From Wikipedia, the free encyclopedia
ಅಂತರರಾಷ್ಟ್ರೀಯ ಏಕಮಾನ – (ಇಂಗ್ಲೀಶ್ International System of Units ಅಥವಾ SI- ಎಸ್ಐ) ಒಂದು ಅಳೆಯುವ ಏಕಮಾನ ವ್ಯವಸ್ಥೆಯಾಗಿದ್ದು ಮೆಟ್ರಿಕ್ ವ್ಯವಸ್ಥೆಯ ಆಧುನಿಕ ರೂಪ. ಈ ವ್ಯವಸ್ಥೆಯಲ್ಲಿ ದಶಾಂಶಗಳನ್ನು ಅಥವಾ ಹತ್ತರ ಗುಣಕಗಳನ್ನು (ಮಲ್ಟಿಪಲ್) ಬಳಸಲಾಗಿದೆ ಮತ್ತು ಹತ್ತರ ಘಾತಗಳಲ್ಲಿ ಅಂದರೆ 102, 103, 104 ಮುಂತಾದ ಸಂಖ್ಯೆಗಳಿಂದ ಮೀಟರ್, ಗ್ರಾಂ ಮುಂತಾದ ಏಕಮಾನಕವನ್ನು ಗುಣಿಸಲಾಗುತ್ತದೆ ಅಥವಾ ವಿಭಜಿಸಲಾಗುತ್ತದೆ. ಈ ಮೂಲಕ ಈ ವ್ಯವಸ್ಥೆ ತೀರ ದೊಡ್ಡ ಅಥವಾ ತೀರ ಸಣ್ಣ ಸಂಖ್ಯೆಗಳನ್ನು ಸುಲಭವಾಗಿ ತೋರಿಸಲು ಅವಕಾಶ ಒದಗಿಸಿಕೊಡುತ್ತದೆ. ಇಲ್ಲಿ ಹತ್ತರ ಘಾತಗಳು 20 ಪೂರ್ವಪ್ರತ್ಯಗಳು (ಪ್ರಿಫಿಕ್ಸ್) ಮತ್ತು ಅವುಗಳ ಚಿಹ್ನೆಗಳು ಸೂಚಿತವಾಗಿದ್ದು ಇವನ್ನು ನಮೂದಿಸುವ ಮೂಲಕ ಗುಣಕಗಳನ್ನು ಸೂಚಿಸಬಹುದು. ಉದಾಹರಣೆಗೆ ಸಾವಿರ ಪ್ರಮಾಣವನ್ನು ಸೂಚಿಸಲು ಪೂರ್ವಪ್ರತ್ಯಯ ಕಿಲೋ ಅಥವಾ ಕಿ (k) ಹಾಗೆಯೇ ಸಾವಿರ ಭಾಗದ ಪ್ರಮಾಣ ಸೂಚಿಸಲು ಪೂರ್ವಪ್ರತ್ಯಯ ಮಿಲ್ಲಿ ಅಥವಾ ಮಿ (m) ಎಂದೂ ಬಳಸ ಬಹುದು. ಹೀಗೆ ಬಳಸಿದಾಗ 1000 ಮೀ -1 ಕಿಮೀ ಆದರೆ, 0.001 ಮೀ- 1 ಮಿಮೀ ಆಗುತ್ತದೆ.
ಅದಕ್ಕೂ ಮುಂಚೆ ಹಲವು ದೇಶಗಳಲ್ಲಿ ಅಥವಾ ಪ್ರದೇಶಗಳಲ್ಲಿ ಅವುಗಳದೇ ವಿಶಿಷ್ಟ ತೂಕ ಮತ್ತು ಅಳತೆಗಳನ್ನು ಬಳಸಲಾಗುತ್ತಿತ್ತು. ಭಾರತದಲ್ಲಿ ಇದ್ದ ಕೆಲವು ಅಳತೆಗಳ ಬಗೆಗೆ ಮಾಹಿತಿಯೂ ಲಭ್ಯವಿದೆ. ನಂತರದಲ್ಲಿ ಬ್ರಿಟನ್ನಿನ ಆಳ್ವಿಕೆಯ ದೇಶಗಳಲ್ಲಿ ಅಲ್ಲಿನದೇ ವ್ಯವಸ್ಥೆ ಇಂಪೀರಿಯಲ್ ವ್ಯವಸ್ಥೆ (ಬ್ರಿಟಿಶ್ ವ್ಯವಸ್ಥೆ) ಭಾರತವನ್ನೂ ಒಳಗೊಂಡು ಬ್ರಿಟಿಶ್ ಸಾಮ್ರಾಜ್ಯದಲ್ಲಿ ಜಾರಿಗೆ ಬಂತು. ಭಾರತ ಬ್ರಿಟನನ್ನೂ ಒಳಗೊಂಡು ಬಹುತೇಕ ಎಲ್ಲಾ ದೇಶಗಳೂ ಮೆಟ್ರಿಕ್ ವ್ಯವಸ್ಥೆಯನ್ನು ಒಪ್ಪಿಕೊಂಡಾಗಲೂ ಕೆಲವು ಬಳಕೆಗಳಿಗೆ ಇನ್ನೂ ಹಳೆಯ ಪದ್ಧತಿಯನ್ನು ಉಳಿಸಿಕೊಂಡಿವೆ. ನಾವು ಭಾರತದಲ್ಲಿ ಇನ್ನೂ ಬಳಸುವ ಅಡಿ, ಚದರ ಅಡಿ ಮತ್ತು ಎಕರೆಗಳು ಬ್ರಿಟಿಶ್ ವ್ಯವಸ್ಥೆಯ ಅಳತೆಗಳು. ಅದಕ್ಕೆ ಸಂವಾದಿ ಮೆಟ್ರಿಕ್ ಅಥವಾ ಅಂತರರಾಷ್ಟ್ರೀಯ ಏಕಮಾನಗಳು ಮೀಟರ್, ಚದರ ಮೀಟರ್ ಮತ್ತು ಹೆಕ್ಟೇರ್ಗಳು (ಚದರ ಮೀಟರ್ ಏಕಮಾನವಾಗಿದ್ದಾಗ್ಯೂ ಹೆಕ್ಟೇರ್ ಬಳಕೆಯನ್ನು ಮುಂದುವರೆಸಲಾಗಿದೆ).
ಮೆಟ್ರಿಕ್ ಅಳತೆಯ ವ್ಯವಸ್ಥೆಯನ್ನು ಫ್ರಾನ್ಸ್ನಲ್ಲಿ ಪ್ರೆಂಚ್ ಕ್ರಾಂತಿಯ ನಂತರ ಮೊದಲು 1799ರಲ್ಲಿ ಬಳಕೆಗೆ ತರಲಾಯಿತು.[1]} ಆರಂಭಿಕ ದೊಡ್ಡಮಟ್ಟದ ವಿರೋಧದ ನಡವೆಯೂ ಮೀಟರ್ ಯುರೋಪ್ ಖಂಡದ ದೇಶಗಳಲ್ಲಿ ಮಧ್ಯ ಹತ್ತೊಂಬತ್ತನೆಯ ಶತಮಾನದ ಕಾಲದಲ್ಲಿ, ವಿಶೇಷವಾಗಿ ವೈಜ್ಞಾನಿಕ ಬಳಕೆಯಲ್ಲಿ ಜನಪ್ರಿಯವಾಯಿತು.[2] ಇದು 1875ರಲ್ಲಿ ಪ್ಯಾರಿಸ್ನಲ್ಲಿ ಹದಿನೇಳು ದೇಶಗಳ ಟ್ರೀಟಿ ಆಫ್ ಮೀಟರ್ನಲ್ಲಿ ಕೊನೆಗೊಂಡು ಈ ಬಗೆಗಿನ ಮೊದಲ ಅಂತರರಾಷ್ಟ್ರೀಯ ಒಪ್ಪಂದವೊಂದು ಜಾರಿಗೆ ಬಂತು. ಆರಂಭದಲ್ಲಿ ಇದು ಉದ್ದ ಮತ್ತು ದ್ರವ್ಯರಾಶಿಗೆ ಮಾತ್ರ ಸೀಮಿತವಾಗಿದ್ದಿದ್ದು 1921ರಲ್ಲಿನ 6ನೆಯ ತೂಕ ಮತ್ತು ಅಳತೆಗಳ ಸಾಮಾನ್ಯ ಸಮ್ಮೇಳನವು (ಜನರಲ್ ಕಾನ್ಪರೆನ್ಸ್ ಆನ್ ವೈಟ್ಸ್ ಅಂಡ್ ಮೆಸರ್ಸ್-ಸಿಜಿಪಿಎಂ) ಇದನ್ನು ಎಲ್ಲಾ ಭೌತಿಕ ಅಳತೆಗಳಿಗೂ ವಿಸ್ತರಿಸಿತು.[3]
ಪಠ್ಯ | ಚಿಹ್ನೆ | ಘಟಕ | ಘಾತ | ಹೆಸರು | ಪಠ್ಯ | ಚಿಹ್ನೆ | ಘಟಕ | ಘಾತ | ಹೆಸರು | |||
---|---|---|---|---|---|---|---|---|---|---|---|---|
ಯೊಟ್ಟ | Y | ಯೊ | 1 000 000 000 000 000 000 000 000 | 1024 | ಸೆಪ್ಟಿಲಿಯನ್ | ಯೊಕ್ಟೊ | y | ವೈ | 0.000 000 000 000 000 000 000 001 | 10−24 | ಸೆಪ್ಟಿಲಿಯ ಭಾಗ | |
ಜೆಟ್ಟ | Z | ಜೆ | 1 000 000 000 000 000 000 000 | 1021 | ಸೆಕ್ಸ್ಟಿಲಿಯನ್ | ಜೆಪ್ಟೊ | z | ಜೆಡ್ | 0.000 000 000 000 000 000 001 | 10−21 | ಸೆಕ್ಸ್ಟಿಲಿಯ ಭಾಗ | |
ಇಕ್ಸ | E | ಇ | 1 000 000 000 000 000 000 | 1018 | ಕ್ವಿಂಟಿಲಿಯನ್ | ಅಟ್ಟೊ | a | ಎ | 0.000 000 000 000 000 001 | 10−18 | ಕ್ವಿಂಟಿಲಿಯ ಭಾಗ | |
ಪೆಟ | P | ಪೆ | 1 000 000 000 000 000 | 1015 | ಕ್ವಾಡ್ರಿಲಿಯನ್ | ಫೆಮಟೊ | f | ಎಫ್ | 0.000 000 000 000 001 | 10−15 | ಕ್ವಾಡ್ರಿಲಿಯ ಭಾಗ | |
ಟೆರ | T | ಟೆ | 1 000 000 000 000 | 1012 | ಟ್ರಿಲಿಯನ್ (ಲಕ್ಷಕೋಟಿ) | ಪಿಕೊ | p | ಪಿ | 0.000 000 000 001 | 10−12 | ಟ್ರಿಲಿಯ ಭಾಗ (ಲಕ್ಷಕೋಟಿ ಭಾಗ) | |
ಗೀಗ | G | ಗೀ | 1 000 000 000 | 109 | ಬಿಲಿಯನ್ (ಶತಕೋಟಿ) | ನ್ಯಾನೊ | n | ನ್ಯಾ | 0.000 000 001 | 10−9 | ಬಿಲಿಯ ಭಾಗ (ಶತಕೋಟಿ ಭಾಗ) | |
ಮೆಗಾ | M | ಮೆ | 1 000 000 | 106 | ಮಿಲಿಯನ್ (ದಶಲಕ್ಷ) | ಮೈಕ್ರೊ | μ | ಮೈ | 0.000 001 | 10−6 | ಮಿಲಿಯ ಭಾಗ (ದಶಲಕ್ಷ ಭಾಗ) | |
ಕಿಲೊ | k | ಕಿ | 1 000 | 103 | ಸಾವಿರ | ಮಿಲ್ಲಿ | m | ಮಿ | 0.001 | 10−3 | ಸಾವಿರ ಭಾಗ | |
ಹೆಕ್ಟೊ | h | ಹೆ | 100 | 102 | ನೂರು | ಸೆಂಟಿ | c | ಸೆಂ | 0.01 | 10−2 | ನೂರನೆ ಭಾಗ | |
ಡೆಕ | da | ಡೆ | 10 | 101 | ಹತ್ತು | ಡೆಸಿ | d | ಡಿ | 0.1 | 10−1 | ಹತ್ತನೆ ಭಾಗ | |
- | - | - | 1 | 100 | ಒಂದು | - | - | - | - | - | - |
ದಶಮಾಂಶ ಪದ್ಧತಿಯಲ್ಲಿ ಮಾನಕಗಳು ಹತ್ತರ ಗುಣಕ (ಮಲ್ಟಿಪಲ್) ಗಳಾಗುತ್ತವೆ. ಈ ಪರಿಕಲ್ಪನೆಯ ಸಾಧ್ಯತೆಯನ್ನು 1586ರಲ್ಲಿ, ಯುರೋಪಿನಲ್ಲಿ ದಶಾಂಶ ಭಿನ್ನಾಂಕಗಳನ್ನು ಯುರೋಪಿನಲ್ಲಿ ಮೊದಲು ಒಳತಂದ, ಸೈಮನ್ ಸ್ಟೆಮಿನ್ ಸೂಚಿಸಿದ. ಹಲವು ಸಂಪ್ರದಾಯಿಕ ವ್ಯವಸ್ಥೆಯ ಮಾನಕಗಳಲ್ಲಿ ಮೂರರಿಂದ ವಿಭಜನೆಯು ತೊಡಕಿನ ಭಿನ್ನಾಂಕದಲ್ಲಿ ಕೊನೆಗೊಳ್ಳುವುದಿಲ್ಲ. ಉದಾಹರಣೆಗೆ ಒಂದು ಅಡಿಯ ಮೂರನೆಯ ಭಾಗ 4 ಇಂಚು ಆಗುತ್ತದೆ. ಈ ಆಯಾಮವನ್ನು 1790ರಲ್ಲಿ ಮೆಟ್ರಿಕ್ ವ್ಯವಸ್ಥೆಯ ಪ್ರತಿಪಾದಕರು ಚರ್ಚಿಸಿ ತಿರಸ್ಕರಿಸಿದರು. 1854ರಲ್ಲಿ ಅಗಸ್ಟಸ್ ಡೆ ಮಾರ್ಗನ್ (ಬ್ರಿಟಿಶ್) ಡೆಸಿಮಲ್ ಅಸೋಶಿಯೇಶನ್ನ ನಡಾವಳಿಯ ಪ್ರಸ್ತಾವನೆಯಲ್ಲಿ ದಶಾಂಶ ಆಧಾರಿತ ಪದ್ಧತಿಯ ಅನುಕೂಲಗಳನ್ನು ಪ್ರತಿಪಾದಿಸಿದ.[4]
ಮಾನಕವನ್ನು ಹತ್ತರ ಪೂರ್ಣಾಂಕ ಘಾತ (ಪವರ್)ದಿಂದ ಗುಣಿಸಿ ಅಥವಾ ಭಾಗಿಸುವ ದಶಮಾಂಶ ಆಧಾರಿತ ಪೂರ್ವಪ್ರತ್ಯಯಗಳನ್ನು ಮಾನಕಕ್ಕೆ ಅನ್ವಯಿಸಬಹುದು. ಪೂರ್ವಪ್ರತ್ಯಯಗಳ ಹೆಸರಿಗೆ ಲ್ಯಾಟಿನ್ ಅಥವಾ ಗ್ರೀಕ್ (ಕ್ಲಾಸಿಕಲ್) ಹೆಸರುಗಳನ್ನು ಬಳಸುವ ಸಲಹೆಯನ್ನು (ಪ್ರೆಂಚ್ ರೆವ್ಯುಲೂಶನರಿ) ಕಮಿಶನ್ ಆನ್ ವೈಟ್ಸ್ ಅಂಡ್ ಮೆಸರ್ಸ್ 1793ರಲ್ಲಿ ನೀಡಿತು.[4] ಉದಾಹರಣೆಗೆ ಪೂರ್ವಪ್ರತ್ಯಯ ಕಿಲೊ ಮಾನಕದ 1000 ಘಟಕಗಳನ್ನು ಸೂಚಿಸುತ್ತದೆ ಮತ್ತು ಪೂರ್ವಪ್ರತ್ಯಯ ಮಿಲ್ಲಿ ಘಟಕ 1000 ಭಾಗವನ್ನು ಸೂಚಿಸುತ್ತದೆ. ಹೀಗಾಗಿ ಕಿಲೊಗ್ರಾಂ ಮತ್ತು ಮಿಲ್ಲಿಗ್ರಾಂಗಳು ಕ್ರಮವಾಗಿ ಸಾವಿರ ಗ್ರಾಂ ಮತ್ತು ಗ್ರಾಂನ ಸಾವಿರದ ಭಾಗವನ್ನು ಸೂಚಿಸುತ್ತವೆ. ಇದನ್ನು ಸಾಂಕೇತಿಕವಾಗಿ ಹೀಗೆ ತೋರಿಸ ಬಹುದು.[4]
ಆರಂಭದಲ್ಲಿ ಹತ್ತರ ಧನಾತ್ಮಕ (ಪಾಸಿಟಿವ್) ಘಾತಗಳಿಗೆ ಗ್ರೀಕ್ ಹೆಸರುಗಳನ್ನು (ಉದಾಹರಣೆಗೆ ಕಿಲೊ, ಮೆಗಾ) ಕೊಡಲಾಯಿತು ಮತ್ತು ಹತ್ತರ ರುಣಾತ್ಮಕ (ನೆಗೆಟಿವ್) ಘಾತಗಳಿಗೆ ಲ್ಯಾಟಿನ್ ಮೂಲದ ಹೆಸರುಗಳನ್ನು ಕೊಡಲಾಯಿತು (ಉದಾಹರಣೆಗೆ ಸೆಂಟಿ, ಮಿಲ್ಲಿ). ಆದರೆ 1935ರ ನಂತರ ಈ ಸಂಪ್ರದಾಯವನ್ನು ಬಿಟ್ಟುಕೊಡಲಾಯಿತು ಹೀಗಾಗಿ ನ್ಯಾನೊ, ಮೈಕ್ರೊ ಪೂರ್ವಪ್ರತ್ಯಯಗಳು ಗ್ರೀಕ್ ಮೂಲದವು.
ಚದರ ಮತ್ತು ಘನ ಅಳತೆಗಳಂತಹ ಜನ್ಯ ಮಾನಕಗಳನ್ನು ಬಳಸುವಾಗ ಉದ್ದವನ್ನು ಕ್ರಮವಾಗಿ ಎರಡರ ಘಾತಕ್ಕೂ ಮತ್ತು ಮೂರರ ಘಾತಕ್ಕೂ (ಕ್ಯೂಬ್) ಏರಿಸಲಾಗುತ್ತದೆ. ಹೀಗಾಗಿ ಈ ಘಾತವನ್ನು ಪೂರ್ಣ ಮಾನಕಕ್ಕೆ ಕೆಳಗೆ ತೋರಿಸಿದಂತೆ ಅನ್ವಯಿಸಲಾಗುತ್ತದೆ.[4]
1 ಮಿಮೀ2 (ಚದರ ಮಿಲ್ಲಿಮೀಟರ್) | = (1 ಮಿಮೀ)2 | = (0.001 ಮೀ)2 | = 0.000001 ಮೀ2 |
1 ಕಿಮೀ2 (ಚದರ ಕಿಲೋಮೀಟರ್) | = (1 ಕಿಮೀ)2 | = (1000 ಮೀ)2 | = 1000000 ಮೀ2 |
1 ಮಿಮೀ3 (ಘನ ಮಿಲ್ಲಿಮೀಟರ್) | = (1 ಮಿಮೀ)3 | = (0.001 ಮೀ)3 | = 0.000000001 ಮೀ3 |
1 ಕಿಮೀ3 (ಘನ ಕಿಲೋಮೀಟರ್) | = (1 ಕಿಮೀ)3 | = (1000 ಮೀ)3 | = 1000000000 ಮೀ3 |
ಒದಕ್ಕಿಂತ ಹೆಚ್ಚು ಸೆಕೆಂಡ್ಗಳನ್ನು ಸೂಚಿಸಲು ಈ ಪ್ರತ್ಯಯಗಳನ್ನು ಬಳಸುವುದಿಲ್ಲ. ಬದಲಿಗೆ ಎಸ್ಐಗಳಲ್ಲದ ಘಟಕಗಳಾದ ನಿಮಿಷ, ಗಂಟೆ ಮತ್ತು ದಿನಗಳಲ್ಲಿ ತೋರಿಸಲಾಗುತ್ತದೆ. ಆದರೆ ಘನ ಗಾತ್ರ (ವಾಲ್ಯೂಮ್) ಸೂಚಿಸಲು ಬಳಸುವ ಎಸ್ಐ ಅಲ್ಲದ ಘಟಕವಾದ ಲೀಟರ್ಗೆ ಗುಣಕಗಳಾಗಿ ಪ್ರತ್ಯಯಗಳನ್ನು ಬಳಸಲಾಗುತ್ತದೆ. ಹೀಗಾಗಿ ಲೀಟರ್ನ ಸಾವಿರ ಭಾಗ ಸೂಚಿಸಲು ಮಿಲೀ (ಮಿಲ್ಲಿಲೀಟರ್) ಎಂದು ಹೇಳಲಾಗುತ್ತದೆ.[4]
ಮೆಟ್ರಿಕ್ ವ್ಯವಸ್ಥೆಯ ಮೂಲ ಆವೃತ್ತಿಯು ಆಧಾರ ಮಾನಕಗಳನ್ನು ನಿರ್ದಿಷ್ಟ ಉದ್ದದಿಂದ (ಮೀಟರ್) ಮತ್ತು ತೂಕ (ದ್ರವ್ಯರಾಶಿ) ಶುದ್ಧ ನೀರಿನ ನಿರ್ದಿಷ್ಟ ಗಾತ್ರ (ಘನ ಅಳತೆ 1⁄1000 ಘನ ಸೆಂಮೀ)ದ ತೂಕದಿಂದ ಪಡೆಯ ಬಹುದು ಎಂದು ಭಾವಿಸುತ್ತಿತ್ತು. ಹದಿನೆಂಟನೆಯ ಶತಮಾನದಲ್ಲಿ ಪ್ರಮಾಣಿತ ಉದ್ದದ ಮಾನಕಕ್ಕೆ ಎರಡು ರೀತಿಯ ಚಿಂತನೆಗಳು ಚಾಲ್ತಿಯಲ್ಲಿದ್ದವು. ಮೊದಲನೆಯದು ಲೋಲಕದ (ಪೆಂಡುಲಮ್) ಅರ್ಧ ಓಲಾಟಕ್ಕೆ (ಹಾಫ್ ಪೀರಿಯಡ್ ಅಥವಾ ಹಾಫ್ ಸ್ವಿಂಗ್) ಒಂದು ಸೆಕೆಂಡ್ ತೆಗೆದುಕೊಳ್ಳುವ ಲೋಲಕದ ಉದ್ದ ಮತ್ತು ಎರಡನೆಯದು ಉತ್ತರ ದ್ರುವ ಮತ್ತು ಸಮಭಾಕ ವೃತ್ತಗಳ ನಡುವಿನ ದೂರದ ಒಂದು ಕೋಟಿ ಭಾಗ (1⁄10 000 000). ಇದು ಭೂಮಿಯ ಸುತ್ತಳತೆಯ ನಾಲ್ಕನೆ ಭಾಗ (1⁄4) ವಾಗಿತ್ತು. ಅಂದು ಭೂಮಿಯ ಸುತ್ತಳತೆಯು ಸರಿಯಾಗಿ 40 000 000 ಮೀಟರ್ (ಅಥವಾ 40 000 ಕಿಲೋಮೀಟರ್) ಎಂದು ಭಾವಿಸಲಾಗಿತ್ತು. ಪ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಗುರುತ್ವವು ಸ್ಥಳದಿಂದ ಸ್ಥಳಕ್ಕೆ ತುಸು ಬದಲಾಗುವ ಕಾರಣಕ್ಕೆ (ಇದು ಲೋಲಕದ ಕಾಲ ಅಥವಾ ಪೀರಿಯಡನ್ನು ಪ್ರಭಾವಿಸುತ್ತದೆ) ಭೂಮಿಯ ಸುತ್ತಳತೆಯನ್ನು ಮೀಟರ್ ವ್ಯಾಖ್ಯಾನವಾಗಿ ಸ್ವೀಕರಿಸಿತು. 1799ರಲ್ಲಿ ಈ ಪ್ರಮಾಣಗಳನ್ನು ಪ್ರತಿನಿಧಿಸುವ ಮೂಲರೂಪಗಳನ್ನು ತಯಾರಿಸಿ ಪ್ರಾನ್ಸ್ನಲ್ಲಿ ಹಂಚಲಾಯಿತು.[5][6]
ಈ ಮೂಲರೂಪಗಳನ್ನು 1889ರಲ್ಲಿ ಅಂತರರಾಷ್ಟ್ರೀಯ ಮೇಲ್ವೀಚಾರಣೆಯಲ್ಲಿ ಉತ್ಪಾದಿಸಿ ಒಂದನ್ನು ಅಂತರರಾಷ್ಟ್ರೀಯ ರೆಫೆರೆನ್ಸ್ ಉಳಿಸಿಕೊಂಡು (ಮೀಟರ್ಗೆ ಒಂದು ಹಾಗೂ ಕಿಲೋಗ್ರಾಂಗೆ ಒಂದು) ಉಳಿದವನ್ನು ಮೀಟರ್ ಸಮ್ಮೇಳನದ (ಮೀಟರ್ ಕನ್ವೆಶನ್) ರಾಷ್ಟ್ರಗಳ ನಡುವೆ ಹಂಚಲಾಯಿತು. 1889ರಲ್ಲಿ ಬೆಳಕಿನ ಸ್ವಭಾವದ ಬಗೆಗೆ ಸಾಮಾನ್ಯವಾದ ಒಪ್ಪಿತ ಅಭಿಪ್ರಾಯವಿರಲಿಲ್ಲ. 1960ರಲ್ಲಿ ನಿರ್ದಿಷ್ಟ ಬೆಳಕಿನ ರೋಹಿತದ ಅಲೆಯುದ್ದ (ವೇವ್ಲೆಂತ್) ಮೂಲರೂಪಗಳಿಗಿಂತ ಹೆಚ್ಚು ನಿಖರ ಎಂದು ನಿರ್ದರಿಸಿ ಮೀಟರ್ನ್ನು ಮರುವ್ಯಾಖ್ಯಾನಿಸಲಾಯಿತು. ಇದರ ಪ್ರಕಾರ ಮೀಟರ್ ಉದ್ದವನ್ನು ನಿರ್ದಿಷ್ಟ ಬೆಳಕಿನ ರೋಹಿತದ ಅಲೆಯುದ್ದವಾಗಿ ನಿರ್ಣಯಿಸಲಾಯಿತು. 1983ರ ವೇಳೆಗೆ ಇದನ್ನು ನಿರ್ಯಾತದಲ್ಲಿ ಬೆಳಕಿನ ವೇಗದಲ್ಲಿ ವ್ಯಾಖ್ಯಾನಿಸಲಾಯಿತು. ಈ ವ್ಯಾಖ್ಯಾನಗಳು ನಕಲು ಮಾಡಲು ಸುಲಭವಾಗಿರುತ್ತವೆ ಮತ್ತು ಸೂಕ್ತ ಉಪಕರಣಗಳಿರುವ ಪ್ರಯಾಗಾಲಯವಿದ್ದರೆ ಎಲ್ಲಿಯಾದರೂ ಮೀಟರ್ ಪ್ರಮಾಣವನ್ನು ತಯಾರಿಸ ಬಹುದು.
ಅಂತರರಾಷ್ಟ್ರೀಯ ಪರಮಾಣು ಕಾಲಮಾನ (ಅಥವಾ ಟಿಎಐ ಅದರ ಪ್ರೆಂಚ್ ರೂಪ ಟೆಂಪ್ಸ್ ಆಟಾಮಿಕ್ಯೂ ಇಂಟರ್ನ್ಯಾಶನಲ್) ವನ್ನು ಹೆಚ್ಚು ಖಚಿತವಾದ ಪರಮಾಣು ಗಡಿಯಾರಗಳ ಮೂಲಕ ಅಳೆಯಲಾಗುತ್ತದೆ ಮತ್ತು ಇದು ಸುಸಂಘಟಿತ ಸಾರ್ವತ್ರಿಕ ಕಾಲಮಾನ (ಕೊಆರ್ಡಿನೇಟಡ್ ಯುನಿವರ್ಸಲ್ ಟೈಮ್ ಅಥವಾ ಯುಟಿಸಿ). ಈ ಯುಟಿಸಿ ಭೂಮಿಯ ಮೇಲಿನ ಲೌಕಿಕ ಕೆಲಸಗಳಿಗೆ ಮತ್ತು ಭೂಮಿ ಕಾಲಮಾನ (ಟಿಟಿ ಅಥವಾ ಟೆರಸ್ಟ್ರಿಯಲ್ ಟೈಮ್) ಗಳೆರಡಕ್ಕೂ ಬಳಸಲಾಗುತ್ತದೆ. ಭೂಮಿ ಕಾಲಮಾನವನ್ನು ಖಗೋಳಶಾಸ್ತ್ರೀಯ ಕಾರ್ಯಗಳಿಗೆ ಬಳಸಲಾಗುತ್ತದೆ.[7]
ಈಗ ಇರುವಂತೆ ಯುಟಿಸಿಗಿಂತ ಟಿಎಐ 36 ಸೆಕೆಂಡ್ಗಳು ಮುಂದಿದೆ. 1972ರ ವರೆಗಿನ ಲೆಕ್ಕದಲ್ಲಿನ 10 ಸೆಕೆಂಡ್ಗಳು ಮತ್ತು ನಂತರದ 26 ಸೆಂಕಡ್ಗಳು ಇದರಲ್ಲಿ ಸೇರಿವೆ. 30 ಜೂನ್ 2015ರಂತೆ ಅಂದು ಲೀಪ್ ಸೆಕಂಡ್ (ಹೆಚ್ಚುವರಿ ಸೆಕೆಂಡ್) ಸೇರಿಸಲಾಯಿತು. ಇದನ್ನು ಭೂಮಿಯ ಭ್ರಮಣದಲ್ಲಿನ ವ್ಯತ್ಯಾಸದ ಆಧಾರದ ಮೇಲೆ ಮಾಡಲಾಗಿದೆ. ಈ ವ್ಯತ್ಯಾಸವನ್ನು ಭೂಮಿಯ ಪರಿಭ್ರಣಕ್ಕೆ ಸಂಬಂಧಿಸಿದ ಎಸ್ಐಗಳಲ್ಲದ ಮಾನಕಗಳ ಮೂಲಕ (ಉದಾಹರಣೆಗೆ ವರುಷಕ್ಕೆ ಲೀಪ್ ಅಥವಾ ಹೆಚ್ಚುವರಿ ದಿನ ಮುಂತಾದವು) ಕ್ಯಾಲೆಂಡರ್ ಅಥವಾ ಪಂಚಾಗಕ್ಕೆ ಹೊಂದಿಸಲಾಗುತ್ತದೆ.[7]
ಏಳು ಎಸ್ಐ ಮಾನಕಗಳನ್ನು ಮೂಲ ಮಾನಕಗಳು ಎಂದು ಕರೆಯಲಾಗುತ್ತದೆ ಅವು:
ಸೈದ್ಧಾಂತಿಕವಾಗಿ ಎಸ್ಐ ಯಾವುದೇ ಭೌತ ಅಳೆಯುವಿಕೆಗೆ ಬಳಸಬಹುದಾದರೂ ಕೆಲವು ಎಸ್ಐ ಅಲ್ಲದ ಮಾನಕಗಳು ವೈಜ್ಞಾನಿಕ, ತಾಂತ್ರಿಕ ಮತ್ತು ವಾಣಿಜ್ಯ ದಾಖಲೆಗಳಲ್ಲಿ ಕಂಡುಬರುತ್ತವೆ. ಕೆಲವು ಮಾನಕಗಳು ಮಾನವನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ತೀರಾ ಆಳವಾಗಿ ಬೇರುಬಿಟ್ಟಿದ್ದು ಅವು ಮುಂದುವರೆಯತ್ತವೆ. ಸಿಐಪಿಎಮ್ ಈ ಮಾನಕಗಳನ್ನು ಕೈಪಿಡಿಯಲ್ಲಿ ಪಟ್ಟಿಮಾಡಿದೆ. ಮೊದಲ ಗುಂಪಿನಲ್ಲಿ ಕಾಲ, ಕೋನ ಮತ್ತು ಕೆಲವು ನಿರ್ದಿಷ್ಟ ಸಂಪ್ರದಾಯಕ ಎಸ್ಐಯೇತರ ಮಾನಕಗಳು ಬರುತ್ತವೆ. ಬಹುತೇಕ ಮಾನವ ಜನಾಂಗವು ದಿನ ಮತ್ತು ಕಾಲದ ಇತರ ವಿಭಜನೆಗಳಾದ ಸೆಕೆಂಡ್, ನಿಮಿಷ ಮತ್ತು ಗಂಟೆಗಳನ್ನು ಒಂದೇ ರೀತಿಯಲ್ಲಿ ಬಳಸುತ್ತಿದೆ ಮತ್ತು ಇದು ಎಲ್ಲಿ ಬಳಸಿದಾಗ್ಯೂ ಒಂದೇ ರೀತಿ ಇರುತ್ತದೆ. ಸೆಕೆಂಡ್ ಎಸ್ಐ ಮಾನಕವಾದಾಗ್ಯೂ ಕಾಲದ ಇತರ ಎಸ್ಐಯೇತರ ಮಾನಕಗಳನ್ನು ಅದರೊಂದಿಗೆ ಬಳಸಲಾಗುತ್ತದೆ. ಕೋನ ಅಳೆಯುವುದು ಸಹ ಬಹಳ ಕಾಲದಿಂದಲೂ ಒಂದೇ ರೀತಿಯಾಗಿದೆ. ರೇಡಿಯನ್ ಪರಿಭ್ರಣದ 1⁄2π ಆಗಿದ್ದು ಕೆಲವು ಅನುಕೂಲಗಳನ್ನು ಹೊಂದಿದ್ದಾಗ್ಯೂ ಸಮುದ್ರಯಾನದಲ್ಲಿ ಬಳಕೆಯು ಕ್ಲಿಷ್ಟಕರವಾಗಿದೆ. ಹೀಗಾಗಿ ಕಂಸದ (ಆರ್ಕ್) ಡಿಗ್ರಿ, ಆರ್ಕ್ಮಿನಿಟ್ (am ಅಥವಾ ಆಮಿ), ಆರ್ಕ್ಸೆಕೆಂಡ್ (as ಅಥವಾ ಆಸೆ) ಉಳಿಸಿಕೊಳ್ಳಲಾಗಿದೆ. ಟನ್, ಲೀಟರ್ ಮತ್ತು ಹೆಕ್ಟೇರ್ಗಳನ್ನು ಸಿಜಿಪಿಎಮ್ 1879ರಲ್ಲಿಯೇ ಒಪ್ಪಿಕೊಂಡಿತ್ತು ಮತ್ತು ವಿಶಿಷ್ಟ ಚಿಹ್ನೆಗಳೊಂದಿಗೆ ಇವು ಎಸ್ಐ ಮಾನಕಗಳ ಜೊತೆಗೆ ಬಳಕೆಯಾಗುತ್ತವೆ.
ಭೌತಶಾಸ್ತ್ರಜ್ಞರು ಬೆಳಕಿನ ವೇಗ, ಪ್ರೋಟಾನ್ ದ್ರವ್ಯರಾಶಿ, ಎಲೆಕ್ಟ್ರಾನ್ ಆವೇಶ (ಚಾರ್ಜ್) ಮುಂತಾದ ನೈಸರ್ಗಿಕ ವಿದ್ಯಮಾನಗಳನ್ನು ಅಳೆಯುತ್ತಾರೆ. ಎಸ್ಐ ಕೈಪಿಡಿ ಇವುಗಳಿಗೂ ಚಿಹ್ನೆಗಳನ್ನು ಕೊಟ್ಟಿದೆ. ಆದರೆ ನಿಬಂಧನೆಯಂದರೆ ಇವುಗಳನ್ನು ವಾಸ್ತವದಲ್ಲಿ ಅಳೆಯ ಬೇಕು ಎಂಬುದು. ಇನ್ನೂ ಕೆಲವು ಎಸ್ಐಯೇತರ ಮಾನಕಗಳ ಉದಾಹರಣೆಗಳು ಮಿಲ್ಲಿಮೀಟರ್ ಆಫ್ ಮೆರ್ಕೂರಿ, ಆಂಗ್ಸ್ಟಾರ್ಮ್, ನಾಟಿಕಲ್ ಮೈಲ್, ನಾಟ್ ಸೇರಿವೆ ಮತ್ತು ಈ ಪಟ್ಟಿ ಪೂರ್ಣವಲ್ಲ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.