರೂಪುಗೊಳ್ಳುವುದು ಎಲ್ಲ ಸ್ಥಳಗಳಲ್ಲಿಯೂ ಏಕರೂಪದ್ದಾಗಿಲ್ಲ. ಒಂದೆಡೆ ಉಳಿತಾಯವು ಹೆಚ್ಚಾಗಿದ್ದರೆ ಮತ್ತೊಂದು ಅದರ ಕೊರತೆ ಕಾಣುತ್ತಿದೆ. ಕೆಲವೊಂದು ಔದ್ಯಮಿಕ ಸ್ಥಳಗಳಲ್ಲಿ ಬಂಡವಾಳದ ಕೊರತೆಯಾಗಿ ಹೆಚ್ಚಿನ ಬೇಡಿಕೆಯಿದೆ.
ಆರ್ಥಿಕಾಭಿವೃದ್ಧಿ: ಹಣಕಾಸಿನ ವ್ಯವಸ್ಥೆಯ ಪ್ರಮುಖ ಉದ್ದೇಶವೆಂದರೆ ಆರ್ಥಿಕ ಅಭಿವೃದ್ಧಿಯನ್ನು ವೃದ್ಧಿಸುವುದು. ಸರ್ಕಾರವು ದಕ್ಷ ಹಣಕಾಸಿನ ವ್ಯವಸ್ಥೆಯನ್ನು ಸ್ಥಾಪಿಸಲು ನಿರಂತರವಾಗಿ ಪ್ರಯತ್ನಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಸಾಮಾನ್ಯ ತತ್ವವೇನೆಂದರೆ "ನಾವು ವ್ಯವಸ್ಥಿತ ಮತ್ತು ದಕ್ಷವಾದ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಅದು ತನ್ನಿಂದ ತಾನೇ ಆರ್ಥಿಕ ಅಭಿವೃದ್ಧಿಯನ್ನು ಯಶಸ್ಸುಗೊಳಿಸುತ್ತದೆ". ಹಣಕಾಸಿನ ವ್ಯವಸ್ಥೆಯ ಸಮರ್ಪಕ ಬೆಂಬಲವಿಲ್ಲದೆ ಯಾವುದೇ ದೇಶವು ಆರ್ಥಿಕ ಪ್ರಗತಿಯನ್ನು ಸಾಧಿಸಿದ ಉದಾಹರಣೆ ಜಗತ್ತಿನಲ್ಲಿಲ್ಲ.
ಆಧುನಿಕತೆಯ ಅವಶ್ಯಕತೆ: ಪ್ರಸ್ತುತ ವಿಶ್ವದ ರಾಷ್ಟ್ರಗಳು ಹಿಂದುಳಿದ ಆರ್ಥಿಕತೆಯಿಂದ ಅಭಿವೃದ್ಧಿ ಹೊಂದುತ್ತಿರುವ ಕಡೆಗೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅಭಿವೃದ್ಧಿ ಹೊಂದಿದ ಆರ್ಥಿಕತೆಯೆಡೆಗೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಪ್ರತಿಮ ಅಭಿವೃದ್ಧಿಯ ದೇಶಗಳಾಗಲು ಪ್ರಯತ್ನಿಸುತ್ತಿವೆ.
ವಿನ್ಯಾಸವೆಂದರೆ ಒಂದು ವ್ಯವಸ್ಥೆಯ ವಿವಿಧ ಅಂಗಗಳನ್ನು ಜೋಡಿಸಿದ ಮತ್ತು ರಚಿಸಿದ ರೀತಿ. ಮತ್ತೊಂದು ಅರ್ಥದಲ್ಲಿ ಒಂದು ವ್ಯವಸ್ಥೆ ಯಾವ ಅಂಗಗಳಿಂದ ಕಾರ್ಯಗೈಯ್ಯುತ್ತಿದೆ ಮತ್ತು ಯಾವುದರಿಂದ ರಚಿತಗೊಂಡಿದೆ ಎಂದು ತಿಳಿಸುತ್ತದೆ. ಭಾರತೀಯ ಹಣಕಾಸಿನ ವ್ಯವಸ್ಥೆಯು ಕೆಲವೊಂದು ಸಂಸ್ಥೆಗಳಿಂದ, ಮಧ್ಯವರ್ತಿಗಳಿಂದ, ನಿಯಂತ್ರಣಗಾರರಿಂದ ರಚಿತಗೊಂಡ ವ್ಯವಸ್ಥೆಯಾಗಿದೆ. ಭಾರತೀಯ ಹಣಕಾಸಿನ ವ್ಯವಸ್ಥೆಯನ್ನು ನಿರ್ವಹಿಸುವ ಕಾರ್ಯಗಳು= ಸೇವೆಗಳು, ನಿಯಂತ್ರಣಗಳು ಮತ್ತು ಹಣಕಾಸಿನ ಸಂಸ್ಥೆಗಳ ಮಾರುಕಟ್ಟೆಗಳು
ಹೆಸರೇ ಸೂಚಿಸುವಂತೆ ಇವು ಅಸಂಘಟಿತ ರೂಪದಲ್ಲಿವೆ. ಅಲ್ಲಿ ವ್ಯವಸ್ಥೆಯೆನ್ನುವುದು ಇರುವುದಿಲ್ಲ. ಯಾವುದೇ ಮಾನ್ಯತೆಯಿಲ್ಲದ ಹಲವಾರು ಹಣಕಾಸಿನ ಸೇವೆಗಳನ್ನು ಅವು ನೀಡುತ್ತವೆ. ಸ್ಥಾನಿಕ ಬ್ಯಾಂಕರುಗಳು, ಜಮೀನುದಾರರು ಅನೌಪಚಾರಿಕವಾಗಿ ಸಾಲ ನೀಡುವ ಕಾರ್ಯ ಮಾಡುತ್ತಿದ್ದಾರೆ. ಇವರು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಕಾಣಸಿಗುತ್ತಾರೆ. ಅವರು ನೀಡಿದ ಒಟ್ಟು ಸಾಲ, ಅವರ ಸಂಖ್ಯ, ವಹಿವಾಟಿನ ವಿವರಗಳು ಲಭ್ಯವಿರುವುದಿಲ್ಲ. ಏಕೆಂದರೆ ಅವುಗಳಿಗೆ ಸುವ್ಯವಸ್ಥಿತ ಲೆಕ್ಕಪತ್ರ ಮತ್ತು ದಾಖಲು ಇರುವುದಿಲ್ಲ. ಆದರೆ ಅವರು ಸಾಲ ನೀಡಲಿಕ್ಕೆ ಹತ್ತಾರು ದಿನಗಳ ಸಮಯ ಅಥವಾ ಹತ್ತೆಂಟು ಕಾಗದಪತ್ರ ಪದ್ಧತಿಗಳು ಇರುವುದಿಲ್ಲ. ಅವರ ಸಾಲ ನೀಡಿಕೆಯ ಪದ್ಧತಿ ಬಹಳ ಸರಳ ಮತ್ತು ಸುಲಭ. ವ್ಯವಹರಿಸಲು ಸಮಯದ ಮಿತಿಯಿಲ್ಲ. ಬೇಕಾದವರಿಗೆ ಸಾಲ ದೊರೆಯುತ್ತದೆ. ಆದರೆ ಬಡ್ಡಿ ಮಾತ್ರ ಅಗಾಧ ಪ್ರಮಾಣದ್ದಾಗಿರುತ್ತದೆ. ಎಷ್ಟು ಮರುಪಾವತಿ ಮಾಡಿದರೂ ಅದೆಲ್ಲ ಬಡ್ಡಿಗಾಗಿ ಜಮಾ ಆಗಿ, ಅಸಲು ತೀರದೇ ಸಾಮಾನ್ಯ ಜನರು ಪರಿತಪಿಸುತ್ತಾರೆ. ಸಾಮಾನ್ಯವಾಗಿ ಅವರಲ್ಲಿ ದಾಖಲೆಗಳು ಕಡಿಮೆ. ಸಾಲ ವಸೂಲು ಮಾಡುವ ರೀತಿಯು ಕೆಲವೊಮ್ಮೆ ಅಮಾನವೀಯವಾಗಿರುತ್ತದೆ. ಭಾರತದಲ್ಲಿ ಸಂಘಟಿತ ಮಾರುಕಟ್ಟೆಯು ಬೆಳೆಯುತ್ತಿದ್ದರೂ ಸಹ, ಈ ಅಸಂಘಟಿತ ವಲಯವು ಇನ್ನೂ ಕ್ರಿಯಾಶೀಲವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಅವರನ್ನು ನಿಯಂತ್ರಣದಲ್ಲಿ ತರಲು ಪ್ರಯತ್ನಿಸುತ್ತಿದೆ. ೧೯೮೮ ರಲ್ಲಿ ಬ್ಯಾಂಕಿಂಗೇತರ ಹಣಕಾಸಿನ ಕಂಪನಿಗಳಿಗೆ ನಿರ್ದೇಶನಗಳನ್ನು ನೀಡಿದೆ. ಆದರೂ ಆಪೇಕ್ಷಿತ ಫಲಿತಾಂಶ ಬರದೇ ಅನೌಪಚಾರಿಕವಾಗಿ ವಹಿವಾಟು ಮುಂದುವರೆದಿದೆ.
ಯಾವ ಸಂಸ್ಥೆ/ಸಂಸ್ಥೆಗಳು ನಿಯಮ ಮತ್ತು ನಿಯಂತ್ರಣಾ ವಿಧಿಗಳ ಪ್ರಕಾರ ಸ್ಥಾಪಿತವಾಗಿರುವುದೋ ಅದಕ್ಕೆ ಸಂಘಟಿತ ಹಣಕಾಸಿನ ವ್ಯವಸ್ಥೆಯೆನ್ನುತ್ತಾರೆ. ಇವುಗಳು ನಿಯಂತ್ರಕರ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿರುತ್ತವೆ. ಇದರ ಕಾರ್ಯಗಳು, ಪಾತ್ರ, ವ್ಯಾಪ್ತಿ, ನಿರ್ವಹಣೆ, ಆಡಳಿತ ರೀತಿಯನ್ನು ನಿಖರವಾಗಿ ವ್ಯಾಖ್ಯಾಯಿಸಲಾಗುತ್ತದೆ. ಅದರಂತೆ ಕಾರ್ಯಗೈಯ್ಯಲಾಗುತ್ತದೆ. ಔಪಚಾರಿಕ ವ್ಯವಸ್ಥೆಯಲ್ಲಿ ಈ ಕೆಳಗಿನ ಉಪ ವ್ಯವಸ್ಥೆಗಳನ್ನು ಕಂಡುಕೊಳ್ಳಬಹುದು. ಅವು-
ಒಂದು ವ್ಯವಸ್ಥೆಯನ್ನು ನಿಯಂತ್ರಿಸಲು ಶಾಸನಾತ್ಮಕವಾಗಿ ಅಸ್ತಿತ್ವದಲ್ಲಿ ಬಂದಿರುವ ಸಂಸ್ಥೆಗಳೇ ನಿಯಂತ್ರಕರು. ಅವರು ಸಂಸ್ಥೆಗಳಿಗೆ ನಿರ್ದೇಶನ, ಸೂಚನೆ ನೀಡುವ, ಆಡಳಿತ ನಿರ್ವಹಣೆ ಮಾಡುವ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತರೆ. ಭಾರತದಲ್ಲಿ ಪ್ರಮುಖವಾದ ನಾಲ್ಕು ಸಂಸ್ಥೆಗಳಿವೆ. ಅವು-
ದೇಶದಲ್ಲಿಯ ಹಣಕಾಸಿನ ಚಟುವಟಿಕೆಗಳನ್ನು ನೇರವಾಗಿ ನಿರ್ವಹಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳಿಗೆಲ್ಲ ಹಣಕಾಸಿನ ಸಂಸ್ಥೆಗಳೆಂದು ಕರೆಯುತ್ತರೆ. ಈ ಹಣಕಾಸಿನ ಸಂಸ್ಥೆಗಳನ್ನು ೪ ವಿಧದಲ್ಲಿ ವಿಂಗಡಿಸಬಹುದು. ಅವು-
ಷೆಡ್ಯುಲ್ಡ್ ವಾಣಿಜ್ಯ ಬ್ಯಾಂಕುಗಳಲ್ಲಿ ಮತ್ತೇ ಈ ರೀತಿಯಾಗಿ ವಿಭಾಗಿಸಬಹುದು.
ಹಣಕಾಸಿನ ಮಾರುಕಟ್ಟೆಯೆಂದರೆ ಕೇವಲ ಹಣದ ಮಾರುಕಟ್ಟೆಯಲ್ಲ, ಎಲ್ಲಾ ರೀತಿಯ ಸಮೀಪ ಹಣದ ಮಾರುಕಟ್ಟೆ ಅಥವಾ ಅಲ್ಪಾವಧಿ ಹಣದ ಲೇವಾ-ದೇವಿ ಅಥವಾ ಸಾಲ ಕೊಡುವ ಮತ್ತು ತರುವ ಅಲ್ಪಕಾಲಾವಧಿ ಮಾರುಕಟ್ಟೆಗೆ ಹಣಕಾಸಿನ ಮಾರುಕಟ್ಟೆ ಎನ್ನುತ್ತೇವೆ.[೯] ಈ ಕ್ರಿಯೆಯಲ್ಲಿ ಹಣಕಾಸಿನ ಸಂಸ್ಥೆಗಳಾದ ಸಾರ್ವಜನಿಕ ಬ್ಯಾಂಕುಗಳು ಕೇವಲ ಹಣದ ಪೂರೈಕೆ ಮಾಡುವ ಸಂಸ್ಥೆಗಳಲ್ಲ, ಹಣಕಾಸಿನ ಸಂಪನ್ಮೂಲಗಳನು ತರುವ ಸಂಸ್ಥೆಗಳಾಗಿರುತ್ತವೆ. ಭಾರತದ ಹಣಕಾಸಿನ ಮಾರುಕಟ್ಟೆಯನ್ನು ಎರಡು ರೀತಿಯಲ್ಲಿ ವಿಭಜಿಸುತ್ತೇವೆ. ಒಂದು ಸಂಘಟಿತ ಮಾರುಕಟ್ಟೆ, ಎರಡು ಅಸಂಘಟಿತ ಹಣಕಾಸಿನ ಮಾರುಕಟ್ಟೆ. ಅಸಂಘಟಿತ ಹಣಕಾಸಿನ ಮಾರುಕಟ್ಟೆಯಲ್ಲಿ ದೇಶೀ ಬ್ಯಾಂಕರರು ಸಾಂಪ್ರದಾಯಿಕ ರೀತಿಯಲ್ಲಿ ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳು ಈ ಮಾರುಕಟ್ಟೆಯಲ್ಲಿ ಸೇರಿರುತ್ತವೆ. ಸಂಘಟಿತ ವಲಯದಲ್ಲಿ ಭಾರತದ ರಿಸರ್ವ್ ಬ್ಯಾಂಕ್, ಭಾರತದ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹವರ್ತಿ ಬ್ಯಾಂಕುಗಳು, ೨೦ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು, ಖಾಸಗಿ ವಲಯದ ಸ್ವದೇಶಿ ಮತ್ತು ವಿದೇಶಿ ಬ್ಯಾಂಕುಗಳು ಈ ವಲಯದಲ್ಲಿರುತ್ತವೆ. ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ಸ್ಥಾಪಿಸಿರುವ ಗ್ರಾಮೀಣ ಬ್ಯಾಂಕುಗಳು ಸಹ ಇದೇ ವಲಯದಲ್ಲಿ ಸೇರಿರುತ್ತವೆ. ಭಾರತದಲ್ಲಿ ಸಂಘಟಿತ ವಲಯದ ಮಾರುಕಟ್ಟೆಯಲ್ಲಿ ಹಲವು ಸಹ ಮಾರುಕಟ್ಟೆಗಳಿರುತ್ತವೆ. ಅವುಗಳೆಂದರೆ ಕರೆಯ ಹಣದ ಬಿಲ್ ಮಾರುಕಟ್ಟೆ ಮತ್ತು ಬಿಲ್ ಮಾರುಕಟ್ಟೆಯಲ್ಲಿ ವಾಣಿಜ್ಯ ಬಿಲ್ಲುಗಳು ಹಾಗು ಟ್ರೆಜರಿ ಬಿಲ್ಲು. ಈ ಮಾರುಕಟ್ಟೆಯಡಿ ಹಣಕಾಸಿನ ವ್ಯವಹಾರಗಳು ನಡೆಯುತ್ತವೆ. ೩೬೪ ದಿನಗಳಲ್ಲಿ ಬಿಲ್ಲು ಮಾರುಕಟ್ಟೆ, ಠೇವಣಿ ಸರ್ಟಿಫಿಕೇಟ್ ಹಾಗೂ ವಾಣಿಜ್ಯ ಪತ್ರಗಳ ಮಾರುಕಟ್ಟೆಗಳು ಸಹ ಮಾರುಕಟ್ಟೆಯಲ್ಲಿ ಬರುವ ಹಣಕಾಸಿನ ಮಾರುಕಟ್ಟೆಯಾಗಿರುತ್ತದೆ. ಸಹ ಮಾರುಕಟ್ಟೆಯಲ್ಲಿನ ಪ್ರಮುಖ ಮಾರುಕಟ್ಟೆಗಳೆಂದರೆ ಕರೆಯ ಹಣ ಮತ್ತು ಬಿಲ್ಲು ಮಾರುಕಟ್ಟೆಗಳಾಗಿರುತ್ತವೆ.
ಈ ಮಾರುಕಟ್ಟೆಗೆ ಕರೆಯ ಅಥವಾ ಅಲ್ಪಕಾಲಾವಧಿ ಹಣದ ಮಾರುಕಟ್ಟೆಯೆಂದು ಕರೆಯುತ್ತೇವೆ. ಇದರಲ್ಲಿ ಎರಡು ಭಾಗಗಳಿರುತ್ತವೆ. ಕರೆ ಮಾರುಕಟ್ಟೆ ಅಥವಾ ಒಂದೇ ರಾತ್ರಿಯ ಮಾರುಕಟ್ಟೆ ಮತ್ತು ಅಲ್ಪ ಕಾಲಾವಧಿ ಸೂಚನೆ ನೀಡಿದ ಮಾರುಕಟ್ಟೆ. ಈ ಎರಡು ಮಾರುಕಟ್ಟೆಯಲ್ಲಿನ ಕೊಡು-ತೆಗೆದುಕೊಳ್ಳುವ ಹಣಕಾಸಿನ ಮಾರುಕಟ್ಟೆಗೆ ಕರೆಯ ಹಣಕಾಸಿನ ದರ ಎಂದು ಕರೆಯುತ್ತೇವೆ. ಕರೆ ಹಣಕಾಸಿನ ದರವನ್ನು ಮಾರುಕಟ್ಟೆ ಅಂಶಗಳು ನಿರ್ಧರಿಸುತ್ತವೆ. ಅವುಗಳೆಂದರೆ ಅಲ್ಪ ಕಾಲಾವಧಿ ಹಣದ ಬೇಡಿಕೆ ಮತ್ತು ಪೂರೈಕೆ ಅಂಶಗಳು. ಈ ಮಾರುಕಟ್ಟೆಯಲ್ಲಿನ ಶೇಕಡ ೮೦ ರಷ್ಟು ವ್ಯವಹಾರವನ್ನು ಖಾಸಗಿ ವಲಯದ ಬ್ಯಾಂಕುಗಳು ನಡೆಸುತ್ತವೆ. ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳಾದ ಐ.ಡಿ.ಬಿ.ಐ, ಎಲ್.ಐ.ಸಿ, ಜಿ.ಐ.ಸಿ, ಇತ್ಯಾದಿಗಳು ಈ ಮಾರುಕಟ್ಟೆಯಲ್ಲಿ ಪ್ರವೇಶಿಸಿ ಕೊಡು-ತೆಗೆದುಕೊಳ್ಳುವ ವ್ಯವಹಾರವನ್ನು ಮಾಡುತ್ತವೆ. ಇವುಗಳು ಕರೆ ಮಾರುಕಟ್ಟೆಯ ಶೇಕಡ ೮೦ ರಷ್ಟು ವ್ಯವಹಾರವನ್ನು ಮಾಡಿದರೆ, ಉಳಿದ ಶೇಕಡ ೨೦ ರಷ್ಟು ವ್ಯವಹಾರವನ್ನು ಭಾರತದ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕುಗಳು ಕರೆ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತವೆ.
ಬಿಲ್ಲುಗಳ ಮಾರುಕಟ್ಟೆ ಅಥವಾ ವಟಾಯಿಸಿ ಹಣ ನೀಡುವ ಮಾರುಕಟ್ಟೆ ಇತರ ದೇಶಗಳ ಮಾರುಕಟ್ಟೆಯಂತೆ ಭಾರತದಲ್ಲಿ ಸಹ ಅಸ್ತಿತ್ವದಲ್ಲಿದೆ. ಇದರಲ್ಲಿ ಅಲ್ಪಕಾಲಾವಧಿ ಬಿಲ್ಲುಗಳಾದ ೯೦ ದಿನದ, ೩೬೪ ದಿನದ ಬಿಲ್ಲುಗಳ ಮಾರುಕಟ್ಟೆ, ಠೇವಣಿಗಳ ಸರ್ಟಿಫಿಕೇಟ್ಗಳು ಹಾಗೂ ವಾಣಿಜ್ಯ ಪತ್ರಗಳು ಒಳಗೊಂಡಿರುತ್ತವೆ. ಬಿಲ್ಲು ಮಾರುಕಟ್ಟೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಇದರಲ್ಲಿ ವಾಣಿಜ್ಯ ಬಿಲ್ಲುಗಳು ಮತ್ತು ಟ್ರೆಜರಿ ಬಿಲ್ಲುಗಳೆಂದು (೯೦ ದಿನ) ಪ್ರತ್ಯೇಕಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಮುಂದುವರೆದ ದೇಶಗಳಾದ ಲಂಡನ್ ಬಿಲ್ಲು ಮಾರುಕಟ್ಟೆ ಹಾಗೂ ಅಮೇರಿಕಾದ ಬಿಲ್ಲು ಮಾರುಕಟ್ಟೆಯಂತೆ ಬಿಲ್ಲು ಮಾರುಕಟ್ಟೆ ಪ್ರಾಮುಖ್ಯತೆ ಪಡೆದಿಲ್ಲ. ಆದರೆ ೯೦ ದಿನಗಳ ಟ್ರೆಜರಿ ಬಿಲ್ಲುಗಳನ್ನು ಭಾರತ ಸರ್ಕಾರ ೧೮೨ ದಿನಗಳ ಹಾಗೂ ೩೬೪ ದಿನಗಳ ಟ್ರೆಜರಿ ಬಿಲ್ಲುಗಳನ್ನು ಜಾರಿಗೆ ತಂದಿದೆ. ನಂತರ ೧೯೯೭ರಲ್ಲಿ ಭಾರತ ಸರ್ಕಾರ ೧೪ ದಿನಗಳ ಮಧ್ಯವರ್ತಿ ಟ್ರೆಜರಿ ಬಿಲ್ಲುಗಳನ್ನು ಜಾರಿಗೆ ತಂದಿದೆ. ಕರೆ ಮಾರುಕಟ್ಟೆಯ ನಿಯಂತ್ರಣ ಮತ್ತು ಧುರೀಣತ್ವವನ್ನು ಭಾರತದ ರಿಸರ್ವ್ ಬ್ಯಾಂಕ್ ನಿರ್ವಹಿಸುತ್ತದೆ. ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಹಣಕಾಸಿನ ಅಥವಾ ಪತ್ತಿನ ನಿಯಂತ್ರಣದ ಕಾರ್ಯವನ್ನು ಇದೇ ಬ್ಯಾಂಕು ನಿರ್ವಹಿಸುತ್ತದೆ. ಸಂಘಟಿತ ಬ್ಯಾಂಕಿಂಗ್ ವಲಯ ಹಲವಾರು ಸಹ ಮಾರುಕಟ್ಟೆಗಳನ್ನು ಹೊಂದಿರುತ್ತದೆ. ಅವುಗಳೆಂದರೆ ಅತ್ಯಲ್ಪ ಕಾಲಾವಧಿ ಮಾರುಕಟ್ಟೆ, ವಾಣಿಜ್ಯ ಬಿಲ್ ಮಾರುಕಟ್ಟೆ ಮತ್ತು ಅಂತರ್ ಬ್ಯಾಂಕುಗಳ ನಡುವಿನ ಅಲ್ಪ ಕಾಲಾವಧಿ ಮಾರುಕಟ್ಟೆಯೆಂದು ಇರುತ್ತದೆ. ಭಾರತದ ಹಣಕಾಸಿನ ಮಾರುಕಟ್ಟೆ ಏಕರೀತಿಯ ಮಾರುಕಟ್ಟೆಯಾಗಿರದೆ, ಹಲವು ಮಾರುಕಟ್ಟೆಗಳನ್ನು ಹೊಂದಿದ ಸಮ್ಮಿಶ್ರ ಮಾರುಕಟ್ಟೆಯಾಗಿದೆ. ಪ್ರತಿಯೊಂದು ಮಾರುಕಟ್ಟೆಯು ಅಲ್ಪಾವಧಿ ಹಣಕಾಸಿನ ಲೇವಾದೇವಿಯಲ್ಲಿ ತೊಡಗಿರುತ್ತದೆ. ಅದರಲ್ಲಿ ಅತ್ಯಲ್ಪ ಕಾಲಾವಧಿ ಮಾರುಕಟ್ಟೆ ಒಂದು ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆ ಎರಡು ಲಕ್ಷಣಗಳನ್ನು ಹೊಂದಿದೆ. ಒಂದನೆಯದು ಒಂದೇ ದಿನ ಅಥವಾ ಒಂದೇ ರಾತ್ರಿಯ ಮಾರುಕಟ್ಟೆಯಾದರೆ ಇನ್ನೊಂದು ಅಲ್ಪ ಸೂಚನೆ ಮಾರುಕಟ್ಟೆ. ಈ ಮಾರುಕಟ್ಟೆಯಲ್ಲಿನ ಬಡ್ಡಿದರವನ್ನು ಮಾರುಕಟ್ಟೆಯಲ್ಲಿನ ಅಲ್ಪ ಕಾಲಾವಧಿ ಹಣಕಾಸಿನ ಬೇಡಿಕೆ ಮತ್ತು ಪೂರೈಕೆ ಅಂಶಗಳು ನಿರ್ಧರಿಸುತ್ತವೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಶೇಕಡ ೮೦ ರಷ್ಟು ಹಣವನ್ನು ಈ ಮಾರುಕಟ್ಟೆಗೆ ಪೂರೈಸಿದರೆ ಉಳಿದ ಶೇಕಡ ೨೦ ರಷ್ಟು ಹಣಕಾಸನ್ನು ವಿದೇಶಿ ಹಾಗೂ ಭಾರತದ ಖಾಸಗಿ ವಲಯದ ಬ್ಯಾಂಕುಗಳು ಪೂರೈಸುತ್ತವೆ.
ಇದೊಂದು ಪ್ರಮುಖವಾದ ಸಹ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯಲ್ಲಿ ಅಲ್ಪಾವಧಿ ಬಿಲ್ಲುಗಳನ್ನು ಅಥವಾ ಹುಂಡಿಗಳನ್ನು ವಟಾಯಿಸುವ ವ್ಯವಸ್ಥೆ ಇರುತ್ತದೆ. ಇಂತಹ ಮಾರುಕಟ್ಟೆಯಲ್ಲಿ ಬಿಲ್ಲುಗಳನ್ನು ಸಾಮಾನ್ಯವಾಗಿ ೯೦ ದಿನಗಳ ಅವಧಿಗೆ ಸಂಬಂಧಿಸಿದ ಹಣಕಾಸಿನ ಲೇವಾದೇವಿ ಇರುತ್ತದೆ. ಇದನ್ನು ಪುನಃ ವಾಣಿಜ್ಯ ಬಿಲ್ಲು ಮಾರುಕಟ್ಟೆ ಮತ್ತು ಖಜಾನೆ ಬಿಲ್ಲು ಮಾರುಕಟ್ಟೆಗಳೆಂದು ವಿಭಾಜಿಸಲಾಗುತ್ತದೆ. ಭಾರತದಲ್ಲಿ ವಾಣಿಜ್ಯ ಬಿಲ್ಲುಗಳ ಕಾರ್ಯಾಚರಣೆಯಲ್ಲಿಲ್ಲ. ಆದರೆ ೯೧ ದಿನದ ಖಜಾನೆ ಬಿಲ್ಲು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಈ ವ್ಯವಸ್ಥೆಯ ಅನುಕೂಲತೆಯನ್ನು ಭಾರತ ಸರ್ಕಾರ ಪಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಇದನ್ನು ೧೮೨ ದಿನಗಳ ಖಜಾನೆ ಬಿಲ್ಲು ವ್ಯವಸ್ಥೆಯನ್ನಾಗಿ ಜಾರಿಗೆ ತಂದಿತು. ೧೯೯೯-೨೦೦೦ ದಲ್ಲಿ ಅದನ್ನು ಮತ್ತೆ ೩೬೪ ದಿನಗಳಿಗೆ ಹೆಚ್ಚಿಸಿದೆ. ಇವುಗಳಲ್ಲದೆ ೧೯೯೭ ರಲ್ಲಿ ೧೪ ದಿನಗಳ ಮಧ್ಯವರ್ತಿ ಖಜಾನೆ ಬಿಲ್ಲನ್ನು ಅಳವಡಿಸಿದೆ. ನಮ್ಮ ದೇಶದ ಹಣಕಾಸಿನ ಮಾರುಕಟ್ಟೆಯ ಇನ್ನೊಂದು ಇತ್ತೀಚಿನ ಆಸಕ್ತಿದಾಯಕ ಮಾರುಕಟ್ಟೆಯೆಂದರೆ ರೆಪೋಸ್ ಮತ್ತು ರಿವರ್ಸ್ ರೆಪೋಸ್ ಮಾರುಕಟ್ಟೆಯನ್ನು ಭಾರತದ ರಿಸರ್ವ್ ಬ್ಯಾಂಕ್ ಜಾರಿಗೆ ತಂದಿದೆ. ಮೊದಲನೇ ಮಾರುಕಟ್ಟೆಯನ್ನು ಡಿಸೆಂಬರ್ ೧೯೯೨ ರಲ್ಲಿ ಎರಡನೇ ಮಾರುಕಟ್ಟೆಯನ್ನು ನವೆಂಬರ್ ೧೯೯೬ ರಲ್ಲಿ ಜಾರಿಗೆ ತಂದಿದೆ. ರೆಪೋಸ್ ಮಾರುಕಟ್ಟೆಯೆಂದರೆ ರಿರ್ಪಚೇಜ್ (ಮರು ಖರೀದಿಸುವ) ಆಕ್ಷನ್ಸ್ (ಹರಾಜು) ಮಾರುಕಟ್ಟೆ ಅಥವಾ ಹರಾಜು ಮೂಲಕ ಮರು ಖರೀದಿಸುವ ಬಿಲ್ಲ ಮಾರುಕಟ್ಟೆಯೆನ್ನುತ್ತೇವೆ. ಇವುಗಳು ಭಾರತ ಸರಕಾರದ ದಿನಾಂಕದ ಸೆಕ್ಯುರಿಟಿಗಳಾಗಿರುತ್ತವೆ. ಯಾವಾಗ ಸರ್ಕಾರ ತನ್ನ ಸೆಕ್ಯುರಿಟಿಗಳನ್ನು ಮಾರುಕಟ್ಟೆಯಿಂದ ಮರು ಖರೀದಿಸುತ್ತದೆ, ಆಗ ಭಾರತದ ರಿಸರ್ವ್ ಬ್ಯಾಂಕು ವಾಣಿಜ್ಯ ಬ್ಯಾಂಕುಗಳಿಗೆ ಹಣ ಪಾವತಿ ಮಾಡುತ್ತದೆ. ಇದರಿಂದ ವಾಣಿಜ್ಯ ಬ್ಯಾಂಕುಗಳ ನಗದು ಪ್ರಮಾಣ ಹೆಚ್ಚಾಗುತ್ತದೆ. ಇಂತಹ ಕ್ರಿಯೆ ಅಲ್ಪಕಾಲಾವಧಿ ಮಾರುಕಟ್ಟೆಯ ಏರಿಳಿತದ ನಿವಾರಣೋಪಾಯ ಅಂಶವಾಗಿಯೂ ಉಪಯೋಗಿಸಲಾಗುತ್ತದೆ. ತರುವಾಯ ರಿವರ್ಸ್ ರೆಪೋಸ್ಯೆಂದರೆ ಸರ್ಕಾರದ ಸೆಕ್ಯುರಿಟೀಸನ್ನು ನಿರ್ಧಾರಿತ ಬಡ್ಡಿ ದರಕ್ಕೆ ಮಾರಾಟ ಮಾಡುವುದು, ಯಾವಾಗ ಬ್ಯಾಂಕ್ಗಳಲ್ಲಿ ಸಾಕಷ್ಟು ನಗದು ಹಣ ಇರುತ್ತದೆ ಆಗ ಅಲ್ಪ ಕಾಲಾವಧಿ ಮಾರುಕಟ್ಟೆಯಲ್ಲಿ ಬಡ್ಡಿದರ ಕಡಿಮೆಯಾಗುವ ಸಂಭವವಿರುತ್ತದೆ. ಆಗ ಸರ್ಕಾರದ ಸೆಕ್ಯೂರಿಟೀಸನ್ನು ಮಾರಿ ರಿಸರ್ವ್ ಬ್ಯಾಂಕ್ ಹಣ ಪಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮರು ಖರೀದಿಗೆ ಶೇಕಡ ೭ ರಷ್ಟು ಬಡ್ಡಿ ನೀಡಿದರೆ, ರಿವರ್ಸ್-ರೆಪೋಸ್ನಡಿ ನಿಗದಿತ ಬಡ್ಡಿದರ ಎಂದು ಶೇಕಡ ೯ ಬಡ್ಡಿ ದರ ಇರುತ್ತದೆ.
ಸಾರ್ವಜನಿಕರಿಂದ ಹಣವನ್ನು ಕ್ರೋಡಿಕರಿಸಲು ಉಪಯೋಗಿಸುವ ಭೌತಿಕ ಕಾಗದಪತ್ರಗಳನ್ನು ಹಣಕಾಸಿನ ಸಾಧನ ಪತ್ರಗಳೆಂದು ಕರೆಯುತ್ತಾರೆ. ಅವುಗಳಲ್ಲಿ-
ಆಧುನಿಕ ವ್ಯವಹಾರದ ಪರಿಸರದಲ್ಲಿ ಹಣಕಾಸಿನ ಸೇವೆಗಳು ಬಹಳ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತವೆ. ವ್ಯಕ್ತಿಗಳ ಮತ್ತು ಸಾಂಸ್ಥಿಕ ಹೂಡಿಕೆದಾರರ ಹಣಕಾಸಿನ ವ್ಯವಹಾರಗಳಿಗೆ ಸಹಾಯಕವಾಗುವ ಸೇವೆಗಳನ್ನು ನೀಡುವ ಸೇವೆಗಳನ್ನು ಹಣಕಾಸಿನ ಸೇವೆಗಳೆಂದು ಕರೆಯುತ್ತಾರೆ. ಇದರಿಂದ ಸಂಪನ್ಮೂಲದ ಹಂಚಿಕೆಯಾಗುತ್ತದೆ. ಹಣಕಾಸಿನ ಸ್ವರೂಪದ ಸೇವೆಯನ್ನು ಹಣಕಾಸಿನ ಸೇವೆಯ ಪೂರೈಕೆದಾರರು ನೀಡುವುದೇ ಹಣಕಾಸಿನ ಸೇವೆಯಾಗಿದೆ. ಅವುಗಳಲ್ಲಿ ವಿಮೆ ಮತ್ತು ವಿಮೆಗೆ ಸಂಬಂಧಿಸಿದ ಸೇವೆಗಳು ಮತ್ತು ಎಲ್ಲ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ಮತ್ತು ಇತರ ಹಣಕಾಸಿನ ಸೇವಾ ಸಂಸ್ಥೆಗಳು ಕೂಡಿವೆ.
ಈ ಕೆಳಗೆ ಹಣಕಾಸಿನ ಸೇವೆಗಳ ಕುರಿತು ಸಂಕ್ಷಿಪ್ತ ವಿವರಣೆ ನೀಡಿದೆ.
'ಸೆಬಿ'ಯ ಪ್ರಕಾರ ವರ್ತಕ ಬ್ಯಾಂಕು ಎಂಬುದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಾಗಿದ್ದು, ಷೇರು ಬಂಡವಾಳ ಪತ್ರ ನೀಡಿಕೆ ನಿರ್ವಹಣೆಯಲ್ಲಿ ಅದರ ಮಾರಾಟಕ್ಕಾಗಿ ವ್ಯವಸ್ಥೆ ಮಾಡುವುದರ ಮೂಲಕ ಅಥವಾ ಭದ್ರತಾ ಪತ್ರಗಳಿಗೆ ವಂತಿಗೆ ಸಲ್ಲಿಸುವುದಕ್ಕಾಗಿ ಅಂದರೆ ಅದಕ್ಕಾಗಿ ಮ್ಯಾನೇಜರ್, ಸಲಹಗಾರ, ಉಪದೇಶಗಾರ ಅಥವಾ ಕಂಪನಿಗಳಿಗೆ ಸಲಹೆಗಾರರ ಸೇವೆಯನ್ನು ಸಲ್ಲಿಸುವ ಕಾರ್ಯನಿರ್ವಹಿಸುವವರು ವರ್ತಕ ಬ್ಯಾಂಕುಗಳಾಗಿವೆ.
ಫ್ಯಾಕ್ಟರ್ (ಬ್ಯಾಂಕು) ಮತ್ತು ಆದರ ಕಕ್ಷಿದಾರರ ನಡುವಿನ ಒಂದು ವ್ಯವಸ್ಥೆಯೇ ಫ್ಯಾಕ್ಟರಿಂಗ್ ಸೇವೆಯಾಗಿದೆ. ಇಲ್ಲಿ ಬ್ಯಾಂಕೊಂದು ತನ್ನ ಗ್ರಾಹಕರ ವ್ಯವಹಾರದಲ್ಲಿಯ ಸಾಲಗಾರನ ಭಧ್ರತೆಯ ಮೇಲೆ ಮುಂಗಡ ಹಣವನ್ನು ನೀಡುತ್ತದೆ. ಇದರಡಿಯಲ್ಲಿ ಫ್ಯಾಕ್ಟರ್ ನೀಡುವ ಸೇವೆಗಳೆಂದರೆ-
ಈ ರೀತಿಯಾಗಿ ಫ್ಯಾಕ್ಟರಿಂಗ್ ಎನ್ನುವುದೊಂದು ವಿಶೇಷವಾದ ಸೇವೆಯಾಗಿದ್ದು, ಅದರಿಂದ ವ್ಯವಹಾರಸ್ಥರು ಮತ್ತು ಉದ್ದಿಮೆದಾರರು ತಮ್ಮ ವ್ಯವಹಾರದಲ್ಲಿರುವ ಖಾತೆಗಳ ನಿರ್ವಹಣೆಯನ್ನು ಫ್ಯಾಕ್ಟರ್ ಸಂಸ್ಥೆಗೆ ವರ್ಗಾಯಿಸುತ್ತಾರೆ. ಇದರಿಂದ ಉದ್ದರಿ ವ್ಯವಹಾರ ಉತ್ತೇಜನಗೊಳ್ಳುತ್ತದೆ. ಎಲ್ಲರಿಗೂ ಅದರ ಲಾಭ ದೊರೆಯುತ್ತದೆ.
ಒಬ್ಬ ವ್ಯಕ್ತಿಯು ಹೊಂದಿರುವ ಎರಡು ಅಥವಾ ಹೆಚ್ಚಿನ ಭದ್ರತಾ ಪತ್ರಗಳ ಸಂಗ್ರಹವೇ ನಿರ್ದಿಷ್ಟ ಭದ್ರತಾ ಪತ್ರ ಹೊಂದಿದ ನಿರ್ವಹಣೆಯೆನ್ನುತ್ತಾರೆ. ಅದರಲ್ಲಿ ಅತೀ ಜಾಗರೂಕತೆಯಿಂದ ಆಯ್ದುಕೊಂಡು, ಅಪಾಯ ಕಡಿಮೆ ಮಾಡಿದ ಷೇರುಗಳು ಇರುತ್ತವೆ. ಮಾರುಕಟ್ಟೆಯ ಬದಲಾವಣೆಗಳನ್ನು ನೋಡಿಕೊಂಡು, ಷೇರುಗಳ ಮಾರಾಟ ಖರೀದಿ ಮಾಡುತ್ತಾ, ಲಾಭದಾಯಕ ಷೇರುಗಳನ್ನು ಹೊಂದುವುದು ಮತ್ತು ನಷ್ಟವಾಗುವ ಷೇರುಗಳನ್ನು ಶೀಘ್ರವೇ ಮಾರಿ ನಷ್ಟ ಕಡಿಮೆಗೊಳಿಸುವ ವೈಚಾರಿಕ ನಿರ್ವಹಣೆ ಮಾಡುತ್ತಾ ಇರಬೇಕಾಗುತ್ತದೆ.
ಇದು ಕಂತು ವ್ಯವಹಾರಕ್ಕೆ ಸಂಬಂಧಿಸಿದ್ದು, ಒಂದು ರೀತಿಯಲ್ಲಿ ಹಣಕಾಸನ್ನು ಒದಗಿಸುವ ಪದ್ಧತಿಯಾಗಿದೆ. ಇದರಲ್ಲಿ ಆಸ್ತಿಯ ಮಾಲಿಕ ಮತ್ತು ಅದನ್ನು ಉಪಯೋಗಿಸುವ ಬಾಡಿಗೆದಾರ ಇವರಿಬ್ಬರ ಮಧ್ಯೆ ಒಂದು ಕರಾರು ಇರುತ್ತದೆ.[೧೦] ಅದರ ಪ್ರಕಾರ ಮಾಲೀಕನು ತನ್ನ ಒಡೆತನದ ಆಸ್ತಿಯನ್ನು ಮತ್ತೊಬ್ಬರಿಗೆ ಬಾಡಿಗೆ ಕಾರಾರಿನ ಮೇಲೆ ಅದನ್ನು ಬಳಸಲು ನೀಡುತ್ತಾನೆ. ಇಲ್ಲಿ ಬಾಡಿಗೆ, ಅವಧಿ, ಪಾವತಿಸುವ ರೀತಿ ಎಲ್ಲವನ್ನೂ ಸ್ಪಷ್ಟವಾಗಿ ನಮೂದಿಸಿರುತ್ತದೆ. ಅದಕ್ಕಾಗಿ ಕೊಡುವ ಬಾಡಿಗೆಯನ್ನು ಲೀಸ್-ರೆಂಟಲ್ಸ್ ಎಂದು ಕರೆಯುತ್ತಾರೆ. ಇದರ ನಡುವಿನ ಒಪ್ಪಂದಕ್ಕೆ ಭೋಗ್ಯ ಪತ್ರ (ಲೀಸ್ ಕಾಂಟ್ರಾಕ್ಟ್) ಎಂದು ಹೆಸರು. ಅದರಲ್ಲಿ ಎಲ್ಲ ಷರತ್ತುಗಳನ್ನು ಬರೆದಿಡುತ್ತಾರೆ. ಅದರ ಪ್ರಕಾರ ನೀಡಿದ ಆಸ್ತಿಯು ವಾಸ್ತವ (Tangible) ಅಥವಾ ಅವಾಸ್ಥವ (Intangible) ಆಗಿರಬಹುದು.[೧೧]
ಸಾಮಾನ್ಯವಾಗಿ ಸಾರ್ವಜನಿಕರಿಗೆ ಷೇರುಗಳನ್ನು ನೀಡುವ ಸಂದರ್ಭದಲ್ಲಿ ಒಟ್ಟು ಕೊಳ್ಳುವ ಭರವಸೆಯ ಕರಾರುಗಳನ್ನು ಮಾಡುತ್ತಾರೆ. ಷೇರುಗಳನ್ನು ಸಾರ್ವಜನಿಕರಿಗೆ ನೀಡುವಾಗ ಸೆಬಿಯ ಪ್ರಕಾರ ಪ್ರಾಸ್ಪೆಕ್ಟಸ್ ವಿವರಣಾ ಪತ್ರವನ್ನು ಪ್ರಕಟಿಸಿದ ೧೨೦ ದಿನಗಳಲ್ಲಿ ಕನಿಷ್ಟ ವಂತಿಗೆಯನ್ನು ಸಂಗ್ರಹಿಸಬೇಕು. ಹೊಸದಾಗಿ ಹುಟ್ಟುವ ಕಂಪನಿಯ ಉದ್ದಿಮೆದಾರರಿಗೆ ಕನಿಷ್ಟ ವಂತಿಗೆ ಸಂಗ್ರಹಿಸುವುದು ಕಷ್ಟದಾಯಕ ಕಾರ್ಯ. ಒಂದು ವೇಳೆ ಕನಿಷ್ಟ ವಂತಿಗೆಯನ್ನು ಸಂಗ್ರಹಿಸದೇ ಇದ್ದಲ್ಲಿ ಕಂಪನಿಯು ಹುಟ್ಟಿಕೊಳ್ಳುವುದಿಲ್ಲ. ವ್ಯವಹಾರ ಪ್ರಾರಂಭ ಮಾಡಲಾಗದು. ಈ ಕನಿಷ್ಟ ವಂತಿಗೆಯ ಷರತ್ತನ್ನು ಪೂರೈಸಲು ಕಂಪನಿಗಳು ಒಟ್ಟು ಕೊಳ್ಳುವ ಭರವಸೆಯ ಕರಾರುಗಳನ್ನು ಮಾಡಿಕೊಳ್ಳುತ್ತವೆ. ಅದರಂತೆ, ಒಟ್ಟು ಭರವಸೆದಾರಿಕೆಯ ಒಂದು ಕರಾರು ಆಗಿದ್ದು, ಅದರಲ್ಲಿ ಭರವಸೆದಾರರ ಮತ್ತು ಕಂಪನಿಗಳು ಕಕ್ಷಿದಾರರು. ಕನಿಷ್ಟ ವಂತಿಗೆ ಅಥವಾ ಸಾರ್ವಜನಿಕರು ಖರೀದಿಸದೇ ಇರುವ ಎಲ್ಲ ಷೇರುಗಳನ್ನು ಇವರು ಖರೀದಿಸುವ ಭರವಸೆಯನ್ನು ನೀಡುತ್ತಾರೆ.
ಕ್ರೆಡಿಟ್ ಎಂದರೆ ಕಿಮ್ಮತ್ತು ಅಥವಾ ಮೌಲ್ಯವೆಂದು ಅರ್ಥ. ಶ್ರೇಣಿ ನಿರ್ಧಾರವೆಂದರೆ ಒಂದು ಅಳತೆಗೋಲಿನ ಪ್ರಕಾರ ಮಟ್ಟ ಅಥವಾ ಶ್ರೇಣಿಗೊಳಿಸುವುದು.[೧೨] ಆದ್ದರಿಂದ ಕೆಲವೊಂದು ಅಳತೆಗೋಲಿನ ಪ್ರಕಾರ ಸ್ಥಾನಮಾನ/ಕಿಮ್ಮತ್ತನ್ನು ಶ್ರೇಣಿಗೊಳಿಸುವರು. ಕಂಪನಿಗಳು, ಪರಸ್ಪರ ನಿಧಿಗಳು ಮತ್ತು ಬ್ಯಾಂಕುಗಳು ಸಾಲ ಪತ್ರಗಳನ್ನು ಸಾರ್ವಜನಿಕರಿಗೆ ನೀಡುತ್ತವೆ. ಅಂತಹ ಸಂದರ್ಭದಲ್ಲಿ ಯಾವ ಸಾಲಪತ್ರಗಳಲ್ಲಿ ಹಣ ಹೂಡಬೇಕೆಂಬುದು ಹೂಡಿಕೆದಾರರಲ್ಲಿ ದೊಡ್ಡ ಪ್ರಶ್ನೆಯಾಗಿರುತ್ತದೆ. ಹೂಡಿಕೆದಾರರಿಗೆ ಕಂಪನಿಗಳು ನೀಡುತ್ತಿರುವ ಸಾಲಪತ್ರಗಳನ್ನು ಸುರಕ್ಷಿತ ದೃಷ್ಟಿಯಿಂದ ಅಳೆಯುವುದು ಕಷ್ಟಕರ. ಇಂತಹ ಸಂದರ್ಭದಲ್ಲಿ ಸಾಲಪತ್ರಗಳನ್ನು ನೀಡುತ್ತಿರುವ ಕಂಪನಿಗಳನ್ನು ಅಧ್ಯಯನ ಮಾಡಿ, ಅವುಗಳಿಗೆ ಶ್ರೇಣಿ ನೀಡುವ ಸೇವೆ ಸಲ್ಲಿಸುವ ಸಂಸ್ಥೆಗಳಿವೆ. ಅವರು ನೀಡಿದ ಶ್ರೇಣಿಯ ಪ್ರಕಾರ ಭದ್ರತೆಯ ಹೂಡಿಕೆಯ ನಿರ್ಧಾರವನ್ನು ಹೂಡಿಕೆದಾರರೇ ಮಾಡಬೇಕು. ಇಂತಹ ಸೇವೆಯನ್ನು ನೀಡುವ ಪರಿಣಿತ ವೃತ್ತಿ ನಿರತರಿದ್ದಾರೆ. ಸಾಲಪತ್ರಗಳಿಗೆ ಮಾತ್ರ ಅವರು ಶ್ರೇಣಿ ನೀಡುತ್ತಾರೆ.
ಭಾರತದಲ್ಲಿ ಸೆಬಿಯಲ್ಲಿ ನೋಂದಾಯಿತಗೊಂಡ ಸಂಸ್ಥೆಗಳು ಶ್ರೇಣಿ ನಿರ್ಧಾರದ ಕಾರ್ಯವನ್ನು ಮಾಡುತ್ತವೆ. ಅವು-
ಭಾರತದ ಸ್ಟಾಕ್ ಎಕ್ಸ್ಚೇಂಜ್ ಮಾರುಕಟ್ಟೆಯಲ್ಲಿ ಅನೇಕ ನ್ಯೂನತೆಗಳಿದ್ದವು, ಅವುಗಳೆಂದರೆ ಪಾರದರ್ಶಕತೆಯ ಕೊರತೆ, ವಿಳಂಬ ನೀತಿ, ಬೆಲೆ ಏರಿಕೆ, ಆಂತರಿಕ ಶೇರು ವ್ಯಾಪಾರಿಗಳು ಇತ್ಯಾದಿಗಳಾಗಿದ್ದವು. ಇವುಗಳನ್ನು ತೆಗೆದುಹಾಕಿ ಬಂಡವಾಳ ಮಾರುಕಟ್ಟೆ ನಿಯಂತ್ರಿಸುವುದಕ್ಕೆ ಭಾರತ ಸರ್ಕಾರ ೧೯೮೮ ರಲ್ಲಿ ಭಾರತದ ಸೆಕ್ಯುರಿಟಿ ವಿನಿಮಯ ಮಂಡಳಿಯನ್ನು (ಸೆಬಿ) ಶಾಸನ ರಹಿತ ಸಂಸ್ಥೆಯನ್ನಾಗಿ ಸ್ಥಾಪಿಸಿತು. ನಂತರ ಇದನ್ನು ಜನವರಿ ೧೯೯೨ರಿಂದ ಶಾಸನಬದ್ದ ಸಂಸ್ಥೆಗೆ ಬದಲಾಯಿಸಿತು.[೧೩] ಮರ್ಚೆಂಟ್ ಬ್ಯಾಂಕುಗಳನ್ನು ಸಂಪೂರ್ಣ ನಿಯಂತ್ರಿಸುವುದಕ್ಕೆ ಮತ್ತು ಶೇರು ಕ್ರಯ-ವಿಕ್ರಯ ಚಟುವಟಿಕೆ ನಿಯಂತ್ರಣಕ್ಕೆ ಪರಸ್ಪರ ನಿಧಿ ಮಾರುಕಟ್ಟೆಯ ಮೇಲ್ವಿಚಾರಣೆ ಮತ್ತು ಮಾರ್ಗ ಸೂಚಿ ರಚಿಸಲಿಕ್ಕೆ ಮತ್ತು ಸ್ಟಾಕ್ ವಿನಿಮಯ ಮಾರುಕಟ್ಟೆ ಕಾರ್ಯ ಸುಧಾರಣೆಗೆ ಅವಶ್ಯವಿರುವ ಕ್ರಮಕೈಗೊಳ್ಳುವುದಕ್ಕೆ ಬೇಕಾದ ಅಧಿಕಾರವನ್ನು ಸರಕಾರ ಸೆಬಿಗೆ ನೀಡಿದೆ. ಸಾರ್ವಜನಿಕರ ಸುರಕ್ಷಿತ ಹೂಡಿಕೆಗೆ ಬಂಡವಾಳ ಮಾರುಕಟ್ಟೆಯಲ್ಲಿ ಬೇಕಾದ ಎಲ್ಲಾ ಕ್ರಮಗಳನ್ನು ಭಾರತ ಸರ್ಕಾರದ ಸಹಕಾರದೊಂದಿಗೆ ಕೈಗೊಳ್ಳುತ್ತದೆ. ಸೆಬಿಗೆ ಹಳೆಯ ಮತ್ತು ಹೊಸದಾಗಿನ ಮಾರುಕಟ್ಟೆಗಳನ್ನು ನಿಯಂತ್ರಿಸುವ ಎಲ್ಲಾ ಅಧಿಕಾರವನ್ನು ಸರ್ಕಾರ ನೀಡಿದೆ. ಬಂಡವಾಳ ನಿಯಂತ್ರಿತ ಕಾಯ್ದೆ ೧೯೪೭ ಭಾರತದಲ್ಲಿ ಉತ್ತಮ ಬಂಡವಾಳ ರಚನೆಗೆ ಅವಕಾಶ ನೀಡಿ, ಕಾರ್ಪೋರೇಟ್ ವಲಯಕ್ಕೆ ಉತ್ತೇಜನವನ್ನು ಒದಗಿಸುತ್ತದೆ. ಇದು ಕೂಡ ಬಂಡವಾಳ ಸಂಸ್ಥೆಗಳ ಬೆಳವಣಿಗೆ ಮತ್ತು ವಿಸ್ತರಣೆಗೆ ಸಾಕಷ್ಟು ನೆರವನ್ನು ನೀಡುತ್ತದೆ. ಸೆಬಿಗೆ ಹೊಸ ಶೇರು ಮಾರುಕಟ್ಟೆ ನೀಡಿಕೆಯ ನಿಯಂತ್ರಣ ಮತ್ತು ಹೊಸ ಶೇರು ಮಾರುಕಟ್ಟೆ ನಿಯಂತ್ರಣ ಮಾಡುವುದರೊಂದಿಗೆ ಸಂಪೂರ್ಣ ಸ್ಟಾಕ್ ಎಕ್ಸ್ಚೇಂಜ್ ಮಾರುಕಟ್ಟೆಯಲ್ಲಿ ಸುರಕ್ಷತೆಯನ್ನೊದಗಿಸುವ ಸಂಸ್ಥೆಯಾಗಿದೆ.
ಸರ್ಕಾರ ಖಾಸಗಿ ಪರಸ್ಪರ ನಿಧಿ ಸ್ಥಾಪನೆಗೆ ಅನುಮತಿ ನೀಡಿದೆ. ಯುನೀಟ್ ಟ್ರಸ್ಟ್ ಆಪ್ ಇಂಡಿಯಾ ಸೆಬಿ ನಿಯಂತ್ರಣಕ್ಕೊಳಪಟ್ಟಿದೆ. ಸೆಬಿಯು ಹಣಕಾಸಿನ ಮಾರುಕಟ್ಟೆಯಲ್ಲಿನ ಹೂಡಿಕೆಗೆ ಕೆಲವು ನಿಯಮಾವಳಿಗಳನ್ನು ಸಡಿಲಿಸಿದೆ. ಸೆಬಿಯು ಪ್ರತಿಯೊಂದು ಪರಸ್ಪರ ನಿಧಿ ಸಂಸ್ಥೆಗೆ ಹೊಸ ಮಾರ್ಗಸೂಚಿಯನ್ನು ನೀಡುತ್ತದೆ.
[೧೪] ಭಾರತ ಸರ್ಕಾರ ೧೯೯೨ ರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಡಾಲರ್ ಮತ್ತು ಯುರೋಪ್ ಈಕ್ವಿಟಿ ಶೇರುಗಳಿಂದ ಭಾರತದ ಕಂಪನಿಗಳು ಬಂಡವಾಳವನ್ನು ಪಡೆಯಲು ಅನುಮತಿ ನೀಡಿದೆ. ಅದರಂತೆ ಜನವರಿ ೧೯೯೫ರ ವೇಳೆಗೆ ಇದರಡಿ ಭಾರತದ ಕಂಪನಿಗಳು ೩ ಬಿಲಿಯನ್ ಅಮೇರಿಕನ್ ಡಾಲರ್ ಬಂಡವಾಳವನ್ನು ಪಡೆದಿದ್ದವು ಮತ್ತು ಯುರೋಪ್ ಈಕ್ವಿಟಿಯಡಿ ೧.೧ ಬಿಲಿಯನ್ ಅಮೇರಿಕನ್ ಡಾಲರ್ ಬಂಡವಾಳವನ್ನು ಪಡೆದಿದ್ದವು. ಕಂಪನಿಗಳು ನಿಗದಿಪಡಿಸಿದ ಒಂದು ವರ್ಷದೊಳಗೆ ಬಂಡವಾಳವನ್ನು ಉಪಯೋಗಿಸಿಕೊಂಡು ನಿಯಮಾನುಸಾರ ಅದನ್ನು ವಾಪಸ್ ಮಾಡಬೇಕು. ಭಾರತ ಸರ್ಕಾರ ವಿದೇಶದಲ್ಲಿ ನೆಲೆಸಿರುವ ಭಾರತೀಯರ ಹೂಡಿಕೆಗೆ ಸರಳ ನೀತಿಯನ್ನು ಅಳವಡಿಸಿದೆ. ಅಂತರರಾಷ್ಟ್ರೀಯ ಕಂಪನಿಗಳು ಇವರಿಗೆ ಶೇರು ಡಿಬೆಂಚರ್ಗಳನ್ನು ಮಾರಿ ರಿಸರ್ವ್ ಬ್ಯಾಂಕಿನ ಅನುಮತಿ ಇಲ್ಲದೆ ಹೆಚ್ಚುವರಿಯಾಗಿ ಶೇಕಡ ೧೦ ರಷ್ಟು ಬಂಡವಾಳವನ್ನು ಭಾರತದ ಯಾವುದೇ ಒಂದು ವಿದೇಶಿ ಸಂಸ್ಥೆಯ ಹೂಡಿಕೆದಾರರಿಂದ ಪಡೆಯುವ ಮಿತಿಯನ್ನು ನಿಗದಿಪಡಿಸಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.