From Wikipedia, the free encyclopedia
ದೇವೇಂದ್ರನಾಥ ಠಾಕೂರ್ (1817-1905) ಏಕೇಶ್ವರವಾದಿ. ಭಾರತೀಯ ಬ್ರಹ್ಮಸಮಾಜದ ನೇತಾರ.
ಹುಟ್ಟಿದ್ದು ಬಂಗಾಳದ ಶ್ರೀಮಂತ ಮನೆತನದಲ್ಲಿ. ಇವರ ತಂದೆ ದ್ವಾರಕಾನಾಥ ಠಾಕೂರರು. ಆಂಗ್ಲರನ್ನು ಸಹಭಾಗಿಗಳನ್ನಾಗಿ ಮಾಡಿಕೊಂಡು ನಡೆಸುತ್ತಿದ್ದ, ಭಾರತದಲ್ಲೆ ಅತಿದೊಡ್ಡದು ಎನಿಸಿಕೊಂಡ, ಕಾರ್ ಠಾಕೂರ್ ಕಂಪನಿ ಎಂಬ ವ್ಯಾಪಾರ ಸಂಸ್ಥೆಯ ಮಾಲೀಕರು. ಇವರನ್ನು ರಾಜಕುಮಾರ ದ್ವಾರಕನಾಥರೆಂದೇ ಕರೆಯಲಾಗುತ್ತಿತ್ತು. ದೇವೇಂದ್ರನಾಥರು ಹಿಂದೂ ಕಾಲೇಜಿನಲ್ಲಿ ಉಚ್ಚ ಶಿಕ್ಷಣ ಪಡೆದರು. ಮೊದಲಿನಿಂದಲೂ ವಿಚಾರಶೀಲ ಪ್ರವೃತ್ತಿಯುಳ್ಳ ಇವರು 1840ರಲ್ಲಿ ತತ್ತ್ವಬೋಧಿನೀ ಸಭಾ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ ವೇದಶಾಸ್ತ್ರಗಳ ಮೂಲ ಅಧ್ಯಯನಕ್ಕೆ ಪ್ರಾಧಾನ್ಯವಿರುವಂತೆ ಬ್ರಾಹ್ಮಧರ್ಮ ಬೋಧನೆಯನ್ನು ಆರಂಭಿಸಿದರು. ಅಲ್ಲಿ ಪ್ರತಿ ವಾರವೂ ಒಂದು ನಿರ್ದಿಷ್ಟ ದಿವಸದಲ್ಲಿ ಭಗವದ್ಭಜನೆ ಮತ್ತು ವಿಚಾರ ಪ್ರಚೋದಕ ಉಪನ್ಯಾಸಗಳಿರುತ್ತಿದ್ದುವು. ಬಹುಬೇಗ ಈ ಸಭೆ ಲೋಕಪ್ರಿಯತೆ ಗಳಿಸಿ ಅನೇಕ ಪ್ರಭಾವಶಾಲೀ ಸದಸ್ಯರನ್ನು ಹೊಂದಿ ಪ್ರಸಿದ್ಧವಾಯಿತು.
ಈ ಮಧ್ಯೆ ರಾಜಾರಾಮಮೋಹನರಾಯರು ಇಂಗ್ಲೆಂಡಿಗೆ ತೆರಳಿದುದರಿಂದ ಅವರು 1828ರಲ್ಲಿ ಸ್ಥಾಪಿಸಿ ಬೆಳೆಸಿದ್ದ ಬ್ರಹ್ಮಸಮಾಜ ನಿರ್ದೇಶಕರಿಲ್ಲದೆ ಶಿಥಿಲವಾಗತೊಡಗಿತ್ತು. ದೇವೇಂದ್ರನಾಥರು ಅದರ ಕರ್ಣಧಾರತ್ವ ವಹಿಸಿ (1842) ಅದಕ್ಕೆ ಚೈತನ್ಯ ತುಂಬಿದರು. ಅವರ ನೇತೃತ್ವದಲ್ಲೇ ನಡೆಯುತ್ತಿದ್ದ ವೇದೋಪನಿಷತ್ತುಗಳ ಪಾಠಗಳ ಜತೆಯಲ್ಲಿ ಬಂಗಾಳೀ ಭಾಷೆಯ ಭಜನೆಗಳೂ ಪ್ರವಚನಗಳೂ ಹೆಚ್ಚು ಹೆಚ್ಚು ಜನಪ್ರಿಯವಾದುವು. 1847ರಲ್ಲಿ ದೇವೇಂದ್ರನಾಥರು ತತ್ತ್ವಬೋಧಿನೀ ಪತ್ರಿಕಾ ಎಂಬ ಮಾಸಪತ್ರಿಕೆಯನ್ನೂ ಆರಂಭಿಸಿದರು. ಕ್ರಮೇಣ ಬ್ರಹ್ಮಸಮಾಜದ ಸದಸ್ಯರ ಸಂಖ್ಯೆಯೂ ಹೆಚ್ಚಾಗಿ ಹಲವಾರು ಶಾಖೆಗಳೂ ಹುಟ್ಟಿಕೊಂಡುವು. ವೇದಗಳು ಅನೇಕ ದೇವತೆಗಳನ್ನು ಪ್ರತಿಪಾದಿಸುವುದರಿಂದ ಅವುಗಳ ಪಥಪ್ರದರ್ಶನ ಅಗ್ರಾಹ್ಯವೆಂಬ ವಾದ ಕೆಲವು ಯುವಕ ಸದಸ್ಯರಲ್ಲಿ ಆರಂಭವಾಯಿತು. ಅದರಿಂದಾಗಿ ವೇದೋಪನಿಷತ್ತುಗಳ ಪಾಠಪ್ರವಚನಗಳನ್ನು ಕೈಬಿಡಲಾಯಿತು. ಆ ಬಳಿಕ 1850ರಲ್ಲಿ ದೇವೇಂದ್ರನಾಥರು ಬ್ರಹ್ಮಧರ್ಮ ಎಂಬ ಲೇಖನವನ್ನು ಸಂಸ್ಕøತದಲ್ಲೂ ಬಂಗಾಳಿಯಲ್ಲೂ ಬರೆದು, ಅದರಲ್ಲಿ ಏಕೇಶ್ವರವಾದವನ್ನು ಪ್ರತಿಪಾದಿಸಿ, ಭಗವಂತ ಒಬ್ಬನೇ, ಅವನು ಅಜರ, ಅಮರ, ಅಪ್ರಮೇಯ, ಸರ್ವಜ್ಞ; ಅವನೇ ಸರ್ವೇಶ್ವರ; ಸುಗುಣ ಬ್ರಹ್ಮನೂ ನಿರ್ಗುಣ ಬ್ರಹ್ಮನೂ ಅವನೇ ಅವನ ಪೂಜೆಯೊಂದೇ ನಮ್ಮ ಸಾಂಸಾರಿಕ ಮತ್ತು ಆಧ್ಯಾತ್ಮಿಕ ಕ್ಷೇಮಕ್ಕೆ ಸಾಧನ; ಅವನ ಬಗೆಗೆ ಪ್ರೇಮಾದರಗಳಿಂದ ಕೂಡಿ ಅವನ ಇಚ್ಛಾನುಸಾರ ವರ್ತಿಸುವುದೇ ಅವನ ಪೂಜೆ, ಎಂದು ನಿರೂಪಿಸಿದರು. ಈ ನಿರೂಪಣಾ ವಿಧಾನವನ್ನು ಜನ ಮೆಚ್ಚಿಕೊಂಡು ದೇವೇಂದ್ರನಾಥರನ್ನು ಮಹರ್ಷಿಗಳೆಂದು ಕೊಂಡಾಡಿದರು. ಮುಂದೆ ಇವರನ್ನು ಮಹರ್ಷಿಗಳೆಂದೇ ನಿರ್ದೇಶಿಸಲಾರಂಭಿಸಿದರು.
ಈ ವೇಳೆಗೆ ಬ್ರಹ್ಮಸಮಾಜದ ಯುವಕ ಸದಸ್ಯರಲ್ಲೊಬ್ಬರಾದ ಕೇಶವಚಂದ್ರ ಸೇನರು ಕೆಲವು ಅನುಯಾಯಿಗಳೊಡನೆ ಬ್ರಹ್ಮಸಮಾಜದ ಪ್ರಚಾರ ಕಾರ್ಯದಲ್ಲಿ ತೊಡಗಿ ಭಾರತದ ವಿಭಿನ್ನ ಪ್ರಾಂತಗಳಲ್ಲಿ ಸಂಚರಿಸಿ, ಮದ್ರಾಸು, ಮುಂಬಯಿ ಮುಂತಾದ ನಗರಗಳಲ್ಲಿ ಸಮಾಜದ 54 ಶಾಖೆಗಳನ್ನು ಆರಂಭಿಸಿ ಮಹರ್ಷಿ ದೇವೇಂದ್ರನಾಥರ ಅಸಾಧಾರಣ ಪ್ರಸನ್ನತೆಗೆ ಪಾತ್ರರಾದರು. ಆದರೆ ಮುಂದೆ ಕೇಶವಚಂದ್ರಸೇನರು ವಿಧವಾವಿವಾಹ, ಅಂತರ್ಜಾತೀಯ ವಿವಾಹ ಮುಂತಾದ ಸಮಾಜ ಸುಧಾರಣಾ ವಿಚಾರಗಳಿಗೆ ಪ್ರಾಧಾನ್ಯ ನೀಡಿದುದರಿಂದ ಅವರಿಗೂ ಮಹರ್ಷಿಗಳಿಗೂ ವಿರಸವುಂಟಾಗಿ 1865ರಲ್ಲಿ ಸೇನರು ಭಾರತೀಯ ಬ್ರಹ್ಮ ಸಮಾಜ ಎಂಬ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಬೇರೆಯಾದರು. ಈ ಕಾರಣಗಳಿಂದ ದೇವೇಂದ್ರನಾಥರ ಸಂಸ್ಥೆಗೆ ಆದಿ ಬ್ರಹ್ಮಸಮಾಜ ಎಂಬ ಹೆಸರು ಬಳಕೆಗೆ ಬಂತು. ಈ ಆದಿ ಸಮಾಜ ಸಮಾಜಸುಧಾರಣೆಯಿಂದ ದೂರವಿದ್ದು ಏಕೇಶ್ವರವಾದ ಭಗವದ್ಭಜನ ಮುಂತಾದುವುಗಳಲ್ಲೇ ನಿರತವಾಗಿತ್ತು. ಇಷ್ಟೆಲ್ಲ ಎಡರುತೊಡರುಗಳಿದ್ದರೂ ಮಹರ್ಷಿ ದೇವೇಂದ್ರನಾಥರ ವೈಯಕ್ತಿಕ ಪ್ರಭಾವದಿಂದಲೇ ಈ ಸಂಸ್ಥೆ ಸುದೀರ್ಘ ಕಾಲ ಊರ್ಜಿತವಾಗಿತ್ತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಕಾಲಕ್ರಮದಲ್ಲಿ ದೇವೇಂದ್ರನಾಥರು ತಮ್ಮ ಮುಪ್ಪಿನ ನಿಮಿತ್ತ ಆದಿ ಬ್ರಹ್ಮಸಮಾಜದ ನಿರ್ವಹಣೆಯನ್ನು ಒಂದು ಪ್ರಬಂಧಕ ಸಮಿತಿಗೆ ಒಪ್ಪಿಸಿ, ತಮ್ಮ 88ನೆಯ ವಯಸ್ಸಿನಲ್ಲಿ ವಿಧಿವಶರಾದರು. ಅವರೊಡನೆಯೇ ಅವರ ಆದಿಬ್ರಹ್ಮ ಸಮಾಜವೂ ಜನರ ಸ್ಮøತಿಪಥದಿಂದ ದೂರವಾಯಿತೆನ್ನಬಹುದು.
ದೇವೇಂದ್ರನಾಥರು ವೇದಾಂತಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಬಂಗಾಳ ಭಾಷಯ್ ಸಂಸ್ಕøತ ವ್ಯಾಕರಣ; ವೇದಾಂತಿಕ್ ಡಾಕ್ಟ್ರೀನ್ ವಿಂಡಿಕೇಟೆಡ್ (1845); ಬ್ರಹ್ಮಧರ್ಮ (2 ಸಂಪುಟಗಳು-1850); ಆತ್ಮತತ್ತ್ವವಿದ್ಯಾ (1852) ಮುಂತಾದುವು ಇವರು ಬರೆದಿರುವ ಪುಸ್ತಕಗಳಲ್ಲಿ ಕೆಲವು. ದೇವೇಂದ್ರನಾಥರ ಮಕ್ಕಳಲ್ಲಿ ರವೀಂದ್ರನಾಥ ಠಾಕೂರರೂ ಒಬ್ಬರು
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.