ಗರ್ಭಧಾರಣೆ
From Wikipedia, the free encyclopedia
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ.[1].ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು.[2].ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ. ತಪ್ಪಿದ ಋತುಚಕ್ರ, ಕೋಮಲ ಸ್ತನಗಳು, ಸ್ತನಗಳ ವೃದ್ಧಿ, ಮೊಲೆತೊಟ್ಟು ಕಪ್ಪು ವರ್ಣಕ್ಕೆ ತಿರುಗುವುದು, ವಾಕರಿಕೆ ಮತ್ತು ವಾಂತಿ, ಹಸಿವು ಮತ್ತು ಪದೇ ಪದೇ ಮೂತ್ರವಿಸರ್ಜನೆ ಇವು ಗರ್ಭಧಾರಣೆಯ ಲಕ್ಷಣಗಳು.[3] ಗರ್ಭ ಇರುವುದು ಗರ್ಭ ಪರೀಕ್ಷೆಯ ಮೂಲಕ ನಿರ್ಧರಿಸಲ್ಪಡುತ್ತದೆ.[4]
ಸಂಭೋಗ ಕ್ರಿಯೆಯಿಂದ ವೀರ್ಯ ಯೋನಿಯೊಳಹೊಕ್ಕ ಸಮಯದಲ್ಲಿ ಅಂಡಾಣು ಗರ್ಭಕೋಶನಾಳದೊಳಗಿದ್ದರೆ (ಫೆಲೋಪಿಯನ್ ಟ್ಯೂಬ್) ಅಥವಾ 12-24 ಗಂಟೆಗಳ ಬಳಿಕವಾದರೂ ಅದು ಬರುವ ಹಾಗಿದ್ದರೆ ಮಾತ್ರ ಅದರೊಡನೆ ಪುರುಷಾಣುವಿನ ಮಿಲನ ಸಾಧ್ಯ. ಪ್ರತಿ ಸಂಭೋಗ ಕ್ರಿಯೆಯೂ ಸ್ತ್ರೀಯಲ್ಲಿ ಗರ್ಭಾವಸ್ಥೆಯನ್ನು ಉಂಟುಮಾಡದೆ ಇರುವುದಕ್ಕೂ ಸಾಮಾನ್ಯವಾಗಿ ಮಾಸಿಕಚಕ್ರದ ಸುಮಾರು ಮಧ್ಯಕಾಲದಲ್ಲಿ ಮಾತ್ರ ಸಂಭೋಗದಿಂದ ಗರ್ಭಧಾರಣೆಯಾಗುವುದಕ್ಕೂ ಇದೇ ಕಾರಣ. ಸ್ತ್ರೀಯರಲ್ಲಿ ಪ್ರತಿ ತಿಂಗಳೂ (28 ದಿವಸಗಳ ಚಾಂದ್ರಮಾನ ತಿಂಗಳು) ಒಂದು ಅಂಡಾಣು ಅಂಡಾಶಯದಿಂದ ಕಳಿತು ಹೊರಬೀಳುತ್ತದೆ. ಮೇಲೆ ಹೇಳಿದಂತೆ 12-24 ಗಂಟೆಗಳ ಒಳಗೇ ಅದು ಪುರುಷಾಣುವಿನೊಡನೆ ಮಿಲನಗೊಂಡರೆ ಆಗ ಗರ್ಭಾವಸ್ಥೆಯುಂಟಾಗುತ್ತದೆ. ಇಲ್ಲದಿದ್ದರೆ ಅಂಡಾಣು ನಿಧಾನವಾಗಿ ಮುಂದಕ್ಕೆ ನೂಕಲ್ಪಡುತ್ತ ಗರ್ಭಕೋಶವನ್ನು ತಲಪಬಹುದು. ಆಮೇಲೋ ಅಥವಾ ಇನ್ನೂ ಮುಂಚೆಯೋ ಅದು ನಶಿಸಿಹೋಗುತ್ತದೆ. ಗರ್ಭಾವಸ್ಥೆ ಉಂಟಾಗದ ಇಂಥ ಸನ್ನಿವೇಶದಲ್ಲಿ ಅಂಡಾಣು ಅಂಡಾಶಯದಿಂದ ಹೊರಬಿದ್ದ 14 ದಿವಸಗಳ ತರುವಾಯ ಸ್ತ್ರೀಯಲ್ಲಿ ರಜಸ್ರಾವವಾಗುತ್ತದೆ. ಗರ್ಭಾವಸ್ಥೆ ಉಂಟಾದರೆ ರಜಸ್ರಾವವಾಗುವುದಿಲ್ಲ. ಆದ್ದರಿಂದ ಹೆಂಗಸು ಮುಟ್ಟಾಗುವುದು ಆಕೆ ಬಸಿರಾಗದೆ ಹೋದುದರ ಸೂಚನೆ ಮತ್ತು ಪರಿಣಾಮವಾಗಿರುತ್ತದೆ. ಹೆಂಗಸಿನ ಜೀವಮಾನದಲ್ಲಿ ಗರ್ಭಧಾರಣಾ ಸೌಲಭ್ಯ ಸುಮಾರು 15ನೆಯ ವರ್ಷದಿಂದ ಸುಮಾರು 50ನೆಯ ವರ್ಷ ವಯಸ್ಸಿನ ತನಕ ಕಾಣಬರುತ್ತದೆ. ಅಂದರೆ ಹುಡುಗಿ ಮೈನೆರೆದು ಪ್ರೌಢಳಾದಾಗಿನಿಂದ ವಯಸ್ಕ ಹೆಂಗಸಿನಲ್ಲಿ ಮುಟ್ಟು ನಿಲ್ಲುವತನಕ ಸಂತಾನ ಪ್ರಾಪ್ತಿ ಸೌಲಭ್ಯ ಉಂಟು.