ದ ಡಾರ್ಕ್ ನೈಟ್ (ಚಲನಚಿತ್ರ)
From Wikipedia, the free encyclopedia
ದ ಡಾರ್ಕ್ ನೈಟ್ 2008ರ ಒಂದು ಸೂಪರ್ಹೀರೊ ಚಲನಚಿತ್ರ. ಕ್ರಿಸ್ಟೋಫರ್ ನೋಲನ್ ಈ ಚಿತ್ರದ ನಿರ್ದೇಶಕರು, ಸಹ ನಿರ್ಮಾಪಕರು ಮತ್ತು ಸಹ ಬರಹಗಾರರಾಗಿದ್ದರು. ಡಿ.ಸಿ. ಕಾಮಿಕ್ಸ್ನ ಬ್ಯಾಟ್ಮ್ಯಾನ್ ಪಾತ್ರದ ಮೇಲೆ ಆಧಾರಿತವಾದ ಈ ಚಲನಚಿತ್ರವು ನೋಲನ್ರ ದ ಡಾರ್ಕ್ ನೈಟ್ ತ್ರಯದ ಎರಡನೇ ಕಂತಾಗಿದೆ ಮತ್ತು ೨೦೦೫ರ ಚಿತ್ರ ಬ್ಯಾಟ್ಮಾನ್ ಬಿಗಿನ್ಸ್ನ ಉತ್ತರಭಾಗವಾಗಿದೆ. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕ್ರಿಸ್ಚನ್ ಬೇಲ್ ನಟಿಸಿದ್ದಾರೆ ಮತ್ತು ಪೋಷಕ ಪಾತ್ರಗಳಲ್ಲಿ ಮೈಕಲ್ ಕೇನ್, ಹೀತ್ ಲೆಜರ್, ಗ್ಯಾರಿ ಓಲ್ಡ್ಮನ್, ಆರನ್ ಎಖಾರ್ಟ್, ಮ್ಯಾಗಿ ಜಿಲನ್ಹಾಲ್ ಮತ್ತು ಮೊರ್ಗನ್ ಫ಼್ರೀಮನ್ ನಟಿಸಿದ್ದಾರೆ. ಚಿತ್ರದಲ್ಲಿ, ಬ್ರೂಸ್ ವೇನ್ / ಬ್ಯಾಟ್ಮ್ಯಾನ್ (ಬೇಲ್), ಪೋಲಿಸ್ ಲೆಫ಼್ಟಿನೆಂಟ್ ಜೇಮ್ಸ್ ಗಾರ್ಡನ್ (ಓಲ್ಡ್ಮನ್) ಹಾಗೂ ಜಿಲ್ಲಾ ಅಟಾರ್ನಿ ಹಾರ್ವಿ ಡೆಂಟ್ ಗಾಥಮ್ ಸಿಟಿಯಲ್ಲಿನ ಸಂಘಟಿತ ಅಪರಾಧವನ್ನು ಕಿತ್ತುಹಾಕಲು ಒಂದು ಕೂಟವನ್ನು ರಚಿಸಿಕೊಳ್ಳುತ್ತಾರೆ. ಆದರೆ ಜೋಕರ್ (ಲೆಜರ್) ಎಂದು ಕರೆಯಲ್ಪಡುವ ಒಬ್ಬ ಅರಾಜಕತಾವಾದಿ ಮಹಾಮೇಧಾವಿಯಿಂದ ಭೀತಿಗೊಳಗಾಗುತ್ತಾರೆ. ಇವನು ಬ್ಯಾಟ್ಮ್ಯಾನ್ನ ಪ್ರಭಾವವನ್ನು ದುರ್ಬಲಗೊಳಿಸಿ ನಗರವನ್ನು ಅವ್ಯವಸ್ಥೆಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾನೆ.
ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ. ವಿಕೀಕರಣದ ನಂತರ ಈ ಟೆಂಪ್ಲೇಟನ್ನು ತೆಗೆದುಹಾಕಿ. |
೧೯೪೦ರಲ್ಲಿ ಜೋಕರ್ನ ವಿನೋದ ಚಿತ್ರಪುಸ್ತಕದ ಪ್ರಥಮ ಪ್ರವೇಶ, ೧೯೮೮ರ ರೇಖಾಚಿತ್ರ ಕಾದಂಬರಿ ದ ಕಿಲಿಂಗ್ ಜೋಕ್ ಮತ್ತು ಹಾರ್ವಿ ಡೆಂಟ್ನ ಮೂಲವನ್ನು ಬೇರೆ ರೀತಿಯಲ್ಲಿ ಹೇಳಿದ ೧೯೯೬ರ ಸರಣಿ ದ ಲಾಂಗ್ ಹ್ಯಾಲೊವೀನ್ ಚಲನಚಿತ್ರಕ್ಕಾಗಿ ನೋಲನ್ರ ಸ್ಫೂರ್ತಿಯಾಗಿತ್ತು. "ಡಾರ್ಕ್ ನೈಟ್" ಎನ್ನುವುದು ಬ್ಯಾಟ್ಮ್ಯಾನ್ಗೆ ಅನ್ವಯಿಸಲಾದ ಅಡ್ಡಹೆಸರಾಗಿದೆ.[1][2] ದ ಡಾರ್ಕ್ ನೈಟ್ ಅನ್ನು ಮುಖ್ಯವಾಗಿ ಷಿಕಾಗೊ, ಜೊತೆಗೆ ಅಮೇರಿಕ, ಯುನೈಟಡ್ ಕಿಂಗ್ಡಮ್ ಹಾಗೂ ಹಾಂಗ್ ಕಾಂಗ್ನ ಹಲವು ಇತರ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು. ಚಲನಚಿತ್ರದಲ್ಲಿ ಜೋಕರ್ನ ಮೊದಲ ತೋರಿಕೆ ಸೇರಿದಂತೆ, ಕೆಲವು ದೃಶ್ಯಾವಳಿಗಳನ್ನು ಚಿತ್ರೀಕರಿಸಲು ನೋಲನ್ ಐಮ್ಯಾಕ್ಸ್ ೭೦ ಮಿ.ಮಿ. ಕ್ಯಾಮರಾಗಳನ್ನು ಬಳಸಿದರು. ಆರಂಭದಲ್ಲಿ ದ ಡಾರ್ಕ್ ನೈಟ್ಗಾಗಿ ವಾರ್ನರ್ ಬ್ರದರ್ಸ್ ವೈರಲ್ ಮಾರಾಟಗಾರಿಕಾ ಪ್ರಚಾರವನ್ನು ಸೃಷ್ಟಿಸಿದರು, ಪ್ರಚಾರದ ಜಾಲತಾಣಗಳು ಮತ್ತು ಜೋಕರ್ ಆಗಿ ಲೆಜರ್ನ ತೆರೆಚಿತ್ರಗಳನ್ನು ಎತ್ತಿತೋರಿಸುವ ಮಾದರಿ ತುಣುಕುಗಳನ್ನು ಅಭಿವೃದ್ಧಿಪಡಿಸಿದರು. ಚಿತ್ರೀಕರಣವನ್ನು ಮುಗಿಸಿದ ಕೆಲವು ತಿಂಗಳ ನಂತರ, ಮತ್ತು ಚಿತ್ರದ ಬಿಡುಗಡೆಯ ಆರು ತಿಂಗಳು ಮೊದಲು, ಲೆಜರ್ ಜನೆವರಿ ೨೨, ೨೦೦೮ ರಂದು, ಸೂಚಿಸಿದ ಔಷಧಿಗಳ ವಿಷಕಾರಿ ಸಂಯೋಜನೆಯ ಕಾರಣದಿಂದ ಸಾವನ್ನಪ್ಪಿದರು. ಪರಿಣಾಮವಾಗಿ, ವಾರ್ತಾಪತ್ರಿಕೆಗಳಿಂದ ಮತ್ತು ಚಿತ್ರ ನೋಡುವ ಸಾರ್ವಜನಿಕರಿಂದ ತೀವ್ರ ಗಮನ ಸೆಳೆಯಿತು.
ಅಮೇರಿಕ ಮತ್ತು ಯುನೈಟಡ್ ಕಿಂಗ್ಡಮ್ನ ಸಹನಿರ್ಮಾಣವಾದ ದ ಡಾರ್ಕ್ ನೈಟ್ ಅಮೇರಿಕದಲ್ಲಿ ಜುಲೈ ೧೮,೨೦೦೮ ರಂದು ಮತ್ತು ಯುನೈಟಡ್ ಕಿಂಗ್ಡಮ್ನಲ್ಲಿ ಜುಲೈ ೨೫,೨೦೦೮ ರಂದು ಬಿಡುಗಡೆಗೊಂಡಿತು. ಆ ದಶಕದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಮತ್ತು ಸಾರ್ವಕಾಲಿಕ ಶ್ರೇಷ್ಠ ಸೂಪರ್ಹೀರೊ ಚಲನಚಿತ್ರಗಳಲ್ಲಿ ಒಂದು ಎಂದು ಪರಿಗಣಿತವಾದ[3][4] ಈ ಚಿತ್ರವು ಬಹಳ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅದರ ಸಾಹಸ ,ಸಂಗೀತ, ಚಿತ್ರಕಥೆ, (ವಿಶೇಷವಾಗಿ ಲೆಜರ್ನ) ನಟನೆಗಳು, ದೃಶ್ಯ ಪರಿಣಾಮಗಳು ಮತ್ತು ನಿರ್ದೇಶನಕ್ಕಾಗಿ. ಅದರ ಚಿತ್ರಮಂದಿರ ಪ್ರದರ್ಶನಗಳ ಅವಧಿಯಲ್ಲಿ ಅಸಂಖ್ಯಾತ ದಾಖಲೆಗಳನ್ನು ಸ್ಥಾಪಿಸಿತು.[5] ದ ಡಾರ್ಕ್ ನೈಟ್ ೨೮೭ ವಿಮರ್ಶಕರ ಹತ್ತು ಅಗ್ರ ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು ಮತ್ತು ಹೆಚ್ಚಿನ ವಿಮರ್ಶಕರು ದ ಡಾರ್ಕ್ ನೈಟ್ ಅನ್ನು ಆ ವರ್ಷ ಬಿಡುಗಡೆಯಾದ ಅತ್ಯುತ್ತಮ ಚಿತ್ರವೆಂದು ಹೆಸರಿಸಿದರು.[6] ವಿಶ್ವಾದ್ಯಂತ $1 ಬಿಲಿಯನ್ಗಿಂತ ಹೆಚ್ಚು ಹಣಗಳಿಸಿದ ಈ ಚಿತ್ರವು ೨೦೦೮ರ ಅತ್ಯಂತ ಹೆಚ್ಚು ಹಣಗಳಿಸಿದ ಚಿತ್ರವಾಯಿತು. ಈ ಚಲನಚಿತ್ರವು ಎಂಟು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆಯಿತು; ಇದು ಅತ್ಯುತ್ತಮ ಧ್ವನಿ ಸಂಕಲನಕ್ಕಾಗಿ ಪ್ರಶಸ್ತಿ ಪಡೆಯಿತು ಮತ್ತು ಲೆಜರ್ಗೆ ಮರಣೋತ್ತರವಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಲಾಯಿತು.[7] ಚಿತ್ರತ್ರಯದಲ್ಲಿನ ಅಂತಿಮ ಚಿತ್ರವಾದ ದ ಡಾರ್ಕ್ ನೈಟ್ ರೈಸಸ್ ಜುಲೈ ೨೦,೨೦೧೨ರಂದು ಬಿಡುಗಡೆಯಾಯಿತು.