ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿ (೧೯೫೫–೧೯೬೮)
From Wikipedia, the free encyclopedia
ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿ ಯು (೧೯೫೫–೧೯೬೮), ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಫ್ರಿಕನ್ ಅಮೆರಿಕನ್ನರ ವಿರುದ್ಧ ಜನಾಂಗೀಯ ಭೇದಭಾವವನ್ನು ಕಾನೂನುಬಾಹಿರಗೊಳಿಸಿ, ದಕ್ಷಿಣದ ರಾಜ್ಯಗಳಲ್ಲಿ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸುವ ಧ್ಯೇಯೋದ್ದೇಶವನ್ನು ಹೊಂದಿದ್ದ ಚಳವಳಿಗಳನ್ನು ಉಲ್ಲೇಖಿಸುತ್ತದೆ. ಈ ಲೇಖನವು, ೧೯೫೪ ಹಾಗು ೧೯೬೮ರ ನಡುವಿನ ಚಳವಳಿಯ ಘಟ್ಟವನ್ನು, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾಗದಲ್ಲಿ ನಡೆದ ಚಳವಳಿಯ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ೧೯೬೬ರ ಹೊತ್ತಿಗೆ ಆರಂಭಗೊಂಡ ಬ್ಲ್ಯಾಕ್ ಪವರ್ ಮೂವ್ಮೆಂಟ್ ಸುಮಾರು ೧೯೬೬ರಿಂದ ೧೯೭೫ರವರೆಗೂ ನಡೆಯಿತು, ಇದು ಜನಾಂಗೀಯ ಘನತೆ, ಆರ್ಥಿಕತೆ ಹಾಗು ರಾಜಕೀಯ ಸ್ವಯಂಪೂರ್ಣತೆ, ಹಾಗು ಬಿಳಿಯ ಅಮೆರಿಕನ್ನರ ದಬ್ಬಾಳಿಕೆಯಿಂದ ವಿಮುಕ್ತಿ ಸೇರಿದಂತೆ ನಾಗರಿಕ ಹಕ್ಕುಗಳ ಚಳವಳಿಯ ಉದ್ದೇಶಗಳನ್ನು ವಿಸ್ತರಿಸಿತು. NAACP, SNCC, CORE ಹಾಗು SCLCಯಂತಹ ಸಂಸ್ಥೆಗಳೊಂದಿಗೆ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದ ಹಲವರು, ಇದಕ್ಕೆ "ದಕ್ಷಿಣ ಭಾಗದ ಸ್ವಾತಂತ್ರ್ಯ ಚಳವಳಿ" ಎಂದು ಕರೆಯುವುದಕ್ಕೆ ಆದ್ಯತೆ ನೀಡುತ್ತಾರೆ. ಏಕೆಂದರೆ ಇದು ಕಾನೂನಿನಡಿಯಲ್ಲಿ ಕೇವಲ ಮಾನವ ಹಕ್ಕುಗಳಿಗಾಗಿ ನಡೆದ ಹೋರಾಟಕ್ಕಿಂತ ಹೆಚ್ಚಾಗಿ, ಇದು ಸ್ವಾತಂತ್ರ್ಯ, ಗೌರವ, ಘನತೆ, ಹಾಗು ಆರ್ಥಿಕ ಹಾಗು ಸಾಮಾಜಿಕ ಸಮಾನತೆಯಂತಹ ಮೂಲಭೂತ ವಿಷಯಗಳ ಬಗೆಗೂ ಸಹ ನಡೆದ ಹೋರಾಟವಾಗಿತ್ತು. ಚಳವಳಿಯು, ನಾಗರಿಕ ಪ್ರತಿಭಟನೆಯದ ಪ್ರಮುಖ ಅಭಿಯಾನಗಳಿಂದ ವೈಶಿಷ್ಟ್ಯವನ್ನು ಪಡೆದಿದೆ. ೧೯೫೫–೧೯೬೮ರ ಅವಧಿಯಲ್ಲಿ, ಅಹಿಂಸಾ ಪ್ರತಿಭಟನೆ ಹಾಗು ಅಸಹಕಾರ ಚಳವಳಿಗಳು, ಕಾರ್ಯಕರ್ತರು ಹಾಗು ಸರ್ಕಾರಿ ಅಧಿಕಾರಿಗಳ ನಡುವೆ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಉಂಟುಮಾಡಿದವು. ಆಫ್ರಿಕನ್ ಅಮೆರಿಕನ್ನರು ಎದುರಿಸುತ್ತಿದ್ದ ಅಸಮಾನತೆಗಳನ್ನು ಎತ್ತಿ ತೋರಿಸುತ್ತಿದ್ದ ಬಿಕ್ಕಟಿನ ಪರಿಸ್ಥಿತಿಗಳಿಗೆ ಸಂಯುಕ್ತ, ರಾಜ್ಯ, ಹಾಗು ಸ್ಥಳೀಯ ಸರ್ಕಾರಗಳು, ವ್ಯಾಪಾರಸಂಸ್ಥೆಗಳು ಹಾಗು ಸಮುದಾಯಗಳು ಸಾಮಾನ್ಯವಾಗಿ ತಕ್ಷಣವೇ ಪ್ರತಿಕ್ರಯಿಸಬೇಕಿತ್ತು. ಪ್ರತಿಭಟನೆ ಹಾಗು/ಅಥವಾ ಅಸಹಕಾರ ಚಳವಳಿಗಳ ರೂಪಗಳು ಅಲಬಾಮನಲ್ಲಿ ನಡೆದಂತಹ ಮೊಂಟ್ಗೋಮೆರಿ ಬಸ್ ಬಹಿಷ್ಕಾರದಂತಹ ಯಶಸ್ವಿ ಬಹಿಷ್ಕಾರಗಳು(೧೯೫೫–೧೯೫೬); ಉತ್ತರ ಕ್ಯಾರೊಲಿನದಲ್ಲಿ ನಡೆದಂತಹ ಗ್ರೀನ್ಸ್ಬರೊ ಧರಣಿಗಳಂತಹ ಧರಣಿಗಳು(೧೯೬೦); ಅಲಬಾಮನಲ್ಲಿ ನಡೆದಂತಹ ಸೆಲ್ಮದಿಂದ ಮೊಂಟ್ಗೋಮೆರಿಯವರೆಗಿನ ಪ್ರತಿಭಟನಾ ಮೆರವಣಿಗೆಯಂತಹ ಮೆರವಣಿಗೆಗಳು(೧೯೬೫); ಹಾಗು ವ್ಯಾಪಕವಾದ ಇತರ ಅಹಿಂಸಾತ್ಮಕ ಚಟುವಟಿಕೆಗಳು ಸೇರಿವೆ. ಮಾನವ ಹಕ್ಕುಗಳ ಚಳವಳಿಯ ಈ ಘಟ್ಟದಲ್ಲಿ ಅಂಗೀಕರಿಸಲಾದ ಗಮನಾರ್ಹ ವಿಧಾಯಕ ಸಾಧನೆಗಳೆಂದರೆ ೧೯೬೪ರ ಮಾನವ ಹಕ್ಕುಗಳ ಕಾಯಿದೆ ಅಂಗೀಕಾರ,[1] ಇದು ನೇಮಕ ಪ್ರಕ್ರಿಯೆಯಲ್ಲಿ ಹಾಗು ಸಾರ್ವಜನಿಕ ಸ್ಥಳಗಳಲ್ಲಿ "ಜನಾಂಗ, ವರ್ಣ, ಧರ್ಮ, ಅಥವಾ ರಾಷ್ಟ್ರೀಯತೆ"ಯನ್ನು ಆಧರಿಸಿ ಭೇದಭಾವ ಮಾಡುವುದನ್ನು ನಿಷೇಧಿಸಿತು; ೧೯೬೫ರ ಮತದಾನ ಹಕ್ಕುಗಳ ಕಾಯಿದೆಯು, ಮತದಾನದ ಹಕ್ಕುಗಳನ್ನು ಮತ್ತೆ ಸ್ಥಾಪಿಸಿತು ಮತ್ತು ರಕ್ಷಿಸಿತು; ಇಮ್ಮಿಗ್ರೇಶನ್ ಅಂಡ್ ನ್ಯಾಷನಾಲಿಟಿ ಸರ್ವೀಸಸ್ ಆಕ್ಟ್ ಆಫ್ ೧೯೬೫, ಗಮನಾರ್ಹವಾಗಿ ಇತರ ಸಾಂಪ್ರದಾಯಿಕ ಯುರೋಪಿಯನ್ ಸಮುದಾಯಗಳನ್ನು ಹೊರತುಪಡಿಸಿ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಇತರೆ ವಲಸೆಗಾರರಿಗೆ ಪ್ರವೇಶವನ್ನು ದೊರಕಿಸಿಕೊಟ್ಟಿತು; ಜೊತೆಗೆ ಫೇರ್ ಹೌಸಿಂಗ್ ಆಕ್ಟ್ ಆಫ್ ೧೯೬೮, ಮನೆಯ ಬಾಡಿಗೆಗೆ ಅಥವಾ ಅದರ ಮಾರಾಟದಲ್ಲಿ ಉಂಟಾಗುತ್ತಿದ್ದ ತಾರತಮ್ಯಕ್ಕೆ ನಿಷೇಧವನ್ನು ಒಡ್ಡಿತು. ಆಫ್ರಿಕನ್ ಅಮೆರಿಕನ್ನರು ದಕ್ಷಿಣ ಭಾಗದಲ್ಲಿ ರಾಜಕೀಯಕ್ಕೆ ಮತ್ತೆ ಪ್ರವೇಶ ಪಡೆದರು, ಹಾಗು ಇದು ದೇಶದುದ್ದಕ್ಕೂ ಯುವ ಜನತೆ ಕಾರ್ಯೋನ್ಮುಖರಾಗುವಂತೆ ಪ್ರೇರೇಪಿಸಿತು.