From Wikipedia, the free encyclopedia
ಕಾಳಿದಾಸನು ಭಾರತ ದೇಶದ ಒಬ್ಬ ಮಹಾಕವಿ. ಸಂಸ್ಕೃತ ಭಾಷೆಯಲ್ಲಿ ಕಾವ್ಯಗಳನ್ನೂ, ನಾಟಕಗಳನ್ನೂ ರಚಿಸಿದ್ದಾರೆ. "ಕವಿಕುಲಗುರು" ಎಂದು ಪ್ರಖ್ಯಾತನಾದವನು. ಇವನು ಸಂಸ್ಕೃತದ ಇನ್ನೊಬ್ಬ ಶ್ರೇಷ್ಠಕವಿ ಅಶ್ವಘೋಷನ ನಂತರ ಸಾಹಿತ್ಯವಲಯದಲ್ಲಿ ಹೆಸರು ಪಡೆದವನು.
ಗಮನಿಸಿ : ಕಾಳಿದಾಸರಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಆದರೆ ಶೇಕ್ಸ್ ಪಿಯರ ಕಾಲ ಏಪ್ರಿಲ್ ೨೬ ೧೫೬೪, ಹಾಗೂ ಕಾಳಿದಾಸರ ಕಾಲ ೫ ನೇ ಶತಮಾನ. ಕಾಳಿದಾಸರ ಕಾವ್ಯಗಳು ಶೇಕ್ಸ್ ಪಿಯರಿಗಿಂತ ಎಷ್ಟೋ ಶತಮಾನ ಹಳೆಯದು. ಶೇಕ್ಸ್ ಪಿಯರನ್ನು ಇಂಗ್ಲೆಂಡಿನ ಕಾಳಿದಾಸರೆಂದು ಕರೆಯುವುದರಲ್ಲಿ ಅರ್ಥವಿದೆ.
ಈತನ ಸ್ಥಳ ಮತ್ತು ಕಾಲದ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಬಹಳ ಚರ್ಚೆಗಳು ನಡೆದಿವೆ. ಅನೇಕ ದಂತಕತೆಗಳೂ ಇವೆ. ಈ ದಂತ ಕತೆಗಳಲ್ಲಿ ಮುಖ್ಯವಾದ ಮೂರನ್ನು ಗಮನಿಸಬಹುದು.
ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ ಉಜ್ಜಯಿನಿಯ ರಾಜ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ.
ಕಾಳಿದಾಸನ ಕುರಿತ ಮೊಟ್ಟ ಮೊದಲ ಉಲ್ಲೇಖ ಕ್ರಿಸ್ತಶಕ ೬೩೪ರ ಶಿಲಾಲೇಖವೊಂದರಲ್ಲಿ ಸಿಗುತ್ತದೆ. ಈ ಶಾಸನವು ಕರ್ನಾಟಕದ ಐಹೊಳೆಯಲ್ಲಿ ದೊರೆತಿದೆ[3]. ಇದರಲ್ಲಿ ಕಾಳಿದಾಸ ಮತ್ತು ಭಾರವಿಯರಿಬ್ಬರನ್ನೂ ಪ್ರಸಿದ್ಧ ಕವಿಗಳೆಂದು ತಿಳಿಸಲಾಗಿದೆ. ಆ ಶ್ಲೋಕ ಹೀಗಿದೆ:
"ಯೇನಾಯೋಜಿ ನ ವೇಶ್ಮ, ಸ್ಥಿರಮರ್ಥವಿಧೌ ವಿವೇಕನಾ ಜಿನವೇಶ್ಮ |
ಸ ವಿಜಯತಾಂ ರವಿಕೀರ್ತಿಃ ಕವಿತಾಶ್ರಿತಕಾಲಿದಾಸಭಾರವಿಕೀರ್ತಿಃ" ||
ಬಾಣನ 'ಹರ್ಷಚರಿತ'ದ ಆರಂಭದಲ್ಲಿ ಕಾಳಿದಾಸನ ಉಲ್ಲೇಖವಿದೆ. ಬಾಣನ ಕಾಲವು ಕ್ರಿಸ್ತಶಕದ ಆರನೆಯ ಶತಾಬ್ಧಿಯ ಉತ್ತರಾರ್ಧ ಅಥವಾ ಏಳನೇ ಶತಾಭ್ಧಿಯ ಪೂರ್ವಾರ್ಧವೆಂದು ಹೇಳಲಾಗುವುದರಿಂದ ಕಾಳಿದಾಸನು ಇವನಿಗಿಂತ ಮೊದಲಿದ್ದವನೆಂದು ಹೇಳಬಹುದು.
ಕಾಳಿದಾಸನ ಮೇಘದೂತ ಕಾವ್ಯದ ವ್ಯಾಖ್ಯೆಯನ್ನು ಬರೆದ ಮಲ್ಲಿನಾಥನು ಆರನೇ ಶತಮಾನದ ಮಧ್ಯದಲ್ಲಿದ್ದ ನಿಚುಲ ಮತ್ತು ದಿಙ್ನಾಗರು ಕಾಳಿದಾಸನ ಸಮಕಾಲೀನರೆಂದು ಹೇಳಿದ್ದಾನೆ. ಆದರೆ ಮಲ್ಲಿನಾಥನ ಈ ಹೇಳಿಕೆಯ ಕುರಿತು ಬಹಳ ಸಂದೇಹಗಳಿವೆ.
ಕಾಳಿದಾಸನು ತಾನು ವಿಕ್ರಮ ರಾಜನ ಆಸ್ಥಾನದಲ್ಲಿದ್ದವನೆಂದು ಬರೆದಿದ್ದಾನೆ. ಆದರೆ ವಿಕ್ರಮ ಎಂಬ ಹೆಸರಿದ್ದ ಕೆಲವಾರು ರಾಜರಲ್ಲಿ ಯಾರೆಂದು ನಿರ್ಣಯಿತವಾಗಿಲ್ಲ. ಪ್ರಚಲಿತವಾಗಿರುವಂತೆ ವಿಕ್ರಮ ಶಕೆಯು ಕ್ರಿಸ್ತಪೂರ್ವ ೫೬ರಲ್ಲಿ ಆರಂಭವಾಗಿದೆ. ಕಾಳಿದಾಸನು ಉಜ್ಜಯಿನಿಯಲ್ಲಿದ್ದ ಈ ವಿಕ್ರಮನ ಆಸ್ಥಾನದಲ್ಲಿದ್ದನೆಂದರೆ ಅವನು ಕ್ರಿಸ್ತಪೂರ್ವ ಒಂದನೆಯ ಶತಾಬ್ಧಿಯಲ್ಲಿದ್ದನೆನ್ನಬಹುದು.
ಆದರೆ ಇತ್ತೀಚೆಗೆ ಕೆಲವು ವಿದ್ವಾಂಸರು ವಿಕ್ರಮಶಕೆಯು ಕೋರೂರಿನ ಮಹಾಯುದ್ಧವನ್ನು ಆಧರಿಸಿರುವುದಾಗಿ ತೀರ್ಮಾನಿಸಿದ್ದಾರೆ. ಕ್ರಿಸ್ತಶಕ ೫೪೪ರಲ್ಲಿ ವಿಕ್ರಮನು ಮ್ಲೇಚ್ಛರನ್ನು ಸೋಲಿಸಿದ್ದ. ಆ ಸಮಯದ ೬೦೦ ವರ್ಷಗಳ ಹಿಂದಿನಿಂದ ವಿಕ್ರಮಶಕೆಯನ್ನು ಆರಂಭಿಸಲಾಗಿದೆಯೆಂದೂ ನಿರ್ಧರಿಸಿದ್ದಾರೆ. ಇದು ನಿಜವಾದರೆ ಕಾಳಿದಾಸನು ಆರನೇ ಶತಮಾನದಲ್ಲಿದನೆಂದು ತಿಳಿಯಬೇಕು. ಇನ್ನೂ ಇವೆಲ್ಲದರ ಬಗ್ಗೆ ಏಕಮತವಿಲ್ಲ[4].
ಬಹಳಷ್ಟು ವಿದ್ವಾಂಸರು ಇಮ್ಮಡಿ ಚಂದ್ರಗುಪ್ತ ವಿಕ್ರಮಾದಿತ್ಯ ಮತ್ತು ಅವನ ಉತ್ತರಾಧಿಕಾರಿಯಾದ ಕುಮಾರಗುಪ್ತನ ಕಾಲದಲ್ಲಿ, ಅಂದರೆ ಕ್ರಿಸ್ತಶಕ ನಾಲ್ಕನೇ ಮತ್ತು ಐದನೇ ಶತಮಾನಗಳ ನಡುವಿನ ಕಾಲದಲ್ಲಿ ಕಾಳಿದಾಸನಿದ್ದನೆಂದು ಅಭಿಪ್ರಾಯಪಡುತ್ತಾರೆ[5].
ಇಮ್ಮಡಿ ಚಂದ್ರಗುಪ್ತ(ಕ್ರಿಸ್ತಶಕ ೩೫೭ -೪೧೩)ನಿಗೂ ಸ್ಕಂದಗುಪ್ತ(ಕ್ರಿಸ್ತಶಕ ೪೫೫-೪೮೦)ನಿಗೂ ವಿಕ್ರಮಾದಿತ್ಯನೆಂಬ ಬಿರುದಿತ್ತು. ಕಾಳಿದಾಸನು ಇವರ ಕಾಲದಲ್ಲಿದ್ದನೆಂದೂ ಹೇಳುತ್ತಾರೆ[6]. ಆದರೆ ಈಗ ಕಾಳಿದಾಸನ ಕಾಲವು ಕ್ರಿಸ್ತಶಕ ೫ನೇ ಮತ್ತು ೬ನೇ ಶತಕಗಳ ನಡುವೆಯಿತ್ತೆಂಬುದನ್ನು ಅಂಗೀಕರಿಸಲಾಗಿದೆ[7].
ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರಾಹಮಿಹಿರ ಮತ್ತು ವರರುಚಿ ಎಂಬವರು ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವರತ್ನಗಳೆಂದು ಪ್ರಸಿದ್ಧರಾಗಿದ್ದರು.
ಕಾಳಿದಾಸನ ಜನನದ ಕುರಿತೂ ಮಾಹಿತಿಗಳಿಲ್ಲ. ಕುರುಬರ ವಂಶದಲ್ಲಿ ಹುಟ್ಟಿ, ಕುರಿ ಮೇಯಿಸುತ್ತಾ ಇದ್ದ ಸುಂದರಾಂಗನಾಗಿದ್ದನೆಂದು ಪ್ರತೀತಿ. ಯಾವ ರೀತಿಯ ವಿದ್ಯೆಯನ್ನೂ ಕಲಿಯದವನಾಗಿದ್ದು, ಮುಗ್ಧನೂ, ಮೂಢನೂ ಆಗಿದ್ದನಂತೆ. ನೀಚಬುದ್ಧಿಯ ಮಂತ್ರಿಯ ಕುತಂತ್ರಕ್ಕೊಳಗಾಗಿ ರಾಜಕುಮಾರಿಯೊಬ್ಬಳಿಗೆ ಅವನ ಮದುವೆ ಮಾಡಿಸಿದರಂತೆ. ನಿಜಾಂಶವನ್ನು ತಿಳಿದ ಬಳಿಕ ಅವಳು ಅವನಿಗೆ ರಾತ್ರಿಯಿಡೀ ಅವ್ಯಾಹತವಾಗಿ ಕಾಳಿಕಾದೇವಿಯ ನಾಮಸ್ಮರಣೆಯನ್ನು ಮಾಡುವಂತೆ ಆದೇಶಿಸಿದ್ದರಿಂದ ಪ್ರಸನ್ನಳಾದ ದೇವಿಯ ವರದಿಂದ ಸಕಲ ವಿದ್ಯಾ ಪಾರಂಗತನಾದನಂತೆ. ಹಾಗಾಗಿ ಕಾಳಿದಾಸನೆಂಬ ಹೆಸರಾಯಿತು ಎಂದೆಲ್ಲಾ ದಂತಕತೆ. ಅವನ ಜನ್ಮ, ಅವಿದ್ಯೆ, ಮೌಢ್ಯ, ಇತ್ಯಾದಿಗಳು ನಿಜವಿರಬಹುದು; ಮಂತ್ರಿಯ ಕುತಂತ್ರದಿಂದ ರಾಜಕುಮಾರಿಯೊಡನೆ ಮದುವೆಯೂ ಆಗಿರಬಹುದು. ಕಾಳಿಯ ವರದಿಂದ ಸಕಲವಿದ್ಯಾಪಾರಂಗತನಾದನೆನ್ನುವದಕ್ಕಿಂತ ಬಹುಶಃ ಕೈಹಿಡಿದ ಆ ರಾಜಕುಮಾರಿಯಿಂದಲೇ ಕಲಿತು ವಿದ್ಯಾವಂತನಾಗಿರಬಹುದು ಎನ್ನುವದು ನಂಬುವಂತಹದು. ಹೀಗೆಯೇ ಅವನು ವಿದೇಶೀಯನೆಂದೂ, ಅವನ ವೈಜ್ಞಾನಿಕ, ಭೌಗೋಳಿಕ, ಜ್ಯೋತಿಷ್ಯ, ಮೊದಲಾದ ಜ್ಞಾನವೆಲ್ಲ ಗ್ರೀಕ್ ಹಿನ್ನೆಲೆಯಿಂದ ಬಂತೆನ್ನುವ ಕತೆಯೂ ಇದೆ; ಆದರೆ ಇದಕ್ಕೆ ಯಾವ ರೀತಿಯ ಆಧಾರವೂ ಎಲ್ಲೂ ದೊರೆತಿಲ್ಲ.
ಸಂಸ್ಕೃತ ಸಾಹಿತ್ಯದಲ್ಲಿ ಮಹೋತ್ತಮನೆಂದು ಹೆಸರು ಪಡೆದವರಲ್ಲಿ ಮೊಟ್ಟಮೊದಲನೆಯವನು ಅಶ್ವಘೋಷ. ಇವನ ಕಾಲದ ಸುಮಾರು ಮೂರು ಶತಮಾನಗಳ ನಂತರ ಬಂದನೆನ್ನಲಾದ ಕಾಳಿದಾಸನ ಕೃತಿಗಳಲ್ಲಿ ಇವನ ಪ್ರಭಾವವು ಗಾಢವಾಗಿ ಬೀರಿರುವುದನ್ನು ಗಮನಿಸಲಾಗಿದೆ. ಅಗಣಿತ ಸಾಹಿತ್ಯರಚನೆಗಳನ್ನು ಕಾಳಿದಾಸನ ಹೆಸರಿನೊಂದಿಗೆ ಜೋಡಿಸಲ್ಪಟ್ಟಿರುವದು ಗೋಚರವಾದರೂ, ಕಾರಣಾಂತರಗಳಿಂದ ಹಲವು ಅನಾಮಧೇಯ ಕೃತಿಕಾರರ ಹಾಗೂ ಅವನ ಹೆಸರನ್ನೇ ಹೋಲುವವರ ರಚನೆಗಳವು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಏಳು ಕೃತಿಗಳನ್ನು ಮಾತ್ರ ಅವನಿಂದ ರಚಿತವಾದವೆಂದು ತೀರ್ಮಾನವಾಗಿದೆ.
ಕಾಳಿದಾಸನ ಕೃತಿಗಳನ್ನು ಅಧ್ಯಯನ ಮಾಡಿದ ವಿದ್ವಾಂಸರು ‘ಋತು ಸಂಹಾರ’ವು ಅವನ ಮೊದಲ ರಚನೆಯೆಂದೂ, ‘ಅಭಿಜ್ಞಾನ ಶಾಕುಂತಲ’ವು ಕೊನೆಯ ಕೃತಿಯೆಂದೂ ಅಭಿಪ್ರಾಯಪಡುತ್ತಾರೆ. ಯೌವನದಲ್ಲಿ ಕಾಲಿಡುತ್ತಿರುವ ಬಿಸಿರಕ್ತದ ಕವಿಯು ವಿವಿಧ ಋತುಗಳಲ್ಲಿ ಕಂಡು ಬರುವ ಪ್ರಕೃತಿಯ ಚೆಲುವಿಗೆ ಮನಸೋತು, ಅದನ್ನು ಕಾವ್ಯದಲ್ಲಿ ಸೆರೆ ಹಿಡಿದಿರುವುದು ಸಹಜವೇ ಆಗಿದೆ. ಈ ಖಂಡಕಾವ್ಯವನ್ನು ರಚಿಸಿದ ತರುಣದಲ್ಲೇ ಕವಿಗೆ ಆಸ್ಥಾನದಿಂದ ಕರೆ ಬಂದು ಅವನು ‘ಮಾಲವಿಕಾಗ್ನಿಮಿತ್ರ’ವನ್ನು ರಚಿಸಿರಬೇಕು.
ಈ ನಾಟಕದಲ್ಲಿ ಕವಿಯು ತನ್ನ ಕವಿತಾಮಾರ್ಗವನ್ನು ಕಂಡು ಕೊಳ್ಳುತ್ತಿದ್ದಾನೆ. ಇಮ್ಮಡಿ ಚಂದ್ರಗುಪ್ತನ ರಾಯಭಾರಿಯಾಗಿ ದಕ್ಷಿಣದ ಕುಂತಲ ದೇಶಕ್ಕೆ ಹೋಗಬೇಕಾಗಿ ಬಂದಾಗ, ತನ್ನ ಪ್ರಿಯತಮೆಯ ವಿರಹವನ್ನು ಯಕ್ಷನ ವಿರಹವೆಂದು ಸಮನ್ವಯಗೊಳಿಸಿ ಹೊರಹೊಮ್ಮಿಸಿದ ಭಾವಗೀತೆಯೇ ‘ಮೇಘದೂತ’. ಯಕ್ಷನ ಸಂದೇಶವನ್ನು ಹೊತ್ತ ಮೇಘವು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣಿಸಿರುವುದು ಗಮನಾರ್ಹ. ಮೇಘದೂತವು ಸಂಸ್ಕೃತ ಸಾಹಿತ್ಯದಲ್ಲಿ ದೂತಕಾವ್ಯವೆಂದೂ, ಸಂದೇಶಕಾವ್ಯವೆಂದೂ ಪ್ರಖ್ಯಾತವಾಗಿದೆ.
ಕವಿಯ ನಡುವಯಸ್ಸಿನ ಕೃತಿ ‘ಕುಮಾರಸಂಭವ’. ತನ್ನ ಪೋಷಕ ರಾಜನಿಗೆ ಮಗ ಹುಟ್ಟಿದ ನೆನಪಿಗೆ ಇದರ ರಚನೆಯಾಗಿರಬಹುದು. ತನ್ನ ಅರಸನ ಕೀರ್ತಿ-ಪರಾಕ್ರಮಗಳನ್ನು ಕಂಡು ಅವನ್ನು ಉದ್ಘೋಷಿಸಲು ಬರೆದ ನಾಟಕವೇ ‘ವಿಕ್ರಮೋರ್ವಶೀಯ’ ಎಂದೆನ್ನುತ್ತಾರೆ ವಿದ್ವಾಂಸರು. ಇದಾದ ನಂತರ ತುಂಬು ಜೀವನದ ಎರಡು ಪಕ್ವ ಕೃತಿಗಳು ವಿರಚಿತವಾದವು.
ಮಾಲವಿಕಾಗ್ನಿಮಿತ್ರನಾಟಕದ ಶ್ಲೋಕ ಮತ್ತು ಅನುವಾದ -ಶ್ಲಿಷ್ಟಾ ಕ್ರಿಯಾ ಕಸ್ಯಚಿದಾತ್ಮಸಂಸ್ಥಾ. ಸಂಕ್ರಾಂತಿರನ್ಯಸ್ಯ ವಿಶೇಷಯುಕ್ತಾ|. ಯಸ್ಯೋಭಯಂ ಸಾಧು ಸ ಶಿಕ್ಷಕಾಣಾಂ ಧುರಿ ಪ್ರತಿಷ್ಠಾಪಯಿತವ್ಯ ಏವ |ಕೆಲವರು ವಿದ್ಯೆಯನ್ನು ತಮ್ಮ ಮಸ್ತಕದಲ್ಲಿ ಸಂಗ್ರಹಿಸಿಟ್ಟುಕೊಳ್ಳುವರು, ಇನ್ನು ಕೆಲವರು ತಮಗೆ ತಿಳಿದಿರುವುದನ್ನು ಬೇರೆಯವರಿಗೆ ಅರ್ಥವಾಗುವಂತೆ ತಿಳಿಸುವ ಕಲೆಯಲ್ಲಿ ನಿಷ್ಣಾತರಾಗಿರುವರು. ಯಾರು ಈ ಎರಡೂ ಕಲೆಯಲ್ಲಿ ಶ್ರೇಷ್ಠರೋ ಅವರೇ ಶಿಕ್ಷಕಶ್ರೇಷ್ಠ
ಒಂದು- ಮಹಾಕಾವ್ಯ ‘ರಘುವಂಶ’. ಮತ್ತೊಂದು ಹಾಗೂ ಕೊನೆಯದೆಂದೆಣಿಸಲಾದ ನಾಟಕ ‘ಅಭಿಜ್ಞಾನ ಶಾಕುಂತಲ’. ಇದು ವಿಶ್ವದ ಅತ್ಯುತ್ತಮ ನಾಟಕಗಳಲ್ಲೊಂದು ಎಂದು ಪ್ರಸಿದ್ಧ. ಇದನ್ನು ಓದಿದ ಜರ್ಮನ್ ಪ್ರಸಿದ್ಧ ಕವಿ ಗೋಏಟೇ ಅತ್ಯಂತ ವಿಮುಗ್ಧನೂ ಪರಮಾನಂದಿತನೂ ಆಗಿದ್ದುದು ಸರ್ವಶ್ರುತ. ಈ ನಾಟಕವು ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಈ ನಾಟಕವನ್ನು ಬರೆಯುವ ವೇಳೆಗೆ ಕವಿಗೆ ತನ್ನ ಶಕ್ತಿಯಲ್ಲಿ ಅಪಾರ ಆತ್ಮವಿಶ್ವಾಸ ವಿದ್ದು, ತನ್ನ ಬದುಕು ಧನ್ಯವಾಯಿತೆಂಬ ಭಾವನೆ ಮೂಡಿದೆ. ಇದರ ಫಲವಾಗಿ, "ಈ ಭವದಿಂದ ನನಗೆ ಬಿಡುಗಡೆಯಾಗಲಿ; ಮರುಹುಟ್ಟನು ನನಗೆ ಆ ಮಹೇಶನು ಕರುಣಿಸದಿರಲಿ" ಎಂದು ಪ್ರಾರ್ಥಿಸುತ್ತಾ ನಾಟಕವನ್ನು ಕವಿಯು ಮುಗಿಸುತ್ತಾನೆ. ಬದುಕಿನಲ್ಲಿ ಕೃತಕೃತ್ಯನಾದವನು ಆಡುವ ಭರತವಾಕ್ಯವಿದು ಎನ್ನುತ್ತಾರೆ ವಿಮರ್ಶಕರು[8].
ಕಾಳಿದಾಸನನ್ನು ಕುರಿತು ಅನೇಕ ರಚನೆಗಳು ಕನ್ನಡದಲ್ಲಿವೆ. ಕೆಲವನ್ನು ಹೆಚ್ಚಿನ ಓದಿಗಾಗಿ ಕೆಳಗೆ ಕೊಡಲಾಗಿದೆ.
# | ಚಿತ್ರ | ವರ್ಷ |
---|---|---|
೧ | ಮಹಾಕವಿ ಕಾಳಿದಾಸ | ೧೯೫೫ |
೨ | ಕವಿರತ್ನ ಕಾಳಿದಾಸ | ೧೯೮೩ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.