ಬ್ರ್ಯಾಡ್ ಪಿಟ್
From Wikipedia, the free encyclopedia
ವಿಲಿಯಂ ಬ್ರ್ಯಾಡ್ಲೇ "ಬ್ರ್ಯಾಡ್" ಪಿಟ್ (1963ರ ಡಿಸೆಂಬರ್ 18ರಂದು ಜನನ) ಒಬ್ಬ ಅಮೆರಿಕನ್ ನಟ ಮತ್ತು ಚಲನಚಿತ್ರ ನಿರ್ಮಾಪಕ. ವಿಶ್ವದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಹಣೆಪಟ್ಟಿ ಅವರಿಗೆ ಕಟ್ಟಲಾಗಿರುವುದರಿಂದ, ತೆರೆಯಾಚೆಗಿನ ಅವರ ಜೀವನದ ಬಗ್ಗೆ ವರದಿ ಮಾಡುವತ್ತ ಮಾಧ್ಯಮಗಳು ಹೆಚ್ಚು ಆಸಕ್ತಿ ವಹಿಸಿವೆ.[1][2] ಬ್ರ್ಯಾಡ್ ಪಿಟ್ ಅವರು ಎರಡು ಅಕಾಡೆಮಿ ಪ್ರಶಸ್ತಿಮತ್ತು ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಪಡೆದಿದ್ದು, ಇದರಲ್ಲಿ ಒಂದನ್ನು ಗೆದ್ದುಕೊಂಡಿದ್ದಾರೆ.
ಬ್ರ್ಯಾಡ್ ಪಿಟ್ | |
---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ವಿಲಿಯಂ ಬ್ರಾಡ್ಲಿ ಪಿಟ್ (1963-12-18) ಡಿಸೆಂಬರ್ ೧೮, ೧೯೬೩ (ವಯಸ್ಸು ೬೦) , ಅಮೆರಿಕಾದ ಸಂಯುಕ್ತ ಸಂಸ್ಥಾನಗಳು |
ವೃತ್ತಿ | Actor, Producer |
ವರ್ಷಗಳು ಸಕ್ರಿಯ | 1987– present |
ಪತಿ/ಪತ್ನಿ | ಜೆನ್ನಿಫರ್ ಅನಿಸ್ಟನ್ (2000–2005) |
ದೂರದರ್ಶನದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳುವುದರೊಂದಿಗೆ ಬ್ರ್ಯಾಡ್ ಪಿಟ್ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. ಈ ಪೈಕಿ, 1987ರಲ್ಲಿ CBSನ ದೈನಿಕ ಧಾರಾವಾಹಿ "ಡಲ್ಲಸ್" ಕೂಡ ಒಂದು. 1991ರಲ್ಲಿ ತೆರೆ ಕಂಡ 'ರೋಡ್ ಮೂವೀ'(ಪ್ರಯಾಣದ ವೇಳೆ ನಡೆಯುವ ಸನ್ನಿವೇಶಗಳ ಸುತ್ತ ತೆಗೆಯುವ ಚಿತ್ರ) ಪ್ರಕಾರದ ಚಲನಚಿತ್ರ ಥೆಲ್ಮಾ ಅಂಡ್ ಲೂಯಿಸ್ ನಲ್ಲಿ, ಬಿಟ್ಟಿಯಾಗಿ ಪ್ರಯಾಣಿಸುತ್ತಾ ಗೀನಾ ಡೇವಿಸ್ ಪಾತ್ರವನ್ನು ತಪ್ಪು ದಾರಿಗೆಳೆಯುವ ದನಗಾಹಿರಾವುತನ ಪಾತ್ರವನ್ನು ನಿರ್ವಹಿಸಿ ಖ್ಯಾತಿಯನ್ನು ಪಡೆದರು. ಬ್ರ್ಯಾಡ್ ಪಿಟ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ ದೊಡ್ಡ-ಬಜೆಟ್ ಚಲನಚಿತ್ರಗಳಾದ ಎ ರಿವರ್ ರನ್ಸ್ ಥ್ರೂ ಇಟ್ 1992ರಲ್ಲಿ ಮತ್ತು ಇಂಟರ್ವ್ಯೂ ವಿತ್ ದಿ ವ್ಯಾಂಪೈರ್ 1994ರಲ್ಲಿ ತೆರೆ ಕಂಡವು.1994ರಲ್ಲಿ ತೆರೆ ಕಂಡ ಲೆಜೆಂಡ್ಸ್ ಆಫ್ ದಿ ಫಾಲ್ ಎಂಬ ನಾಟಕೀಯ ಚಲನಚಿತ್ರದಲ್ಲಿ ಆಂತೊನಿ ಹಾಪ್ಕಿನ್ಸ್ ಎದುರು ಪಾತ್ರ ನಿರ್ವಹಿಸಿದ ಬ್ರ್ಯಾಡ್ ಪಿಟ್ ಮೊಟ್ಟಮೊದಲ ಗೋಲ್ಟನ್ ಗ್ಲೋಬ್ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡರು. 1995ರಲ್ಲಿ ಬಿಡುಗಡೆಯಾದ ಅಪರಾಧ ಜಗತ್ತಿನ ಕುರಿತಾದ ರೋಮಾಂಚಕ ಚಲನಚಿತ್ರ ಸೆವೆನ್ ಮತ್ತು ವೈಜ್ಞಾನಿಕ ಕಾದಂಬರಿ ಆಧಾರಿತ ಚಲನಚಿತ್ರ ಟ್ವೆಲ್ವ್ ಮಂಕೀಸ್ ನಲ್ಲಿನ ಅವರ ಅಭಿನಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು, ಅಲ್ಲದೆ ಟ್ವೆಲ್ವ್ ಮಂಕೀಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಬ್ರ್ಯಾಡ್ ಪಿಟ್ ಗೋಲ್ಡನ್ ಗ್ಲೋಬ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು ಮತ್ತು ಅಕಾಡೆಮಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡರು. ನಾಲ್ಕು ವರ್ಷಗಳ ನಂತರ, 1999ರಲ್ಲಿ ತೆರೆ ಕಂಡ ಫೈಟ್ ಕ್ಲಬ್ ಚಿತ್ರದಲ್ಲಿನ ಅಮೋಘ ಅಭಿನಯ ಬ್ರ್ಯಾಡ್ ಪಿಟ್ ಅವರಿಗೆ ಅಭಿಮಾನಿಗಳ ಸಮೂಹವನ್ನೇ ಸೃಷ್ಟಿಸಿತು. ಬಳಿಕ, 2001ರಲ್ಲಿ ಅಂತರರಾಷ್ಟ್ರೀಯವಾಗಿ ಭರ್ಜರಿ ಯಶಸ್ಸು ಕಂಡ ಓಷಿಯನ್ಸ್ ಇಲೆವೆನ್ ಮತ್ತು ಅದರ ಮುಂದಿನ ಹಂತದ ಓಷಿಯನ್ಸ್ ಟ್ವೆಲ್ವ್ (2004) ಮತ್ತು ಓಷಿಯನ್ಸ್ ಥರ್ಟೀನ್ (2007) ಚಲನಚಿತ್ರಗಳಲ್ಲಿ ನಟಿಸಿದರು. ವಾಣಿಜ್ಯ ದೃಷ್ಟಿಯಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ಅವರ ಚಲನಚಿತ್ರಗಳೆಂದರೆ 2004ರ ಟ್ರಾಯ್ ಮತ್ತು 2005ರ ಮಿಸ್ಟರ್ ಅಂಡ್ ಮಿಸೆಸ್ ಸ್ಮಿತ್. 2008ರಲ್ಲಿ ತೆರೆಕಂಡ ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್ ಚಲನಚಿತ್ರದಲ್ಲಿ ಅಭಿಧಾನ ಪಾತ್ರದಲ್ಲಿ ನಟಿಸಿದಕ್ಕಾಗಿ ಬ್ರ್ಯಾಡ್ ಪಿಟ್ ಎರಡನೆ ಬಾರಿಗೆ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನವನ್ನು ಪಡೆದರು.
ಖ್ಯಾತ ನಟಿ ಗ್ವಿನೆತ್ ಪಾಲ್ಟ್ರೋರೊಂದಿಗಿನ ಬ್ರ್ಯಾಡ್ ಪಿಟ್ ಸಂಬಂಧ ಎಲ್ಲರ ಗಮನ ಸೆಳೆದಿತ್ತು, ಆದರೆ ಇನ್ನೊರ್ವ ನಟಿ ಜೆನಿಫರ್ ಅನಿಸ್ಟನ್ರನ್ನು ಬ್ರ್ಯಾಡ್ ಪಿಟ್ ವಿವಾಹವಾದರೂ, ಅದು ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಾಳಲಿಲ್ಲ. 2009ರಂದಿನಿಂದ, ನಟಿ ಏಂಜೆಲಿನಾ ಜೋಲೀರೊಂದಿಗೆ ಬ್ರ್ಯಾಡ್ ಪಿಟ್ ವಾಸಿಸುತ್ತಿದ್ದಾರೆ, ಜೋಲೀ ಜೊತೆ ಅವರ ಈ ಸಂಬಂಧ ವಿಶ್ವಾದ್ಯಂತ ಮಾಧ್ಯಮಗಳ ಗಮನವನ್ನು ಸೆಳೆದಿದೆ.[3] ಬ್ರ್ಯಾಡ್ ಪಿಟ್ ಮತ್ತು ಏಂಜೆಲಿನಾ ಜೋಲೀ ಅವರು ಮ್ಯಾಡಾಕ್ಸ್, ಜಹಾರಾ ಮತ್ತು ಪ್ಯಾಕ್ಸ್ ಎಂಬ ಮೂರು ಮಂದಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ ಹಾಗೂ ಷಿಲೋ, ನಾಕ್ಸ್ ಮತ್ತು ವಿವಿಯೆನ್ ಎಂಬ ಮಕ್ಕಳಿಗೆ ಜನ್ಮವಿತ್ತಿದ್ದಾರೆ. ಬ್ರ್ಯಾಡ್ ಪಿಟ್ ಅವರು "ಪ್ಲ್ಯಾನ್ ಬಿ ಎಂಟರ್ಟೇನ್ಮೆಂಟ್" ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯ ಮಾಲೀಕರಾಗಿದ್ದು, 2007ರಲ್ಲಿ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿ ಗಳಿಸಿದ ಚಿತ್ರ ದಿ ಡಿಪಾರ್ಟೆಡ್ ಮತ್ತು ಇತರೆ ಚಲನಚಿತ್ರಗಳನ್ನು ಈ ಸಂಸ್ಥೆ ನಿರ್ಮಿಸಿದೆ. ಏಂಜೆಲಿನಾ ಜೋಲೀಯವರೊಂದಿಗೆ ತಮ್ಮ ಸಂಬಂಧವನ್ನಿಟ್ಟುಕೊಂಡಾಗಿನಿಂದಲೂ, ಬ್ರ್ಯಾಡ್ ಪಿಟ್ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಹಿತಾಸಕ್ತಿಯ ವಿಚಾರಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.