ಮನೋವೈದ್ಯಶಾಸ್ತ್ರ (ಸೈಕಿಯಾಟ್ರಿ)
From Wikipedia, the free encyclopedia
ಮನೋವೈದ್ಯಶಾಸ್ತ್ರ ವು ಒಂದು ವೈದ್ಯಕೀಯ ತಜ್ಞತೆ ಯಾಗಿದ್ದು, ಮಾನಸಿಕ ಅಸ್ವಸ್ಥತೆಯ ಅಧ್ಯಯನ ಮತ್ತು ಚಿಕಿತ್ಸೆಗೆ ಸಂಬಂಧಿಸಿದೆ. ಇದು ವಿವಿಧ ರೀತಿಯ ಭಾವಾತ್ಮಕ , ವರ್ತನೆ, ಜ್ಞಾನಗ್ರಹಣ ಮತ್ತು ಇಂದ್ರಿಯಾತ್ಮಕ ಅಸ್ವಸ್ಥತೆಗಳನ್ನೂ ಒಳಗೊಂಡಿರುತ್ತದೆ. ಈ ಪದವನ್ನು 1808ರಲ್ಲಿ ಮೊದಲು ಬಳಸಿದ್ದು ಜರ್ಮನ್ ವೈದ್ಯ ಜೊಹಾನ್ ಕ್ರಿಸ್ಟಿಯನ್ ರೀಲ್ . ಇದರ ಅಕ್ಷರಶಃ ಅರ್ಥವೆಂದರೆ 'ಮನಸ್ಸಿನ ವೈದ್ಯಕೀಯ ಚಿಕಿತ್ಸೆ' (ಸೈಕ್- : ಮನಸ್ಸು; -ಯಾಟ್ರಿ : ವೈದ್ಯಕೀಯ ಚಿಕಿತ್ಸೆ; ಗ್ರೀಕ್ನಿಂದ ಇಯಾಟ್ರಿಕೊಸ್ : ವೈದ್ಯಕೀಯ, ಇಯಸ್ಥಾಯಿ : ಗುಣಪಡಿಸಲು). ಮನೋವೈದ್ಯಕೀಯ ಶಾಸ್ತ್ರದಲ್ಲಿ ತಜ್ಞತೆ ಪಡೆದ ವೈದ್ಯರಿಗೆ ಮನೋವೈದ್ಯರು ಎನ್ನಲಾಗುತ್ತದೆ.
ಪ್ರಸ್ತುತ ಮಾನಸಿಕ ಅಸ್ವಸ್ಥತೆಗಳನ್ನು ಮಿದುಳಿನ ನರವ್ಯೂಹದಲ್ಲಿ ಆಗಿರುವ ಕೆಲವು ನ್ಯೂನತೆಗಳು ಎಂದು ಕಲ್ಪಿಸಲಾಗಿದೆ. ಇದು ವಂಶವಾಹಿಗಳು ಮತ್ತು ಅನುಭವಗಳು ಪರಸ್ಪರ ಪ್ರಭಾವಿಸುವ ಒಂದು ಸಂಕೀರ್ಣ ಕ್ರಿಯೆಯಿಂದ ರೂಪುಗೊಂಡ ಬೆಳವಣಿಗೆಯ ಪ್ರಕ್ರಿಯೆಯಿಂದ ಉಂಟಾಗಬಹುದು.[1] ಬೇರೆ ಮಾತಿನಲ್ಲಿ ಹೇಳಬೇಕೆಂದರೆ, ಮಾನಸಿಕ ಅಸ್ವಸ್ಥತೆಯ ಆನುವಂಶಿಕತೆಯು ಮಿದುಳಿನ ಬೆಳವಣಿಗೆಯ ಆನುವಂಶಿಕತೆಯೇ ಆಗಿರಬಹುದು ಮತ್ತು ಇಲ್ಲಿ ಜೈವಿಕ ಮತ್ತು ಪಾರಿಸರಿಕ ಸಂದರ್ಭಗಳನ್ನು ಅವಲಂಬಿಸಿ ವಿವಿಧ ರೀತಿಯ ಫಲಿತಾಂಶಗಳು ಸಾಧ್ಯವಿದೆ.[1]
ಮನೋವೈದ್ಯಕೀಯ ಪರೀಕ್ಷೆಯು ಸಾಮಾನ್ಯವಾಗಿ ಮಾನಸಿಕ ಸ್ಥಿತಿಗತಿ ಪರೀಕ್ಷೆ ಮತ್ತು ಪ್ರಕರಣ ಇತಿಹಾಸ (ಕೇಸ್ ಹಿಸ್ಟರಿ)ದ ಸಂಗ್ರಹಕಾರ್ಯದೊಂದಿಗೆ ಆರಂಭವಾಗುತ್ತದೆ. ಮಾನಸಿಕ ಪರೀಕ್ಷೆಗಳು ಮತ್ತು ದೈಹಿಕ ಪರೀಕ್ಷೆಗಳನ್ನು ಮಾಡಬಹುದು, ಇವು ಕೆಲವು ಸಂದರ್ಭಗಳಲ್ಲಿ ನರವ್ಯೂಹಚಿತ್ರ (ನ್ಯೂರೋಇಮೇಜಿಂಗ್) ಅಥವಾ ಬೇರೆ ನ್ಯೂರೋಸೈಕಾಲಾಜಿಕಲ್ ತಂತ್ರಗಳನ್ನು ಬಳಸುವುದನ್ನೂ ಒಳಗೊಂಡಿರುತ್ತದೆ. ಮಾನಸಿಕ ಅಸ್ವಸ್ಥತೆಗಳನ್ನು ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ ಪ್ರಕಟಿಸಿರುವ ಮಾನಸಿಕ ಅಸ್ವಸ್ಸ್ಥತೆಗಳ ರೋಗನಿರ್ಣಯ ಮತ್ತು ಅಂಕಿಸಂಖ್ಯಾತ್ಮಕ ಕೈಪಿಡಿ (DSM), ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಸಂಪಾದಿಸಿ, ಬಳಸುತ್ತಿರುವ ರೋಗಗಳ ಅಂತಾರಾಷ್ಟ್ರೀಯ ವರ್ಗೀಕರಣ (ICD), ಇತ್ಯಾದಿ ವ್ಯಾಪಕವಾಗಿ ಬಳಸಲಾಗುವ ಕೆಲವು ಕೈಪಿಡಿಗಳಲ್ಲಿ ಪಟ್ಟಿಮಾಡಿರುವ ಮಾನದಂಡಗಳ ಪ್ರಕಾರ ರೋಗನಿರ್ಣಯ ಮಾಡಲಾಗುತ್ತದೆ. DSMನ ಐದನೇ ಆವೃತ್ತಿಯು(DSM-5) 2013ರಲ್ಲಿ ಪ್ರಕಟವಾಗಲಿದ್ದು, ಅದು ಅನೇಕ ವೈದ್ಯಕೀಯ ಕ್ಷೇತ್ರಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.[2]
ಮನೋವೈದ್ಯಕೀಯ ಚಿಕಿತ್ಸೆಯು ಔಷಧ ಚಿಕಿತ್ಸೆ, ಮನೋಚಿಕಿತ್ಸೆ ಮತ್ತು ಟ್ರಾನ್ಸ್ ಕ್ರೇನಿಯಲ್ ಕಾಂತೀಯ ಉದ್ದೀಪನ ಇನ್ನಿತರ ವಿಶಾಲ ಶ್ರೇಣಿಯ ಬೇರೆ ತಂತ್ರಗಳನ್ನು ಒಳಗೊಂಡಂತೆ ಅನೇಕ ವಿಧಾನಗಳನ್ನು ಬಳಸುತ್ತದೆ. ಕಾರ್ಯನಿರ್ವಹಣೆ ನ್ಯೂನತೆ/ಅಸ್ವಸ್ಥತೆಯ ತೀವ್ರತೆಯನ್ನು ಅವಲಂಬಿಸಿ ಒಳರೋಗಿ ಅಥವಾ ಹೊರರೋಗಿಯಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮನೋವೈದ್ಯಶಾಸ್ತ್ರದಲ್ಲಿ ಸಂಶೋಧನೆ ಮತ್ತು ಚಿಕಿತ್ಸೆಯನ್ನು ಒಂದು ಅಂತರಶಿಸ್ತು ಆಧಾರದ ಮೇಲೆ ನಡೆಸಲಾಗುತ್ತದೆ ಮತ್ತು ಇದಕ್ಕೆ ಬೇರೆ ಬೇರೆ ಉಪ-ತಜ್ಞತೆಗಳು ಮತ್ತು ಸೈದ್ಧಾಂತಿಕ ದೃಷ್ಟಿಕೋನಗಳನ್ನು ಆಕರವಾಗಿ ಬಳಸಲಾಗುತ್ತದೆ.
ನೇಚರ್ ಪತ್ರಿಕೆಯ ಸಂಪಾದಕರಾಗಿರುವ ಫಿಲಿಪ್ ಕ್ಯಾಂಪ್ಬೆಲ್ ಅವರು 2010-2019ರವರೆಗಿನ 10-ವರ್ಷದ ಅವಧಿಯನ್ನು "ಮಾನಸಿಕ ಅಸ್ವಸ್ಥತೆಗಳ ದಶಕ"[3] ಎಂದು ಕರೆದಿದ್ದಾರೆ. ತಳಿವಿಜ್ಞಾನ ಮತ್ತು ನರವಿಜ್ಞಾನದಿಂದ ಪಡೆದ ಒಳನೋಟಗಳು ಮಾನಸಿಕ ರೋಗದ ಕುರಿತ ನಮ್ಮ ತಿಳಿವಳಿಕೆಯನ್ನು ರೂಪಾಂತರಿಸುವ ಒಂದು ಹಂತಕ್ಕೆ ಮಾನಸಿಕ ರೋಗದ ಕುರಿತ ಸಂಶೋಧನೆಯು ಕೊನೆಗೂ ತಲುಪಿದೆ ಎನ್ನುವುದನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.[1] ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ (JAMA) ಕೂಡ ತನ್ನ 2010, ಮೇ19ರ ಸಂಚಿಕೆಯನ್ನು ಮಾನಸಿಕ ಆರೋಗ್ಯದ ವಿಷಯಕ್ಕೆ ಮೀಸಲಾಗಿರಿಸಿದೆ [4] ಎಂಬ ಅಂಶವೂ ವೈದ್ಯಕೀಯ ವಿಜ್ಞಾನದಲ್ಲಿ ಮಾನಸಿಕ ಅಸ್ವಸ್ಥತೆಗಳು ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬ ಮಹತ್ವವಿದೆ ಎಂಬುದನ್ನು ಸಾಬೀತುಪಡಿಸುತ್ತದೆ.