From Wikipedia, the free encyclopedia
ಚೆಪ್ಪುಡಿರ ಸುಬ್ಬಯ್ಯ ಪೂಣಚ್ಚ (ಜನನ: ೧೮ ಆಗಸ್ಟ್ ೧೯೬೫) ಭಾರತದ ಹಾಕಿ ಆಟಗಾರ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣ್ಯ ಕ್ರೀಡಾಪಟು. ಬಾಲಕನಾಗಿದ್ದಾಗಲೇ ಶಾಲೆಯಲ್ಲಿ ಹಾಕಿ ಮತ್ತು ಕ್ರಿಕೆಟ್ ಆಟಗಳಲ್ಲಿ ಮಾತ್ರವಲ್ಲದೆ ಸ್ಪೋರ್ಟ್ಸ್ ಸ್ಪರ್ಧೆಗಳಲ್ಲಿ ಅತೀವ ಆಸಕ್ತಿಯನ್ನು ತೋರಿಸುತ್ತಿದ್ದ ಪೂಣಚ್ಚ, ಮುಂದೆ ಹಾಕಿಯನ್ನು ಆರಿಸಿಕೊಂಡು ಅದರಲ್ಲಿಯೇ ಪ್ರಸಿದ್ಧರಾದರು.
ಚೆಪ್ಪುಡಿರ ಎಸ್ ಪೂಣಚ್ಚ (ಸಿ ಎಸ್ ಪೂಣಚ್ಚ)
| |
---|---|
ಜನನ | ೧೮ ಆಗಸ್ಟ್ ೧೯೬೫ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಬಿ ಎ |
ಶಿಕ್ಷಣ ಸಂಸ್ಥೆ | ಸರ್ಕಾರಿ ಶಾಲೆ, ಪೊನ್ನಂಪೇಟೆ, ಕೊಡಗು ಜಿಲ್ಲೆ ಮತ್ತು ಬೆಂಗಳೂರಿನ ಸೈಂಟ್ ಜೋಸೆಫ್’ಸ್ ಕಾಲೆಜ್ |
ವೃತ್ತಿ | ಬೆಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿ. |
ಗಮನಾರ್ಹ ಕೆಲಸಗಳು | ಹಾಕಿ ಆಟ |
ಪೋಷಕ(ರು) | ಚೆಪ್ಪುಡಿರ ಕಾವೇರಮ್ಮ (ತಾಯಿ) ಚೆಪ್ಪುಡಿರ ಸುಬ್ಬಯ್ಯ (ತಂದೆ) |
ಪೂಣಚ್ಚನವರು ಕೊಡಗು ಜಿಲ್ಲೆಯ ದಕ್ಷಿಣದ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯಲ್ಲಿ ಶ್ರೀ ಸುಬ್ಬಯ್ಯ ಮತ್ತು ಕಾವೇರಮ್ಮ ದಂಪತಿಗಳ ಪ್ರಥಮ ಪುತ್ರನಾಗಿ (ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ) ಜನಿಸಿದರು. ಇವರು ಭಾರತೀಯರು ಹಾಗೂ ಕನ್ನಡಿಗರಾಗಿರುವರಲ್ಲದೆ, ಕೊಡವ ಜನಾಂಗದವರಾಗಿದ್ದು ಚೆಪ್ಪುಡಿರ ಮನೆತನಕ್ಕೆ ಸೇರಿದವರು.
ಸ್ಪರ್ಧೆ ಮತ್ತು ಪಂದ್ಯಗಳಲ್ಲಿ ಭಾಗವಹಿಸುವದು ಕೊಡಗಿನವರಿಗೆ ರಕ್ತಗತವೋ ಎಂಬಂತೆ ಪೂಣಚ್ಚನವರು ಶಾಲಾದಿನಗಳಿಂದಲೇ ಆಟೋಟಗಳಲ್ಲಿ ಸ್ಪರ್ಧಿಸುತ್ತಿದ್ದರಲ್ಲದೆ ಅವುಗಳಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದರು. ಎಳವೆಯಲ್ಲೇ ರಾಷ್ಟ್ರಮಟ್ಟದ ಕ್ರೀಡಾಪಟುವಾಗುವ ಕನಸು ಕಾಣುತ್ತಿದ್ದರು.
ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಪದವೀಪೂರ್ವ ಶಿಕ್ಷಣವನ್ನು ಪೊನ್ನಂಪೇಟೆಯಲ್ಲಿ ಮುಗಿಸಿ, ಪದವಿ ಶಿಕ್ಷಣಕ್ಕಾಗಿ ಗೋಣಿಕೊಪ್ಪದ ಕಾವೇರಿ ಕಾಲೆಜನ್ನು ಸೇರಿ ಅಲ್ಲಿ ಒಂದು ವರ್ಷವಿದ್ದರು.
ಈ ವರ್ಷಗಳಲ್ಲಿ ಪೂಣಚ್ಚನವರು ೧೦೦ ಮೀಟರ್ ಮತ್ತು ೨೦೦ ಮೀಟರ್ ಓಟ ಹಾಗೂ ದೂರಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಗಳಿಸುತ್ತಿದ್ದರಲ್ಲದೆ, ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆಯುತ್ತಿದ್ದರು. ಶಾಲೆ ಮತ್ತು ಕಾಲೆಜಿನ ಹಾಕಿ ಮತ್ತು ಕ್ರಿಕೆಟ್ ಟೀಮಿನಲ್ಲೂ ಇದ್ದು ಉತ್ತಮ ಆಟಗಾರರಾಗಿದ್ದರು.
ಕಾವೇರಿ ಕಾಲೆಜಿನ ನಂತರ ಬೆಂಗಳೂರಿನ ಸ್ಪೋರ್ಟ್ಸ್ ಹಾಸ್ಟೆಲಿನಲ್ಲಿ ಪ್ರವೇಶ ದೊರೆತು ಅಲ್ಲಿ ಒಂದು ವರ್ಷದವರೆಗೆ ಹಾಕಿ ಆಟದಲ್ಲಿ ತರಬೇತಿಯನ್ನು ಪಡೆದರು. ಅದುವರೆಗೆ ಫಾರ್ವರ್ಡ್ ಸ್ಥಾನದಲ್ಲಿ ಆಡುತ್ತಿದ್ದ ಪೂಣಚ್ಚನವರ ರಕ್ಷಣಾ ಸಾಮರ್ಥ್ಯ ಮತ್ತು ಶಕ್ತಿಶಾಲಿ ಹೊಡೆತವನ್ನು ಗಮನಿಸಿ ಫುಲ್ ಬ್ಯಾಕ್ ಸ್ಥಾನದಲ್ಲಿ ಆಡಲು ಸೂಚಿಸಲಾಯಿತು.
ಬಳಿಕ ಪೂಣಚ್ಚನವರು ಬೆಂಗಳೂರಿನ ಸೈಂಟ್ ಜೋಸೆಫ್’ಸ್ ಕಾಲೆಜಿನಿಂದ ಕಲಾ ವಿಭಾಗದಲ್ಲಿ ಪದವೀಧರರಾದರು.
ಹಾಕಿ ಕ್ರೀಡೆಯಲ್ಲಿ ಇವರ ನೈಪುಣ್ಯತೆಯನ್ನು ಗುರುತಿಸಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದು, ಪ್ರಸ್ತುತ ಬೆಂಗಳೂರಿನ ಬ್ರಾಂಚಿನಲ್ಲಿ ಮ್ಯಾನೆಜರ್ ಹುದ್ದೆಯಲ್ಲಿರುವರು.
ಅಂತರಾಷ್ಟೀಯ ಅಥ್ಲೀಟ್ ಆಗಿರುವ ಕುಟ್ಟಂಡ ಸವಿತಾ ಪೊನ್ನಪ್ಪನವರನ್ನು ವಿವಾಹವಾಗಿರುವ ಪೂಣಚ್ಚನವರಿಗೆ ಆರ್ಯ ಮತ್ತು ಶಾರ್ವರಿಯೆಂಬ ಈರ್ವರು ಪುತ್ರಿಯರಿದ್ದಾರೆ. ಸರಳ ನಡೆನುಡಿಗಳ ಸದಾ ಹಸನ್ಮುಖಿ ಪೂಣಚ್ಚ ಹಿರಿಯ-ಕಿರಿಯರೊಡನೆ ಸುಲಭವಾಗಿ ಬೆರೆಯಬಲ್ಲ ಸ್ವಭಾವದವರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.