ಶುಭ ಶುಕ್ರವಾರ
ಅಆಝ / From Wikipedia, the free encyclopedia
ಶುಭ ಶುಕ್ರವಾರವು ಕ್ರೈಸ್ತರಿಗೆ ಒಂದು ಪವಿತ್ರವಾದ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತೆಯೋ ಹಾಗೆ ಶುಭ ಶುಕ್ರವಾರವು ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಈ ದಿನವನ್ನು ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ. ಪವಿತ್ರ ಸಪ್ತಾಹದ ಅಂಗವಾದ ಶುಭ ಶುಕ್ರವಾರವು ಯೆಹೂದ್ಯರ ಆಚರಣೆಯಾದ ಪಾಸ್ಕದೊಂದಿಗೆ ತಳುಕು ಹಾಕಿಕೊಳ್ಳುತ್ತದೆ.[1]
ಶುಭ ಶುಕ್ರವಾರ | |
---|---|
ರೀತಿ | ಕ್ರೈಸ್ತಧರ್ಮ |
ಮಹತ್ವ | ಯೇಸುಕ್ರಿಸ್ತನ ಶಿಲುಬೆ ಯಾತನೆ ಮತ್ತು ಮರಣವನ್ನು ಸ್ಮರಿಸುವ ದಿನ |
ಆಚರಣೆಗಳು | ಸಾಂಭ್ರಮಿಕ ಆಚರಣೆಗಳಿಲ್ಲ |
ಆಚರಣೆಗಳು | ಆರಾಧನೆ, ಪ್ರಾರ್ಥನೆ ಹಾಗೂ ಜಾಗರಣೆ ವಿಧಿಗಳು, ಉಪವಾಸ, ದಾನಧರ್ಮ |
ದಿನಾಂಕ | ಈಸ್ಟರ್ ಭಾನುವಾರಕ್ಕೆ ಮುಂಚೆ ಬರುವ ಶುಕ್ರವಾರ |
ಅಧಿಕೃತ ಶುಭಸಂದೇಶಗಳ ಪ್ರಕಾರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದು ಶುಕ್ರವಾರವೆನ್ನಲಾಗಿದೆ.[2] ಶುಭ ಶುಕ್ರವಾರ ಕ್ರಿಸ್ತಶಕ ೩೩ ರಲ್ಲಿ ಸಂಭವಿಸಿತೆಂದು ಇತ್ತಂಡಗಳು ಅಂದಾಜಿಸಿವೆ, ಆದರೆ ಪವಿತ್ರ ಬೈಬಲ್ ಮತ್ತು ಜೂಲಿಯನ್ ಕ್ಯಾಲೆಂಡರ್ಗಳ ನಡುವಿನ ವ್ಯತ್ಯಾಸಗಳು ಹಾಗೂ ಚಂದ್ರನ ಚಲನೆಯನ್ನು ಅಭ್ಯಸಿಸಿದ ಐಸಾಕ್ ನ್ಯೂಟನ್ ಪ್ರಕಾರ ಅದು ಕ್ರಿಸ್ತಶಕ ೩೪.[3][4][5][6][7][8] ಮೂರನೇ ವಿಧಾನದಲ್ಲಿ ಚಂದ್ರಚಲನೆಯ ವೀಕ್ಷಣೆಯನ್ನು ಪರಿಗಣಿಸಿ (ಶಿಲುಬೆಗೇರಿಸಿದ ಸಂದರ್ಭದ ಸಂಪೂರ್ಣ ಸೂರ್ಯಗ್ರಹಣ ಆಧರಿಸಿ) ಹಾಗೂ ಪವಿತ್ರ ಬೈಬಲ್ಲಿನ ಪ್ರೇಷಿತರ ಕಾರ್ಯಕಲಾಪಗಳು ಭಾಗದಲ್ಲಿ ಯೇಸುವಿನ ಶಿಷ್ಯ ಪೇತ್ರನು ದಾಖಲಿಸಿದ ರಕುತ ಚಂದ್ರಮನ ಪ್ರಸ್ತಾಪವನ್ನು ಅನುಸರಿಸಿ ಶುಭಶುಕ್ರವಾರವು ಕ್ರಿಸ್ತಶಕ ೩೩ನೇ ವರ್ಷದ ಏಪ್ರಿಲ್ ೩ಕ್ಕೆ ಸರಿಹೊಂದುವುದೆನ್ನಲಾಗಿದೆ.[9][10]