ಫೈಟ್ ಕ್ಲಬ್ (ಚಲನಚಿತ್ರ)
From Wikipedia, the free encyclopedia
ಫೈಟ್ ಕ್ಲಬ್ ಡೇವಿಡ್ ಫ಼ಿಂಚರ್ ನಿರ್ದೇಶಿಸಿದ ೧೯೯೯ರ ಒಂದು ಅಮೇರಿಕನ್ ಚಲನಚಿತ್ರ. ಮುಖ್ಯ ಪಾತ್ರಗಳಲ್ಲಿ ಬ್ರ್ಯಾಡ್ ಪಿಟ್, ಎಡ್ವರ್ಡ್ ನಾರ್ಟನ್ ಮತ್ತು ಹೆಲೆನಾ ಬಾನಮ್ ಕಾರ್ಟರ್ ನಟಿಸಿದ್ದಾರೆ. ಇದು ಚಕ್ ಪೌಲಾನಿಕ್ರ ಇದೇ ಹೆಸರಿನ ೧೯೯೬ರ ಕಾದಂಬರಿಯ ಮೇಲೆ ಆಧಾರಿತವಾಗಿದೆ. ನಾರ್ಟನ್ ತನ್ನ ದೈಹಿಕ ಶ್ರಮವಿಲ್ಲದ ಕೆಲಸದಿಂದ ಅತೃಪ್ತನಾದ, ಹೆಸರಿಲ್ಲದ ನಿರೂಪಕನ ಪಾತ್ರವಹಿಸಿದ್ದಾರೆ. ಅವನು ಸಾಬೂನು ಮಾರಾಟಗಾರ ಟೈಲರ್ ಡರ್ಡನ್ನ ಜೊತೆ ಒಂದು ಕದನದ ಸಂಘವನ್ನು ರಚಿಸುತ್ತಾನೆ, ಮತ್ತು ಅವನೊಂದಿಗೆ ಹಾಗೂ ಒಬ್ಬ ದಿಕ್ಕಿಲ್ಲದ ಮಹಿಳೆ ಮಾರ್ಲಾ ಸಿಂಗರ್ಳೊಂದಿಗೆ (ಬಾನಮ್ ಕಾರ್ಟರ್) ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾನೆ.
ಫ಼ೈಟ್ ಕ್ಲಬ್ | |
---|---|
ನಿರ್ದೇಶನ | ಡೇವಿಡ್ ಫ಼ಿಂಚರ್ |
ನಿರ್ಮಾಪಕ |
|
ಚಿತ್ರಕಥೆ | ಜಿಮ್ ಅಲ್ಸ್ |
ಆಧಾರ | ಚಕ್ ಪೌಲಾನಿಕ್ರ ಇದೇ ಹೆಸರಿನ ಕಾದಂಬರಿ ಮೇಲೆ ಆಧಾರಿತ |
ಪಾತ್ರವರ್ಗ |
|
ಸಂಗೀತ | ದ ಡಸ್ಟ್ ಬ್ರದರ್ಸ್ |
ಛಾಯಾಗ್ರಹಣ | ಜೆಫ಼್ ಕ್ರಾನೆನ್ವೆತ್ |
ಸಂಕಲನ | ಜೇಮ್ಸ್ ಹೇಗುಡ್ |
ಸ್ಟುಡಿಯೋ |
|
ವಿತರಕರು | ಟ್ವೆಂಟಿಯತ್ ಸೆಂಚುರಿ ಫ಼ಾಕ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 139 ನಿಮಿಷಗಳು[1] |
ದೇಶ | ಅಮೇರಿಕ[2][3] |
ಭಾಷೆ | ಇಂಗ್ಲಿಷ್ |
ಬಂಡವಾಳ | $63 ಮಿಲಿಯನ್[1] |
ಬಾಕ್ಸ್ ಆಫೀಸ್ | $100.9 ಮಿಲಿಯನ್[1] |
ಫ಼ಾಕ್ಸ್ ಪಿಕ್ಚರ್ಸ್ನ ನಿರ್ಮಾಪಕಿ ಲೌರಾ ಜ಼ಿಸ್ಕಿನ್ ಪೌಲಾನಿಕ್ರ ಕಾದಂಬರಿಗೆ ಕರಾರು ಮಾಡಿಕೊಂಡರು ಮತ್ತು ಚಲನಚಿತ್ರ ರೂಪಾಂತರವನ್ನು ಬರೆಯಲು ಜಿಮ್ ಅಲ್ಸ್ರನ್ನು ನೇಮಕ ಮಾಡಿದರು. ಕಥೆಯ ಬಗೆಗಿನ ಅವರ ಉತ್ಸಾಹದ ಕಾರಣದಿಂದ ಫ಼ಿಂಚರ್ರನ್ನು ಆಯ್ಕೆಮಾಡಲಾಯಿತು. ಅವರು ಅಲ್ಸ್ರೊಂದಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು ಮತ್ತು ಪಾತ್ರವರ್ಗ ಹಾಗೂ ಚಿತ್ರೋದ್ಯಮದಲ್ಲಿನ ಇತರರಿಂದ ಚಿತ್ರಕಥಾ ಸಲಹೆಯನ್ನು ಕೇಳಿದರು. ಹೊಸ ಪೀಳಿಗೆ ಮತ್ತು ಜಾಹೀರಾತಿನ ಮೌಲ್ಯ ವ್ಯವಸ್ಥೆಯ ನಡುವಿನ ಸಂಘರ್ಷ ಈ ಚಿತ್ರದ ವಿಷಯವಾಗಿದೆ.[4][5] ಪ್ರೇಕ್ಷಕರನ್ನು ಅಹಿತಕರಗೊಳಿಸಲು ಮತ್ತು ಅನಿರೀಕ್ಷಿತ ಅಂತ್ಯವನ್ನು ನಿರೀಕ್ಷಿಸಲಾಗದಂತೆ ಮಾಡಲು, ಫ಼ಿಂಚರ್ ಪೌಲಾನಿಕ್ರ ಕಾದಂಬರಿಯ ಸಲಿಂಗಕಾಮಿ ಸೂಚ್ಯಾರ್ಥಗಳನ್ನು ಬಳಸಿದರು.[6]
ನಿರ್ಮಾಣಶಾಲೆಯ ಮುಖ್ಯಸ್ಥರು ಚಿತ್ರವನ್ನು ಇಷ್ಟಪಡಲಿಲ್ಲ ಮತ್ತು ನಿರೀಕ್ಷಿತ ನಷ್ಟಗಳನ್ನು ಕಡಿಮೆಮಾಡಲು ಪ್ರಯತ್ನಿಸುವ ಸಲುವಾಗಿ ಫ಼ಿಂಚರ್ರ ಉದ್ದೇಶಿತ ಮಾರಾಟಗಾರಿಕಾ ಪ್ರಚಾರವನ್ನು ಪುನರ್ರಚಿಸಿದರು. ಫ಼ೈಟ್ ಕ್ಲಬ್ ಬಾಕ್ಸ್ ಆಫ಼ಿಸ್ನಲ್ಲಿ ನಿರ್ಮಾಣಶಾಲೆಯ ಅಪೇಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಯಿತು, ಮತ್ತು ವಿಮರ್ಶಕರಿಂದ ಧ್ರುವೀಕೃತ ಪ್ರತಿಕ್ರಿಯೆಗಳನ್ನು ಪಡೆಯಿತು. ಇದನ್ನು ೧೯೯೯ರ ಅತ್ಯಂತ ವಿವಾದಾತ್ಮಕ ಮತ್ತು ಚರ್ಚಿಸಲಾದ ಚಲನಚಿತ್ರಗಳಲ್ಲಿ ಒಂದು ಎಂದು ಉಲ್ಲೇಖಿಸಲಾಯಿತು. ದ ಗಾರ್ಡಿಯನ್ ಇದನ್ನು ಅಮೇರಿಕದ ರಾಜಕೀಯ ಜೀವನದಲ್ಲಿ ಬದಲಾವಣೆಗಾಗಿ ಶಕುನವೆಂದು ಕಂಡಿತು, ಮತ್ತು ಇದರ ದೃಶ್ಯ ಶೈಲಿಯನ್ನು ಹೊಸತನದ್ದೆಂದು ವರ್ಣಿಸಿತು. ನಂತರ, ಡಿವಿಡಿ ಬಿಡುಗಡೆಯೊಂದಿಗೆ ಈ ಚಿತ್ರವು ವಾಣಿಜ್ಯಿಕ ಯಶಸ್ಸನ್ನು ಪಡೆದುಕೊಂಡಿತು, ಮತ್ತು ಫ಼ೈಟ್ ಕ್ಲಬ್ ಅಭಿಮಾನಿಗಳ ಶ್ರೇಷ್ಠ ಚಿತ್ರವಾಗಿ ಪ್ರತಿಷ್ಠಾಪಿತವಾಯಿತು, ಮತ್ತು ಮಾಧ್ಯಮದವರು ಚಿತ್ರವನ್ನು ಮರುಪರಿಗಣಿಸುವಂತೆ ಮಾಡಿತು. ಚಿತ್ರದ ಬಿಡುಗಡೆಯ ಹತ್ತನೇ ವಾರ್ಷಿಕೋತ್ಸವದಂದು, ದ ನ್ಯೂ ಯಾರ್ಕ್ ಟೈಮ್ಸ್ ಇದನ್ನು ನಮ್ಮ ಕಾಲದ ಐತಿಹಾಸಿಕ ಛಾಪಿನ ನಿರ್ಧಾರಕ ಚಿತ್ರವೆಂದು ಹೆಸರಿಸಿತು.[7]