From Wikipedia, the free encyclopedia
ಐವಾನ್: ರಷ್ಯದ ಇತಿಹಾಸದಲ್ಲಿ ಈ ಹೆಸರಿನವರು ಆರು ಜನ. ಇವರಲ್ಲಿ ಮೂವರು ಮಾಸ್ಕೊ ಮಹಾರಾಜರು, ಇಬ್ಬರು ಜಾ಼ರ್ ದೊರೆಗಳು, ಒಬ್ಬ ರಷ್ಯದ ಚಕ್ರವರ್ತಿ.[1]
1304-41. ವ್ಲಾದಿಮಿರ್ ಮತ್ತು ಮಾಸ್ಕೊಗಳ ಮಹಾರಾಜ ಡೇನಿಯಲನ ಮಗ; ಪುರ್ಣ ಹೆಸರು ಐವಾನ್ ದ್ಯಾನಿಲೊವಿಚ್. 1325ರಲ್ಲಿ ತ್ವೇರಿನ ರಾಜ ದಿಮಿತ್ರಿ ಮಿಕೈಲೊವಿಚನಿಂದ ಅವನ ಸಹೋದರ ಯೂರಿ ಕೊಲೆಯಾದಾಗ ಈತ ಮಾಸ್ಕೊವಿನ ಗದ್ದುಗೆಯೇರಿದ. ದಿಮಿತ್ರಿ ನಡೆಸಿದ ಅಮಾನುಷ ಕೃತ್ಯ ಕಂಡ ಉಜ್ಬೆóಕಿನ ಖಾನ ದಿಮಿತ್ರಿಯನ್ನು ಸಂಹರಿಸಿದರೂ ಮಹಾರಾಜನೆನಿಸಿಕೊಳ್ಳಲು ಅಗತ್ಯವಾಗಿದ್ದ ವ್ಲಾದಿಮಿರ್ ರಾಜ್ಯ ಐವಾನನ ಆಡಳಿತಕ್ಕೆ ಬರಲಿಲ್ಲ. ವ್ಲಾದಿಮಿರಿನ ಆಡಳಿತ ನಿರ್ವಹಿಸಲು ಖಾನನಿಂದ ನಿಯಮಿತನಾಗಿದ್ದವನು ದಿಮಿತ್ರಿಯ ಸಹೋದರ ಅಲೆಕ್ಸಾಂಡರ್. ಆದರೆ 1327ರಲ್ಲಿ ತ್ವೇರಿನ ಜನ ದಂಗೆಯೆದ್ದು ಮಂಗೋಲ್ ವರ್ತಕರನ್ನೂ ತ್ವೇರಿನ ಅಧಿಕಾರಿಗಳನ್ನೂ ಕೊಂದಾಗ ಖಾನ್ ಈ ದಂಗೆ ಅಡಗಿಸಲು ಐವಾನನನ್ನು ಸೈನ್ಯಸಮೇತ ಕಳುಹಿಸಿದ. ಐವಾನ್ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ತ್ವೇರ್ ರಾಜ್ಯವನ್ನು ವಶಪಡಿಸಿಕೊಂಡ. ಇದರಿಂದ ಸಂತೋಷಗೊಂಡ ಖಾನ್ ವ್ಲಾದಿಮಿರ್ ರಾಜ್ಯದ ಅರ್ಧಭಾಗವನ್ನು ಇವನ ಆಳ್ವಿಕೆಗೆ ಒಪ್ಪಿಸಿ ಮಹಾರಾಜನೆಂಬ ಬಿರುದು ನೀಡಿದ.
ದೇಶಭ್ರಷ್ಟನಾದ ಅಲೆಕ್ಸಾಂಡರ್ ಹತ್ತು ವರ್ಷಗಳ ಕಾಲ ಪದೇ ಪದೇ ವ್ಲಾದಿಮಿರ್ ಮೇಲೆ ಬೀಳುತ್ತಿದ್ದ. ಕೊನೆಗೊಮ್ಮೆ ಖಾನ್ ಐವಾನನಿಂದ ಪ್ರೇರಿತನಾಗಿ ಅಲೆಕ್ಸಾಂಡರನನ್ನೂ ಅವನ ಮಗನನ್ನೂ ಗಲ್ಲಿಗೇರಿಸಿದ. ಇವನ ಕಾಲದಲ್ಲಿ ಮಾಸ್ಕೊ ರಾಜ್ಯದ ಎಲ್ಲೆಗಳು ವಿಸ್ತರಿಸಿದುವು. ಈತ ಭೂಕಂದಾಯವನ್ನು ನಿರ್ದಾಕ್ಷಿಣ್ಯವಾಗಿ ವಸೂಲಿ ಮಾಡಿ ರಾಜ್ಯದ ಬೊಕ್ಕಸವನ್ನು ತುಂಬಿದ. ಅದರಿಂದಾಗಿ ಇವನಿಗೆ ಕಲಿಟ (ಹಣದ ಚೀಲ) ಎಂಬ ಪರ್ಯಾಯನಾಮ ಬಂತು. ರಷ್ಯದಲ್ಲಿ ಶಾಂತಿಸ್ಥಾಪನೆ ಮಾಡಿದವನು ಈತ. ಈತ 1341ರಲ್ಲಿ ನಿಧನನಾದನು.
1326-59. ಮಾಸ್ಕೊ ಮಹಾರಾಜ, ಮೊದಲನೆಯ ಐವಾನನ ಮಗ. ಐವಾನ್ ಐವಾನೊವಿಚ್ ಪುರ್ಣನಾಮ. ತನ್ನ ಸಹೋದರ ಸೆಮಾನನ ಅನಂತರ ಸಿಂಹಾಸನವನ್ನೇರಿದ. ಸುಜ಼ದಾಲ್ ಜನರ ವಿರೋಧವಿದ್ದರೂ ಖಾನನ ದೃಷ್ಟಿಗೆ ಬಿದ್ದು ಮಹಾರಾಜನೆನಿಸಿದ. ರೈಯೆಜಾ಼ನರು ಪದೇ ಪದೇ ಮಾಸ್ಕೊವಿನ ಮೇಲೆ ಬೀಳುತ್ತಿದ್ದುದನ್ನು ಕಂಡ ಐವಾನ್ ರೈಯೆಜಾ಼ನರನ್ನು ಅಡಗಿಸಿ ಮಾಸ್ಕೊ ಮೇಲೆ ಆಗಬೇಕಿದ್ದ ಯುದ್ಧವನ್ನು ತಪ್ಪಿಸಿದ. ಆದರೆ ಆತನ ಸಲಹೆಗಾರರೆನಿಸಿದ ಬೊಯರ್ಗಳು ರಾಜಕೀಯದಲ್ಲಿ ಹೆಚ್ಚಿನ ಪಾತ್ರ ವಹಿಸತೊಡಗಿದರು. ಕೊನೆಗೊಮ್ಮೆ ಐವಾನನ ಖ್ಯಾತ ಸಲಹೆಗಾರ ಅಲೆಸ್ಕಿ ಬೊಯರುಗಳನ್ನು ಕಲೆ ಹಾಕಿ ಐವಾನನ ವಿರುದ್ಧ ಪಿತೂರಿ ನಡೆಸುತ್ತಿದ್ದುದು ತಿಳಿದುಬಂತು. ಅಲೆಸ್ಕಿ ಕೊಲೆಗೆ ಈಡಾದ. ಇದರಿಂದಾಗಿ ಅನೇಕ ಗಣ್ಯ ಬೊಯರುಗಳು ಮಾಸ್ಕೊವಿನಿಂದ ರೈಯೆಜಾ಼ನಿಗೆ ವಾಪಸಾದರು. ಈತ 1359ರಲ್ಲಿ ನಿಧನನಾದ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2009) |
1440-1505. ಐವಾನ್ ವ್ಯಾಸಿಲಿಯೆವಿಚ್ ಮಾಸ್ಕೊದ ಪ್ರಸಿದ್ಧ ರಾಜ. ಮಹಾಶಯನೆಂದು ಈತ ಖ್ಯಾತಿ ಗಳಿಸಿದ್ದಾನೆ. ಇವನ ತಂದೆ ಎರಡನೆಯ ವ್ಯಾಸಿಲಿ. ಅವನ ಅನಂತರ ಈತ ಸಿಂಹಾಸನವನ್ನೇರಿದ (1462). ವ್ಯಾಸಿಲಿಯೆವಿಚ್ ಶತ್ರುರಾಜರನ್ನು ಸದೆಬಡಿದು ರಾಜ್ಯದ ಎಲ್ಲೆಯನ್ನು ವಿಸ್ತರಿಸಿದ. ಅವರೆಗೂ ಸ್ವತಂತ್ರ ರಾಜ್ಯವೆನಿಸಿದ್ದ ನೊಫ್ಗೊರೊಟನ್ನು 1478ರಲ್ಲಿ ಮುತ್ತಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಟಾಟರರಿಗೆ ಅಧೀನ ರಾಷ್ಟ್ರವಾಗಿ ಸ್ವಾಮಿನಿಷ್ಠೆ ತೋರುತ್ತಿದ್ದ ಮಾಸ್ಕೊ ಈತನ ಸಾಮರ್ಥ್ಯದ ಫಲವಾಗಿ ಸ್ವಾತಂತ್ರ್ಯ ಪಡೆಯುವ ಯೋಗ್ಯತೆ ಸಂಪಾದಿಸಿತು. 1503ರಲ್ಲಿ ಈತ ನಡೆಸಿದ ಶಾಂತಿ ಸಂಧಾನದ ಪರಿಣಾಮವಾಗಿ ಉಥೋನಿಯನರ ಎರಡು ದಂಗೆಗಳು ಅಡಗಿದುವು. ಈತ ತನ್ನ ರಾಜ್ಯಾಡಳಿತವನ್ನು ವೈಟ್ ರಷ್ಯ ಮತ್ತು ಲಿಟಲ್ ರಷ್ಯಕ್ಕೂ ವಿಸ್ತರಿಸಿದ. ಬಿಜಾ಼ನ್ಟಿಯಂನ ಕೊನೆಯ ಚಕ್ರವರ್ತಿಯ ಸೋದರಸೊಸೆ ಸೋಫಿಯಳನ್ನು ಮದುವೆಯಾಗಿ ಬಿಜಾ಼ನ್ಟಿಯಂನ ರಾಜಗಾಂಭೀರ್ಯ ಹಾಗೂ ಶ್ರೀಮಂತಿಕೆಯ ವೈಭವವನ್ನು ರಷ್ಯದಲ್ಲೂ ಮೆರೆದು ಜಾ಼ರ್ ಬಿರುದು ಪಡೆದ. ಕೈಗಾರಿಕೆ ಮತ್ತು ವಿದೇಶ ವ್ಯಾಪಾರಗಳಿಗೆ ಆದ್ಯತೆ ನೀಡಿದ್ದೂ ರಾಜ್ಯದ ನ್ಯಾಯ ವ್ಯವಸ್ಥೆಯಲ್ಲಿನ ದೋಷಗಳನ್ನು ಕ್ರಮಪಡಿಸಿದ್ದೂ ಈತನ ಇತರ ಸಾಧನೆಗಳು. ಸಾಯುವ ಮುನ್ನ ಈತ ಇಡೀ ರಷ್ಯದ ರಾಜ್ಯವನ್ನು ವಿಸ್ತರಿಸಿ ಒಟ್ಟುಗೂಡಿಸಿ ಬಲಪಡಿಸಿದ.
ಭೀಕರ ಐವಾನ್ ಎಂಬ ಕುಖ್ಯಾತಿ ಗಳಿಸಿ, 1547-84ರ ವರೆಗೆ ಆಳಿದ ರಷ್ಯನ್ ಚಕ್ರವರ್ತಿ. ತಂದೆಯ ಮರಣಾನಂತರ ಪಟ್ಟಕ್ಕೆ ಬಂದಾಗ (1533) ಅವನಿಗಿನ್ನೂ ಮೂರು ವರ್ಷ. ಹದಿನಾಲ್ಕು ವಯಸ್ಸಿನವನಾಗಿದ್ದಾಗಲೇ ಅಧಿಕಾರಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡ. ಮೂರು ವರ್ಷಗಳ ತರುವಾಯ, ತನ್ನ ಅಧಿಕಾರ ಮಾಸ್ಕೊ ಮತ್ತು ಅದರ ಸುತ್ತಮುತ್ತಣ ಪ್ರದೇಶಗಳಿಗೆ ಸೀಮಿತವಾಗಿದ್ದರೂ, ತಾನು ಮಾಸ್ಕೊ ಮತ್ತು ಸಮಗ್ರ ರಷ್ಯದ ಸಾಮ್ರಾಟನೆಂದು ಘೋಷಿಸಿಕೊಂಡ. ಮುಂದೆ 1560ರ ವರೆಗೆ ಕೆಲವು ಸಮರ್ಥ ಸಲಹೆಗಾರರ ನೆರವಿನಿಂದ ರಾಜ್ಯವಾಳಿದ. ಸಾಮಾನ್ಯ ಜನತೆಯಲ್ಲಿ ಪ್ರೀತಿವಿಶ್ವಾಸಗಳನ್ನಿಟ್ಟು ಶ್ರೀಮಂತರ ದರ್ಪವನ್ನೂ ನಿರಂಕುಶ ಪ್ರವೃತ್ತಿಯನ್ನೂ ಅಡಗಿಸಲೆತ್ನಿಸಿದ. ಸ್ಥಳೀಯ ಪ್ರಜಾಧಿಕಾರ ವ್ಯವಸ್ಥೆಯನ್ನು ರಾಜ್ಯದ ನಾನಾಕಡೆ ಜಾರಿಗೆ ತಂದ. ಸಮಗ್ರ ರಷ್ಯದ ಸಾಮ್ರಾಟನೆಂದು ತಾನು ಧರಿಸಿದ ಬಿರುದನ್ನು ಸಮರ್ಥಿಸಿಕೊಳ್ಳಲೆಂಬಂತೆ ಪುರ್ವದ ಕಸಾನ್ ಮತ್ತು ಆಸ್ಟ್ರಕಾನ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡ. ಸೈಬೀರಿಯದಲ್ಲಿನ ಅನೇಕ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ. ಸೈಬೀರಿಯದಲ್ಲಿನ ಅನೇಕ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಇವನಿಂದ ನಿಯುಕ್ತನಾಗಿದ್ದವನು ಯರ್ಮಾರ್ಕ್. ಪಶ್ಚಿಮದಲ್ಲಿ ಪೋಲೆಂಡ್ ಮತ್ತು ಸ್ವೀಡನ್ಗಳ ಮೇಲೆ ನಡೆಸಿದ ಯುದ್ಧಗಳಲ್ಲಿ ಐವಾನ್ ಪರಾಜಯ ಹೊಂದಿದ. ಹೀಗೆ ರಷ್ಯದ ರಾಜ್ಯವಿಸ್ತರಣ ಪುರ್ವದಲ್ಲೇ ಹೊರತು ಪಶ್ಚಿಮಕ್ಕಲ್ಲ ಎಂಬುದು ಖಚಿತವಾಯಿತು. ಇಂಗ್ಲೆಂಡಿನೊಂದಿಗೆ ಈತ ವ್ಯಾಪಾರ ಸಂಬಂಧವನ್ನಿಟ್ಟುಕೊಂಡಿದ್ದ.
1560ರ ವರೆಗೆ ಇವನ ಆಳ್ವಿಕೆ ಪ್ರಗತಿಮಾರ್ಗದಲ್ಲೇ ಸಾಗಿತು. ಆ ವರ್ಷ ಇವನ ಹೆಂಡತಿ ಕಾಲವಾದಳು. ಇವನೂ ಸ್ವಲ್ಪಕಾಲ ಕಾಯಿಲೆಯಿಂದ ನರಳಿದ. ಸ್ವಭಾವತಃ ಒರಟನೂ ನಿಷ್ಠುರನೂ ಆಗಿದ್ದ ಐವಾನ್ ಕ್ರಮೇಣ ಪ್ರಜಾಪೀಡನೂ ಆದ. ಬಲಿಷ್ಠಸಾಮಂತರು ತನಗೆ ವಿರೋಧವಾಗಿ ಒಳಸಂಚು ನಡೆಸುತ್ತಿರುವರೆಂಬ ಕಲ್ಪನೆಯನ್ನು ಬೆಳೆಸಿಕೊಂಡು, ಅವರ ಪ್ರಾಬಲ್ಯ ಮುರಿಯುವುದಕ್ಕೆಂದು ನೇರವಾಗಿ ತನ್ನ ಅಧೀನಕ್ಕೊಳಪಟ್ಟ ಸೈನ್ಯವೊಂದನ್ನು ನಿರ್ಮಿಸಿದ. ಅನೇಕ ಸಾಮಂತರೂ ಶ್ರೀಮಂತರೂ ಮರಣದಂಡನೆಗೊಳಗಾದರು; ಕೆಲವರನ್ನು ಸೈಬೀರಿಯಕ್ಕೆ ಗಡಿಪಾರು ಮಾಡಲಾಯಿತು. ಪಿತೂರಿ ನಡೆಯುತ್ತಿದೆಯೆಂಬ ಸಂದೇಹದಿಂದ 1580ರಲ್ಲಿ ನೊಫ್ಗೊರೊಟ್ ನಗರವನ್ನೇ ಹಾಳುಗೆಡವಿದ. ಅದೇ ರೋಷಾವೇಶದಿಂದ ಅಮಾನುಷ ಪ್ರಜಾಪೀಡನೆ; ಆವೇಶ ಇಳಿದಾಗ, ಅಷ್ಟೇ ಉದ್ವೇಗದ ಪಶ್ಚಾತ್ತಾಪ, ಕೊರಗು, ದೇವರಲ್ಲಿ ಕ್ಷಮಾಯಾಚನೆ-ಇದು ಈತನ ಬಾಳಾಯಿತು. ಆದರೂ ಇವನ ಕಾಲದಲ್ಲಿ ಸಣ್ಣದಾಗಿದ್ದ ಮಾಸ್ಕೊ ರಾಜ್ಯ ವಿಸ್ತರಿಸಿ ರಷ್ಯನ್ ಸಾಮ್ರಾಜ್ಯವಾಯಿತು.
1666-96. ಐವಾನ್ ಅಲೆಕ್ಸಿವಿಚ್ ರಷ್ಯದ ಜಾ಼ರ್ ದೊರೆ. ಈತ ದೊರೆ ಆಲೆಕ್ಸಿಯ ಮೊದಲ ಹೆಂಡತಿಯ ಕಿರಿಮಗ. ಈತ ನಿರಂತರ ರೋಗಿ. ದೇಹದಾಢರ್ಯ್ವಿಲ್ಲದ ಬುದ್ಧಿಹೀನ; ರಕ್ತರೋಗಪೀಡಿತ; ಜೊತೆಗೆ ಇವನಿಗೆ ದೃಷ್ಟಿ ಮಾಂದ್ಯ ಬೇರೆ. ಈತ ತನ್ನ ಕೊನೆಯ ದಿನಗಳಲ್ಲಿ ಪಾಶರ್ವ್ವಾಯು ಪೀಡಿತನಾಗಿ ನರಳಿದ. ರಾಜ್ಯದ ಯಾವ ಕಾರ್ಯಭಾರದಲ್ಲೂ ಈತ ಭಾಗವಹಿಸಲಿಲ್ಲ. ದುರಾಶಾಪೀಡಿತೆ ಕುಟಿಲೆ ಅಕ್ಕ ಸೋಫಿಯಳ ಕೈಗೊಂಬೆಯಾಗಿಯೇ ಈತ ಆಯುಷ್ಯವನ್ನೆಲ್ಲ ಕಳೆದ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (October 2008) |
1740-64. ರಷ್ಯದ ಚಕ್ರವರ್ತಿ. ಐವಾನ್ ಆಂಟೊನೊವಿಚ್. ತಂದೆ ಬನ್ರ್ಸ್ವಿಕ್ನ ಆಂಟೊನ್ ಉದ್ರಿಚ್. ರಷ್ಯದ ಚಕ್ರವರ್ತಿನಿ ಅನ್ನಾ ಐವಾನೊನಾ ಈ ಮಗುವನ್ನು ತನ್ನ ಉತ್ತರಾಧಿಕಾರಿಯೆಂದು ಘೋಷಿಸಿದ ಮಾರನೆಯ ದಿನವೇ ಮೃತಳಾದಳು. ಈ ಮಗುವನ್ನು ಚಕ್ರವರ್ತಿಯೆಂದು ಘೋಷಿಸಿ, ಚಕ್ರವರ್ತಿಯ ರೀಜಂಟಾಗಿ ಮೂರು ವಾರಗಳ ಕಾಲ ರಾಜ್ಯಭಾರ ಮಾಡಿದವನು ಕಾರ್ಲೆಂಡಿನ ಡ್ಯೂಕ್. ಅನಂತರ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆದು ಜಾರೆನ್ನಾ ಎಲೆಜ಼ಬೆತಳನ್ನು ಸಿಂಹಾಸನದಲ್ಲಿ ಕೂರಿಸಿ ಐವಾನ್ ಮತ್ತು ಆತನ ಸಂಬಂಧಿಕರನ್ನು ಸೆರೆಯಲ್ಲಿಡಲಾಯಿತು. 20 ವರ್ಷಗಳ ಕಾಲ ಜೈಲಿನಲ್ಲಿ ಯಾರಿಗೂ ತನ್ನ ಗುರುತು ಸಿಗದಂತೆ ಬಾಳಿದ ಐವಾನ್ ಅರೆಹುಚ್ಚನಾದ. ಕೊನೆಗೆ ಐವಾನನ್ನು ಗುರುತು ಹಚ್ಚಿ ಬಿಡುಗಡೆಗೆ ಪ್ರಯತ್ನ ನಡೆಯುತ್ತಿದ್ದಾಗ ಜೈಲಿನ ಅಧಿಕಾರಿಗಳೇ ಐವಾನನನ್ನು ಕೊಲೆ ಮಾಡಿದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.