ಪುಪ್ಫುಸ
From Wikipedia, the free encyclopedia
ಪುಪ್ಫುಸ ಶ್ವಾಸನಾಳ (ಟ್ರೇಕಿಯ) ಮತ್ತು ಶ್ವಸನಿಗಳ (ಮೇಯ್ನ್ ಬ್ರಾಂಕೈ) ಮೂಲಕ ವಾಯುಕೋಶಗಳ (ಆಲ್ವಿ ಯೋಲೈ) ಒಳಕ್ಕೆ ಎಳೆದುಕೊಳ್ಳಲ್ಪಡುವ ವಾಯುವಿನಿಂದ ಆಕ್ಸಿಜನ್ ವಿರಳವಾಗಿರುವ ರಕ್ತವನ್ನು ಆಕ್ಸಿಜನೀಕರಿಸುವ ಮತ್ತು ಅದೇ ವೇಳೆ ಅದರಲ್ಲಿರುವ ಹೆಚ್ಚುವರಿ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸುವ ಉಸಿರಿನ ಅಂಗ (ಲಂಗ್). ನಾಲ್ಕು ಮತ್ತು ಐದನೆಯ ಬೆನ್ನುಮೂಳೆಯ ನಡುಬಿಲ್ಲೆಯ ಮಟ್ಟದಲ್ಲಿ ಎಡಹೃತ್ಕರ್ಣದ ಮೇಲ್ಭಾಗದಲ್ಲಿ ಶ್ವಾಸನಾಳ ಭಾಗಗಳಾಗಿ ಎಡ ಮತ್ತು ಬಲ ಶ್ವಸನಿಗಳಾಗುತ್ತದೆ. ಶ್ವಾಸನಾಳ ಎರಡು ಶಾಖೆ ತೊಟ್ಟಿಗೆ ಕಾಯಿ ಜಂಟಿಸಿರುವಂತೆ ಎರಡು ಶ್ವಸನಿಗಳ ಕೊನೆಗಳಿಗೂ ಎಡ ಮತ್ತು ಬಲ ಪುಪ್ಫುಸಗಳು ಜಂಟಿಯಾಗಿವೆ ಮತ್ತು ಎದೆಗೂಡಿನ ಮಧ್ಯತಡಿಕೆಯ (ಮೀಡಿಯಾಸ್ಪೈನಮ್) ಆಯಾಪಕ್ಕಗಳ ಅವಕಾಶಗಳನ್ನು ತುಂಬಿಕೊಂಡಿವೆ. ಎಡಶ್ವಸನಿ ಕಿರಿದಾಗಿಯೂ ಉದ್ದವಾಗಿಯೂ ಇದ್ದು ಸ್ಪಷ್ಟವಾಗಿ ಎಡಕ್ಕೆ ತಿರುಗಿದೆ. ಆದರೆ ಬಲಶ್ವಸನಿ ಶ್ವಾಸನಾಳದ ವಿಸ್ತರಣೆಯಂತೆಯೇ ಇದ್ದು ಅದರಿಂದ ನೇರವಾಗಿ ಕೆಳಕ್ಕೆ ಇಳಿಯುತ್ತದೆ. ಆದ್ದರಿಂದ ಉಸಿರೆಳೆದುಕೊಂಡಾಗ ಅಕಸ್ಮಾತ್ತಾಗಿ ಶ್ವಾಸನಾಳದ ಒಳಕ್ಕೆಹೋಗುವ ಘನದ್ರವಾನಿಲವಸ್ತುಗಳು ಬಲಪುಪ್ಫುಸವನ್ನು ಸೇರುವ ಪ್ರಮೇಯವೇ ಹೆಚ್ಚು. ಶ್ವಸನಿಗೆ ಪುಪ್ಫುಸ ಜಂಟಿಯಾಗಿರುವ ಸ್ಥಳಕ್ಕೆ ಪುಪ್ಫುಸದ ನಾಭಿ (ಹೈಲಮ್) ಎಂದು ಹೆಸರು. [1]