ಕಂದು ಸಕ್ಕರೆ (ಬ್ರೌನ್ ಶುಗರ್)
From Wikipedia, the free encyclopedia
ಕಂದು ಸಕ್ಕರೆ ಅಥವಾ ಬ್ರೌನ್ ಶುಗರ್(ಖಂಡಸಾರಿ ಸಕ್ಕರೆ[1] ಎಂಬ ಹೆಸರೂ ಇದೆ) ಸಕ್ಕರೆಯ ಉತ್ಪನ್ನವಾಗಿದ್ದು, ಕಾಕಂಬಿಯ ಉಪಸ್ಥಿತಿಯಿಂದಾಗಿ ವಿಶಿಷ್ಟವಾದ ಕಂದು ಬಣ್ಣವನ್ನು ಹೊಂದಿರುತ್ತದೆ. ಇದು ಸಕ್ಕರೆ ತಯಾರಿಕೆಯ ಪ್ರಾರಂಭಿಕ ಹಂತದಲ್ಲಿ ದೊರೆಯುವ ಉತ್ಪನ್ನವಾಗಿದೆ. ಕಂದು ಸಕ್ಕರೆಯನ್ನು ಕೃತಕವಾಗಿ- ಅಂದರೆ ಬಿಳಿ ಸಕ್ಕರೆಗೆ ನಿರ್ದಿಷ್ಟ ಪ್ರಮಾಣದ ಕಾಕಂಬಿಯನ್ನು ಸೇರಿಸುವ ಮೂಲಕವೂ ತಯಾರಿಸಬಹುದು.
ವಾಣಿಜ್ಯಿಕವಾಗಿ ತಯಾರಿಸಿದ ಕಂದು ಸಕ್ಕರೆಯು ಅಂದಾಜು ೩.೫%ನಿಂದ ೬.೫% ವರೆಗೆ ಕಾಕಂಬಿನ್ನು ಹೊಂದಿದ್ದು, ಒಟ್ಟು ತೂಕದ ಆಧಾರದ ಮೇಲೆ ಹೇಳುವುದಾದರೆ ಸಾಮಾನ್ಯವಾಗಿ ೧೦%ವರೆಗೆ ಕಾಕಂಬಿಯನ್ನು ಕಂದು ಸಕ್ಕರೆ ಹೊಂದಿರುತ್ತದೆ. ಕಾಕಂಬಿಯು ಸಹಜವಾಗಿ ನೀರಿನ ಅಂಶವನ್ನು ಹೊಂದಿರುವುದರಿಂದಾಗಿ ಕಂದು ಸಕ್ಕರೆ ಸ್ವಲ್ಪಮಟ್ಟಿಗೆ ಒದ್ದೆಯಾಗಿ ಇರುತ್ತದೆ. ಹಾಗಾಗಿ ಇದನ್ನು ಮೃದು ಕಂದು ಸಕ್ಕರೆ ಎಂದು ವರ್ಗೀಕರಿಸಲಾಗುತ್ತದೆ[2].
ಸಂಸ್ಕರಿಸಿದ ಬಿಳಿ ಸಕ್ಕರೆಗೆ ಹೋಲಿಸಿದರೆ ಕಂದು ಸಕ್ಕರೆಯ ಕಣಗಳ ಗಾತ್ರ ಬಹಳ ಚಿಕ್ಕದು- ಅಂದರೆ ೦.೩೫ಮಿಮಿಗಿಂತ ಚಿಕ್ಕದಿರಬಹುದು. ಬೃಹತ್ ಪ್ರಮಾಣದ ಸಿಹಿತಿಂಡಿ ತಯಾರಿಕಾ ಕಾರ್ಖಾನೆಗಳಲ್ಲಿ ಅವರಿಗೆ ಬೇಕಾದ ಕಣದ ಗಾತ್ರದಲ್ಲಿ ಕಂದು ಸಕ್ಕರೆಯನ್ನು ತಯಾರಿಸುತ್ತಾರೆ.