From Wikipedia, the free encyclopedia
ನಂದಿಯು ಈಶ್ವರನ ವಾಹನವಾದ ವೃಷಭ, ಶಿವ ಪ್ರಥಮಗಣಗಳ ಮುಖಂಡ. ಈತನನ್ನು ನಂದೀಶ್ವರ ಎಂದೂ ಕರೆಯಲಾಗಿದೆ. ಈತನ ತಾಯಿ ಕಾಮಧೇನು. ಸಹೋದರಿ ನಂದಿನಿ. ಶಾಲಂಕ ಮುನಿಯ ಮಗನಾದ, ಶಿಲೆಯನ್ನು ಆಹಾರ ಮಾಡಿಕೊಂಡು ತಪಸ್ಸು ಮಾಡುತ್ತಿದ್ದ ಶಿಲಾದಮುನಿ ಪುತ್ರ ಸಂತಾನಾರ್ಥವಾಗಿ ಮೂರು ಕೋಟಿ ವರ್ಷ ತಪಸ್ಸು ಮಾಡಿದ. ಈತನ ತಪಸ್ಸಿಗೆ ಮೆಚ್ಚಿದ ಶಿವ ಆಯೋನಿಜನಾದ ಮಗನನ್ನು ಅನುಗ್ರಹಿಸಿದ. ಋಷಿ ಯಜ್ಞಕ್ಕಾಗಿ ಭೂಶುದ್ಧಿಯಲ್ಲಿ ತೊಡಗಿರಲು ನಂದಿ ಶಿಶುರೂಪದಿಂದ ಕಾಣಿಸಿಕೊಂಡ.
ಒಮ್ಮೆ ರಾವಣ ಕುಬೇರನನ್ನು ಜಯಿಸಿ ಪುಷ್ಪಕ ವಿಮಾನದಲ್ಲಿ ಬರುತ್ತಿರುವಾಗ ಷಣ್ಮುಖನ ಜನನಸ್ಥಾನವಾದ ಶರವಣ ವನದ ಬಳಿ ಆ ವಿಮಾನ ನಿಂತುಬಿಟ್ಟಿತು. ಆಗ ಅಲ್ಲೇ ಇದ್ದ ನಂದಿ ರಾವಣನ ಹತ್ತಿರ ಬಂದು ಈಶ್ವರ ಕೈಲಾಸ ಪರ್ವತದಲ್ಲಿ ಪಾರ್ವತಿಯೊಂದಿಗೆ ಕ್ರೀಡಿಸುತ್ತಿದ್ದಾನೆ. ಈಗ ಅಲ್ಲಿಗೆ ಯಾರೂ ಹೋಗಲು ಸಾಧ್ಯವಿಲ್ಲ. ನೀನು ಹೋಗಿ ವ್ಯರ್ಥವಾಗಿ ಹಾಳಾಗಬೇಡ ಎಂದ. ಆಗ ರಾವಣ ನಂದಿಗೆ ಮಂಗದ ಮೋರೆಯವನೆ ಎಂದು ಪರಿಹಾಸ್ಯ ಮಾಡಲಾಗಿ ನಿನ್ನ ರಾಜ್ಯ ಸಂಪತ್ತುಗಳೆಲ್ಲ ಕಪಿಗಳಿಂದಲೇ ನಾಶವಾಗಲಿ ಎಂದು ನಂದಿ ರಾವಣನಿಗೆ ಶಾಪವಿತ್ತ.
ಈತ ದಕ್ಷಯಜ್ಞ ವಿನಾಶದ ಕಾಲದಲ್ಲಿ ಭಗನೆಂಬ ಋತ್ವಿಜನನ್ನು ಕಟ್ಟಿ ಹಾಕಿದ. ವೀರಭದ್ರ ಆ ಭಗನ ಕಣ್ಣುಗಳನ್ನು ಕಿತ್ತು ಹಾಕಿದ.
ಭಕ್ತಿಭಂಡಾರಿ ಬಸವಣ್ಣನವರು ನಂದಿಯ ಅವತಾರ ಎಂದು ವೀರಶೈವ ಪುರಾಣಗಳು ಹೇಳುತ್ತವೆ.
Seamless Wikipedia browsing. On steroids.